ಗಂಟಾಘೋಷ
ಭಾರತದ ಗ್ರಾಮೀಣ ಬದುಕಿನ ಅತಿ ದೊಡ್ಡ ಸವಾಲು ಯಾವುದು ಎಂದು ಕೇಳಿದರೆ, ಸ್ಥಿರ ಬದುಕಿಗೆ ಬೇಕಾದ ಉಪಸಂಪಾದನೆಯ ಕೊರತೆ. ಉದ್ಯೋಗ ಇಲ್ಲದ ಬಡತನಕ್ಕಿಂತ, ಅನಿಶ್ಚಿತ ಆದಾಯ ಇರುವ ಬದುಕು ಇನ್ನಷ್ಟು ಅಪಾಯಕಾರಿ. ಈ ಸತ್ಯವನ್ನು ಸರಕಾರಗಳು ತಡವಾಗಿ ಒಪ್ಪಿಕೊಂಡಿವೆ. ಅದಕ್ಕೆ ಫಲವಾಗಿ ಹುಟ್ಟಿದ ಯೋಜನೆಯೇ ದೀನದಯಾಳ್ ಅಂತ್ಯೋದಯ ಯೋಜನಾ -ನ್ಯಾಷನಲ್ ರೂರಲ್ ಲೈವ್ಲೀಹುಡ್ ಮಿಷನ್ ( DAY-NRLM ).
ಈ ಯೋಜನೆ ಕೇವಲ ಹಣಕಾಸು ನೆರವು ಅಲ್ಲ, ಇದು ಗ್ರಾಮೀಣ ಸಮಾಜದ ಆಂತರಿಕ ಶಕ್ತಿಯನ್ನು ಸಂಘಟಿಸುವ ಪ್ರಯತ್ನವಾಗಿದೆ. ಅಂತ್ಯೋದಯ ಯೋಜನೆ ಎಂಬುದು ಸಾಮಾನ್ಯವಾಗಿ, ಸ್ವಸಹಾಯ ಗುಂಪು ಎಂದು ಕರೆದರೂ, ಸಂಸ್ಥೆಗಳನ್ನು ನಿರ್ಮಾಣ ಕಾರ್ಯ ಮಾಡುವುದಾಗಿದೆ. ದೀನದಯಾಳ್ ಅಂತ್ಯೋದಯವನ್ನು ಹಲವರು ಸ್ವಸಹಾಯ ಗುಂಪುಗಳ ಯೋಜನೆ ಎಂದು ಸೀಮಿತಗೊಳಿಸುತ್ತಾರೆ.
ಆದರೆ ವಾಸ್ತವದಲ್ಲಿ ಇದು ಗ್ರಾಮೀಣ ಸಮಾಜದ ಆಂತರಿಕ ಶಕ್ತಿಯನ್ನು ಸಂಘಟಿಸುವ ಆರ್ಥಿಕ-ಸಾಮಾಜಿಕ ಚಳುವಳಿ. ಉಳಿತಾಯ, ಸಾಲ, ಬ್ಯಾಂಕ್ ಲಿಂಕೇಜ್, ಉದ್ಯಮ - ಇವೆಲ್ಲ ಹಣಕಾಸಿನ ಹಂತಗಳಷ್ಟೇ ಅಲ್ಲ; ಮಹಿಳೆಯರ ನಾಯಕತ್ವ, ನಿರ್ಧಾರಶಕ್ತಿ ಮತ್ತು ಗೌರವದ ಹಂತಗಳೂ ಹೌದು.
ಬಡತನದ ದೌರ್ಬಲ್ಯದಿಂದ ಆರ್ಥಿಕ ಶಕ್ತಿವಂತರನ್ನಾಗಿಸುವುದು, ಒಂಟಿ ವ್ಯಕ್ತಿಗಿಂತ ಗುಂಪು ಬಲಿಷ್ಠ ಮತ್ತು ಸಾಲ ಸಹಾಯವಲ್ಲ- ಸಾಧನ ಎಂಬ ಯೋಜನೆಯ ಮೂರು ಮೂಲ ತತ್ವಗಳನ್ನು ಒಳಗೊಂಡಿದ್ದು, ಕೇಂದ್ರ ಮಟ್ಟದ ಮಿನಿಸ್ಟ್ರಿ ಆಫ್ ರೂರಲ್ ಡೆವಲಪ್ಮೆಂಟ್ ಮುನ್ನಡೆಸುತ್ತಿದೆ. ಹೀಗಿದ್ದರೂ, ಈ ಯೋಜನೆಯ ನಿಜವಾದ ಪರೀಕ್ಷೆ ಇರುವುದು ಕೇಂದ್ರದಲ್ಲಿ ಅಲ್ಲ, ಬದಲಾಗಿ ಗ್ರಾಮಗಳ ಅಂಗಳದಲ್ಲಿ ಎಂಬುದನ್ನು ನಾವು ಅರಿಯಬೇಕು.
ಕರ್ನಾಟಕದಲ್ಲಿ ದೀನದಯಾಳ್ ಅಂತ್ಯೋದಯ ಅನುಷ್ಠಾನದ ಹೊಣೆ, ಕರ್ನಾಟಕ ಸ್ಟೇಟ್ ರೂರಲ್ ಲೈವ್ಲೀಹುಡ್ ಮಿಷನ್ (KSRLM) ಮೇಲೆ ವಹಿಸಲಾಗಿದೆ. KSRLM ಒಂದು ಇಲಾಖೆಯಂತ ಲ್ಲದೇ, ಇದು ರಾಜ್ಯ - ಜಿಲ್ಲೆ - ತಾಲ್ಲೂಕು - ಗ್ರಾಮ ಎಂಬ ನಾಲ್ಕು ಹಂತಗಳ ವ್ಯವಸ್ಥೆಯಾಗಿ ರೂಪು ಗೊಂಡಿದ್ದು, ಯೋಜನೆ ಯಶಸ್ವಿಯಾಗಲು ಸಹಕಾರಿಯಾಗಿದೆ.
ಇದನ್ನೂ ಓದಿ: Gururaj Gantihole Column: ವಿಬಿ ಜಿ ರಾಮ್ ಜಿ: ಭಾರತದ ಗ್ರಾಮಾಭಿವೃದ್ಧಿಯ ಬೆನ್ನೆಲುಬು
ಆದರೆ, ಅನುಷ್ಠಾನದಲ್ಲಿ ಶಿಸ್ತು ಕಾಪಾಡಲಾಗಿದೆಯೇ? ಎಂದು ಗಮನಿಸಿದರೆ, ಇನ್ನಷ್ಟು ಕಾಳಜಿ, ಪರಿಶ್ರಮವು ಸ್ಥಳೀಯವಾಗಿಯೂ, ರಾಜ್ಯಮಟ್ಟದಲ್ಲಿಯೂ ಇರಬೇಕಿದೆ ಎಂದು ಅಭಿಪ್ರಾಯಗಳು ಬರುತ್ತಿವೆ. ಸ್ವಸಹಾಯ ಗುಂಪು (Self Help Group) ಎಂದರೆ, ಹತ್ತರಿಂದ - ಹದಿನೈದು ಮಹಿಳೆಯರು ಸೇರಿ ನಡೆಸುವ ಕೇವಲ ಹಣಕಾಸು ಕ್ಲಬ್ ಅಲ್ಲವೆಂಬುದನ್ನು ಮೊದಲು ಅರಿಯಬೇಕಿದೆ.
ಸಾಮಾಜಿಕ ಭದ್ರತೆ, ನಾಯಕತ್ವ ತರಬೇತಿ ಕೇಂದ್ರ, ಕುಟುಂಬ ನಿರ್ಧಾರಗಳ ವೇದಿಕೆಯಾಗಿ ಪರಸ್ಪರ ಸ್ವಾವಲಂಬಿಯಾಗಿ ಬೆಳೆಯಲು ಸಹಕಾರಿ ತತ್ವವಾಗಿದೆ. ಉಳಿತಾಯ - ಆಂತರಿಕ ಸಾಲ-ಬ್ಯಾಂಕ್ ಲಿಂಕೇಜ್- ಉದ್ಯಮ, ಹೀಗೆ ಒಂದು ಉತ್ತಮ ತತ್ವ ಅಂತ್ಯೋದಯ ಯೋಜನೆಯಲ್ಲಿದೆ.
ಅಂತ್ಯೋದಯ ಯೋಜನೆಯ ನೆಲಮಟ್ಟದಲ್ಲಿ ಕಾಣುವ ಸಮಸ್ಯೆ ಏನು? ಎಂದು ಗಮನಿಸಿದರೆ, ಗುಂಪುಗಳಲ್ಲಿ ಸಾಲ ವ್ಯವಸ್ಥೆಯಿದೆ ಆದರೆ, ಉದ್ಯಮ ಇಲ್ಲ. ಈ ವ್ಯವಸ್ಥೆಗೆ ಬ್ಯಾಂಕ್ ವ್ಯವಸ್ಥೆಗಳ ಜೊತೆಗೆ ಲಿಂಕೇಜ್ ಇದ್ದರೂ, ಸ್ಥಳೀಯಮಟ್ಟದಲ್ಲಿ ಅಂದರೆ, ಹಲವಾರು ಗ್ರಾಮ ಪಂಚಾಯ್ತಿಗಳಲ್ಲಿ ಸಾಲದ ಅರ್ಜಿಗಳು ತಡವಾಗುವುದು, ಬ್ಯಾಂಕ್ ಸಿಬ್ಬಂದಿ ಅಸಹಕಾರ, ದಾಖಲೆಗಳ ಗೊಂದಲ ದಿಂದಾಗಿ ಸಮಸ್ಯೆಗಳು ಆರಂಭದ ಉದ್ಭವಿಸುತ್ತಿವೆ.
ಅಂತ್ಯೋದಯ ಯೋಜನೆಯ ಜಾರಿಯಲ್ಲಿ ಪಂಚಾಯ್ತಿಗಳ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಪಂಚಾಯ್ತಿ ಸ್ವಸಹಾಯ ಸಂಘಗಳನ್ನು ಇಲಾಖೆಯ ವಿಷಯ ನಮಗೇಕೆ ಎಂದು ನಿರ್ಲಕ್ಷಿಸಿ ಬಿಟ್ಟರೆ, ಯೋಜನೆ ಸಂಪೂರ್ಣ ಕುಸಿದು ಹೋಗುತ್ತದೆ. ಗ್ರಾಮ ಪಂಚಾಯ್ತಿ ಎಂಬುದು ಈ ಯೋಜನೆಯ ಒಂದು ಅಗೋಚರ ಆಧಾರ ಕಂಬವಾಗಿದೆ.
ವಾಸ್ತವದಲ್ಲಿ, ಪಂಚಾಯ್ತಿ ಸಭೆಗಳಲ್ಲಿ ಎಸ್.ಎಚ್.ಜಿ ಕುರಿತು ಚರ್ಚೆಗಳು ನಡೆಯಲ್ಲ. ಏನಾಗುತ್ತಿದೆ ಎಂಬ ವಿಮರ್ಶೆಯಿಲ್ಲ. ಮುಂದಿನ ನಿರ್ದಿಷ್ಟ ಗುರಿಯಿಲ್ಲ. ಬಹುತೇಕ ಯೋಜನೆಗಳು, ಕಾರ್ಯಗಳು ಸಾಲ ಪಡೆದುಕೊಂಡು ಅನ್ಯಕಾರ್ಯಕ್ಕೆ ಬಳಕೆಯಾಗುವ ಮೂಲಕ, ನಿರ್ದಿಷ್ಟ ಕಾರ್ಯಸೂಚಿ ಯಿಲ್ಲದೆ ಆರಂಭದ ಅಂತ್ಯಗೊಂಡುಬಿಡುತ್ತವೆ.
ಇಂತಹ ಯೋಜನೆಗಳ ಅನುಷ್ಠಾನಕ್ಕೆ ನಮ್ಮ ಕರಾವಳಿಯು, ಅವಕಾಶಗಳ ಭಂಡಾರವೆಂದೇ ಕರೆಯಬಹುದಾಗಿದೆ. ಉಡುಪಿ-ದಕ್ಷಿಣ ಕನ್ನಡ-ಉತ್ತರ ಕನ್ನಡ, ಈ ಮೂರು ಜಿಲ್ಲೆಗಳು ಮೀನು ಗಾರಿಕೆ, ಅರಣ್ಯ ಉತ್ಪನ್ನಗಳು, ಕೃಷಿ, ಪ್ರವಾಸೋದ್ಯಮ, ದೇಗುಲದಂತಹ ಧಾರ್ಮಿಕ ಪ್ರವಾಸೋ ದ್ಯಮ, ಸೇವಾ ಉದ್ಯಮ, ಹೋಟೆಲ್ ಉದ್ಯಮ ಸೇರಿದಂತೆ ವಿಫಲ ಅವಕಾಶಗಳನ್ನು ಹೊಂದಿರುವ ಮೂಲಕ ಇಂತಹ ಯೋಜನೆಗಳನ್ನು ಮನೆಮನೆಗಳಿಗೆ, ಪ್ರತೀ ಪಂಚಾಯ್ತಿ ಮೂಲಕ ಕಡ್ಡಾಯ ವಾಗಿ ಜಾರಿಗೆ ತರುವ ಕಾರ್ಯಯೋಜನೆ ಹಮ್ಮಿಕೊಳ್ಳುವ ಜರೂರತ್ತಿದೆ. ಇದಕ್ಕೆ ಅಗತ್ಯ ವಿರುವ ಉದ್ಯಮಗಳ ಮ್ಯಾಪಿಂಗ್ ಮಾಡಿ, ಸಶಕ್ತವಾಗಿ ಕಾರ್ಯಗೊಳಿಸಬೇಕಾದ ದೃಢನಿರ್ಧಾರ ಸ್ಥಳೀಯ ಮಟ್ಟದಲ್ಲಾಗಬೇಕಿದೆ.
ಇಂತಹ ಉಪಾರ್ಜನೆ ಯೋಜನೆಗಳಿಗೆ ಫೀಲ್ಡ್ ಸ್ಟಾಪ್ ಮುಂಚೂಣಿ ಯೋಧರಾಗಿ ನಿಲ್ಲುತ್ತಾರೆ. ಇವರನ್ನು ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಂಡು, ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯವಾಗಬೇಕಿದೆ. ಸಿಆರ್‌ಪಿ, ಕ್ಲಸ್ಟರ್, ಕೋ-ಆರ್ಡಿನೇಟರ್, ತಾಲೂಕು ಮಟ್ಟದ ಸಿಬ್ಬಂದಿ ಸೇರಿದಂತೆ ಈ ಹಂತದ ಬಹುತೇಕ ನೌಕರರು ನೆಲಮಟ್ಟದ ಯೋಧರು. ಪ್ರಶ್ನಿಸದ ಯೋಜನೆ ಕಾಲಾಂತರದಲ್ಲಿ ಸತ್ತು ಹೋಗುತ್ತದೆ. ರಿವ್ಯೂ ಎಂದರೆ ಕೇವಲ ಪರ್ವ ಪಾಯಿಂಟ್ ಇತ್ಯಾದಿ ಸಾಧನಗಳ ಮೂಲಕ ಮಾಡುವುದಲ್ಲ ಎಂಬುದನ್ನು ಮೊದಲು ಅರಿಯಬೇಕಿದೆ.
ಯಾವ ತಾಲೂಕು ರೆಡ್ ಝೋನ್? ಯಾವ ಗ್ರಾಮ ಪಂಚಾಯ್ತಿ ದುರ್ಬಲ? ಯಾವ ಸ್ವಸಹಾಯ ಸಂಘಗಳು ನಿರ್ಜೀವಗೊಂಡಿದೆ? ಯಾವುದು ಅತ್ಯುತ್ತಮ ಕಾರ್ಯನೀತಿ ಹೊಂದಿದೆ? ಮುಂದಿನ ಆಕ್ಷನ್ ಪಾಯಿಂಟ್ ಏನು? ಎಂಬಿತ್ಯಾದಿ ಪ್ರಶ್ನೆಗಳು ಸಭೆಗಳಲ್ಲಿ ಗಂಭೀರವಾಗಿ ಚರ್ಚೆ ನಡೆದರೆ ಮಾತ್ರ ಅಂತ್ಯೋದಯದಂತಹ ಯೋಜನೆಗಳು ಉಳಿಯಬಲ್ಲದಾಗಿವೆ.
ಮೇಲ್ವಿಚಾರಣೆಯ ಕೊರತೆಯಲ್ಲಿ, ಹೊಣೆಗಾರಿಕೆಯ ಕೊರತೆಯಲ್ಲಿ ಮತ್ತು ನೆಲಮಟ್ಟದ ಶಿಸ್ತು ಕೊರತೆಯಲ್ಲಿ ಸಮಸ್ಯೆಗಳು ಕಂಡುಬರುತ್ತಿವೆ. ಇದನ್ನು ಸರಿಪಡಿಸಲು, ದೀನದಯಾಳ್ ಅಂತ್ಯೋ ದಯ ಯೋಜನೆಯ ಯಶಸ್ಸಿಗೆ ಸ್ವಸಹಾಯ ಗುಂಪುಗಳನ್ನು ಸಾಮಾಜಿಕ ಗುಂಪುಗಳೆಂದು ಒಪ್ಪಿ ಕೊಳ್ಳಬೇಕಿದೆ, ಪಂಚಾಯ್ತಿಗಳನ್ನು ಪಾಲುದಾರರನ್ನಾಗಿ ಮಾಡಬೇಕಿದೆ, ಬ್ಯಾಂಕುಗಳನ್ನು ವ್ಯವಸ್ಥೆ ಯ ಭಾಗವಾಗಿಸಿ, ಫೀಲ್ಡ್ ಸ್ಟಾಫ್ʼಗೆ ಸರಳ ಸಾಧನ ಕೊಡಬೇಕಿದೆ.
ಜೊತೆಗೆ, ಇದೆಲ್ಲದರ ಮೇಲೆ ರಿವ್ಯೂ ಮತ್ತು ಆಕ್ಷನ್ ಆಗುವಂತೆ ನೋಡಿಕೊಂಡಲ್ಲಿ ಇಂತಹ ಯೋಜನೆಗಳು ಜಾರಿಗೊಂಡು ಸದುಪಯೋಗವಾಗಬಲ್ಲವು. ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣದ ಅಗತ್ಯತೆ ತೀವ್ರವಾಗಿ ಕಾಡತೊಡಗಿತು. ಈ ಅಗತ್ಯತೆಗೆ ಉತ್ತರವಾಗಿ ರೂಪುಗೊಂಡ ಪ್ರಮುಖ ಕಾರ್ಯಕ್ರಮಗಳಲ್ಲಿ ದೀನದಯಾಳ್ ಅಂತ್ಯೋದಯ (ದೀನದಯಾಳ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್) ಮತ್ತು ಅದರ ಪ್ರಮುಖ ಅಂಗವಾದ ಸರಸ್ ತರಬೇತಿ ಹಾಗೂ ಮೇಳಗಳು ಮಹತ್ವ ಪಡೆದಿವೆ.
ಸರಸ್ ತರಬೇತಿ ಕೇವಲ ಉದ್ಯೋಗ ಕಲಿಸುವ ಯೋಜನೆಯಲ್ಲ; ಅದು ಸ್ವಾವಲಂಬನೆ, ಆತ್ಮ ವಿಶ್ವಾಸ, ಸಾಮಾಜಿಕ ಗೌರವ ಮತ್ತು ಆರ್ಥಿಕ ಸ್ವತಂತ್ರತೆಯ ಸಂಯೋಜಿತ ಮಾದರಿಯಾಗಿದೆ. ಗ್ರಾಮೀಣ ಮಹಿಳೆಯರ ಕೌಶಲ್ಯಗಳನ್ನು ಗುರುತಿಸುವ ವೇದಿಕೆ, ತರಬೇತಿ ಮತ್ತು ಉತ್ಪಾದನೆಗೆ ಪ್ರೋತ್ಸಾಹ, ಮಾರುಕಟ್ಟೆ ಸಂಪರ್ಕ ಒದಗಿಸುವ ವ್ಯವಸ್ಥೆ, ಸ್ವಸಹಾಯ ಸಂಘಗಳನ್ನು ಉದ್ಯಮ ಗಳಾಗಿ ರೂಪಿಸುವ ಪ್ರಕ್ರಿಯೆಗಳು ಇದರಡಿಯಲ್ಲಿವೆ.
ಸರಸ್ ಕಾರ್ಯಕ್ರಮವು ದೀನದಯಾಳ್ ಅಂತ್ಯೋದಯ ಅಡಿಯಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶನದಲ್ಲಿ ಜಾರಿಯಲ್ಲಿದೆ. ರಾಜ್ಯ ಮಟ್ಟದಲ್ಲಿ SRLM ಗಳ ಮೂಲಕ ಅನುಷ್ಠಾನಗೊಳ್ಳುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳ ಕೊರತೆ ಇದೆ.
ಕೃಷಿಯ ಮೇಲೆ ಅವಲಂಬಿತ ಆದಾಯ ಅನಿಶ್ಚಿತ. ಮಹಿಳೆಯರು ಹೆಚ್ಚಿನ ಸಂದರ್ಭಗಳಲ್ಲಿ ಗೃಹ ಕಾರ್ಯಗಳಿಗೆ ಸೀಮಿತವಾಗಿzರೆ. ಆಹಾರ ತಯಾರಿಕೆ, ಕೈಮಗ್ಗ, ಹೊಲಿಗೆ, ಕರಕುಶಲಗಳಂತಹ ಕೌಶಲ್ಯಗಳನ್ನು ಹೊಂದಿದ್ದರೂ, ಅವುಗಳಿಗೆ ಮಾರುಕಟ್ಟೆ ದೊರೆಯದೇ ಉಳಿಯುತ್ತವೆ. ಇದನ್ನೇ ಒಂದು ಅವಕಾಶವನ್ನಾಗಿ ರೂಪಿಸಿಕೊಳ್ಳುವಂತೆ ಸರಸ್ ತರಬೇತಿ ಸಹಾಯಕ್ಕೆ ಬರುತ್ತದೆ.
ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಸ್ವಸಹಾಯ ಸಂಘಗಳ ಬಲವರ್ಧನೆ, ಸ್ಥಳೀಯ ಕೌಶಲ್ಯಗಳ ಮೌಲ್ಯವರ್ಧನೆ, ಉದ್ಯಮಶೀಲತೆಯ ಉತ್ತೇಜನ, ಸ್ಥಿರ ಆದಾಯದ ಮೂಲ ಸೃಷ್ಟಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಬೆಳೆಸುವುದು ಹಾಗೂ ಗ್ರಾಮೀಣ ಆರ್ಥಿಕತೆಯ ಬಲಪಡಿಸುವಿಕೆಯಂತಹ ತರಬೇತಿ ಕಾರ್ಯಕ್ರಮಗಳು ಇದರಲ್ಲಿವೆ.
ಆಹಾರ ಸಂಸ್ಕರಣೆ (ಮಿಲೆಟ್ ಉತ್ಪನ್ನಗಳು, ಉಪ್ಪಿನಕಾಯಿ, ಸಿಹಿತಿಂಡಿಗಳು), ಕೈಮಗ್ಗ ಮತ್ತು ಜವಳಿ, ಹಸ್ತಶಿಲ್ಪ, ಹೊಲಿಗೆ, ಕಸೂತಿ, ನೈಸರ್ಗಿಕ ಉತ್ಪನ್ನಗಳ ತಯಾರಿಕೆಯಂತಹ ಕೌಶಲ್ಯಾಭಿ ವೃದ್ಧಿ ತರಬೇತಿಗಳ ಜೊತೆಗೆ, ಉದ್ಯಮ ಆರಂಭಿಸುವ ವಿಧಾನ, ವೆಚ್ಚ-ಲಾಭ ವಿಶ್ಲೇಷಣೆ, ವ್ಯವಹಾರ ಯೋಜನೆ, ಅರಿವು ಮುಂತಾದ ಉದ್ಯಮಶೀಲತಾ ತರಬೇತಿಗಳೂ ನಡೆಯುತ್ತವೆ.
ಪ್ಯಾಕೇಜಿಂಗ್ ಮತ್ತು ಬ್ರಾಂಡಿಂಗ್, ಬೆಲೆ ನಿಗದಿ, ಗ್ರಾಹಕ ಸಂಬಂಧ, ಆನ್‌ಲೈನ್ ಮಾರಾಟ ಪರಿಚಯಗಳಂತಹ ಮಾರುಕಟ್ಟೆ ತರಬೇತಿಯೂ ಇದರಲ್ಲಿ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸರಸ್ ಅಡಿಯಲ್ಲಿ ನಡೆಯುವ ಮೇಳಗಳು.
ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ, ಗ್ರಾಹಕರೊಂದಿಗೆ ನೇರ ಸಂಪರ್ಕ, ಮಧ್ಯವರ್ತಿಗಳ ನಿವಾರಣೆ, ಉತ್ಪನ್ನಗಳ ಮೌಲ್ಯವರ್ಧನೆ ಒಳಗೊಂಡು ಆಯಾ ವಲಯಗಳಲ್ಲಿ ಸರಸ್ ಮೇಳಗಳು ನಡೆಯುತ್ತವೆ. ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರಮಟ್ಟದಲ್ಲಿ (ದೆಹಲಿ ಸರಸ್) ಈ ಮೇಳಗಳ ವ್ಯಾಪ್ತಿಯಿದ್ದು, ಇವು ಗ್ರಾಮೀಣ ಮಹಿಳೆಯರಿಗೆ ಮೊದಲ ಬಾರಿಗೆ ರಾಷ್ಟ್ರೀಯ ಮಾರುಕಟ್ಟೆಯ ಅನುಭವ ನೀಡುತ್ತವೆ.
2025ರ ಫೆಬ್ರುವರಿ 24ರಿಂದ ಮಾರ್ಚ್ 5ರವರೆಗೆ ಕಲಬುರಗಿಯ ಜಾತ್ರಾ ಮೈದಾನದಲ್ಲಿ ರಾಷ್ಟ್ರ ಮಟ್ಟದ ಸರಸ್ ಮೇಳವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಗ್ರಾಮೀಣ ಮಹಿಳಾ ಸ್ವ-ಸಹಾಯ ಸಮೂಹಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಆಯೋಜಿಸಲಾಯಿತು.
ಮೇಳದಲ್ಲಿನ ತರಬೇತಿ ಕಾರ್ಯಾಗಾರಗಳು- ಪ್ಯಾಕೇಜಿಂಗ್, ಬ್ರಾಂಡಿಂಗ್, ಮಾರುಕಟ್ಟೆ ಕೌಶಲ್ಯ, ಉತ್ಪನ್ನ ಮೌಲ್ಯವರ್ಧನೆ, ಬ್ಯಾಂಕ್-ಲಿಂಕೇಜ್ ಸೇವೆಗಳ ಕುರಿತು ವಿಶೇಷ ತರಬೇತಿಗಳನ್ನು ಕೂಡ ನಿರ್ವಹಿಸಲಾಯಿತು. ಬೆಂಗಳೂರು, ಬೆಳಗಾವಿಯಲ್ಲಿ ಸರಸ್ ಮೇಳ/ತರಬೇತಿ ಕಾರ್ಯಕ್ರಮಗಳು ನಡೆಸಿರುವ ದಾಖಲೆಗಳಿವೆ.
ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಶೇರ್-ಇ-ಕಾಶ್ಮೀರ ಪಾರ್ಕ್ ನಲ್ಲಿ 2025ರಲ್ಲಿ ನಡೆದ ಸರಸ್ ಮೇಳ ದಲ್ಲಿ ದೇಶದ ವಿವಿಧ ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಕಲಾಕೃತಿ, ಕೈಗಾರಿಕೆ ಸಿದ್ದಾಂತ ಗಳನ್ನು ಪ್ರದರ್ಶಿಸಿದರು. ಉತ್ತರ ಪ್ರದೇಶದ ಇಟಾವಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸ್ಥಳೀಯ ಸರಸ್ ಮೇಳಗಳು ನಡೆದು, ಸ್ವಸಹಾಯ ಸಂಘದ ಸದಸ್ಯರು-ಉತ್ಪನ್ನ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ನಡೆಸಲ್ಪಟ್ಟಿದೆ.
ಸರಸ್ ತರಬೇತಿ ಯಶಸ್ವಿಯಾದರೂ, ನಿರಂತರ ಮಾರುಕಟ್ಟೆ ಲಭ್ಯತೆ ಕೊರತೆ, ಡಿಜಿಟಲ್ eನ ಅಭಾವ, ಗುಣಮಟ್ಟ ನಿರ್ವಹಣೆಯ ಸಮಸ್ಯೆ, ಯುವಜನರ ಕಡಿಮೆ ಭಾಗವಹಿಸುವಿಕೆ, ಲಾಜಿಸ್ಟಿಕ್ಸ್ ಮತ್ತು ಸಂಗ್ರಹ ಸಮಸ್ಯೆಗಳಂತಹ ಕೆಲವು ಸವಾಲುಗಳಿವೆ. ಇವುಗಳನ್ನು ಸಮರ್ಥವಾಗಿ ನಿವಾರಿಸಿ ಮುನ್ನಡೆಯಲು, ಸರಸ್ ತರಬೇತಿಯನ್ನು ಇನ್ನಷ್ಟು ಪರಿಣಾಮಕಾರಿ ಮಾಡಲು, ಇ-ಕಾಮರ್ಸ್ ಪ್ಲಾಟ್ ಫಾರ್ಮ್‌ಗಳೊಂದಿಗೆ ಜೋಡಣೆ, ಸರಸ್ ಎಂಬ ರಾಷ್ಟ್ರೀಯ ಬ್ರಾಂಡ್, ಯುವ ಮಹಿಳೆಯರಿಗೆ ಸ್ಟಾರ್ಟಪ್ ತರಬೇತಿ, ಪಂಚಾಯತ್ ಮಟ್ಟದ ಉತ್ಪಾದನಾ ಕ್ಲಸ್ಟರ್‌ಗಳು, ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದು ಒಂದು ತ್ರಿಕೋನ ತತ್ವ ಯೋಜನೆ ಎನ್ನಬಹುದು. ಮೂರು ಅಂಶಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಎಂಬುದೇ ಇದರ ಅರ್ಥ.
ಮಹಿಳಾ ಸಬಲೀಕರಣ: ಮಹಿಳೆ ಶಕ್ತಿಶಾಲಿಯಾಗಬೇಕು ಎಂದರೆ ಕೇವಲ ಹಣ ಕೊಡೋದು ಸಾಕಾಗಲ್ಲ. ಅವರಿಗೆ ಬೇಕಾಗಿರುವುದು, ಆತ್ಮವಿಶ್ವಾಸ, ನಿರ್ಣಯ ತೆಗೆದುಕೊಳ್ಳುವ ಶಕ್ತಿ, ನಾಯಕತ್ವ, ಸ್ವಂತ ಆದಾಯ, ಸಮಾಜದಲ್ಲಿ ಗೌರವ ದೊರೆಯಬೇಕಾಗಿದೆ.
ಗ್ರಾಮೀಣ ಸ್ವಾವಲಂಬನೆ: ಗ್ರಾಮ ಯಾವಾಗ ಸ್ವಾವಲಂಬಿಯಾಗುತ್ತದೆ? ಅಂದರೆ, ಕೆಲಸಕ್ಕಾಗಿ ನಗರಕ್ಕೆ ಓಡಬೇಕಾಗಿಲ್ಲ. ಬದಲಾಗಿ, ಊರ ಉದ್ಯೋಗ ಸೃಷ್ಟಿಯಾಗಬೇಕು, ಊರ ಆದಾಯ ಬರಬೇಕು, ಊರಿನ ಸಂಪನ್ಮೂಲಗಳನ್ನು ಊರಿಗೇ ಬಳಸಬೇಕು. ಸ್ವಸಹಾಯ ಸಂಘಗಳ ಮೂಲಕ ಉದ್ಯಮಗಳು ಹುಟ್ಟುತ್ತವೆ, ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯ ಬರುತ್ತದೆ ಹಾಗೂ ಹಣ ಗ್ರಾಮದ ಸುತ್ತುತ್ತದೆ.
ಆತ್ಮನಿರ್ಭರ ಭಾರತ: ಆತ್ಮನಿರ್ಭರ ಭಾರತ ಅಂದ್ರೆ, ದೇಶವು ತನ್ನ ಅಗತ್ಯಗಳಿಗೆ ತನ್ನ ಶಕ್ತಿಯ ಉತ್ತರ ಕೊಡುವುದು. ಆದರೆ ದೇಶ ಸ್ವತಂತ್ರವಾಗಬೇಕಾದರೆ ಮೊದಲು, ಕುಟುಂಬ ಸ್ವತಂತ್ರ ವಾಗಬೇಕು, ಗ್ರಾಮ ಸ್ವತಂತ್ರವಾಗಬೇಕು, ಮಹಿಳೆ ಸ್ವತಂತ್ರವಾಗಬೇಕು. ಇದರ ಮೂಲ ಬೇರು ಗ್ರಾಮದ ಇದೆ. ಗ್ರಾಮ ಬಲವಾಗದೆ ದೇಶ ಬಲವಾಗುವುದಿಲ್ಲ. ಈ ಯೋಜನೆ ಸರ್ಕಾರದ ಯೋಜನೆ ಮಾತ್ರವಲ್ಲ, ಇದು ಒಂದು ಸಾಮಾಜಿಕ ಪರಿವರ್ತನೆಯ ಯಂತ್ರ. ಅಂದರೆ, ಇದು ಫಲ, ಸಾಲ, ಸಬ್ಸಿಡಿ, ಫಾರ್ಮ್‌ಗಳ ವಿಷಯ ಅಲ್ಲ. ಇದು, ಮನಸ್ಥಿತಿಯನ್ನು ಬದಲಾಯಿಸುವುದು, ಮಹಿಳೆ ಯನ್ನು ನಾಯಕಿಯನ್ನಾಗಿಸುವುದು, ಗ್ರಾಮವನ್ನು ಉತ್ಪಾದಕ ಶಕ್ತಿಯಾಗಿಸುವುದು, ದೇಶವನ್ನು ಒಳಗಿನಿಂದ ಬಲಪಡಿಸುವುದು.
ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಇದು ಸರಿಯಾದ ಸಂಜೀವಿನಿ. ಸರಿಯಾಗಿ ಮತ್ತು ಸಮರ್ಥ ವಾಗಿ ಜಾರಿಗೆ ತರಬೇಕು. ಎಲ್ಲಾ ಸ್ತರದಲ್ಲಿ ಅವರಿಗೆ ಬೆಂಬಲ ಸಿಕ್ಕಿದರೆ, ಇಂತಹ ಮಹಿಳಾ ಸಂಜೀವಿನಿ ಸಂಘಗಳಂತಹ ಸಮೂಹ ಕಾರ್ಯಕ್ರಮಗಳು ಯಶಸ್ವಿಯಾಗಬಲ್ಲವು.