Roopa Gururaj Column: ಮನಸ್ಸು ಮಾಗಿದಾಗ ಗೋಚರವಾಗುವ ಗುರಿ
ಮೂವತ್ತು ವರ್ಷಗಳ ನಂತರ ಮರಳಿ ಅದೇ ಜಾಗಕ್ಕೆ ಬಂದ. ನೋಡುತ್ತಾನೆ, ಮೊದಲು ತಾನು ಕಂಡ ವೃದ್ಧರೇ, ಈಗಲೂ ಅದೇ ವೃಕ್ಷದ ಕೆಳಗೆ ಕುಳಿತಿದ್ದಾರೆ. ಈಗ ಅವನಿಗೆ ಏನು ಮಾಡಬೇಕೆಂದು ತೋಚದೇ, ಆಶ್ಚರ್ಯದಿಂದ ಅವರನ್ನೇ ನೋಡುತ್ತಾ ನಿಂತುಬಿಟ್ಟ
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಸಂತರೊಬ್ಬರು ಒಂದು ವೃಕ್ಷದ ಕೆಳಗೆ ಕುಳಿತಿದ್ದರು. ಒಬ್ಬ ಯುವಕ ಅವರ ಬಳಿಗೆ ಬಂದು, ‘ನಾನು ಒಬ್ಬ ಸದ್ಗುರುವನ್ನು ಹುಡುಕುತ್ತಿದ್ದೇನೆ, ಅವರೇ ಸದ್ಗುರು ಎಂದು ಗುರುತಿಸಲು ನನಗೆ ಏನಾದರೂ ಸಹಾಯ ನಿಮ್ಮಿಂದ ದೊರೆಯಬಹುದಾ?’ ಎಂದು ಕೇಳಿದ. ಆಗ ಸಂತರು ಹೇಳಿದರು,
ಇಂಥ ವೃಕ್ಷದ ಕೆಳಗೆ ಕುಳಿತಿರುವವರು ಸಿಕ್ಕರೆ, ಅವರೇ ಸದ್ಗುರುಗಳೆಂದು ಎಂದು ತಿಳಿದುಕೋ. ಸರಿ, ಎಂದು ಆ ಯುವಕ ಅಲ್ಲಿಂದ ಹೊರಟು ಸಾಕಷ್ಟು ಕಡೆ ಹುಡುಕಿ ಸದ್ಗುರುವಿಗಾಗಿ ಸುಮಾರು ಮೂವತ್ತು ವರ್ಷಗಳ ಕಾಲ ಅಲೆದಾಡಿದ. ಆದರೆ ಸಂತರು ಹೇಳಿದ ವೃಕ್ಷ ಎಲ್ಲೂ ಸಿಗಲಿಲ್ಲ, ವೃಕ್ಷದ ಕೆಳಗೆ ಕುಳಿತ ಸದ್ಗುರುವೂ ಕಾಣಲಿಲ್ಲ. ಎಷ್ಟೇ ಜನ ಸಿಕ್ಕರೂ, ಅವರ್ಯಾರೂ, ಸಂತರು ಹೇಳಿದ ರೀತಿಯಲ್ಲಿ ಇವನಿಗೆ ಕಾಣಿಸಲಿಲ್ಲ.
ಇದನ್ನೂ ಓದಿ: Roopa Gururaj Column: ಪಕ್ಷಿಗಳ ಬಣ್ಣದ ಹಿಂದಿನ ರಹಸ್ಯ
ಮೂವತ್ತು ವರ್ಷಗಳ ನಂತರ ಮರಳಿ ಅದೇ ಜಾಗಕ್ಕೆ ಬಂದ. ನೋಡುತ್ತಾನೆ, ಮೊದಲು ತಾನು ಕಂಡ ವೃದ್ಧರೇ, ಈಗಲೂ ಅದೇ ವೃಕ್ಷದ ಕೆಳಗೆ ಕುಳಿತಿದ್ದಾರೆ. ಈಗ ಅವನಿಗೆ ಏನು ಮಾಡಬೇಕೆಂದು ತೋಚದೇ, ಆಶ್ಚರ್ಯದಿಂದ ಅವರನ್ನೇ ನೋಡುತ್ತಾ ನಿಂತುಬಿಟ್ಟ. ‘ಸ್ವಲ್ಪ ಸುಧಾರಿಸಿಕೋ..’ ‘ಮಹಾನು ಭಾವರೇ, ಮೊದಲೇ ನೀವೇಕೆ ನನಗೆ ಹೇಳಲ್ಲಿಲ್ಲ? ನಾನು ಎಷ್ಟು ಕಡೆ ಅಲೆದು ಬಂದೆ?’ ಎಂದು ಹೇಳಿದ.ಆಗ ಸಂತರು ಹೇಳಿದರು, ‘ನಾನು ಹೇಳಿದ್ದೆ, ಆದರೆ ಆಗ ನಿನಗೆ ಕಣ್ಣುಗಳಿರಲ್ಲಿಲ್ಲ. ವೃಕ್ಷವನ್ನು ದೃಷ್ಟಿಸಿಯೂ ಸಹ ನೋಡಲಿಲ್ಲ, ನೀನು ಕೇಳಿಸಿಕೊಂಡೆ, ಹಾಗೇ ಹೊರಟೆ.
ನಾನು ಹೇಳಿದ್ದು, ಇದೇ ವೃಕ್ಷ ಮತ್ತು ನಾನೇ ಆತ. ನಿನ್ನ ಗೊಂದಲದ ಕಾರಣ ನಾನಿಲ್ಲಿ ಮೂವತ್ತು ವರ್ಷಗಳ ಕಾಲ ಇರ ಬೇಕಾಯಿತು. ಒಂದಲ್ಲ ಒಂದು ದಿನ ಇಲ್ಲಿಗೆ ಬಂದೇ ಬರುವೆ ಎಂದು ನನಗೆ ಅಂದೇ ತಿಳಿದಿತ್ತು’. ತನ್ನ ದಡ್ಡತನಕ್ಕೆ ಅವನಿಗೆ ತನ್ನ ಬಗ್ಗೆಯೆ ಬೇಸರವಾಯಿತು. ತಕ್ಷಣವೇ ಎಚ್ಚೆತ್ತು ಕೊಂಡು, ಸದ್ಗುರುಗಳ ಪಾದವನ್ನು ಹಿಡಿದು, ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡ.
ಸದ್ಗುರುವಿನೊಂದಿಗಿನ ಭೇಟಿಯು ಮರಳು ಗಾಡಿನಲ್ಲಿ ಹೂ ಅರಳಿದಂತೆಯೂ, ಬಂಡೆ ಸೀಳಿ ನೀರಿನ ಝರಿ ಚಿಮ್ಮಿದಂತಹ ಅನುಭವ ಅವನಿಗಾಯಿತು. ಇದು ಒಂದು ನಿದರ್ಶನವಷ್ಟೇ. ನಮಗೆ ಜೀವನ ದಲ್ಲಿ ಸರಿಯಾದ ಗುರು ಗುರಿ ಕಾಣಲು ನಮ್ಮ ಮನಸ್ಸಿನ ಪರಿಪಕ್ವತೆ, ಬದುಕಿನ ದೃಷ್ಟಿಕೋನ, ಸಮಚಿತ್ತ, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮೊಳಗೆ ನಾವು ಆತ್ಮಶೋಧನೆ ಮಾಡಲು ತಿಳಿದಿರಬೇಕು. ಆಗಲೇ ನಮಗೆ ಏನು ಬೇಕು? ನಾವು ಏನನ್ನು ಹುಡುಕುತ್ತಿದ್ದೇವೆ? ಎನ್ನುವ ವಸ್ತುಸ್ಥಿತಿ ನಮಗೆ ಅರ್ಥವಾಗುತ್ತಾ ಹೋಗುತ್ತದೆ.
ನಾವು ನಮಗೆ ಅರ್ಥವಾಗುವವರೆಗೆ, ನಮ್ಮೊಳಗೆ ನಮಗೆ ನಡೆದು ಹೋಗಲು ಸಾಧ್ಯವಾಗುವವರೆಗೆ ಹೊರಗಿನ ಪ್ರಪಂಚ ಮತ್ತದರ ಗುಣ ವಿಶೇಷಗಳು ನಮ್ಮನ್ನು ಸ್ಪರ್ಶಿಸುವುದಿಲ್ಲ. ಮತ್ತೊಬ್ಬ ರಲ್ಲಿರುವ ವಿಶೇಷ ಗುಣಗಳು ನಮಗೆ ಅರಿವಾಗ ಬೇಕೆಂದರೆ, ನಾವು ನಮ್ಮನ್ನು ಮೊದಲು ಅರಿತಿರ ಬೇಕು. ನಮ್ಮೊಳಗೆ ಒಂದು ಜಾಗೃತಿ ಮೂಡಿದ್ದಾಗ, ಮತ್ತೊಬ್ಬರಲ್ಲಿರುವ ವೈಶಿಷ್ಟ್ಯವನ್ನು ಗುರುತಿ ಸಲು ನಮಗೆ ಸಾಧ್ಯವಾಗುತ್ತದೆ.
ಕೆಲವೊಮ್ಮೆ ಕೆಲವರಿಗೆ ಯಶಸ್ಸು ಬಹಳ ಬೇಗ ದಕ್ಕಿ ಬಿಡುತ್ತದೆ. ಇಂದಿನ ಪ್ರಪಂಚದ ಲೆಕ್ಕದಲ್ಲಿ ಯಶಸ್ಸು ಎಂದರೆ ಚೆನ್ನಾಗಿ ದುಡಿಯುವ ಮಾರ್ಗ. ಆದರೆ ಅಷ್ಟೆಲ್ಲಾ ಹಣ ಗಳಿಸಿಯೂ ಕೂಡ ಅದನ್ನು ಉಳಿಸಿಕೊಳ್ಳುವ ಅದನ್ನು ಸದ್ವಿನಿಯೋಗ ಮಾಡುವ, ಸಮತೆ ಅವರಲ್ಲಿ ಇಲ್ಲವಾಗುತ್ತದೆ. ಅದಾದ ಒಂದಷ್ಟು ವರ್ಷದಲ್ಲಿ ಮಾನಸಿಕವಾಗಿ ದೈಹಿಕವಾಗಿ ಅವರು ಅಧೋಗತಿಗೆ ಇಳಿಯಲು ಪ್ರಾರಂಭಿಸುತ್ತಾರೆ.
ಇದಕ್ಕೆಲ್ಲಾ ಕಾರಣ ಅವರಿಗೆ ಇರಬೇಕಾದ ಮಾನಸಿಕ ಪರಿಪಕ್ವತೆ. ಗುರು ಒಬ್ಬರು ಅವರನ್ನು ಒಳಗಿ ನಿಂದ ಸದೃಢವಾಗಿಸಿದಾಗ ಅವರಿಗೆ ಜೀವನವನ್ನು ಸಮಚಿತ್ತದಿಂದ ಹೇಗೆ ಸ್ವೀಕರಿಸಬೇಕು ಎನ್ನುವ ಸೂಕ್ಷ್ಮ ಅರಿವಾಗುತ್ತಾ ಹೋಗುತ್ತದೆ ಹಾಗೂ ಯಾರಾದರೂ ಆಗಿರ ಬಹುದು, ತಂದೆ-ತಾಯಿ , ಸ್ನೇಹಿ ತರು, ಗುರು ಸಮಾನರು.. ಅವರನ್ನ ಗುರುತಿಸಿ ಗೌರವಿಸುವ ಸಂಸ್ಕಾರವಿರಬೇಕು ಅಷ್ಟೇ.