Roopa Gururaj Column: ಪಕ್ಷಿಗಳ ಬಣ್ಣದ ಹಿಂದಿನ ರಹಸ್ಯ
ಗುಬ್ಬಿ, ಕಾಗೆ, ಗಿಳಿ, ಮೈನಾ,ನವಿಲು, ಗೂಬೆ, ಎಲ್ಲವು ಗರುಡನ ಜೊತೆ ಒಂದೆಡೆ ಸೇರಿ ಚರ್ಚಿಸಿ ಅವು ಗಣಪತಿಯ ಹತ್ತಿರ ಬಂದವು. ಪಕ್ಷಿಗಳ ಸಮಸ್ಯೆಯನ್ನು ಕೇಳಿದ, ಗಣಪತಿ ಪಕ್ಷಿಗಳಿಗೆ ಹೇಳಿದ, ‘ನಿಮ್ಮ ಸಮಸ್ಯೆ ನನಗೆ ಅರ್ಥವಾಯಿತು. ನಾನು ಬಣ್ಣಗಳನ್ನು ಮಾಡುತ್ತೇನೆ ಹುಣ್ಣಿಮೆ ದಿನ ಎಲ್ಲರೂ ಬನ್ನಿರಿ’ ಎಂದನು.
Source : Vishwavani Daily News Paper
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಬಹಳ ಹಿಂದೆ ಎಲ್ಲ ಪಕ್ಷಿಗಳು ಬಿಳಿ ಬಣ್ಣದಲ್ಲಿ ಇದ್ದವು. ಇದರಿಂದ ಯಾವ ಪಕ್ಷಿ ಯಾವುದು ಎಂದು ತಿಳಿಯುವುದು ಕಷ್ಟವಾಗಿತ್ತು. ಮರದ ಮೇಲೆ ಪಕ್ಷಿಗಳು ಕುಳಿತರೆ ಅವುಗಳ ಬಿಳಿ ಬಣ್ಣದಿಂದಾಗಿ ಬೇಟೆಗಾರನ ಕಣ್ಣಿಗೆ ಬೇಗ ಕಾಣುತ್ತಿತ್ತು ಬೇಟೆಗಾರ ಸುಲಭ ವಾಗಿ ಬೇಟೆಯಾಡುತ್ತಿದ್ದ ಇದರಿಂದ ಪಕ್ಷಿಗಳೆಲ್ಲ ಹೆದರಿದವು.
ಗುಬ್ಬಿ, ಕಾಗೆ, ಗಿಳಿ, ಮೈನಾ, ನವಿಲು, ಗೂಬೆ, ಎಲ್ಲವು ಗರುಡನ ಜೊತೆ ಒಂದೆಡೆ ಸೇರಿ ಚರ್ಚಿಸಿ ಅವು ಗಣಪತಿಯ ಹತ್ತಿರ ಬಂದವು. ಪಕ್ಷಿಗಳ ಸಮಸ್ಯೆಯನ್ನು ಕೇಳಿದ, ಗಣಪತಿ ಪಕ್ಷಿಗಳಿಗೆ ಹೇಳಿದ, ‘ನಿಮ್ಮ ಸಮಸ್ಯೆ ನನಗೆ ಅರ್ಥವಾಯಿತು. ನಾನು ಬಣ್ಣಗಳನ್ನು ಮಾಡು ತ್ತೇನೆ ಹುಣ್ಣಿಮೆ ದಿನ ಎಲ್ಲರೂ ಬನ್ನಿರಿ’ ಎಂದನು.
ಎಲ್ಲ ಪಕ್ಷಿಗಳು ಹುಣ್ಣಿಮೆ ಬರುವುದನ್ನೇ ಕಾದು ಗುಂಪಾಗಿ ಗಣಪತಿಯ ಹತ್ತಿರ ಬಂದವು. ಮೊದಲು ‘ಗಿಳಿ’ ಮುಂದೆ ಬಂದು, ‘ಗಣೇಶ ನನಗೆ ಹಸಿರು ಬಣ್ಣ ಕೊಡು ಏಕೆಂದರೆ ನಾನು ಯಾವಾಗಲೂ ಹಸಿರು ಎಲೆಗಳಿರುವ ಮರದಲ್ಲಿ ಇರುವುದು ಹಾಗೂ ನನ್ನ ಕೊಕ್ಕನ್ನು ಕೆಂಪಗೆ ಮಾಡು ನನಗೆ ಕೆಂಪು ಮೆಣಸಿನ ಕಾಯಿ ನೆಚ್ಚಿನ ಆಹಾರ’ ಎಂದಿತು. ಈಗ ಪುಟ್ಟ ಗುಬ್ಬಚ್ಚಿ ‘ಗಣೇಶ ನಾನು ಯಾವಾಗಲೂ ಮಣ್ಣಿನಲ್ಲಿ ಹುಳಗಳನ್ನು ಹುಡುಕಿ ತಿನ್ನುತ್ತೇನೆ ಮತ್ತು ನನ್ನ ಮನೆ ಪುಟ್ಟ ಪುಟ್ಟ ಕಡ್ಡಿ, ಹುಲ್ಲಿನಿಂದ ಕಟ್ಟಿರುತ್ತೇನೆ ಆದ್ದರಿಂದ ನನಗೆ ಅದೇ ಬಣ್ಣ ಕೊಡು’ ಎಂದಿತು. ಈಗ ಗರುಡ ‘ಗಣೇಶ ನಾನು ಎತ್ತರದ ಪರ್ವತಗಳ ಮೇಲೆ ಹಾರಾ ಡುತ್ತೇನೆ ನನಗೆ ಅಂತಹದೇ ಬಣ್ಣ ಕೊಡು’ ಎಂದಿತು.
ಗರುಡನಿಗೆ ಕಂದು ಮಿಶ್ರ ಕಪ್ಪು ಬಣ್ಣ ಕೊಟ್ಟನು. ನವಿಲು ಬಂದಿತು ಅಲ್ಲಿರುವ ಬಣ್ಣ ಗಳನ್ನೆಲ್ಲ ನೋಡಿ ಎಲ್ಲ ಬಣ್ಣಗಳು ಆಸೆಯಾಯಿತು. ಅದು ಯೋಚಿಸಿ ಹೇಳಿತು. ಗಣೇಶ ‘ನೀನು ಮಾಡಿರುವ ಎಲ್ಲ ಬಣ್ಣಗಳು ನನಗೆ ಇಷ್ಟವಾಗಿದೆ ಎಲ್ಲವನ್ನೂ ಸ್ವಲ್ಪ ಸ್ವಲ್ಪ ನನಗೆ ಕೊಡು’ ಎಂದಿತು. ಗಣೇಶ ಅದರ ಕುತ್ತಿಗೆಗೆ ನೀಲಿ ಬಣ್ಣ, ರೆಕ್ಕೆಗಳಿಗೆ ಹಸಿರು ಮತ್ತು ನೀಲಿ ಬಣ್ಣದ ಮಧ್ಯೆ ಹಳದಿ ಚುಕ್ಕೆಗಳನ್ನು ಇಟ್ಟ.
ಮೇಲಿನ ಪುಚ್ಚಕ್ಕೆ ಹಸಿರು ಮಿಶ್ರಿತ ಬಣ್ಣ ಹಚ್ಚಿದ. ಇಷ್ಟು ಹೊತ್ತಿಗೆ ಬಣ್ಣಗಳೆಲ್ಲ ಮುಗಿದು, ಎಲ್ಲವೂ ಸ್ವಲ್ಪ ಸ್ವಲ್ಪ ಉಳಿದಿತ್ತು. ಆದರೆ ಕಾಗೆ, ಕೋಗಿಲೆ, ಕೊಕ್ಕರೆ, ಬಾತು ಇವು ಬಣ್ಣದ ವಿಚಾರ ಮರೆತು ಹಾಗೆ ಉಳಿದು ಬಿಟ್ಟವು. ಮರದ ಮೇಲಿದ್ದ ಗಿಳಿ ಅವುಗಳನ್ನು ನೋಡಿ, ಅಯ್ಯೋ ನೀವೆಲ್ಲ ಏಕೆ ಬಣ್ಣ ಹಾಕಿಕೊಳ್ಳಲು ಬರಲಿಲ್ಲ. ಆಗಲೇ ಬಣ್ಣಗಳೆಲ್ಲ ಮುಗಿದಿದೆ ಬೇಗ ಬೇಗ ಹೋಗಿ ಎಂದಿತು.
ಕಾಗೆ ಮತ್ತು ಕೋಗಿಲೆ ಓಡಿಬಂದವು. ಸ್ವಲ್ಪ ಮಾತ್ರ ಉಳಿದಿದ್ದ ಬಣ್ಣಗಳನ್ನು ಸೇರಿಸಿ ಯಾವ ಹೊಸಬಣ್ಣ ಬರುತ್ತೋ ಅದನ್ನೇ ನಮಗೆ ಕೊಡು ಎಂದವು. ಆಯಿತು ಎಂದು ಹೇಳಿ ಗಣೇಶ ಮನದಲ್ಲೇ ನಕ್ಕನು. ಏಕೆಂದರೆ ಎಲ್ಲವನ್ನೂ ಸೇರಿಸಿದರೆ ಕಪ್ಪು ಬಣ್ಣ ಬರುತ್ತದೆ. ಅಲ್ಲಿ ಇರುವ ಬಣ್ಣವನ್ನು ಎಲ್ಲ ಸೇರಿಸಿದಾಗ ಕಪ್ಪು ಬಣ್ಣ ಆಯಿತು. ಅದನ್ನೇ, ಕಾಗೆ ಮತ್ತು ಕೋಗಿಲೆಗೆ ಕೊಟ್ಟನು.
ಅವು ಒಂದನ್ನೊಂದು ನೋಡಿಕೊಂಡವು ಎರಡೂ ಕಪ್ಪಗಿದ್ದವು. ಏನು ಮಾಡಲು ಆಗುವು ದಿಲ್ಲ ಎಂದು ತಿಳಿದು ಅಷ್ಟಕ್ಕೆ ಸಂತೋಷಪಟ್ಟು ಹಾರಿಹೋದವು. ಸಮಯಕ್ಕೆ ಸರಿಯಾಗಿ ಹೋಗದ ಕಾಗೆಗಳಿಗೆ ಕಪ್ಪುಬಣ್ಣ ಬಂದಿತು, ಬಾತು ಕೊಕ್ಕರೆಗಳು ಮೊದಲಿದ್ದ ಬಿಳಿಯ ಬಣ್ಣವೇ ಉಳಿದವು.
ಭಗವಂತನ ಬಳಿ ಎಲ್ಲರಿಗೂ ಕೊಡಲು ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ನಾವು ಅವನ ಮೇಲೆ ನಂಬಿಕೆ ಕಳೆದುಕೊಳ್ಳಬಾರದು. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ನಮಗೆ ನೆರವೇರದ ಆಸೆ ಕೂಡ, ವರದಂತೆ ನಮ್ಮ ಜೀವನಕ್ಕೆ ಒದಗಿ ಬರುತ್ತದೆ ಎನ್ನುವು ದಕ್ಕೆ ಕಾಗೆ, ಬಾತುಕೋಳಿಗಳೇ ಸಾಕ್ಷಿ. ಜೀವನದಲ್ಲಿ ದೊರಕಿದ್ದಕ್ಕೆ ಕೃತಾರ್ಥರಾಗಿ ಸಂತೋಷ ಪಡೋಣ.
ಇದನ್ನೂ ಓದಿ: Roopa Gururaj Column: ಚಮತ್ಕಾರ ಮತ್ತು ಆಧ್ಯಾತ್ಮಿಕತೆ