ಲೋಕಮತ
kaayarga@gmail.com
ವಾಡಿಕೆಗಿಂತ 10 ದಿನಗಳಷ್ಟು ಮುಂಚೆಯೇ ಬಂದ ಮುಂಗಾರು ಮಳೆ ಈ ಬಾರಿ ಆರಂಭದಲ್ಲೇ ನಮ್ಮ ಹುಳುಕುಗಳನ್ನು ತೆರೆದಿಟ್ಟಿದೆ. ಹಳ್ಳಿ, ಪಟ್ಟಣಗಳೆಂಬ ಭೇದವಿಲ್ಲದೆ ಕೃತಕ ಪ್ರವಾಹ ಸೃಷ್ಟಿ ಯಾಗಿದೆ. ಎಲ್ಲೆಡೆ ನೆರೆ ನೀರು ಉಕ್ಕಿ ಹರಿದು ಹಿಂದೆಂದೂ ಇಂತಹ ಮಳೆ ಬಂದಿರಲಿಲ್ಲವೇನೋ ಎಂಬ ವಾತಾವರಣ ಸೃಷ್ಟಿ ಮಾಡಿದೆ. ಪ್ರತಿ ಮಳೆಗಾಲದಲ್ಲೂ ಈ ನಮ್ಮ ಗೋಳು ಇದ್ದದ್ದೆ. ಬೆಂಗಳೂರಿನಲ್ಲಿ ತಗ್ಗು ಪ್ರದೇಶದಲ್ಲಿ ಕಟ್ಟಿದ ಅಪಾರ್ಟ್‌ಮೆಂಟ್‌ಗಳು, ಅಂಡರ್ ಗ್ರೌಂಡ್ ಪ್ಯಾಸೇಜ್ ಗಳು, ಮೆಟ್ರೋ ನಿಲ್ದಾಣ ನೀರಲ್ಲಿ ಮುಳುಗಿ ಅವಾಂತರ ಸೃಷ್ಟಿಯಾಗುವುದು, ಟಿ.ವಿ. ಚಾನೆಲ್‌ಗಳು ರಕ್ಕಸ ಮಳೆ ಎಂದು ಬೊಬ್ಬಿಡುವುದು, ನ ಮ್ಮ ಮಂತ್ರಿಮಹೋದಯರು ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿ ಕೆರೆ, ರಾಜ ಕಾಲುವೆಗಳ ಒತ್ತುವರಿ ತೆರವಿಗೆ ‘ಕಟ್ಟಪ್ಪಣೆ’ ನೀಡುವುದು ನಮಗೆ ಹೊಸ ದೇನೂ ಅಲ್ಲ.
ಆದರೆ ಕಟ್ಟಪ್ಪಣೆ, ಕಟ್ಟಾಜ್ಞೆಗಳ ಹೊರತಾಗಿಯೂ ವರ್ಷದಿಂದ ವರ್ಷಕ್ಕೆ ಮಳೆಗಾಲದ ನಮ್ಮ ಬದುಕು ಅಸಹ ನೀಯವಾಗುತ್ತಲೇ ಸಾಗಿದೆ. ಮಳೆಗಾಲದ ಅವಾಂತರಗಳು, ಸಾವು ನೋವುಗಳು ಹೆಚ್ಚುತ್ತಲೇ ಸಾಗಿವೆ. ಈ ವರ್ಷದ ಮಳೆಗಾಲವೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ ಎನ್ನುವುದನ್ನು ಆರಂಭದ ಮಳೆಯೇ ತೋರಿಸಿಕೊಟ್ಟಿದೆ.
ಚಂದ್ರನ ಅಂಗಳದಲ್ಲಿ ನೀರನ್ನು ಹುಡುಕುತ್ತಿರುವ ನಮಗೆ ಕಣ್ಣ ಮುಂದೆಯೇ ಸುರಿದ ನೀರನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೂಮಿಯಡಿ ಇಂಗಬೇಕಾದ, ಕೆರೆಕಟ್ಟೆಗಳನ್ನು ತುಂಬ ಬೇಕಾದ ಮಳೆ ನೀರು ಕಾಂಕ್ರೀಟ್ ರಸ್ತೆಗಳಲ್ಲಿ ನದಿಯಂತೆ ಹರಿದು, ಇಲ್ಲಿನ ಕಸಕಡ್ಡಿ, ಪ್ಲಾಸ್ಟಿಕ್ ರಾಶಿಯೆಲ್ಲವನ್ನೂ ತನ್ನೊಡಲಲ್ಲಿ ತುಂಬಿಕೊಂಡು ನದಿ ಪಾತ್ರ ಸೇರುತ್ತಿದೆ.
ಇದನ್ನೂ ಓದಿ: Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !
ನಗರದ ರಸ್ತೆಗಳಿಂದ ಹಿಡಿದು ಹೆದ್ದಾರಿಗಳ ತನಕ ರಸ್ತೆ ವಿಸ್ತರಣೆ ಹೆಸರಲ್ಲಿ ನಾವು ಕೈಗೊಂಡ ಅವೈಜ್ಞಾನಿಕ ಕಾಮಗಾರಿ ಹಲವರ ಜೀವ ಬಲಿ ಪಡೆಯುತ್ತಿವೆ. ಮಳೆಗಾಲ ಬಂದೊಡನೆ ನಮಗೆ ಕೆರೆ ಕಟ್ಟೆ, ರಾಜ ಕಾಲುವೆಗಳ ಒತ್ತುವರಿ ನೆನಪಾಗುತ್ತದೆ. ನಮ್ಮ ಸಚಿವರು ಮಳೆ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ನೀಡುವ ಮೊಟ್ಟ ಮೊದಲ ಹೇಳಿಕೆ ರಾಜ ಕಾಲುವೆ ಮತ್ತು ಕೆರೆ ಒತ್ತುವರಿ ತೆರವಿನ ಬಗ್ಗೆಯೇ ಆಗಿರುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಳೆದ ವರ್ಷ, ‘ಅದೆಷ್ಟೇ ಪ್ರಭಾವಿಗಳಿರಲಿ, ರಾಜಕಾಲುವೆ, ಕೆರೆ ಒತ್ತುವರಿ ತೆರವುಗೊಳಿಸಿಯೇ ಸಿದ್ಧ’ ಎಂದು ಗುಡುಗಿದ್ದು ಇನ್ನೂ ನೆನಪಿದೆ. ಮೊನ್ನೆ ಮಳೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗಲೂ ಈ ಮಾತನ್ನು ಪುನರುಚ್ಚರಿಸಿದ್ದಾರೆ. ಈ ಹೇಳಿಕೆ ಕಾರ‍್ಯರೂಪಕ್ಕೆ ಬಂದಿದ್ದರೆ ಆರಂಭದ ಮಳೆಯಲ್ಲೇ ನಾವು ಹೈರಾಣಾಗುವುದು ತಪ್ಪುತ್ತಿತ್ತು.
ಸುಪ್ರೀಂ ಆದೇಶಕ್ಕೂ ಕಿಮ್ಮತ್ತಿಲ್ಲ
ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವು ವಿಚಾರದಲ್ಲಿ ನಮ್ಮ ರಾಜ್ಯದಲ್ಲಿ ನೀಡಿರುವಷ್ಟು ಆದೇಶ, ಸೂಚನೆ, ನಿರ್ಣಯ, ತೀರ್ಪುಗಳು ಇನ್ನಾವ ರಾಜ್ಯ ಗಳಲ್ಲೂ ಬಂದಿರಲಿಕ್ಕಿಲ್ಲ. ಸ್ವತ: ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ರಾಜ ಕಾಲುವೆ ಮತ್ತು ಕೆರೆಕಟ್ಟೆಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವು ವಿಚಾರದಲ್ಲಿ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಬಳಿಕವೂ ಈ ಆದೇಶ ಕಡತಕ್ಕೆ, ಘೋಷಣೆಗಳಿಗೆ ಸೀಮಿತವಾಗಿದೆ.

ಕೆರೆ ಕಟ್ಟೆಗಳ ಸಂರಕ್ಷಣೆ ಮತ್ತು ಅತಿಕ್ರಮಣ ತೆರವಿಗಾಗಿಯೇ ದೇಶದಲ್ಲೇ ಮೊದಲ ಬಾರಿಗೆ ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಿದ ರಾಜ್ಯ ಕರ್ನಾಟಕ. ಆದರೆ ಇದರ ಹೊರ ತಾಗಿಯೂ ವರ್ಷದಿಂದ ವರ್ಷಕ್ಕೆ ನಗರ ಪ್ರದೇಶದ ನಮ್ಮ ಕೆರೆಗಳು, ರಾಜಕಾಲುವೆಗಳು ಮಾಯ ವಾಗುತ್ತಿವೆ. ನೀರಿನ ಮೂಲಗಳನ್ನು ಭವಿಷ್ಯದ ಪೀಳಿಗೆಗೆ ಉಳಿಸುವ ಮತ್ತು ನಗರೀಕರಣದಿಂದ ಉಂಟಾಗುವ ಕೃತಕ ಪ್ರವಾಹದಂತಹ ಸಮಸ್ಯೆಗಳನ್ನು ತಡೆಗಟ್ಟುವ ಯೋಜನೆಗಳು ವೀರಾವೇಶದ ಹೇಳಿಕೆಗಳಲ್ಲಿಯೇ ಕೊನೆಗೊಳ್ಳುತ್ತಿವೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾಜ್ಯ ಸರಕಾರವು ಕೆರೆ, ಕುಂಟೆ, ಕಟ್ಟೆ, ರಾಜಕಾಲುವೆ ಗಳಂತಹ ಯಾವುದೇ ಜಲಮೂಲಗಳನ್ನು ಖಾಸಗಿ ಸಂಸ್ಥೆಗಳು, ಕಂಪನಿಗಳು, ಉದ್ದಿಮೆಗಳು, ಸಂಘ-ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ವರ್ಗಾಯಿಸಲು ಅಥವಾ ಮಾರಾಟ ಮಾಡಲು ಅವಕಾಶವಿಲ್ಲ. ನಿರುಪಯುಕ್ತ ಕೆರೆಗಳನ್ನೂ ಖಾಸಗಿ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಈ ಜಲ ಮೂಲಗಳು ಸ ರಕಾರದ ಆಸ್ತಿಯಾಗಿದ್ದು, ಅವುಗಳ ಮೇಲೆ ಸಾರ್ವಜನಿಕ ಹಕ್ಕು ಇರುತ್ತದೆ. ಸಾರ್ವಜನಿಕ ಹಿತಾಸಕ್ತಿ ಗಾಗಿ ಖಾಸಗಿ ಹಿಡುವಳಿಯಲ್ಲಿರುವ ಜಲ ಮೂಲಗಳನ್ನೂ ಸರಕಾರ ತನ್ನ ವಶಕ್ಕೆ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಈ ಹಿಂದೆ ಕೆರೆಗಳ ಸುತ್ತ 75 ಮೀಟರ್ ಮತ್ತು ರಾಜ ಕಾಲುವೆಗಳ ಸುತ್ತ 50 ಮೀಟರ್ ಬಫರ್ ಝೋನ್ ನಿಗದಿ ಮಾಡಿದ್ದ ಸುಪ್ರೀಂಕೋರ್ಟ್ ಅಕ್ರಮ ವಾಗಿ ನಿರ್ಮಿಸಲಾದ ಕಟ್ಟಡಗಳ ತೆರವಿಗೆ ಆದೇಶ ನೀಡಿತ್ತು.
ಆದರೆ ನಗರ ಮಿತಿಯಲ್ಲಿ ಈ ಆದೇಶ ಪಾಲನೆ ಕಷ್ಟ ಎಂದು ರಾಜ್ಯ ಸರಕಾರ ಮನವಿ ಮಾಡಿದ ಬಳಿಕ, ನ್ಯಾಯಾಲಯ ಬಫರ್ ಝೋನ್ ಮಿತಿ ನಿರ್ಧರಿಸುವ ಅಧಿಕಾರವನ್ನು ಸರಕಾರಕ್ಕೆ ನೀಡಿದೆ. ಹೊಸ ಮಿತಿಯನು ಸಾರ ಒತ್ತುವರಿಯಾಗಿರುವ ಕೆರೆಗಳು ಮತ್ತು ರಾಜಕಾಲುವೆಗಳನ್ನು ತೆರವು ಗೊಳಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಹಲವು ಬಾರಿ ಸರಕಾರಕ್ಕೆ ನಿರ್ದೇಶನ ನೀಡಿವೆ.
ಕಾಟಾಚಾರದ ತೆರವು ಕಾರ‍್ಯಾಚರಣೆ
ಪ್ರತಿ ಮಳೆಗಾಲದಲ್ಲೂ ಸರಕಾರದ ಒತ್ತುವರಿ ತೆರವು ಕಾರ‍್ಯಾಚರಣೆ ಘೋಷಣೆಯಾಗುತ್ತದೆ. ಜನ ಸಾಮಾನ್ಯರು ವಾಸ ಮಾಡುವ ಒಂದಷ್ಟು ಕಡೆ ಜೆಸಿಬಿಗಳು ಸದ್ದು ಮಾಡುತ್ತವೆ. ಬಳಿಕ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಎಲ್ಲವೂ ಯಥಾಸ್ಥಿತಿಗೆ ಬರುತ್ತವೆ. ಕಳೆದ ವರ್ಷ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಲು ಹೊರಟಿದ್ದ ಬಿಬಿಎಂಪಿ, ಕನ್ನಡ ಚಿತ್ರರಂಗದ ನಾಯಕ ನಟರೊಬ್ಬರ ಮನೆ ಎದುರಾಗುತ್ತಿದ್ದಂತೆ ಕಾರ‍್ಯಾಚರಣೆ ಸ್ಥಗಿತಗೊಳಿ ಸಿತ್ತು. ಬಹುತೇಕ ಎಲ್ಲ ಕಡೆಗಳಲ್ಲೂ ಸರಕಾರದ ಕಾರ‍್ಯಾಚರಣೆ ವಿಧಾನ ಇದಕ್ಕಿಂತ ಭಿನ್ನ ವಾಗಿರುವು ದಿಲ್ಲ.
ಸರಕಾರವೇ ನೀಡಿರುವ ಕೆರೆ ಸಮೀಕ್ಷೆ ವರದಿ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು 40998 ಕೆರೆಗಳ ಪೈಕಿ ಜೂನ್ 2024ರ ಅಂತ್ಯಕ್ಕೆ, 28,713 ಕೆರೆಗಳ ಸಮೀಕ್ಷೆ ಪೂರ್ಣಗೊಳಿಸಲಾಗಿತ್ತು. ಈ ಪೈಕಿ 10,988 ಕೆರೆಗಳು ಒತ್ತುವರಿಯಾಗಿವೆ. ಅಂದರೆ ಶೇ.25ಕ್ಕಿಂತ ಹೆಚ್ಚಿನ ಕೆರೆಗಳು ಒತ್ತುವರಿಯಾಗಿವೆ. ಈ ಪೈಕಿ 6081 ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರೂ ಇವು ಹೆಸರಿಗಷ್ಟೇ ತೆರವಾಗಿರುವ ಸಾಧ್ಯತೆ ಹೆಚ್ಚು.
ರಾಜಧಾನಿ ಬೆಂಗಳೂರಿನಲ್ಲಿ ಶೇ.80ಕ್ಕಿಂತ ಹೆಚ್ಚು ಜಲಮೂಲಗಳು ಒತ್ತುವರಿಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 837 ಕೆರೆಗಳ ಪೈಕಿ 733 ಕೆರೆಗಳು ಒತ್ತುವರಿಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 710 ಕೆರೆಗಳ ಪೈಕಿ 643 ಕೆರೆಗಳು ಒತ್ತುವರಿಯಾಗಿವೆ. ವಿಶೇಷ ಎಂದರೆ ಕೆರೆ ಪ್ರದೇಶದ ಶೇ.30ರಿಂದ 40ರಷ್ಟು ಭಾಗ ಸರಕಾರಿ ಸಂಸ್ಥೆಗಳಿಂದಲೇ ಒತ್ತುವರಿಯಾಗಿದೆ.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಒಂದು ಕಾಲದಲ್ಲಿ ತನ್ನ ಕೆರೆಗಳಿಗಾಗಿಯೇ ಪ್ರಸಿದ್ಧವಾಗಿತ್ತು. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಇಲ್ಲಿನ ಕೆರೆಗಳ ಸಂಖ್ಯೆ ಮೂರಂಕಿಗಿಳಿದು ಈಗ ಎರಡಂಕಿ ಗಿಳಿದಿವೆ. ಒಂದು ಕಾಲದ ಧರ್ಮಾಂಬುದಿ ಕೆರೆ ಇಂದು ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣ ವಾಗಿದೆ. 35 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿದ್ದ ಸಂಪಂಗಿ ಕೆರೆ ಕಂಠೀರವ ಕ್ರೀಡಾಂಗಣ ವಾಗಿದೆ. ಬೆಂಗಳೂರಿನ ಹಾಕಿ ಸ್ಟೇಡಿಯಂ, ಫುಟ್ ಬಾಲ್ ಸ್ಟೇಡಿಯಂ, ಗಾಲ್ ಕ್ಲಬ್, ಕೋರಮಂಗಲ ಕ್ರೀಡಾ ಸಂಕೀರ್ಣ, ಗಾಂಧಿ ಬಜಾರ್, ಕೆ.ಆರ್ ಮಾರುಕಟ್ಟೆ, ಹತ್ತು ಹಲವು ಬಿಡಿಎ ಬಡಾವಣೆಗಳು ಕೆರೆ ಪ್ರದೇಶಗಳಲ್ಲಿಯೇ ನಿರ್ಮಾಣವಾಗಿವೆ.
ಇವು ಎಂದೋ ಮುಗಿದು ಹೋದ ಕಥೆಯಾದರೂ ಕಳೆದ ಮೂರ‍್ನಾಲ್ಕು ದಶಕಗಳಲ್ಲಿ ನಮ್ಮ ಕಣ್ಮುಂದೆಯೇ ಹತ್ತಾರು ಕೆರೆಗಳು ಮಾಯವಾಗಿವೆ. ಕೇವಲ 25 ವರ್ಷಗಳ ಹಿಂದೆ ಕೆಂಗೇರಿ ಭಾಗದಲ್ಲಿ ನಳನಳಿಸುತ್ತಿದ್ದ ವಿಶಾಲವಾದ ಕೆರೆಗಳ ಅಸ್ತಿತ್ವದ ಕರುಹು ಈಗ ಕಾಣುತ್ತಿಲ್ಲ. ಅತಿಕ್ರಮಣ ದಾರರಲ್ಲಿ ಹೆಚ್ಚಿನವರು ಆಡಳಿತ ಚುಕ್ಕಾಣಿ ಹಿಡಿದವರು ಇಲ್ಲವೇ ಇವರ ನಿಕಟವರ್ತಿಗಳಾಗಿರುವ ಕಾರಣ ಇವರ ಮುಂದೆ ಜೆಸಿಬಿ ಬಿಡಿ, ಸರಕಾರವೇ ಮುದುಡಿ ಕೂರುತ್ತದೆ.
ಹಳೇ ಮೈಸೂರು ಭಾಗದ ಪ್ರತಿಯೊಂದು ಜಿಲ್ಲೆಗಳಲ್ಲೂ ಸಾವಿರಾರು ಕೆರೆಗಳಿವೆ. ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣವಾಗುವ ಮೊದಲು ಈ ಕೆರೆಗಳೇ ಜನರ ಪಾಲಿಗೆ ನೀರಿನ ಆಸರೆಯಾಗಿದ್ದವು. ಆದರೆ ಇಂದು ಬಹುತೇಕ ಕೆರೆಗಳು ಜನವಸತಿ ಪ್ರದೇಶದ ಭಾಗವಾಗಿವೆ, ಇಲ್ಲವೇ ಮಳೆ ನೀರಿನ ಮೂಲಗಳಿಲ್ಲದೆ ಬತ್ತಿ ಹೋಗಿವೆ. ಕೆಲವು ಹೂಳು ತುಂಬಿ ಕೆರೆಯ ಅವಶೇಷವೂ ಕಾಣದಂತಾಗಿವೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಹಾಸನ ಜಿಲ್ಲೆಯೊಂದರಲ್ಲಿಯೇ 6367 ಕೆರೆಗಳಿವೆ. ಶಿವಮೊಗ್ಗ ದಲ್ಲಿ 4354 ಕೆರೆಗಳು, ಮೈಸೂರು ಜಿಲ್ಲೆಯಲ್ಲಿ 2805 ಕೆರೆಗಳು ಇವೆ. ಆದರೆ ಅಭಿವೃದ್ಧಿಯ ಭರಾಟೆ ಯಲ್ಲಿ ಹೆಚ್ಚಿನ ಕೆರೆಗಳು ಕಡತದಲ್ಲಷ್ಟೇ ಉಳಿದಿವೆ. ಸರಕಾರದ ಮೂಲಗಳ ಪ್ರಕಾರ ಮೈಸೂರು ಜಿಲ್ಲೆಯ 2991 ಕೆರೆಗಳ ಪೈಕಿ 1334 ಕೆರೆಗಳು ಒತ್ತುವರಿಯಾಗಿವೆ.
ಏಳೆಂಟು ವರ್ಷಗಳ ಹಿಂದೆ ಮೈಸೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಸ್ಥಾನಿಕ ಸಂಪಾದಕನಾಗಿದ್ದ ಅವಧಿಯಲ್ಲಿ, ಮೈಸೂರು ನಗರ ಮತ್ತು ಹೊರವಲಯದಲ್ಲಿ 50ಕ್ಕೂ ಕೆರೆಗಳನ್ನು ಗುರುತಿಸಿ ‘ಕೆರೆ ಉಳಿಸಿ ಅಭಿಯಾನ’ ನಡೆಸಿದ್ದು ಇನ್ನೂ ನೆನಪಿದೆ. ಈ ಅಭಿಯಾನಕ್ಕೆ ಸ್ಥಳೀಯರು ಉತ್ತಮವಾಗಿ ಸ್ಪಂದಿಸಿ ತಮ್ಮ ಕೆರೆಗಳನ್ನು ಉಳಿಸಲು ಮತುವರ್ಜಿ ತೋರಿಸಿದ್ದರು. ಆದರೆ ಕೆರೆ ಒತ್ತುವರಿ ಮಾಡುವ, ತ್ಯಾಜ್ಯಗಳನ್ನು ಎಸೆಯುವ ಪ್ರಭಾವಿಗಳ ಜತೆ ಸ್ಥಳೀಯ ಅಧಿಕಾರಿ ವರ್ಗ ಶಾಮೀಲಾ ಗುವ ಕಾರಣ ನಗರದ ಹತ್ತಾರು ಕೆರೆಗಳು ಕಿರಿದಾಗುತ್ತಲೇ ಸಾಗಿವೆ.
ರಿಂಗ್ ರೋಡ್ ಸಮೀಪದ ಬೋಗಾದಿ ಕೆರೆ, ನಜರಾಬಾದ್ ಪ್ರದೇಶದ ದೇವನೂರು ಕೆರೆ ಇದಕ್ಕೆ ಉತ್ತಮ ಉದಾಹರಣೆ. ಮೈಸೂರು ವಿವಿ ಅಧೀನದಲ್ಲಿರುವ ಕುಕ್ಕರಹಳ್ಳಿ ಕೆರೆ, ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಲಿಂಗಾಂಬುದಿ ಕೆರೆ, ಕಾರಂಜಿ ಕೆರೆಗಳು ಕೂಡ ಮಳೆ ನೀರಿನ ಸರಾಗ ಹರಿವಿನ ಮೂಲಗಳಿಲ್ಲದೆ, ನಗರದ ತ್ಯಾಜ್ಯನೀರನ್ನು ತುಂಬಿಕೊಂಡು ಕೊಳಚೆ ಗುಂಡಿಯಾಗುತ್ತಿವೆ. ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಹೆಬ್ಬಾಳ ಕೆರೆಯನ್ನು ಇನ್ಫೋಸಿಸ್ ಸಂಸ್ಥೆ 30 ಕೋಟಿ ರು.ಗಿಂತಲೂ ಹೆಚ್ಚು ಹಣ ವ್ಯಯಿಸಿ ಅಭಿವೃದ್ಧಿ ಮಾಡಿದ ಬಳಿಕವೂ ಸಂಪೂರ್ಣ ಸ್ವಚ್ಛತೆ ತರಲು ಸಾಧ್ಯವಾಗಿಲ್ಲ.
ನಗರ ಪ್ರದೇಶಗಳ ಬಹುತೇಕ ಕೆರೆಗಳಿಗೆ ಈಗ ಮಳೆ ನೀರು ಸೇರುತ್ತಿಲ್ಲ. ನಗರದ ಒಳಚರಂಡಿ ನೀರಿನ ಸಂಪರ್ಕವನ್ನು ಈ ಕೆರೆಗಳಿಗೆ ಜೋಡಿಸಿರುವ ಕಾರಣ ತ್ಯಾಜ್ಯನೀರಿನಿಂದಲೇ ಈ ಕೆರೆಗಳು ಭರ್ತಿಯಾ ಗುತ್ತವೆ. ಕೊಳಚೆಗುಂಡಿಗಳಾಗುವ ಕೆರೆಗಳಲ್ಲಿ ಕ್ರಮೇಣ ಕಟ್ಟಡ ತ್ಯಾಜ್ಯಮತ್ತು ಇತರ ತ್ಯಾಜ್ಯಗಳನ್ನು ತುಂಬಿ ಕೆರೆಗಳನ್ನೇ ಮಾಯ ಮಾಡಲಾಗುತ್ತದೆ.
ಅಧಿಕಾರಿಗಳು ಈ ಕಬಳಿಕೆಗೆ ಮೂಕ ಸಾಕ್ಷಿಗಳಾಗಿ ಸಹಕರಿಸುತ್ತಾರೆ. ಬೆಂಗಳೂರಿನಲ್ಲಿ ದಿನಗಟ್ಟಲೆ ಮಳೆ ಸುರಿದರೂ ಅದನ್ನು ತುಂಬಿಕೊಳ್ಳುವ ಕೆರೆ ಪಾತ್ರಗಳಿದ್ದವು. ಈಗ ಈ ಕೆರೆಗಳಿಲ್ಲ. ಅಳಿದುಳಿದ ಕೆರೆಗಳಿಗೂ ಮಳೆ ನೀರು ಸಾಗುವ ಮಾರ್ಗಗಳಿಲ್ಲ. ಈಗ ಮಳೆರಾಯನ ಪಾಲಿಗೆ ಇಲ್ಲಿನ ಕಾಂಕ್ರೀಟ್ ರಸ್ತೆಗಳೇ ಕೆರೆಗಳಾಗಿವೆ. ಕೆರೆಗಳನ್ನು ನುಂಗಿದವರೂ ಈ ಮಳೆ ನೀರನ್ನೂ ಸ್ವಾಹಾ ಮಾಡುವಂತಿದ್ದರೆ ನಮ್ಮ ತಪ್ಪಿಗೆ ಮಳೆಯನ್ನು ದೂಷಿಸುವ ಪ್ರಮೇಯವಿರಲಿಲ್ಲ !