ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ದುರಂತದಿಂದ ಕಲಿತ ಪಾಠ

1977ರ ಮಾರ್ಚ್ 27, ವಿಮಾನಯಾನ ಇತಿಹಾಸದ ಅತ್ಯಂತ ದುಃಖಕರ ದಿನ. ಕೆನರಿ ದ್ವೀಪಗಳಲ್ಲಿನ ಟೆನೆರಿಫ್‌ ನ ಲಾಸ್ ರೋಡಿಯೋಸ್ ವಿಮಾನ ನಿಲ್ದಾಣದಲ್ಲಿ, ದಟ್ಟವಾದ ಮಂಜಿನ ನಡುವೆ ಎರಡು ಬೋಯಿಂಗ್ 747 ವಿಮಾನಗಳು- ಒಂದು ಕೆಎಲಎಂ ವಿಮಾನ ಮತ್ತು ಇನ್ನೊಂದು ಪಾನ್ ಆಮ್ ವಿಮಾನ- ರನ್‌ವೇ ಮೇಲೆ ಡಿಕ್ಕಿ ಹೊಡೆದವು.

Vishweshwar Bhat Column: ದುರಂತದಿಂದ ಕಲಿತ ಪಾಠ

-

ಸಂಪಾದಕರ ಸದ್ಯಶೋಧನೆ

1977ರ ಮಾರ್ಚ್ 27, ವಿಮಾನಯಾನ ಇತಿಹಾಸದ ಅತ್ಯಂತ ದುಃಖಕರ ದಿನ. ಕೆನರಿ ದ್ವೀಪಗಳಲ್ಲಿನ ಟೆನೆರಿಫ್‌ ನ ಲಾಸ್ ರೋಡಿಯೋಸ್ ವಿಮಾನ ನಿಲ್ದಾಣದಲ್ಲಿ, ದಟ್ಟವಾದ ಮಂಜಿನ ನಡುವೆ ಎರಡು ಬೋಯಿಂಗ್ 747 ವಿಮಾನಗಳು- ಒಂದು ಕೆಎಲಎಂ ವಿಮಾನ ಮತ್ತು ಇನ್ನೊಂದು ಪಾನ್ ಆಮ್ ವಿಮಾನ- ರನ್‌ವೇ ಮೇಲೆ ಡಿಕ್ಕಿ ಹೊಡೆದವು.

ಈ ದುರಂತದಲ್ಲಿ ಒಟ್ಟು 583 ಜನರು ಪ್ರಾಣ ಕಳೆದುಕೊಂಡರು. ಇದು ವಿಮಾನಯಾನ ಇತಿಹಾಸದ ಅತಿ ಭೀಕರ ಅಪಘಾತವಾಗಿದೆ. ಈ ದುರಂತಕ್ಕೆ ಕಾರಣಗಳೇನು? ಅಂದು ವಿಪರೀತ ದಟ್ಟವಾದ ಮಂಜು ಕವಿದಿತ್ತು. ಇದರಿಂದ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಟವರ್‌ಗೆ ರನ್ ವೇ ಮೇಲೆ ವಿಮಾನಗಳನ್ನು ನೋಡಲು ಸಾಧ್ಯವಾಗಲಿಲ್ಲ.

ಹಾಗಾಗಿ ರನ್ ವೇಯಲ್ಲಿ ಏನು ನಡೆಯುತ್ತಿದೆ ಎಂಬುದು ಎಟಿಸಿಗೆ ತಿಳಿಯಲಿಲ್ಲ. ವಿಮಾನದ ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ನಡುವಿನ ರೇಡಿಯೋ ಸಂಭಾಷಣೆ ಸರಿಯಾಗಿರ ಲಿಲ್ಲ. ಒಂದೇ ಸಮಯದಲ್ಲಿ ಅನೇಕ ಸಂದೇಶಗಳು ರವಾನೆಯಾಗಿ ಗೊಂದಲ ಉಂಟಾಯಿತು. ಪಾನ್ ಆಮ್ ವಿಮಾನವು ಇನ್ನೂ ರನ್‌ವೇ ಮೇಲೆ ಇರುವಾಗ, ಕೆಎಲಎಂ ವಿಮಾನಕ್ಕೆ ಟೇಕಾಫ್‌ ಮಾಡಲು ಅನುಮತಿ ನೀಡಿದ ಬಗ್ಗೆ ಪೈಲಟ್‌ಗೆ ತಪ್ಪು ಮಾಹಿತಿ ತಲುಪಿತು.

ಇದನ್ನೂ ಓದಿ: Vishweshwar Bhat Column: ಇಸ್ರೇಲನ್ನು ಕೆಣಕಿ ಬಚಾವ್‌ ಆದವರು ಯಾರಿದ್ದಾರೆ ?!

ಕೆಎಲ್‌ಎಂ ವಿಮಾನದ ಕ್ಯಾಪ್ಟನ್, ತನಗೆ ಟೇಕಾಫ್ ಮಾಡಲು ಅನುಮತಿ ಸಿಕ್ಕಿದೆ ಎಂದು ಭಾವಿಸಿ, ಪಾನ್ ಆಮ್ ವಿಮಾನ ಇನ್ನೂ ರನ್ ವೇಯಲ್ಲಿದೆ ಎಂದು ಖಚಿತಪಡಿಸಿಕೊಳ್ಳದೇ ವಿಮಾನವನ್ನು ಚಲಾಯಿಸಲು‌ ಪ್ರಾರಂಭಿಸಿದರು. ಇದೇ ದುರಂತಕ್ಕೆ ಮುಖ್ಯ ಕಾರಣವಾಯಿತು. ಅಂದು ಟೆನೆರಿಫ್ ವಿಮಾನ ನಿಲ್ದಾಣದ ಬಳಿಯ ಮತ್ತೊಂದು ವಿಮಾನ ನಿಲ್ದಾಣದಲ್ಲಿ ‌ಬಾಂಬ್ ಬೆದರಿಕೆ ಇದ್ದ ಕಾರಣ, ಅಲ್ಲಿಗೆ ಹೋಗಬೇಕಿದ್ದ ಅನೇಕ ವಿಮಾನಗಳನ್ನು ಟೆನೆರಿಫ್‌ ಗೆ ತಿರುಗಿಸಲಾಗಿತ್ತು.

ಇದರಿಂದ ಕಿರಿದಾದ ಲಾಸ್ ರೋಡಿಯೋಸ್ ವಿಮಾನ ನಿಲ್ದಾಣವು ವಿಮಾನಗಳಿಂದ ತುಂಬಿ ಹೋಗಿತ್ತು. ರನ್‌ವೇಯಲ್ಲಿ ಟೇಕಾಫ್‌ ಗಾಗಿ ಕಾಯುತ್ತಿದ್ದ ವಿಮಾನಗಳು ಹಾಗೂ ಹೊರ ಬರಲು ಪ್ರಯತ್ನಿಸುತ್ತಿದ್ದ ವಿಮಾನಗಳಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ‌

ಟೆನೆರಿಫ್ ದುರಂತವು ವಿಮಾನಯಾನ ಉದ್ಯಮಕ್ಕೆ ಒಂದು ದೊಡ್ಡ ಪಾಠವಾಯಿತು. ಈ ದುರಂತ ದಿಂದ ಅನೇಕ ಅಮೂಲ್ಯ ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಅವು ಇಂದಿನ ವಿಮಾನ ಪ್ರಯಾಣವನ್ನು ಸುರಕ್ಷಿತಗೊಳಿಸಲು ಸಹಾಯಕವಾದವು. ರೇಡಿಯೋ ಸಂವಹನದಲ್ಲಿ ಯಾವುದೇ ಗೊಂದಲ ಆಗಬಾರದೆಂದು,

‘ಟೇಕಾಫ್’ ಮತ್ತು ‘ಕ್ಲಿಯರ್ಡ್ ಟು ಟೇಕಾಫ್’ ಎಂಬ ಪದಗಳನ್ನು‌ ಬಳಸುವ ಹೊಸ ನಿಯಮಗಳನ್ನು ಜಾರಿಗೆ ತರಲಾಯಿತು. ಇದರಿಂದ ಪೈಲಟ್‌ಗಳು ಮತ್ತು ಟವರ್ ನಡುವಿನ ಸಂವಹನ ಸ್ಪಷ್ಟ ವಾಯಿತು. ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ರೇಡಾರ್‌ಗಳನ್ನು ಅಳವಡಿಸಲಾಯಿತು. ಇದರಿಂದ ಮಂಜು ಅಥವಾ ಕಡಿಮೆ ಗೋಚರ ಸಮಯದಲ್ಲಿಯೂ ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ರನ್‌ವೇ ಮೇಲಿನ ವಿಮಾನಗಳನ್ನು ನಿರಂತರವಾಗಿ ಗಮನಿಸಲು ಸಾಧ್ಯವಾಯಿತು.

ಈ ದುರಂತದ ನಂತರ, ವಿಮಾನದ ಸಿಬ್ಬಂದಿ ನಡುವೆ ಉತ್ತಮ ಸಂವಹನ ಮತ್ತು ತಂಡದ ಕೆಲಸದ ಪ್ರಾಮುಖ್ಯದ ಬಗ್ಗೆ ತರಬೇತಿ ಆರಂಭಿಸಲಾಯಿತು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ಕ್ಯಾಪ್ಟನ್ ಮತ್ತು ಇತರೆ ಸಿಬ್ಬಂದಿಯ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುವ ಪದ್ಧತಿಯನ್ನು ಸಹ ಜಾರಿಗೆ ತರಲಾಯಿತು. ಇಂದು ವಿಮಾನ ಪ್ರಯಾಣವನ್ನು ವಿಶ್ವದ ಅತಿ ಸುರಕ್ಷಿತ ಸಾರಿಗೆ ವಿಧಾನವೆಂದು ಪರಿಗಣಿಸಲು ಟೆನೆರಿಫ್ ದುರಂತದ ಪಾಠಗಳೂ ಮುಖ್ಯ ಕಾರಣ.

ಈ ದುರಂತವು ವಿಮಾನಯಾನ ಜಗತ್ತಿಗೆ ಒಂದು ನೋವಿನ‌ ಅನುಭವವಾಗಿರಬಹುದು. ಆದರೆ ಆ ನೋವಿನಿಂದ ಕಲಿತ ಪಾಠಗಳು ಇಂದಿನ ಪ್ರಗತಿಗೆ ಅಡಿಪಾಯವಾಗಿವೆ. ಇದು ವಿಮಾನಯಾನ ಉದ್ಯಮವು ಹೇಗೆ ದುರಂತಗಳನ್ನು ಸಹ ಒಂದು ಪ್ರಗತಿಯ ಹಾದಿಯನ್ನಾಗಿ ಪರಿವರ್ತಿಸುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ.