ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕೆಟ್ಟ ನೆನಪುಗಳನ್ನು ಮರೆತಾಗಲೇ ಸಂಬಂಧ ಶಾಶ್ವತ

ಕ್ಷಮಿಸುವುದರಲ್ಲಿರುವ ಆನಂದ ಮತ್ತೆ ಯಾವುದರಲ್ಲೂ ಇಲ್ಲ. ಮುಂದೆ ಅಕಸ್ಮಾತ್ತಾಗಿ ನಮ್ಮಿಂದ ತಪ್ಪಾದಾಗ ಕೂಡ ಅವರು ಅದೇ ರೀತಿ ನಮ್ಮನ್ನೂ ಕ್ಷಮಿಸುವ ಉದಾರತೆ ಯನ್ನು ತೋರುತ್ತಾರೆ. ಎಲ್ಲ ಕ್ಕಿಂತ ಹೆಚ್ಚಾಗಿ, ಕ್ಷಮೆ ನಮಗೆ ನೆಮ್ಮದಿಯನ್ನು ನೀಡುತ್ತದೆ. ಯಾವುದೇ ಸಂಬಂಧವು ಜೀವನ ಪೂರ್ತಿ ನಮ್ಮ ಜತೆ ಬೆಸೆದು ಕೊಂಡಿರಬೇಕು ಎಂದಾದಾಗ ಚಿಕ್ಕ ಪುಟ್ಟ ತಪ್ಪುಗಳನ್ನು ಅಲ್ಲಿಯೇ ಮರೆತು ಮುಂದಿನ ಬದುಕನ್ನು ಸ್ವೀಕರಿಸಬೇಕಾಗುತ್ತದೆ.

ಕೆಟ್ಟ ನೆನಪುಗಳನ್ನು ಮರೆತಾಗಲೇ ಸಂಬಂಧ ಶಾಶ್ವತ

-

ಒಂದೊಳ್ಳೆ ಮಾತು

ರಮೇಶ ಹಾಗೂ ಸುದರ್ಶನ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಒಮ್ಮೆ ಕಾರ್ಯನಿಮಿತ್ತ ಅವರು ಒಂದು ಮರಳುಗಾಡಿನ ಮೂಲಕ ಹಾದುಹೋಗಬೇಕಾಗಿತ್ತು. ದಾರಿ ಮಧ್ಯದಲ್ಲಿ ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿ ಸಿಟ್ಟಾದ ರಮೇಶ ಸ್ನೇಹಿತ ಸುದರ್ಶನನ ಕೆನ್ನೆಗೆ ಹೊಡೆದನು. ಸುದರ್ಶನನಿಗೆ ಬಹಳ ನೋವಾಯಿತು, ಅವಮಾನ ಕೂಡ ಆಯಿತು.

ಆದರೆ ಅವನು ಏನೂ ಹೇಳದೆ ಅಲ್ಲಿದ್ದ ಮರಳ ಮೇಲೆ ’ಈ ದಿನ ನನ್ನ ಆತ್ಮೀಯ ಗೆಳೆಯ ನನ್ನ ಕೆನ್ನೆಗೆ ಹೊಡೆದನು’ ಎಂದು ಬರೆದನು. ನಂತರ ಅವರಿಬ್ಬರೂ ನಡೆಯುತ್ತಾ ಹೋದಾಗ ಅವರಿಗೆ ಮರಳುಗಾಡಿನಲ್ಲಿ ‘ಓಯಸಿಸ್’ ಸಿಕ್ಕಿತು. ಅವರಿಬ್ಬರೂ ಸ್ನಾನ ಮಾಡಲು ನಿರ್ಧರಿಸಿ ಆ ಸರೋವರಕ್ಕೆ ಇಳಿದರು.

ಅವರು ಸ್ನಾನ ಮಾಡುತ್ತಿದ್ದಾಗ, ಮೊದಲೇ ಹೊಡೆತ ತಿಂದಿದ್ದ ಸುದರ್ಶನ ಸರೋವರದ ಕೆಸರಿನ ಹೊಂಡದಲ್ಲಿ ಸಿಕ್ಕಿಕೊಂಡು ಪೂರ್ತಿ ಮುಳುಗಿಹೋಗುವುದರಲ್ಲಿದ್ದ. ಸ್ನೇಹಿತ ರಮೇಶನು ಸುದರ್ಶನ ನನ್ನು ಕೆಸರಿನಿಂದ ಹೇಗೋ ಕಷ್ಟ ಪಟ್ಟು ಎಳೆದು ಮೇಲೆ ತಂದು ಬದುಕಿಸಿದ.

ಇದನ್ನೂ ಓದಿ: Roopa Gururaj Column: ಕೆಟ್ಟ ಹಠದಿಂದ ಕಲ್ಲಾದ ಚಂಡೀ ಕಥೆ

ಅಪಾಯದಿಂದ ಪಾರಾಗಿ ಚೇತರಿಸಿಕೊಂಡ ಸುದರ್ಶನ ಅಲ್ಲಿದ್ದ ಒಂದು ಕಲ್ಲಿನ ಮೇಲೆ ‘ಈ ದಿನ ನನ್ನ ಆತ್ಮೀಯ ಗೆಳೆಯನನ್ನ ಜೀವವನ್ನು ಉಳಿಸಿದ’ ಎಂದು ಕೆತ್ತಿದ. ಇದನ್ನು ನೋಡಿದ ರಮೇಶ ಗೆಳೆಯನಿಗೆ, “ನಾನು ಸಿಟ್ಟಿನಿಂದ ನಿನ್ನ ಕೆನ್ನೆಗೆ ಹೊಡೆದಾಗ ಮರಳ ಮೇಲೆ ಅದನ್ನು ಬರೆದಿದ್ದೆ.

ಆದರೆ ಈಗ ಕೆಸರಿನ ಹೊಂಡದಿಂದ ನಿನ್ನನ್ನು ಮೇಲೆ ಎತ್ತಿದ್ದನ್ನು ಕಲ್ಲು ಮೇಲೆ ಕೊರೆದಿರುವೆ ಏಕೆ? ಇದರ ಉದ್ದೇಶವೇನು? ಎಂದು ಕೇಳಿದ, ಅವನ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದು ಕೊಳ್ಳುವ ಉದ್ದೇಶದಿಂದ. ಅದಕ್ಕೆ ಸುದರ್ಶನ ಹೇಳಿದ- “ಯಾರಿಂದಲಾದರೂ ನಮಗೆ ನೋವಾದರೆ, ಅದನ್ನು ನಾವು ಮರಳ ಮೇಲೆ ಬರೆಯಬೇಕು.

‘ಕ್ಷಮೆ’ ಎಂಬ ಗಾಳಿ ಅದನ್ನು ಅಳಿಸಿ ಹಾಕಬಹುದು. ಆದರೆ ಯಾರಾದರೂ ನಮಗೆ ಒಳ್ಳೆಯದನ್ನು ಮಾಡಿದಾಗ ಅದನ್ನು ನಾವು ಕಲ್ಲಿನ ಮೇಲೆ ಕೆತ್ತಬೇಕು. ಇದನ್ನು ಎಂಥ ಬಿರುಗಾಳಿಯೂ ಅಳಿಸಿ ಹಾಕುವುದಿಲ್ಲ. ಬೇರೆಯವರು ಕೊಟ್ಟ ನೋವನ್ನು ಮರೆಯಬೇಕು. ಒಳ್ಳೆಯದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದು ನನ್ನ ಉದ್ದೇಶ". ಸ್ನೇಹಿತನ ಒಳ್ಳೆಯ ಮನಸ್ಸನ್ನು ಅರ್ಥೈಸಿಕೊಂಡ ರಮೇಶ ಅವನನ್ನು ತಬ್ಬಿಕೊಂಡು “ನನ್ನನ್ನು ಕ್ಷಮಿಸು ಗೆಳೆಯ" ಎಂದನು.

ಅವರಿಬ್ಬರೂ ಸಂತೋಷದಿಂದ ಸೇರಬೇಕಾದ ಸ್ಥಳಕ್ಕೆ ತಲುಪಿದರು. ಜೀವನದಲ್ಲಿ ಕೆಲವೊಮ್ಮೆ ನಾವು ಬಹಳ ಇಷ್ಟಪಡುವ ವ್ಯಕ್ತಿಗಳು ಅರಿವಿಲ್ಲದೆ ನಮ್ಮ ನೋವಿಗೆ ಕಾರಣರೂ ಆಗುತ್ತಾರೆ. ನಮಗೆ ಅದು ಇನ್ನಿಲ್ಲದ ಬೇಸರ ತರುತ್ತದೆ. ಅವರ ಮೇಲೆ ನಂಬಿಕೆಯೇ ಹೊರಟುಹೋಗುವಂತಾಗುತ್ತದೆ. ಆದರೆ ಅಂಥ ಸಮಯದಲ್ಲಿ ಅವರು ನಮಗೆ ಮಾಡಿದ ಒಳ್ಳೆಯ ಕೆಲಸಗಳನ್ನು ನಮ್ಮ ಒಳ್ಳೆಯ ದಿನಗಳನ್ನು ನೆನಪಿಸಿಕೊಳ್ಳಬೇಕು.

ಅವರ ಒಂದು ತಪ್ಪು, ಅವರ ಎಲ್ಲ ಒಳ್ಳೆಯ ಕೆಲಸಗಳನ್ನು ಮರೆಸಬಾರದು. ಅಂಥ ಸಮಯದಲ್ಲಿ ನಾವು ತಾಳ್ಮೆಯಿಂದ ಅವರಿಗೆ ಮತ್ತೊಂದು ಅವಕಾಶ ವನ್ನು ನೀಡುವ, ಮತ್ತೊಮ್ಮೆ ಅವರನ್ನು ಸ್ವೀಕರಿ ಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕೆಲವೊಮ್ಮೆ ಪರಿಸ್ಥಿತಿಗಳ ಒತ್ತಡಕ್ಕೆ, ಕೆಟ್ಟ ಸಮಯಕ್ಕೆ, ಅಥವಾ ದುಡುಕಿ ಅಂಥವರಿಂದ ತಪ್ಪುಗಳಾಗಿ ಬಿಡುತ್ತವೆ.

ಕ್ಷಮಿಸುವುದರಲ್ಲಿರುವ ಆನಂದ ಮತ್ತೆ ಯಾವುದರಲ್ಲೂ ಇಲ್ಲ. ಮುಂದೆ ಅಕಸ್ಮಾತ್ತಾಗಿ ನಮ್ಮಿಂದ ತಪ್ಪಾದಾಗ ಕೂಡ ಅವರು ಅದೇ ರೀತಿ ನಮ್ಮನ್ನೂ ಕ್ಷಮಿಸುವ ಉದಾರತೆ ಯನ್ನು ತೋರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕ್ಷಮೆ ನಮಗೆ ನೆಮ್ಮದಿಯನ್ನು ನೀಡುತ್ತದೆ. ಯಾವುದೇ ಸಂಬಂಧವು ಜೀವನ ಪೂರ್ತಿ ನಮ್ಮ ಜತೆ ಬೆಸೆದು ಕೊಂಡಿರಬೇಕು ಎಂದಾದಾಗ ಚಿಕ್ಕ ಪುಟ್ಟ ತಪ್ಪುಗಳನ್ನು ಅಲ್ಲಿಯೇ ಮರೆತು ಮುಂದಿನ ಬದುಕನ್ನು ಸ್ವೀಕರಿಸಬೇಕಾಗುತ್ತದೆ.

ಇದು ಅವರಿಗೂ ಒಂದು ದೊಡ್ಡ ಪಾಠವಾಗುತ್ತದೆ. ನಾಳೆ ನಾವು ಅವರದೇ ಜಾಗದಲ್ಲಿ ನಿಲ್ಲಬಹುದು. ಆಗ ಕ್ಷಮೆ ಕೇಳುವ ಸರದಿ ನಮ್ಮದಾದಾಗ ಅವರಿಗೆ ನಾವೇ ಮಾದರಿಯಾಗುತ್ತೇವೆ. ಕ್ಷಮೆ ಕೇಳಿ ಯಾರು ಚಿಕ್ಕವರಾಗಿಲ್ಲ.. ಕ್ಷಮಿಸಿ ಯಾರೂ ಹಾಳೂ ಆಗಿಲ್ಲ.