Gururaj Gantihole Column: ಷಡ್ಯಂತ್ರಗಳ ರಾಜಕೀಯ ನಾಟಕಗಳಿಗೆ ಒಂದು ಮಿತಿ ಬೇಡವೇ ?
ನಿರ್ದಿಷ್ಟವಾಗಿ ಕಾಂಗ್ರೆಸ್ ಪ್ರೇರಿತ ಸಂಸ್ಥೆಗಳಲ್ಲಿ ಈ ಸಮಸ್ಯೆ ಎದ್ದುಕಾಣುತ್ತಿದ್ದು, ತಮ್ಮ ಸ್ವಂತ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ದೇಶದ ಸಾಂಸ್ಥಿಕ ವ್ಯವಸ್ಥೆಗಳನ್ನೇ ಅನುಮಾನಿ ಸುವ ಕಾರ್ಯ ನಡೆಯುತ್ತಿದೆ. ಚುನಾವಣಾ ಆಯೋಗದಲ್ಲಿ ನಿಜವಾಗಿಯೂ ತಪ್ಪು ಗಳಿದ್ದರೆ ಅದನ್ನು ಕೇಳಲು ನ್ಯಾಯಾಲಯಗಳಿವೆ ಹಾಗೂ ಅಲ್ಲಿ ಸುದೀರ್ಘ ಚರ್ಚೆಗಳೂ ನಡೆದಿವೆ; ಆದರೆ ಇಂದಿನವರೆಗೂ ಆಯೋಗದ ಪ್ರಕ್ರಿಯೆಗಳು ತಪ್ಪು ಎಂದು ಸಾಬೀತಾಗಿಲ್ಲ
-
ಗಂಟಾಘೋಷ
ನಮ್ಮದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ. ಕಳೆದ ಏಳು ದಶಕಗಳಿಂದ ಈ ವ್ಯವಸ್ಥೆಯ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕ ವಾಗಿ ಮುನ್ನಡೆಸುತ್ತಿರುವ ಪ್ರಮುಖ ಸಾಂವಿಧಾನಿಕ ಸಂಸ್ಥೆ ಭಾರತೀಯ ಚುನಾವಣಾ ಆಯೋಗ. ಆದರೆ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬದಲ್ಲಿ ನಿರಂತರವಾಗಿ ಜನರ ತಿರಸ್ಕಾರಕ್ಕೆ ಒಳಗಾಗು ತ್ತಿರುವ ಕೆಲವು ರಾಜಕೀಯ ಪಕ್ಷಗಳಿಗೆ ಈ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ದೂಷಿಸಿ, ಗೆದ್ದಾಗ ಅದೇ ಇವಿಎಂ ವ್ಯವಸ್ಥೆಯನ್ನು ಸಮರ್ಥಿಸುವ ಇವರ ದ್ವಂದ್ವ ನೀತಿ ದೇಶದ ಜನರಿಗೆ ಈಗಾಗಲೇ ಪರಿಚಿತವಾಗಿದೆ. ಇವಿಎಂ ಕುರಿತ ಆರೋಪಗಳು ಜನರ ಮುಂದೆ ನೆಲೆ ಕಳೆದುಕೊಂಡ ನಂತರ ಇದೀಗ ಚುನಾವಣಾ ಆಯೋಗದ ವಿರುದ್ಧ ಹೊಸ ವಿವಾದ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.
ಇದು ಕೇವಲ ಚುನಾವಣಾ ಆಯೋಗದ ಮೇಲಿನ ದಾಳಿಯಲ್ಲ; ಬದಲಾಗಿ ‘ದೇಶದ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಸರಿಯಿಲ್ಲ’ ಎಂದು ಬಿಂಬಿಸುವ ಮೂಲಕ ಇಡೀ ದೇಶದ ಬುಡವನ್ನೇ ಅಡಿಸುವ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಇದೊಂದು ದುರ್ವರ್ತನೆಯಾಗಿ ಬೆಳೆದಿದ್ದು, ಕೇವಲ ಚುನಾವಣಾ ಆಯೋಗವಷ್ಟೇ ಅಲ್ಲದೆ, ಸರ್ವೋಚ್ಚ ನ್ಯಾಯಾಲಯ ಮತ್ತು ನಮ್ಮ ಸೈನಿಕರ ಹೆಜ್ಜೆಗಳನ್ನು ಸಹ ಪ್ರಶ್ನಿಸುವ ಕೆಟ್ಟ ಸಂಪ್ರದಾಯ ಶುರುವಾಗಿದೆ.
ಇದನ್ನೂ ಓದಿ: Gururaj Gantihole Column: ಡಿಕೆಶಿಯವರೇ, ಶಾಸಕರ ನಿಧಿ 10 ಕೋಟಿಗೆ ಏರಿಸಲು ಇದು ಸಕಾಲವಲ್ಲವೇ ?
ನಿರ್ದಿಷ್ಟವಾಗಿ ಕಾಂಗ್ರೆಸ್ ಪ್ರೇರಿತ ಸಂಸ್ಥೆಗಳಲ್ಲಿ ಈ ಸಮಸ್ಯೆ ಎದ್ದುಕಾಣುತ್ತಿದ್ದು, ತಮ್ಮ ಸ್ವಂತ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ದೇಶದ ಸಾಂಸ್ಥಿಕ ವ್ಯವಸ್ಥೆಗಳನ್ನೇ ಅನುಮಾನಿಸುವ ಕಾರ್ಯ ನಡೆಯುತ್ತಿದೆ. ಚುನಾವಣಾ ಆಯೋಗದಲ್ಲಿ ನಿಜವಾಗಿಯೂ ತಪ್ಪು ಗಳಿದ್ದರೆ ಅದನ್ನು ಕೇಳಲು ನ್ಯಾಯಾಲಯಗಳಿವೆ ಹಾಗೂ ಅಲ್ಲಿ ಸುದೀರ್ಘ ಚರ್ಚೆಗಳೂ ನಡೆದಿವೆ; ಆದರೆ ಇಂದಿನವರೆಗೂ ಆಯೋಗದ ಪ್ರಕ್ರಿಯೆಗಳು ತಪ್ಪು ಎಂದು ಸಾಬೀತಾಗಿಲ್ಲ. ಆದರೆ ಕಾಂಗ್ರೆಸ್ ಪ್ರೇರಿತ ಶಕ್ತಿಗಳು ಮಾತ್ರ ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಬುಡಮೇಲು ಮಾಡಿ ದೇಶದಲ್ಲಿ ಅರಾಜಕತೆ ಹುಟ್ಟಿಸಲು ಹೊಂಚು ಹಾಕುತ್ತಿವೆ.
ವಾಸ್ತವದ ವ್ಯವಸ್ಥಿತ ತಿರುಚುವಿಕೆ
ಸೆಪ್ಟೆಂಬರ್ 2026ರ ಅಂತ್ಯದಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಚುನಾವಣಾ ಆಯೋಗದ ಆಂತರಿಕ ಕಾರ್ಯನಿರ್ವಹಣೆಯ ಕುರಿತು ಒಂದು ವರದಿಯನ್ನು ಪ್ರಕಟಿಸಿತು. ಸುಮಾರು 13 ಕೋಟಿ ಮತದಾರರ ಹೆಸರಿನ ಪರಿಷ್ಕರಣೆಯ ಮೇಲೆ ಪರಿಣಾಮ ಬೀರುವ ಎಸ್‌ಐಆರ್ ಪ್ರಕ್ರಿಯೆಯ ನಿರ್ವಹಣೆಯ ಸುತ್ತ ವರದಿ ಕೇಂದ್ರೀಕೃತವಾಗಿತ್ತು. ವರದಿಯ ಪ್ರಕಾರ, ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕೆಲವು ನಿರ್ಧಾರಗಳ ಬಗ್ಗೆ ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ ಹತ್ತು ತಿಂಗಳಲ್ಲಿ ಕನಿಷ್ಠ 14 ಬಾರಿ ಅಧಿಕೃತವಾಗಿ ಕಡತಗಳಲ್ಲಿ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದರು.
ಪ್ರಮುಖ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಾರದೆ ತೆಗೆದುಕೊಳ್ಳಲಾಗುತ್ತಿದೆ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದರು. ವಿಶೇಷವಾಗಿ ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6ರ ಆನ್‌ಲೈನ್ ಪ್ರಕ್ರಿಯೆಯಲ್ಲಿ ಮಾಡಲಾದ ಬದಲಾವಣೆಗಳ ಬಗ್ಗೆ ಇಬ್ಬರು ಆಯುಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 1960ರ ಶಾಸನಬದ್ಧ ನಿಯಮಾವಳಿಗಳನ್ನು ತಿದ್ದುಪಡಿ ಮಾಡದೆ ಆನ್‌ಲೈನ್ ಫಾರ್ಮ್ 6ನಲ್ಲಿ ಬದಲಾವಣೆ ಮಾಡಿರುವುದು ಅನಧಿಕೃತ ಮತ್ತು ಕಾನೂನುಬಾಹಿರ ಎಂದು ಅವರು ಕಡತಗಳಲ್ಲಿ ದಾಖಲಿಸಿದ್ದರೆಂದು ವರದಿ ತಿಳಿಸಿತು.
ಇದೇ ವೇಳೆ ECINet ತಂತ್ರಾಂಶದ ಮೂಲಕ ದೇಶದ ಮತದಾರರ ದತ್ತಾಂಶವನ್ನು ದೆಹಲಿಯಲ್ಲಿ ಕೇಂದ್ರೀಕರಿಸುವುದರ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಇಂತಹ ಕೇಂದ್ರೀಕರಣವು ತಳಮಟ್ಟದಲ್ಲಿ ಕೆಲಸ ಮಾಡುವ ರಾಜ್ಯದ ಚುನಾವಣಾ ನೋಂದಣಿ ಅಧಿಕಾರಿಗಳಾದ ಇಆರ್‌ಒಗಳ ಶಾಸನಬದ್ಧ ಅಧಿಕಾರವನ್ನು ದುರ್ಬಲಗೊಳಿಸಬಹುದು ಮತ್ತು ತಾಂತ್ರಿಕ ಪ್ರಕ್ರಿಯೆಯ ಪರಿಣಾಮವಾಗಿ ಗೋವಾದಂತಹ ಪ್ರದೇಶಗಳಲ್ಲಿ ಕೆಲವು ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗ ಬಹುದು ಎಂಬ ಅಂಶವೂ ವರದಿಯಲ್ಲಿ ಉಲ್ಲೇಖವಾಗಿತ್ತು. ಆದರೆ ಆಯೋಗದ ಒಳಗಿನ ಇಂತಹ ಭಿನ್ನಾಭಿಪ್ರಾಯಗಳನ್ನು ಸ್ವತಃ ಸಾಂಸ್ಥಿಕ ವೈಫಲ್ಯವೆಂದು ಪರಿಗಣಿಸುವುದು ಸರಿಯೇ ಎಂಬ ಪ್ರಶ್ನೆ ಇಲ್ಲಿ ಮುಖ್ಯವಾಗಿದೆ.
ಯಾವುದೇ ಉನ್ನತ ಸಾಂವಿಧಾನಿಕ ಸಂಸ್ಥೆಯ ಆಂತರಿಕ ಸಭೆಗಳಲ್ಲಿ ಭಿನ್ನಾಭಿಪ್ರಾಯಗಳು ಮೂಡುವುದು, ಪ್ರತಿಯೊಂದು ಅಂಶವನ್ನೂ ತರ್ಕಬದ್ಧವಾಗಿ ಚರ್ಚಿಸುವುದು, ಸದಸ್ಯರು ತಮ್ಮ ಆಕ್ಷೇಪಣೆಗಳನ್ನು ಕಡತಗಳಲ್ಲಿ ದಾಖಲಿಸುವುದು ಮತ್ತು ಅಂತಿಮವಾಗಿ ಒಮ್ಮತದ ನಿರ್ಧಾರಕ್ಕೆ ಬರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸಹಜ ಹಾಗೂ ಆರೋಗ್ಯಕರ ಪ್ರಕ್ರಿಯೆಯಾಗಿದೆ. ಹಿಂದೆ ಚುನಾವಣಾ ಆಯೋಗದಲ್ಲಿ ಕೇವಲ ಒಬ್ಬರೇ ಆಯುಕ್ತರಿದ್ದರು. ಒಬ್ಬ ವ್ಯಕ್ತಿಯೇ ಸರ್ವಾಧಿಕಾರಿ ಯಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬಾರದು, ಹಲವು ಅಭಿಪ್ರಾಯಗಳಿಗೆ ಅವಕಾಶ ಇರಬೇಕು ಎಂಬ ಉದ್ದೇಶ ದಿಂದಲೇ ಆಯೋಗವನ್ನು ಮೂವರು ಸದಸ್ಯರನ್ನೊಳಗೊಂಡ ವ್ಯವಸ್ಥೆಯನ್ನಾಗಿ ಮಾಡಲಾಯಿತು.
ಹೀಗಿರುವಾಗ ಆಯುಕ್ತರ ನಡುವೆ ಚರ್ಚೆಯೇ ನಡೆಯಬಾರದು, ಭಿನ್ನಾಭಿಪ್ರಾಯ ವ್ಯಕ್ತಪಡಿಸ ಬಾರದು ಮತ್ತು ಪ್ರತಿಯೊಂದು ನಿರ್ಧಾರಕ್ಕೂ ಕಣ್ಣುಮುಚ್ಚಿ ಸಹಿ ಹಾಕಬೇಕು ಎನ್ನುವುದಾದರೆ ಬಹುಸದಸ್ಯ ಆಯೋಗದ ಅಗತ್ಯವೇನು? ಇಬ್ಬರು ಆಯುಕ್ತರು ನಿರ್ದಿಷ್ಟ ಬದಲಾವಣೆಗಳನ್ನು ಪ್ರಶ್ನಿಸಿ ತಮ್ಮ ವಿರೋಧವನ್ನು ಮುಕ್ತವಾಗಿ ಮತ್ತು ನಿರ್ಭಯವಾಗಿ ದಾಖಲಿಸಿದ್ದಾರೆ ಎಂದರೆ, ಅದನ್ನು ಸಾಂಸ್ಥಿಕ ವೈಫಲ್ಯಕ್ಕಿಂತ ಸಾಂಸ್ಥಿಕ ಪಾರದರ್ಶಕತೆಯ ಉದಾಹರಣೆಯಾಗಿ ನೋಡುವುದು ಹೆಚ್ಚು ಸೂಕ್ತ.
ಆಯೋಗದ ಸ್ಪಷ್ಟನೆಯ ಪ್ರಕಾರ, ಎಸ್‌ಐಆರ್‌ಗೆ ಸಂಬಂಧಿಸಿದ ಅಂತಿಮ ನಿರ್ಧಾರಗಳೆಲ್ಲವೂ ಸರ್ವಾನುಮತದಿಂದ ಕೈಗೊಳ್ಳಲಾಗಿದೆ. ಇಬ್ಬರು ಆಯುಕ್ತರು ದಾಖಲಿಸಿದ ಆಕ್ಷೇಪಣೆಗಳು ಆಂತರಿಕ ಚರ್ಚೆಯ ಅಥವಾ deliberative processನ ಸಾಮಾನ್ಯ ಭಾಗವಾಗಿದ್ದು, ಅಂತಿಮ ತೀರ್ಮಾನಗಳು ಒಮ್ಮತದಿಂದಲೇ ಆಗಿವೆ ಎಂದು ಆಯೋಗ ತಿಳಿಸಿದೆ.
ಫಾರ್ಮ್ 6ನಲ್ಲಿ ಮಾಡಲಾದ ಬದಲಾವಣೆ ಕೂಡ ನಕಲಿ ಮತದಾರರನ್ನು ತಡೆಯಲು ಮತ್ತು ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಲು ಎಸ್‌ಐಆರ್ ಅವಧಿಗೆ ಮಾತ್ರ ಸೀಮಿತವಾದ ತಾತ್ಕಾಲಿಕ ಕ್ರಮವಾಗಿದೆ; ನಿಜವಾದ ಅರ್ಹ ಮತದಾರರಿಗೆ ಕಿರುಕುಳ ನೀಡುವುದು ಅದರ ಉದ್ದೇಶವಲ್ಲ ಎಂದು ಆಯೋಗದ ಸ್ಪಷ್ಟಪಡಿಸಿದೆ.
ದತ್ತಾಂಶ ಕೇಂದ್ರೀಕರಣದ ಕುರಿತು ವ್ಯಕ್ತವಾದ ಆತಂಕಗಳಿಗೂ ಆಯೋಗ ಕ್ರಮಗಳನ್ನು ಕೈಗೊಂಡಿದೆ. ಎಸ್‌ಐಆರ್ ಮೂಲಕ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಸ್ಥಳೀಯ ಮಟ್ಟದಲ್ಲಿ ಇಆರ್‌ಒಗಳ ಮೂಲಕ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗು ತ್ತಿದೆ. ಬಿಟ್ಟುಹೋಗಿರುವ ಅರ್ಹ ಮತದಾರರನ್ನು ಗುರುತಿಸಿ ಸೇರಿಸಲು ವಿಶೇಷ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ.
ಹೀಗಾಗಿ ದತ್ತಾಂಶವನ್ನು ಕೇಂದ್ರೀಕೃತ ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಿರ್ವಹಿಸುವುದೇ ತಳಮಟ್ಟದ ಅಧಿಕಾರಿಗಳನ್ನು ಸಂಪೂರ್ಣವಾಗಿ ಹೊರಗಿಡುತ್ತದೆ ಎಂದು ಮನಸ್ಸೋ ಇಚ್ಛೆ ಹೇಳುವುದು ಬಾಲಿಶವಾಗುತ್ತದೆ.
ವಿರೋಧ ಪಕ್ಷಗಳ ಅತಿರೇಕ
ಈ ಅತ್ಯಂತ ಸಾಮಾನ್ಯ ಆಂತರಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಮತ್ತು ರಾಹುಲ್ ಗಾಂಧಿಯಂತಹ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ.
ವರದಿ ಹೊರಬಂದ ತಕ್ಷಣವೇ ಆಯೋಗದೊಳಗೆ ದೊಡ್ಡ ಹಗರಣವೇ ನಡೆದಿರುವಂತೆ ಮತ್ತು ಪ್ರಜಾಪ್ರಭುತ್ವವೇ ಕಗ್ಗೊಲೆಯಾಗುತ್ತಿರುವಂತೆ ಬಿಂಬಿಸಲಾಗುತ್ತಿದೆ. ದೆಹಲಿಯ ಜಂತರ್ ಮಂತರ್ ಹಾಗೂ ಮುಂಬೈನ ಬೀದಿಗಳಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿ, ಮುಖ್ಯ ಚುನಾವಣಾ ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಎಐಎಸ್‌ಎ, ಸಿಜೆಪಿಯಂತಹ ಸಂಘಟನೆಗಳನ್ನು ಮುಂದಿಟ್ಟುಕೊಂಡು, ಎಸ್‌ಐಆರ್‌ನಲ್ಲಿ ಲಕ್ಷಾಂತರ ಅಲ್ಪಸಂಖ್ಯಾತ ಮತದಾರರನ್ನು ಅಳಿಸಲಾಗುತ್ತಿದೆ ಮತ್ತು ಸಂವಿಧಾನವೇ ನಾಶ ವಾಗುತ್ತಿದೆ ಎಂಬ ಆರೋಪಗಳನ್ನು ಮಾಡಲಾ ಗುತ್ತಿದೆ. ಮುಂಬರುವ ಮಹಾರಾಷ್ಟ್ರ ಮತ್ತು ಹರಿಯಾಣದಂತಹ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಸೋಲಿನ ಭೀತಿಯನ್ನು ಮುಚ್ಚಿಡಲು ಈಗಲೇ ಮತಗಳ ಕಳ್ಳತನ ನಡೆಯುತ್ತಿದೆ ಎಂಬ ಕಥೆಯನ್ನು ಕಟ್ಟಲಾಗುತ್ತಿದೆ ಎಂಬುದಂತು ಅವರ ಆಟಗಳನ್ನು ನೋಡಿ ಗೊತ್ತಾಗುತ್ತಿದೆ.
ನಕಲಿ ಮತದಾರರ ನಡುಕ
ವಿರೋಧ ಪಕ್ಷಗಳು ಅತಿರೇಕವಾಗಿ ವಿರೋಧಿಸುತ್ತಿರುವ ಫಾರ್ಮ್ 6ರ ಬದಲಾವಣೆಯ ಅಸಲಿ ಯತ್ತನ್ನು ದೇಶದ ಜನತೆ ಅರಿಯಬೇಕಾಗಿದೆ. ಚುನಾವಣಾ ಆಯೋಗವು ಫಾರ್ಮ್ 6ನಲ್ಲಿ ತಂದಿರುವ ಬದಲಾವಣೆಯು ನಕಲಿ ಮತದಾರರನ್ನು ತಡೆಯಲು ಮತ್ತು ಮತದಾರರ ಪಟ್ಟಿಯ ನಿಖರತೆಯನ್ನು ಕಾಯ್ದುಕೊಳ್ಳಲು ತಂದಿರುವ ಹೆಚ್ಚುವರಿ ಘೋಷಣಾ ಕ್ರಮವಾಗಿದೆ. ಇದು ಯಾವುದೇ ನಿಜವಾದ ಮತ್ತು ಅರ್ಹ ಭಾರತೀಯ ನಾಗರಿಕನಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿಲ್ಲ ಎಂಬುದು ಆಯೋಗದ ನಿಲುವು.
ಹಿಂದೆ ದಶಕಗಳ ಕಾಲ ನಕಲಿ ಹೆಸರುಗಳನ್ನು ಸೇರಿಸಿ, ಗಡಿಯಾಚೆಯಿಂದ ಬಂದ ಬಾಂಗ್ಲಾದೇಶದ ನುಸುಳುಕೋರರು ಹಾಗೂ ಅಕ್ರಮ ವಲಸಿಗರಂತಹ ಅನಧಿಕೃತ ವ್ಯಕ್ತಿಗಳಿಗೆ ಸುಲಭವಾಗಿ ವೋರ್ಟ ಐಡಿ ಕೊಡಿಸಿ, ಅವರನ್ನು ಕಾಯಂ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳುವುದು ಕೆಲವು ರಾಜಕೀಯ ಪಕ್ಷಗಳಿಗೆ ಅನುಕೂಲವಾಗಿತ್ತು. ಇದೀಗ ಚುನಾವಣಾ ಆಯೋಗವು ಎಸ್ ಐಆರ್ ಪ್ರಕ್ರಿಯೆಯ ಮೂಲಕ ಇಂತಹ ನಕಲಿ ಮತ್ತು ಅಕ್ರಮ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕಠಿಣ ಕಾರ್ಯಕ್ಕೆ ಮುಂದಾಗಿದೆ.
ನಕಲಿ ಮತದಾರರ ನಿಯಂತ್ರಣಕ್ಕಾಗಿ ನಿಯಮಗಳನ್ನು ಬಿಗಿಗೊಳಿಸುತ್ತಿರುವುದೇ ವಿರೋಧ ಪಕ್ಷಗಳ ಹೊಟ್ಟೆಯುರಿಗೆ ಮತ್ತು ನಿದ್ದೆಗೆಡಲು ಅಸಲಿ ಕಾರಣವಾಗಿದೆ. ದಶಕಗಳಿಂದ ತಾವು ಪೋಷಿಸಿ ಕೊಂಡು ಬಂದಿದ್ದ ಅಕ್ರಮ ವೋಟ್ ಬ್ಯಾಂಕ್‌ಗಳಿಗೆ ಈಗ ನೇರವಾಗಿ ಕತ್ತರಿ ಬೀಳುತ್ತಿದೆ ಎಂಬ ಭಯವೇ ಪ್ರತಿಭಟನೆ, ಕಲಾಪ ಬಹಿಷ್ಕಾರ ಮತ್ತು ಆಕ್ರೋಶದ ರೂಪದಲ್ಲಿ ಹೊರಬರುತ್ತಿದೆ.
ಪಾರದರ್ಶಕತೆಯ ಹೊಸ ಶಕೆ
ಭಾರತ ಇಂದು ಡಿಜಿಟಲ್ ಯುಗದಲ್ಲಿದೆ. ಮಾಹಿತಿಯನ್ನು ಅತ್ಯಾಧುನಿಕ ಕೇಂದ್ರೀಕೃತ ಸರ್ವರ್ ವ್ಯವಸ್ಥೆಯಲ್ಲಿ ಭದ್ರವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವುದು ತಂತ್ರಜ್ಞಾನದ ಸಾಮಾನ್ಯ ಮತ್ತು ಅನಿವಾರ್ಯ ಪ್ರಕ್ರಿಯೆಯಾಗಿದೆ. ದತ್ತಾಂಶವನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರೀಕರಿಸಿದ ಮಾತ್ರಕ್ಕೆ ತಳಮಟ್ಟದಲ್ಲಿ ಕೆಲಸ ಮಾಡುವ ಇಆರ್ ಒಗಳ ಶಾಸನಬದ್ಧ ಅಧಿಕಾರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.
ಹಿಂದಿನ ಕಾಲದಲ್ಲಿ ಸ್ಥಳೀಯ ಮಟ್ಟದ ನಾಯಕರು ತಮ್ಮ ಪ್ರಭಾವ ಬಳಸಿ ತಮಗೆ ಬೇಕಾದವರ ಹೆಸರು ಸೇರಿಸುವುದು ಅಥವಾ ಬೇಡವಾದವರ ಹೆಸರು ತೆಗೆಯುವುದು ನಡೆಯುತ್ತಿತ್ತು ಎಂಬ ಆರೋಪವಿದೆ. ಕೇಂದ್ರೀಕೃತ ವ್ಯವಸ್ಥೆಯಿಂದ ಇಂತಹ ಸ್ಥಳೀಯ ಮಟ್ಟದ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಎಸ್‌ಐಆರ್ ಮೂಲಕ ಸಿದ್ಧಪಡಿಸಲಾದ ಮತದಾರರ ಪಟ್ಟಿಯನ್ನು ಪ್ರತಿ ಹಂತದಲ್ಲೂ ಎಲ್ಲಾ ರಾಜಕೀಯ ಪಕ್ಷಗಳ ಅಧಿಕೃತ ಪ್ರತಿನಿಧಿಗಳೊಂದಿಗೆ ಪಾರದರ್ಶಕವಾಗಿ ಹಂಚಿಕೊಳ್ಳಲಾಗುತ್ತದೆ.
ತಾಂತ್ರಿಕ ದೋಷದಿಂದ ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ ಅದನ್ನು ಸರಿಪಡಿಸಲು ಮತ್ತು ಮರುಸೇರ್ಪಡೆ ಮಾಡಲು ಆಯೋಗವು ಸಾಕಷ್ಟು ಕಾಲಾವಕಾಶ ಹಾಗೂ ವ್ಯವಸ್ಥಿತ ಕಾನೂನು ಪ್ರಕ್ರಿಯೆಗಳನ್ನು ಒದಗಿಸಿದೆ. ಹೀಗಿರುವಾಗ ದತ್ತಾಂಶ ಕೇಂದ್ರೀಕರಣವನ್ನು ವಿರೋಧಿಸುವುದು ಕೇವಲ ತಂತ್ರಜ್ಞಾನ ವಿರೋಧಿ ಮನಸ್ಥಿತಿಯಲ್ಲವೇ? ಕೇಂದ್ರೀಕೃತ ವ್ಯವಸ್ಥೆ ಮತ್ತು ಸ್ಥಳೀಯ ಮಟ್ಟದ ಪರಿಶೀಲನೆ ಪರಸ್ಪರ ವಿರುದ್ಧವಾದವುಗಳಲ್ಲ; ಸರಿಯಾದ ನಿಯಂತ್ರಣ, ಪರಿಶೀಲನೆ ಮತ್ತು ಪಾರದರ್ಶಕತೆಯೊಂದಿಗೆ ಅವೆರಡೂ ಒಟ್ಟಿಗೆ ಕಾರ್ಯನಿರ್ವಹಿಸಬಹುದು.
ರಾಜಕೀಯ ದಿವಾಳಿತನದ ಪರಮಾವಧಿ
ಒಟ್ಟಾರೆಯಾಗಿ, ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯ ಆಂತರಿಕ ಚರ್ಚೆಗಳನ್ನು ಮತ್ತು ಅಧಿಕಾರಿಗಳ ನಡುವಿನ ಸಹಜ ಭಿನ್ನಾಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಇಡೀ ಪ್ರಜಾ ಸತ್ತಾತ್ಮಕ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂಬಂತೆ ಬಿಂಬಿಸುವ ಪ್ರಯತ್ನಗಳು ವಿರೋಧ ಪಕ್ಷಗಳ ರಾಜಕೀಯ ಹಾಗೂ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತವೆ. ಚುನಾವಣಾ ಆಯೋಗ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಅದರೊಳಗೆ ಸದಸ್ಯರಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಲು ಅವಕಾಶವಿರುವುದೂ ಒಂದು ಸಾಕ್ಷಿಯಾಗಿದೆ.
ಚುನಾವಣಾ ಆಯೋಗದ ಮೇಲೆ ಪ್ರಶ್ನೆಗಳಿದ್ದರೆ ಅವುಗಳನ್ನು ಸಾಕ್ಷ್ಯಾಧಾರಗಳೊಂದಿಗೆ, ಕಾನೂನು ಬದ್ಧ ಮಾರ್ಗದಲ್ಲಿ ಮತ್ತು ರಚನಾತ್ಮಕವಾಗಿ ಎತ್ತಬೇಕು. ಆದರೆ ಸಾಮಾನ್ಯ ಆಂತರಿಕ ಭಿನ್ನಾಭಿ ಪ್ರಾಯವನ್ನೇ ಹಗರಣವಾಗಿ, ಆಡಳಿತಾತ್ಮಕ ಕ್ರಮವನ್ನೇ ಸಂವಿಧಾನದ ಮೇಲಿನ ದಾಳಿಯಾಗಿ ಮತ್ತು ಚುನಾವಣಾ ಸುಧಾರಣೆಯನ್ನೇ ಮತಗಳ ಕಳ್ಳತನವಾಗಿ ಬಿಂಬಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸಹಾಯಕವಾಗುವುದಿಲ್ಲ.
ಸಾಂವಿಧಾನಿಕ ವ್ಯವಸ್ಥೆಗಳನ್ನು ಪ್ರಶ್ನಿಸುವ ಪದ್ಧತಿ ತಪ್ಪಲ್ಲವಾದರೂ, ಕೇವಲ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ದೇಶದ ಆಧಾರಸ್ತಂಭಗಳ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುವ ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ.