ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Thimmanna Bhagwat Column: ಮರುವಿಂಗಡಣೆ ಹೊಸ ಪ್ರಸ್ತಾಪ: ಹಳೇ ಮದ್ಯ, ಹೊಸ ಪ್ರಸ್ತಾಪ ?

ಸದಸ್ಯರ ಸಂಖ್ಯೆ ಹೆಚ್ಚಾದರೆ ಮಂತ್ರಿಗಳ ಸಂಖ್ಯೆ ಮತ್ತು ಅವರ ದರ್ಬಾರಿಗೆ ತಗಲುವ ವೆಚ್ಚ ಕೂಡಾ ಜಾಸ್ತಿಯಾಗುತ್ತದೆ. ದೇಶದ ಅಭಿವೃದ್ಧಿಗೆ ರಾಜಕಾರಣಿಗಳ ಕೊಡುಗೆ ಅಗತ್ಯವಾದರೂ, ಅವರ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆ ಬೇಡ. ಪ್ರತಿನಿಧಿಗಳು ಹೆಚ್ಚಾದಂತೆ, ಅಭಿವೃದ್ಧಿಯ ಬದಲು ಆಡಳಿತಾತ್ಮಕ ವೆಚ್ಚಗಳೇ ಹೆಚ್ಚಾಗುವ ಅಥವಾ ಹಣದ ಹರಿವಿನ ಮಾರ್ಗ ಸಂಕೀರ್ಣವಾಗುವ ಸಾಧ್ಯತೆ ಇದೆ.

ಮರುವಿಂಗಡಣೆ ಹೊಸ ಪ್ರಸ್ತಾಪ: ಹಳೇ ಮದ್ಯ, ಹೊಸ ಪ್ರಸ್ತಾಪ ?

-

Profile
Ashok Nayak Jun 15, 2026 9:10 AM

ಕಾನೂನ್‌ ಸೆನ್ಸ್‌

ತಿಮ್ಮಣ್ಣ ಭಾಗವತ್

ಟಿಎಂಸಿ ಪಕ್ಷದ 20 ಸಂಸದರು ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಕೆಲವು ಸದಸ್ಯರು ಕೂಡಾ ಎನ್‌ಡಿಎ ಕಡೆ ವಾಲುತ್ತಿರುವ ಸುದ್ದಿ ಹರಿದಾಡುತ್ತಿದೆ. ಆಮ್-ಆದ್ಮಿ ಪಕ್ಷದ ಹಲವು ಸಂಸದರು ಈ ಮೊದಲೇ ಎನ್‌ಡಿಎ ತೆಕ್ಕೆಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರನೇ ಎರಡು ಬಹುಮತದ ಕೊರತೆಯಿಂದ ಲೋಕಸಭೆಯ ಅಂಗೀಕಾರ ಪಡೆಯಲು ವಿಫಲವಾದ ‘ಮತಕ್ಷೇತ್ರಗಳ ಮರುವಿಂಗಡನೆ’ (Delimitation) ಮಸೂದೆ ಯನ್ನು ಪುನಃ ಮಂಡಿಸುವ ಸಾಧ್ಯತೆ ಇದೆ.

ಏನಿದು ಕ್ಷೇತ್ರ ಮರುವಿಂಗಡಣೆ?: ಭಾರತದ ಸಂವಿಧಾನದ 82ನೇ ವಿಧಿಯು ಪ್ರತಿ ಸಲ ಜನಗಣತಿ ಮುಗಿದ ಕೂಡಲೇ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ. 81ನೇ ವಿಧಿಯ ಪ್ರಕಾರ ಪ್ರತೀ ರಾಜ್ಯಕ್ಕೆ ಅದರ ಜನಸಂಖ್ಯೆಯ ಅನುಪಾತಕ್ಕೆ ಸಮನಾಗಿ ಲೋಕಸಭಾ ಸ್ಥಾನಗಳನ್ನು ನೀಡಬೇಕು ಮತ್ತು ಅಂಥ ಸ್ಥಾನಗಳ ಸಂಖ್ಯೆ ಮತ್ತು ರಾಜ್ಯದ ಜನಸಂಖ್ಯೆಯ ಅನುಪಾತ ಎಲ್ಲಾ ರಾಜ್ಯಗಳಲ್ಲಿ ಸಾಧ್ಯವಾದಷ್ಟು ಸಮನಾಗಿರಬೇಕು.

1977ರ 42ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ವಯ ಈ ಪ್ರಕ್ರಿಯೆಯನ್ನು 2001ರವರೆಗೆ ತಡೆ ಹಿಡಿಯಲಾಗಿತ್ತು. 2002ರಲ್ಲಿ 84ನೇ ತಿದ್ದುಪಡಿಯ ಮೂಲಕ ಈ ತಡೆಯನ್ನು 2026ರವರೆಗೆ ವಿಸ್ತರಿಸ ಲಾಯಿತು. ಈಗ ಈ ವಿಸ್ತರಿತ ಅವಧಿ ಮುಗಿದಿರುವುದರಿಂದ ಹೊಸ ಮಸೂದೆಯನ್ನು ಮಂಡಿಸುವ ಅಗತ್ಯ ಎದುರಾಗಿದೆ.

ಕ್ಷೇತ್ರ ವಿಂಗಡಣೆಯು ಒಂದು ವ್ಯಕ್ತಿಗೆ ಒಂದು ಮತ ಮತ್ತು ಎಲ್ಲಾ ಮತಗಳಿಗೆ ಸಮಾನ ಮೌಲ್ಯ ಎಂಬ ಮೂಲ ತತ್ವವನ್ನು ಆಧರಿಸಿದೆ. ಜನಸಂಖ್ಯೆ ಹೆಚ್ಚಳವಾದಾಗಲೂ ಲೋಕಸಭಾ ಸ್ಥಾನ ಗಳನ್ನು ಹೆಚ್ಚು ಮಾಡದೇ ಹಾಗೇ ಉಳಿಸಿಕೊಂಡರೆ ವಿವಿಧ ಲೋಕಸಭಾ ಸದಸ್ಯರು ಪ್ರತಿನಿಧಿಸುವ ಮತದಾರರ ಸಂಖ್ಯೆಯಲ್ಲಿ ಗಣನೀಯ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರು ಸುಮಾರು 30 ಲಕ್ಷ ಮತದಾರರನ್ನು ಪ್ರತಿನಿಧಿಸಿದರೆ ಕೆನರಾ ಲೋಕಸಭಾ ಕ್ಷೇತ್ರದ ಎಂಪಿ. ಕೇವಲ 17 ಲಕ್ಷ ಮತದಾರರನ್ನು ಮಾತ್ರ ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: Thimmanna Bhagwath Column: ಜೀವನಾಂಶಕ್ಕೆ ಕೋರ್ಟ್‌ ಇದೆ, ಪ್ರೀತಿಗೇನು ಮಾಡೋಣ ?

ಕ್ಷೇತ್ರ ಮರುವಿಂಗಡಣೆ ಅಥವಾ Re-districting ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಸಮಸ್ಯೆಯಾಗಿದೆ. ಅಮೆರಿಕದಲ್ಲಿ ಕಾಯಂ ಹಂಚಿಕೆ ಕಾಯಿದೆ 1929ರ ಅನ್ವಯ ಜನಪ್ರತಿನಿಧಿ ಸಭೆಯಲ್ಲಿರುವ ಸ್ಥಾನ ಗಳ ಸಂಖ್ಯೆಯನ್ನು 435ಕ್ಕೆ ಮಿತಿಗೊಳಿಸಲಾಗಿದ್ದು ಆನಂತರ ಜನಸಂಖ್ಯೆ ಹೆಚ್ಚಳವಾಗಿದ್ದರೂ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ ಪ್ರತಿ 10ವರ್ಷದ ಜನಗಣತಿ ಯ ಆಧಾರದಲ್ಲಿ ಕ್ಷೇತ್ರಗಳ ಗಡಿಯನ್ನು ಬದಲಾಯಿಸುವ ಮೂಲಕ ಹಿಂದೆ ಇದ್ದ ಸ್ಥಾನಗಳಿಗೆ ಜನಸಂಖ್ಯೆಯನ್ನು ಮರುಹಂಚಿಕೆ ಮಾಡಲಾಗುತ್ತಿದೆ.

’Gerrymandering’ ಎಂದು ಕರೆಯಲ್ಪಡುವ ಪ್ರಕ್ರಿಯೆಯ ಮೂಲಕ ಮತಕ್ಷೇತ್ರಗಳ ನಕ್ಷೆ ಯನ್ನು ರಾಜಕಾರಣಿಗಳು ತಮ್ಮ ಗೆಲುವಿಗೆ ಅನುಕೂಲವಾಗುವಂತೆ ಬದಲಿಸಲು ಪ್ರಯತ್ನಿಸುವುದು ಅಮೆರಿಕದಲ್ಲಿ ಅನೇಕ ಸಲ ಕಂಡುಬಂದಿದೆ. 27 ದೇಶಗಳ ಯುರೋಪಿಯನ್ ಒಕ್ಕೂಟದ ಸಂಸತ್ತಿನ ಒಟ್ಟೂ ಸದಸ್ಯರ ಸಂಖ್ಯೆಯನ್ನು ಲಿಸ್ಬನ್ ಒಪ್ಪಂದದ ಪ್ರಕಾರ 750ಕ್ಕೆ ಮಿತಿಗೊಳಿಸಲಾಗಿದೆ ಯಾದರೂ ಭೌಗೋಲಿಕ ಕ್ಷೇತ್ರಗಳ ನಡುವಿನ ಜನಸಂಖ್ಯೆಯ ವ್ಯತ್ಯಯದ ಸಮಸ್ಯೆ ಅಲ್ಲಿ ಕೂಡಾ ಇದೆ.

ಭಾರತದ ಲೋಕಸಭೆಯ ಸ್ಥಾನಗಳ ಸಂಖ್ಯೆಯನ್ನು 1971ರ ಗಣತಿಯ ಆಧಾರದಲ್ಲಿ 543ಕ್ಕೆ ಮಿತಿಗೊಳಿಸಲಾಗಿದೆ. ಆದರೆ 1971ರ ನಂತರ ದೇಶದ ಜನಸಂಖ್ಯೆ ಸರಿ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ. ಆಗ ಸುಮಾರು 10 ಲಕ್ಷ ಜನಸಂಖ್ಯೆಗೆ ಒಂದರಂತೆ ಲೋಕಸಭಾ ಸ್ಥಾನಗಳನ್ನು ನಿಗದಿಗೊಳಿಸಲಾಗಿತ್ತು.

7

ಈಗ ಅದೇ ಪ್ರಮಾಣವನ್ನು ಅನುಸರಿಸಿದರೆ ಆ ಸಂಖ್ಯೆ 1500ಕ್ಕೂ ಮಿಕ್ಕುತ್ತದೆ. ಅಷ್ಟೊಂದು ಸದಸ್ಯರು ಸೇರಿದರೆ ಅದು ಸಭೆಯಾಗುವ ಬದಲು ಗದ್ದಲದ ಜಾತ್ರೆಯಾಗಬಹುದು. ನಮ್ಮ ಹೊಸ ಸಂಸತ್ ಭವನದ ಲೋಕಸಭಾಂಗಣದಲ್ಲಿ ಕೇವಲ 888 ಸದಸ್ಯರಿಗೆ ಆಸನ ವ್ಯವಸ್ಥೆ ಇದೆ.

2026ರ ಕ್ಷೇತ್ರ ಮರುವಿಂಗಡಣೆ ಮಸೂದೆಯ ಪ್ರಕಾರ 20 ಲಕ್ಷ ಜನಸಂಖ್ಯೆಗೆ ಒಂದರಂತೆ ಲೋಕ ಸಭಾ ಕ್ಷೇತ್ರಗಳನ್ನು ನಿಗದಿಪಡಿಸಿದರೂ ಒಟ್ಟೂ ಸದಸ್ಯರ ಸಂಖ್ಯೆ ಸುಮಾರು 850ನ್ನು ದಾಟುತ್ತದೆ.

ದಕ್ಷಿಣ ರಾಜ್ಯಗಳ ಆಕ್ಷೇಪ: ಈ ಮೊದಲು ಲೋಕಸಭಾ ಸ್ಥಾನಗಳನ್ನು 543ಕ್ಕೆ ಮಿತಿಗೊಳಿಸಿದ್ದರ ಮುಖ್ಯ ಉದ್ದೇಶ ಜನಸಂಖ್ಯಾ ಸ್ಪೋಟದ ನಿಯಂತ್ರಣವಾಗಿತ್ತು. ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರ ಪರಿಣಾಮವಾಗಿ ಈ ರಾಜ್ಯಗಳಲ್ಲಿ ಜನಸಂಖ್ಯೆಯ ಹೆಚ್ಚಳ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆಯಾಗಿದೆ.

ಏಪ್ರಿಲ್‌ನಲ್ಲಿ ಮಂಡಿಸಲಾಗಿದ್ದ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದ್ದ ಮಾನದಂಡಗಳ ಪ್ರಕಾರ ಹೆಚ್ಚಿದ ಜನಸಂಖ್ಯೆಯ ಆಧಾರದಲ್ಲಿ ಉತ್ತರದ ರಾಜ್ಯಗಳಿಗೆ ದೊರಕಬಹುದಾದ ಹೆಚ್ಚುವರಿ ಲೋಕಸಭಾ ಸ್ಥಾನಗಳ ಸಂಖ್ಯೆ ದಕ್ಷಿಣ ರಾಜ್ಯಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗುತ್ತದೆ.

ಒಟ್ಟೂ ಲೋಕಸಭಾ ಸ್ಥಾನಗಳಲ್ಲಿ ದಕ್ಷಿಣ ರಾಜ್ಯಗಳ ಪಾಲು ಈಗಿರುವ 24 ರಿಂದ 19 ಪ್ರತಿಶತಕ್ಕೆ ಇಳಿಯಬಹುದು ಮತ್ತು ಉತ್ತರದ ರಾಜ್ಯಗಳ ಪಾಲು ಗಣನೀಯವಾಗಿ ಹೆಚ್ಚಳವಾಗುತ್ತದೆ. ಇದರ ನೇರ ಪರಿಣಾಮವೆಂದರೆ ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಸಂಸದರ ಕೂಗು ಕೇಳಿಸುವದಿಲ್ಲ. ಕೇಂದ್ರ ಮಂತ್ರಿಮಂಡಲ ರಚನೆ, ಖಾತೆಗಳ ಹಂಚಿಕೆ ಅಥವಾ ಪಕ್ಷಗಳ ಪದಾಧಿಕಾರಿಗಳ ಆಯ್ಕೆಯ ವಿಷಯದಲ್ಲಿ ಕೂಡಾ ಇದೇ ರೀತಿಯ ತಾರತಮ್ಯ ಉಂಟಾಗಬಹುದು.

ಉತ್ತರದ ಸದಸ್ಯರು ಸೇರಿದರೆ ದಕ್ಷಿಣ ರಾಜ್ಯಗಳ ಹಿತಾಸಕ್ತಿಗೆ ಮಾರಕವಾಗುವ ನಿರ್ಣಯಗಳನ್ನು ಕೂಡಾ ಕೈಗೊಳ್ಳಬಹುದಾಗಿರುತ್ತದೆ. ಯಾಕೆಂದರೆ ಆಳುವವರಿಗೆ ದಕ್ಷಿಣದ ರಾಜ್ಯಗಳಿಗಿಂತ ಉತ್ತರ ರಾಜ್ಯಗಳು ಹೆಚ್ಚು ಸಂಖ್ಯೆಯ ಬೆಂಬಲ ದೊರಕಿಸುವ ಸ್ಥಿತಿಯಲ್ಲಿರುತ್ತವೆ. ಅದೊಂದು ರೀತಿಯ ಮತ ಬ್ಯಾಂಕ್ ರಾಜಕೀಯವಾಗಬಹುದು. ದೇಶದ ಇತಿಹಾಸವನ್ನು ಗಮನಿಸಿದರೆ ದಕ್ಷಿಣದ ರಾಜ್ಯಗಳ ನಾಯಕರು ಪ್ರಧಾನಿ, ರಾಷ್ಟ್ರಪತಿಗಳಂಥ ಉನ್ನತ ಸ್ಥಾನಗಳಿಗೆ ಆಯ್ಕೆಯಾಗಿರುವುದು ಕಡಿಮೆ. ಈ ತಾರತಮ್ಯ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ.

ಇನ್ನು ಕೇಂದ್ರದಿಂದ ಅನುದಾನ ಮಂಜೂರಿ, ಕೈಗಾರಿಕೆಗಳ ಸ್ಥಾಪನೆ, ರೈಲು ಮತ್ತು ವಿಮಾನ ಸೇವೆ ಗಳ ವಿಸ್ತರಣೆ, ವಿದೇಶೀ ಹೂಡಿಕೆಯಂಥ ವಿಷಯಗಳಲ್ಲಿ ಕೂಡಾ, ದಕ್ಷಿಣ ರಾಜ್ಯಗಳಿಗೆ ಅನ್ಯಾಯ ವಾಗುವ ಸಾಧ್ಯತೆ ಇರುತ್ತದೆ. ನಮ್ಮ ರಾಜ್ಯದ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಕೇಂದ್ರ ಸರಕಾರ ದಿಂದ ನಮಗೆ ಬರುವ ಅನುದಾನ ಕಡಿಮೆ ಎಂಬ ಕೂಗು ಈಗಾಗಲೇ ಕರ್ನಾಟಕ, ತಮಿಳ್ನಾಡಿನಂಥ ರಾಜ್ಯಗಳಲ್ಲಿ ಎದ್ದಿದೆ.

ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು, ಭಾಷಾವಾರು ರಾಜ್ಯಗಳನ್ನು ಹೊಂದಿದೆ. ಕೇವಲ ಜನಗಣತಿಯನ್ನೇ ಆಧಾರವಾಗಿಸಿ ಅಧಿಕಾರ ಹಂಚಿಕೆಯಾದರೆ, ಪ್ರಾಂತೀಯ ಪ್ರಾತಿನಿಧಿತ್ವದ ಸಮಾನತೆಗೆ ಖಂಡಿತ ಧಕ್ಕೆಯಾಗುತ್ತದೆ. ಅದು ಪ್ರಾದೇಶಿಕ ಅಸಮತೋಲನ ಮತ್ತು ತಾರತಮ್ಯಕ್ಕೆ ದಾರಿ ಮಾಡಿಕೊಡುವ ಮೂಲಕ ದೇಶದ ಒಕ್ಕೂಟವ್ಯವಸ್ಥೆ ಹಾಗೂ ಸಮಗ್ರತೆಗೆ ಮಾರಕವಾಗ ಬಹುದು.

ಆರ್ಥಿಕ ಸಲಹಾ ಸಮಿತಿಯ ಹೊಸ ಪ್ರಸ್ತಾಪ: ವಿರೋಧ ಪಕ್ಷ ಮತ್ತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧದ ಕಾರಣಕ್ಕೆ ಕೇಂದ್ರ ಸರಕಾರ ಮಸೂದೆಯನ್ನು ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯು ಈ ಕುರಿತು ಒಂದು ವರದಿ ಸಲ್ಲಿಸಿದೆ ಎನ್ನಲಾಗಿದೆ. ಈ ವರದಿಯ ಪ್ರಕಾರ ಸಾರಸಗಟು ಎಲ್ಲಾ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡುವ ಬದಲು ಅತೀ ಹೆಚ್ಚು ಜನಸಂಖ್ಯೆಯಿರುವ ಆಯ್ದ ಕೆಲವೇ ಕ್ಷೇತ್ರಗಳನ್ನು ಪುನರ್ವಿಂಗಡಿಸಬೇಕು. ಯಾವುದೇ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರ ಸಂಖ್ಯೆ ಇರುವದು ಆಡಳಿತ ಮತ್ತು ಮತದಾನದ ಪ್ರಮಾಣದ ದೃಷ್ಟಿಯಿಂದ ಕೂಡಾ ಸೂಕ್ತವಲ್ಲ. ಆ ಕಾರಣಕ್ಕೆ ಆಯ್ದ ೧೭೦ ಅಂಥ ಕ್ಷೇತ್ರಗಳ ಪೈಕಿ ೫೯ನ್ನು ತಲಾ ಎರಡು ಕೇತ್ರಗಳಾಗಿ ಮತ್ತು 111ನ್ನು ತಲಾ ಮೂರು ಕ್ಷೇತ್ರಗಳಾಗಿ ವಿಭಜಿಸಬೇಕು.

ಒಟ್ಟೂ ಲೋಕಸಭಾ ಕ್ಷೇತ್ರಗಳು ಈಗಿರುವ 543ರಿಂದ 824ಕ್ಕೆ ಹೆಚ್ಚಾಗುವುದು. ದಕ್ಷಿಣದ ರಾಜ್ಯಗಳ ಸದಸ್ಯರ ಪ್ರಮಾಣ ಈಗಿರುವ 23.7% ಬದಲು 23.6% ಕ್ಕೆ ಮತ್ತು ಅತೀ ಹೆಚ್ಚು ಜನಸಂಖ್ಯೆಯ ಉತ್ತರದ ರಾಜ್ಯಗಳ ಪಾಲು 45.7% ರಿಂದ 45.2%ಕ್ಕೆ ಇಳಿಯುವುದರಿಂದ ಯಾವದೇ ಗಣನೀಯ ವ್ಯತ್ಯಾಸವಾಗುವುದಿಲ್ಲ.

ಈ ಶಿಫಾರಸುಗಳ ಮೂಲಕ ತರಬಹುದಾದ ಬದಲಾವಣೆಗಳು ದಕ್ಷಿಣ ರಾಜ್ಯಗಳಿಗೆ ಒಪ್ಪಿತವಾಗ ಬಹುದಾಗಿದ್ದು ಇದೀಗ ‘ಇಂಡಿಯ’ ಕೂಟದಿಂದ ಹೊರ ಬಂದಿರುವ ಡಿಎಂಕ ಕೂಡಾ ವಿರೋಧಿಸ ಲಿಕ್ಕಿಲ್ಲ. ಆದರೆ ಈ ಶಿಫಾರಸುಗಳನ್ನು 2011ರ ಜನಗಣತಿಯ ಆಧಾರದಲ್ಲಿ ಮಾಡಲಾಗಿದ್ದು ೨೦೨೭ರ ಅಂಕಿ ಅಂಶಗಳ ಆಧಾರದಲ್ಲಿ ಹೊಂದಾಣಿಕೆ ಮಾಡಬೇಕಾಗಬಹುದು.

ಆದರೆ ಆರ್ಥಿಕ ಸಲಹಾ ಸಮಿತಿಯ ಶಿಫಾರಸುಗಳ ಪ್ರಕಾರ ತರಬಹುದಾದ ತಿದ್ದುಪಡಿಗಳು ಕೇವಲ ತಾತ್ಕಾಲಿಕ ಪರಿಹಾರ ಕೊಡಬಹುದಾಗಿದ್ದು ಕೆಲವೇ ಕ್ಷೇತ್ರಗಳ ಸಮಸ್ಯೆ ಬಗೆಹರಿಯುತ್ತದೆ. ಅತೀ ಹೆಚ್ಚು ಜನಸಂಖ್ಯೆಯ ಕ್ಷೇತ್ರಗಳೆಂದರೆ ಪುನಃ ದೊಡ್ಡ ನಗರಗಳ ಸುತ್ತ ಕೇಂದ್ರೀಕೃತವಾಗುತ್ತವೆ. ಕರ್ನಾಟಕದಲ್ಲಿ ಸಹಜವಾಗಿ ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ,ಮಂಗಳೂರು, ಹುಬ್ಬಳ್ಳಿಯಂಥ ಪ್ರದೇಶಗಳಿಗೆ ಹೆಚ್ಚಿನ ಪಾಲು ದೊರೆಯಲಿದ್ದು ವಿರಳ ಜನಸಂಖ್ಯೆಯಿರುವ ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳು ಹೆಚ್ಚಿನ ಸದಸ್ಯರನ್ನು ಪಡೆಯುವುದಿಲ್ಲ.

ಅಲ್ಲದೆ ಇದು ಸಮಾನ ನ್ಯಾಯದ ತತ್ವಕ್ಕೆ ಅನುಗುಣವಾಗುವುದಿಲ್ಲ. ಇನ್ನು ಇದೇ ತತ್ವವನ್ನು ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯಿಸಿದರೆ ಹೆಚ್ಚು ಜನಸಂಖ್ಯಾ ಸಾಂದ್ರತೆಯಿರುವ ದಕ್ಷಿಣದ ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಶಾಸಕ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ. ಅದು ಕೂಡಾ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಬಹುದು.

ಲೋಕಸಭಾ ಸದಸ್ಯರ ಮುಖ್ಯ ಕಾರ್ಯವೆಂದರೆ ಕೇಂದ್ರ ಬಜೆಟ್ ಮೇಲಿನ ಚರ್ಚೆ, ಶಾಸನಗಳ ರಚನೆ ಮತ್ತು ಕೇಂದ್ರ ಸರಕಾರದ ಆಡಳಿತ ವ್ಯಾಪ್ತಿಯ ವಿಷಯಗಳ ಕುರಿತಾಗಿ ನಿರ್ಣಯ ಮುಂತಾ ದವು. ಇಷ್ಟು ಕೆಲಸ ಮಾಡಲು ಇನ್ನೂ ಹೆಚ್ಚಿನ ಸದಸ್ಯರು ಬೇಕಾಗಿಲ್ಲ ಎಂಬುದು ಕೆಲವರ ವಾದ. ಅಮೆರಿಕ, ಯುರೋಪ್ʼ.ನಂಥ ರಾಷ್ಟ್ರಗಳೇ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡದಿರು ವಾಗ ನಮ್ಮ ದೇಶಕ್ಕೆ ಈ ಪ್ರಕ್ರಿಯೆ ಯಾಕೆ ಎಂದು ಪ್ರಶ್ನಿಸಲಾಗುತ್ತಿದೆ.

ಸದಸ್ಯರ ಸಂಖ್ಯೆ ಹೆಚ್ಚಾದರೆ ಮಂತ್ರಿಗಳ ಸಂಖ್ಯೆ ಮತ್ತು ಅವರ ದರ್ಬಾರಿಗೆ ತಗಲುವ ವೆಚ್ಚ ಕೂಡಾ ಜಾಸ್ತಿಯಾಗುತ್ತದೆ. ದೇಶದ ಅಭಿವೃದ್ಧಿಗೆ ರಾಜಕಾರಣಿಗಳ ಕೊಡುಗೆ ಅಗತ್ಯವಾದರೂ, ಅವರ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಹೆಚ್ಚು ಅಭಿವೃದ್ಧಿಯಾಗುತ್ತದೆ ಎಂಬ ಭ್ರಮೆ ಬೇಡ. ಪ್ರತಿನಿಧಿಗಳು ಹೆಚ್ಚಾದಂತೆ, ಅಭಿವೃದ್ಧಿಯ ಬದಲು ಆಡಳಿತಾತ್ಮಕ ವೆಚ್ಚಗಳೇ ಹೆಚ್ಚಾಗುವ ಅಥವಾ ಹಣದ ಹರಿವಿನ ಮಾರ್ಗ ಸಂಕೀರ್ಣವಾಗುವ ಸಾಧ್ಯತೆ ಇದೆ.

ಇರುವ ಸದಸ್ಯರೆಲ್ಲರೂ ಕಲಾಪಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡರೆ ಈಗಿರುವ ಸಂಖ್ಯೆ ಸಾಕಷ್ಟಾಯಿತು. ಹೆಚ್ಚು ಮಾಡುವ ಅವಶ್ಯಕತೆಯೇ ಇಲ್ಲ. ಹೆಚ್ಚೆಂದರೆ ಎಲ್ಲಾ ರಾಜ್ಯಗಳಲ್ಲಿ ಈಗಿರುವ ಲೋಕಸಭಾ ಕ್ಷೇತ್ರಗಳನ್ನೇ ಸೂಕ್ತವಾಗಿ ಮರುಹಂಚಿಕೆ ಮಾಡಬಹುದು. ಉತ್ತರ-ದಕ್ಷಿಣ ಎಂಬುದು ದಿಕ್ಕನ್ನು ಸೂಚಿಸಬೇಕೇ ಹೊರತು ಬೇರೆ ಸಮುದಾಯ ಅಥವಾ ದೇಶವನ್ನಲ್ಲ.