Mohan Vishwa Column: ಸಾವರ್ಕರ್ ಮತ್ತು ಬೋಸರ ಭಾರತೀಯ ಸೇನೆ
ಶತ್ರುವನ್ನು ತಡೆಗಟ್ಟುವುದು ಹಾಗೂ ಕಟ್ಟಿ ಹಾಕುವುದೇ ಹೊರತು ನಾವು ಸಿಕ್ಕಿಹಾಕಿಕೊಳ್ಳುವುದಲ್ಲ ಎಂಬುದನ್ನು ಸಾವರ್ಕರರು ಸುಭಾಷರಿಗೆ ಅಂದು ಮನವರಿಕೆ ಮಾಡಿಕೊಟ್ಟರು. ಸುಭಾಷರ ಬಳಿ ಸಾವರ್ಕರರು ಸೈನಿಕ ಕ್ರಾಂತಿಯ ಬಗ್ಗೆ ಮಾತನಾಡುವಾಗ, ಮೊದಲನೇ ಮಹಾಯುದ್ಧದಲ್ಲಿ ಭಾರತೀಯ ಕ್ರಾಂತಿಕಾರಿಗಳು ಜರ್ಮನಿಯಲ್ಲಿದ್ದ ಯುದ್ಧಕೈದಿಗಳ ಜತೆಗೂಡಿ ‘ಕ್ರಾಂತಿಸೈನ್ಯ’ ಕಟ್ಟಿದ್ದ ವಿಷಯವನ್ನು ಚರ್ಚಿಸಿದರು.
 
                                -
 ಮೋಹನ್ ವಿಶ್ವ
                            
                                Aug 9, 2025 8:19 AM
                                
                                ಮೋಹನ್ ವಿಶ್ವ
                            
                                Aug 9, 2025 8:19 AM
                            ವೀಕೆಂಡ್ ವಿತ್ ಮೋಹನ್
camohanbn@gmail.com
ಸುಭಾಷ್‌ಚಂದ್ರ ಬೋಸರು ಸ್ಥಾಪಿಸಿದ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯ ಮೂಲ ಕಲ್ಪನೆಯ ಪಿತಾಮಹ ವೀರ ಸಾವರ್ಕರ್. ಹುಟ್ಟಿನಿಂದಲೇ ಕ್ರಾಂತಿಕಾರಿಯಾಗಿದ್ದ ವೀರ ಸಾವರ್ಕರ್ ತಮ್ಮ ಬದುಕಿನ ಕಟ್ಟಕಡೆಯ ಕ್ಷಣದವರೆಗೂ ಭಾರತೀಯತೆಯ ಬಗ್ಗೆ ಸ್ಪಷ್ಟತೆ ಇದ್ದಂಥ ವ್ಯಕ್ತಿ. ಸಾವರ್ಕರ್ ಹಾಗೂ ಸುಭಾಷರು ಹಾಕಿದ ಗಟ್ಟಿಯಾದ ಅಡಿಪಾಯ ದಿಂದಾಗಿಯೇ ಭಾರತೀಯ ಸೇನೆಯಿಂದು ಜಗತ್ತಿನ ಆಕ್ರಮಣಕಾರಿ ಸೇನೆಗಳಲ್ಲಿ ಒಂದೆನಿಸಿ ಕೊಳ್ಳಲು ಸಾಧ್ಯವಾಗಿದೆ.
ಎರಡನೇ ಮಹಾಯುದ್ಧದ ಸಮಯ. ಫ್ರಾನ್ಸ್ ದೇಶವನ್ನು ಜರ್ಮನಿ ಸೋಲಿಸಿತ್ತು. ಅದೇ ಸಮಯದಲ್ಲಿ ಸುಭಾಷ್ ಚಂದ್ರ ಬೋಸರು ಸಾವರ್ಕರರ ಜತೆ ರಾಜಕೀಯವಾಗಿ ಕೆಲವು ವಿಷಯಗಳನ್ನು ಚರ್ಚಿಸಲು ಬಂಗಾಳದಿಂದ ಬಂದಿದ್ದರು. ಅಖಿಲ ಭಾರತ ಮಟ್ಟದ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುವ ವಿಷಯದಲ್ಲಿ ಸಾವರ್ಕರರ ಜತೆಗೆ ವಿಚಾರ ವಿನಿಮಯ ನಡೆಸುವುದು ಸುಭಾಷರ ಉದ್ದೇಶವಾಗಿತ್ತು. ಅದು ದೇಶದಾದ್ಯಂತ ಇದ್ದ ಬ್ರಿಟಿಷರ ಸ್ಮಾರಕ/ಪ್ರತಿಮೆಗಳನ್ನು ಉರುಳಿಸುವ ಯೋಜನೆ ಯಾಗಿದ್ದು, ಸ್ವತಃ ಸುಭಾಷರೇ ಕೋಲ್ಕತಾದಲ್ಲಿ ಪ್ರತಿಮೆಗಳನ್ನು ಉರುಳಿಸುವ ಮೂಲಕ ಚಳವಳಿಗೆ ಚಾಲನೆಯನ್ನು ನೀಡುವವರಿದ್ದರು.
ಸಾವರ್ಕರರ ಬಳಿ ಸುಭಾಷರು ಈ ವಿಷಯ ವನ್ನು ಪ್ರಸ್ತಾಪಿಸಿದಾಗ, “ನಿಮ್ಮಂಥ ಪ್ರತಿಭಾವಂತ ಮುಖಂಡರು ಭಾರತದೊಳಗೆ ಬ್ರಿಟಿಷರ ಪ್ರತಿಮೆಗಳನ್ನು ಉರುಳಿಸುವ ಚಳವಳಿಗಳನ್ನು ಕೈಗೊಂಡು, ನಂತರ ಜೈಲುವಾಸ ಅನುಭವಿಸುವುದರಿಂದ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಬ್ರಿಟಿಷರನ್ನು ರಾಜಕೀಯವಾಗಿ ಮುಗಿಸುವ ಯೋಜನೆಯೊಂದನ್ನು ತಯಾರು ಮಾಡಬೇಕು" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಿಜವಾದ ರಾಜಕಾರಣವೆಂದರೆ, ಶತ್ರುವನ್ನು ತಡೆಗಟ್ಟುವುದು ಹಾಗೂ ಕಟ್ಟಿ ಹಾಕುವುದೇ ಹೊರತು ನಾವು ಸಿಕ್ಕಿಹಾಕಿಕೊಳ್ಳುವುದಲ್ಲ ಎಂಬುದನ್ನು ಸಾವರ್ಕರರು ಸುಭಾಷರಿಗೆ ಅಂದು ಮನವರಿಕೆ ಮಾಡಿಕೊಟ್ಟರು. ಸುಭಾಷರ ಬಳಿ ಸಾವರ್ಕರರು ಸೈನಿಕ ಕ್ರಾಂತಿಯ ಬಗ್ಗೆ ಮಾತನಾಡುವಾಗ, ಮೊದಲನೇ ಮಹಾಯುದ್ಧದಲ್ಲಿ ಭಾರತೀಯ ಕ್ರಾಂತಿಕಾರಿಗಳು ಜರ್ಮನಿಯಲ್ಲಿದ್ದ ಯುದ್ಧಕೈದಿಗಳ ಜತೆಗೂಡಿ ‘ಕ್ರಾಂತಿಸೈನ್ಯ’ ಕಟ್ಟಿದ್ದ ವಿಷಯವನ್ನು ಚರ್ಚಿಸಿದರು.
ಎರಡನೇ ಮಹಾಯುದ್ಧಕ್ಕೆ ಜಪಾನ್ ಪ್ರವೇಶಿಸುವ ಮುನ್ಸೂಚನೆಯನ್ನು ಸಾವರ್ಕರರು ಸುಭಾಷರಿಗೆ ಮೊದಲೇ ಕೊಟ್ಟರು. ಹಾಗೇನಾದರೂ ಆದರೆ, ಪೂರ್ವದಲ್ಲಿ ಚದುರಿ ಹೋಗಿ, ಚೆನ್ನಾಗಿ ತರಬೇತಿ ಪಡೆದಿರುವ ಭಾರತೀಯ ಸೈನಿಕರ ಬಲದಿಂದ ಜರ್ಮನಿ ಹಾಗೂ ಜಪಾನ್ ದೇಶಗಳ ಬೆಂಬಲ ಪಡೆದು ಒಳನುಗ್ಗಿದರೆ ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಬಹುದು.
ಆದ್ದರಿಂದ ಜರ್ಮನಿ ಹಾಗೂ ಇಟಲಿಯಲ್ಲಿರುವ ಭಾರತೀಯ ಯುದ್ಧಕೈದಿಗಳನ್ನು ಸಂಘಟಿಸಿ, ಅವರಿಗೆ ಮಾರ್ಗದರ್ಶಕರಾಗಿ ಎಂಬ ಸಲಹೆಯನ್ನು ಸಾವರ್ಕರರು ಸುಭಾಷರಿಗೆ ನೀಡಿದರು. “ಈ ಮಾದರಿಯ ಪ್ರಚಂಡ ಹೋರಾಟ ನಡೆಯದೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವುದಿಲ್ಲ. ಅಂಥ ಮಹತ್ತರ ಕಾರ್ಯವನ್ನು ನಿಭಾಯಿಸುವ ಎದೆಗಾರಿಕೆ ಇರುವುದು ನಿಮಗೆ ಮಾತ್ರ" ಎಂದು ಸಾವರ್ಕರರು ಸುಭಾಷರಿಗೆ ಅಂದು ಹೇಳಿದ್ದರು.
ಸಾವರ್ಕರರ ಭೇಟಿಯಾದ ಕೆಲವೇ ತಿಂಗಳಲ್ಲಿ ಸುಭಾಷ್‌ಚಂದ್ರ ಬೋಸರು ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಭಾರತದಿಂದ ಅದೃಶ್ಯರಾದರು. ಸುಭಾಷ್‌ಚಂದ್ರ ಬೋಸರು ಜರ್ಮನಿ ಹಾಗೂ ಜಪಾನಿನ ಸಹಾಯದಿಂದ, ‘ಇಂಡಿಯನ್ ನ್ಯಾಷನಲ್ ಆರ್ಮಿ’ಯ ಮೂಲಕ ದಕ್ಷಿಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ವಶಪಡಿಸಿಕೊಂಡರು.
1944ರ ಹೊತ್ತಿಗೆ ಇಂಡಿಯನ್ ನ್ಯಾಷನಲ್ ಆರ್ಮಿಯು ಬರ್ಮಾ ಗಡಿಯಲ್ಲಿ ಬ್ರಿಟಿಷರ ಸೈನ್ಯವನ್ನು ಹಿಮ್ಮೆಟ್ಟಿಸಿ ಮಣಿಪುರವನ್ನು ವಶಪಡಿಸಿಕೊಂಡಿತ್ತು. ಆ ಸಮಯದಲ್ಲಿ ಜವಾಹರಲಾಲ್ ನೆಹರು ಅವರು, “ಸುಭಾಷರು ಅಥವಾ ಅವರ ಸೈನ್ಯ ಭಾರತದೊಳಗೆ ಕಾಲಿಟ್ಟರೆ ಅವರೊಡನೆ ಯುದ್ಧ ಮಾಡಿ ಹಿಂದಕ್ಕೆ ಓಡಿಸಲಾಗು ವುದು" ಎಂದು ಘೋಷಿಸಿದ್ದರು.
ವೀರ ಸಾವರ್ಕರರನ್ನು ‘ಬ್ರಿಟಿಷರ ಏಜೆಂಟ್’ ಎಂದು ಜರಿಯುವ ಕಾಂಗ್ರೆಸ್ಸಿಗರು, ನೆಹರುರನ್ನು ಏನೆಂದು ಕರೆಯುತ್ತಾರೆ? ಬ್ರಿಟಿಷರ ನಿಜವಾದ ಏಜೆಂಟರು ಯಾರಾಗಿದ್ದರು ಎಂಬುದು ನೆಹರುರ ಈ ಮನಸ್ಥಿತಿಯಿಂದ ತಿಳಿಯುತ್ತದೆ. ಇದಾದ ನಂತರ ದುರದೃಷ್ಟವಶಾತ್ ಜರ್ಮನಿ ಹಾಗೂ ಜಪಾನ್ ಯುದ್ಧದಲ್ಲಿ ಸೋತವು, ಸುಭಾಷರು ಅದೃಶ್ಯರಾದರು.
ಸಾವರ್ಕರರು ಶುರುವಿಟ್ಟುಕೊಂಡಿದ್ದ ‘ಸೈನಿಕ ಕ್ರಾಂತಿ’ ಅಲ್ಲಿಗೇ ನಿಲ್ಲಲಿಲ್ಲ. ಇಂಡಿಯನ್ ನ್ಯಾಷನಲ್ ಆರ್ಮಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬ್ರಿಟಿಷ್ ಅಧಿಕಾರಿಗಳು ವಿರೋಧಿಸಿ ದ್ದರು, ಆದರೆ ಜವಾಹರಲಾಲ್ ನೆಹರು ಮಾತ್ರ ವಿರೋಧಿಸಲಿಲ್ಲ. “ಸುಭಾಷರು ಕಟ್ಟಿದ ಸೈನ್ಯದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಬಹಿರಂಗವಾಗಿ ಹೇಳಿದ್ದ ನೆಹರು ಅವರು, ಸುಭಾಷರು ಅದೃಶ್ಯರಾದ ನಂತರ ಕೂಡ ಇಂಡಿಯನ್ ನ್ಯಾಷನಲ್ ಆರ್ಮಿಯ ಪರವಾಗಿ ನಿಲ್ಲಲಿಲ್ಲ. ಸೈನ್ಯ ದಲ್ಲಿದ್ದ ಭಾರತೀಯ ಸೈನಿಕರ ಸಹನೆ ಮೀರಿತ್ತು, ಹೀಗಾಗಿ ಅವರು ಬ್ರಿಟಿಷರ ವಿರುದ್ಧ ಬೀದಿಗಿಳಿ ದರು.
ಸ್ವಾತಂತ್ರ್ಯದ ಕೂಗು ಕಾಡ್ಗಿಚ್ಚಿನಂತೆ ಹರಡಿತು. 1946ರಲ್ಲಿ ಕರಾಚಿಯಲ್ಲಿದ್ದ ವಿಮಾನಪಡೆಯ ಸೈನಿಕರಿಂದ ಆರಂಭವಾದ ಮುಷ್ಕರವು ಮುಂಬೈ, ಲಾಹೋರ್, ದೆಹಲಿಯವರೆಗೂ ಹಬ್ಬಿತು. ಸುಮಾರು 5200 ಸೈನಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದಾದ ನಂತರ, ನೌಕಾದಳದ ಸುಮಾರು 5000 ಸೈನಿಕರು ಮುಷ್ಕರ ಕೈಗೊಂಡರು. ಕೋಲ್ಕತಾ, ಕರಾಚಿ, ಮದ್ರಾಸ್, ರಂಗೂನ್, ಅಂಬಾಲಾ ಹೀಗೆ ಬಹುತೇಕ ಸೈನಿಕ ಕೇಂದ್ರಗಳಲ್ಲಿ ಈ ಮುಷ್ಕರ ಶುರುವಾಗಿತ್ತು. ಬ್ರಿಟಿಷರಿಗೆ ತಮ್ಮ ಪರಿಸ್ಥಿತಿಯ ಅರಿವಾಯಿತು.
ಇನ್ನೂ ತಾವು ಇಲ್ಲಿದ್ದರೆ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರು ತಮ್ಮ ವಿರುದ್ಧ ದೊಡ್ಡ ಯುದ್ಧವನ್ನು ಸಾರಿ, ಭಾರತದಿಂದ ಓಡಿಸಿ ಬಿಡುತ್ತಾರೆ ಎಂಬ ಭಯ ಅವರಿಗೆ ಶುರುವಾಗಿತ್ತು. ‘ನಮಗೆ ರಾಜ್ಯ ಬೇಕಿಲ್ಲ, ನೀವು ಇಲ್ಲೇ ಇರಿ ಎಂದರೂ ಇರುವುದಿಲ್ಲ’ ಎಂದು ಬ್ರಿಟಿಷರು ಹೇಳಿದ್ದರು.
ಅಹಿಂಸೆಯಿಂದ ಮಾತ್ರವೇ ನಾವು ಸ್ವಾತಂತ್ರ್ಯವನ್ನು ಗಳಿಸಿದ್ದು ಎಂಬುದು ದೊಡ್ಡ ಸುಳ್ಳು. ಭಾರತೀಯರನ್ನು ಒಡೆದು ಆಳುವ ನೀತಿಯು ಬ್ರಿಟಿಷರಿಗೆ ತಿಳಿದಿತ್ತು. ಯೋಜನಾಬದ್ಧವಾಗಿ ಕ್ರಾಂತಿಕಾರಿಗಳ ಮೂಲಕವೇ ಕುತಂತ್ರಿ ಬ್ರಿಟಿಷರನ್ನು ಓಡಿಸಬೇಕು ಎಂಬ ಸ್ಪಷ್ಟತೆ ಸಾವರ್ಕರರಿಗೆ ಇತ್ತು ಹಾಗೂ ಅದರಲ್ಲಿ ಅವರು ಜಯಗಳಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರನ್ನು ಸಜ್ಜುಗೊಳಿಸುತ್ತಿದ್ದ ಸಾವರ್ಕರ್ ಅವರು ಬ್ರಿಟಿಷರಿಗೆ ಭಯೋತ್ಪಾದಕರಾಗಿ ಕಂಡರು. ಈ ಕಾರಣ ಕ್ಕಾಗಿಯೇ ಅವರಿಗೆ ‘ಕರಿನೀರಿನ ಶಿಕ್ಷೆ’ ವಿಧಿಸಲಾಗಿತ್ತು.
ಬ್ರಿಟಿಷರಿಗೆ ಭಯೋತ್ಪಾದಕರಾಗಿ ಕಂಡಂಥ ಸಾವರ್ಕರ್ ಅವರು ಭಾರತೀಯರ ಪಾಲಿಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು; ಆದರೆ ಕಾಂಗ್ರೆಸ್ಸಿಗರು ಇಂದಿಗೂ “ಸಾವರ್ಕರ್ ಭಯೋತ್ಪಾದಕರಾಗಿದ್ದ ಕಾರಣಕ್ಕೆ ಕರಿ ನೀರಿನ ಶಿಕ್ಷೆ ಅನುಭವಿಸಿದರು" ಎಂದು ಹೇಳುತ್ತಾರೆ! ಕಾಂಗ್ರೆಸ್ ಇಂದಿಗೂ ಬ್ರಿಟಿಷರ ಏಜೆಂಟ್‌ನಂತೆ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ವೀರ ಸಾವರ್ಕರ್ ಹಾಗೂ ಸುಭಾಷ್‌ಚಂದ್ರ ಬೋಸರ ಕ್ರಾಂತಿಕಾರಿ ಚಿಂತನೆಗಳಿಂದ ಹುಟ್ಟಿಕೊಂಡ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಸ್ವಾತಂತ್ರ್ಯಾನಂತರದಲ್ಲಿ ನೆಹರು ಹಾಗೂ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. 1962ರ ಚೀನಾ ವಿರುದ್ಧದ ಯುದ್ಧದ ವೇಳೆ ನಮ್ಮ ಸೈನಿಕರಿಗೆ ಸರಿಯಾದ ಯುದ್ಧ ಸಾಮಗ್ರಿಗಳನ್ನು ಪೂರೈಸುವಲ್ಲಿ ನೆಹರು ವಿಫಲರಾಗಿದ್ದರು.
ಹೀಗಾಗಿ ಸಾವಿರಾರು ಸೈನಿಕರು ಕಾಲಿಗೆ ಬೂಟು ಇಲ್ಲದೆ ಹಿಮಾಲಯದ ತಪ್ಪಲಿನಲ್ಲಿ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕಾಗಿ ಬಂದಿತ್ತು. ಅಮೆರಿಕವು ಭಾರತದ ಸಹಾಯಕ್ಕೆಂದು ವಿಮಾನಗಳ ಮೂಲಕ ಯುದ್ಧ ಸಾಮಗ್ರಿಗಳನ್ನು ಪೂರೈಸಿದರೆ, ಆ ವಿಮಾನವು ಕೋಲ್ಕತಾದಲ್ಲಿ ಇಳಿದ ನಂತರ ಅಲ್ಲಿನ ಕಮ್ಯುನಿಸ್ಟ್ ಬೆಂಬಲಿತ ಸಂಘಟನೆಗಳು ಕೂಲಿ ಕಾರ್ಮಿಕರ ಮುಷ್ಕರಕ್ಕೆ ಕರೆ ನೀಡಿ, ಯುದ್ಧ ಸಾಮಗ್ರಿಗಳು ವಾರಗಟ್ಟಲೆ ಕೆಳಗಿಳಿಯದಂತೆ ನೋಡಿಕೊಂಡವು.
ಏಕೆಂದರೆ, ಕಮ್ಯುನಿಸ್ಟರಿಗೆ ಭಾರತವು ಚೀನಾ ವಿರುದ್ಧ ಗೆಲ್ಲಬಾರದು ಎಂಬ ಹಠವಿತ್ತು. ಮತ್ತೊಂದೆಡೆ, ನೆಹರು ಅವರು ಚೀನಾ ದೇಶದ ವಿರುದ್ಧದ ಯುದ್ಧವನ್ನು ಗಂಭೀರವಾಗಿ ತೆಗೆದು ಕೊಂಡಿರಲಿಲ್ಲ. ಆದರೆ, ಚೀನಾ ದೇಶಕ್ಕೆ ಸಹಾಯ ಮಾಡಲೆಂದು ಯುದ್ಧ ಸಾಮಗ್ರಿಗಳನ್ನು ವಿಮಾನ ದಿಂದ ಕೆಳಗಿಳಿಸಲು ಬಿಡದ ಮತ್ತು ಪರದೇಶದ ಏಜೆಂಟರಾದ ಕಮ್ಯುನಿಸ್ಟರು ವೀರ ಸಾವರ್ಕರರ ಬಗ್ಗೆ ಮಾತನಾಡುತ್ತಾರೆ!
ಚೀನಾ ದೇಶವು 1954ರಿಂದಲೇ ಭಾರತದ ಗಡಿಯನ್ನು ಆಕ್ರಮಿಸಿಕೊಂಡು ಬರುತ್ತಿತ್ತು. ಅದರ ಬಗ್ಗೆ ಇಡೀ ದೇಶವೇ ಎಚ್ಚರಿಕೆ ನೀಡಿದರೂ ‘ನೆಹರು ನಿದ್ರೆ’ ಮಾತ್ರ ಭಂಗಗೊಳ್ಳಲಿಲ್ಲ. ನೆಹರುರಿಗೆ ಭಾರತೀಯರಿಗಿಂತ ಚೀನಾದ ‘ಮಾವೋ’ನ ಮೇಲಿನ ನಂಬಿಕೆ ಹೆಚ್ಚಾಗಿತ್ತು. ಅರುಣಾಚಲಪ್ರದೇಶ ಭಾಗದ ಭಾರತ-ಚೀನಾ ಗಡಿಯ ವಿಚಾರದಲ್ಲಿ ಉನ್ನತ ಮಟ್ಟದ ಸೇನಾಧಿಕಾರಿಗಳು ಸ್ಪಷ್ಟವಾಗಿ ಹೇಳಿದರೂ ನೆಹರು ತಲೆಕೆಡಿಸಿಕೊಳ್ಳಲಿಲ್ಲ.
ಭಾರತದ ಮೇಲೆ ಚೀನಾ ಆಕ್ರಮಣ ಮಾಡುತ್ತದೆ ಎಂದು ಹೇಳುವುದು ಸುಳ್ಳಾಗುತ್ತದೆ ಎಂದು ನೆಹರು ಅವರು 1962ರ ಆಗಸ್ಟ್ ತಿಂಗಳಲ್ಲಿ ಹೇಳಿದ್ದರು. ಆದರೆ ಲಡಾಖ್ ಪ್ರಾಂತ್ಯದಲ್ಲಿ ನುಗ್ಗಿದ ಚೀನಾ ಸೇನೆಯು ಭಾರತದ ಬಹುದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿತು. ಸರಿಯಾದ ಯುದ್ಧ ಸಾಮಗ್ರಿ ಗಳಿಲ್ಲದೆ ನಮ್ಮ ಸೈನಿಕರು ಗಡಿಭಾಗದಲ್ಲಿ ಪ್ರಾಣ ಕಳೆದುಕೊಳ್ಳುವಂತಾಯಿತು.
ಬ್ರಿಟಿಷರ ವಿರುದ್ಧ ಹೋರಾಡಲು ದೊಡ್ಡದೊಂದು ಕ್ರಾಂತಿಕಾರಿ ಸೇನೆಯನ್ನು ಕಟ್ಟುವಲ್ಲಿ ಯಶಸ್ವಿಯಾದ ವೀರ ಸಾವರ್ಕರ್‌ರನ್ನು ‘ಹೇಡಿ’ ಎನ್ನುವವರು, ಚೀನಾ ದೇಶದೊಂದಿಗೆ ಸಮರ್ಥ ವಾಗಿ ಸೆಣಸುವಷ್ಟರ ಮಟ್ಟಿಗೆ ಭಾರತೀಯ ಸೇನೆಯನ್ನು ಗಟ್ಟಿಗೊಳಿಸದೆ, ಸಾವಿರಾರು ಚದರ ಕಿಲೋಮೀಟರ್ ಭೂಭಾಗವನ್ನು ಚೀನಾ ದೇಶಕ್ಕೆ ಬಿಟ್ಟುಕೊಟ್ಟ ನೆಹರುರನ್ನು ಏನನ್ನುತ್ತಾರೆ?!
‘ದೇಶಭಕ್ತಿ’ಯ ವಿಚಾರವಾಗಿ ಭಾರತೀಯ ಮಹಾವಿಶ್ವವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ವೀರ ಸಾವರ್ಕರ್. ವಿದೇಶಿ ಬಟ್ಟೆಗಳಿಗೆ ಬೆಂಕಿ ಯಿಟ್ಟು ಹೋಳಿ ಹಬ್ಬ ಆಚರಿಸಿದ ಮೊದಲ ದೇಶಾಭಿಮಾನಿ ವೀರ ಸಾವರ್ಕರ್. ಬ್ರಿಟಿಷರ ವಿರುದ್ಧ ನಿಂತಿದ್ದಕ್ಕಾಗಿ ತಾವು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊದಲ ಭಾರತೀಯ ಪದವೀಧರ ವೀರ ಸಾವರ್ಕರ್.
ಆದರೆ ನೆಹರು ಅವರು ತಮ್ಮ ಬಾಲ್ಯದಲ್ಲಿ ಅಥವಾ ಕಾಲೇಜು ಅಧ್ಯಯನದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವ ಕಥೆಗಳನ್ನು ಎಂದಾದರೂ ಕೇಳಿದ್ದೀರಾ? ನೆಹರುರನ್ನು ಬ್ರಿಟಿಷರು ಸರಪಳಿಯಲ್ಲಿ ಬಂಧಿಸಿ ಜೈಲಿಗಟ್ಟಿದ ಘಟನೆ ಒಂದಾದರೂ ಇದೆಯಾ? ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಾವರ್ಕರ್‌ರಿಗೆ ‘ಕರಿನೀರಿನ ಶಿಕ್ಷೆ’ ಸಿಕ್ಕಿದ ಮೇಲೆ, ಸ್ವಾತಂತ್ರ್ಯ ಹೋರಾಟಗಾರ ನೆಹರುರಿಗೆ ಯಾಕೆ ಬ್ರಿಟಿಷರು ‘ಕರಿನೀರಿನ ಶಿಕ್ಷೆ’ಯನ್ನು ವಿಧಿಸಲಿಲ್ಲ? ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯ ಮೂಲಕಲ್ಪನೆಯ ಪಿತಾಮಹ ವೀರ ಸಾವರ್ಕರ್.
ಹುಟ್ಟಿನಿಂದಲೇ ಕ್ರಾಂತಿಕಾರಿಯಾಗಿದ್ದ ವೀರ ಸಾವ ರ್ಕರ್ ತಮ್ಮ ಬದುಕಿನ ಕಟ್ಟಕಡೆಯ ಕ್ಷಣದವ ರೆಗೂ ಭಾರತೀಯ ತೆಯ ಬಗ್ಗೆ ಸ್ಪಷ್ಟತೆ ಇದ್ದಂಥ ವ್ಯಕ್ತಿ. ಸಾವರ್ಕರ್ ಹಾಗೂ ಸುಭಾಷರು ಹಾಕಿದ ಗಟ್ಟಿಯಾದ ಅಡಿಪಾಯದಿಂದಾಗಿಯೇ ಭಾರತೀಯ ಸೇನೆಯಿಂದು ಜಗತ್ತಿನ ಆಕ್ರಮಣಕಾರಿ ಸೇನೆ ಗಳಲ್ಲಿ ಒಂದೆನಿಸಿಕೊಳ್ಳಲು ಸಾಧ್ಯವಾಗಿದೆ. ಕಾಂಗ್ರೆಸ್ಸಿಗರ ‘ಸೇನಾವ್ಯವಸ್ಥೆಯ ನಿಶ್ಶಕ್ತೀಕರಣ’ದ ನೀತಿಯಿಂದಾಗಿ ನಮ್ಮ ಸೈನಿಕರು ಚೀನಾ ವಿರುದ್ಧದ ಯುದ್ಧದಲ್ಲಿ ಪ್ರಾಣವನ್ನು ಕಳೆದುಕೊಳ್ಳ ಬೇಕಾಯಿತು.
ಇಲ್ಲದಿದ್ದರೆ ಭಾರತೀಯ ಸೇನೆಯು ಚೀನಾವನ್ನು ಅಂದೇ ಹಿಮ್ಮೆಟ್ಟಿಸುತ್ತಿತ್ತು. ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಅಷ್ಟದಿಕ್ಕುಗಳಿಗೂ ಕ್ಷಿಪಣಿಯನ್ನು ನುಗ್ಗಿಸಿದ್ದು ನಮ್ಮ ಭಾರತೀಯ ಸೇನೆಯೇ. ಅಂಥ ಕಾರ್ಯಾಚರಣೆಯನ್ನು ಅಣಕಿಸಿ, ಸೇನೆಯ ಮನೋಸ್ಥೈರ್ಯ ಕುಗ್ಗುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದ ನಾಯಕರು. ಅಂದು ವೀರ ಸಾವರ್ಕರ್ ಮತ್ತು ಸುಭಾಷ್‌ಚಂದ್ರ ಬೋಸರ ನಡುವೆ ನಡೆದ ಸಂಭಾಷಣೆಯು ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಕಟ್ಟಲು ಅಡಿಪಾಯವಾಯಿತು ಎಂಬುದನ್ನು ಇಂಥವರು ಮರೆಯಬಾರದು.
 
            