Janamejaya Umarji Column: ಶೂ ಪುರಾಣದಲ್ಲಿ ಬಯಲಾದ ಕಮ್ಯುನಿಷ್ಟರ ಹಿಪೊಕ್ರಿಸಿ
ಶಿಷ್ಟಾಚಾರ ಮತ್ತು ಭಿನ್ನಾಭಿಪ್ರಾಯ ಎರಡೂ ಒಟ್ಟಾಗಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಬಲವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಜಾತಿ ಇನ್ನೂ ಪ್ರಭಾವಶಾಲಿ ಅಂಶವಾಗಿದೆ. ಸಾಂಪ್ರದಾಯಿಕವಾಗಿ, ಮಾರ್ಕ್ಸ್‌ವಾದವು ವರ್ಗ ಹೋರಾಟದ ಬಗ್ಗೆ ಮಾತನಾಡುತ್ತಿತ್ತು. ಅದು ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ ಹೋರಾಟ. ಆದರೆ ಭಾರತದಲ್ಲಿ ಇದು ನಡೆಯಲು ವಿಫಲವಾದಾಗ, ಅದೇ ಸಿದ್ಧಾಂತವು ‘ಜಾತಿ ಹೋರಾಟ’ವಾಗಿ ಬದಲಾಯಿತು.

-

ಪಾದುಕಾ ಪುರಾಣ
ಜನಮೇಜಯ ಉಮರ್ಜಿ
ಮಾರ್ಕ್ಸ್‌ವಾದಿಗಳು ರಾಕೇಶ್‌ರ ಕೃತ್ಯವನ್ನು ಜಾತಿಗೆ ಮತ್ತು ಧಾರ್ಮಿಕ ವ್ಯಾಖ್ಯಾನಗಳಿಗೆ ಉದ್ದೇಶ ಪೂರ್ವಕವಾಗಿ ತಿರುಚಿzರೆ; ಏಕೆಂದರೆ ಸಾರ್ವಜನಿಕ ಭಾವನೆಗಳ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವರಿಗೆ ಇದೊಂದೇ ದಾರಿ. ವಿಪರ್ಯಾಸವೆಂದರೆ ಅವರು ಶುದ್ಧ ಭಾವನಾತ್ಮಕ ಕುತಂತ್ರ ಮತ್ತು ಬಲಿಪಶು ರಾಜಕೀಯದ ಮೂಲಕ ಕಾರ್ಯನಿರ್ವಹಿಸುತ್ತಾರೆ.
ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ನಡೆದ ಪ್ರಯತ್ನ ಯಾವುದೇ ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಇದು ಅಸಹ್ಯಕರ ಮತ್ತು ಅತ್ಯಂತ ಖಂಡನೀಯ. ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಹಲವು ಸಾಂವಿಧಾನಿಕ ಮಾರ್ಗಗಳಿವೆ. ಆದರೆ ಸಾಂವಿಧಾನಿಕ ಸಂಸ್ಥೆಗಳ ಗೌರವವನ್ನು ಹಾಳುಮಾಡುವ ಇಂಥ ಕೃತ್ಯಗಳು ಪ್ರಜಾಪ್ರಭುತ್ವವನ್ನು ಬಲಪಡಿಸುವುದಿಲ್ಲ, ಬದಲಾಗಿ ದುರ್ಬಲಗೊಳಿಸುತ್ತವೆ.
ಮುಖ್ಯ ನ್ಯಾಯಮೂರ್ತಿಗಳು ಈ ಘಟನೆಯಲ್ಲಿ ನಡೆದುಕೊಂಡ ಬಗೆ, ತೋರಿದ ಸಂಯಮ ಮತ್ತು ಅವರ ಕ್ಷಮಾಗುಣ ದೇಶಾದ್ಯಂತ ಮೆಚ್ಚುಗೆ ಪಡೆದಿವೆ. ಅವರ ನಡೆಯು, ಕಾನೂನಿನ ಗಟ್ಟಿತನ ಮತ್ತು ಸಂವಿಧಾನಾತ್ಮಕ ಹುದ್ದೆಗಳ ಮೇಲಿನ ಗೌರವ ಮತ್ತು ವಿಶ್ವಾಸವನ್ನು ಇನ್ನೂ ಹೆಚ್ಚಿಸಿದೆ.
ಈ ರೀತಿಯ ಸಂಯಮದ ಧೋರಣೆ ಇಂದಿನ ಧ್ರುವೀಕೃತ ಕಾಲದಲ್ಲಿ ಮಾದರಿಯಾಗಬೇಕು, ಏಕೆಂದರೆ ಅತಿಯಾದ ಅರ್ಥೈಸುವಿಕೆಗಳು ಜನರನ್ನು ವಿಭಜಿಸುತ್ತವೆ. ಇದು ಅಲ್ಲಿಗೇ ಮುಗಿಯು ತ್ತಿತ್ತೇನೋ? ಆದರೆ ಮುಖ್ಯನ್ಯಾಯಮೂರ್ತಿಗಳತ್ತ ಶೂ ಎಸೆಯಲು ಪ್ರಯತ್ನಿಸಿದ ಹಿರಿಯ ನಾಗರಿಕ ರಾಕೇಶ್, ತಾವು ಸನಾತನ ಧರ್ಮಕ್ಕೆ ಆಗುವ ಅವಮಾನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೂಗುತ್ತ ಹೊರನಡೆದರು.
ಇವರು ಖಜುರಾಹೋ ದೇವಸ್ಥಾನದ ಪರ ಅರ್ಜಿದಾರರೂ ಆಗಿರಲಿಲ್ಲ ಅಥವಾ ಅದಕ್ಕೆ ಸಂಬಂಧ ಪಟ್ಟ ಯಾವುದೇ ಸಂಘ-ಸಂಸ್ಥೆಯನ್ನು ಪ್ರತಿನಿಧಿಸುತ್ತಲೂ ಇರಲಿಲ್ಲ. ಈ ಘಟನೆಯು ಸ್ಪಷ್ಟವಾಗಿ ಶಿಷ್ಟಾಚಾರದ ಉಲ್ಲಂಘನೆ ಮತ್ತು ವೈಯಕ್ತಿಕ ಮಟ್ಟದ್ದು. ಇದನ್ನು ಸಾಂಸ್ಥೀಕರಣ ಗೊಳಿಸಿ ಬಳಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Janamejaya Umarji Column: ಬಸವ ಸಂಸ್ಕೃತಿ ಅಭಿಯಾನ: ಪ್ರಚಾರವೋ ವಿಭಜನೆಯೋ ?
‘ರಷ್ಯಾ-ಚೀನಾ, ಅಷ್ಟೇ ಏಕೆ ಇತ್ತೀಚೆಗೆ ಬಾಂಗ್ಲಾ-ನೇಪಾಳದಲ್ಲಿ ನಡೆದಂತೆ ಭಾರತದಲ್ಲಿಯೂ ಕ್ರಾಂತಿಯಾಗುತ್ತದೆ; ಹಾಗಾಗುವುದರಿಂದ ಮಾತ್ರ ಅಧಿಕಾರ ಹಿಡಿಯಬಹುದು’ ಎಂಬ ಭ್ರಮೆಯಲ್ಲಿರುವ ಕೆಲ ವಿಭಜಕ ಶಕ್ತಿಗಳು, ರಾಜಕೀಯ ಪಕ್ಷಗಳು ಈ ಘಟನೆಯನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಈ ದೇಶದ ಬಹುಸಂಖ್ಯಾತ ಸಮಾಜದ ತಲೆಗೆ ಅದನ್ನು ಕಟ್ಟಲು ಪ್ರಯತ್ನಿಸಿವೆ.
ವಿಪರ್ಯಾಸ ಏನೆಂದರೆ ರಾಕೇಶ್ ಕಿಶೋರ್ ಯಾರು? ಅವರ ಹಿನ್ನೆಲೆ ಏನು? ಉದ್ದೇಶ ಏನು? ಎಂಬುದನ್ನು ತಿಳಿಯುವ ಮೊದಲೇ ಈ ‘ಕಥಾನಕದ ಕಾರ್ಖಾನೆ’ಗಳು ‘ಮನುವಾದ’ ಎಂದೆ ಕಥೋತ್ಪಾದನೆ ಶುರುವಿಟ್ಟುಕೊಂಡವು. ಪ್ರಸಂಗದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಜಾತಿಯನ್ನೂ ಎಳೆದುತರಲಾಯಿತು.
ಖಜುರಾಹೋ ದೇವಸ್ಥಾನದ ತೀರ್ಪಿನಲ್ಲಿ (ರಿಟ್ ಪಿಟಿಷನ್(ಸಿವಿಲ್) ಡೈರಿ ನಂ: 32820/2025) ‘ರಾಷ್ಟ್ರೀಯ ಪುರಾತತ್ವ ಇಲಾಖೆಗೆ ಅರ್ಜಿ ಹಾಕಿ’ ಎಂದು ಹೇಳಿ ಕೇಸು ವಜಾ ಮಾಡುವುದು ನ್ಯಾಯಪೀಠದ ಪರಮಾಧಿಕಾರ. ಅದನ್ನು ಒಪ್ಪಲೇಬೇಕು. ನ್ಯಾಯಪೀಠವು ಮುಂದುವರಿದು, ‘ಮೌಖಿಕವಾಗಿ ನಿಮಗೆ ನ್ಯಾಯ ಬೇಕಾದರೆ ನಿಮ್ಮ ದೇವರಾದ ವಿಷ್ಣುವನ್ನೇ ಹೋಗಿ ಕೇಳಿರಿ, ವಿಷ್ಣುಭಕ್ತರಾದ ನಿಮಗೆ ಶಿವನ ಮೇಲೆ ದ್ವೇಷ ಇಲ್ಲ ಎಂದಾದರೆ ಶಿವನ ಬಳಿ ಹೋಗಿ ಕೇಳಿರಿ’ ಎಂದಿತು ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿವೆ.
ಇದು ಸತ್ಯವೇ ಆಗಿದ್ದರೆ ಇದು ಧಾರ್ಮಿಕ ಭಾವನೆಗಳನ್ನು ಘಾಸಿ ಮಾಡಿದಂತೆ ಅಲ್ಲವೇ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುತ್ತವೆ. ಹೇಗೆ ನೋಡಿದರೂ ರಾಕೇಶ್ ಕಿಶೋರ್ ಮಾಡಿದ್ದು ಅಕ್ಷಮ್ಯ. ಕಾನೂನು ಅದರ ಕೆಲಸ ಮಾಡಬಹುದು. ವಿಷಯ ಇದ್ಯಾವುದೂ ಅಲ್ಲ. ಇದೇ ಘಟನೆಯಲ್ಲಿ ಕಮ್ಯುನಿಸ್ಟರ ಹಿಪೊಕ್ರಿಸಿ ಬಯಲಾಗಿದ್ದೇ ರೋಚಕ. ನ್ಯಾಯಮೂರ್ತಿಗಳ ಜಾತಿಯ ಕಾರಣಕ್ಕೆ ಹೀಗೆ ಆಗಿದೆ. ಮನುಸ್ಮೃತಿಯನ್ನು ಜಾರಿಗೊಳಿಸುವ ಪ್ರಯತ್ನ ಇದು ಎಂದು ಮೈಲೇಜು ತೆಗೆದುಕೊಳ್ಳಲು ಒಂದಿಷ್ಟು ಜನ ಪ್ರಯತ್ನಿಸಿದರು.

ನಾಸ್ತಿಕ ಕಾಮ್ರೇಡ್ ಕುಂಕುಮಧಾರಿಗಳೆಲ್ಲ ಬಂದು ಪುಂಖಾನುಪುಂಖವಾಗಿ ಮಾತನಾಡ ತೊಡಗಿದರು. ರಾಕೇಶ್ ಕಿಶೋರ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಜಾತಿಯನ್ನು ಹೇಳುವವರೆಗೆ ಈ ವಾದಕ್ಕೆ ಬೆಲೆಯೂ ಇತ್ತು. ಈ ಗಾಳಿಗೋಪುರ ಬಿದ್ದೂ ಹೋಯಿತು. ನಂತರ, ರಾಕೇಶ್ ಕಿಶೋರ್‌ರ ತಲೆ ಕೆಡಿಸಲಾಗಿದೆ. ಅವರಿಗೆ ಮನುವಾದದ ರುಚಿ ಹತ್ತಿಸಲಾಗಿದೆ ಎಂದು ಥೇಟು ಪರೀಕ್ಷೆ ಮಾಡಿದ ವೈದ್ಯರ ಶೈಲಿಯಲ್ಲಿ ಇದೇ ಕಮ್ಯುನಿಸ್ಟರು ತಿರುವು ತೆಗೆದುಕೊಂಡರು.
ಆದರೆ ಕೃತಕ ಪ್ರವಾಹದ ತೀವ್ರತೆ ಇಳಿದು ಹೋಗಿದೆ ಮತ್ತು ಇವರು ಅಂದುಕೊಂಡ ಹುಸಿ ಕ್ರಾಂತಿ ಕಿಡಿ ಕರಕಲಾಗಿದೆ. ಹಿಪೊಕ್ರಿಸಿಯೂ ಬಯಲಾಗಿದೆ. ಮನುಸ್ಮೃತಿ ಎಂದಿಗೂ ಸಂವಿಧಾನ ವಾಗಿರ ಲಿಲ್ಲ. ಹಲವು ಸ್ಮೃತಿಗಳಂತೆ ಇದು ಎಂದೋ ಬರೆದ, ಯಾರೂ ಅನುಸರಿಸದ ಒಂದು ಪುಸ್ತಕವಾಗಿ ತ್ತಷ್ಟೇ.
ಅದು ಸಂವಿಧಾನ ಆಗಿತ್ತು ಎನ್ನುವುದು ಬ್ರಿಟಿಷರ ಸೃಷ್ಟಿ ಅಷ್ಟೇ. ವಸಹಾತುಶಾಹಿಗಳ ಸೃಷ್ಟಿಯನ್ನು ಕಮ್ಯುನಿಸ್ಟರು ಭಾರತದ ಮಟ್ಟಿಗೆ ದೃಷ್ಟಿ ಮಾಡಿಕೊಂಡಿದ್ದಾರೆ. ಏನೇ ಘಟನೆ ನಡೆದರೂ ಮನುಸ್ಮೃತಿಗೆ ಹಚ್ಚುತ್ತಾರೆ. ಒಳ್ಳೆಯ ಮಾರ್ಗವೆಂದರೆ ಕೃತ್ಯವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ, ಶಾಂತ ಪ್ರತಿಭಟನೆಯ ಹಕ್ಕನ್ನು ಮತ್ತು ಸಂಸ್ಥೆಗಳ ಗೌರವವನ್ನು ಕಾಯ್ದುಕೊಳ್ಳುವ ಕರ್ತವ್ಯವನ್ನು ಸಮಾನವಾಗಿ ರಕ್ಷಿಸುವುದು.
ಶಿಷ್ಟಾಚಾರ ಮತ್ತು ಭಿನ್ನಾಭಿಪ್ರಾಯ ಎರಡೂ ಒಟ್ಟಾಗಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಬಲವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಜಾತಿ ಇನ್ನೂ ಪ್ರಭಾವಶಾಲಿ ಅಂಶವಾಗಿದೆ. ಸಾಂಪ್ರದಾಯಿಕವಾಗಿ, ಮಾರ್ಕ್ಸ್‌ವಾದವು ವರ್ಗ ಹೋರಾಟದ ಬಗ್ಗೆ ಮಾತನಾಡುತ್ತಿತ್ತು. ಅದು ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ ಹೋರಾಟ. ಆದರೆ ಭಾರತದಲ್ಲಿ ಇದು ನಡೆಯಲು ವಿಫಲವಾದಾಗ, ಅದೇ ಸಿದ್ಧಾಂತವು ‘ಜಾತಿ ಹೋರಾಟ’ವಾಗಿ ಬದಲಾಯಿತು.
ಎಡಪಂಥೀಯ ಬುದ್ಧಿಜೀವಿ ವಲಯಗಳು ಮತ್ತು ಅದರ ಶೈಕ್ಷಣಿಕ ವಿಭಾಗಗಳು ಈಗ ಜಾತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತವೆ. ಇದು ಸಮಾನತೆಯನ್ನು ತರಲು ಅಲ್ಲ ಬದಲಾಗಿ ನೀತಿ ನಿರೂಪಣೆಯನ್ನು ನಿಯಂತ್ರಿಸಲು. ಜಾತ್ಯತೀತ ಎಂದು ಕರೆದುಕೊಳ್ಳುವ ಸಮಾಜವಾದಿ ಮುಖದ ಮಾರ್ಕ್ಸ್‌ವಾದಿ/ಮಾವೋವಾದಿ ಚಿಂತಕರು ಪ್ರತಿ ಘಟನೆಗೆ ‘ಜಾತಿಯ ದೃಷ್ಟಿಕೋನ’ ನೀಡುತ್ತಾರೆ.
ಅವರ ಬಹುಪಾಲು ಹೋರಾಟಗಳು ಜಾತೀಯ ಹೋರಾಟಗಳೇ ಆಗಿವೆ. ವೈಯಕ್ತಿಕ ತಪ್ಪುಗಳನ್ನು ಸಮುದಾಯದ ದೋಷವೆಂದು ತೋರಿಸಲು ಇನ್ನಿಲ್ಲದಂತೆ ಹೆಣಗುತ್ತಾರೆ ಮತ್ತು ಸಂಘಟಿತ ಪ್ರಯತ್ನ ಮಾಡುತ್ತಾರೆ. ‘ಅವರು ವರ್ಸಸ್ ಇವರು’ ಎನ್ನುವ ವೈಮನಸ್ಸನ್ನು ಹುಟ್ಟಿಸಲು ಪ್ರಯತ್ನ ಮಾಡುತ್ತಾರೆ.
ಜಾತಿಯ ಅಸಮಾನತೆಗಳು ಇಲ್ಲವೇ ಇಲ್ಲ ಎನ್ನುವುದು ಹಾಸ್ಯಾಸ್ಪದವಾಗುತ್ತದೆ. ಅಂತೆಯೇ ಪ್ರತಿ ಘಟನೆಯನ್ನು ನಿಶ್ಚಿತ ಕಥಾನಕಕ್ಕೆ ಹೊಂದಿಸುವುದೂ ಆತ್ಮವಂಚನೆಯೇ. ಕಮ್ಯುನಿಸ್ಟರು ಆತ್ಮ ವನ್ನು ನಂಬುವುದಿಲ್ಲ, ಹೀಗಾಗಿ ಆತ್ಮವಂಚನೆಯ ಬಗ್ಗೆ ಅವರು ವಿಚಾರವನ್ನು ಸಹ ಮಾಡುವು ದಿಲ್ಲ ಎನಿಸುತ್ತದೆ.
ವಿಮರ್ಶೆಯು ಪ್ರಾಮಾಣಿಕತೆ ಮತ್ತು ದೃಢವಾದ ಸಾಕ್ಷಿಗಳ ಮೇಲೆ ನಿಂತಿರಬೇಕು. ಸಮುದಾಯಗಳ ವಿರುದ್ಧ ಆರೋಪ ಅಥವಾ ಧಾರ್ಮಿಕ ಪರಂಪರೆಗಳ ವಿರುದ್ಧ ಸಾಮಾನ್ಯೀಕರಣ ಮಾಡದಂತಿರ ಬೇಕು. ನಿಖರವಾದ ಭಾಷೆ ಮತ್ತು ವಿನಯಪೂರ್ಣ ವಿಶ್ಲೇಷಣೆಯು ಸಮುದಾಯಗಳ ನಡುವಿನ ವೈಷಮ್ಯವನ್ನು ತಡೆಯುತ್ತವೆ.
ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲಿ ಯಾವ ಜಾತಿಯ ವ್ಯಕ್ತಿ ಕುಳಿತಿದ್ದರೂ ಇಂಥ ದುರ್ಘಟನೆ ನಡೆದಿದ್ದರೂ ಅದು ಸರ್ವೋಪರಿ ಸಾಂವಿಧಾನಿಕ ಹುzಗೆ ಮಾಡಿದ ಅವಮಾನವಲ್ಲವೇ? ಸಾರ್ವಜನಿಕ ಚರ್ಚೆಯನ್ನು ಹೊಣೆಗಾರಿಕೆಯ ಬದಲಿಗೆ, ಜಾತಿಯ ಅಸ್ಮಿತೆಯ ರಾಜಕೀಯ ಬಳಸಿ ಮಾಡುವುದು ತರವೇ? ಮಾರ್ಕ್ಸ್‌ವಾದಿಗಳ ಚರ್ಚೆಯು ಸತ್ಯದ ಮೇಲೆ ಅಲ್ಲ, ಕಥನ ರಚನೆಯ ಮೇಲೆ ವೃದ್ಧಿಯಾಗುತ್ತದೆ.
ರಾಕೇಶ್ ಮಾಡಿದ ಈ ವೈಯಕ್ತಿಕ ಕೃತ್ಯವನ್ನು ಜಾತಿಗೆ ಮತ್ತು ಧಾರ್ಮಿಕ ವ್ಯಾಖ್ಯಾನಗಳಿಗೆ ಉದ್ದೇಶ ಪೂರ್ವಕವಾಗಿ ತಿರುಚಿದ್ದಾರೆ, ಏಕೆಂದರೆ ಸಾರ್ವಜನಿಕ ಭಾವನೆಗಳ ಮೇಲೆ ನಿಯಂತ್ರಣವನ್ನು ಉಳಿಸಿಕೊಳ್ಳಲು ಅವರಿಗೆ ಇದೊಂದೇ ದಾರಿ. ವಿಪರ್ಯಾಸವೆಂದರೆ ಅವರು ‘ಕಾರಣ’ ಮತ್ತು ‘ವೈಜ್ಞಾನಿಕ ಮನೋಭಾವ’ವನ್ನು ಪ್ರತಿಪಾದಿಸುತ್ತಾರೆ, ಆದರೆ ಶುದ್ಧ ಭಾವನಾತ್ಮಕ ಕುತಂತ್ರ ಮತ್ತು ಬಲಿಪಶು ರಾಜಕೀಯದ ಮೂಲಕ ಕಾರ್ಯನಿರ್ವಹಿಸುತ್ತಾರೆ.
ಭಾರತದ ಸಾಮಾಜಿಕ ಸೌಹಾರ್ದವು, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತಗಳ ಪರಸ್ಪರ ಗೌರವದ ಮೇಲೆ ನಿಂತಿದೆ. ಹಿಂದೂಧರ್ಮವನ್ನು ಅಪಹಾಸ್ಯಗೊಳಿಸುವ ರೀತಿಯಲ್ಲಿ ಯಾವುದೇ ಘಟನೆಗಳನ್ನು ತಿರುಚಿದಾಗ, ಅದು ಜನರ ನಂಬಿಕೆಯನ್ನು ಹಾಳುಮಾಡುತ್ತದೆ. ಅಧಿಕಾರ ಅಥವಾ ನೀತಿಗಳ ವಿಮರ್ಶೆ ಪ್ರಜಾಪ್ರಭುತ್ವದಲ್ಲಿ ಸಹಜ, ಆದರೆ ಧರ್ಮವನ್ನು ಅವಮಾನಿಸುವುದು ಅಲ್ಲ. ವಿಶೇಷವಾಗಿ ಸಾಮಾಜಿಕ ಮಾಧ್ಯಮದ ಆಕ್ರೋಶ ಚಕ್ರಗಳಲ್ಲಿ, ಅತಿರೇಕವು ನಿಜವೆಂಬ ಭ್ರಮೆ ಸೃಷ್ಟಿಸುವಾಗ ಈ ವ್ಯತ್ಯಾಸವನ್ನು ಪಾಲಿಸುವುದು ಅತಿ ಮುಖ್ಯ.
ಖಜುರಾಹೋ ಕೇವಲ ವಿಶ್ವ ಪರಂಪರೆ ಸ್ಥಳವಲ್ಲ, ಅದು ಭಾರತದ ನಾಗರಿಕತೆಯ ಕಲೆ, ಆಧ್ಯಾತ್ಮಿ ಕತೆ ಮತ್ತು ಇತಿಹಾಸದ ಸಂವಾದದ ಪ್ರತೀಕವಾಗಿದೆ. ಸಾರ್ವಜನಿಕ ವ್ಯಕ್ತಿಗಳು ನ್ಯಾಯಾಂಗದ ಸದಸ್ಯರೂ ಸೇರಿ, ಪವಿತ್ರ ಸ್ಥಳಗಳು ಅಥವಾ ವಿಗ್ರಹಗಳು, ಸಂಕೇತಗಳ ಬಗ್ಗೆ ಮಾತನಾಡುವಾಗ ಜನಮನಕ್ಕೆ ನೋವು ತರದ ಎಚ್ಚರಿಕೆ ವಹಿಸಬೇಕಲ್ಲವೇ? ನಮ್ಮ ಸಂಸ್ಕೃತಿಯ ಪರಂಪರೆ ಸಾಮೂಹಿಕ ವಿಶ್ವಾಸದ ಪ್ರತೀಕವಾಗಿದ್ದು, ಅದನ್ನು ರಕ್ಷಿಸುವುದು ನಮ್ಮ ಸಾಮಾಜಿಕ ಕರ್ತವ್ಯ ನ್ಯಾಯಮೂರ್ತಿಗಳ ಪ್ರಸಂಗವು ನಮಗೆ ಸರಳ ಸತ್ಯವನ್ನು ನೆನಪಿಸುತ್ತದೆ. ಪ್ರತಿಭಟನೆ ಹಕ್ಕು, ಅವಮಾನ ಅಲ್ಲ. ಅವರು ಇದು ಮುಗಿದ ಹೋದ ಅಧ್ಯಾಯವೆಂದೂ ಹೇಳಿದ್ದಾರೆ. ಈ ಘಟನೆಯನ್ನು ಹಿಂದೂಧರ್ಮದ ವಿರುದ್ಧದ ಹೋರಾಟವಾಗಿ ಅಥವಾ ಜಾತಿ ಯುದ್ಧದ ಕಥೆಯಾಗಿ ರೂಪಿಸುವ ಹುನ್ನಾರಗಳ ಬಗ್ಗೆ ಜನರು ಎಚ್ಚರದಿಂದಿರಬೇಕು.
ಹಕ್ಕಿಗಿಂತ ಮೊದಲು ಕರ್ತವ್ಯ, ಅದಕ್ಕಿಂತ ಮೊದಲು ನಾಗರಿಕ ಶಿಷ್ಟಾಚಾರ ಮತ್ತು ಸಂವಿಧಾನಾ ತ್ಮಕ ಹುದ್ದೆಗಳಿಗೆ ಗೌರವ. ನ್ಯಾ.ಗವಾಯಿಯವರ ಕ್ಷಮಾಸ್ವಭಾವ ಮತ್ತು ಶಾಂತ ಪ್ರತಿಕ್ರಿಯೆ ನಮ್ಮೆಲ್ಲರಿಗೂ ಮಾದರಿ. ಪ್ರಚೋದನೆಗೆ ಸಂಯಮದಿಂದ ಪ್ರತಿಕ್ರಿಯಿಸಬೇಕು, ಅಸಮ್ಮತಕ್ಕೆ ನ್ಯಾಯದಿಂದ ಪ್ರತಿಕ್ರಿಯಿಸಬೇಕು. ಧ್ರುವೀಕರಣದ ಕಥಾನಕಗಳಿಂದ ದೂರವಿದ್ದು, ವಾಸ್ತವ, ಸಹಾನುಭೂತಿ ಮತ್ತು ಸಂವಿಧಾನಾತ್ಮಕ ಮೌಲ್ಯಗಳಲ್ಲಿ ನಿಂತು ಸಂಭಾಷಣೆ ನಡೆಸಿದಾಗ ಮಾತ್ರ ನಾವು ವಿಶ್ವಾಸವನ್ನು ಮರುನಿರ್ಮಿಸಬಹುದು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)