Roopa Gururaj Column: ವೃಂದಾದೇವಿ ವಿಷ್ಣುವಿನ ಪತ್ನಿಯಾದ ಕಥೆ
ಜಲಂಧರನಂತೆ ವೇಷ ಮರೆಸಿಕೊಂಡು ವೃಂದೆಯ ಬಳಿಗೆ ಹೋಗುತ್ತಾನೆ. ಆಕೆಯ ಪಾತಿವ್ರತ್ಯ ಭಂಗವಾಗುತ್ತದೆ. ಇತ್ತ ಜಲಂಧರ ಸೋಲುತ್ತಾನೆ. ಮಹಾದೇವನ ತ್ರಿಶೂಲಕ್ಕೆ ಬಲಿಯಾಗುತ್ತಾನೆ. ವೃಂದೆ ತನ್ನ ಬಳಿ ಬಂದವ ವಿಷ್ಣು ಎಂದರಿವಾಗುತ್ತಲೇ ಚಿತೆಗೆ ಒಡ್ಡಿಕೊಂಡು ಜೀವಂತ ಧುಮುಕುತ್ತಾಳೆ.

-

ಒಂದೊಳ್ಳೆ ಮಾತು
ವೃಂದಾ ದೇವಿ ಧರ್ಮಧ್ವಜನ ಮಗಳು. ಧರ್ಮಧ್ವಜ ಮಹಾ ಶಿವಭಕ್ತ. ವೃಂದಾ ಕೂಡಾ ವಿಶೇಷ ವಾಗಿ ದೇವಿ ಪಾರ್ವತಿಯ ಪರಮಭಕ್ತೆ. ಈಕೆ ಸುದೀರ್ಘ ಕಾಲ ತಪಸ್ಸು ಮಾಡಿ ನನ್ನ ಗಂಡ ಚಿರಾಯುವಾಗಲಿ ಎಂದು ಬೇಡಿಕೊಳ್ಳುತ್ತಾಳೆ. ಪಾರ್ವತಿ ಹಾಗೆಲ್ಲ ಯಾರೂ ಸಾವಿಲ್ಲದಂತಾಗಲು ಸಾಧ್ಯವಿಲ್ಲ ಎಂದಳು.
ಅದಕ್ಕೆ ವೃಂದಾ ಬುದ್ಧಿವಂತಿಕೆಯಿಂದ ನಾನು ಪತಿವ್ರತೆಯಾಗಿರುವಷ್ಟು ಕಾಲ ನನ್ನ ಗಂಡ ಬಾಳಿ ಬದುಕಲಿ, ಅಜೇಯನಾಗಿರಲಿ ಎಂದು ಬೇಡಿಕೊಳ್ಳುತ್ತಾಳೆ. ತನ್ನ ಪಾತಿವ್ರತ್ಯ ಚಿಂತನೆಯ ಮೇಲೆ ಆಕೆಗೆ ಅಷ್ಟೊಂದು ವಿಶ್ವಾಸ! ಪಾರ್ವತಿ ಹಾಗೆಯೇ ಆಗಲಿ, ತಥಾಸ್ತು ಎಂದು ಆಶೀರ್ವದಿಸುತ್ತಾಳೆ.
ಈ ವಿದ್ಯಮಾನ ಅರಿತಿದ್ದ ಅಸುರ ಗುರು ಶುಕ್ರಾಚಾರ್ಯ ಹೇಗಾದರೂ ಮಾಡಿ ವೃಂದೆಯನ್ನು ಒಬ್ಬಾನೊಬ್ಬ ಅಸುರನಿಗೆ ಮದುವೆ ಮಾಡಿಸಬೇಕೆಂದು ಯೋಜನೆ ಹಾಕುತ್ತಾರೆ. ಇದೇ ವೇಳೆಗೆ ಜಲಂಧರನೆಂಬ ರಾಕ್ಷಸನ ಜನನವಾಗಿರುತ್ತದೆ. ಈ ಜಲಂಧರ ಶಿವನಂತೆ ಇದ್ದು ಮಹಾ ಶಕ್ತಿಶಾಲಿ ಯೂ ಆಗಿರುತ್ತಾನೆ. ಈತ ಪಾರ್ವತಿಯನ್ನು ಕಂಡು ಮೋಹಗೊಳ್ಳುತ್ತಾನೆ.
ಇದನ್ನೂ ಓದಿ: Roopa Gururaj Column: ಸದ್ವರ್ತನೆಯಿಂದ ಶಿವನನ್ನು ಮೆಚ್ಚಿಸಿದ ನಾಭಾಗ
ಹೇಗಾದರೂ ಆಕೆಯನ್ನು ಪಡೆದೇ ತೀರಬೇಕೆಂದು ಬಯಸುತ್ತಾನೆ. ಅದಕ್ಕಾಗಿ ಶಿವನ ಮೇಲೆ ಯುದ್ಧ ಹೂಡಲೂ ಸಿದ್ಧವಾಗಿರುತ್ತಾನೆ. ಇದೇ ಪ್ರಯತ್ನದಲ್ಲಿ ಆತ ಇಂದ್ರನನ್ನು ಸೋಲಿಸಿದಾಗ ಶುಕ್ರಾ ಚಾರ್ಯರ ಕಣ್ಣಿಗೆ ಬೀಳುತ್ತಾನೆ. ಶುಕ್ರಾಚಾರ್ಯರು ಜಲಂಧರನನ್ನು ಕುರಿತು, ವೃಂದೆಯನ್ನು ವಿವಾಹವಾಗಿ ಅಜೇಯ ಮತ್ತು ಅಮರತ್ವದ ಬಲ ಪಡೆದುಕೋ.
ಆಕೆ ಪತಿವ್ರತೆಯಾಗಿರುವವರೆಗೂ ನಿನಗೆ ಅಳಿವಿಲ್ಲ ಎಂದು ಸಲಹೆ ನೀಡುತ್ತಾರೆ. ವೃಂದೆಯನ್ನು ಮದುವೆಯಾಗಿ ಅವಳ ಮೂಲಕ ಮತ್ತಷ್ಟು ಬಲ ಪಡೆದು ಶಿವನೊಡನೆ ಹೋರಾಡಿ ಪಾರ್ವತಿ ಯನ್ನು ಗೆದ್ದುಕೊಳ್ಳಬಹುದು ಎಂದು ಆಲೋಚಿಸುವ ಜಲಂಧರ ಅದಕ್ಕೊಪ್ಪುತ್ತಾನೆ. ಹೀಗೆ ವೃಂದಾ ದೇವಿ ಮತ್ತು ಜಲಂಧರರ ಮದುವೆ ನಡೆಯುತ್ತದೆ.
ಕೆಲ ಕಾಲಾನಂತರ ಜಲಂಧರ ಶಿವನ ಮೇಲೆ ಯುದ್ಧ ಘೋಷಿಸುತ್ತಾನೆ. ವೃಂದಾದೇವಿಯ ಪಾತಿ ವ್ರತ್ಯ ಮತ್ತು ಪಾರ್ವತಿ ಆಕೆಗೆ ನೀಡಿದ್ದ ವರಗಳ ಪರಿಣಾಮ ಆತ ಸೋಲುವುದಿಲ್ಲ. ಇತ್ತ ಶಿವನಂತೂ ಶಿವನೇ. ಆತನನ್ನು ಸೋಲಿಸಬಲ್ಲವರಾದರೂ ಯಾರು!? ಹಲವು ಹಗಲಿರುಳು ಯುದ್ಧ ಸಾಗುತ್ತದೆ. ಸೃಷ್ಟಿಯ ಸಮತೋಲನ ತಪ್ಪತೊಡಗುತ್ತದೆ. ಕೊನೆಗೆ ಸ್ಥಿತಿಕರ್ತನಾದ ಮಹಾವಿಷ್ಣು ರಂಗಕ್ಕಿಳಿಯು ತ್ತಾನೆ. ಪಾರ್ವತಿ ಆತನ ತಂಗಿಯೆಂಬ ಮಮಕಾರದ ಜೊತೆಗೆ ಸೃಷ್ಟಿಯ ಸಮತೋಲನ ಕಾಪಾಡುವ ಕರ್ತವ್ಯಕ್ಕಾಗಿ ಏನು ಮಾಡಲೂ ಹಿಂಜರಿಯದೆ ಹೋಗುತ್ತಾನೆ.
ಜಲಂಧರನಂತೆ ವೇಷ ಮರೆಸಿಕೊಂಡು ವೃಂದೆಯ ಬಳಿಗೆ ಹೋಗುತ್ತಾನೆ. ಆಕೆಯ ಪಾತಿವ್ರತ್ಯ ಭಂಗವಾಗುತ್ತದೆ. ಇತ್ತ ಜಲಂಧರ ಸೋಲುತ್ತಾನೆ. ಮಹಾದೇವನ ತ್ರಿಶೂಲಕ್ಕೆ ಬಲಿಯಾಗುತ್ತಾನೆ. ವೃಂದೆ ತನ್ನ ಬಳಿ ಬಂದವ ವಿಷ್ಣು ಎಂದರಿವಾಗುತ್ತಲೇ ಚಿತೆಗೆ ಒಡ್ಡಿಕೊಂಡು ಜೀವಂತ ಧುಮುಕು ತ್ತಾಳೆ.
ಸುಡುತ್ತ ಸುಡುತ್ತಲೇ ನಿನ್ನ ಹೆಂಡತಿಯ ಪಾತಿವ್ರತ್ಯವನ್ನೂ ಯಾರಾದರೊಬ್ಬರು ಭಂಗಪಡಿಸಲಿ ಎಂದು ಶಪಿಸುತ್ತಾಳೆ. ತನ್ನ ಗಂಡನ ಈ ನಡೆಯನ್ನರಿತ ಲಕ್ಷ್ಮಿ ವೃಂದೆಯ ಚಿತೆಯ ಬಳಿ ಓಡೋಡಿ ಬಂದು ಗಂಡನ ಪರವಾಗಿ ಕ್ಷಮೆ ಬೇಡುತ್ತಾಳೆ. ಇತ್ತ ಪಾರ್ವತಿಯೂ ವಿಷ್ಣುವಿನ ನಡೆಯಿಂದ ಕೋಪಾವಿಷ್ಟಳಾಗಿ ಮಹಾಕಾಳಿಯ ರೂಪ ಧರಿಸಿ ಸ್ತ್ರೀಕುಲಕ್ಕೆ ಕಳಂಕ ಹಚ್ಚಿದ ನಿನ್ನನ್ನು ಸುಮ್ಮನೆ ಬಿಡಲಾರೆ ಎಂದು ಅಬ್ಬರಿಸುತ್ತಾಳೆ. ಅದೇ ವೇಳೆಗೆ ಶಿವ ಪ್ರತ್ಯಕ್ಷನಾಗಿ ಜಲಂಧರನ ಪಾಪಕರ್ಮಗಳ ಬಗ್ಗೆ ವೃಂದೆಗೆ ತಿಳಿಸಿ ಹೇಳುತ್ತಾನೆ. ಮತ್ತೊಂದು ಹೆಣ್ಣನ್ನು ಮೋಹಿಸಿದ, ಅದರಲ್ಲೂ ತನ್ನ ಆರಾಧ್ಯಳೂ ಜಗಜ್ಜನನಿಯೂ ಆದ ಪಾರ್ವತಿಯನ್ನೇ ಕಾಮಿಸಲು ಬಯಸಿದ ಜಲಂಧರನ ಬಗ್ಗೆ ಅವಳಲ್ಲಿ ತಾತ್ಸಾರ ಮೂಡುತ್ತದೆ.
ವಿಷ್ಣು ಮಾಡಿದ್ದು ತಪ್ಪೇ ಆಗಿದ್ದರೂ ತನ್ನ ಶಾಪವನ್ನು ಸ್ವಲ್ಪ ನಯಗೊಳಿಸಿ, ನಿನ್ನ ಪತ್ನಿಗೆ ಕೇವಲ ಆಪಾದನೆ ತಗುಲಿಕೊಳ್ಳಲಿ, ಅದರ ಸಂಕಟ ನೀನು ಅನುಭವಿಸುವಂತಾಗಲಿ ಎನ್ನುತ್ತಾಳೆ. ಹಾಗೂ ನನಗೆ ನಿನ್ನ ಪತ್ನಿಯ ಸ್ಥಾನ ಕೊಡಬೇಕು ಎಂದು ಕರಾರು ಹಾಕುತ್ತಾಳೆ. ಮಹಾವಿಷ್ಣು ಆಕೆಯನ್ನು ಎದೆಯ ಮೇಲೆ ಧರಿಸಿ ನೀನು ಸದಾ ಅತ್ಯಂತ ಪವಿತ್ರಳೆಂಬ ಮನ್ನಣೆಗೆ ಪಾತ್ರಳಾಗುವಂತಾಗಲಿ ಎಂದು ಹರಸುತ್ತಾನೆ.
ಮುಂದೆ ರಾಮಾವತಾರದಲ್ಲಿ ಸೀತಾಪಹರಣದ ಮೂಲಕ ತುಳಸಿಯ ಶಾಪ ನಿಜವಾಗುತ್ತದೆ. ಕೃಷ್ಣಾವತಾರದಲ್ಲಿ ಮಹಾವಿಷ್ಣು ವೃಂದೆಯನ್ನು ಮದುವೆಯಾಗಿ ತನ್ನ ಪತ್ನಿಯ ಸ್ಥಾನ ನೀಡು ತ್ತಾನೆ. ಪಾರ್ವತಿ ಆಕೆಯನ್ನು ಪವಿತ್ರ ಸಸ್ಯವಾಗಿ ಲೋಕ ಪೂಜಿತಳಾಗುವಂತೆ, ಗೃಹಿಣಿಯರಿಂದ ನಿತ್ಯವೂ ಆರಾಧಿಸಲ್ಪಡುವಂತೆ ಹರಸುತ್ತಾಳೆ. ಹೀಗೆ ವೃಂದಾ ದೇವಿ ತುಳಸಿಯಾಗಿ ಲೋಕದಲ್ಲಿ ಸ್ಥಾಪಿತಳಾಗುತ್ತಾಳೆ. ಮನೆಮನೆಯಲ್ಲಿ ತುಳಸಿ ಗಿಡ ಬೆಳೆಸಿ ಪೂಜಿಸುವುದರಿಂದ ನಮಗೆ ಆರೋಗ್ಯ, ವರ್ಚಸ್ಸು, ಆಯಸ್ಸು ಎಲ್ಲವನ್ನೂ ವೃಂದಾದೇವಿ ಅನುಗ್ರಹಿಸುತ್ತಾಳೆ.