ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಜನಜಂಗುಳಿಯಲ್ಲಾಗುವ ಅನಾಹುತಕ್ಕೆ ನಮ್ಮದೇನು ಹೊಣಿಗಾರಿಕೆ ?

ಆಯೋಜಕರ ಜವಾಬ್ದಾರಿ, ಸರ್ಕಾರದ ಜವಾಬ್ದಾರಿ ಮತ್ತು ಜನರ ಜವಾಬ್ದಾರಿ ಏನೇನು ಎಂಬುದನ್ನು ವಿಶ್ಲೇಷಿಸಿದಾಗ, ಮುಂದೆ ನಡೆಯಬಹುದಾದ ಕಾಲ್ತುಳಿತದಂತಹ ದುರ್ಘಟನೆ ಗಳನ್ನು ತಪ್ಪಿಸಬಹುದು. ಪುಷ್ಪಾ ಚಿತ್ರಮಂದಿರ ಘಟನೆ, ಜೋಸೆಫ್ ವಿಜಯ್ ಘಟನೆ ಮತ್ತು ಆರ್‌ಸಿಬಿಯಂತಹ ದುರ್ಘಟನೆಗಳು ಬಹುತೇಕವಾಗಿ ಆಯೋಜಕರ ಹೊಣೆಗಾರಿಕೆಯ ಲೋಪದಿಂದ ಘಟಿಸಿವೆ ಎಂಬ ತೀರ್ಮಾನಕ್ಕೆ ಬರಲಾಗಿದೆ.‌

ಜನಜಂಗುಳಿಯಲ್ಲಾಗುವ ಅನಾಹುತಕ್ಕೆ ನಮ್ಮದೇನು ಹೊಣಿಗಾರಿಕೆ !

-

ಗಂಟಾಘೋಷ

ಬಹಿರಂಗ ಸಭೆ ಸಮಾರಂಭಗಳ ಮೊದಲ ಆದ್ಯತೆ ನೆರೆದವರ ಸುರಕ್ಷತೆಯಾಗಿರಬೇಕು. ಯಾವ ಉದ್ದೇಶಕ್ಕೆ ಯಾರು ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇರಿಸುತ್ತಾರೋ, ಆ ಉದ್ದೇಶ ಮುಗಿಯುವವರೆಗೆ ಅವರೇ ಪೂರ್ಣ ಜವಾಬ್ದಾರಿ ಹೊರಬೇಕು. ಆಗ ಮಾತ್ರವೇ ಸಂಭವನೀಯ ದುರಂತಗಳನ್ನು ತಪ್ಪಿಸಬಹುದಾಗಿದೆ.

ಸಾರ್ವಜನಿಕ ಸಮಾರಂಭಗಳಗುವ ಅನಾಹುತಕ್ಕೆ ನಮ್ಮದೇನು ಹೊಣೆಗಾರಿಕೆ? ಮಾನವನ ಇತಿಹಾಸದಲ್ಲಿ ಬಹುತೇಕ ಕಾಲ್ತುಳಿತದಂತಹ ದುರ್ಘಟನೆಗಳು, ಸಾರ್ವಜನಿಕ ಸ್ಥಳಗಳಲ್ಲಿ, ನೆರೆದ ಧಾರ್ಮಿಕ ಮತ್ತು ರಾಜಕೀಯ ನೇತಾರರ ಸಭೆ ಸಮಾರಂಭಗಳಲ್ಲಿ ಆಕ್ಷಣದಲ್ಲಿ ಉಂಟಾದ ಗಾಬರಿ, ಉದ್ವೇಗಗಳ ಕಾರಣದಿಂದ ನಡೆದಿರುವಂತಹ ಸಂದರ್ಭಗಳೇ ಹೆಚ್ಚು ಎಂಬುದು ಬಹುತೇಕ ಘಟನೆಗಳ ವರದಿ ಮತ್ತು ವಾಸ್ತವ.

ಆಯೋಜಕರ ಜವಾಬ್ದಾರಿ, ಸರ್ಕಾರದ ಜವಾಬ್ದಾರಿ ಮತ್ತು ಜನರ ಜವಾಬ್ದಾರಿ ಏನೇನು ಎಂಬುದನ್ನು ವಿಶ್ಲೇಷಿಸಿದಾಗ, ಮುಂದೆ ನಡೆಯಬಹುದಾದ ಕಾಲ್ತುಳಿತದಂತಹ ದುರ್ಘಟನೆ ಗಳನ್ನು ತಪ್ಪಿಸಬಹುದು. ಪುಷ್ಪಾ ಚಿತ್ರಮಂದಿರ ಘಟನೆ, ಜೋಸೆಫ್ ವಿಜಯ್ ಘಟನೆ ಮತ್ತು ಆರ್‌ಸಿಬಿಯಂತಹ ದುರ್ಘಟನೆಗಳು ಬಹುತೇಕವಾಗಿ ಆಯೋಜಕರ ಹೊಣೆಗಾರಿಕೆಯ ಲೋಪದಿಂದ ಘಟಿಸಿವೆ ಎಂಬ ತೀರ್ಮಾನಕ್ಕೆ ಬರಲಾಗಿದೆ.‌

ಆಂಧ್ರದ ದೇವಸ್ಥಾನದಲ್ಲುಂಟಾದ ಕಾಲ್ತುಳಿತವು ನೆರೆದಿದ್ದ ಜನರ ನಿರ್ಲಕ್ಷ್ಯ ಮತ್ತು ಹೊಣೆಗಾರಿಕೆ ಮರೆತ ಘಟನೆ ಎಂಬಂತೆ ಪರಿಗಣಿಸಲಾಗಿದೆ. ಆಯಾ ಸ್ಥಳಗಳಲ್ಲಿ ಸೇರುವ ಮುನ್ನ ಅಲ್ಲಿನ ಸೌಕರ್ಯ, ಸುರಕ್ಷೆಗಳ ಬಗ್ಗೆ ಜನರು ವಿವೇಚಿಸಿ ಭಾಗವಹಿಸುವುದು ಉತ್ತಮ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: Gururaj Gantihole Column: ಶತಕೋಟಿ ಸರದಾರ ಬಿಎಸ್‌ʼಎನ್‌ʼಎಲ್‌ ಪುಟಿದೆದ್ದು ನಿಲ್ಲುವುದೇ !?

ನಮ್ಮ ನಾಡಿನ ತುಂಬೆಲ್ಲ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದರೆ, ಆಂಧ್ರಪ್ರದೇಶ ರಾಜ್ಜೋತ್ಸವ ದಿನಾಚರಣೆಯು ಕೂಡ ನವೆಂಬರ್ ಒಂದರಂದೇ ಬರುತ್ತದೆ. ಆದರೆ, ಏಕಾದಶಿಯ ಪ್ರಯುಕ್ತ, ಶ್ರೀಕಾಕುಳಂ ದೇವಸ್ಥಾನದಲ್ಲಿ ನಡೆದ ದುರ್ಘಟನೆ ಈ ಭಾರಿ ಆಂಧ್ರದ ಜನತೆ ಶೋಕದಲ್ಲಿರುವಂತೆ ಮಾಡಿತು.

ಕಾಸಿಬುಗ್ಗ ಶ್ರೀವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮಿತಿ ಮೀರಿದ ಜನರ ಸೇರುವಿಕೆ ಯೇ ಇದಕ್ಕೆ ಕಾರಣವೆಂದು ಪ್ರಾಥಮಿಕ ಮಾಹಿತಿಯಲ್ಲಿ ಹೇಳಲಾಗಿದೆ. ಸುಮಾರು ೮-೧೦ ಜನರ ಸಾವಿಗೆ ಕಾರಣವಾಯಿತಲ್ಲದೇ, ನೂರಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿರುವ ವರದಿಯಾಗಿದೆ.

ಮೂರು ಸಾವಿರದಷ್ಟು ಜನ ಸೇರಬಹುದಾದ ವ್ಯವಸ್ಥೆಯನ್ನು ಈ ದೇವಸ್ಥಾನ ಹೊಂದಿದ್ದು, ಏಕಾದಶಿ ಆಚರಣೆಯ ಕಾರಣದಿಂದ 25 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರಿಂದ ಕಾಲ್ತುಳಿತವಾಗಿರುವುದು ಕಂಡು ಬಂದಿದೆ. ತಕ್ಕಮಟ್ಟಿಗೆ ವ್ಯವಸ್ಥೆ ಮಾಡಿಕೊಂಡಿದ್ದರೂ, ಜನಸಂದಣಿ, ನೂಕುನುಗ್ಗಲು ಕಾರಣದಿಂದ ಆಯೋಜಕರ ನಿಯಂತ್ರಣ ತಪ್ಪಿ ಈ ಘಟನೆ ನಡೆದುಬಿಟ್ಟಿದೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ.

ಜನಸ್ತೋಮವು ಕೂಡ ಇಂತಹ ಸಾರ್ವಜನಿಕ ಸಮಾರಂಭಗಳ ಸೇರುವಿಕೆ ಸಂದರ್ಭದಲ್ಲಿ ಅಲ್ಲಿನ ಸುರಕ್ಷಾ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವುದು ಅವಶ್ಯಕ ಕ್ರಮವೆಂಬುದನ್ನು ಅರಿಯಬೇಕು. ನಿಗದಿತ ಸಂಖ್ಯಾಮಿತಿ ಮೀರಿ ಜನರು ಸೇರುತ್ತಿದ್ದರೆ, ಆಯೋಜಕರು ಫಲಕ ಗಳಲ್ಲಿಯೋ, ಎಲ್‌ಇಡಿ ಪರದೆಗಳ ಮೇಲೆ ಪ್ರಕಟಿಸಿ, ನೆರೆದವರಿಗೆ ಜಾಗೃತಿ ಹೇಳು ವುದು ಕೂಡ ಒಂದು ಉತ್ತಮ ಕ್ರಮವಾಗಬಲ್ಲದು.

ಆಯೋಜಿಸುವ ಸ್ಥಳಕ್ಕೆ ನಿಗದಿಗೊಂಡ ಸಂಖ್ಯಾಬಲಕ್ಕಿಂತ ಹೆಚ್ಚು ಜನರು ಸೇರುವಂತಿದ್ದರೆ, ಅಲ್ಲಿ ಕಾಲ್ತುಳಿತ ಘಟಿಸುವ ಸಾಧ್ಯತೆ ಎಂಬುದನ್ನು ಪರಿಗಣಿಸಿ ಮುನ್ನೆಚ್ಚರಿಕೆ ತೆಗೆದು ಕೊಳ್ಳಬೇಕು. ಅತಿ ಹೆಚ್ಚು ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸಂಬಂಧಿತ ಅಧಿಕಾರಿಗಳ ಒಂದು ತಂಡವು ಸಹ ಇಂತಹ ಜಾಗಗಳಲ್ಲಿ ಇರುವುದು ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು.

ಬಹುತೇಕ ಘಟನೆಗಳ ಆಧಾರದಲ್ಲಿ ವಿವೇಚಿಸಿದಾಗ, ಇಂತಹ ಸಂದರ್ಭಗಳಲ್ಲಿ ಕಾಲ್ತುಳಿತ ದ ಘಟನೆಗಳಾಗುವುದು ಅತ್ಯುತ್ಸಾಹ, ನಟರನ್ನು ನೋಡುವ ಆತುರ, ವಿಪರೀತ ಅಭಿಮಾನ, ಭಕ್ತಿ ಸೇರಿದಂತೆ ಕೆಲವರ ಹುಡುಗಾಟಿಕೆ ಸ್ವಭಾವದ ಜನರಿಂದ ವ್ಯತ್ಯಯಗಳಾಗಿ ನೂಕು ನುಗ್ಗಲು ಆರಂಭವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಜೂನ್ ೪ರಂದು ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭೀಕರ ಕಾಲ್ತುಳಿತ ಘಟನೆಯು ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿತು. ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿ ಕ್ರಿಕೆಟ್ ತಂಡವು 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದಿತು. ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿರುವ ನರೇಂದ್ರಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಜೂನ್ ೩ರ ಸಂಜೆ ೭:೩೦ರ ಸುಮಾರಿಗೆ ಐಪಿಎಲ್-2025 ಕಪ್ ಗೆದ್ದಿತು.

ಐಪಿಎಲ್ ಟ್ರೋಫಿ ಗೆದ್ದದ್ದು ದೂರದ ಅಹಮದಾಬಾದ್ ನಗರದಲ್ಲಾದರೆ, ಇದ್ದಕ್ಕಿದ್ದಂತೆ ಜೂನ್ ೪ರಂದು ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡಲು ತರಾತುರಿಯಲ್ಲಿ ಘೋಷಣೆ ಯಾದವು. ಸಾಮಾಜಿಕ ಜಾಲತಾಣಗಳಲ್ಲಿ ಆಹ್ವಾನಗಳು ಬಿತ್ತರಗೊಂಡವು, ಅಭಿಮಾನಿ ಗಳು, ಜನರು ಹೆಚ್ಚೆಚ್ಚು ಶೇರ್ ಮಾಡಿಕೊಂಡರು.

ಜೂನ್ ೪, 2025ರಂದು ಸಂಜೆ ೬:೦೦ ಗಂಟೆಗೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂಬ ಅಡ್ವೈಸರಿಗಳೂ ಜಾಲತಾಣಗಳಲ್ಲಿ ಹರಿದಾಡಿದವು. ಸಂಭ್ರಮಾಚರಣೆ ಕಾರ್ಯಕ್ರಮ ಘೋಷಣೆಯಾದ್ದರಿಂದ ಮತ್ತು ಉಚಿತಪ್ರವೇಶ ಎನ್ನುವ ಸುದ್ದಿ ಹರಡಿದ ಕಾರಣ, ೩೫ ಸಾವಿರ ಆಸನ ಸಾಮರ್ಥ್ಯವಿರುವ ಕ್ರೀಡಾಂಗಣಕ್ಕೆ ೩ಲಕ್ಷಕ್ಕೂ ಅಧಿಕ ಜನರು ಸೇರಿದ್ದರು.

ಜನದಟ್ಟಣೆ ನಿರ್ವಹಣೆಯಲ್ಲಿ ವೈಫಲ್ಯ ಮತ್ತು ಟಿಕೆಟ್ ವಿತರಣೆಯ ಜೊತೆಗೆ ಪ್ರವೇಶ ನಿಯಂತ್ರಣದಲ್ಲಿ ತಾಂತ್ರಿಕ ತಪ್ಪುಗಳು ನೆರೆದಿದ್ದವರನ್ನು ಗೊಂದಲಕ್ಕೀಡು ಮಾಡಿದವು. ಕ್ರೀಡಾಂಗಣದ ಸುತ್ತ ಲಕ್ಷಾಂತರ ಅಭಿಮಾನಿಗಳು ಕಾಯುತ್ತ ನಿಂತಿದ್ದರು. ಅದ್ಯಾವ ಕೆಟ್ಟ ಘಳಿಗೆಯೋ ಎಂಬಂತೆ ೩.೩೦ ರಿಂದ ೫.೩೦ರ ಸುಮಾರಿನ ನಡುವೆ ದುರ್ಘಟನೆ ನಡೆದೇ ಬಿಟ್ಟಿತು.

ನೆರೆದಿದ್ದ ಜನರೆಲ್ಲ ಬ್ಯಾರಿಕೇಡ್ ತಳ್ಳಿ, ಗೇಟ್ ಮುರಿದು ಒಳನುಗ್ಗಲು ಯತ್ನಿಸಿದ್ದು, ಅವಘಡಕ್ಕೆ ಅವಕಾಶ ಮಾಡಿಕೊಟ್ಟಿತು. ನೆರೆದಿದ್ದವರೆಲ್ಲ ಜೀವಭಯದಿಂದ ಓಡತೊಡಗಿ ದರು. ಈ ಹಂತದಲ್ಲಿ ೧೧ ಜನರು ಮೃತಪಟ್ಟರೆ, ಸುಮಾರು ೭೧ ಜನರು ತೀವ್ರವಾಗಿ ಗಾಯಗೊಂಡು ಅಸ್ವಸ್ಥರಾದರು. ಪೊಲೀಸರು ಕಾಲ್ತುಳಿತವನ್ನು ತಪ್ಪಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು.

ಲಾಠಿ ಚಾರ್ಜ್ ಕೂಡ ನಡೆದು ಬಿಟ್ಟಿತು. ಇಷ್ಟರಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ೧೧ ಜನರು ಮೃತರಾಗಿದ್ದಾರೆಂದು ಘೋಷಿಸ ಲಾಯಿತು. ಇಷ್ಟರಲ್ಲಿ ಆರ್‌ಸಿಬಿ ತಂಡವು ೫:೩೦ರ ಸುಮಾರಿಗೆ ಕ್ರೀಡಾಂಗಣಕ್ಕೆ ಬಂದರೂ, ದುರ್ಘಟನೆಯ ಕಾರಣದಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮಗಳು ರದ್ದಾದವು.

ಸುಮಾರು 1400 ಪೊಲೀಸರನ್ನು ೩ ಲಕ್ಷಕ್ಕೂ ಅಧಿಕ ಜನರನ್ನು ನಿಯಂತ್ರಿಸಲು ನೇಮಿಸ ಲಾಗಿದ್ದ ಮಾಹಿತಿ ಹೊರ ಬಿತ್ತು. ಬೆಂಗಳೂರು ಪೊಲೀಸರು ಆರ್‌ಸಿಬಿ ತಂಡದ ಫ್ರಾಂಚೈಸಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಅವರನ್ನು ಅಪರಾಧಿ ಸ್ಥಾನದಲ್ಲಿರಿಸಿ ಎಫ್‌ ಐಆರ್ ದಾಖಲಿಸಿದರು.

ಇಂತಹ ಒಂದು ಕಹಿ ಘಟನೆ ನೆನಪಿನಿಂದ ಮರೆಯುವ ಮುನ್ನವೇ ಪಕ್ಕದ ರಾಜ್ಯದಲ್ಲಿ ಇದೇ ಮಾದರಿಯ, ಇನ್ನೂ ಭೀಕರವಾಗಿ ಕಾಲ್ತುಳಿತ ಪ್ರಕರಣ ನಡೆದು ಬಿಟ್ಟಿದೆ. ಜನರಿಂದಲೇ ನಾವು ಎಂದು ಹೇಳುತ್ತೇವೆ. ಆದರೆ, ಜನರ ಸುರಕ್ಷತೆಯಲ್ಲಿ ನಿರ್ವಹಣೆ ಮಾಡುವವರು ಏರ್ಪಡಿಸುವ ಸುರಕ್ಷತೆಯ ಪರಿಮಾಣಗಳು ಮಾತ್ರ ಕೊಟ್ಟ ಕೊನೆಯ ಹಂತದ ಯೋಗ್ಯತೆಯಲ್ಲಿರುತ್ತವೆ ಅಥವಾ ತುಂಬಾ ಕಡೆಗಣಿಸಲಾಗಿರುತ್ತದೆ.

ತಮಿಳು ನಟ 51 ವರ್ಷದ ಜೋಸೆಫ್ ವಿಜಯ್ ಎಂಬಾತ ಕಟ್ಟಿದ ಟಿವಿಕೆ ಎಂಬ ರಾಜಕೀಯ ಪಕ್ಷದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಇದೇ ಸೆಪ್ಟೆಂಬರ್ ೧೩ರಂದು ಕರೂರಿನಲ್ಲಿ ಕಾಲ್ತುಳಿತದ ಅವಘಡ ಸಂಭವಿಸಿ, 39ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಇದರಲ್ಲಿ, ೯ ಮಕ್ಕಳೂ, ೧೭ ಸೀಯರೂ ಸೇರಿದ್ದು, ೬೦ಕ್ಕೂ ಹೆಚ್ಚು ಗಾಯಾಳುಗಳಾಗಿದ್ದಾರೆ.

ನಿರೀಕ್ಷೆಗೂ ಮೀರಿ ಜನರು ಸೇರಿದ್ದು, ಈ ಅವಘಡಕ್ಕೆ ಕಾರಣವೆನ್ನಲಾಗುತ್ತಿದೆ. ನಿಗದಿ ಪಡಿಸಿದ ಸಮಯಕ್ಕಿಂತ ನಟ ಜೋಸೆಫ್ ವಿಜಯ್ ೭ ತಾಸು ತಡವಾಗಿ ಬಂದದ್ದರಿಂದ ಜನರು ತಾಳ್ಮೆ ಕಳೆದುಕೊಂಡು ನಟನಿದ್ದ ಸ್ಟೇಜ್ ಕಡೆಗೆ ನುಗ್ಗಲು ಯತ್ನಿಸಿದ್ದೂ ಕಾರಣ ವೆಂದು ಸಹ ವರದಿಯಾಗುತ್ತಿವೆ. ‌

ಸಾರ್ವಜನಿಕ ಸಭೆಗಳನ್ನು ಆಯೋಜಿಸಬೇಕಾದ ಸ್ಥಳಗಳಲ್ಲಿ ನಿಯಮಗಳನ್ನು ಪಾಲಿಸ ದಿರುವುದರಿಂದಾಗಿ ಇಂತಹ ಘಟನೆಗಳು ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಆಯೋಜ ಕರಿಗೆ ಸಾಮಾನ್ಯ ಜನರ ಬೆಂಬಲ ಬೇಕು, ಅವರ ಮತಗಳಿಕೆ, ಪ್ರಚಾರದ ಭಾಷಣಕ್ಕೆ ಅವರ ಸಂಖ್ಯಾಬಲ ಬೇಕು. ಆದರೆ, ಸುರಕ್ಷತೆಯ ವಿಚಾರ ಬಂದಾಗ, ಕಡೆಗಣಿಸುವುದು ಯಾಕೆ ಎಂದು ಪ್ರಜೆ ಪ್ರಶ್ನಿಸತೊಡಗಿದ್ದಾನೆ. ಈ ಘಟನೆ ನಡೆಯುತ್ತಿದ್ದಂತೆ ಮೆಲ್ಲಗೆ, ಆ ಜಾಗದಿಂದ ನಟ ಹೊರಟುಹೋಗಿರುವುದನ್ನು ಸ್ಥಳೀಯರು, ಸುದ್ಧಿಮಾಧ್ಯಮಗಳು ಮತ್ತು ರಾಜಕೀಯ ನೇತಾರರು ಜೋಸೆಫ್ ವಿಜಯ್ ಅವರ ಬದ್ಧತೆ ಮತ್ತು ಹೊಣೆಗಾರಿಕೆ ಜೊತೆಗೆ ಜನರಿಗೆ ತೋರುತ್ತಿರುವ ನಕಲಿ ಕಾಳಜಿ ಕುರಿತು ಖಂಡಿಸುತ್ತಿದ್ದಾರೆ.

ಜೋಸೆಫ್ ವಿಜಯ್ ಪಕ್ಷದ ವಿದ್ಯಾರ್ಥಿ ಗುಂಪಿನ ಮುಖ್ಯಸ್ಥ ಮತ್ತು ಕೆಲ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆಂದು ವರದಿಗಳಾಗುತ್ತಿವೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಪುಷ್ಪಾ ಚಿತ್ರದ ಬಿಡುಗಡೆ ಸಂದರ್ಭದಲ್ಲಾದ ಕಾಲ್ತುಳಿತ ದಿಂದಾಗಿ ಒಬ್ಬ ಮಹಿಳೆ ಮೃತಪಟ್ಟಿದ್ದರು.

ಇದಕ್ಕಾಗಿ, ಯಾವುದೇ ಸಂಬಂಧವಿಲ್ಲದ ನಟ ಅಲ್ಲುಅರ್ಜುನ್ ಅವರನ್ನು ಬಂಧಿಸ ಲಾಗಿತ್ತು. ಕಾಲ್ತುಳಿತದ ಪ್ರಕರಣಕ್ಕೆ ನೇರ ಸಂಬಂಧವಿರುವ ಜೋಸೆಫ್ ವಿಜಯ್ ಅವರನ್ನು ಮಾತ್ರ ಯಾಕೆ ಇನ್ನು ಬಂಧಿಸಿಲ್ಲ ಎಂದು ಪ್ರಶ್ನಿಸುತ್ತಿರುವುದು ಮಾತ್ರ ಬಹಳ ಜೋರಾಗಿಯೇ ಸದ್ದು ಮಾಡುತ್ತಿದೆ.

ಇಂತಹ ತೀವ್ರತರ ಘಟನೆಗಳಿಗೆ ಪ್ರತ್ಯೇಕ ಕಾನೂನುಗಳಿಲ್ಲವಾದರೂ, ಕಾಲ್ತುಳಿತ, ನಿರ್ಲಕ್ಷ್ಯ ಪ್ರಕರಣಗಳನ್ನು ಭಾರತೀಯ ನ್ಯಾಯ ಸಂಹಿತೆಯ-106 (ಸೆಕ್ಷನ್ ಎ ಐಪಿಸಿ)ರ ಅಡಿಯಲ್ಲಿ ನೇರ ಹೊಣೆಗಾರಿಕೆ ಮಾಡಬಹುದಾಗಿದೆ. ರಾಜಕೀಯವಿರಲಿ, ವ್ಯಕ್ತಿಗಳ ಶಕ್ತಿ ಪ್ರದರ್ಶನ ಕಾರ್ಯಕ್ರಮಗಳಿರಲಿ, ಅಲ್ಲಿ ಸೇರುವ ಜನರ ಮೇಲೆ ನಿಜವಾದ ಪ್ರೀತಿ ಕಾಳಜಿಯಿದ್ದು, ಅವರ ಸುರಕ್ಷತೆ ಬಗ್ಗೆ ಅತಿ ಹೆಚ್ಚು ಗಮನ ಕೊಡುವುದು ಆದ್ಯ ಕರ್ತವ್ಯ ಎಂಬುದನ್ನು ಮರೆಯಬಾರದು.

ಹಾಗೆಯೇ, ಇಂತಹ ಘಟನೆಗಳಲ್ಲಿ ಸಾರ್ವಜನಿಕರ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ. ಒಂದು ಸಭೆ ಸಮಾರಂಭಗಳಲ್ಲಿ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೇರುವ ಮುನ್ನ, ಅಲ್ಲಿ ಕೈಗೊಂಡಿರುವ ಸುರಕ್ಷಾ ಕ್ರಮಗಳ ಕುರಿತು ಗಮನಿಸುವುದು ಹಾಗೆಯೇ, ಸ್ವಯಂ ಸುರಕ್ಷತೆ ಬಹಳ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು.

ಆಯೋಜಕರು ಮತ್ತು ಜಿಲ್ಲಾ ಆಡಳಿತ ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಗಮನಿಸಿದಾಗ,

೧. ಆಯೋಜಿಸುವ ಸ್ಥಳದಲ್ಲಿ ಎಷ್ಟು ಜನ ಸುರಕ್ಷಿತವಾಗಿ ಸೇರಬಹುದು ಎಂಬುದನ್ನು ಸುರಕ್ಷತಾ ಅಧಿಕಾರಿಗಳಿಂದ ಅಂದಾಜು ಮಾಡಿಸಬೇಕು. ಅದಕ್ಕಿಂತ ಹೆಚ್ಚು ಜನರಿಗೆ ಅವಕಾಶ ಕೊಡಬಾರದು.

೨. ಟಿಕೆಟ್ / ಪಾಸ್ ವ್ಯವಸ್ಥೆ ನಿಯಂತ್ರಣದಲ್ಲಿಟ್ಟುಕೊಳ್ಳಲು, ಕ್ಯೂಆರ್ ಕೋಡ್ ಅಥವಾ ಡಿಜಿಟಲ್ ಎಂಟ್ರಿ ಬಳಸಿದರೆ ಸಂಭವನೀಯ ಅಪಘಾತ ತಪ್ಪಿಸುವ ಸಾಧ್ಯತೆ ಜಾಸ್ತಿ.

೩. ಪ್ರವೇಶ ನಿರ್ಗಮನ ದಾರಿಗಳ ಕುರಿತು, ಮೂರು ನಾಲ್ಕು ಬಾಗಿಲುಗಳು (ತುರ್ತು ನಿರ್ಗಮನ) ಇದ್ದರೆ ಉತ್ತಮ. ಇವುಗಳನ್ನು ಸೂಚನಾ ಫಲಕಗಳ ಮೂಲಕ ಸ್ಪಷ್ಟವಾಗಿ ಗುರುತಿಸಬೇಕು.

೪. ಜನಸಂದಣಿ ನಿಯಂತ್ರಣ ಯೋಜನೆಯ ಭಾಗವಾಗಿ, ಪೊಲೀಸ್, ಗೃಹರಕ್ಷಕ, ಸ್ವಯಂಸೇವಕರೆಲ್ಲ ಸೇರಿ ಕಾರ್ಯಕ್ರಮವನ್ನು ಸಂಪೂರ್ಣ ನಿರ್ವಹಿಸುವ ಜವಾಬ್ದಾರಿ ಹೊರಬೇಕು.

೫. ಸ್ಥಳದ ಆಂಬ್ಯುಲೆನ್ಸ್, ಮೆಡಿಕಲ್ ಸ್ಟಾಲ್, ಫಸ್ಟ್ ಏಯ್ಡ್ ಕಿಟ್ ಇರಬೇಕು. ವೈದ್ಯರು ಮತ್ತು ನರ್ಸ್‌ಗಳು ಸ್ಥಳದಲ್ಲಿರುವಂತೆ ನೋಡಿಕೊಳ್ಳಬೇಕು.

೬. ಸ್ಪೀಕರ್, ಡಿಸ್ಪ್ಲೇ ಬೋರ್ಡ್‌ಗಳನ್ನು ಜನರಿಗೆ ಗಾಬರಿಯಾದ ಪರಿಸ್ಥಿತಿಯಲ್ಲಿ ನಿಯಂತ್ರಿ ಸಲು ಉಪಯೋಗಿಸಬಹುದು. ಬ್ಯಾರಿಕೇಡ್‌ಗಳ ಜೊತೆಗೆ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಕಡ್ಡಾಯಗೊಳಿಸಿರಬೇಕು.

೭. ಮಹಿಳಾ ಮತ್ತು ಮಕ್ಕಳ ಸುರಕ್ಷತಾ ವಿಚಾರವಾಗಿ, ಮಹಿಳಾ ಪೊಲೀಸ್ ಸಿಬ್ಬಂದಿ ಇರಬೇಕು. ಮಕ್ಕಳಿಗೆ ಪ್ರತ್ಯೇಕ ಸುರಕ್ಷತಾ ವಲಯ (ಕಳೆದು ಹೋದರೆ ತಕ್ಷಣ ನೆರವು ನೀಡುವ ವ್ಯವಸ್ಥೆ) ಒದಗಿಸುವ ವ್ಯವಸ್ಥೆ ಇರಬೇಕು.

ಜನಸಂದಣಿ ಗಲಾಟೆಯ ಸಮಯದಲ್ಲಿ ಸಾರ್ವಜನಿಕರಾದ ನಾವೂ ಸಹ ನಮ್ಮ ಕೆಲ ಜವಾಬ್ದಾರಿಗಳನ್ನು ನಿಭಾಯಿಸುವುದು ಅತ್ಯಗತ್ಯವಾಗಿದ್ದು;

೧. ಇಂತಹ ಘಟನೆಗಳು ಶುರುವಾಗುತ್ತಿದ್ದಂತೆಯೇ, ಗಾಬರಿಯಾಗಬಾರದು. ಶಾಂತವಾಗಿರ ಬೇಕು. ಓಡಬಾರದು, ತಳ್ಳಾಟ, ನೂಕಾಟ ಮಾಡದೇ, ಜನರ ಕಿರುಚಾಟದಿಂದ ಭಯಪಡದೆ ನಿಯಂತ್ರಣದಲ್ಲಿರಬೇಕು.

೨. ಹೊರಗೆ ಹೋಗುತ್ತಿರುವ ಜನರ ಎದುರಿಗೆ ಹೋಗುವ ಬದಲಾಗಿ, ಪಕ್ಕಕ್ಕೆ ಸರಿದು, ಅವರೊಂದಿಗೆ ನಿಧಾನಕ್ಕೆ ಹೊರಹೋಗುವ ಪ್ರಯತ್ನ ಮಾಡಬೇಕು.

೩. ಹ್ಯಾಂಡ್‌ಬ್ಯಾಗ್, ಚಪ್ಪಲಿ, ಅಥವಾ ಬ್ಯಾಕ್‌ಪ್ಯಾಕ್ ಜನರು ತಳ್ಳುವಾಗ ಅಡ್ಡಿಯಾಗ ಬಹುದು, ಅವುಗಳನ್ನು ಬಿಟ್ಟು ಬಿಡಿ. ಚಿಕ್ಕಮಕ್ಕಳು ಅಥವಾ ಹಿರಿಯರಿದ್ದರೆ ಅವರ ಕೈಹಿಡಿದು, ತಳ್ಳಾಟದ ಮಧ್ಯೆ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು.

೪.ಗೋಡೆ ಅಥವಾ ಲೋಹದ ಬ್ಯಾರಿಕೇಡ್ ಬಳಿ ನೂಕಾಟದ ಒತ್ತಡ ಹೆಚ್ಚಾದರೆ ಉಸಿರಾಟ ಕಷ್ಟವಾಗುತ್ತದೆ. ಕೆಲವೊಮ್ಮೆ ಬ್ಯಾರಿಕೇಡುಗಳು ಮುರಿದು ಗಾಯ, ಪ್ರಾಣಾಪಾಯ ಅಥವಾ ಎತ್ತರದಿಂದ ಬೀಳುವ ಸಾಧ್ಯತೆ ಇರುತ್ತದೆ, ಎಚ್ಚರಿಕೆ ಇರಲಿ. ಇದೆಲ್ಲದರ ಮಧ್ಯೆ, ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಹತ್ತಿರದ ಸುರಕ್ಷತಾ ಸಿಬ್ಬಂದಿ/ಪೊಲೀಸರನ್ನು ಹುಡುಕಿ, ಅವರ ಜನಸಂದಣಿ ನಿಯಂತ್ರಣ ತರಬೇತಿ ಸೂಚನೆ ಪಾಲಿಸಿ.

ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ಆಡಳಿತ ವೈಫಲ್ಯಗಳನ್ನು ಪೊಲೀಸ್ ಅಧಿಕಾರಿ ಗಳ ಮೇಲೆಯೋ, ಆಯೋಜಕರ ಮೇಲೆಯೋ ಹೊರಿಸಿ ಸುಮ್ಮನಾಗಬಹುದು. ನಡೆದ ದುರ್ಘಟನೆಗಳಲ್ಲಿ ಪ್ರಾಣತೆತ್ತವರು ನಮ್ಮವರೇ ಆಗಿರುತ್ತಾರೆ ಮತ್ತು ಅವರು ಮರಳಿ ಬರಲಾರರು ಎಂಬುದನ್ನು ಮರೆಯಬಾರದು.