Maya Balachandra Column: ಮೌನ ಮುರಿಯಬೇಕಾದ ಸಾಮಾಜಿಕ ಸವಾಲುಗಳು
ಹೆಣ್ಣು ಮೂಲತಃ ಸೂಕ್ಷ್ಮ ಮನಸ್ಸಿನವಳು. ಎದುರಿನವರ ಭಾಷೆ, ಆಂಗಿಕ ವರ್ತನೆ ಎಲ್ಲದರಲ್ಲೂ ಇರಬಹುದಾದ ಸಹಜತೆ, ಕೃತ್ರಿಮತೆಗಳನ್ನು ಸರಿಯಾಗಿ ಗುರುತಿಸುವ ಚತುರತೆಯನ್ನು ಆಕೆ ಬೆಳೆಸಿ ಕೊಳ್ಳಲೇಬೇಕು. ಇಷ್ಟೇ ಸವಾಲೇ? ಸವಾಲಿನ ಸರಣಿ ಇಷ್ಟಕ್ಕೆ ನಿಲ್ಲುವುದಿಲ್ಲ. ಅನೇಕ ಸಂದರ್ಭಗಳಲ್ಲಿ, ಕಚೇರಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ಮನೆಗಳು ಎಲ್ಲಿಯೇ ಆದರೂ, ಮಹಿಳೆಯ ಯೋಗ ದಾನವು ಶೇ.80ಕ್ಕೂ ಹೆಚ್ಚು ಇದ್ದರೂ, ಆಕೆಗೆ ಅಲ್ಲಿ ಸಿಗುವ ಪ್ರಾಮುಖ್ಯ ಶೇ.20ಕ್ಕಿಂತಲೂ ಕಡಿಮೆ.
-
ಕ್ಷಮಯಾಧರಿತ್ರಿ
ಮಾಯಾ ಬಾಲಚಂದ್ರ
ಹೆಣ್ಣು ಕೆಲಸ ಮಾಡದ ಯಾವ ಕ್ಷೇತ್ರವೂ ಈಗ ಉಳಿದಿಲ್ಲ. ಒಂದು ರಾಷ್ಟ್ರದ ಅಭಿವೃದ್ಧಿಯ ಮಟ್ಟ ವನ್ನು ತಿಳಿಯಬೇಕಾದರೆ ಅಲ್ಲಿನ ಮಹಿಳೆಯರ ಸ್ಥಿತಿಗತಿಗಳೇ ಅದಕ್ಕೆ ಮಾಪಕ. ಇದರ ಅರಿವು ಎಲ್ಲರಿಗೂ ಇದೆ. ಮಹಿಳೆ ಕೆಲಸ ಮಾಡುವ ಜಾಗಗಳಲ್ಲಿ ಆಕೆಗೆ ಅನುಕೂಲಕರ ಸ್ಥಿತಿಗಳೇ ಇರುತ್ತವೆ ಯೇ? ಎನ್ನುವುದು ಪ್ರಶ್ನೆ. ಎಷ್ಟೋ ಸಂದರ್ಭಗಳಲ್ಲಿ ಪುರುಷರಿಗೂ ಅನಾನುಕೂಲವಾಗಿರುವು ದಿಲ್ಲವೇ? ಎನ್ನುವುದು ಇನ್ನು ಕೆಲವರ ಪ್ರಶ್ನೆ. ಸ್ತ್ರೀ-ಪುರುಷರಿಬ್ಬರೂ ಸಮಾನವಾಗಿ ಎದುರಿಸುವ ಸಮಸ್ಯೆಗಳು ಬಹಳ ಇವೆ. ಅವುಗಳಲ್ಲದೆ, ಸ್ತ್ರೀ ಮಾತ್ರ, ತಾನು ಸ್ತ್ರೀ ಆಗಿರುವ ಕಾರಣಕ್ಕಾಗಿಯೇ ಎದುರಿಸುವ ಸಂಕಷ್ಟಗಳು ‘ಮುಕ್ತ ರಹಸ್ಯ’ವಾಗೇ ಉಳಿದಿವೆ.
ಮಹಿಳೆ ಕೆಲಸ ಮಾಡುವ ಜಾಗದಲ್ಲಿ ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಸಹೋದ್ಯೋಗಿಗಳು, ಮೇಲಧಿಕಾರಿಗಳು ದೈಹಿಕವಾಗಿ, ಮಾನಸಿಕವಾಗಿ ಆಕೆಗೆ ನೀಡುವ ಕಿರುಕುಳವು ಕೇವಲ ವೈಯಕ್ತಿಕ ಅಪರಾಧ ಅನಿಸದೆ, ಸಮಾಜದ ಮೌಲ್ಯವನ್ನೇ ಪ್ರಶ್ನಿಸುವಂತೆ ಮಾಡುತ್ತದೆ.
ಮಹಿಳೆಯ ಒಪ್ಪಿಗೆ ಇಲ್ಲದೆ ನಡೆಯುವ ಯಾವುದೇ ಲೈಂಗಿಕ ವರ್ತನೆಯನ್ನು ‘ದೌರ್ಜನ್ಯ’ ಎಂದೇ ಪರಿಗಣಿಸಬಹುದು. ಅಶ್ಲೀಲ ಮಾತು, ಅಸಭ್ಯ ನೋಟ, ಅನುಚಿತ ಸ್ಪರ್ಶ ಇವೆಲ್ಲವೂ ನೇರವಾಗಿ ಕಾಣುವ physical abuse. ಕೆಲವೊಮ್ಮೆ ಇವು ವಿಪರೀತವಾಗಿ, ಅತ್ಯಾಚಾರದವರೆಗೂ ಹೋಗಿ ಬಿಡಬಹುದು.
ಮಾನಸಿಕ ಕಿರುಕುಳವಂತೂ ಮನೆ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಪರೋಕ್ಷವಾಗಿ ಮಹಿಳೆ ಯರನ್ನು ಹೈರಾಣಾಗಿಸುತ್ತಿದೆ. ಈಗಂತೂ ಡಿಜಿಟಲ್ ಯುಗದಿಂದಾಗಿ ನೀಚತನಕ್ಕೆ ಸುಲಭ ದಾರಿ ತೆರೆದುಕೊಂಡು ಬಿಟ್ಟಿದೆ. ಸೈಬರ್ ಲೈಂಗಿಕ ದೌರ್ಜನ್ಯ ಇಂದಿನ ಹೊಸ ಸವಾಲು. ಇವೆಲ್ಲ ಮಹಿಳೆ ಯನ್ನು ಆತಂಕಕ್ಕೆ ದೂಡುತ್ತಲೇ ಇವೆ.
ಇದನ್ನೂ ಓದಿ: Maya Balachandra Column: ಒಬ್ಬೊಬ್ಬರಲ್ಲಿ ಒಂದೊಂದು ಭಾವ ಸ್ಫುರಿಸುವ ಬೇಂದ್ರೆಯವರ ʼನಾಕುತಂತಿʼ
ಹೆಣ್ಣು ಮೂಲತಃ ಸೂಕ್ಷ್ಮ ಮನಸ್ಸಿನವಳು. ಎದುರಿನವರ ಭಾಷೆ, ಆಂಗಿಕ ವರ್ತನೆ ಎಲ್ಲದರಲ್ಲೂ ಇರಬಹುದಾದ ಸಹಜತೆ, ಕೃತ್ರಿಮತೆಗಳನ್ನು ಸರಿಯಾಗಿ ಗುರುತಿಸುವ ಚತುರತೆಯನ್ನು ಆಕೆ ಬೆಳೆಸಿಕೊಳ್ಳಲೇಬೇಕು. ಇಷ್ಟೇ ಸವಾಲೇ? ಸವಾಲಿನ ಸರಣಿ ಇಷ್ಟಕ್ಕೆ ನಿಲ್ಲುವುದಿಲ್ಲ. ಅನೇಕ ಸಂದರ್ಭ ಗಳಲ್ಲಿ, ಕಚೇರಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು, ಮನೆಗಳು ಎಲ್ಲಿಯೇ ಆದರೂ, ಮಹಿಳೆಯ ಯೋಗ ದಾನವು ಶೇ.80ಕ್ಕೂ ಹೆಚ್ಚು ಇದ್ದರೂ, ಆಕೆಗೆ ಅಲ್ಲಿ ಸಿಗುವ ಪ್ರಾಮುಖ್ಯ ಶೇ.20ಕ್ಕಿಂತಲೂ ಕಡಿಮೆ. ತನ್ನನ್ನು ತಾನು ಸಾಬೀತುಪಡಿಸಿಕೊಳ್ಳುವ ನಿಟ್ಟಿನಲ್ಲಿ ಶತಾಯಗತಾಯ ಶ್ರಮಿಸುವ ಆಕೆಯನ್ನು, ಒಟ್ಟಾರೆಯಾಗಿ ಎರಡನೆಯ ದರ್ಜೆಯವಳನ್ನಾಗಿಯೇ ತೀರ್ಮಾನಿಸಿ ಬಿಡುತ್ತಾರೆ. ಎಷ್ಟೋ ಬಾರಿ ಇದಕ್ಕೆ ಮಹಿಳೆಯರದೇ ಒತ್ತಾಸೆಯು ಸಿಕ್ಕಿಬಿಡುವುದು ವಿಪರ್ಯಾಸ.
ಏಕೆ ಹೀಗೆ?
ಇದಕ್ಕೆಲ್ಲ ದೈಹಿಕ ಆಕರ್ಷಣೆಯೇ ಕಾರಣವೇ? ಎಂದರೆ, ಸಂಶೋಧನೆಗಳು ನೀಡುವ ಉತ್ತರ, ‘ಅಲ್ಲ’. ಶೇ.10ಕ್ಕೂ ಕಡಿಮೆ ಅಥವಾ ಶೂನ್ಯಕ್ಕೆ ಹತ್ತಿರದ ಸಂದರ್ಭಗಳಲ್ಲಿ, ದೈಹಿಕ ಆಕರ್ಷಣೆಯಿಂದ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಅದು ಕೂಡ ಸ್ವತಂತ್ರ ಕಾರಣವಲ್ಲ. ಮೊದಲೇ ಮನಸ್ಸಿನಲ್ಲಿ ನೆಲೆ ನಿಂತ ಪೂರ್ವಗ್ರಹಗಳಿಗೆ ಪೂರಕವಾಗಿ ಮಾತ್ರ ಈ ಅಂಶ ಸೇರಿಕೊಳ್ಳುತ್ತದೆ. ಇಲ್ಲ ದೌರ್ಜನ್ಯ ಎಸಗುವವರ ಮನೋವಿಕೃತಿ, ಸಾಮಾಜಿಕ ವೈಫಲ್ಯಗಳೇ ಮುಖ್ಯ ಕಾರಣಗಳಾಗುತ್ತವೆ.
ಮಾನವನ ವಿಕಾಸ ಪಥದಲ್ಲಿ, ಪ್ರಾರಂಭದಲ್ಲಿ ಸ್ತ್ರೀ-ಪುರುಷರ ನಡುವೆ ಪೈಪೋಟಿ ಇರಲಿಲ್ಲ. ಪ್ರಕೃತಿಯ ವಿಭಿನ್ನ ಸೃಷ್ಟಿಯನ್ನು ಸಹಜವಾಗಿಯೇ ಸ್ವೀಕರಿಸಿದ್ದ ಮಾನವನಿಗೆ, ಅಧಿಕಾರ ಚಲಾ ಯಿಸುವ ಆಲೋಚನೆಯೇ ಇರಲಿಲ್ಲ. ತನಗಿಂತ ಬಲಿಷ್ಠ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಂಡು ಮನುಕುಲವನ್ನು ಉಳಿಸುವ ಕಡೆಗೆ ಆತನ ಗಮನವಿತ್ತು.
ಆಹಾರಕ್ಕಾಗಿ, ಉಳಿವಿಗಾಗಿ, ಪುರುಷ ಬೇಟೆಯಾಡುವುದು ಅನಿವಾರ್ಯವಾಗಿದ್ದ ಸಂದರ್ಭವದು. ಮನುಷ್ಯ ತನಗಿಂತ ದೊಡ್ಡ ಗಾತ್ರದ ಪ್ರಾಣಿಗಳನ್ನು ಗೆಲ್ಲಲು, ತನ್ನ ಚಿಕ್ಕ ಗಾತ್ರದ ದೇಹ ಸಾಲದು ಎಂದು ತಿಳಿದ ನಂತರ, ತನ್ನ ಬುದ್ಧಿಶಕ್ತಿಯನ್ನೇ ಹಿಗ್ಗಿಸಿಕೊಳ್ಳುತ್ತಾ ಸಾಗಿದ. ತನಗಿಂತ ಎಷ್ಟೋ ಪಟ್ಟು ದೊಡ್ಡ ಪ್ರಾಣಿಗಳನ್ನು ಪಳಗಿಸಬಹುದಾದ ಬುದ್ಧಿಮತ್ತೆಯನ್ನು ಪಡೆದ ನಂತರ, ಆ ಪ್ರಾಣಿ ಗಳನ್ನೆಲ್ಲ ತನ್ನ ನಿಯಂತ್ರಣದಲ್ಲಿಡಲು, ಅಧಿಕಾರ ಚಲಾಯಿಸುವ ಗುಣ ಬೆಳೆಸಿಕೊಂಡ. ಸೃಷ್ಟಿಯ ಬೇರೆ ಜೀವಿಗಳ ಮೇಲೆ ಪ್ರಭುತ್ವ ಸಾಧಿಸಿದ ನಂತರ, ಈಗಾಗಲೇ ಬಲಿತ ಆತನ ಸ್ವಭಾವ ಸುಮ್ಮನಾಗ ಲಿಲ್ಲ.
ಈಗ ಉಳಿದಿರುವುದು ತನ್ನೊಡನೆ ಬಾಳುತ್ತಿರುವ ಜನರು. ಇಲ್ಲಿಯೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಬಿಟ್ಟ. ಪ್ರಾರಂಭದಲ್ಲಿ ಉಳಿವಿಗಾಗಿ ಬೇಕಿದ್ದ ಸ್ಪರ್ಧಾಬುದ್ಧಿ, ಅನುವಂಶೀಯವಾಗಿ ಹರಿದು ಬರಲಾರಂಬಿಸಿತು. ಎಲ್ಲವೂ ತನ್ನ ನಿಯಂತ್ರಣದಲ್ಲಿರಬೇಕು ಎನ್ನುವ ಭಾವವೃಕ್ಷ ಹೆಮ್ಮರ ವಾಯಿತು.
ತಾನು ಅಧಿಕಾರ ನಡೆಸಲೇ ಇರುವವ ಎನ್ನುವ ಅಹಂ ಕೂಡ ನೆಲೆಯೂರಿತು. ಇದೇ ಸಮಯದಲ್ಲಿ ಹೆಣ್ಣು, ಸಂತಾನ ಪೋಷಣೆಯ ಕಡೆಗೆ ಗಮನ ನೀಡುತ್ತಾ, ತನ್ನ ಸಾಮರ್ಥ್ಯವನ್ನು ಆ ದಾರಿಯಲ್ಲಿ ಬೆಳೆಸಿಕೊಂಡಳು. ರಕ್ಷಣೆಗೆ ನಿಲ್ಲುತ್ತಿದ್ದ ಪುರುಷನಿಗೆ ಬೆಂಬಲವಾಗಿ ನಿಲ್ಲುವುದು ಹೆಣ್ಣಿಗೆ ರೂಢಿ ಯಾಯಿತು.
ಆಕೆ ಸ್ಪರ್ಧೆಗೆ ಇಳಿಯುವ ಮನಸ್ಥಿತಿಯನ್ನು ತಾಳಲೇ ಇಲ್ಲ. ಹೊಂದಾಣಿಕೆ, ಸಹನೆ, ತಾಳ್ಮೆಗಳನ್ನೇ ಮೈಗೂಡಿಸಿಕೊಂಡಳಾಕೆ. ಅದೇ ವಂಶವಾಹಿ ಮುಂದಿನ ಪೀಳಿಗೆಗಳಿಗೂ ವರ್ಗಾವಣೆಯಾಯಿತು. ಆಕ್ರಮಣಕಾರಿ ಮನೋಭಾವ ಆಕೆಯ ಹತ್ತಿರಕ್ಕೂ ಸುಳಿಯಲಿಲ್ಲ. ಮತ್ತೊಂದೆಡೆ, ಆಕೆಯ ಇಂಥ ಸೌಮ್ಯ ಸ್ವಭಾವದ ಮೇಲೆ ಅಧಿಕಾರ ಚಲಾಯಿಸುವುದು ತನ್ನ ಹಕ್ಕು ಎಂದು ಪುರುಷ ತಿಳಿದ.
ಸಾವಿರಾರು ವರ್ಷಗಳಿಂದ ಈ ಹೇರಿಕೆಯನ್ನು ಸಹಿಸಿದ ಹೆಣ್ಣು, ತಾನು ಈ ಶೋಷಣೆಯಿಂದ ಹೊರಬರಲು ಬೇಕಾದ ದಾರಿ ಕಂಡುಕೊಳ್ಳಲು ತೊಡಗಿzಳೆ, ಸ್ಪರ್ಧೆಗೆ ನಿಂತಿದ್ದಾಳೆ. ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ, ಅಧಿಕಾರ ಚಲಾಯಿಸಲು ಕಲಿತಿದ್ದಾಳೆ. ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವತಂತ್ರಳಾಗಿದ್ದಾಳೆ.
ಒಟ್ಟಾರೆಯಾಗಿ, ಎಲ್ಲಾ ಆಯಾಮಗಳಲ್ಲೂ ಹೆಣ್ಣು ಸದೃಢಳಾಗಿದ್ದಾಳೆ. ಯುದ್ಧ-ಆಕ್ರಮಣಗಳು ಕೇವಲ ಪುರುಷರ ಹಕ್ಕು ಎಂದು ಭಾವಿಸಿದವರ ಮೇಲೆ ಯುದ್ಧ ಮಾಡುವಷ್ಟು ಶಕ್ತಿಶಾಲಿಯಾಗಿ ದ್ದಾಳೆ. ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವಷ್ಟು ಗಟ್ಟಿಯಾಗಿದ್ದಾಳೆ. ಇವೆಲ್ಲವೂ ಎಲ್ಲಾ ಒಂದು ಕಡೆ, ಕೆಲವು ಪುರುಷರಿಗೆ, ಮಾನವನ ವಿಕಾಸದ ಪ್ರಾರಂಭದ ಹಂತದಲ್ಲಿ ಗಳಿಸಿ, ಬೆಳೆಸಿ ಕೊಂಡು ಬಂದ ಅಹಂಗೆ ಏಟು ಕೊಡುತ್ತಿದೆ.
ಇದರಿಂದ ಕೋಪ, ಅಸಹನೆ ಮತ್ತು ಪ್ರತೀಕಾರ ಭಾವ ತಾಳುವ ಪುರುಷ, ಮಹಿಳೆಯನ್ನು ಮಣಿಸಲು ಬಳಸುವ ಅಸ್ತ್ರ ‘ಲೈಂಗಿಕ ಶೋಷಣೆ’. ಹೆಣ್ಣಿಗೆ ತನ್ನ ದೇಹದ ಬಗ್ಗೆ ಬಹಳ ಗೌರವ. ತನ್ನ ಪ್ರಾಣಕ್ಕಿಂತ ಹೆಚ್ಚು ಶರೀರದ ಘನತೆಗೆ ಪ್ರಾಧಾನ್ಯ ನೀಡುತ್ತಾಳಾಕೆ. ಅದಕ್ಕಾಗಿಯೇ ಪುರುಷ ಆಕೆಯ ಪ್ರಾಣ ತೆಗೆದು ಪ್ರತೀಕಾರ ತೀರಿಸಿಕೊಳ್ಳಲು ಬಯಸುವುದಿಲ್ಲ.
ಸ್ವತಃ ಆಕೆ ಗೌರವ ನೀಡುವ ಆಕೆಯ ಶರೀರಕ್ಕೆ ಧಕ್ಕೆ ತಂದರೆ, ಆಕೆಯ ಘನತೆಗೆ ಚ್ಯುತಿ ತಂದಂತೆ ಎನ್ನುವ ಮನಸ್ಥಿತಿ ಕೆಲವರದ್ದು. ಮೊದಲಿನಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಪುರುಷನ ದೈಹಿಕ ದಾರ್ಢ್ಯತೆ ಮಹಿಳೆಗಿಂತ ಹೆಚ್ಚಾಗಿರುವುದರಿಂದ ಇದು ಪುರುಷನಿಗೆ ಸುಲಭವೂ ಹೌದು.
ಹಾಗಾಗಿಯೇ ಆತ, ಆಕೆಯ body abuse ಗೆ ಇಳಿಯುತ್ತಾನೆ. ತನ್ನ ದೇಹ ಪವಿತ್ರ ಎಂದು ನಂಬಿರುವ ಆಕೆಯನ್ನು, profane ಎಂದು ಬಿಂಬಿಸಲು ತೊಡಗುತ್ತಾನೆ. ಬೇರೆ ಬೇರೆ ನಾಗರಿಕತೆ, ಸಂಸ್ಕೃತಿಗಳಲ್ಲಿ ಬೇರೆ ಬೇರೆ ರೀತಿಯಾಗಿ ಈ ಮನಸ್ಥಿತಿ ಬೆಳೆಯುತ್ತಾ ಬಂದಿದೆ. ಭಾರತೀಯ ಪರಂಪರೆಯಲ್ಲಿ “ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ" ಅಂತಲೇ ‘ದುರ್ಗಾಸಪ್ತಶತಿ’ಯಲ್ಲಿ ಹೇಳಲಾಗಿದೆ.
ಎಲ್ಲ ಚರಾಚರಗಳಲ್ಲೂ ಇರುವ ಸ್ತ್ರೀ-ಪುರುಷ ತತ್ವಗಳಲ್ಲಿ, ‘ಸ್ತ್ರೀ’ ತತ್ವವನ್ನು ತಾಯಿಯೆಂದೇ ಗುರುತಿಸಿದ್ದಾರೆ. ಇದನ್ನು ಧಿಕ್ಕರಿಸುವ ರಾವಣ, ದುಶ್ಶಾಸನರ ಸಂತತಿ ಮುಂದುವರಿಯುತ್ತಲೇ ಇದೆ. ಇದರೊಂದಿಗೆ ಇನ್ನೂ ಕೆಲವು ಮನೋವೈಜ್ಞಾನಿಕ ಅಂಶಗಳು, ಮಹಿಳಾ ಶೋಷಣೆಯ ಮನಸ್ಥಿತಿಗೆ ನೀರೆಯುವ ಸಾಧ್ಯತೆಯಿದೆ.
ಹೆಣ್ಣೆಂದರೆ ತನ್ನ ಅನುಕೂಲಕ್ಕೆ ಸೃಷ್ಟಿಯಾದ ವಸ್ತು ಎನ್ನುವ ಅಮಾನವೀಯ ಮನಸ್ಥಿತಿ, ತನ್ನ ಅಧೀನದಲ್ಲಿ ಇರಬೇಕೆನ್ನುವ ವಿಕೃತ ಮನಸ್ಥಿತಿಗಳು ಸಹ ಶೋಷಿಸುವಂತೆ ಪ್ರೇರೇಪಿಸುತ್ತವೆ. ಪುರುಷರ ವೈಯಕ್ತಿಕ ವೈಫಲ್ಯ, ಪಡೆದ ತಿರಸ್ಕಾರ, ಅವಮಾನ ಎಲ್ಲವೂ ಅವರನ್ನು, ಮಹಿಳೆಯರ ಮೇಲೆ ಹಿಂಸೆ ಹೊರಹಾಕಿ ಬಿಡುವ ಮಟ್ಟಕ್ಕೆ ಇಳಿಸಿಬಿಡುತ್ತವೆ. Empathy deficit (ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯಹೀನತೆ ಅಥವಾ ‘ಪರಾನುಭೂತಿ ಶಕ್ತಿಯ ಕೊರತೆ’), ತನ್ನ ಅಪರಾಧವನ್ನು ಸಹ ತಪ್ಪು ಎಂದು ಕಾಣದಂತೆ ಮಾಡಿಬಿಡುತ್ತದೆ.
ಕಾನೂನು ಅಷ್ಟೇನು ಬಿಗಿಯಾಗಿಲ್ಲ ಅನ್ನೋ ಕಾರಣಕ್ಕೆ, ತಪ್ಪಿಸಿಕೊಳ್ಳುವುದು ಸುಲಭ ಎಂದು ಪುರುಷನು ಅಪರಾಧ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚು. ಮೊದಲಿನಿಂದಲೂ ಈ ಮನಸ್ಥಿತಿ ಯನ್ನು ಎಲ್ಲ ಪುರುಷರೂ ಬೆಳೆಸಿಕೊಂಡು ಬರಲಿಲ್ಲ. ಸಭ್ಯ, ಮಾನವೀಯ ಗುಣಗಳನ್ನು ಹೊಂದಿ ರುವ ಪುರುಷರ ಸಂಖ್ಯೆ ಇಂಥವರಿಗಿಂತಲೂ ಹೆಚ್ಚಿದೆ. ರಾವಣನಿದ್ದಾಗಲೇ ರಾಮನಿದ್ದ.
ದುಶ್ಶಾಸನನಿದ್ದಾಗಲೇ ಕೃಷ್ಣನಿದ್ದ. ಮಹಿಳೆಯ ಘನತೆಗೆ ಬೆಂಬಲವಾಗಿ ನಿಲ್ಲುವ ಸಹೃದಯರು ಇಂದಿಗೂ ಬಹಳ ಇzರೆ. ಅಂಥವರು ಸಮಾಜಕ್ಕೆ ಆದರ್ಶವಾಗಬೇಕಿದೆ.
ಏನೆಲ್ಲಾ ಮಾಡಬಹುದು?
ಮೇಲಿನ ಯಾವ ಕಾರಣಗಳೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಮರ್ಥನೆ ಆಗುವುದಿಲ್ಲ. ಅವು ಸಮಸ್ಯೆಯ ಬೇರು, ಬೆಳವಣಿಗೆಗಳ ಹುಡುಕಾಟ ಅಷ್ಟೇ. ಲಿಂಗಾಧಾರಿತ ದೌರ್ಜನ್ಯದ ವಿರುದ್ಧ ಮೌನ ವೇ ಅತಿ ದೊಡ್ಡ ಅಪರಾಧ. ಇದು ಕೇವಲ ಮಹಿಳೆಯರ ಸಮಸ್ಯೆಯಲ್ಲ, ಇಡೀ ಸಮಾಜದ್ದು. ಇದಕ್ಕಾಗಿ ಮನೆ ಮತ್ತು ಶಾಲೆಗಳಲ್ಲಿ ವಿಶೇಷ ಕಾಳಜಿ ವಹಿಸಲೇಬೇಕು. ಸ್ತ್ರೀ-ಪುರುಷರು ಸಮಾನರು, ಎಲ್ಲರೂ ಮನುಷ್ಯರು, ಎಲ್ಲರೂ ಆತ್ಮ ಸ್ವರೂಪರು ಎನ್ನುವ ಭಾರತೀಯ ಚಿಂತನೆಯನ್ನು ಮಕ್ಕಳ ಮನಸ್ಸಿನಲ್ಲಿ ಮರುಸ್ಥಾಪಿಸಬೇಕು.
ಒಂದೂವರೆ ಶತಮಾನದ ಹಿಂದೆ, ಯುರೋಪ್‌ನಲ್ಲಿ ಸಂಪ್ರದಾಯವಾದಿಗಳು ನಡೆಸಿದ ಚರ್ಚಾ ಸಭೆಯೊಂದರಲ್ಲಿ ‘ಮಹಿಳೆಯನ್ನು ಮನುಷ್ಯಳು ಎಂದು ಪರಿಗಣಿಸಬಹುದೇ? ಆಕೆಯೊಳಗೂ ಆತ್ಮವಿದೆಯೇ?’ ಎನ್ನುವ ವಿಷಯವನ್ನು ಚರ್ಚಿಸಲಾಗಿತ್ತು. ಅಂಥ ಮಾನಸಿಕತೆಯ ಮೂಲದ ಜೀವನಶೈಲಿಯನ್ನು ಅನುಕರಿಸುತ್ತಿರುವವರಿಗೆ, ಭಾರತೀಯ ಚಿಂತನೆಯಲ್ಲಿರುವ ಸ್ತ್ರೀ ಶಕ್ತಿಯನ್ನು ಪರಿಚಯಿಸಬೇಕಿದೆ.
ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಆಗಬೇಕಾದ ಸಂದರ್ಭದಲ್ಲಿ, ಮಹಿಳೆಯೆದುರು ಮೇಲಧಿಕಾರಿಗಳಿಂದ ‘ವಿಲಕ್ಷಣವಾದ’ ಮತ್ತು ‘ವಿಕೃತ ಸ್ವರೂಪದ’ ಪರೋಕ್ಷ ಇಂಗಿತ ವ್ಯಕ್ತವಾದರೆ, ಆಗ ಮಹಿಳೆ ದೃಢಸಂಕಲ್ಪ ತಾಳಬೇಕು. ‘ನನ್ನ ಉದ್ದಾರ ನನ್ನಿಂದ ಮಾತ್ರ’ ಅನ್ನುವ ಆತ್ಮಸ್ಥೈರ್ಯ ವನ್ನು ಬೆಳೆಸಿಕೊಳ್ಳಬೇಕು. ಬಡ್ತಿ, ವೇತನ ಹೆಚ್ಚಳ ಅಥವಾ ಇನ್ಯಾವುದೇ ಉನ್ನತೀಕರಣಕ್ಕಾಗಿ ತನ್ನ ಅಂತಃಸತ್ವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕೇ ಹೊರತು, ಅದಕ್ಕಾಗಿ ಅನ್ಯರ ಅಡಿಯಾಳಾಗ ಬಾರದು ಅನ್ನುವ ಗಟ್ಟಿ ನಿರ್ಧಾರಕ್ಕೆ ಬದ್ಧರಾಗಬೇಕು.
ಇದರಿಂದಾಗಿ ಆಕೆ ಕೆಲಸ ಮಾಡುವ ಪರಿಸರವು ಆರೋಗ್ಯಕರವಾಗಿ, ಆಕೆಯ ಕ್ಷಮತೆಯು ಹೆಚ್ಚುತ್ತಾ ಹೋಗುತ್ತದೆ. ಮಹಿಳೆಯರು ತಮಗಾಗುತ್ತಿರುವ ಸಮಸ್ಯೆಯನ್ನು ಮುಚ್ಚುಮರೆ ಇಲ್ಲದೆ ಹೇಳಿ ಕೊಳ್ಳಬೇಕಾದರೆ, ಅಂಥ ಸಾಮಾಜಿಕ ಪರಿಸರದ ನಿರ್ಮಾಣವಾಗಬೇಕು.
‘Victim blaming’ ಎಂಬುದು ಅಪರಾಧಕ್ಕಿಂತಲೂ ಅಪಾಯಕಾರಿ ಮನಸ್ಥಿತಿ. ಒಂದು ನಿರ್ದಿಷ್ಟ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯವು ಒಮ್ಮೆ ನಡೆದರೆ, ಬಾಧಿತೆಯ ಮೇಲೆ, ಅಪರಾಧಿಯ ಕ್ರಿಯೆಗೆ ಸಮಾನವಾಗಿ ಸಮಾಜದಲ್ಲಿ ಇನ್ನೊಂದು ರೀತಿಯ ಹಿಂಸೆ ಪ್ರಾರಂಭವಾಗಿ ಬಿಡುತ್ತದೆ. ಅಪರಾಧಿ ಯಿಂದಾದ ತಪ್ಪಿನ ಹೊಣೆಯನ್ನು ಶೋಷಿತೆಯ ಮೇಲೆಯೇ ಹೇರಲಾಗುತ್ತದೆ.
ಇದು ಅಪರಾಧವನ್ನು ಪರೋಕ್ಷವಾಗಿ ಸಮರ್ಥಿಸುವ ಅಪಾಯಕಾರಿ ಧೋರಣೆ. ಸಮಾಜದ ಇಂಥ ಕೀಳು ಆಲೋಚನೆಯೇ, ಬಾಧಿತೆಯನ್ನು ಖಿನ್ನತೆಯೆಡೆಗೋ, ಆತ್ಮಹತ್ಯೆಯೆಡೆಗೋ ಎಳೆದೊಯ್ದು ಬಿಡುತ್ತದೆ. Victim blaming ಅನ್ನು ನಿಲ್ಲಿಸಲು ಕೇವಲ ಕಾನೂನು ಸಾಕಾಗದು, ಜತೆಗೆ ಸಮಾಜದ ಚಿಂತನಾ ಸಾಮರ್ಥ್ಯವೂ ವಿಶಾಲವಾಗಬೇಕು.
ದೌರ್ಜನ್ಯಕ್ಕೊಳಗಾದ ಮಹಿಳೆಯ ಜತೆಗೆ ಇಡೀ ಸಮಾಜ ನಿಲ್ಲುವಂತಾದರೆ, ಅಪರಾಧಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ. ‘ನಾನು ಮಾಡಹೊರಟ ಲೈಂಗಿಕ ಶೋಷಣೆಯಿಂದ ಈ ಹೆಣ್ಣಿನ ಆತ್ಮಸ್ಥೈರ್ಯ ಕುಂದುವುದಿಲ್ಲ, ಇಡೀ ಸಮಾಜವೇ ಆಕೆಯನ್ನು ಬೆಂಬಲಿಸುತ್ತದೆ’ ಎನ್ನು ವುದು ಕೆಲ ಪುರುಷ-ಪುಂಗವರಿಗೆ ಮನವರಿಕೆಯಾದರೆ, ಈ ದುಷ್ಕೃತ್ಯಕ್ಕೆ ಅವರು ಇಳಿಯಲಾರರು.
ಎಲ್ಲವನ್ನೂ ಸರಿಯಾದ ಟ್ರ್ಯಾಕ್‌ಗೆ ತರಲು, ಮೊದಲು ಕಠಿಣವಾದ ಕಾನೂನು ಪಾಲನೆ ಆಗಲೇ ಬೇಕು. ಕಾನೂನುಕ್ರಮ ಪರಿಣಾಮಕಾರಿಯಾಗಿ ಜರುಗಬೇಕಾದರೆ, ತ್ವರಿತ ನ್ಯಾಯ ಒದಗಿಸುವ ಕೆಲಸವನ್ನು ನ್ಯಾಯಾಂಗ ವ್ಯವಸ್ಥೆಯು ಮಾಡಬೇಕು. ಪೊಲೀಸ್ ವ್ಯವಸ್ಥೆಯು ಸಂವೇದನಾ ಶೀಲವಾಗಿ ವರ್ತಿಸಿ, ದೂರು ನೀಡುವ ಮಹಿಳೆಯರಲ್ಲಿ ಸುರಕ್ಷಿತ ಭಾವವನ್ನು ಮೂಡಿಸುವಂತಾಗ ಬೇಕು.
ಶಿಕ್ಷೆ ತಪ್ಪಿಸಿಕೊಳ್ಳುವ ಅಪರಾಧಿಯು, ಸಮಾಜ, ಕಾನೂನು, ರಕ್ಷಣಾ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಎಲ್ಲವುಗಳ ಬಗ್ಗೆ ಬಾಧಿತೆಯು ನಂಬಿಕೆ-ವಿಶ್ವಾಸಗಳನ್ನು ಕಳೆದುಕೊಳ್ಳುವಂತೆ ಮಾಡಿಬಿಡಬಹುದು. ಹತ್ತು ಅಥವಾ ಅದಕ್ಕಿಂತ ಹೆಚ್ಚು ಕೆಲಸಗಾರರಿರುವ ಸಂಸ್ಥೆ, ಕಚೇರಿ, ಶಾಲಾ-ಕಾಲೇಜುಗಳ ಒಳಗೆ, ಈ ದೌರ್ಜನ್ಯ ತಡೆಯಲೆಂದೇ ಒಂದು ಕಮಿಟಿಯನ್ನು ಸ್ಥಾಪಿಸಿಕೊಳ್ಳುವುದನ್ನು ಇತ್ತೀಚೆಗೆ ಕಡ್ಡಾಯ ಮಾಡಲಾಗಿದೆ.
ಇದರ ಸಂಪೂರ್ಣ ಅರಿವು ಹೆಣ್ಣು ಮಕ್ಕಳಲ್ಲಿ ಇರಲೇಬೇಕು. ಮಹಿಳೆಯರು ಅದನ್ನು ಬಳಸಿ ಕೊಳ್ಳಲು ಪ್ರಾರಂಭಿಸಿದ ನಂತರ, ದೈಹಿಕ ದೌರ್ಜನ್ಯಗಳು ಸ್ವಲ್ಪಮಟ್ಟಿಗೆ ಕಡಿಮೆಯಾದ ಉದಾಹರಣೆಗಳಿವೆ. ನಮ್ಮ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ಮಹಿಳಾ ಪರವಾದ ಕಾಯಿದೆಗಳ ಬಗ್ಗೆ ಮಹಿಳೆಯರಿಗೆ ಸಂಪೂರ್ಣ ಜಾಗೃತಿ ಇದ್ದಾಗ ಮಾತ್ರವೇ ಅದರ ಸದ್ಬಳಕೆ ಸಾಧ್ಯ.
ಕಾನೂನು, ಸಂಸ್ಕೃತಿ ಮತ್ತು ಸಮಾಜ ಈ ಮೂರು ಅಂಶಗಳೂ ಒಂದೇ ದಿಕ್ಕಿನಲ್ಲಿ ಸಾಗಿ, ‘ಲೈಂಗಿಕ ದೌರ್ಜನ್ಯ’ದಂಥ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಕಾನೂನು ಪಾಲನೆಯೊಂದಿಗೆ, ಸಂವೇದನಾಶೀಲ ಸಂಸ್ಕೃತಿಯೂ ರೂಢಿಯಾದರೆ ಇಂಥ ದೌರ್ಜನ್ಯವನ್ನು/ಅಪರಾಧವನ್ನು ಮೂಲದಿಂದಲೇ ಕಿತ್ತೆಸೆಯಬಲ್ಲದು.
(ಲೇಖಕಿ ಕೋಲಾರ ಜಿಲ್ಲಾ ನ್ಯಾಯಾಲಯದ ಕಾನೂನು
ಅರಿವು ಜಾಗೃತಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ)