Lokesh Kayarga Column: ಕಾಡುಪ್ರಾಣಿಗಳ ಸಂತಾನಶಕ್ತಿ ಹರಣ: ಖಂಡ್ರೆ ಮಾತು ಚಿಂತನಾರ್ಹ !
ವಿಶ್ವದ ಹಲವು ದೇಶಗಳಲ್ಲಿ ವನ್ಯಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಬೇಟೆ ಮತ್ತು ಸಂತಾನಹರಣ ಚಿಕಿತ್ಸೆ ಎರಡನ್ನೂ ಪ್ರಮುಖ ಕ್ರಮಗಳಾಗಿ ಬಳಸಲಾಗುತ್ತದೆ. ಆಫ್ರಿಕಾ ರಾಷ್ಟ್ರಗಳಾದ ದ. ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ಆನೆ, ಕಾಡುಕೋಣ, ಕಾಡೆಮ್ಮೆಯಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ, ಅವುಗಳ ಕಲ್ಲಿಂಗ್(ಇ್ಠ್ಝ್ಝಜ್ಞಿಜ) ಇಲ್ಲವೇ ನಿಯಂತ್ರಿತ ಟ್ರೋಫಿ ಹಂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಬೇಟೆಯಿಂದ ಬರುವ ಹಣವನ್ನು ಆ ಪ್ರಾಣಿಗಳ ಉಳಿದ ಸಂತತಿಯ ಸಂರಕ್ಷಣೆಗಾಗಿ ಬಳಸಲಾಗುತ್ತದೆ.
-
ಲೋಕಮತ
ರಾಜ್ಯದಲ್ಲಿ ಮಾನವ -ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಯಲ್ಲಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಳೆದ ವಾರ ಅನಿರೀಕ್ಷಿತ ಹೇಳಿಕೆ ಯೊಂದನ್ನು ನೀಡಿದ್ದರು. ಈವರೆಗೆ ರಾಜ್ಯದ ಯಾವ ಅರಣ್ಯ ಸಚಿವರೂ ಹೇಳಲು ಧೈರ್ಯ ಮಾಡದ ಪ್ರಸ್ತಾಪವಿದು. ‘ಪ್ರಾಣಿಪ್ರಿಯರು’ ಎಂದು ಹೇಳಿಕೊಳ್ಳುವ ವರ್ಗ ಈ ಹೇಳಿಕೆಯನ್ನು ಖಂಡತುಂಡವಾಗಿ ವಿರೋಧಿಸುವುದು ನಿರೀಕ್ಷಿತವೇ ಆಗಿತ್ತು. ಆದರೆ ಖಂಡ್ರೆ ಅವರ ಈ ಹೇಳಿಕೆ ಖಂಡಿಸಿ ಚಾಮರಾಜನಗರದಲ್ಲಿ ರೈತಸಂಘದ ಪ್ರತಿನಿಧಿಗಳೇ ಪ್ರತಿಭಟನೆ ನಡೆಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
ಕೆಲವೊಮ್ಮೆ ಎಲ್ಲವನ್ನೂ ಅತಿ ಭಾವುಕತೆಯಿಂದ ಕಾಣುವ ನಾವು ಖಂಡ್ರೆ ಅವರ ಈ ಹೇಳಿಕೆ ಯನ್ನೂ ಪ್ರಾಣಿಹಿಂಸೆಯಂತೆ ಕಾಣುವ ಸಾಧ್ಯತೆ ಹೆಚ್ಚು. ರಾಜ್ಯದಲ್ಲಿ ವನ್ಯಜೀವಿ ಸಂಘರ್ಷದಲ್ಲಿ ಅತಿ ಹೆಚ್ಚು ಸಂತ್ರಸ್ತರಾಗಿರುವವರು ನಮ್ಮ ರೈತರು. ಅರಣ್ಯ ಸಚಿವರ ಈ ಹೇಳಿಕೆಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡುವ ಅವಶ್ಯಕತೆ ಇದೆ ಎಂದು ಹೇಳಬೇಕಾದವರು ಇವರೇ. ರಾಜ್ಯದ ಯಾವುದೇ ಭಾಗದ ರೈತರಿರಲಿ, ವನ್ಯಮೃಗಗಳು ಮತ್ತು ಪಕ್ಷಿಗಳ ಉಪಟಳ ಅನುಭವಿಸದವರು ಕಡಿಮೆ. ಅದರಲ್ಲೂ ಮಲೆನಾಡು, ಕರಾವಳಿ ಮತ್ತು ಹಳೇಮೈಸೂರು ಸೀಮೆಯ ಜನರ ಪಾಲಿಗೆ ಈಗ ವನ್ಯ ಸಂಘರ್ಷ ಎನ್ನುವುದು ಸಾವು-ಬದುಕಿನ ಪ್ರಶ್ನೆ.
ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 45ರಿಂದ 50 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುತ್ತಿ ದ್ದಾರೆ. ಅಂದರೆ ಪ್ರತಿ ತಿಂಗಳು ಸರಾಸರಿ ನಾಲ್ವರು ವನ್ಯಜೀವಿಗಳ ದಾಳಿಗೆ ಸಿಲುಕಿ ಸಾಯುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವನ್ಯಮೃಗಗಳು ಮಾನವನೊಂದಿಗಿನ ಮುಖಾಮುಖಿಯಲ್ಲಿ ಸಾವು ಕಾಣುತ್ತಿವೆ. ಕಳೆದ ಐದು ವರ್ಷಗಳಲ್ಲಿ 30 ಸಾವಿರಕ್ಕೂ ಹೆಚ್ಚು ಸಂಘರ್ಷದ ಪ್ರಕರಣಗಳು ವರದಿಯಾಗಿವೆ. ಆದರೆ ಈ ತನಕ ಯಾವುದೇ ರಾಜಕೀಯ ಪಕ್ಷ ಮಾನವ-ವನ್ಯಜೀವಿ ಸಂಘರ್ಷ ಕರ್ನಾಟಕದ ಪ್ರಮುಖ ಸಮಸ್ಯೆ ಎಂದು ಭಾವಿಸಿಲ್ಲ.
ಇದನ್ನೂ ಓದಿ: Lokesh Kayarga Column: ನಮ್ಮ ಬದುಕನ್ನೂ ಕೃತಕವಾಗಿಸಿದ ಕೃತಕ ಬುದ್ಧಿಮತ್ತೆ !
ಪಶ್ಚಿಮ ಘಟ್ಟದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಹೊಂದಿರುವ ರಾಜ್ಯದಲ್ಲಿ ಆನೆ, ಹುಲಿ, ಚಿರತೆ, ಕರಡಿ ಈ ನಾಲ್ಕೂ ಪ್ರಾಣಿಗಳ ಬಾಹುಳ್ಯವಿದೆ. ಜತೆಗೆ ಜಿಂಕೆ, ನವಿಲುಗಳ ಸಂಖ್ಯೆಯೂ ಹೇರಳ ವಾಗಿದೆ. ಕಳೆದ 5 ವರ್ಷಗಳಲ್ಲಿ ವನ್ಯಮೃಗಗಳ ದಾಳಿಯಿಂದ 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿ ದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಮಂದಿ ಆನೆ ದಾಳಿಯಿಂದಲೇ ಮೃತಪಟ್ಟಿದ್ದಾರೆ. ಇದರ ಮೂರು ಪಟ್ಟು ಮಂದಿ ತೀವ್ರವಾಗಿ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೊಳಗಾಗಿದ್ದಾರೆ.
ರಾಜ್ಯದ ಮಲೆನಾಡು, ಕರಾವಳಿ ಜಿಲ್ಲೆಗಳು, ಹಳೇ ಮೈಸೂರು ಭಾಗದ ಜಿಲ್ಲೆಗಳು, ಬೆಳಗಾವಿ ಸೇರಿದಂತೆ ಸುಮಾರು 14 ಜಿಲ್ಲೆಗಳು ಕಾಡಾನೆ ದಾಳಿಯಿಂದ ತತ್ತರಿಸುತ್ತಿವೆ. ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹುಲಿ, ಚಿರತೆಗಳ ದಾಳಿ ಮತ್ತು ಸಾವು ವರ್ಷದಿಂದ ವರ್ಷದಿಂದ ಏರುತ್ತಾ ಸಾಗಿದೆ. ಇದರ ಜತೆ ಕಾಡಂಚಿನ ಭಾಗದಲ್ಲಿ ಕಾಡೆಮ್ಮೆ, ಹಂದಿ,ನರಿ, ಜಿಂಕೆ, ಕೋತಿ ಮತ್ತಿತರ ನಾನಾ ವನ್ಯಮೃಗಗಳ ಉಪಟಳವಿದೆ. ಮಲೆನಾಡು ಮತ್ತು ಬಯಲು ಸೀಮೆ ಎರಡೂ ಕಡೆ ಕರಡಿ ಮತ್ತು ಚಿರತೆ ದಾಳಿ, ನವಿಲುಗಳ ಕಾಟ ಸಾಮಾನ್ಯವಾಗುತ್ತಿವೆ. ನದಿ ತೀರದಲ್ಲಿ ಇರುವವರಿಗೆ ಮೊಸಳೆ ಭಯ ಕಾಡುತ್ತಿದೆ.
ಈ ಸಮಸ್ಯೆಗಳು ಹಿಂದೆ ಇರಲಿಲ್ಲ ಎಂದಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಏರು ತ್ತಲೇ ಸಾಗಿದೆ. ಅರಣ್ಯ ಮತ್ತು ವನ್ಯ ಸಂರಕ್ಷಣೆಯ ಕಠಿಣ ಕಾನೂನುಗಳು, ಬೇಟೆಗಾರರ ನಿಯಂತ್ರಣ, ಉರುವಲು ಮತ್ತು ಮೇವಿಗಾಗಿ ಅರಣ್ಯಕ್ಕೆ ತೆರಳುವವರ ಸಂಖ್ಯೆಯಲ್ಲಿ ಇಳಿಮುಖ ಇವೇ ಮೊದ ಲಾದ ಕಾರಣಗಳಿಂದ ನಮ್ಮ ಕಾಡು ವನ್ಯಜೀವಿಗಳಿಗೆ ಹಿಂದೆಂದಿಗಿಂತಲೂ ಈಗ ಸುರಕ್ಷಿತವಾಗಿದೆ. ಆಹಾರ ಮತ್ತು ಸುರಕ್ಷತೆ ಇವೆರಡು ಖಾತರಿಯಾದರೆ ವನ್ಯಜೀವಿಗಳ ಸಂಖ್ಯೆ ತಾನೇ ತಾನಾಗಿ ಏರುತ್ತದೆ. ಮೂರು ದಶಕಗಳ ಹಿಂದೆ ನೀವು ನಾಗರಹೊಳೆ,ಬಂಡೀಪುರಕ್ಕೆ ಹೋದರೆ ಜಿಂಕೆಗಳನ್ನು ಕಾಣುವುದೂ ಅಪರೂಪದ ದೃಶ್ಯವಾಗಿತ್ತು. ಈಗ ಜಿಂಕೆ, ಆನೆಗಳ ಹಿಂಡು, ಕಾಡುಕೋಣ, ಕಾಡೆಮ್ಮೆ ಗಳು ಕಾಡಿನಲ್ಲಿ ಹಾದು ಹೋಗುವ ಹೆದ್ದಾರಿಯ ಬಳಿ ಯಾರ ಭಯವೂ ಇಲ್ಲದೆ ಮೇಯುತ್ತಿರುತ್ತವೆ.
ಹುಲಿ ಸಂರಕ್ಷಿತಾರಣ್ಯಗಳ ಮೂಲಕ ವ್ಯಾಘ್ರ ಸಂತತಿ ರಕ್ಷಣೆಗೆ ವಿಶೇಷ ಒತ್ತು ನೀಡಿದ ಕಾರಣ ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಹುಲಿಗಳ ಸಂಖ್ಯೆ ಏರುತ್ತಲೇ ಇದೆ. ಹಾಗೆಯೇ ಸಂಘರ್ಷದ ಪ್ರಮಾಣ ಕೂಡ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಬೆಳಗಾವಿ ಮಾತ್ರವಲ್ಲ ರಾಜಧಾನಿ ಬೆಂಗಳೂರಿನಲ್ಲೂ ಚಿರತೆಗಳ ದಾಳಿ ಆಗಾಗ ಸುದ್ದಿಯಾಗುತ್ತಲೇ ಇದೆ. ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಈ ಮೂರು ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಕೊಪ್ಪಳ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕರಡಿ ಕಾಟ ವಿಪರೀತವಾಗಿವೆ. ಇತ್ತೀಚೆಗೆ ಚಿಕ್ಕಮಗಳೂರು ಭಾಗದಲ್ಲೂ ಕರಡಿ ಕಾಣಿಸಿಕೊಳ್ಳುತ್ತಿದೆ.
ಕಾಡಾನೆ ದಾಳಿಯದ್ದೇ ಚಿಂತೆ
ಕಾಡಾನೆ ದಾಳಿ ಪ್ರಕರಣಗಳು ಪ್ರತೀ ವರ್ಷ ಜಿಲ್ಲೆಯಿಂದ ಜಿಲ್ಲೆಗೆ ವಿಸ್ತಾರಗೊಳ್ಳುತ್ತಿವೆ. ಮಲೆನಾಡಿನ ಜಿಲ್ಲೆಗಳಿಗೆ ಸೀಮಿತವಾಗಿದ್ದ ಸಮಸ್ಯೆ ಈಗ ಪಶ್ಚಿಮಘಟ್ಟದ ನಂಟು ಹೊಂದಿದ ಎಲ್ಲ ಜಿಲ್ಲೆಗಳಿಗೂ ವ್ಯಾಪಿಸಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಳೇ ಮೈಸೂರು ಭಾಗದ ಜಿಲ್ಲೆಗಳು, ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ ಸೇರಿ ಕರಾವಳಿ ಜಿಲ್ಲೆಗಳಲ್ಲೂ ಕಾಡಾನೆ ದಾಳಿಯ ಸುದ್ದಿಗಳು ಆಗಾಗ ವರದಿಯಾಗುತ್ತಿವೆ. ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಜನ ಆನೆ ತುಳಿತಕ್ಕೆ ಬಲಿಯಾಗಿ ದ್ದಾರೆ.
ಕೊಡಗಿನ ಬಹುತೇಕ ಭಾಗ , ಹಾಸನದ ಸಕಲೇಶಪುರ, ಆಲೂರು, ಬೇಲೂರು ಮತ್ತು ಅರಕಲ ಗೂಡು, ಚಿಕ್ಕಮಗಳೂರಿನ ಮೂಡಿಗೆರೆ, ಎನ್. ಆರ್.ಪುರ, ಕೊಪ್ಪ, ದಕ್ಷಿಣ ಕನ್ನಡದ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಈಗ ಇಳಿ ಸಂಜೆಯಾದರೆ ರಸ್ತೆಗಳು ಬಿಕೋ ಎನ್ನುತ್ತವೆ. ಚತುಷ್ಚಕ್ರ ವಾಹನಗಳನ್ನು ಬಿಟ್ಟರೆ ದ್ವಿಚಕ್ರದಲ್ಲಿ ಸಾಗುವವರು ಕಡಿಮೆ. ಪಾದಚಾರಿಗಳಿಗೆ ಹಗಲಿನಲ್ಲೂ ಯಾವಾಗ, ಎಲ್ಲಿ ಆನೆ ದಾಳಿ ಮಾಡುತ್ತದೋ ಎಂಬ ಭಯ. ರಾತ್ರಿ ವೇಳೆ ಹಿಂಡು ಹಿಂಡಾಗಿ ಬರುವ 10-15ರಷ್ಟು ಸಂಖ್ಯೆಯ ಕಾಡಾನೆಗಳು ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿದರೆ, ಹಗಲಿನ ವೇಳೆ ಒಂಟಿ ಆನೆಗಳ ಕಾಟ. ಶಿರಾಡಿ ಹೆದ್ದಾರಿಯಲ್ಲಿ, ಘಟ್ಟದ ಕೆಳಗಿನ ಭಾಗದಲ್ಲೂ ಈಗ ಕಾಡಾನೆಗಳು ಹಗಲಲ್ಲಿ ನಿರ್ಬಿಢೆಯಿಂದ ಕಾಣಿಸಿಕೊಳ್ಳುತ್ತಿವೆ.
ಆನೆ ಹಾವಳಿಯಿಂದ ಆಗುತ್ತಿರುವ ಪ್ರಾಣ ಹಾನಿ, ಬೆಳೆ ಹಾನಿ ಒಂದೆಡೆಯಾದರೆ ಇದರ ಪರೋಕ್ಷ ಪರಿಣಾಮಗಳು ಇನ್ನೂ ಘೋರ. ಆನೆ ಕೊಡಗು, ಹಾಸನ ಜಿಲ್ಲೆಯ ನೂರಾರು ರೈತರು ಈಗ ತಮ್ಮ ಫಲವತ್ತಾದ ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಮುಂಜಾವ ಮೂರೂವರೆ ಗಂಟೆಗೆ ಎದ್ದು ರಬ್ಬರ್ ಟ್ಯಾಪಿಂಗ್‌ಗೆ ತೆರಳುತ್ತಿದ್ದ, ಅಡಕೆ ತೋಟಕ್ಕೆ ನೀರು ಹಾಯಿಸುತ್ತಿದ್ದ ದಕ್ಷಿಣ ಕನ್ನಡದ ರೈತರೂ ಈಗ ತಮ್ಮದೇ ತೋಟದಲ್ಲಿ ಸಂಚರಿಸಲು ಭಯಪಡಯವಂತಾಗಿದೆ. ಇಲ್ಲೂ ಕೇರಳದ ಮಲೆಯಾಳಿಗಳಿಗೆ, ಆಂಧ್ರಪ್ರದೇಶದ ದುಡ್ಡಿನ ಕುಳಗಳಿಗೆ ತೋಟವನ್ನು ಮಾರಿ ಪಟ್ಟಣ ಸೇರುವವರ ಸಂಖ್ಯೆ ಏರುತ್ತಿದೆ.
ಕಿರಿದಾದ ಅರಣ್ಯ, ಹಿರಿದಾದ ಗಜಪಡೆ
ದೇಶದಲ್ಲಿಯೇ ಅತಿ ಹೆಚ್ಚು ಗಜಸಂತತಿ ಹೊಂದಿರುವ ರಾಜ್ಯದಲ್ಲಿ ಇತ್ತೀಚಿನ ಗಣತಿ ಪ್ರಕಾರ 7 ಸಾವಿರಕ್ಕೂ ಹೆಚ್ಚು ಆನೆಗಳಿವೆ. ಇವುಗಳಲ್ಲಿ ಶೇಕಡಾ 60 ರಷ್ಟು ಆನೆಗಳು ಆಹಾರವನ್ನು ಹುಡುಕಿ ಕೊಂಡು ಕಾಡಿನಿಂದ ಹೊರಬಂದು ಸಂಚರಿಸಿ ಮತ್ತೆ ಕಾಡಿಗೆ ಹೋಗುತ್ತವೆ. ಹಾಸನ ಮತ್ತು ಕೊಡಗಿ ನಲ್ಲಿ 100ಕ್ಕೂ ಹೆಚ್ಚು ಕಾಡಾನೆಗಳು ಕಾಫಿ ತೋಟಗಳಲ್ಲೇ ಬೀಡುಬಿಟ್ಟಿವೆ. ತಜ್ಞರ ಪ್ರಕಾರ ಆನೆ 700-800 ಚದರ ಕಿಲೋಮೀಟರ್ ಪ್ರದೇಶದಲ್ಲಿ ಸಂಚರಿಸುತ್ತದೆ. ಈ ಓಡಾಟದಲ್ಲಿ ದೊಡ್ಡಪ್ರಮಾಣದಲ್ಲಿ ಕಾಫಿ, ಅಡಕೆ ತೋಟದ ನಾಶ, ಭತ್ತದ ಗದ್ದೆ, ಬಾಳೆ ತೋಟ, ಜೋಳ ಮುಂತಾದ ಬೆಳೆಗಳು ನಾಶ ವಾಗುವುದರ ಜೊತೆಗೆ ಎದುರಿಗೆ ಸಿಕ್ಕ ಮನುಷ್ಯ, ಜಾನುವಾರುಗಳು ದಾಳಿಗೆ ಎರವಾಗುತ್ತಾರೆ.
ಹಾಸನ ಜಿಲ್ಲೆಯಲ್ಲಿ ಈವರೆಗೆ 60ಕ್ಕೂ ಹೆಚ್ಚು ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಿ ದರೂ ಆನೆಗಳು ಹಿಂಡು ಹಿಂಡಾಗಿ ಬರುತ್ತಲೇ ಇವೆ. ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯ ಗಳು ಮತ್ತು ಇತ್ತೀಚಿನ ಎತ್ತಿನಹೊಳೆ ಯೋಜನೆಗಳು, ರೈಲ್ವೆ ಮಾರ್ಗ, ಹೆದ್ದಾರಿಗಳು ಆನೆಗಳ ಕಾರಿಡಾರ್‌ಗೆ ಧಕ್ಕೆ ತಂದಿವೆ. ತಮ್ಮ ಸಾಂಪ್ರದಾಯಿಕ ಮಾರ್ಗ ಮತ್ತು ನೆಲೆಗಳನ್ನು ಕಳೆದುಕೊಂಡ ಆನೆಗಳು ಆಹಾರವನ್ನು ಅರಸುತ್ತಾ ಘಟ್ಟದ ಕೆಳಗೂ, ಘಟ್ಟದ ಮೇಲಿನ ಭಾಗದಲ್ಲೂ ಸಂಚರಿಸ ಲಾರಂಭಿಸಿವೆ. ಅರಣ್ಯ, ವನ್ಯ ಜೀವಿಗಳ ರಕ್ಷಣೆ ಮತ್ತು ಪರಿಹಾರದ ನೆಪದಲ್ಲಿ ಪ್ರತೀ ವರ್ಷ ನೂರಾರು ಕೋಟಿ ರು. ವ್ಯಯಿಸುತ್ತಿದ್ದರೂ ಸಂಘರ್ಷದ ಪ್ರಮಾಣ ಏರುಮುಖ ವಾಗಿಯೇ ಸಾಗಿದೆ.
ಸಂತಾನ ಹರಣ ಪ್ರಸ್ತಾವನೆಯಷ್ಟೇ
ವನ್ಯಜೀವಿ ಸಂಘರ್ಷದಿಂದ ಮನುಷ್ಯರು ಮತ್ತು ಪ್ರಾಣಿಗಳ ಜೀವಗಳಿಗೆ ಹಾನಿಯಾಗುತ್ತಿದೆ. ಮೃಗಪಕ್ಷಿಗಳ ಜತೆ ಮನುಷ್ಯರ ಪ್ರಾಣಕ್ಕೂ ಸಂಚಕಾರ ಬರದಂತೆ ಕಾಡುಪ್ರಾಣಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಅಥವಾ ಸಂತಾನ ನಿಯಂತ್ರಣ ಲಸಿಕೆ ಕೊಡುವ ಪ್ರಸ್ತಾವನೆ ಇದೆ. ಇದು ಕೇವಲ ಪ್ರಸ್ತಾವನೆ ಮಾತ್ರ, ನಿರ್ಧಾರ ಅಲ್ಲ. ಇನ್ನೂ ಪ್ರಾಣಿಗಳ ಪಟ್ಟಿ ಮಾಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿ ಗಳ ಜೊತೆಯಲ್ಲಿ ಚರ್ಚೆ ಮಾಡುತ್ತಿದ್ದೇವೆ. ಸಂತಾನಹರಣ ವಿಚಾರ ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವುದರಿಂದ ಸರ್ವೋಚ್ಚ ನ್ಯಾಯಾಲಯಕ್ಕೂ ಪ್ರಸ್ತಾವನೆ ಸಲ್ಲಿಸಬೇಕಿದೆ. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಚಿವರು ಹೇಳಿದ್ದಾರೆ. ಒಂದು ವೇಳೆ ಇದು ಜಾರಿಯಾದರೂ ತಾತ್ಕಾಲಿಕ ಕ್ರಮ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ವನ್ಯಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಬೇಟೆ ಮತ್ತು ಸಂತಾನಹರಣ ಚಿಕಿತ್ಸೆ ಎರಡನ್ನೂ ಪ್ರಮುಖ ಕ್ರಮಗಳಾಗಿ ಬಳಸಲಾಗುತ್ತದೆ. ಆಫ್ರಿಕಾ ರಾಷ್ಟ್ರ ಗಳಾದ ದ. ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ಆನೆ, ಕಾಡುಕೋಣ, ಕಾಡೆಮ್ಮೆ ಯಂತಹ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ, ಅವುಗಳ ಕಲ್ಲಿಂಗ್(Culling) ಇಲ್ಲವೇ ನಿಯಂತ್ರಿತ ಟ್ರೋಫಿ ಹಂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಬೇಟೆಯಿಂದ ಬರುವ ಹಣವನ್ನು ಆ ಪ್ರಾಣಿಗಳ ಉಳಿದ ಸಂತತಿಯ ಸಂರಕ್ಷಣೆಗಾಗಿ ಬಳಸಲಾಗುತ್ತದೆ.
ಅಮೇರಿಕಾ ಮತ್ತು ಯುರೋಪ್‌ನಲ್ಲಿ ಕಾಡು ಕುದುರೆಗಳು ಮತ್ತು ಜಿಂಕೆಗಳ ಸಂತತಿ ನಿಯಂತ್ರಿಸಲು ಗರ್ಭನಿರೋಧಕ ಚುಚ್ಚುಮದ್ದನ್ನು ನೀಡುವ ಪದ್ಧತಿ ಇದೆ. ಜತೆಗೆ ಜಿಂಕೆ ಮತ್ತು ಕರಡಿಗಳ ಸಂಖ್ಯೆ ನಿಯಂತ್ರಣಕ್ಕೆ ಬೇಟೆಯಾಡಲು ಪರವಾನಗಿ ನೀಡಲಾಗುತ್ತದೆ. ನಾರ್ವೆ, ಹಂಗೇರಿಯಲ್ಲೂ ಜಿಂಕೆ ಮತ್ತು ಕಾಡು ಹಂದಿಗಳ ಬೇಟೆಗೆ ನಿರ್ದಿಷ್ಟ ಋತುಮಾನಗಳನ್ನು ನಿಗದಿಪಡಿಸಲಾಗಿದೆ.
ಆಸ್ಟ್ರೇಲಿಯಾ ತನ್ನ ರಾಷ್ಟ್ರ ಪ್ರಾಣಿಯಾದ ಕಾಂಗರೂಗಳನ್ನು ಕೊಲ್ಲಲು ಅಧಿಕೃತವಾಗಿಯೇ ಅನುಮತಿ ನೀಡುತ್ತದೆ. ಕಾಂಗರೂಗಳ ಸಂಖ್ಯೆ ಮಿತಿಮೀರಿದಾಗ ಅವು ಪರಿಸರ ವ್ಯವಸ್ಥೆಗೆ ಹಾನಿ ಮಾಡುತ್ತವೆ, ಹುಲ್ಲುಗಾವಲುಗಳನ್ನು ನಾಶಪಡಿಸುತ್ತವೆ ಎಂಬ ಕಾರಣಕ್ಕೆ ಪ್ರತಿ ವರ್ಷ ಲಕ್ಷಾಂತರ ಕಾಂಗರೂಗಳನ್ನು ವ್ಯವಸ್ಥಿತವಾಗಿ ಕೊಲ್ಲಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಕಾಂಗರೂ ಮಾಂಸ ಮತ್ತು ಚರ್ಮವನ್ನು ಮಾರಾಟ ಮಾಡುವ ದೊಡ್ಡ ಉದ್ಯಮವೇ ಚಾಲ್ತಿಯಲ್ಲಿದೆ. ಇದಲ್ಲದೆ ತನ್ನ ರಾಷ್ಟ್ರೀಯ ಪಕ್ಷಿಯಾದ ಎಮುಗಳ ಸಂಖ್ಯೆಯನ್ನು ನಿಯಂತ್ರಿಸಲು ಇವುಗಳ ಬೇಟೆ ಮತ್ತು ಸಾಕಣೆಗೆ ಇಲ್ಲಿ ಅವಕಾಶವಿದೆ. ಕೆನಡಾದ ರಾಷ್ಟ್ರೀಯ ಪ್ರಾಣಿಗಳಾದ ಬೀವರ್ ಮತ್ತು ಕೆಲವು ಭಾಗಗಳಲ್ಲಿ ಹಿಮ ಕರಡಿಗಳ ಬೇಟೆಗೆ ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ಅನುಮತಿ ನೀಡಲಾಗುತ್ತದೆ. ಕೆನಡಾ ಪೋಲಾರ್ ಕರಡಿಗಳ ಚರ್ಮದ ರಫ್ತಿಗೆ ಅನುಮತಿ ನೀಡುವ ಏಕೈಕ ದೇಶವೂ ಹೌದು.
ನೆರೆಯ ಪಾಕಿಸ್ತಾನದಲ್ಲೂ ರಾಷ್ಟ್ರ ಪ್ರಾಣಿಯಾದ ಮಾರ್ಖೋರ್ ಹೆಸರಿನ ಕಾಡು ಮೇಕೆಯ ಸಂರಕ್ಷಣೆಗಾಗಿ ಅಲ್ಲಿ ಟ್ರೋಫಿ ಹಂಟಿಂಗ್ ಎಂಬ ವಿಶೇಷ ಪದ್ಧತಿಯಿದೆ. ಇದರಲ್ಲಿ ಅತ್ಯಂತ ಹೆಚ್ಚಿನ ಹಣ ಪಾವತಿಸಿ ವಿದೇಶಿ ಬೇಟೆಗಾರರು ನಿರ್ದಿಷ್ಟ ಸಂಖ್ಯೆಯ ಪ್ರಾಣಿಗಳನ್ನು ಬೇಟೆಯಾಡಬಹುದು. ಈ ಹಣದ ಶೇ. 80ರಷ್ಟು ಭಾಗವನ್ನು ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ.
ಭಾರತದಲ್ಲಿ ಬೇಟೆಯಾಡುವುದು ಸಂಪೂರ್ಣ ಕಾನೂನುಬಾಹಿರವಾದರೂ ಕೆಲವು ರಾಜ್ಯಗಳಲ್ಲಿ ಕಾಡುಹಂದಿಯಂತಹ ಪ್ರಾಣಿಗಳ ಉಪಟಳ ನಿಯಂತ್ರಿಸಲು ಬೇಟೆಗೆ ಅನುಮತಿ ನೀಡಿದ ಉದಾ ಹರಣೆಗಳಿವೆ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಚಿರತೆಗಳ ಸಂಖ್ಯೆ ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕೋತಿಗಳ ಸಂಖ್ಯೆ ನಿಯಂತ್ರಿಸಲು ಸಾಮೂಹಿಕ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ. ಸಂತಾನಶಕ್ತಿಹರಣದ ಉದ್ದೇಶ ನಿರ್ಮೂಲನೆ ಅಲ್ಲ. ಇವು ಪರಿಸರ ಸಮತೋಲನ ದೃಷ್ಟಿಯಿಂದ ಆಯ್ದ ವನ್ಯಮೃಗಗಳ ಸಂಖ್ಯೆಯನ್ನು ನಿಯಂತ್ರಿಸುವ ಕ್ರಮವಷ್ಟೇ. ಈ ನಿಟ್ಟಿನಲ್ಲಿ ಸಚಿವ ಖಂಡ್ರೆ ಅವರ ಪ್ರಸ್ತಾಪದ ಸಾಧಕ ಬಾಧಕಗಳ ಬಗ್ಗೆ ಇನ್ನಷ್ಟು ಚರ್ಚೆ ನಡೆಯಬೇಕಿದೆ.