ಒಂದೊಳ್ಳೆ ಮಾತು
ಒಮ್ಮೆ, ಭಗವಾನ್ ಬುದ್ಧನು ತನ್ನ ಶಿಷ್ಯರಿಗೆ ಧರ್ಮೋಪದೇಶ ನೀಡಲು ಬಂದನು. ಅವನ ಕೈಯಲ್ಲಿ ಸುಂದರವಾದ ಕರವಸವಿತ್ತು. ಕಾಯುತ್ತಿದ್ದ ಸಾವಿರಾರು ಶಿಷ್ಯರು ಆ ಕರವಸ್ತ್ರವನ್ನು ನೋಡಿ ಆಶ್ಚರ್ಯಚಕಿತರಾದರು. ಏಕೆಂದರೆ ಬುದ್ಧನ ಕೈಯಲ್ಲಿ ಏನನ್ನಾದರೂ ನೋಡುವುದು ಅಪರೂಪವಾಗಿತ್ತು.
ಬುದ್ಧ ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾಗ, ನಿಧಾನವಾಗಿ ಕರವಸ್ತ್ರಕ್ಕೆ ಗಂಟುಗಳನ್ನು ಕಟ್ಟಲು ಪ್ರಾರಂಭಿಸಿದನು. ಎಲ್ಲರೂ ಅವನನ್ನೇ ನಿರೀಕ್ಷೆಯಿಂದ ನೋಡಿದರು. ಆ ಕರವಸ್ತ್ರದಲ್ಲಿ ನಾಲ್ಕೈದು ಗಂಟುಗಳನ್ನು ಕಟ್ಟಿದ ನಂತರ ಅವನು ಅದನ್ನು ಅಲ್ಲಿ ನೆರೆದಿದ್ದ ಎಲ್ಲರಿಗೂ ತೋರಿಸಿ, ‘ಇದು ನಾನು ಮೊದಲು ತಂದಿದ್ದ ಕರವಸವೇ ಅಥವಾ ಏನಾದರೂ ವ್ಯತ್ಯಾಸವಿದೆಯೇ?’ ಎಂದು ಕೇಳಿದನು.
ಶಿಷ್ಯರಲ್ಲಿ ಒಬ್ಬನು, ‘ಭಗವನ್, ಕರವಸ್ತ್ರ ಹಾಗೆಯೇ ಇದೆ, ಆದರೆ ಅದರ ಸ್ಥಿತಿ ಬದಲಾಗಿದೆ’ ಎಂದನು. ಆಗ ಬುದ್ಧ, ‘ಅದೇನೋ ಸರಿ. ಆದರೆ ನಾನು ಬಯಸಿದರೆ, ಕರವಸ್ತ್ರದ ಸ್ಥಿತಿಯನ್ನು ಅದರ ಮೂಲರೂಪಕ್ಕೆ ತರಲು ಸಾಧ್ಯವೇ?’ ಎಂದು ಕೇಳಿದನು. ಅದಕ್ಕೆ ಮತ್ತೊಬ್ಬ ಶಿಷ್ಯ, ‘ಭಗವನ್, ಅದು ಸಾಧ್ಯ. ಆದರೆ ನೀವು ಕರವಸ್ತ್ರದ ಎಲ್ಲಾ ಗಂಟುಗಳನ್ನು ಬಿಚ್ಚಬೇಕಾಗುತ್ತದೆ’ ಎಂದು ಉತ್ತರಿಸಿದ.
ಆಗ ಬುದ್ಧ ಕೇಳಿದ, ‘ನೀವು ಗಂಟುಗಳನ್ನು ಹೇಗೆ ಬಿಚ್ಚುತ್ತೀರಿ? ಕರವಸ್ತ್ರವನ್ನು ಎಳೆಯುವುದರಿಂದ ಗಂಟುಗಳು ನಮ್ಮ ವಿಳಾಸ ಬಿಚ್ಚಲ್ಪಡುತ್ತವೆಯೇ?’
ಇದನ್ನೂ ಓದಿ: Roopa Gururaj Column: ವೃಂದಾದೇವಿ ವಿಷ್ಣುವಿನ ಪತ್ನಿಯಾದ ಕಥೆ
ಅದಕ್ಕೆ ಮತ್ತೊಬ್ಬ ಶಿಷ್ಯ, ‘ಪ್ರಭು, ನಾವು ಎಚ್ಚರಿಕೆಯಿಂದ ಗಮನಿಸಿ ಗಂಟುಗಳು ಹೇಗೆ ಕಟ್ಟಲ್ಪಟ್ಟಿವೆ ಎಂಬುದನ್ನು ನಿಖರವಾಗಿ ಲೆಕ್ಕಾಚಾರ ಮಾಡಿದರೆ, ಅವನ್ನು ಬಿಚ್ಚುವುದು ಸುಲಭವಾಗುತ್ತದೆ. ಆದರೆ ನಮಗೆ ಅದು ತಿಳಿದಿಲ್ಲದಿದ್ದರೆ, ಕರವಸವನ್ನು ಎಳೆಯುವ ಮೂಲಕ ನಾವು ಗಂಟುಗಳನ್ನು ಬಿಗಿಗೊಳಿಸಬಹುದು’ ಎಂದು ಉತ್ತರಿಸಿದ. ಆಗ ಬುದ್ಧ ವಿವರಿಸಿದ, ‘ನಾವು ಅನೇಕ ಬಾರಿ ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಾದ ಮಾಡುತ್ತೇವೆ ಮತ್ತು ಜಗಳವಾಡುತ್ತೇವೆ.
ನಾವು ಮಾತ್ರ ಸರಿ ಎಂದು ಒತ್ತಾಯಿಸಿದರೆ ಗಂಟುಗಳು ಬಿಗಿಯಾಗುತ್ತವೆ. ಅದು ಎದುರಿನ ವ್ಯಕ್ತಿಯೊಂದಿಗೆ ಭೇದ ಉಂಟುಮಾಡುತ್ತದೆ. ಆ ಗಂಟುಗಳನ್ನು ಬಿಚ್ಚುವಾಗ ನಾವು ಗಂಟುಗಳ ಹಿಂದಿನ ಕಾರಣವನ್ನು ವಿಶ್ಲೇಷಿಸಿದರೆ, ಮತ್ತು ಇನ್ನೊಬ್ಬ ವ್ಯಕ್ತಿಯಿಂದ ಏನನ್ನೂ ನಿರೀಕ್ಷಿಸದೆ, ಗಂಟುಗಳ ಮೂಲ ಕಾರಣವನ್ನು ತೆಗೆದುಹಾಕಲು ಪ್ರಯತ್ನಿಸಿದರೆ, ಆಗ ನಾವು ಎಲ್ಲಾ ಗಂಟು ಗಳನ್ನು ಸುಲಭವಾಗಿ ಬಿಚ್ಚಬಹುದು. ಈ ಕರವಸ್ತ್ರದಂತೆಯೇ ಸಂಬಂಧಗಳು ಸುಗಮವಾಗುತ್ತವೆ’.
ಇಂದಿನ ದಿನಗಳಲ್ಲಿ ನಾವು ಕೂಡ ಈ ಕರವಸ್ತ್ರದ ಗಂಟುಗಳಂತೆ ನಮ್ಮ ಸಂಬಂಧಗಳನ್ನು ಮತ್ತಷ್ಟು ಜಟಿಲಗೊಳಿಸಿಕೊಂಡು ಹೋಗುತ್ತಿದ್ದೇವೆ ಎಂದು ನಿಮಗೆ ಅನಿಸುವುದಿಲ್ಲವೇ? ಯಾವುದೇ ಸಮಸ್ಯೆ ಬಂದರೂ ಅದನ್ನು ಮತ್ತೊಬ್ಬರ ದೃಷ್ಟಿಕೋನದಿಂದ ನೋಡುವ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ನಾವು ಮಾಡುವುದೇ ಇಲ್ಲ.
ನಾವು ಹೇಳಿದ್ದು ಮಾತ್ರ ಸರಿ! ನಮ್ಮ ನಿಲುವು ಶ್ರೇಷ್ಠವಾದದ್ದು ಎನ್ನುವ ಅಪರಿಮಿತ ಆತ್ಮವಿಶ್ವಾಸ ನಮಗೆ. ಆದರೆ ಯಾವುದೇ ವಿಚಾರವನ್ನು ಎಲ್ಲಾ ದೃಷ್ಟಿಕೋನಗಳಿಂದ ನೋಡಿದಾಗ, ಎದುರಿಗಿ ರುವವರ ಜಾಗದಲ್ಲಿ ನಿಂತು ವಿಚಾರ ಮಾಡಿದಾಗ ಮಾತ್ರ ನಮಗೆ ಒಂದು ವಿಷಯ ಕೂಲಂಕಷ ವಾಗಿ ತಿಳಿಯುತ್ತದೆ.
ನಮ್ಮಲ್ಲಿ ‘ನಾವು’ ಎನ್ನುವ ಅಹಂಕಾರ, ನಮ್ಮ ವಿದ್ಯೆಯ ಬಗ್ಗೆ ಗರ್ವ, ನಾವು ಹೇಳಿದ್ದೇ ಸರಿ ಎನ್ನುವ ಧಾರ್ಷ್ಟ್ಯ ಎಲ್ಲಿಯವರೆಗೂ ಇರುತ್ತದೋ, ನಾವು ಯಾವ ಸಂಬಂಧಕ್ಕೂ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಯಾವುದೇ ವಿಷಯದಲ್ಲಿ ನಾವು ತೆರೆದ ಮನಸ್ಸಿನಿಂದ ಮತ್ತೊಬ್ಬರ ಯೋಚನೆಗಳನ್ನು, ಮಾತುಗಳನ್ನು ಕೇಳುವ ವ್ಯವಧಾನ ಬೆಳೆಸಿಕೊಳ್ಳುತ್ತೇವೋ, ಮಾತನಾಡುವಾಗ ಧ್ವನಿಯನ್ನು ಎತ್ತರಿಸದೆ ಅದನ್ನೊಂದು ಆರೋಗ್ಯಕರ ಚರ್ಚೆಯನ್ನಾಗಿ ಮಾಡುತ್ತೇವೋ ಆಗ ಮಾತ್ರ ಅಲ್ಲಿ ಏನಾದರೂ ಪರಿಹಾರ ಸಿಗಲು ಸಾಧ್ಯ. ಇಲ್ಲವಾದರೆ ಆ ಕರವಸ್ತ್ರದ ಗಂಟುಗಳಂತೆ ನಮ್ಮ ಎಲ್ಲ ಸಂಬಂಧಗಳೂ ಗಂಟುಗಂಟಾಗಿ ಕೊನೆಗೆ ಅನಗತ್ಯ ಎಳೆದಾಟದಲ್ಲಿ ಅದು ಕಗ್ಗಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದ್ದರಿಂದಲೇ ಸಂಬಂಧಗಳಲ್ಲಿ ವ್ಯವಹರಿಸುವಾಗ ‘ನಾನು’ ಎನ್ನುವುದನ್ನು ಬಿಟ್ಟು, ‘ನಾವು’ ಎನ್ನುವ ಧೋರಣೆಯಿಂದ ವಿಷಯವನ್ನು ಅವಲೋಕಿಸೋಣ. ಸಮಸ್ಯೆ ಇಂದು ಒಂದಿರಬಹುದು, ನಾಳೆ ಮತ್ತೊಂದು ಬರಬಹುದು, ಆದರೆ ಸಂಬಂಧ ಕಳೆಯಿತೆಂದರೆ ಮತ್ತೆ ಅಂಥ ವ್ಯಕ್ತಿಯನ್ನು ಸಂಪಾದಿಸುವುದು ಸಾಧ್ಯವಾಗದೇ ಹೋಗಬಹುದು. ಅತಿಯಾದ ಆತ್ಮಗೌರವವೂ ಅಪಾಯಕಾರಿ.