ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಸುಸ್ಥಿರ ಜೀವನಶೈಲಿ ಎಂಬ ಮನೋಭಾವದ ನೈಜ ಬದುಕು

‘ಮಾತೃಭೂಮಿ ದೇವತಾ’ ಎಂಬ ದೃಷ್ಟಿಕೋನದಿಂದ ನೋಡಿದರೆ, ಪರಿಸರ ರಕ್ಷಣೆಯೇ ರಾಷ್ಟ್ರ ರಕ್ಷಣೆಯ ಮೊದಲ ಹೆಜ್ಜೆಯಾಗಿದೆ. ಹಸಿವಾದಾಗ, ನೂಕುನುಗ್ಗಲಿನಲ್ಲಿ ಅವಸರ ದಿಂದ ಊಟ ಮಾಡಿದಾಗ, ಅದು ಸುಸ್ಥಿರ ಅಥವಾ ನೆಮ್ಮದಿಯ ಊಟ ಎನಿಸುವುದಿಲ್ಲ. ಅದರಂತೆ ಅವಸರದ, ಅತಿಬಳಕೆಯ ಜೀವನ ಮಾಡಿದಾಗ ಅದೂ ಸಹ ಸುಸ್ಥಿರ ಬದುಕು ಎನಿಸುವುದಿಲ್ಲ.

ಗಂಟಾಘೋಷ

ಪರಿಸರ ಸಂರಕ್ಷಣೆ, ನೈತಿಕ ಜೀವನ ಮತ್ತು ರಾಷ್ಟ್ರಪ್ರೇಮ’ ಈ ಮೂರು ಅಂಶಗಳು ಭಾರತದ ಸಾಂಸ್ಕೃತಿಕ ಪರಂಪರೆಯ ಮೂಲೆ ಮಾಪುಗಳು ಎನ್ನಬಹುದು. ಭಾರತೀಯ ಜೀವನ ಶೈಲಿಯು ಒಂದು ಉತ್ತಮ ಸುಸ್ಥಿರತೆಯ ಮಾದರಿ ಶೈಲಿಯಾಗಿ ಇಂದು ಪ್ರಪಂಚದ ಇತರೆ ರಾಷ್ಟ್ರದ ನಾಗರಿಕರೂ ಸಹ ತಮ್ಮ ಜೀವನದಲ್ಲಿ ಭಾರತೀಯ ಜೀವನ ಪದ್ಧತಿ ಅಳವಡಿಸಿ ಕೊಂಡು ಬದುಕಲು ಉತ್ಸುಕರಾಗಿದ್ದಾರೆ.

ಭಾರತದ ಸಂಸ್ಕೃತಿಯೇ ‘ಪ್ರಕೃತಿಯ ಪೂಜೆ’ಯನ್ನು ಬೋಧಿಸಿದೆ. ನದಿಗಳು, ಗಿರಿಶಿಖರಗಳು, ವಟವೃಕ್ಷಗಳು, ಗೋಮಾತೆ ಇವನ್ನೆಲ್ಲ ದೇವತೆಯಂತೆ ಗೌರವಿಸುವುದು ನಮ್ಮ ಜನಮಾನಸ ದಲ್ಲೇ ಇದೆ. ಆದರೆ ಇಂದಿನ ಯಾಂತ್ರಿಕ ಬದುಕು ಆ ಮೌಲ್ಯಗಳಿಂದ ದೂರ ಸಾಗುತ್ತಿದೆ.

ವಿಷಕಾರಿ ಸಾಮಗ್ರಿ, ರಾಸಾಯನಿಕ ಜೀವನ, ಅನೈತಿಕ ಉಪಭೋಗ ಸಂಸ್ಕೃತಿಗಳು ಭೂಮಿ ಯ ಸಮತೋಲನವನ್ನು ನಾಶ ಮಾಡುತ್ತಿವೆ. ಸುಸ್ಥಿರತೆ ಎಂಬ ಪದ ಹೊಸದಾದರೂ, ಇದರ ಅರ್ಥ ಪ್ರಾಚೀನ ಭಾರತದಲ್ಲೇ ಹಾಸುಹೊಕ್ಕಾಗಿತ್ತು. ಅಪರಿಮಿತ ಸಂಪನ್ಮೂಲ ಬಳಕೆಗೆ ಬದಲಾಗಿ ಸಂಯಮ, ಮಿತೋಪಭೋಗ, ಸಂರಕ್ಷಣಾ ಮನೋಭಾವ ಇವುಗಳು ನಮ್ಮ ಜೀವನಶೈಲಿಯ ಭಾಗವಾಗಿದ್ದವು.

‘ಮಾತೃಭೂಮಿ ದೇವತಾ’ ಎಂಬ ದೃಷ್ಟಿಕೋನದಿಂದ ನೋಡಿದರೆ, ಪರಿಸರ ರಕ್ಷಣೆಯೇ ರಾಷ್ಟ್ರ ರಕ್ಷಣೆಯ ಮೊದಲ ಹೆಜ್ಜೆಯಾಗಿದೆ. ಹಸಿವಾದಾಗ, ನೂಕುನುಗ್ಗಲಿನಲ್ಲಿ ಅವಸರ ದಿಂದ ಊಟ ಮಾಡಿದಾಗ, ಅದು ಸುಸ್ಥಿರ ಅಥವಾ ನೆಮ್ಮದಿಯ ಊಟ ಎನಿಸುವುದಿಲ್ಲ. ಅದರಂತೆ ಅವಸರದ, ಅತಿ ಬಳಕೆಯ ಜೀವನ ಮಾಡಿದಾಗ ಅದೂ ಸಹ ಸುಸ್ಥಿರ ಬದುಕು ಎನಿಸುವುದಿಲ್ಲ.

ಇದನ್ನೂ ಓದಿ: Gururaj Gantihole Column: ಜನಜಂಗುಳಿಯಲ್ಲಾಗುವ ಅನಾಹುತಕ್ಕೆ ನಮ್ಮದೇನು ಹೊಣಿಗಾರಿಕೆ ?

ಸರಕಾರದಲ್ಲಿ ಸುಸ್ಥಿರ, ದೇಶದ ಆರ್ಥಿಕತೆಯಲ್ಲಿ ಸುಸ್ಥಿರ ಇರಲು ಬಯಸುವಂತೆಯೇ ಬದುಕಿನಲ್ಲಿಯೂ ಸುಸ್ಥಿರ ಜೀವನಶೈಲಿ ಇರುವುದು ಬಹುಮುಖ್ಯವಾದುದಾಗಿದೆ. ಮನೆಯಿಂದ ಮನುಕುಲದವರೆಗಿನ ಹೊಣೆಗಾರಿಕೆಯು ಸೇವಾ ಮನೋಭಾವದ ಒಂದು ಭಾಗವಾಗಿದ್ದು, ‘ನಾನು ಬದಲಾದರೆ ಸಮಾಜ ಬದಲಾಗುತ್ತದೆ’ ಎಂಬುದಾಗಿದೆ. ಅದು ಪರಿಸರದಲ್ಲಿಯೂ ಅನ್ವಯಿಸುತ್ತದೆ.

ನಮ್ಮ ಮನೆ, ಬೀದಿ, ಶಾಲೆ, ದೇವಸ್ಥಾನಗಳ ಸುತ್ತಮುತ್ತ ಶುದ್ಧತೆ ಮತ್ತು ಸಂರಕ್ಷಣೆಯ ಅಭ್ಯಾಸ ಬೆಳೆಯಬೇಕು. ಉದಾಹರಣೆಗೆ, ಪ್ಲಾಸ್ಟಿಕ್ ಬದಲಾಗಿ ನಾರು ಮತ್ತು ಹತ್ತಿಚೀಲ, ಮನೆಯ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ಅಭ್ಯಾಸ, ಎಲ್‌ಇಡಿ ದೀಪಗಳು, ಸೌರಶಕ್ತಿ ಉಪಕರಣಗಳು, ಹಾಲು, ಧಾನ್ಯ, ತರಕಾರಿಗಳನ್ನು ಸ್ಥಳೀಯ ರೈತರಿಂದ ಖರೀದಿಸುವುದು ಇತ್ಯಾದಿ. ಇವು ಚಿಕ್ಕ ಹೆಜ್ಜೆಗಳಾಗಿದ್ದರೂ ರಾಷ್ಟ್ರ ನಿರ್ಮಾಣದ ದೊಡ್ಡ ಭಾಗವಾಗುತ್ತವೆ.

ಸುಸ್ಥಿರತೆ ( Sustainability) ಎಂದರೆ ನಿರಂತರತೆ ಎನ್ನಬಹುದು. ನನ್ನಿಂದ ಆರಂಭವೂ ಅಲ್ಲ, ನನ್ನಿಂದ ಅಂತ್ಯವೂ ಅಲ್ಲವೆಂದುಕೊಳ್ಳಬೇಕಾದ ಭಾವನೆಯಿದು. ಇದರರ್ಥ ಭವಿಷ್ಯದ ಪೀಳಿಗೆಯ ಅಗತ್ಯಗಳಿಗೆ ಧಕ್ಕೆ ಬಾರದಂತೆ ಪ್ರಸ್ತುತದ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ. ಇದು ಕೇವಲ ಪರಿಸರವನ್ನು ಮಾತ್ರವಲ್ಲದೆ, ಆರ್ಥಿಕ ಮತ್ತು ಸಾಮಾಜಿಕ ಅಂಶಗಳನ್ನೂ ಒಳಗೊಂಡಿರುತ್ತದೆ.

AI-Education ok

ಪರಿಸರ ಸುಸ್ಥಿರತೆ: ಪರಿಸರಕ್ಕೆ ಹಾನಿಯಾಗದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವ ವಿಧಾನ. ಇದು ಕನಿಷ್ಠ ತ್ಯಾಜ್ಯವನ್ನು ಉತ್ಪಾದಿಸುವುದು, ಮತ್ತೆ ಉತ್ಪಾದಿಸ ಬಹುದಾದ ಇಂಧನ ಮೂಲಗಳನ್ನು (ಸೂರ್ಯ, ಗಾಳಿ, ನೀರು) ಬಳಸುವುದೂ ಒಳಗೊಂಡಿದೆ.

ಆರ್ಥಿಕ ಸುಸ್ಥಿರತೆ: ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವುದು. ಇದು ಸಂಪನ್ಮೂಲಗಳ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಬಳಕೆಯನ್ನು ಸೂಚಿಸುತ್ತದೆ. ಸಾಮಾಜಿಕ ಸುಸ್ಥಿರತೆ: ಸಮುದಾಯದ ದೀರ್ಘಕಾಲೀನ ಕಾರ್ಯಸಾಧ್ಯತೆಯನ್ನು ಖಚಿತ ಪಡಿಸುವುದು. ಇದು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಯನ್ನು ಒಳಗೊಂಡಿ ರುತ್ತದೆ. ಈ ಮೂರು ಆಯಾಮಗಳಾದ ಪರಿಸರ, ಆರ್ಥಿಕತೆ ಮತ್ತು ಸಮಾಜದ ನಡುವೆ ಸಮತೋಲನವನ್ನು ಸಾಧಿಸುವ ಅಭಿವೃದ್ಧಿಯೇ ಸುಸ್ಥಿರವೆನಿಸಿಕೊಳ್ಳುತ್ತದೆ.

ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಡೆದಿರುವ ವೇಗದ ಪ್ರಗತಿಯು ಮಾನವ ಜೀವನವನ್ನು ಸುಲಭಗೊಳಿಸಿದೆ. ಆದರೆ ಈ ಅಭಿವೃದ್ಧಿಯ ನಡುವೆಯೇ, ಪರಿಸರದ ಹಾನಿ ಮತ್ತು ತಂತ್ರಜ್ಞಾನ ದುರುಪಯೋಗದಂತಹ ಸಮಸ್ಯೆಗಳು ಗಂಭೀರವಾಗುತ್ತಿವೆ. ಒಂದು ಕಡೆ ಮನುಷ್ಯ ಪರಿಸರಸ್ನೇಹಿ ಉತ್ಪನ್ನಗಳತ್ತ ತಿರುಗುತ್ತಿದ್ದರೆ, ಇನ್ನೊಂದು ಕಡೆ ಕೃತಕ ಬುದ್ಧಿಮತ್ತೆ (Artificial Intelligence–AI ) ಮೂಲಕ ಹೊಸ ರೀತಿಯ ಅಪಾಯಗಳು ಎದುರಾಗುತ್ತಿವೆ. ಈ ಎರಡು ದಿಕ್ಕುಗಳ ನಡುವಿನ ಸಮತೋಲನವೇ ಭವಿಷ್ಯದ ಸವಾಲಾಗಿದೆ. ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಮತ್ತು ತ್ಯಾಜ್ಯ ಸಮಸ್ಯೆಗಳ ನಡುವೆ ಹಿಂದೆಂದಿ ಗಿಂತಲೂ ಇಂದು ಪರಿಸರಸ್ನೇಹಿ ಗ್ರಾಹಕ ಉತ್ಪನ್ನಗಳ ಅಗತ್ಯತೆ ಹೆಚ್ಚಿವೆ.

ಈ ಹಿನ್ನೆಲೆಯಲ್ಲಿ ಪರಿಸರಸ್ನೇಹಿ ಉತ್ಪನ್ನಗಳು ( Eco-friendly products) ಅತ್ಯಂತ ಮುಖ್ಯವಾದ ಪರ್ಯಾಯವಾಗಿ ಬೆಳೆಯುತ್ತಿವೆ. ಇವು ಪ್ರಕೃತಿಗೆ ಹಾನಿ ಮಾಡದೆ, ಮರು ಬಳಕೆ ಮಾಡಬಹುದಾದ ಹಾಗೂ ಆರೋಗ್ಯಕ್ಕೆ ಸುರಕ್ಷಿತವಾದ ವಸ್ತುಗಳಾಗಿಯೂ ನಿರಂತ ರತೆ ಕಾಯ್ದುಕೊಳ್ಳುತ್ತವೆ ಎನ್ನಬಹುದು.

ಈ ರೀತಿಯ ತಂತ್ರಜ್ಞಾನಗಳು ಶಕ್ತಿ ಸಂರಕ್ಷಣೆಯ ಜೊತೆಗೆ ಪ್ಲಾಸ್ಟಿಕ್ ಮತ್ತು ಲೋಹದ ವ್ಯರ್ಥ ಬಳಕೆಯನ್ನು ತಡೆಯುತ್ತವೆ. ಇಂತಹ ಉತ್ಪನ್ನಗಳು ಕೇವಲ ವಸ್ತುಗಳಲ್ಲ, ಅವು ಗಳು ‘ಪರಿಸರವನ್ನು ಕಾಪಾಡಿ, ಪ್ರಕೃತಿಯೊಂದಿಗೆ ಸಹಜವಾಗಿ ಬಾಳು’ ಎಂಬ ಸಂದೇಶ ವನ್ನು ನೀಡುತ್ತವೆ.

ಇಂದು ಅನೇಕ ಕಂಪನಿಗಳು “ಸಸ್ಟೈನಬಲ್ ಲೈಫ್‌ ಸ್ಟೈಲ್" ಅಥವಾ ‘ಹಸಿರು ಜೀವನ ಶೈಲಿ’ ( Green lifestyle) ಎಂಬ ಆಲೋಚನೆಯತ್ತ ಸಾಗುತ್ತಿವೆ. ಜನರೂ ಸಹ ಈಗ ಪ್ಲಾಸ್ಟಿಕ್ ಮುಕ್ತ ಉತ್ಪನ್ನಗಳು, ಸೌರಶಕ್ತಿ ಉಪಕರಣಗಳು, ಬಯೋ-ಡಿಗ್ರೇ ಡಬಲ್ ಪ್ಯಾಕೇಜಿಂಗ್‌ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ. ಪರಿಸರಸ್ನೇಹಿ ಉತ್ಪನ್ನಗಳು ಪರಿಸರವನ್ನು ಕಾಪಾಡುವುದಷ್ಟೇ ಅಲ್ಲ, ಭವಿಷ್ಯದ ಪೀಳಿಗೆಯು ಆರೋಗ್ಯ ಕರ ಜಗತ್ತಿನಲ್ಲಿ ಬದುಕುವಂತೆಯೂ ಮಾಡುತ್ತವೆ.

ಇದು ‘ವೈಯಕ್ತಿಕ ಹೊಣೆಗಾರಿಕೆ’ಯಿಂದ ‘ಸಾಮೂಹಿಕ ಜವಾಬ್ದಾರಿ’ಯ ಕಡೆಗೆ ಸಾಗುವ ಒಂದು ಸಕಾರಾತ್ಮಕ ಹೆಜ್ಜೆಯಂದೇ ನಾವು ಪರಿಗಣಿಸಬಹುದು. ಇದೆಲ್ಲದರ ಜೊತೆಗೆ ಕೃತಕ ಬುದ್ಧಿಮತ್ತೆ ಮತ್ತು ಅದರ ಹಾನಿಕಾರಕ ಚಟುವಟಿಕೆಗಳು ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿವೆ. ಕೃತಕ ಬುದ್ಧಿಮತ್ತೆ (Artificial Intelligence) ಎಂಬ ತಂತ್ರಜ್ಞಾನವು ಪ್ರಪಂಚದ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ.

ವೈದ್ಯಕೀಯದಿಂದ ಆರಂಭಿಸಿ ಶಿಕ್ಷಣ, ಕೃಷಿ, ಸಾರಿಗೆ, ವಾಣಿಜ್ಯ, ಸಂವಹನ ಸೇರಿದಂತೆ ಎಲ್ಲೆಡೆ ಎ.ಐ ಇಂದು ಕಾರ್ಯ ನಿರ್ವಹಿಸುತ್ತಿದೆ. ಮಾನವ ಬುದ್ಧಿಮತ್ತೆಯನ್ನು ಅನುಕರಿ ಸುವ ಈ ತಂತ್ರಜ್ಞಾನವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತಂದಿದ್ದರೂ, ಇದರ ದುರುಪಯೋಗವೂ ಅಷ್ಟೇ ವೇಗವಾಗಿ ಬೆಳೆಯುತ್ತಿದೆ. ಎ.ಐ ಗೌಪ್ಯತೆಗೆ ದೊಡ್ಡ ಅಪಾಯ ವನ್ನು ಉಂಟುಮಾಡುತ್ತಿದೆ.

ನಿಗಾ ವ್ಯವಸ್ಥೆಗಳು ಮತ್ತು ಡೇಟಾ ಸಂಗ್ರಹ ತಂತ್ರಜ್ಞಾನಗಳು ವ್ಯಕ್ತಿಗಳ ವೈಯಕ್ತಿಕ ಮಾಹಿತಿ ಯನ್ನು ಅವರ ಅನುಮತಿ ಇಲ್ಲದೆ ಸಂಗ್ರಹಿಸುತ್ತವೆ. ಇದರಿಂದ ಖಾಸಗಿ ಜೀವನದ ಗೌಪ್ಯತೆ ಕುಂಠಿತವಾಗುತ್ತದೆ. ತಪ್ಪುಮಾಹಿತಿ ಮತ್ತು ಡೀಪ್ ಫೇಕ್‌ಗಳು ( Deep Fake) ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿವೆ. ಎ.ಐ ಬಳಸಿ ಹ್ಯಾಕಿಂಗ್, ಫಿಷಿಂಗ್, ಗುರುತು ಕಳವು, ಮತ್ತು ಆನ್‌ಲೈನ್ ಮೋಸಗಳು, ನಕಲಿ ವಿಡಿಯೋಗಳು ಮತ್ತು ಚಿತ್ರಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆಳೆಯುವ ಘಟನೆಗಳು ಹೆಚ್ಚಾಗುತ್ತಿವೆ.

ದೊಡ್ಡ ಎ.ಐ ಮಾದರಿಗಳನ್ನು ತರಬೇತಿಗೊಳಿಸಲು ಅತ್ಯಧಿಕ ವಿದ್ಯುತ್ ಮತ್ತು ಗಣಕಶಕ್ತಿ ಬೇಕಾಗುತ್ತದೆ. ಇದರ ಪರಿಣಾಮವಾಗಿ ಪರಿಸರದ ಮೇಲೆ ಕಾರ್ಬನ್ ಉತ್ಪನ್ನ ಮತ್ತು ಶಕ್ತಿ ವ್ಯರ್ಥತೆ ಉಂಟಾಗುತ್ತದೆ. ಈ ರೀತಿಯಾಗಿ ಎ.ಐ ಕೂಡ ಪರಿಸರ ಹಾನಿಗೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರೆ, ಉತ್ತರದಾಯಿತೆಯಿಂದ ಮತ್ತು ನೈತಿಕತೆಯಿಂದ ಎ.ಐ ಬಳಕೆ ಮಾಡುವುದಾಗಿದೆ.

ಸರಕಾರಗಳು, ಕಂಪನಿಗಳು ಮತ್ತು ನಾಗರಿಕರು ಎಐ ಬಳಕೆಯಲ್ಲಿ ಪಾರದರ್ಶಕತೆ, ಜವಾಬ್ದಾರಿ ಮತ್ತು ಮಾನವ ಹಿತದೃಷ್ಟಿ ಕಾಪಾಡಬೇಕು. ‘ತಂತ್ರಜ್ಞಾನ ಮಾನವನ ಸೇವೆಗೆ, ಮಾನವ ತಂತ್ರಜ್ಞಾನಕ್ಕೆ ಅಲ್ಲ’ ಎಂಬ ದೃಷ್ಟಿಕೋನ ಅತ್ಯಂತ ಅಗತ್ಯ. ತಂತ್ರಜ್ಞಾನ ಮತ್ತು ಪರಿಸರ ಸಮತೋಲನದ ಅಗತ್ಯ ಪರಿಸರಸ್ನೇಹಿ ಉತ್ಪನ್ನಗಳು ಮತ್ತು ಎ.ಐ ನಡುವಿನ ವ್ಯತ್ಯಾಸ ಅಷ್ಟೇನೂ ಹೆಚ್ಚಾಗಿಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಪರಸ್ಪರ ಪೂರಕವಾಗಿರಬಹುದು.

ಉದಾ, ಎ.ಐ ತಂತ್ರಜ್ಞಾನವನ್ನು ಪರಿಸರ ಸಂರಕ್ಷಣೆಗೆ, ಹವಾಮಾನ ವಿಶ್ಲೇಷಣೆ, ಶಕ್ತಿ ನಿರ್ವಹಣೆ ಮತ್ತು ನವೀಕರಿಸಬಹುದಾದ ಸಂಪನ್ಮೂಲಗಳ ಯೋಜನೆಗೆ ಬಳಸಬಹುದು. ಹೀಗಾಗಿ ತಂತ್ರಜ್ಞಾನವೇ ಪರಿಸರ ರಕ್ಷಣೆಯ ಸಾಧನವಾಗಬಹುದು. ಇದರ ಯಶಸ್ಸು ನಮ್ಮ ನೈತಿಕ ನಿಲುವಿನ ಮೇಲೆ ಅವಲಂಬಿತವಾಗಿದೆ. ಲಾಭಕ್ಕಿಂತ ಜವಾಬ್ದಾರಿ ಮುಖ್ಯ ಎಂಬ ಅರಿವು ಬೆಳೆಸಿದಾಗ ಮಾತ್ರ ಈ ಎರಡೂ ಕ್ಷೇತ್ರಗಳು ಮಾನವ ಕಲ್ಯಾಣದ ದಾರಿಯಲ್ಲಿ ಸಾಗಬಹುದಾಗಿದೆ.

ಪರಿಸರಸ್ನೇಹಿ ಉತ್ಪನ್ನಗಳು ನಮ್ಮ ಭೂಮಿಯನ್ನು ಆರೋಗ್ಯಕರವಾಗಿಡಲು ಸಹಕಾರಿ ಯಾಗುವಂತಹ ಹೊಸ ಜೀವನಶೈಲಿಯನ್ನು ಪರಿಚಯಿಸುತ್ತವೆ. ಕೃತಕ ಬುದ್ಧಿ ಮತ್ತೆ ಮಾನವ ಬುದ್ಧಿಯ ವಿಸ್ತಾರವಾಗಿದ್ದರೂ, ಅದರ ದುರುಪಯೋಗ ಮಾನವತೆಯ ನಾಶಕ್ಕೆ ದಾರಿ ಮಾಡಬಹುದು. ಹೀಗಾಗಿ ನಾವು ತಂತ್ರಜ್ಞಾನವನ್ನು ಅಂಧರಂತೆ ಅನುಸರಿಸದೆ, ಅದರ ನೈತಿಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು.

‘ತಂತ್ರಜ್ಞಾನ ಮತ್ತು ಪರಿಸರದ ಮಧ್ಯೆ ಸಮತೋಲನವೇ ಭವಿಷ್ಯದ ಉಳಿವು’ ಎಂಬುದೇ ಇವತ್ತಿನ ನಮ್ಮ ಕಾಲದ ಅತ್ಯಂತ ದೊಡ್ಡ ಪಾಠವಾಗಿದೆ. ಮಾನವನು ತಂತ್ರಜ್ಞಾನವನ್ನು ನಿಯಂತ್ರಿಸಿದಾಗ ಅಭಿವೃದ್ಧಿ ಶಾಶ್ವತವಾಗುತ್ತದೆ. ಆದರೆ ತಂತ್ರಜ್ಞಾನವೇ ಮಾನವನನ್ನು ನಿಯಂತ್ರಿಸಿದರೆ ಅದು ವಿನಾಶದ ದಾರಿ. ನಾವು ಪರಿಸರಸ್ನೇಹಿ ಜೀವನಶೈಲಿ, ನೈತಿಕ ತಂತ್ರಜ್ಞಾನ ಬಳಕೆ ಮತ್ತು ಜವಾಬ್ದಾರಿಯುತ ನಾಗರಿಕತೆ ಎಂಬ ಮೂರು ತತ್ವಗಳನ್ನು ಅಳವಡಿಸಿಕೊಂಡರೆ ಮಾತ್ರ ಭವಿಷ್ಯವು ಹಸಿರು, ಸುರಕ್ಷಿತ ಮತ್ತು ಮಾನವೀಯತೆಯಿಂದ ಕೂಡಿರಬಲ್ಲದು.

ವಿದೇಶಿ ಆಮದು ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಸ್ಥಳೀಯ ಗೃಹೋತ್ಪನ್ನ ಸಾಮಗ್ರಿಗಳನ್ನು ಬಳಸುವುದು, ಮನೆಯ, ರಸ್ತೆಬದಿಯ ಹಾಗೂ ಕೃಷಿ ಜಮೀನುಗಳಲ್ಲಿ ಕಸವನ್ನು ಬಯೋಡಿಗ್ರೇಡಬಲ್ ಮತ್ತು ನಾನ್-ಬಯೋ ಡಿಗ್ರೇಡಬಲ್ ವಸ್ತುಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವುದು, ಹಾನಿಕಾರಕ ರಾಸಾಯನಿಕಗಳಿಲ್ಲದ ಸುಲಭವಾದ ಉತ್ಪನ್ನಗಳನ್ನು ಖರೀದಿಸುವುದು, ಪರಿಸರಪ್ರಿಯ ಕಾರ್ಯಚಟುವಟಿಕೆಗಳನ್ನು ಹಮ್ಮಿ ಕೊಳ್ಳುವುದರಿಂದಾಗಿ, ಉತ್ತಮ ಆರೋಗ್ಯಕರ ಬದುಕಿನತ್ತ ನಮ್ಮನ್ನು ನಾವು ಮುನ್ನಡೆಸಲು ಪ್ರೇರಕವಾಗುತ್ತವೆ.

ಇಂತಹ ಉತ್ತಮ ನಡವಳಿಕೆಯಿಂದಾಗಿ, ಮುಂದಿನ ತಲೆಮಾರಿಗೆ ನಾವು ಉತ್ತಮ ಪರಿಸರ, ಉತ್ತಮ ಭೂಮಿಯ ಜೊತೆಗೆ ಉತ್ತಮ ಭವಿಷ್ಯತ್ತನ್ನು ಸಹ ಹಸ್ತಾಂತರಿಸುವ ಸುಯೋಗ ವನ್ನು ಪಡೆಯಬಲ್ಲವರಾಗಿರುತ್ತೇವೆ. ಪ್ರತಿ ವ್ಯಕ್ತಿಯೂ ತನ್ನ ಜೀವನದಲ್ಲಿ ಶುದ್ಧತೆ, ಶಿಸ್ತಿನ ಬಳಕೆ, ಮತ್ತು ನೈತಿಕ ಉಪಭೋಗ ರೂಢಿಸಿಕೊಂಡರೆ ಅದು ನೇರವಾಗಿ ರಾಷ್ಟ್ರದ ಶಕ್ತಿ ಯನ್ನು ಬಲಪಡಿಸುತ್ತದೆ.

ಒಬ್ಬ ನಾಗರಿಕನ ಚಟುವಟಿಕೆಯು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುತ್ತದೆ ಎಂಬ ನಂಬಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಕೃತಿಯ ಹೃದಯದಲ್ಲಿದೆ. ಒಂದು ಸುಸ್ಥಿರ, ಸಹಜ ಮತ್ತು ನೈತಿಕ ಜೀವನಶೈಲಿ ನಮ್ಮ ಭಾರತೀಯ ಸಂಸ್ಕೃತಿಯ ಆಧುನಿಕ ರೂಪವಾಗಿದೆ. ಎಷ್ಟೋ ವಿದೇಶಿಗರು, ಕ್ರಿಕೆಟ್, ಸಿನಿಮಾ, ಕೈಗಾರಿಕಾ ಕ್ಷೇತ್ರಗಳಲ್ಲಿನ ದಿಗ್ಗಜರು ಭಾರತಕ್ಕೆ ಬಂದು, ಇಲ್ಲಿಯೇ ನೆಲೆಸಿ, ಇಲ್ಲಿನ ಆಚಾರ ವಿಚಾರಗಳನ್ನು ಅನುಸರಿಸುತ್ತಿದ್ದಾರೆ. ಕೆಲ ವಿದೇಶಿಗರು ಇಲ್ಲಿಗೆ ಬಂದು ಭಾರತೀಯ ಶೈಲಿಯಂತೆ ಮದುವೆಯಾಗಿ ತೆರಳುವ ಉದಾಹರಣೆಗಳು ಈಗ ಹೆಚ್ಚಾಗಿವೆ.

ಇಲ್ಲಿನ ಜೀವನ ಪದ್ಧತಿಗೆ ಮಾರು ಹೋಗದಿರುವವರೇ ಇಲ್ಲವೆಂಬಂತೆ ಸರಳತೆಯಿಂದ, ನಿಸರ್ಗದೊಂದಿಗೆ ನಂಟು ಹೊಂದಿರುವ ಸುಸ್ಥಿರ ಜೀವನಶೈಲಿಯು ಭಾರತೀಯ ಸಂಸ್ಕೃತಿ ಯಲ್ಲಿ ಎಷ್ಟೋ ಶತಮಾನಗಳಿಂದ ಆಚರಿಸುತ್ತ ಬಂದಿರುವಂಥದ್ದಾಗಿದೆ. ಈ ಸಂಸ್ಕೃತಿಯು ಪ್ರಪಂಚದಾದ್ಯಂತ ಇಂದು ಪ್ರಭಾವ ಬೀರುತ್ತಿದೆ. ಇದಕ್ಕೆ ಪೂರಕವಾಗಿ, ಆಧುನಿಕ ವಿಜ್ಞಾನವೂ ಸುಸ್ಥಿರತೆ ಬದುಕಿಗೆ ಪ್ರೇರೇಪಿಸುತ್ತಿದೆ. ಹಸಿರು ಭಾರತ ನಿರ್ಮಿಸುವ ಮೂಲಕ ಶಕ್ತಿಯುತ ಭಾರತ ನಿರ್ಮಾಣದತ್ತ ನಾವೆಲ್ಲರೂ ಹೆಜ್ಜೆ ಇಡೋಣ.

ಗುರುರಾಜ್ ಗಂಟಿಹೊಳೆ

View all posts by this author