ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

ಟ್ರಂಪ್ ಸಹಿ ಹಾಕಿದ್ದು ಲಾಗು ಆದರೆ ಹತ್ತು-ಹನ್ನೆರಡು ಲಕ್ಷ ಭಾರತೀಯರು- ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳನ್ನು ದಿನಒಪ್ಪತ್ತಿನಲ್ಲಿ ಅಮೆರಿಕದ ಕಂಪನಿಗಳು ಕಳೆದುಕೊಳ್ಳುತ್ತಿದ್ದವು. ಅವರೆಲ್ಲರನ್ನು ಅಮೆರಿಕದ ಕಂಪನಿಗಳು ಬೀಳ್ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪರಿಣಾಮ ಅಮೆರಿಕದ ಮತ್ತು ಭಾರತದ ಆರ್ಥಿಕತೆಗೆ ನೇರ ಹೊಡೆತ ಬೀಳುತ್ತಿತ್ತು. ಏಕೆಂದರೆ ಅಷ್ಟೊಂದು ದೊಡ್ಡ ಮೊತ್ತದ ವ್ಯವಹಾರ ಇದು.

ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

-

ಶಿಶಿರಕಾಲ

shishirh@gmail.com

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿನ ಶುಕ್ರವಾರ ಎಚ್-1ಬಿ ವೀಸಾದ ಕುರಿತು ಹೊರಡಿಸಿದ ಫರ್ಮಾನು ದೊಡ್ಡ ಸುದ್ದಿಯಾಯಿತು, ಬಹುಚರ್ಚಿತವಾಯಿತು. ಆ ಸುದ್ದಿ ಕೇವಲ ವೀಸಾದಲ್ಲಿರುವ ಭಾರತೀಯರನ್ನಷ್ಟೇ ದಂಗುಬಡಿಸಿದ್ದಲ್ಲ. ಅಸಲಿಗೆ ಆ ದಿನ ಅಮೆರಿಕದ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಆಸ್ಪತ್ರೆ, ವಿಶ್ವವಿದ್ಯಾಲಯಗಳು, ಶಿಪ್ಪಿಂಗ್ ಹೀಗೆ ಬಹುತೇಕ ದೊಡ್ಡ ಕಂಪನಿಗಳು ಕಂಪಿಸಿದವು. ಗೂಗಲ, ಅಮೆಜಾನ್, ಆಪಲ್ ಮೊದಲಾದ ಟ್ರಿಲಿಯನ್ ಡಾಲರ್ ಕಂಪನಿಗಳ ಉನ್ನತಾಧಿಕಾರಿಗಳು ಶುಕ್ರವಾರ ಸಂಜೆ ಎಮರ್ಜೆನ್ಸಿ ಮೀಟಿಂಗ್‌ನಲ್ಲಿ ಕೂತು ಪರಿಣಾಮದ ಬಗ್ಗೆ ಲೆಕ್ಕಹಾಕುತ್ತಿದ್ದರು ಎಂದರೆ ವಿಷಯದ ಗಂಭೀರತೆ ಎಷ್ಟಿರಬಹುದು.

ಇದು ಅತಿಶಯೋಕ್ತಿಯಲ್ಲ, ಅಷ್ಟು ಪ್ರಮಾಣದಲ್ಲಿ ಅಮೆರಿಕದ ಸಾಫ್ಟ್‌ ವೇರ್, ಎಂಜಿನಿಯರಿಂಗ, ವೈದ್ಯಕೀಯ ವಿಜ್ಞಾನ ಮತ್ತು ರಿಸರ್ಚ್ ವಿಭಾಗದಲ್ಲಿ ಎಚ್-1ಬಿ ವೀಸಾದವರು- ಭಾರತೀಯರು ದುಡಿಯುತ್ತಿದ್ದಾರೆ. ಇಲ್ಲಿ ಸಂಖ್ಯೆ ಮಾತ್ರ ದೊಡ್ಡದಲ್ಲ- ಅದರ ದುಪ್ಪಟ್ಟು ಪ್ರಮಾಣದ ಅವಲಂಬನೆಯೂ ಅಮೆರಿಕದ ಕಂಪನಿಗಳಿಗೆ ಇವರ ಮೇಲಿದೆ.

ಇದು ಒಂದು ಕಡೆ. ಇನ್ನೊಂದು ಕಡೆ, ಭಾರತದ ಜಿಡಿಪಿಯ ಐವತ್ತು ಪ್ರತಿಶತ ಆದಾಯ ಬರುವುದು ಸರ್ವೀಸ್ ಇಂಡಸ್ಟ್ರಿಯಿಂದ. ಅದರಲ್ಲಿ ಸಾಫ್ಟ್‌ ವೇರ್, ಬಿಪಿಒ, ಕಾಲ್ ಸೆಂಟರ್ ಇತ್ಯಾದಿಗಳಿವೆ. ಸುಮಾರು ಹದಿನಾರು ಲಕ್ಷ ಕೋಟಿ ರುಪಾಯಿ ಆದಾಯದ ವ್ಯವಹಾರ. ಇದೆಲ್ಲದಕ್ಕೆ ಈ ಎಚ್-1ಬಿ ವೀಸಾದಲ್ಲಿ ಅಮೆರಿಕದಲ್ಲಿರುವವರು ಅತ್ಯಂತ ಪ್ರಮುಖ ಕೊಂಡಿ. ಸುದ್ದಿ ಬಂದದ್ದು ಶುಕ್ರವಾರ ಸಂಜೆ. ಈಗ ಯೋಚಿಸಿದರೆ ಟ್ರಂಪ್ ಸಹಿ ಹಾಕಿ ಇಷ್ಟೊಂದು ರಾದ್ಧಾಂತ ಮಾಡಲಿಕ್ಕೆ ಶುಕ್ರವಾರ ಸಂಜೆಯ ಸಮಯವನ್ನು ಪ್ರಜ್ಞಾಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡದ್ದು ಎಂದೆನಿಸುತ್ತಿದೆ.

ಅಮೆರಿಕದ ಶುಕ್ರವಾರ ಸಾಯಂಕಾಲ ಅಂದರೆ ಅಮೆರಿಕ ಮತ್ತು ಜಗತ್ತಿನ ಎಲ್ಲಾ ಷೇರು ಮಾರುಕಟ್ಟೆಯ ವ್ಯವಹಾರವೆಲ್ಲ ಸಮಾಪ್ತಿಯಾಗಿರುತ್ತದೆ. ಉಳಿದ ಯಾವುದೇ ಸಮಯದಲ್ಲಿ ಈ ಸುದ್ದಿ ಹೊರಬಂದಿದ್ದರೆ ಅಮೆರಿಕದ ಷೇರು ಮಾರುಕಟ್ಟೆ ತಕ್ಷಣ ಕುಸಿಯುವ ಸಾಧ್ಯತೆಯಿತ್ತು. ಇದರಿಂದ ಟ್ರಂಪ್‌ಗೆ ಮುಖಭಂಗವಾಗುತ್ತಿತ್ತು.

ಇದನ್ನೂ ಓದಿ: Shishir Hegde Column: ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಟ್ರಂಪ್ ಸಹಿ ಹಾಕಿದ್ದು ಲಾಗು ಆದರೆ ಹತ್ತು-ಹನ್ನೆರಡು ಲಕ್ಷ ಭಾರತೀಯರು- ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳನ್ನು ದಿನಒಪ್ಪತ್ತಿನಲ್ಲಿ ಅಮೆರಿಕದ ಕಂಪನಿಗಳು ಕಳೆದುಕೊಳ್ಳುತ್ತಿದ್ದವು. ಅವರೆಲ್ಲರನ್ನು ಅಮೆರಿಕದ ಕಂಪನಿಗಳು ಬೀಳ್ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪರಿಣಾಮ ಅಮೆರಿಕದ ಮತ್ತು ಭಾರತದ ಆರ್ಥಿಕತೆಗೆ ನೇರ ಹೊಡೆತ ಬೀಳುತ್ತಿತ್ತು. ಏಕೆಂದರೆ ಅಷ್ಟೊಂದು ದೊಡ್ಡ ಮೊತ್ತದ ವ್ಯವಹಾರ ಇದು.

ಐಟಿ ವ್ಯವಹಾರದಲ್ಲಿ ಉತ್ಪನ್ನದ ಸಾಗಾಣಿಕೆಯ ಖರ್ಚಿಲ್ಲ. ಟ್ರಂಪ್ ಇದನ್ನು ಶುಕ್ರವಾರ ಸುದ್ದಿ ಮಾಡಿ, ಶನಿವಾರವೇ ಹಾಗಲ್ಲ ಹೀಗೆ ಎಂದು ಹೇಳಿದ್ದು ಯೋಜಿತ ಕೆಲಸದಂತೆ ಕಾಣಿಸುತ್ತದೆ. ಟ್ರಂಪ್ ಇತ್ತೀಚೆಗೆ ಇಂಥ ಹೆದರಿಸುವ ತಂತ್ರ ಮಾಡುವುದು ಸಾಮಾನ್ಯ. ಲಕ್ಷಾಂತರ ಎಂಜಿನಿಯರು ಗಳು, ವೈದ್ಯರು, ರಿಸರ್ಚ್ ವಿಭಾಗಗಳಲ್ಲಿ ಪಿಎಚ್‌ಡಿ ಮಾಡುವ ಶೇ. 51ರಷ್ಟು ಭಾರತೀಯರು- ಇವರನ್ನು ಒಂದೇ ಜಪಾಟಿಗೆ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಖುದ್ದು ಅಮೆರಿಕ ವ್ಯವಸ್ಥೆಯೇ ಇಲ್ಲ.

ಬಹುತೇಕರು ಇದು ವೈಯಕ್ತಿಕ ನಷ್ಟ, ವೀಸಾ ಹೊಂದಿದವರು ಮನೆ-ಮಠ ಮಾರಿ ಭಾರತಕ್ಕೆ ಬರಬೇಕಾಗುತ್ತದೆ ಎಂದೇ ವಿಶ್ಲೇಷಿಸಿದರು. ಆದರೆ ಇದರ ಪರಿಣಾಮ ವೈಯಕ್ತಿಕ ನಷ್ಟದ ಆಚೆ ಇಡೀ ಐಟಿ ವ್ಯವಸ್ಥೆ ಬುಡಮೇಲಾಗುತ್ತಿತ್ತು. ಅದೆಲ್ಲ ಕಾರಣಕ್ಕೇ ಟ್ರಂಪ್ ಶುಕ್ರವಾರ ಸಹಿ ಹಾಕಿ ಗಲಾಟೆ ಯೆಬ್ಬಿಸಿ, ಶನಿವಾರ ಮಧ್ಯಾಹ್ನವೇ ತಮ್ಮ ಪ್ರೆಸ್ ಸೆಕ್ರೆಟರಿ ಹತ್ತಿರ ಸ್ಪಷ್ಟನೆ ನೀಡಿದ್ದು. ಘಟನೆ ನಡೆದ ಸರಣಿಯನ್ನು ಇತ್ತೀಚಿನ ಜಾಗತಿಕ ಬೆಳವಣಿಗೆಯ ಜತೆ ತಳಕು ಹಾಕಿ ನೋಡಿದರೆ ಇದೆಲ್ಲದರ ಇನ್ನೊಂದು ಆಯಾಮ ಸ್ಪಷ್ಟವಾಗುತ್ತದೆ.

ಇಲ್ಲಿ ವೈಯಕ್ತಿಕ ನಷ್ಟದ ಪ್ರಶ್ನೆಯೇ ಅಸಂಬದ್ಧ. ಅಸಲಿಗೆ ಅವರೆಲ್ಲ ಭಾರತಕ್ಕೆ ಬಂದರೆ ಏನಾಗು ತ್ತಿತ್ತು? ಎಚ್-1ಬಿ ವೀಸಾದಲ್ಲಿರುವವರಲ್ಲಿ ಬಹುತೇಕರು ಐಟಿ ಉದ್ಯೋಗಿಗಳು. ಹಾಗಾಗಿ ಚಿಕ್ಕ ಲೆಕ್ಕ ಹೇಳಿ ಬಿಡುತ್ತೇನೆ- ಭಾರತದಲ್ಲಿ ಸರಿಸುಮಾರು 55 ಲಕ್ಷ ಐಟಿ ಸಂಬಂಧಿತ ಉದ್ಯೋಗಿಗಳಿದ್ದಾರೆ.

ಹಿಂದಿನ ತಿಂಗಳ ಲೇಬರ್ ರಿಪೋರ್ಟಿನ ಪ್ರಕಾರ, ಬರುವ ವರ್ಷದೊಳಗೆ 9 ಲಕ್ಷ ಎಂಜಿನಿಯರುಗಳ ತುರ್ತು ಅವಶ್ಯಕತೆ ಭಾರತದಲ್ಲಿದೆ. ಹೀಗಿರುವಾಗ ಈ ನುರಿತ ಮೂರ್ನಾಲ್ಕು ಲಕ್ಷ ಎಂಜಿಯರುಗಳು ಬಂದರೆ. ಅವರೆಲ್ಲ ನೂರಾನಲವತ್ತು ಕೋಟಿ ಜನಸಂಖ್ಯೆ, 55 ಲಕ್ಷ ಐಟಿ ವರ್ಕ್ ಫೋರ್ಸ್, ಹತ್ತಾರು ಮಹಾನಗರಗಳ ನೂರಾರು ಕಂಪನಿಗಳ ಯಾವುದೋ ಒಂದು ಚೇಂಬರಿನಲ್ಲಿ ಕರಗಿ ಹೋಗಿ ಬಿಡುತ್ತಿದ್ದರು.

ಇಲ್ಲಿ ಸರಕಾರದಿಂದ ಅವರಿಗೇನೂ ಮಾಡುವ ಸಾಧ್ಯತೆ, ಅವಶ್ಯಕತೆ ಎರಡೂ ಇರಲಿಲ್ಲ. ಏಕೆಂದರೆ ಐಟಿ ಜಗತ್ತಿನಲ್ಲಿ ರಿಸರ್ವೇಷನ್ ಇಲ್ಲ, ಉದ್ಯೋಗ ಕೊಡಿಸಲಿಕ್ಕೆ ಸರಕಾರಕ್ಕಾಗದು. ಹಾಗಾಗಿ ಬಂದವರು ಇನ್ನೊಂದು ಕಂಪನಿ ಸೇರುತ್ತಿದ್ದರು. ಕೆಲವರು ಅಮೆರಿಕದಲ್ಲಿ ಮಾಡಿದ ಅದೇ ಕೆಲಸ ವನ್ನು ಭಾರತದಲ್ಲಿ ಕೂತು ಮುಂದುವರಿಸುತ್ತಿದ್ದರು.

ಇನ್ನು ಕೆಲವರು ಏನೋ ಒಂದು ಉದ್ಯಮ ಶುರುಮಾಡುತ್ತಿದ್ದರು. ಅಷ್ಟೆ. ಆದರೆ ಮೊನ್ನೆ ಇದೆಲ್ಲ ನಡೆಯುತ್ತಿರುವಾಗ ಕೆಲವು ಫೇಸ್ ಬುಕ್ ವಿಶ್ಲೇಷಕರು, ಮಾಧ್ಯಮದವರು ಈ ಬೆಳವಣಿಗೆಯ ಪರಿಣಾಮವನ್ನು ಬಹಳ ವಿಚಿತ್ರವಾಗಿ ನಿರೂಪಿಸಿದ್ದು ಗಮನಿಸಿದೆ. ಅವರೆಲ್ಲರ ಗಮನ ಹೆಚ್ಚು ಕಡಿಮೆ ಈ ವಾಪಸ್ ಬರುವ ಐದು ಲಕ್ಷ ಜನರ ಮೇಲೆಯೇ ಇತ್ತು. ಅದೇ ದೇಶದ ತಲೆನೋವು ಎಂಬಂತೆ.

‘ಅಮೆರಿಕಕ್ಕೆ ಹೋದ ಎಂಜಿನಿಯರುಗಳು ಹಣದ ಆಸೆಗೆ ದೇಶಬಿಟ್ಟು ಹೋದವರು, ಅಲ್ಲಿ ಅವರು ಅಗ್ಗದ ಕೆಲಸಗಾರರು, ಅವರಿಗೆಲ್ಲ ತಕ್ಕ ಶಾಸ್ತಿಯಾಯಿತು’ ಹೀಗೆ ಏನೇನೋ. ಈ ಹಿಂದೆ ಇಂಥದೇ ವರ್ತನೆಯನ್ನು ಕೋವಿಡ್ ಆರಂಭದ ದಿನಗಳಲ್ಲೂ ಕಂಡದ್ದು ನೆನಪಿದೆ. ಅಮೆರಿಕದಿಂದ ಭಾರತಕ್ಕೆ ಬರುವವರು ಅವರಿಗರಿವಿಲ್ಲದೆ ಕೋವಿಡ್ ಸೋಂಕು ಹೊಂದಿದ್ದರೆ - ‘ಇವರಿಗೆ ಈಗ ದೇಶ ಬೇಕಾಯ್ತಾ? ದೇಶ ಬಿಟ್ಟು ಹೋದವರು ರೋಗ ತಂದರು’ ಇತ್ಯಾದಿ. ನಿಮಗೆ ತಿಳಿದಿರಲಿ, ಪ್ರತಿದಿನ ಅಮೆರಿಕ ಮತ್ತು ಭಾರತದ ನಡುವೆ, ಇತ್ತಿಂದತ್ತ-ಅತ್ತಿಂದಿತ್ತ ಎಂಟು ಸಾವಿರ ಮಂದಿ ಓಡಾಡುತ್ತಾರೆ!

ಇನ್ನು ಕೆಲವರು, ‘ಈಗ ಐದುಲಕ್ಷ ಮಂದಿ ವಾಪಸ್ ಬರ್ತಾರಂತೆ, ಅವರಿಗೆ ಬೇರೆ ವಿಧಿಯೇ ಇಲ್ಲ. ಅವರೆಲ್ಲ ಅಲ್ಲಿ ಎಷ್ಟೆ ಸಾಲ ಮಾಡಿಕೊಂಡು ಮನೆ ಕಾರು ಎಲ್ಲ ತೆಗೆದುಕೊಂಡಿರುತ್ತಾರೆ. ಈಗ ಅದೆಲ್ಲ ನಷ್ಟಕ್ಕೆ ಮಾರಿ ಬರಬೇಕು’- ಹೀಗೆ ತರಹೇವಾರಿ ಮಾತಾಡಿದರು. ಇನ್ನೊಂದು ಕಡೆ, ‘ಅವರನ್ನು ಭಾರತ ದೇಶ ಸರಿಯಾಗಿ ಬಳಸಿಕೊಳ್ಳಬೇಕು, ಅವರಿಂದ ಭಾರತದ ಆರ್ಥಿಕತೆ ಬದಲಾಗಿ ಬಿಡುತ್ತದೆ’ ಇತ್ಯಾದಿ ಮಾತು. ಹೀಗೆ ಊಹೆಯ ಮೇಲೊಂದು ಊಹೆ.

ಒಬ್ಬರಂತೂ, ಈ ಲಕ್ಷಾಂತರ ಮಂದಿಯನ್ನು ಹೇಗೆ ಸದ್ಬಳಕೆ ಮಾಡುಕೊಳ್ಳಬೇಕು ಎಂದು ನರೇಂದ್ರ ಮೋದಿಯವರಿಗೆ ಪುಗಸಟ್ಟೆ ಉಪದೇಶವನ್ನು ಕೊಟ್ಟಿದ್ದಾರೆ. ಒಟ್ಟಾರೆ ಕೆಲವರು ಇಡೀ ವ್ಯವಸ್ಥೆ ಮತ್ತು ಅಮೆರಿಕದಲ್ಲಿರುವ ವೀಸಾದವರ ಬದುಕು ಹೇಗೆ ಎಂದು ಮಹಾಭಾರತದಲ್ಲಿ ಧೃತರಾಷ್ಟ್ರ ನಿಗೆ ಸಂಜಯ ಕೂತಲ್ಲಿಯೇ ದಿವ್ಯಶಕ್ತಿಯಿಂದ ಕಂಡು ಹೇಳುವಂತೆ, ಮೇಲಿಂದ ಇವರೆಲ್ಲರ ಭವಿಷ್ಯ ವನ್ನು ನಾಸ್ಟ್ರಡಾಮಸ್ ನಂತೆ ಹೇಳಿದ್ದಾರೆ.

ಇದೆಲ್ಲವನ್ನೂ ಮಾಡಿದ್ದು ಟ್ರಂಪ್ ಸಹಿ ಹಾಕಿ, ಹಾಗಲ್ಲ ಎಂದ ಟೈಮ್‌ಗ್ಯಾಪ್- ಕೆಲವೇ ಗಂಟೆಗಳ ಅಂತರದಲ್ಲಿ. ಒಂದು ದೇಶದಲ್ಲಿ ಹುಟ್ಟಿ ಬೆಳೆದು, ಓದಿದವರು ವಿದೇಶಕ್ಕೆ ಹೋದರೆ ಅದನ್ನು ಬ್ರೈನ್ ಡ್ರೈನ್’ ಅನ್ನುವುದಿದೆ. ಇದು ‘60-70’ರ ಶಬ್ದ. ಯಾವುದೇ ದೇಶಕ್ಕೆ ತನ್ನ ಜನರಿಗೆ ಶಿಕ್ಷಣ ಕೊಡುವುದು ಖರ್ಚು.

ಆದಾಯ ಆರಂಭವಾಗುವುದು ವ್ಯಕ್ತಿಯು ಉದ್ಯೋಗ-ಉತ್ಪಾದನೆಯಲ್ಲಿ ತೊಡಗಿಕೊಂಡಾಗ. ಹಾಗಾಗಿ ಕಲಿತು ಹೊರದೇಶಕ್ಕೆ ಹೋದರೆ ದೇಶವು ಆ ವ್ಯಕ್ತಿಯ ಶಿಕ್ಷಣಕ್ಕೆ ವ್ಯಯಿಸಿದ ಹಣ ನಷ್ಟ ಮತ್ತು ಅವನಿಂದ ಮುಂದೆ ಬರಬಹುದಾದ ಆದಾಯ ಸೊನ್ನೆ- ಹೀಗೆ ಡಬಲ್ ನಷ್ಟ.

ಹಾಗಾಗಿ ಒಬ್ಬ ವ್ಯಕ್ತಿ ಅಮೆರಿಕ ಪಾಲಾದರೆ ದೇಶದ ಮಟ್ಟಿಗೆ ಆ ‘ಮಿದುಳು ಚರಂಡಿ’ ಸೇರಿದಂತೆ ಎಂದು ಸೂಚ್ಯ. ಅರವತ್ತರ ದಶಕದಿಂದ 2000ದವರೆಗೆ ಭಾರತದಿಂದ ಹೋದವರಲ್ಲಿ ಬಹುಪಾಲು ವಿಜ್ಞಾನಿಗಳು, ಪ್ರಾಧ್ಯಾಪಕರು, ಪಿಎಚ್‌ಡಿ ಪದವೀಧರರು, ರಿಸರ್ಚ್ ಫೆಲೋ ಇತ್ಯಾದಿ.

ನಿಜವಾಗಿಯೂ ಆಗೊಂದು ಮಹಾ ‘ಬ್ರೈನ್ ಡ್ರೈನ್’ ಆಗಿರುವುದು ಹೌದು. ಎಂಬತ್ತರ ದಶಕದಲ್ಲಿ ಅಮೆರಿಕಕ್ಕೆ ಬಂದ ಸಾಕಷ್ಟು ವೈದ್ಯರು, ವಿಜ್ಞಾನಿಗಳ ಪರಿಚಯ ನನಗಿದೆ. ಅವರನ್ನೆಲ್ಲ ಕಳೆದು ಕೊಂಡಿರುವುದು ಭಾರತದ ನಷ್ಟ. ಆದರೆ ಆಗ ಭಾರತದ ಪರಿಸ್ಥಿತಿ ಕೂಡ ಹಾಗೆಯೇ ಇತ್ತು. ಬ್ರಿಟಿಷರ ಲೂಟಿಯ ಪರಿಣಾಮ. ಅವರೆಲ್ಲರನ್ನೂ ಈಗಾಗಲೇ ಭಾರತ ಕಳೆದುಕೊಂಡಾಗಿದೆ. ಅವರು ಅಲ್ಲಿಯವರೇ ಆಗಿಹೋಗಿದ್ದಾರೆ. ಅವರಿಗೆಲ್ಲ ಈಗ ವಯಸ್ಸಾಗಿದೆ.

ಈಗ ಈ ವೀಸಾದಲ್ಲಿರುವವರಿzರಲ್ಲ, ಅವರಲ್ಲಿ ಬಹುತೇಕರು ಐಟಿ ಉದ್ಯೋಗಿಗಳು. ಇವರೆಲ್ಲ ಭಾರತದಿಂದ ಅಮೆರಿಕಕ್ಕೆ ಭಾರತದ ಕಂಪನಿಗಳು ಕಳುಹಿಸಿಕೊಟ್ಟ ಉದ್ಯೋಗಿಗಳು. ಅವರೆಲ್ಲರೂ ಭಾರತದ ಐಟಿ ಉದ್ಯಮಕ್ಕೆ ನೇರ ಅಥವಾ ಪರೋಕ್ಷವಾಗಿ ಸಂಬಂಧಿಸಿರುವವರು. ಅವರಲ್ಲಿ ಹಲವರು ಅಮೆರಿಕದ ಕಂಪನಿಗಳನ್ನು ಸೇರಿಕೊಂಡರೂ ಅದೇ ಕಂಪನಿಯ ಭಾರತದವರ ಜತೆ ಕೆಲಸ ಮಾಡುವವರು.

ನಾನು ಇಲ್ಲಿ ಹೇಳುತ್ತಿರುವುದು ಬಹುತೇಕರ ಲೆಕ್ಕ. ಒಬ್ಬ ವ್ಯಕ್ತಿ ವಿದೇಶದಲ್ಲಿzನೆ ಎಂದಾಕ್ಷಣ ಆತ ಡಾಲರ್, ಪೌಂಡ್ಸ್, ಯುರೋ ಆಸೆಗೆ ದೇಶ ಬಿಟ್ಟವನು ಎಂದು ಸಾರ್ವತ್ರಿಕ ಮಾಡಿ ಹೇಳಬಹುದು, ಅದರಲ್ಲಿ ತಪ್ಪೇನಿಲ್ಲ. ಅದೇ ಮಾತನ್ನು ತಾನು ಹುಟ್ಟಿದ ಮನೆ, ಊರು ಬಿಟ್ಟು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಪೇಟೆ ಸೇರಿದವರಿಗೂ ಹೇಳಬಹುದು- ‘ರುಪಾಯಿಯ ಆಸೆಗೆ ಊರು ಬಿಟ್ಟವರು’ ಎಂದು. ಅದೆಲ್ಲ ಬಾಲಿಶ. ‌

ಅಸಲಿಗೆ ತನ್ನ ಜಾಗ, ಮನೆ, ಊರು ಬಿಟ್ಟು ಇನ್ನೊಂದು ಕಡೆ ಹೋದವರೆಲ್ಲರೂ ವಲಸಿಗರೇ. ವಲಸೆ ಹೋಗುವುದು ಅಷ್ಟು ಮನುಷ್ಯ ಸಹಜ. ಎಲ್ಲರ ವಲಸೆಗಳನ್ನೂ ನಿರ್ದೇಶಿಸುವುದು ಅವಶ್ಯಕತೆ, ಅವಕಾಶ, ಸಾಧ್ಯತೆ, ಶಿಕ್ಷಣ, ಶ್ರಮ, ವೈಯಕ್ತಿಕ ಬುದ್ಧಿಮತ್ತೆ, ಸಂವಹನ ಶಕ್ತಿ, ಗುರಿ, ನಸೀಬು, ಬದುಕು. ಯಾವುದೇ ವಲಸೆ ಒಂದೇ ದಿನ ನಿರ್ಧಾರವಾಗುವ ಘಟನೆಯಲ್ಲ.

ಚೀಲ ತುಂಬಿ, ಟಿಕೆಟ್ ಖರೀದಿಸಿ ಇನ್ನೊಂದು ಊರಿಗೆ ಹೊರಡುವುದನ್ನು ತಿರುಗಾಟ, ಪ್ರವಾಸ ಎನ್ನುತ್ತಾರೆ. ವಲಸೆ ಎಂದರೆ ಸ್ಥಳಾಂತರ. ವಲಸೆಯ ಅಂತರ ಹೆಚ್ಚಿದಂತೆ ಕಾಠಿಣ್ಯ ಕೂಡ ಜಾಸ್ತಿ. ಹೊಸ ನೆಲದಲ್ಲಿ ಎರಡು ಜೊತೆ ಸೂಟ್ ಕೇಸಿನಲ್ಲಿ ಹೋಗಿ, ಮೊದಲೊಂದಿಷ್ಟು ದಿನ ಅಲ್ಲಿನ ಹೋಟೆಲ್ ನಲ್ಲಿ ಕಳೆದು, ಅಲ್ಲಿ ಮನೆ, ಇಂಟರ್ನೆಟ್, ಗ್ಯಾಸ್, ಇಲೆಕ್ಟ್ರಿಸಿಟಿ, ಅಲ್ಲಿನ ಟ್ಯಾಕ್ಸ್ ರಿಟರ್ನ್, ಕಾನೂನು, ವಾಹನ ಲೈಸೆನ್ಸ್, ಭಾಷೆ ಬೇರೆಯಿದ್ದರೆ ಭಾಷೆ, ಸಂಸ್ಕೃತಿ, ಶಿಷ್ಟಾಚಾರ, ಶಬ್ಧೋಚ್ಚಾರ ಇದೆಲ್ಲವನ್ನೂ ಕಲಿಯಲೇಬೇಕು. ‌

ನಾವು ಪಕ್ಕದ ರಾಜ್ಯಕ್ಕೆ ಹೋದಾಗ ನಮ್ಮನ್ನು ಅಲ್ಲಿ ಪರಕೀಯರಂತೆ ನೋಡುತ್ತಾರೆ. ಬೆಂಗಳೂರಿ ನಲ್ಲಿ ನೆಲೆಸಿದವರು ಕನ್ನಡ ಕಲಿಯಬೇಕು ಎನ್ನುತ್ತೇವೆ. ಹಾಗೆಯೇ ಆಯಾ ನೆಲದಲ್ಲಿ ಕಲಿಯಲೇ ಬೇಕಾದ ಹಲವು ವಿಷಯಗಳಿರುತ್ತವೆ. ವಲಸೆಯಲ್ಲಿ ಉದ್ಯೋಗದ ಭಾಗ ಬಹಳ ಸುಲಭ. ಆದರೆ ಇನ್ನೊಂದು ನೆಲಕ್ಕೆ ಒಗ್ಗಿಕೊಳ್ಳುವುದು ಕಣ್ಣು ಮುಚ್ಚಿ ಊಹಿಸಿದಷ್ಟು ಸುಲಭದ್ದಲ್ಲ.

ಸಾಮಾನ್ಯವಾಗಿ ಯಾವುದೇ ದೇಶ-ನಗರಕ್ಕೆ ಸ್ಥಳಾಂತರಗೊಂಡರೂ ಒಗ್ಗಿಕೊಳ್ಳಲು ಕನಿಷ್ಠ ಒಂದೆರಡು ವರ್ಷ ಬೇಕು. ಅಷ್ಟರೊಳಗೆ ಇದೆಲ್ಲ ಬದಲಾವಣೆಯನ್ನು ಎದುರಿಸಲಾಗದವರು ಭಾರತಕ್ಕೆ ವಾಪಸಾಗಿಬಿಡುತ್ತಾರೆ. ಇದೆಲ್ಲ ವೈಯಕ್ತಿಕ ಆಯ್ಕೆ. ಮೊನ್ನೆ ಪತ್ರಿಕೆಯಲ್ಲಿ ಒಂದು ಲೇಖನ ಓದಿದೆ.

ಅಮೆರಿಕ ಸೇರಿದವರು ಹೋದಕೂಡಲೇ ಕಾರು ತೆಗೆದುಕೊಳ್ಳಬೇಕು, ಹಾಗಾಗಿ ಸಾಲ ಮಾಡುತ್ತಾರೆ, ಆಮೇಲೆ ಅಲ್ಲಿಯೇ ಮನೆ ಖರೀದಿಸುತ್ತಾರೆ, ಸಾಲಕ್ಕೆ ಬೀಳುತ್ತಾರೆ, ಮೂರ್ಖತನ ಇತ್ಯಾದಿ. ಅದಕ್ಕೆ- ಬೆಂಗಳೂರಿಗೆ ಅಥವಾ ಯಾವುದೋ ಊರಿಗೆ ವಲಸೆ ಹೋದವರು ಅಪಾರ್ಟ್ಮೆಂಟ್, ಸೈಟ್, ಕಾರು ಇವೆಲ್ಲವನ್ನೂ ಸಾಲ ಮಾಡಿ ಖರೀದಿಸುವುದಿಲ್ಲವೇ ಎಂದು ಪ್ರಶ್ನಿಸಬಹುದು.

ಬಹುತೇಕ ಜನರು ಸಾಲ ಮಾಡುವುದೇ ಮನೆ ಅಥವಾ ವಾಹನ ಖರೀದಿಗೆ ಅಲ್ಲವೇ? ಅಮೆರಿಕಕ್ಕೆ ಬಂದವರು ತಕ್ಷಣ ಕಾರು ಖರೀದಿಸುವುದು ಅನಿವಾರ್ಯ. ಈ ದೇಶದ ರಚನೆ ಹಾಗಿದೆ. ಆದರೆ ಸೆಕೆಂಡ್‌ಹ್ಯಾಂಡ್ ಕಾರು ಐದಾರು ಸಾವಿರ ಡಾಲರ್‌ಗೆ ಸಿಗುತ್ತದೆ. ಇದು ಅವಶ್ಯಕತೆಗೆ ಬೇಕಾದಷ್ಟಾ‌ ಯಿತು.

ಭಾರತದಿಂದ ಬಂದ ಉದ್ಯೋಗಿ ಕಾರು ಖರೀದಿಸಲು ಮೂರು ತಿಂಗಳ ಉಳಿತಾಯ ಸಾಕಾಗುತ್ತದೆ. ಅಷ್ಟಾಗಿಯೂ ವಾಹನದ ಸಾಲಕ್ಕೆ ಬಡ್ಡಿದರ ಎಷ್ಟು ಗೊತ್ತಾ? ಸಾಮಾನ್ಯವಾಗಿ ಶೇ.2-3ರಷ್ಟು (ಕೋವಿಡ್ ನಂತರ ಸ್ವಲ್ಪ ಬಡ್ಡಿ ದರ ಹೆಚ್ಚಿದೆ).

ಇನ್ನು ಮನೆಸಾಲ ಮತ್ತು ಖರೀದಿಯ ಪ್ರಶ್ನೆ. ಅಮೆರಿಕದಲ್ಲಿ ನೆಲಕ್ಕೆ ಕೊರತೆಯಿಲ್ಲ. ಜನಸಂಖ್ಯೆ ಕಡಿಮೆ. ಹಾಗಾಗಿ ಇಲ್ಲಿ ಸೈಟಿಗೆ ಜಾಸ್ತಿ ಬೆಲೆಯಿಲ್ಲ. ಮನೆ ಅಗ್ಗವೂ ಹೌದು. ಅಲ್ಲದೆ ಶೇ.2-3ರ ಬಡ್ಡಿ ದರದಲ್ಲಿ ಮನೆಸಾಲ ಸಿಗುತ್ತದೆ. ಸಾಲ ಸಿಗುತ್ತದೆ ಎಂದಾಕ್ಷಣ ತೆಗೆದುಕೊಳ್ಳಬೇಕೆಂದಲ್ಲ. ಆದರೆ ಇಲ್ಲಿನ ಲೆಕ್ಕಾಚಾರ ಹೇಗೆಂದರೆ ಇಲ್ಲಿ ಬಾಡಿಗೆ ಮನೆಯೇ ತುಟ್ಟಿ.

ಸ್ವಂತ ಮನೆ ಖರೀದಿಸಿ ಅಲ್ಲಿ ಮೂರರಿಂದ ಐದು ವರ್ಷವಿದ್ದರೆ ಬಾಡಿಗೆಯ ವ್ಯತ್ಯಾಸದಿಂದ ಸಾಕಷ್ಟು ಉಳಿತಾಯವಾಗುತ್ತದೆ. ಹಾಗಾಗಿ ಸಾಲ ಮಾಡಿ ಮನೆ ತೆಗೆದುಕೊಂಡರೆ ಅದು ಬಾಡಿಗೆಗಿಂತ ಲಾಭ. ಇದೆಲ್ಲ ಲೆಕ್ಕ ಸೈಟಿಗೆ ಜಾಸ್ತಿ ಬೆಲೆಯಿಲ್ಲದಿರುವುದರಿಂದ ಮತ್ತು ಕಡಿಮೆ ಬಡ್ಡಿದರದಿಂದ ಸಾಧ್ಯವಾಗಿದೆ. ಅಮೆರಿಕದಲ್ಲಿ ಮನೆ ಖರೀದಿಸುವುದು-ಮಾರುವುದು ಅತ್ಯಂತ ಸುಲಭ, ಅದಕ್ಕೆ ಬೇಕಾದ ಸೌಲಭ್ಯಗಳಿವೆ.

ಇದೆಲ್ಲ ಅಮೆರಿಕದ ಬಗ್ಗೆಯಾಯಿತು. ವಿದೇಶಕ್ಕೆ ಹೋಗುವ ಎಲ್ಲರೂ ‘ಒಂದೆರಡು ವರ್ಷ, ಆಮೇಲೆ ಬಂದು ಬಿಡುತ್ತೇನೆ’ ಎಂದೇ ಹೊರಡುವುದು. ಆದರೆ ಬಹಳಷ್ಟು ಮಂದಿಗೆ ವಾಪಸ್ ಬರಲು ಸಾಧ್ಯ ವಾಗುವುದಿಲ್ಲ. ಇದಕ್ಕೆ ದೇಶಪ್ರೇಮದ ಕೊರತೆ, ವಿದೇಶದ ವ್ಯಾಮೋಹ ಇತ್ಯಾದಿ ಆರೋಪಿಸ ಬಹುದು. ಆದರೆ ಅಸಲಿಗೆ ಆಗುವುದೇ ಬೇರೆ.

ಎಲ್ಲರಿಗೂ ಆಗುವುದೇ ಇವರಿಗೂ ಆಗುವುದು. ನೀವು ಎಲ್ಲಿಯೋ ಹೋಗಿ ನೆಲೆಸುವುದೆಂದರೆ ಅದೊಂದು ದೀರ್ಘ ಪ್ರಕ್ರಿಯೆ. ದೇಶಾಂತರವು ತಮಾಷೆಯೇ ಅಲ್ಲ. ಈ ಪ್ರಕ್ರಿಯೆಯ ಮಧ್ಯೆ ಆ ವ್ಯಕ್ತಿಯ ಸಂಸಾರವೂ ನಡೆಯುತ್ತಿರುತ್ತದೆ. ಸಮಾಜದ ನಂಟು ಬೆಳೆಯುತ್ತದೆ, ಜತೆಯಲ್ಲಿ ಕಾಲ ಚಕ್ರದಂತೆ ಉರುಳುತ್ತಿರುತ್ತದೆ.

ವಯಸ್ಸಿಗೆ ಅನುಗುಣವಾಗಿ ಮಕ್ಕಳನ್ನು ಪಡೆಯುತ್ತಾರೆ, ಕೂದಲು ನೆರೆಯುತ್ತದೆ, ಉದ್ಯೋಗದಲ್ಲಿ ಬದಲಾವಣೆಗಳಾಗುತ್ತವೆ, ಉನ್ನತ ಹುz ಪ್ರಾಪ್ತವಾಗುತ್ತದೆ. ಬದುಕಿನ ಬಾಕಿ ಯಾವುದೂ ನಿಲ್ಲುವು ದಿಲ್ಲವಲ್ಲ. ಮಕ್ಕಳು ಶಾಲೆ ಸೇರುವುದರೊಳಗೆ ವಿದೇಶ ಬಿಟ್ಟು ಸ್ವದೇಶಕ್ಕೆ ಕೆಲವರು ಮರಳುತ್ತಾರೆ. ಮಕ್ಕಳು ಒಮ್ಮೆ ಶಾಲೆಗೆ ಸೇರಿದರೆಂದುಕೊಳ್ಳಿ- ಅಲ್ಲಿಂದ ಮುಂದೆ ಆ ದೇಶ, ವ್ಯವಸ್ಥೆ ಬಿಟ್ಟು ಬರಲಾರದ ಸ್ಥಿತಿಗೆ ಬದುಕು ಕ್ರಮೇಣ ಜಾರುತ್ತದೆ. ಏಕೆಂದರೆ ಮಕ್ಕಳು ಆ ನೆಲದವರಾಗಿ ಬೆಳೆಯು ತ್ತಾರೆ.

ಒಂದು ಸಮಯ, ವಯಸ್ಸಿನ ನಂತರ ನಾವಿರುವ ವ್ಯವಸ್ಥೆಯನ್ನು ಬಿಟ್ಟು ಇನ್ನೊಂದು ವ್ಯವಸ್ಥೆಗೆ ಹೋಗುವ, ಒಗ್ಗುವ ತ್ರಾಣ ಎಲ್ಲರಲ್ಲೂ ಇರುವುದಿಲ್ಲ. ದೇಶಪ್ರೇಮವೊಂದೇ ಕಾರಣಕ್ಕೆ ದೇಶಕ್ಕೆ ವಾಪಸ್ಸಾಗುವವರನ್ನು ನಾನು ನೋಡಿದ್ದು ‘ಸ್ವದೇಶ್’ ಸಿನಿಮಾದಲ್ಲಿ ಮಾತ್ರ! ಈಗ, ವಿದೇಶಕ್ಕೆ ಹೋಗಿ ಇಷ್ಟೆ ಏಕೆ ಒದ್ದಾಡಬೇಕು? ನಮ್ಮ ದೇಶದ ಇದ್ದರೇನು ಎಂದು ಕೇಳಿದಿರಾ? ಇದೆಲ್ಲದಕ್ಕೂ ಹಣ, ಸವಲತ್ತು, ವಿಷಯಸುಖವೆಂಬ ಕಾರಣವನ್ನು ಆರೋಪಿಸಬಹುದು.

ಆದರೆ ಅದುವೆ ಉತ್ತರವೇ? ‘ಬದುಕಿನಲ್ಲಿ ಇಲ್ಲಿಯವರೆಗೆ ಹೇಗೆ ಮತ್ತು ಏಕೆ ಬಂದು ತಲುಪಿದೆ?’ ಎಂದು ಕೇಳಿದರೆ? ಅದನ್ನೇ ತಪ್ಪೆಂದು ಹೇಳಿದರೆ ಅಂಥವರಿಗೆ ಉತ್ತರಿಸಬೇಕಿಲ್ಲ. ನಾವು ಹಿಂದೆ ಜಾಸ್ತಿ ಯೋಚಿಸದೆ ತೆಗೆದುಕೊಂಡ ಕೆಲವು ಚಿಕ್ಕ ನಿರ್ಣಯಗಳು ಮುಂದೊಂದು ದಿನ ಬದುಕನ್ನು, ಅನಿವಾರ್ಯತೆಯನ್ನು ನಿರ್ದೇಶಿಸುತ್ತವೆ. ಆದರೆ ಅಂಥ ನಿರ್ಧಾರ ತೆಗೆದುಕೊಳ್ಳುವಾಗ ಅದರ ಅರಿವು ನಮಗಿರುವುದಿಲ್ಲ.

ಕೆಲವದರಿಂದ ಒಳ್ಳೆಯದಾಗಿರುತ್ತದೆ, ಕೆಲವದರಿಂದ ಕೆಟ್ಟದು. ಯಾವ ನಿರ್ಧಾರವೂ ತಪ್ಪು ಸರಿ ಎಂದು ಮರುಗಬೇಕಿಲ್ಲ. ಬದುಕು ಯಾವತ್ತೂ ಏಕಮುಖ- ಅದು ‘ಸಾಗಬೇಕು’, ‘ಸಾಗುತ್ತಲೇ ಇರಬೇಕು’. ಅದು ಯಾರ ಯಾವ ನಿರ್ಧಾರದಿಂದಲೂ ನಿಲ್ಲುವುದಿಲ್ಲ.