ಶಿಶಿರಕಾಲ
shishirh@gmail.com
ನಾನು ಕೆಲಸ ಮಾಡುತ್ತಿದ್ದ ಕಂಪನಿ ನನ್ನನ್ನು ದಕ್ಷಿಣ ಅಮೆರಿಕದ ಉರುಗ್ವೆ ದೇಶಕ್ಕೆ ಕಳುಹಿಸಿತ್ತು. ಆ ದೇಶದಲ್ಲಿ ಹೊಸತಾಗಿ ಕಂಪನಿಯ ಬ್ರಾಂಚ್ ಆರಂಭಿಸಲಾಗಿತ್ತು. ಅಲ್ಲಿನ ಯೂನಿವರ್ಸಿಟಿಗಳಿಗೆ ಭೇಟಿನೀಡುವುದು, ಸಂದರ್ಶನಗಳನ್ನು ನಡೆಸುವುದು, ನೇಮಕಾತಿ ಇತ್ಯಾದಿ. ಆ ಬ್ರಾಂಚ್‌ನ ಕಾರ್ಯನಿರ್ವಹಣೆಗೆ ಬೇಕಾದ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ನಮ್ಮ ಮೇಲಿತ್ತು.
ನಮ್ಮ ಜತೆ ನಮ್ಮದೇ ಕಂಪನಿಯ ಐದಾರು ಉದ್ಯೋಗಿಗಳು ಕೂಡ ಮುಂಬೈ ಬ್ರಾಂಚ್‌ನಿಂದ ಬಂದಿದ್ದರು. ಉರುಗ್ವೆ ಇರುವುದು ಬ್ರೆಜಿಲ್ ಮತ್ತು ಅರ್ಜೆಂಟೀನಾ ದೇಶಗಳ ಸಂದಿಯಲ್ಲಿ. ಒಂದು ಪುಟ್ಟ ದೇಶ. ಸ್ಪ್ಯಾನಿಷ್ ವಸಾಹತು ಆಗಿದ್ದರಿಂದ ಈಗ ಅಲ್ಲಿನ ಭಾಷೆ ಸ್ಪ್ಯಾನಿಷ್. ಅಲ್ಲಿ ಭಾರತೀಯ ರೆಂದು ಇದ್ದದ್ದೇ ನಾವು 8-10 ಮಂದಿ.
ಹೀಗಾಗಿ ನಾವೆಲ್ಲರೂ ಒಂದೇ ಬಿಲ್ಡಿಂಗಿನ ಅಕ್ಕಪಕ್ಕದ ಅಪಾರ್ಟ್ಮೆಂಟುಗಳಲ್ಲಿ ವಾಸವಾಗಿದ್ದೆವು. ಹೀಗಿರುವಾಗ ಮುಂಬೈನಿಂದ ಬಂದ ಸ್ನೇಹಿತನಾದ ಪ್ರಫುಲ್ಲನಿಗೆ ಇದ್ದಕ್ಕಿದ್ದಂತೆ ಜ್ವರ ಬಂತು. ಜ್ವರ ಎರಡು ವಾರವಾದರೂ ಕಡಿಮೆಯಾಗಲಿಲ್ಲ. ಆತ ಒಬ್ಬನೇ ಅಪಾರ್ಟ್ಮೆಂಟಿನಲ್ಲಿದ್ದುದರಿಂದ ಜ್ವರ ಕಡಿಮೆಯಾಗುವವರೆಗೆ ನನ್ನ ಜತೆಯ ಬಂದುಳಿಯುವಂತೆ ಅವನಿಗೆ ಹೇಳಿದೆ.
ಇದನ್ನೂ ಓದಿ: Shishir Hegde Column: ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!
ಜ್ವರ ಕಡಿಮೆಯಾಗದ್ದರಿಂದ ಅವನನ್ನು ಆಸ್ಪತ್ರೆಗೆ ಚೆಕಪ್‌ಗೆಂದು ಒತ್ತಾಯಿಸಿ ಕರೆದುಕೊಂಡು ಹೋದೆ. ಭಾಷೆ ಬಾರದ ದೇಶದಲ್ಲಿ ಆಸ್ಪತ್ರೆಗೆ ಹೋಗುವುದು, ವಿವರಿಸುವುದು ಒಂದು ಹರಸಾಹಸ. ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಸ್ಪ್ಯಾನಿಷ್ ಭಾಷೆಯಲ್ಲಿಯೇ ವ್ಯವಹರಿಸಿದ್ದಾಯಿತು.
ಸ್ನೇಹಿತನಿಗೆ ಬಂದದ್ದು ಬರೀ ಜ್ವರವಾಗಿರಲಿಲ್ಲ. ಅದು ಸಂಕೀರ್ಣ ದೈಹಿಕ ಸಮಸ್ಯೆಯಾಗಿತ್ತು. ಅದು ಎಷ್ಟು ಆಂತರಿಕ ಉಲ್ಬಣವಾಗಿತ್ತೆಂದರೆ ದೇಹದ ನಾಲ್ಕಾರು ಭಾಗಗಳು ಈಗಾಗಲೇ ಹಾನಿ ಗೊಳಗಾಗಿದ್ದವು. ಆತನ ದೇಹ ಸೋತು ಕೊನೆಯಲ್ಲಿ ಜ್ವರ ಬಂದಿತ್ತು. ಆ ನಂತರ ಅಲ್ಲಿಯೇ ಆಸ್ಪತ್ರೆ ಯಲ್ಲಿ ದಾಖಲಿಸಿದೆವು ಮತ್ತು ಶುಶ್ರೂಷೆ ಆರಂಭವಾಯಿತು. ಆತ ಭಾರತಕ್ಕೆ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ.
ನಿತ್ಯ ಆಫೀಸ್ ಕೆಲಸ ಮುಗಿಸಿ ಮನೆಗೆ ಬರುವುದು, ಒಂದಿಷ್ಟು ಅಡುಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗುವುದು, ಅಲ್ಲಿ ಬೆಳಗಿನವರೆಗೆ ಜತೆಯಲ್ಲಿರುವುದು. ಬೆಳಗ್ಗೆ ಆಸ್ಪತ್ರೆಯಿಂದ ಮನೆ, ತಿಂಡಿ ಮುಗಿಸಿ, ಬುತ್ತಿ ತುಂಬಿಕೊಂಡು ಆಫೀಸಿಗೆ. ಸುಮಾರು ಮೂರು ತಿಂಗಳಾಗುವಾಗ ಸ್ನೇಹಿತ ಸ್ವಲ್ಪ ಚೇತರಿಸಿಕೊಂಡ. ಜೀವನ್ಮರಣದ ಹೋರಾಟದಲ್ಲಿ ಗೆದ್ದು ಬಂದಿದ್ದ.

ಅಲ್ಲಿಂದ ಮುಂದಿನ ಚಿಕಿತ್ಸೆಗೆ ಭಾರತಕ್ಕೆ ವಾಪಸ್ಸಾದ. ನಾzು ಅಲ್ಲಿಂದ ಇನ್ನೊಂದು ದೇಶಕ್ಕೆ ಹೋದೆ. ನಂತರ ಕಂಪನಿ ಬದಲಿಸಿದೆ. ಇಮೇಲ್, ಫೋನ್ ನಂಬರ್ ಇವೆಲ್ಲ ಬದಲಾದವು. ಒಟ್ಟಾರೆ ಅವನ ಜತೆ ಸಂಪರ್ಕ ಕಡಿದು ಹೋಯಿತು. ನಾನೂ ಮರೆತೆ. ಇದೆಲ್ಲ ಆಗಿ ಐದು ವರ್ಷಗಳು ಉರುಳಿದವು.
ನಂತರ ಒಂದು ದಿನ ಫೇಸ್‌ಬುಕ್‌ನಲ್ಲಿ ಸಂಪರ್ಕವಾಯಿತು. ಪ್ರಫುಲ್ಲ ತಕ್ಷಣ ಫೋನ್ ಮಾಡಿದ. “ಕಳೆದ ಐದು ವರ್ಷಗಳಲ್ಲಿ ನಿನ್ನನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ. ನಾನು ಉರುಗ್ವೆಯಿಂದ ಹೊರಡುವಾಗ ನಿನಗೆ ಒಂದು ಧನ್ಯವಾದ ಸಹ ಹೇಳಲಾಗಲಿಲ್ಲ. ನನಗೆ ಅದು ಇಷ್ಟು ಕಾಲ ಕಾಡುತ್ತಿತ್ತು. ಮಧ್ಯರಾತ್ರಿ ನಿದ್ದೆಯಿಂದ ಎzಗಲೂ ನೆನಪಿಸಿಕೊಂಡದ್ದಿದೆ. ಅಂತೂ ಇವತ್ತು ನೀನು ಸಿಕ್ಕೆ. ಸಮಾಧಾನವಾಗಿದೆ" ಎಂದು ನಿಟ್ಟುಸಿರುಬಿಟ್ಟ.
ನಾವು ಸ್ನೇಹಿತರು ಆ ಪರದೇಶದಲ್ಲಿ ಪ್ರಫುಲ್ಲನ ಆತ್ಮಸ್ಥೈರ್ಯಕ್ಕೆ ಬಲವಾಗಿ ನಿಂತಿzವು. ಅಂಥ ಸಂದರ್ಭದಲ್ಲಿ ಯಾರೇ ಇದ್ದರೂ ಇದೇ ರೀತಿ ಬೆಂಬಲಿಸುತ್ತಿದ್ದರು, ವ್ಯವಹರಿಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಪ್ರತಿ ಸೆಪ್ಟೆಂಬರ್ 21 ಬಂತೆಂದರೆ ಪ್ರಫುಲ್ಲನ ಫೋನ್ ಬರುತ್ತದೆ. ಅದು ಅವನು ಉರುಗ್ವೆ ದೇಶದ ಆಸ್ಪತ್ರೆಯಿಂದ ಹೊರ ಬಂದ ದಿನ.
ಅದನ್ನು ಅವನು ಎರಡನೇ ಹುಟ್ಟುಹಬ್ಬದ ದಿನವೆಂದೇ ಆಚರಿಸಿಕೊಳ್ಳುವುದು. ಆ ದಿನ ಅವನೇ ಅಂದು ಜತೆಗಿದ್ದ ಸ್ನೇಹಿತರಿಗೆಲ್ಲ ಫೋನ್ ಮಾಡುತ್ತಾನೆ. ಬೇಡವೆಂದರೂ ಮೊದಲೈದು ನಿಮಿಷ ಹಾಡಿ ಹೊಗಳುತ್ತಾನೆ. ಥ್ಯಾಂಕ್ಸ್ ಎಂದು ವಾಕ್ಯಕ್ಕೊಮ್ಮೆ ಹೇಳುತ್ತಾನೆ. ಮಗುವಿನ ಗುಣದವನು. ಈಗ ಅವನಿಗೆ ಮದುವೆಯಾಗಿದೆ, ಮಗಳಿದ್ದಾಳೆ.
ಅವರೆಲ್ಲರೂ ಈ ದಿನ ನಮ್ಮ ಜತೆ ಮಾತನಾಡುತ್ತಾರೆ. ಹಿಂದಿನ ವಾರ- ಸೆಪ್ಟೆಂಬರ್ 21. ಅವನ ಫೋನ್ ಬಂದಿತ್ತು. ಪ್ರಫುಲ್ಲ ಪ್ರತಿ ವರ್ಷ ಫೋನ್ ಮಾಡಿದಾಗಲೂ ಇದೊಂದು ವಿಷಯ ಪ್ರಸ್ತಾಪ ಮಾಡದೇ ಇರುವುದಿಲ್ಲ. ಅದು ನಮ್ಮೆಲ್ಲರ ಸಂಪರ್ಕ ಕಡಿದುಹೋದ ಆ ಐದು ವರ್ಷದ ಬಗ್ಗೆ. ಆ ದಿನಗಳಲ್ಲಿ ನಿತ್ಯ ನೆನಪಿಸಿಕೊಂಡು ‘ಧನ್ಯವಾದ ಹೇಳಲಿಕ್ಕಾಗಲಿಲ್ಲವಲ್ಲ’ ಎಂದು ಕೊರಗುತ್ತಿದ್ದ ಬಗ್ಗೆ.
ನಂತರ ನಿರಾಳವಾದ ಬಗ್ಗೆ. ಹಾಗೆ ನೋಡಿದರೆ ಯಾವ ಸ್ನೇಹಿತರೂ ಅವನ ಬಗ್ಗೆ ಅನ್ಯಥಾ ಭಾವಿಸಿರಲಿಲ್ಲ, ಇಷ್ಟೆ ಮಾಡಿದರೂ ಸಂಪರ್ಕದಲ್ಲಿಯೂ ಇಲ್ಲವೆಂದು ಅಂದುಕೊಂಡಿರಲಿಲ್ಲ. ಎಲ್ಲರೂ ಅವರವರ ಜೀವನದಲ್ಲಿ ಮುಳುಗಿದ್ದರು. ಆದರೆ ಹಾಗೊಂದು ಮಾತು- ಥ್ಯಾಂP ಹೇಳಲೇ ಇಲ್ಲವಲ್ಲ ಎನ್ನುವ ವಿಷಯ ಮಾತ್ರ ಪ್ರಫುಲ್ಲನನ್ನು ಅಷ್ಟು ಕಾಡಿತ್ತು. ಅವನೇ ಹೇಳುವಂತೆ ಅದು ಹೇಳಲಾರದ ಮಾತಿನ ಭಾರ.. ಮಣಭಾರ!
ಪ್ರತಿಯೊಬ್ಬರಲ್ಲೂ ಇಂಥ ಹೇಳಲಾಗದ ಮಾತುಗಳು ಅದೆಷ್ಟೋ ಇರುತ್ತವೆ. ಸರಿಯಾದ ಸಮಯ ದಲ್ಲಿ ಹೇಳಲಾರದ ಪ್ರೀತಿಯ ನಿವೇದನೆ, ಕೇಳದ ಕ್ಷಮೆ ಇವೆಲ್ಲವೂ ಹಾಗೆಯೇ. ಅದು ಮಾತಿನ ಭಾರವಲ್ಲ. ಆಡದ ಮಾತಿನ ನಿರ್ವಾತಕ್ಕಿರುವ ಭಾರ. ಹೇಳದ ಮಾತುಗಳೇ ಹಾಗೆ. ಆಡಿದ ಮಾತಿ ನಂತೆ ಮಾಯವಾಗಿಬಿಡುವುದಿಲ್ಲ. ಹಾಗೆಯೇ ನಮ್ಮಲ್ಲಿ ಪಶ್ಚಾತ್ತಾಪಕ್ಕೆಂದು ಉಳಿದು ಬಿಡುತ್ತವೆ. ಕೆಲವೊಮ್ಮೆ ಪಾಠವನ್ನೂ ಕಲಿಸುತ್ತವೆ.
ಮಾತು ಸಂಬಂಧಗಳನ್ನು ರೂಪಿಸುತ್ತದೆ ಎನ್ನುತ್ತಾರೆ. ಆದರೆ ಅದೆಷ್ಟೋ ಸಂಬಂಧಗಳು ವಿರೂಪ ಗೊಳ್ಳುವುದೂ ಮಾತಿನಿಂದಲೇ. ಆದರೆ ಸಂಬಂಧಗಳು ಕುರೂಪಗೊಳ್ಳುವುದು ಬಹುತೇಕ ಆಡದ ಮಾತಿನಿಂದಾಗಿ. ಅದೆಷ್ಟೋ ಕುಟುಂಬಗಳಲ್ಲಿ ಸಂಬಂಧಗಳು ಜಟಿಲವಾಗುತ್ತಿದ್ದಂತೆ ಮೌನವೂ ಒಂದು ಭಾಷೆಯಾಗಿ ಮನೆತುಂಬ ಆವರಿಸಿರುತ್ತದೆ.
ತಂದೆ ತನ್ನ ಮಗನನ್ನು ಅದೆಷ್ಟೇ ಪ್ರೀತಿಸುತ್ತಿದ್ದರೂ ಅವನ ಬಗೆಗಿನ ಹೆಮ್ಮೆಯನ್ನು ಬಾಯಿಬಿಟ್ಟು ಹೇಳಿರುವುದೇ ಇಲ್ಲ. ಅತ್ತೆ ಮಾಡಿದ ತಪ್ಪನ್ನು ಹೇಳದೇ ಸೊಸೆ ಕೊಸರುತ್ತಲೇ ಇರುತ್ತಾಳೆ. ಅಥವಾ ತಾಯಿ ತನ್ನ ಮಗಳೊಂದಿಗಿನ ಸಂಬಂಧ ಬದಲಾಗಬಾರದೆಂಬ ಕಾರಣಕ್ಕೆ ‘ನೀನು ದಾರಿ ತಪ್ಪು ತ್ತಿದ್ದೀಯ’ ಎಂದು ಹೇಳಿರುವುದೇ ಇಲ್ಲ. ಗಂಡ ಹೆಂಡತಿ ಸಂಬಂಧದಲ್ಲೂ ಅಷ್ಟೆ- ಎಷ್ಟೊಂದು ಹೇಳದ ವಿಷಯಗಳು, ಆಡದ ಮಾತುಗಳು. ಇಲ್ಲ- ಈಗ ಮುಂದೂಡಿದ ಮಾತುಗಳು ಮುಂದೆಂದೂ ಹೇಳಲಾಗದೆ ಕೊರಗಾಗಿ ಕಾಡುತ್ತದೆ.
ಅದೆಷ್ಟೋ ಸ್ನೇಹಿತರು ಚಿಕ್ಕದೊಂದು ವಿಷಯಕ್ಕೆ ಮನಸ್ತಾಪ ಮಾಡಿಕೊಂಡಿರುತ್ತಾರೆ. ನಂತರದಲ್ಲಿ ಇಬ್ಬರೂ ಮಾತನಾಡುವುದನ್ನೇ ನಿಲ್ಲಿಸಿಬಿಡುತ್ತಾರೆ. ಕೆಲ ಕಾಲ ಸರಿದ ನಂತರ ಅದೇ ಮೌನ ಇನ್ನಷ್ಟು ಗಾಢವಾಗುತ್ತದೆ. ವಿಷಯ ಅಷ್ಟು ದೊಡ್ಡದಿರು ವುದಿಲ್ಲ. ಸುಮ್ಮನೆ ಇಬ್ಬರಬ್ಬರು- “ಕ್ಷಮಿಸು ಮಾರಾಯಾ, ಮರೆತುಬಿಡೋಣ, ಆದದ್ದು ಆಗ್ಲಿ ಬಿಡು" ಎಂದರೆ ಅದೆಲ್ಲವೂ ಮುಗಿದು ಹೋಗುತ್ತದೆ.
ಅಂಥ ಸ್ನೇಹ ಇನ್ನಷ್ಟು ಗಟ್ಟಿಯೇ ಆಗುತ್ತದೆ. ಆದರೆ ಆ ಮಾತುಗಳನ್ನು ಇಬ್ಬರೂ ಆಡುವುದಿಲ್ಲ. ಮೌನದಲ್ಲಿಯೇ ಜಗಳ ಮುಂದುವರಿಯುತ್ತದೆ. ಸಂಬಂಧದಲ್ಲಿ ಪ್ರೀತಿ ವ್ಯಕ್ತಪಡಿಸುವುದನ್ನು ಕೆಲವರು ಕೃತಕ ಎಂದು ಭಾವಿಸುತ್ತೇವೆ. ಇದನ್ನೂ ಬಾಯಿ ಬಿಟ್ಟು ಹೇಳಬೇಕೆ? ಅದರ ಅವಶ್ಯಕತೆ ಯೇ ಇಲ್ಲದ ಸಂಬಂಧ ನಮ್ಮದು ಎಂದು ನಂಬಿರುತ್ತೇವೆ. ಬಹಳ ದಿನದ ನಂತರ ಕಂಡಾಗ ಅಪ್ಪಿಕೊಳ್ಳುವುದು (hug), ‘ನಿನ್ನನ್ನು ಬಹಳ ಮಿಸ್ ಮಾಡಿಕೊಂಡೆ, ಕಾಣದೆ ಬೇಸರ ಬಂದಿತ್ತು’ ಇತ್ಯಾದಿ ಹೇಳುವಾಗ ತಡವರಿಸುತ್ತೇವೆ. ನಿತ್ಯ ಸಿಗುವ ಸ್ನೇಹಿತನಲ್ಲಿ ಧನ್ಯವಾದ ಎಂದು ಹೇಳಿರುವುದೇ ಇಲ್ಲ.
ಸ್ನೇಹಿತರಲ್ಲಿ ಥ್ಯಾಂಕ್ಸ್ ಎಲ್ಲ ಏಕೆ ಎನ್ನುವುದು ದೊಡ್ಡ ತಪ್ಪು ಗ್ರಹಿಕೆ. ಒಬ್ಬರ ಸಾಂಗತ್ಯ ಇಷ್ಟ ಎಂದು ಅವರಲ್ಲಿ ನೇರ ವ್ಯಕ್ತಪಡಿಸುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಒಬ್ಬರ ಮೇಲೆ ಇನ್ನೊಬ್ಬರ ನಂಬಿಕೆಯಿದ್ದರೆ- ಪ್ರೀತಿ ತಿಳಿದು ಬಿಡುತ್ತದೆ- ಇವೆಲ್ಲ ಬೊಗಳೆ. ಭಾವನಾ ಗ್ರಾಹ್ಯ ಸೂಕ್ಷ್ಮತೆ ಎಲ್ಲರಲ್ಲೂ ಒಂದೇ ಇರಲಿಕ್ಕೆ ಹೇಗೆ ಸಾಧ್ಯ? ವ್ಯತ್ಯಾಸವಿರುತ್ತದೆ.
ಹಾಗಾಗಿ ಅದರಾಚೆ ಮೌಖಿಕ ಪ್ರೀತಿಯನ್ನು ವ್ಯಕ್ತಪಡಿಸುವುದು ಅವಶ್ಯಕತೆಯಾಗಿರುತ್ತದೆ. ಬಿಗುಮಾನದಿಂದ, ಅಲಕ್ಷ್ಯದಿಂದ, ತಾತ್ಸಾರದಿಂದ, ಅಥವಾ ‘ನನ್ನ ವ್ಯವಹಾರವೇ ಪ್ರೀತಿಯನ್ನು ಹೇಳುತ್ತದೆ’ ಎಂದು ನಮ್ಮಷ್ಟಕ್ಕೆ ನಾವೇ ಭಾವಿಸಿದಲ್ಲಿ- ಭಾವ ಭೇದವುಂಟಾಗುತ್ತದೆ.
ಕೌಟುಂಬಿಕ ಮತ್ತು ಸ್ನೇಹ ಸಂಬಂಧಗಳಲ್ಲಿ ಪ್ರೀತಿ ವ್ಯಕ್ತಪಡಿಸದೆ, ಇನ್ನೊಬ್ಬರು ನಾವು ಹೇಳಲು ಕಷ್ಟಪಡುವ ವಿಷಯವನ್ನು ಹೇಗೋ ಅರಿತು ಬಿಡಬೇಕು ಎಂದರೆ ಹೇಗೆ? ಪ್ರೀತಿಯನ್ನು ಹದವಾದ ಮಾತಿನಲ್ಲಿ ವ್ಯಕ್ತಪಡಿಸಿದಲ್ಲಿ ಎದುರಿಗಿರುವವರಲ್ಲಿ ಸಂಬಂಧದ ಸ್ಪಷ್ಟತೆ ಹೆಚ್ಚುತ್ತದೆ- ಗೊಂದಲ ಗಳಿರುವುದಿಲ್ಲ. ಹೇಳದಿದ್ದಲ್ಲಿಯೇ ಸಮಸ್ಯೆಯಾಗುವುದು. ಈ ವಿಷಯದಲ್ಲಿ ಮೌನ ಬಂಗಾರವೆಂದು ನಂಬಿ ಕೂತರೆ- ಸಂಬಂಧ ಕಬ್ಬಿಣವಾಗಿರುತ್ತದೆ!
ಕಾರ್ಪೊರೇಟ್ ಜಗತ್ತಿನಲ್ಲಿ ಮಾತನಾಡದೇ ಇವುವವರದ್ದೇ ದೊಡ್ಡ ಸಮಸ್ಯೆ. ಕೆಲವೊಮ್ಮೆ ಮೀಟಿಂಗ್ ನಲ್ಲಿ ಪ್ರಾಜೆಕ್ಟ್ ಸ್ಟೇಟಸ್-ಯೋಜನಾ ಸ್ಥಿತಿಯ ವಿವರಣೆ ಪಡೆಯುವಾಗ ಸುಸ್ತಾಗಿ ಬಿಡುತ್ತದೆ. ಕೆಲವರು ಹೇಗಿರುತ್ತಾರೆಂದರೆ, ಅವರ ಗಂಟಲೊಳಗೆ ಕೈ ಹಾಕಿದರೂ ಹೊರಗೆ ಬರುವುದು ಎರಡೇ ಮಾತು. ನನ್ನದೊಬ್ಬ ಟೀಮ್ ಮೆಂಬರ್- ಸಹವರ್ತಿ ಇದ್ದ.
ಹುಷಾರಿ ಹುಡುಗ. ಆದರೆ ಮೀಟಿಂಗ್‌ನಲ್ಲಿ ಮಾತ್ರ ಮಾತನಾಡುತ್ತಲೇ ಇರಲಿಲ್ಲ. ಹೇಳಬೇಕಾದ ದ್ದನ್ನು ಹೇಳಲು ಹಿಂಜರಿಯುತ್ತಿದ್ದ. ಮೀಟಿಂಗ್ ಎಂದರೆ ಜನ ಪೂರ್ತಿ ಮೌನ. ಆದರೆ ಮೀಟಿಂಗ್ ಮುಗಿಯುತ್ತಿದ್ದಂತೆ ನನಗೆ ಅವನಿಂದ ಫೋನ್ ಬರುತ್ತಿತ್ತು. ಈ ಯೋಜನೆ ಹೀಗೆ ಮಾಡಿದರೆ ಸರಿ ಎಂದು ವಿವರಿಸುತ್ತಿದ್ದ.
ಕಾರ್ಯಪಟು, ಬುದ್ಧಿವಂತ. ನಾನು ಒಂದೆರಡು ಬಾರಿ ಧೈರ್ಯದಿಂದ ಮಾತನಾಡಬೇಕೆಂದು ಲೀಡರ್ ಶಿಪ್ ಭಾಷಣ ಬಿಗಿದರೂ ಪ್ರಯೋಜನವಾಗಲಿಲ್ಲ. ಅದೆಷ್ಟೇ ಅವಕಾಶ ಕೊಟ್ಟರೂ ಅವನು ಬಾಯಿ ಮಾತ್ರ ತೆರೆಯುತ್ತಿರಲಿಲ್ಲ. ಕಾರ್ಪೊರೇಟ್‌ನಲ್ಲಿ ಮಾತನಾಡದವನು ಉದ್ಧಾರ ವಾಗುವುದಿಲ್ಲ. ಏಕೆಂದರೆ ಮಾತು- ಸಂವಹನವೇ ಇಲ್ಲಿನ ಮೊದಲ ಅವಶ್ಯಕತೆ.
ಈ ಜಗತ್ತಿನಲ್ಲಿ ಮಾತನ್ನೇ ಆಡದ, ಆದರೆ ಬುದ್ಧಿವಂತರಾಗಿರುವ ಜನರು ಹೇರಳವಾಗಿದ್ದಾರೆ. ಅವರು ಮಾತನಾಡಬೇಕಾದಲ್ಲಿ ಮಾತನಾಡುವುದಿಲ್ಲ- ಆಮೇಲೆ ಅದನ್ನು ಹೇಳಲಾಗದ ಚಡಪಡಿಕೆ. ಮಾತಿನ ಹಿಂಜರಿಕೆಯೇ ಅವರನ್ನು ಅದೆಷ್ಟೋ ಅವಕಾಶದಿಂದ ವಂಚಿತವಾಗಿಸಿರುತ್ತದೆ. ಆದರೂ ಬುದ್ಧಿ ಕಲಿಯುವುದಿಲ್ಲ. ನಾಚಿಕೆ-ಹಿಂಜರಿಕೆ. ಅಂಥವರು ಉದ್ಯೋಗದಲ್ಲಿ ಜಾಸ್ತಿ ಬೆಳೆಯಲಿಕ್ಕಾಗು ವುದಿಲ್ಲ.
ಅವರು ನಿರಂತರ ಹೇಳಲಾಗದ ಮಾತಿನಿಂದ ಕಷ್ಟ ಅನುಭವಿಸುತ್ತಲೇ ಇರುತ್ತಾರೆ. ಇವರು ಎಲ್ಲಾ ಉದ್ಯೋಗ ಪ್ರಭೇದಗಳಲ್ಲಿಯೂ ಇರುತ್ತಾರೆ- ಅವರನ್ನು ಕೆಲವೊಮ್ಮೆ ಸಮಾಜವು ‘ಎಲೆ ಮರೆಯ ಕಾಯಿ’ ಎಂದು ವಿಶೇಷಣ ಕೊಟ್ಟು ಗೌರವಿಸಿ ಪಕ್ಕಕ್ಕಿಟ್ಟಿರುತ್ತದೆ. ಅವರೂ ಕ್ರಮೇಣ ‘ಎಲೆ ಮರೆಯ ಕಾಯಿ ಎನ್ನುವುದೂ ಒಂದು ಗೌರವ’ ಎಂದು ನಂಬಿ ಬಿಡುತ್ತಾರೆ.
ಹೇಳಿದ ಸುಳ್ಳಿಗಿಂತ ಹೆಚ್ಚಾಗಿ ಹೇಳಲಾಗದ ಸತ್ಯ ಕಾಡುತ್ತದೆ. ಸರಿಯಾದ ಸಮಯಕ್ಕೆ ಹೇಳಲಾಗದ ಸತ್ಯ, ತೆಗೆದುಕೊಳ್ಳಲಾಗದ ನಿಲುವು ನೆನಪಾದಾಗಲ್ಲ ಹಿಂಸಿಸುತ್ತವೆ. ಅದೆಷ್ಟೋ ಸನ್ನಿವೇಶದಲ್ಲಿ ಹೇಳುವ ಸತ್ಯ ಸಹ್ಯವಾಗಿರುವುದಿಲ್ಲ. ಹಾಗಾಗಿ ಸುಳ್ಳಿಗಿಂತ ಮೌನವೇ ಸರಿಯೆನಿಸಿ ಸುಮ್ಮನಾದರೆ ಅಂಥ ಸತ್ಯದ ಭಾರ ಜಾಸ್ತಿ. ಆ ಕಾರಣಕ್ಕೇ- ಸತ್ಯ ಹೇಳಿಬಿಡುವುದರಿಂದ ಕೇಳುವವರು, ಹೇಳುವವರು ಇಬ್ಬರೂ ನಿರಾಳರಾಗುವುದು.
ವೃದ್ಧಾಪ್ಯದಲ್ಲಿ ಹಿಂದೆ ಸಿಟ್ಟಿನಲ್ಲಿ ಆಡಿದ ಮಾತು, ಘಟನೆ, ವರ್ತನೆ ಇತ್ಯಾದಿಗಿಂತ ಹೆಚ್ಚಾಗಿ ಕಾಡುವುದು ಅದೇ ಹಿಂದೆ ಹೇಳದ ಮಾತುಗಳು. ವ್ಯಕ್ತಪಡಿಸದ ಪ್ರೀತಿ, ಕೇಳದ ಕ್ಷಮೆ, ಹಳೆಯ ಸ್ನೇಹಿತನಿಗೆ ಮಾಡದ ಫೋನ್ ಕರೆ, ಎದುರಿನವರಿಗೆ ಅರ್ಥವಾಗಿಬಿಡುತ್ತದೆ ಎಂದು ನಂಬಿಕೊಂಡ ವಾತ್ಸಲ್ಯ, ಮಮತೆ ಇವೆಲ್ಲವೂ ವೃದ್ಧಾಪ್ಯದಲ್ಲಿ ಪ್ರತಿಧ್ವನಿಸುತ್ತವೆ.
ಪ್ರೀತಿ, ಸತ್ಯ, ಮಾತನಾಡಲು ಧೈರ್ಯ ಇವೆಲ್ಲದಕ್ಕೂ ಒಂದು ಸಮಯ ಮಿತಿಯಿದೆ. ಆಡದ ಮಾತಿಗೂ ಸಮಯ ಮಿತಿ ಯಿದೆ. ಆ ಸಮಯ ನಾವು ಅಂದುಕೊಂಡದ್ದಕ್ಕಿಂತ ಬೇಗ ಮುಗಿದು ಹೋಗುತ್ತದೆ.
‘ಐ ಲವ್ ಯು’ ಎನ್ನುವಾಗ ತಿರಸ್ಕಾರದ ಭೀತಿ. ಆಫೀಸಿನಲ್ಲಿ ಬಾಸ್ ಎದುರಿಗೆ ಮಾತನಾಡುವಾಗ ತಪ್ಪಿದರೆ? ಎಂಬ ಅವಮಾನದ ಭೀತಿ, ನನ್ನದೇ ತಪ್ಪಾಗಿದೆ ಎನ್ನುವಾಗ, ಕ್ಷಮೆಯಾಚಿಸುವಾಗ ಅಹಂನ ಭೀತಿ- ಹೀಗೆ ಒಂದೊಂದು ಭೀತಿಯ ಕಾರಣವಂತೂ ಎಲ್ಲದಕ್ಕೂ ಇದೆ. ಆ ಕಾರಣಗಳಿಗೆ ನಮ್ಮದೇ ಸಮಜಾಯಿಷಿಯೂ ಇದೆ. ಆದರೆ ಇಂಥ ವಿಷಯಗಳಲ್ಲಿ- ಭೀತಿಯಿರಬೇಕಾದದ್ದು ಮೌನದ್ದು. ವ್ಯಕ್ತಪಡಿಸದ ಭಾವನೆಗಳು, ತಪ್ಪಿದ ಸಂಬಂಧಗಳು ಪಶ್ಚಾತ್ತಾಪವಾಗಿ ನೆನಪಾಗುತ್ತವೆ. ಬಹುತೇಕ ಮನುಷ್ಯ ಸಂಬಂಧಗಳಲ್ಲಿ ಮೌನ ಉಸಿರು ಗಟ್ಟಿಸುತ್ತದೆ.
ಹಾಗಾದರೆ ಏನು ಮಾಡಬೇಕು? ಸಿಂಪಲ. ಹೇಳಬೇಕಾದದ್ದನ್ನು ಹೇಳಿಬಿಡಬೇಕು- ಅಷ್ಟೇ. ವ್ಯಕ್ತ- ಮತ್ತಿನ್ನೆನೂ ಅಲ್ಲ. ಅಹಂ, ಅವಮಾನ, ಸೋಲು, ಮಣ್ಣು ಮಸಿ ಇವೆಲ್ಲವನ್ನು ಕೆಲವೇ ನಿಮಿಷ ಪಕ್ಕಕ್ಕಿಟ್ಟಾದರೂ ಸರಿ. ಇಲ್ಲದಿದ್ದರೆ ಹೇಳಲಾಗದ ಮಾತಿನ ‘ಆಲೂಗಡ್ಡೆ ಚೀಲ’ವನ್ನು ಮುಂದೆ ಹೊತ್ತೇ ತಿರುಗುತ್ತಿರಬೇಕಾಗುತ್ತದೆ, ಬದುಕುತ್ತಿರಬೇಕಾಗುತ್ತದೆ. ಅದೋ- ಮಣಭಾರ!!