#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Rangaswamy Mookanahalli Column: ರೆಪೋ ರೇಟ್‌ ಕುಸಿತ ಅಂದಾಕ್ಷಣ ಅದು ಶುಭಸುದ್ದಿಯಲ್ಲ !

ಪಾಶ್ಚಾತ್ಯ ಆರ್ಥಿಕತೆ ನಿಂತಿರುವುದು ಸಾಲದ ಮೇಲೆ, ತಾವು ಗಳಿಸಿದ, ಖರ್ಚು ಮಾಡಿದ ಪ್ರತಿ ಯೊಂದು ಹಣವನ್ನೂ ಲೆಕ್ಕ ಇಟ್ಟು ಅದರ ಆಧಾರದ ಮೇಲೆ ಸಮಾಜದ ಆರ್ಥಿಕತೆ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನ ಅಳೆಯುವುದರ ಮೇಲೆ. ಇದನ್ನೇ ಜಿಡಿಪಿ ಎನ್ನುವುದು. ಭಾರತವೂ ಸೇರಿದಂತೆ ಬಹಳ ದೇಶಗಳಲ್ಲಿ ಹೀಗೆ ಎಲ್ಲವನ್ನೂ ಲೆಕ್ಕ ಇಡಲು ಹೋಗುವುದಿಲ್ಲ.

ರೆಪೋ ರೇಟ್‌ ಕುಸಿತ ಅಂದಾಕ್ಷಣ ಅದು ಶುಭಸುದ್ದಿಯಲ್ಲ !

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

Profile Ashok Nayak Feb 11, 2025 9:51 AM

ವಿಶ್ವರಂಗ

ರಂಗಸ್ವಾಮಿ ಮೂಕನಹಳ್ಳಿ

ರೆಪೋ ರೇಟ್ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತರ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ. ಅಂದರೆ ಆರ್‌ಬಿಐ ಯಾವುದೇ ಭಾರತೀಯ ಬ್ಯಾಂಕಿಗೆ ಸಾಲ ನೀಡಿದರೆ ಆ ಬ್ಯಾಂಕು 6.5 ಪ್ರತಿಶತ ಬಡ್ಡಿ ನೀಡಬೇಕಿತ್ತು. ಅದನ್ನು ಕಡಿಮೆ ಮಾಡಿದ್ದಾರೆ. ಈಗ ರೆಪೋ ರೇಟ್ 6.25 ಪ್ರತಿಶತ ಆಗಿದೆ. 5 ವರ್ಷದ ನಂತರ ಇಂಥ ಒಂದು ಕಡಿತವನ್ನು ಮಾಡಲಾಗಿದೆ. ಈ ಹಿಂದೆ ಇದೇ ರೀತಿ ರೆಪೋ ರೇಟ್ ಕಡಿಮೆ ಮಾಡಿದ್ದಾಗ ಬ್ಯಾಂಕುಗಳು ತಮಗೆ ಸಿಕ್ಕ ಲಾಭವನ್ನು ಗ್ರಾಹಕರಿಗೆ ತಕ್ಷಣ ನೀಡಿರಲಿಲ್ಲ. ಈಗಲೂ ಅಷ್ಟೇ, ಅದು ಆಯಾ ಬ್ಯಾಂಕುಗಳ ಮೇಲೆ ಅವಲಂಬಿತ. ಆರ್‌ಬಿಐ ರೆಪೋ ರೇಟ್ ಕಡಿಮೆ ಮಾಡಿದಾಕ್ಷಣ ಆಟೋಮ್ಯಾಟಿಕ್ ಆಗಿ ಬ್ಯಾಂಕುಗಳಲ್ಲಿ ಕೂಡ ಬಡ್ಡಿ ದರಗಳು ಕಡಿಮೆಯಾಗುತ್ತವೆ ಎನ್ನುವುದು ಸುಳ್ಳು.

ಅಲ್ಲದೆ ಆರ್‌ಬಿಐ 0.25 ಪ್ರತಿಶತ ಕಡಿಮೆ ಮಾಡಿದ್ದಾಗ ಬ್ಯಾಂಕುಗಳು ಹೆಚ್ಚೆಂದರೆ 0.15 ಪ್ರತಿಶತ ಕಡಿತಗೊಳಿಸಬಹುದು. ಹೀಗಾಗಿ ಗ್ರಾಹಕನಿಗೆ ಪೂರ್ಣಲಾಭ ಸಿಗುವುದಿಲ್ಲ, ತಕ್ಷಣವೂ ಸಿಗುವುದಿಲ್ಲ. ಸಾಲ ತೆಗೆದುಕೊಂಡವರು ಹೋಗಿ ಕೇಳದಿದ್ದರೆ ಬ್ಯಾಂಕುಗಳು ಆಟೋಮ್ಯಾಟಿಕ್ ಆಗಿ ಕಡಿಮೆ ಮಾಡುವ ಸಂಭವ ಕೂಡ ಕಡಿಮೆ.

ಸೂಪರ್ - ಆಗಿ ಇದನ್ನು ಬ್ಯಾಂಕುಗಳು ಅಳವಡಿಸಿಕೊಳ್ಳುತ್ತವೆ ಎಂದರೂ ಕನಿಷ್ಠ 2 ವಾರ ವೇಳೆ ತಗಲುತ್ತದೆ. ಹಿರಿಯ ನಾಗರಿಕರು, ಬ್ಯಾಂಕಿನಲ್ಲಿ ಠೇವಣಿ ಇಡಲು ಬಯಸುವವರು ತ್ವರೆ ಮಾಡಿ. ಇಲ್ಲವಾದಲ್ಲಿ ಸಿಗುವ ಬಡ್ಡಿಯಲ್ಲಿ ಸ್ವಲ್ಪ ಕಡಿಮೆಯಾಗಲಿದೆ. ಇದು ಶುಭಸುದ್ದಿ ಎನ್ನುವಂತೆ ಬಹಳಷ್ಟು ಜನ ನೋಡುತ್ತಾರೆ. ಹಣದುಬ್ಬರ ಕಡಿಮೆಯಾಗದೆ ರೆಪೋ ರೇಟ್ ಕಡಿಮೆ ಮಾಡುವುದು ಒಳ್ಳೆಯದಲ್ಲ.

ಇದನ್ನೂ ಓದಿ: Rangaswamy Mookanahalli Column: ಯಾವುದು ವಿದ್ಯೆ ? ಮಂಗಳವಾರದ ಬೆಳಗಿನ ಜಿಜ್ಞಾಸೆ !

ಆರ್‌ಬಿಐ ಪ್ರಕಾರ ಫೆಬ್ರವರಿ 2025ರಲ್ಲಿ ರಿಟೇಲ್ ಹಣದುಬ್ಬರ 4.2ರಷ್ಟಿದೆ! ಮಜಾ ಎಂದರೆ ಹಣ ದುಬ್ಬರದ ಕಾರಣ 15 ರುಪಾಯಿ ಆದ ಕಾಫಿ ಮತ್ತೆಂದೂ 10 ರುಪಾಯಿ ಆಗುವುದಿಲ್ಲ. ಏರಿದ ಬಸ್ ಟಿಕೆಟ್ ಇಳಿದ ಉದಾಹರಣೆ ಕಂಡಿಲ್ಲ. ಹೀಗೆ ಎಲ್ಲವೂ. ಆದರೂ ರಿಟೇಲ್ ಹಣದುಬ್ಬರ ಕಡಿಮೆ ಯಾಗಿದೆಯಂತೆ, ಇರಲಿ.

ಭಾರತದಲ್ಲಿ ಹಣದುಬ್ಬರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಕಳೆದ ಐದು ವರ್ಷದಿಂದ ಆರ್‌ಬಿಐ ತನ್ನ ರೆಪೋ ರೇಟ್ ಕಡಿಮೆ ಮಾಡದೆ ಇರುವುದು ಬಹುದೊಡ್ಡ ಸಾಕ್ಷಿ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಪ್ರಕಾರ ಅಕ್ಟೋಬರ್ ೨೦೨೪ರಲ್ಲಿ ಹಣದುಬ್ಬರ ಸಂಖ್ಯೆ ಭಾರತದಲ್ಲಿ 6.1 ಮತ್ತು ಫೆಬ್ರವರಿ 2025ರಲ್ಲಿ 4.2!

ಇದು ಯಾವುದೇ ಲೆಕ್ಕಾಚಾರದಲ್ಲೂ ಹೊರಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಹಣದುಬ್ಬರದ ಹತ್ತಿರ ವೂ ಸುಳಿಯುವುದಿಲ್ಲ ಎನ್ನುವುದು ತಿಂಗಳ ಕೊನೆ ಮುಟ್ಟಲು ಹೆಣಗುವ ಪ್ರತಿಯೊಬ್ಬ ನಾಗರಿಕ ರಿಗೂ ಗೊತ್ತಿರುವ ಸತ್ಯ. ನೀವೇ ಗಮನಿಸಿ ನೋಡಿ, ನಮ್ಮಲ್ಲಿ ರೆಪೋ ರೇಟ್ 6.25 ಪ್ರತಿಶತ ವಿದೆ. ಹಣದುಬ್ಬರವು ಸರಕಾರ ಹೇಳುವ ಪ್ರಕಾರ 4.2 ಪ್ರತಿಶತ ಇರುವುದು ನಿಜವೇ ಆಗಿದ್ದಿದ್ದರೆ ಕಳೆದ ಬಾರಿಯ ಸಭೆಯಲ್ಲಿ ಆರ್‌ಬಿಐ ರೆಪೋ ರೇಟ್ ಕಡಿಮೆ ಮಾಡಬೇಕಾಗಿತ್ತು.

ಅದು ಆಗಿಲ್ಲ. ಇನ್ನೊಂದು ಪ್ರಮುಖ ಅಂಶವೇನು ಗೊತ್ತೇ? ಭಾರತೀಯ ಮಧ್ಯಮವರ್ಗದವರು ಬ್ಯಾಂಕುಗಳಿಂದ ಬಹಳ ಬೇಸತ್ತಿದ್ದಾರೆ. ಸರಿಯಾಗಿ ಸಿಗದ ಸೇವೆ, ಕಡಿಮೆ ಬಡ್ಡಿದರ, ಬ್ಯಾಂಕ್ ನೌಕರರ ಸಿಡುಕಾಟ ಇವೆಲ್ಲವೂ ಅವರನ್ನು ಬ್ಯಾಂಕಿನಿಂದ ದೂರ ಮಾಡುತ್ತಿವೆ. ಆದ್ದರಿಂದ ಪ್ರಥಮ ಬಾರಿಗೆ ಭಾರತದಲ್ಲಿ ಹಣ ಉಳಿಸುವರ ಸಂಖ್ಯೆಯಲ್ಲಿ, ಹಣದ ಮೊತ್ತದಲ್ಲಿ ಎರಡರಲ್ಲೂ ಕುಸಿತ ಕಂಡಿದೆ.

ಹೀಗಾಗಿ ಬ್ಯಾಂಕುಗಳಲ್ಲಿ ಲಿಕ್ವಿಡಿಟಿ ಸಮಸ್ಯೆ ಶುರುವಾಗುತ್ತದೆ. ನಿಜ ಹೇಳಬೇಕೆಂದರೆ ಆ ಸಮಸ್ಯೆಯ ಬಿಸಿ ಆಗಲೇ ತಟ್ಟಲು ಶುರುವಾಗಿದೆ. ಬ್ಯಾಂಕುಗಳಲ್ಲಿ ಠೇವಣಿ ಹಣ ಇಲ್ಲದ ಸಮಯದಲ್ಲಿ ಆರ್‌ಬಿಐ ರೆಪೋ ರೇಟ್ ಕಡಿತ ಮಾಡಿರುವುದು ನಿಜಕ್ಕೂ ಅಚ್ಚರಿ.

ನಮ್ಮದು ಬಹಳ ಹಿಂದಿನಿಂದಲೂ ಉಳಿಕೆಯನ್ನ ಅದರಲ್ಲೂ ಸಣ್ಣ ಉಳಿತಾಯವನ್ನ ನಂಬಿ ಬದುಕುತ್ತಿರುವ ಸಮಾಜ. ಮನೆ ಖರ್ಚಿಗೆಂದು ನೀಡುವ ಹಣದಲ್ಲೂ ಒಂದಷ್ಟು ಉಳಿಕೆ ಮಾಡಿ ಅದೆಷ್ಟೊ ಸಂಸಾರಗಳನ್ನ ಕಷ್ಟಕಾಲದಲ್ಲಿ ಕಾಪಾಡಿದ ನಿದರ್ಶನಗಳು ನಮ್ಮ ಮುಂದಿದೆ. ಆದರೆ ಇತ್ತೀಚೆಗಂತೂ ಭಾರತದಲ್ಲಿ ಕೂಡ ಸಾಮಾನ್ಯ ಜನರು ಉಳಿತಾಯ ಮಾಡುವುದರಿಂದ ಏನು ಪ್ರಯೋಜನ ಎಂದು ಕೇಳುವ ಮಟ್ಟಕ್ಕೆ ಸರಕಾರವು ಉಳಿತಾಯದ ಮೇಲಿನ ಬಡ್ಡಿಯನ್ನ ಕಡಿಮೆ ಮಾಡಿದೆ.

ಎಲ್ಲಕ್ಕೂ ಪಾಶ್ಚಾತ್ಯ ಆರ್ಥಿಕತೆಯನ್ನ ಅನುಸರಿಸಿದರೆ ಅವರಿಗಾದ ಗತಿಯೇ ನಮ್ಮದು ಕೂಡ ಆಗಲಿದೆ. ಭಾರತದಲ್ಲಿ ಕೂಡ ಮುಂದಿನ ಹತ್ತಾರು ವರ್ಷದ ಹಣವನ್ನ ಮುಂಗಡವಾಗಿ ತೆಗೆದು ಕೊಂಡು ಖರ್ಚು ಮಾಡುವ ಸಂಪ್ರದಾಯ ಬೆಳೆದುಬಿಟ್ಟಿದೆ. ಇಂದು ಅಮೆರಿಕದಲ್ಲಿ ಆಗುತ್ತಿರುವ ಘಟನೆಗಳು ನಮಗೆ ಎಚ್ಚರಿಕೆಯ ಗಂಟೆ! ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಿರುತ್ತದೆ, ಖರ್ಚು ಮಾಡದೆ ಮಿತವಾಗಿ ಬಳಸಿಕೊಂಡು ಸಾಲವನ್ನ ಮಾಡದೆ ಇದ್ದರೆ ದೇಶ ಅಭಿವೃದ್ಧಿ ಕಾಣುವುದು ಹೇಗೆ? ನಮ್ಮ ಕಾಲಘಟ್ಟದ ಅತ್ಯಂತ ದೊಡ್ಡ ದುರಂತವೆಂದರೆ ಸಾಲ ಮಾಡಿ ಸೃಷ್ಟಿಯಾದ ಸಂಪತ್ತನ್ನ ಅಭಿವೃದ್ಧಿ ಎನ್ನುವಂತೆ ಬಿಂಬಿಸುತ್ತಿರುವುದು.

ಇಲ್ಲದ ಆಸ್ತಿಯನ್ನ ಸೃಷ್ಟಿಸಿ ಆನಂದ ಪಡುವುದು ಜಾಣತನವೇ? ನಿಮ್ಮನ್ನ ನೀವೇ ಪ್ರಶ್ನಿಸಿ ಕೊಳ್ಳಿ. ಪಾಶ್ಚಾತ್ಯ ಆರ್ಥಿಕತೆ ನಿಂತಿರುವುದು ಸಾಲದ ಮೇಲೆ, ತಾವು ಗಳಿಸಿದ, ಖರ್ಚು ಮಾಡಿದ ಪ್ರತಿ ಯೊಂದು ಹಣವನ್ನೂ ಲೆಕ್ಕ ಇಟ್ಟು ಅದರ ಆಧಾರದ ಮೇಲೆ ಸಮಾಜದ ಆರ್ಥಿಕತೆ ಎಷ್ಟು ದೊಡ್ಡ ಮಟ್ಟದಲ್ಲಿದೆ ಎನ್ನುವುದನ್ನ ಅಳತೆ ಮಾಡುವುದರ ಮೇಲೆ. ಇದನ್ನೇ ನಾವು ಜಿಡಿಪಿ ಎನ್ನುವುದು.

ಭಾರತವೂ ಸೇರಿದಂತೆ ಬಹಳ ದೇಶಗಳಲ್ಲಿ ಹೀಗೆ ಎಲ್ಲವನ್ನೂ ಲೆಕ್ಕ ಇಡಲು ಹೋಗುವುದಿಲ್ಲ. ಅದು ನಮ್ಮ ಸಂಸ್ಕಾರವೂ ಅಲ್ಲ. ಉದಾಹರಣೆಗೆ ಇಂಗ್ಲೆಂಡ್ ಮತ್ತು ಅಮೆರಿಕದಂಥ ದೇಶಗಳಲ್ಲಿ ಫಂಡ್ ರೈಸಿಂಗ್ ಎನ್ನುವುದು ಒಂದು ದೊಡ್ಡ ಉದ್ಯಮ. ದಾನ-ಧರ್ಮಕ್ಕೆ ಎಂದು ತೆರೆದ ಲಾಭಕ್ಕಲ್ಲದ ಸಂಸ್ಥೆಗಳಿಗೆ ಹಣವನ್ನ ದೇಣಿಗೆಯ ರೂಪದಲ್ಲಿ ತರಲು ಕೂಡ ಬಹಳಷ್ಟು ಜನರು, ಸಂಸ್ಥೆಗಳು ಇವೆ. ಆದರೆ ಭಾರತದಲ್ಲಿ ಅದು ಇಲ್ಲ.

ಇದ್ದರೂ ಅಲ್ಲಿನಷ್ಟು ಭರಾಟೆಯಂತೂ ಖಂಡಿತ ಇಲ್ಲ. ಏಕೆಂದರೆ ನಮ್ಮದು ಎಡಗೈಯಲ್ಲಿ ಕೊಟ್ಟ ದ್ದು ಬಲಗೈಗೆ ತಿಳಿಯಬಾರದು ಎನ್ನುವ ಸಂಪ್ರದಾಯ ಅಥವಾ ಮನಸ್ಥಿತಿ ಹೊಂದಿದ ದೇಶ.ಕೇವಲ ದಾನ-ಧರ್ಮದ ವಿಷಯದಲ್ಲಿ ಮಾತ್ರವಲ್ಲ, ಬಹಳ ವಿಷಯದಲ್ಲಿ ನಮ್ಮದು ಎಲ್ಲವನ್ನೂ ಸಮಸ್ಥಿತಿ ಯಲ್ಲಿ ಇಟ್ಟಿದ್ದ ಸಮಾಜ. ಉದಾಹರಣೆ ನೋಡೋಣ- ಹಿಂದೆ ನಮ್ಮ ಮನೆಯ ಹಿತ್ತಲಲ್ಲಿ ಒಂದೆರಡು ಆಕಳುಗಳು ಇರುತ್ತಿದ್ದವು.

ಅವುಗಳಿಂದ ಹಾಲು, ಅದರಲ್ಲೂ ಕಲಬೆರಕೆಯಿಲ್ಲದ ತಾಜಾ ಹಾಲು ಸಿಗುತ್ತಿತ್ತು. ಹಾಗೆಯೇ ತರಕಾರಿ, ಹೂವು, ಸೊಪ್ಪು ಇತ್ಯಾದಿಗಳು ಅಲ್ಲಿಯೇ ಸಿಗುತ್ತಿದ್ದವು. ಅವುಗಳನ್ನ ನಾವು ಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಹೀಗೆ ನಾವು ಕೊಳ್ಳದೆ ಅದರ ಉಪಭೋಗವನ್ನ ಮಾಡಿದರೆ ಅದು ಜಿಡಿಪಿ ಲೆಕ್ಕಕ್ಕೆ ಬರುವುದಿಲ್ಲ!

ಪಾಶ್ಚಾತ್ಯರ ಪ್ರಕಾರ ನೀವು ಯಾವುದೇ ವಸ್ತುವನ್ನ ಅಥವಾ ಸೇವೆಯನ್ನ ಹಣವನ್ನ ನೀಡದೆ ಬಳಸಿಕೊಂಡರೆ ಅದು ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ನಿಮ್ಮ ಸಮಾಜವೆಷ್ಟು ದೊಡ್ಡದು, ನಿಮ್ಮ ಆರ್ಥಿಕತೆಯೆಷ್ಟು ಸಬಲ ಎನ್ನುವ ಅವರ ಲೆಕ್ಕಾಚಾರದಲ್ಲಿ ತಪ್ಪಾಗುತ್ತದೆ.

ರೆಪೋ ರೇಟ್ ಕುಸಿತದಿಂದ ಮುಖ್ಯವಾಗಿ ಯಾರಿಗೆ ಲಾಭ, ಯಾರಿಗೆ ನಷ್ಟ ಎಂದು ನೋಡಬಹದು. ಜತೆಗೆ ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಇಡಲು ಇದು ಅವಶ್ಯಕ ಕೂಡ.

1) ಮೊದಲ ಸಾಲಿನಲ್ಲಿ ಹೇಳಿದಂತೆ ನಮ್ಮದು ಅತ್ಯಂತ ದೊಡ್ಡ ದೇಶ. ಎಲ್ಲಾ ನಿರ್ಧಾರಗಳು ಎಲ್ಲರಿಗೂ ಅನುಕೂಲ ಮಾಡಿಕೊಡುವುದಿಲ್ಲ. ಆದರೆ ಬಡ್ಡಿ ದರ ಇಳಿಕೆಯು, 12 ಕೋಟಿಗೂ ಮೀರಿ ಇರುವ ಹಿರಿಯ ನಾಗರಿಕರ ಮುಖದಲ್ಲಿದ್ದ ಸಣ್ಣನೆಯ ನಗುವನ್ನ ಕಸಿಯುವುದು ಮಾತ್ರ ಸುಳ್ಳಲ್ಲ.

ಗಮನಿಸಿ- ಇಂಗ್ಲೆಂಡ್ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆಯಷ್ಟು ನಮ್ಮಲ್ಲಿ ಹಿರಿಯ ನಾಗರಿಕರು ಇದ್ದಾರೆ! ಇವರ ಆದಾಯದ ಮೂಲ ಜೀವನ ಪೂರ್ತಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಒಂದಷ್ಟು ಹಣ. ಅದನ್ನ ಬ್ಯಾಂಕಿನಲ್ಲಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಅವರ ಜೀವನ ಸಾಗಬೇಕು. ಸೋಷಿಯಲ್ ಸೆಕ್ಯುರಿಟಿ ಇಲ್ಲದ ನಮ್ಮ ದೇಶದಲ್ಲಿ ಪಿಂಚಣಿ ಗಳಿಸುವವರ ಸಂಖ್ಯೆ ನಗಣ್ಯ.

ಹೀಗಾಗಿ ಈ ವರ್ಗದ ಜನರ ಜತೆಗೆ ಕೈಲಾಗದವರು, ಅಸಹಾಯಕರು ಸೀಮಿತ ಹಣದ ಮೇಲಿನ ಬಡ್ಡಿಯಲ್ಲಿ ಜೀವನ ಸಾಗಿಸುವ ಲಕ್ಷಾಂತರ ಜನರಿಗೆ ಬಡ್ಡಿದರ ಕಡಿಮೆಯಾದರೆ ಅದು ಶಾಪ. ಸದ್ಯದ ಮಟ್ಟಿಗೆ ಇವರ ಬದುಕು ಬಹಳ ಕಷ್ಟವಾಗಲಿದೆ.

2) ಬಡ್ಡಿ ದರ ಕಳೆದ 7 ವರ್ಷದಿಂದ ಇಳಿಮುಖವಾಗಿದೆ. ಇದು ಕಳೆದ 5 ವರ್ಷದಿಂದ ಅಲುಗಾಡದೆ ನಿಂತ ನಿಂತಿತ್ತು. ಇದು ರಿಯಲ್ ಎಸ್ಟೇಟ್‌ಗೆ ವರದಾನವಾಗಿದೆ. ಲಕ್ಷಾಂತರ ಜನ ಇಳಿದ ಬಡ್ಡಿ ದರದ ಅನುಕೂಲ ಪಡೆದು ಮನೆ ಕಟ್ಟಲು, ಕಾರು ಕೊಳ್ಳಲು ಸಾಲ ಪಡೆದರು. ಇದೀಗ ಕಡಿಮೆಯಾಗಿರುವ ಬಡ್ಡಿ ದರದಿಂದ ಒಂದಷ್ಟು ಮಾಸಿಕ ಕಂತು ಕಟ್ಟುವ ಹಣದಲ್ಲಿ ಕಡಿಮೆಯಾಗಲಿದೆ.

ಭಾರತದಲ್ಲಿ ಹಣದುಬ್ಬರ ಎರಡು ಅಂಕಿಯಲ್ಲಿದೆ. ಹೀಗಿದ್ದೂ ಬಡ್ಡಿ ಕಡಿಮೆ ಮಾಡಿರುವುದು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಕಳೆದ ವಾರದ ಬಜೆಟ್‌ನಲ್ಲಿ 12 ಲಕ್ಷ ರುಪಾಯಿ ತನಕ ತೆರಿಗೆ ಇಲ್ಲವಾಗಿಸಿದ್ದು ಮತ್ತು ಈಗಿನ ಬಡ್ಡಿ ದರ ಕುಸಿತ ಎರಡೂ ಮಧ್ಯಮ ವರ್ಗದ ಜನರ ಕೈಯಲ್ಲಿ ಒಂದಷ್ಟು ಹಣ ಉಳಿಯುವಂತೆ ಮಾಡುತ್ತದೆ.

3) ಕಳೆದ 5 ತಿಂಗಳಿನಿಂದ ಒಂದೇ ಸಮನೆ ಕುಸಿತದ ಹಾದಿಯಲ್ಲಿರುವ ಷೇರು ಮಾರುಕಟ್ಟೆ ಇದರಿಂದ ಒಂದಷ್ಟು ಚೇತರಿಕೆ ಕಾಣುವ ಸಾಧ್ಯತೆಗಳಿವೆ. ಕುಸಿದ ಬಡ್ಡಿಯು ತಕ್ಷಣ ಅಲ್ಲದಿದ್ದರೂ ಮಾರುಕಟ್ಟೆ ಯ ಮೇಲೆ ಧನಾತ್ಮಕವಾಗಿ ಪರಿಣಾಮವನ್ನು ಬೀರಲಿದೆ. ಮಧ್ಯಮವರ್ಗದ ಜನರ ಕೈಯಲ್ಲಿ ಉಳಿದ ಹಣ ಮಾರುಕಟ್ಟೆಗೆ ಬರುತ್ತದೆ. ಏಕೆಂದರೆ ಬ್ಯಾಂಕಿನಲ್ಲಿ ಸಿಗುವ ಠೇವಣಿ ಮೇಲಿನ ಬಡ್ಡಿದರ ಕೂಡ ಕುಸಿತ ಕಾಣುತ್ತದೆ. ಹೀಗಾಗಿ ಅವರಿಗೆ ಷೇರು ಮಾರುಕಟ್ಟೆ ಪ್ರವೇಶಿಸದೆ ಅನ್ಯ ಮಾರ್ಗವಿಲ್ಲ.

4) ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲ ಇನ್ನಷ್ಟು ಚೀಪ್ ಆಗುತ್ತದೆ. ಹೀಗಾಗಿ ಅವರು ಹೆಚ್ಚಿನ ಸಾಲ ವನ್ನು ಪಡೆಯಬಹುದು. ಹೀಗೆ ಪಡೆದ ಸಾಲವನ್ನು ಸಂಸ್ಥೆಯ ಉತ್ಪಾದನೆಯಲ್ಲಿ ತೊಡಗಿಸಿ ಕೊಂಡರೆ ಅದರಿಂದ ದೇಶದ ಅಭಿವೃದ್ಧಿ, ಕೆಲಸ ಹೆಚ್ಚಳ ಕೂಡ ಆಗುತ್ತದೆ.

ಬಡ್ಡಿ ದರ ಕಡಿಮೆಯಾದರೆ ಒಳ್ಳೆಯದು, ಜಾಸ್ತಿಯಾದರೆ ಕೆಟ್ಟದ್ದು ಎನ್ನುವಂತಿಲ್ಲ. ಇದು ದೇಹದಲ್ಲಿ ಶುಗರ್ ಇದ್ದಂತೆ! ಹೆಚ್ಚಾದರೂ, ಕಡಿಮೆಯಾದರೂ ಕಷ್ಟ. ಇದು ಸಮಪ್ರಮಾಣದಲ್ಲಿರಬೇಕು. ಆದರೆ ಇದನ್ನು ಸಮ ಪ್ರಮಾಣದಲ್ಲಿಡುವುದು ಬಹಳ ಕಷ್ಟದ ಕೆಲಸ. ಭಾರತೀಯ ಬ್ಯಾಂಕುಗಳಲ್ಲಿ ಲಿಕ್ವಿಡಿಟಿ ಸಮಸ್ಯೆಯಿದೆ.

ಇದರಿಂದ ಪಾರಾಗಲು ಹೆಚ್ಚಿನ ಡೆಪಾಸಿಟ್ ಬೇಕು. ಜನ ಬ್ಯಾಂಕಿನಲ್ಲಿ ಹಣವನ್ನು ಇಡಬೇಕು ಎಂದರೆ ಡೆಪಾಸಿಟ್ ಬಡ್ಡಿ ದರ ಹೆಚ್ಚಿರಬೇಕು. ಈಗ ಬಡ್ಡಿ ದರವನ್ನು ಕಡಿಮೆ ಮಾಡಿದ್ದಾರೆ. ಜನರೇಕೆ ಕಡಿಮೆ ಬಡ್ಡಿಗೆ ಬ್ಯಾಂಕಿನಲ್ಲಿ ಹಣವನ್ನು ಇಡುತ್ತಾರೆ? ಹೀಗಾಗಿ ಭಾರತದ ಬ್ಯಾಂಕುಗಳಲ್ಲಿ ಮುಂದಿ ನ ವರ್ಷಗಳಲ್ಲಿ ಇನ್ನಷ್ಟು ಲಿಕ್ವಿಡಿಟಿ ಕೊರತೆ ಹೆಚ್ಚಾಗುವ ಸಾಧ್ಯತೆಯಿದೆ.

ಭದ್ರತೆಯನ್ನು ಮಾತ್ರ ಪ್ರಮುಖವಾಗಿ ನೋಡುವ ಜನರು ಮಾತ್ರ ಬ್ಯಾಂಕಿನಲ್ಲಿ ಹಣವನ್ನು ಇಡು ತ್ತಾರೆ. ಆದರೆ ಬ್ಯಾಂಕು ನೀಡುವ ಬಡ್ಡಿ ದರಕ್ಕಿಂತ ಹಣದುಬ್ಬರ ಸದಾ ಹೆಚ್ಚಾಗಿರುತ್ತದೆ. ಆದ್ದರಿಂದ ಬ್ಯಾಂಕಿನಲ್ಲಿ ತೊಡಗಿಸಿದ ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಇದು ಎರಡು ಅಲಗಿನ ಖತ್ತಿ. ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.