Roopa Gururaj Column: ಭಗವಂತನೊಡನೆ ಹೋರಾಡಿದ ಭಕ್ತ ಪ್ರಹ್ಲಾದನ ಕಥೆ
ಒಮ್ಮೆ ಚ್ಯವನ ಮಹರ್ಷಿಗಳು ನರ್ಮದಾ ನದಿಯಲ್ಲಿ ಸ್ನಾನ ಮಾಡುವಾಗ ಸರ್ಪವೊಂದು ಅವರನ್ನು ರಸಾತಳ ಲೋಕಕ್ಕೆ ಸೆಳೆದೊಯ್ಯುತ್ತದೆ. ಅಲ್ಲಿ ಅವರು ದಾನವ ರಾಜ ಪ್ರಹ್ಲಾದನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಭೂಮಿಯ ಶ್ರೇಷ್ಠ ತೀರ್ಥಕ್ಷೇತ್ರ ಯಾವುದೆಂಬ ಪ್ರಹ್ಲಾದನ ಪ್ರಶ್ನೆಗೆ ಚ್ಯವನರು ನೈಮಿಷಾರಣ್ಯ’ ಎಂದು ಉತ್ತರಿಸುತ್ತಾರೆ. ಇದರಿಂದ ಪ್ರೇರಿತನಾದ ಪ್ರಹ್ಲಾದನು ಹರಿಯ ದರ್ಶನದ ಆಸೆಯಿಂದ ನೈಮಿಷಾರಣ್ಯಕ್ಕೆ ಬರುತ್ತಾನೆ.
-
ಒಂದೊಳ್ಳೆ ಮಾತು
ಪ್ರಹ್ಲಾದನು ಮಹಾನ್ ಹರಿಭಕ್ತನೆಂಬುದು ಜನಜನಿತ ಸತ್ಯ. ತಂದೆ ಹಿರಣ್ಯಕಶಿಪುವಿನ ದಂಡನೆ ಗಳಿಂದ ಹರಿಯ ಕೃಪೆಯಿಂದ ಪಾರಾಗಿ, ಕೊನೆಗೆ ನರಸಿಂಹಾವತಾರದಿಂದ ತಂದೆಯ ಸಂಹಾರವಾದ ಬಳಿಕ ದಾನವ ರಾಜ್ಯದ ಚಕ್ರವರ್ತಿಯಾಗುತ್ತಾನೆ. ಇಂತಹ ಪರಮ ಭಕ್ತ ಪ್ರಹ್ಲಾದನು ಒಮ್ಮೆ ತಿಳಿಯದೆಯೇ ತನ್ನ ಆರಾಧ್ಯ ದೈವ ಶ್ರೀಹರಿಯ ಅವತಾರಗಳಾದ ನರ-ನಾರಾಯಣರೊಂದಿಗೇ ಯುದ್ಧ ಮಾಡಿದ ಸ್ವಾರಸ್ಯಕರ ಕಥೆ ವಾಮನ ಮತ್ತು ದೇವೀಭಾಗವತ ಪುರಾಣಗಳಲ್ಲಿದೆ.
ಒಮ್ಮೆ ಚ್ಯವನ ಮಹರ್ಷಿಗಳು ನರ್ಮದಾ ನದಿಯಲ್ಲಿ ಸ್ನಾನ ಮಾಡುವಾಗ ಸರ್ಪವೊಂದು ಅವರನ್ನು ರಸಾತಳ ಲೋಕಕ್ಕೆ ಸೆಳೆದೊಯ್ಯುತ್ತದೆ. ಅಲ್ಲಿ ಅವರು ದಾನವ ರಾಜ ಪ್ರಹ್ಲಾದನ ಆತಿಥ್ಯವನ್ನು ಸ್ವೀಕರಿಸುತ್ತಾರೆ. ಭೂಮಿಯ ಶ್ರೇಷ್ಠ ತೀರ್ಥಕ್ಷೇತ್ರ ಯಾವುದೆಂಬ ಪ್ರಹ್ಲಾದನ ಪ್ರಶ್ನೆಗೆ ಚ್ಯವನರು ನೈಮಿಷಾರಣ್ಯ’ ಎಂದು ಉತ್ತರಿಸುತ್ತಾರೆ. ಇದರಿಂದ ಪ್ರೇರಿತನಾದ ಪ್ರಹ್ಲಾದನು ಹರಿಯ ದರ್ಶನದ ಆಸೆಯಿಂದ ನೈಮಿಷಾರಣ್ಯಕ್ಕೆ ಬರುತ್ತಾನೆ.
ಅಲ್ಲಿ ತಪಸ್ಸು ಮಾಡುತ್ತಿದ್ದ, ಜಟಾಧಾರಿಗಳಾಗಿದ್ದೂ ದಿವ್ಯ ಧನುಸ್ಸುಗಳನ್ನು ಹೊಂದಿದ್ದ ಇಬ್ಬರು ತಪಸ್ವಿಗಳನ್ನು ಪ್ರಹ್ಲಾದನು ಕಾಣುತ್ತಾನೆ. ಅವರು ಲೋಕಕಲ್ಯಾಣಕ್ಕಾಗಿ ತಪಸ್ಸಿನಲ್ಲಿದ್ದ ಮಹಾ ವಿಷ್ಣುವಿನ ಅವತಾರಗಳಾದ ನರ ಮತ್ತು ನಾರಾಯಣರಾಗಿದ್ದರು. ಆದರೆ, ಅವರ ರೂಪ ಮತ್ತು ಆಯುಧ ಗಳನ್ನು ಒಟ್ಟಿಗೆ ನೋಡಿದ ಪ್ರಹ್ಲಾದ ಅವರನ್ನು ಧರ್ಮಬಾಹಿರ ಡಾಂಭಿಕರೆಂದು ತಪ್ಪಾಗಿ ಭಾವಿಸಿದ.
ಇದನ್ನೂ ಓದಿ:Roopa Gururaj Column: ʼಲೆಫ್ಟಿನೆಂಟ್ ಕಮಾಂಡರ್ʼ ಯಶಸ್ವಿ ಸೋಲಂಕಿ ಇತಿಹಾಸ ಬರೆದ ಹೆಣ್ಣುಮಗಳು
ದೈತ್ಯರಾಜನಾದ ನಾನೇ ಧರ್ಮರಕ್ಷಕನಾಗಿರುವಾಗ ನಿಮ್ಮ ಧನುರ್ಧಾರಿ ತಪಸ್ಸಿನ ಸಾಹಸವೇನು? ತೀಕ್ಷ್ಣವಾಗಿ ಅವರನ್ನು ಪ್ರಶ್ನಿಸುತ್ತಾನೆ. ಆಗ ನರನು ನಮ್ಮನ್ನು ಯುದ್ಧದಲ್ಲಿ ಯಾರೂ ಗೆಲ್ಲಲಾರರು ಎನ್ನಲು, ತಾನೇ ಧರ್ಮದ ಏಕೈಕ ರಕ್ಷಕನೆಂಬ ಸಣ್ಣ ಅಹಂಕಾರದಲ್ಲಿದ್ದ ಪ್ರಹ್ಲಾದನು ಅವರನ್ನು ಗೆಲ್ಲುವುದಾಗಿ ಪ್ರತಿಜ್ಞೆ ಮಾಡಿ ಯುದ್ಧಕ್ಕೆ ನಿಲ್ಲುತ್ತಾನೆ. ಪ್ರಹ್ಲಾದ ಮತ್ತು ನರ-ನಾರಾಯಣರ ನಡುವೆ ಭೀಕರ ದ್ವಂದ್ವ ಯುದ್ಧ ಆರಂಭವಾಯಿತು.
ಪ್ರಹ್ಲಾದನು ಬ್ರಹ್ಮಾಸ್ತ್ರ, ಗದೆ, ಪರಿಘ ಮುಂತಾದ ಅಸಂಖ್ಯ ದಿವ್ಯ ಆಯುಧಗಳನ್ನು ಪ್ರಯೋಗಿಸಿ ದರೂ, ನರ-ನಾರಾಯಣರು ಅವುಗಳನ್ನೆಲ್ಲ ಅತ್ಯಂತ ಲೀಲಾಜಾಲವಾಗಿ ಧ್ವಂಸಗೊಳಿಸಿದರು. ನಾರಾಯಣನ ಬಾಣದ ಹೊಡೆತಕ್ಕೆ ಪ್ರಹ್ಲಾದನು ರಥದಲ್ಲಿ ಮೂರ್ಛೆ ಹೋದರೂ, ಛಲ ಬಿಡದೆ ಮರುದಿನವೂ ಯುದ್ಧ ಮುಂದುವರಿಸಿದನು. ಹೀಗೆ ನಿರಂತರವಾಗಿ ಒಂದು ಸಾವಿರ ವರ್ಷಗಳ ಕಾಲ ಘೋರ ಯುದ್ಧ ನಡೆದರೂ ಪ್ರಹ್ಲಾದನಿಗೆ ನಾರಾಯಣನನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ಚಿಂತಿತನಾದ ಪ್ರಹ್ಲಾದನು ಮಹಾವಿಷ್ಣುವನ್ನು ಕುರಿತು ಧ್ಯಾನಿಸಿದನು. ಆಗ ಪ್ರತ್ಯಕ್ಷನಾದ ವಿಷ್ಣುವು, ಪ್ರಹ್ಲಾದ, ನಿನ್ನೊಂದಿಗೆ ಯುದ್ಧ ಮಾಡುತ್ತಿರುವುದು ಬೇರೆ ಯಾರೂ ಅಲ್ಲ, ನನ್ನದೇ ಅವತಾರ ಗಳಾದ ನರ-ನಾರಾಯಣರು! ಅವರನ್ನು ಯುದ್ಧದಿಂದ ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ಗೆಲ್ಲಲು ಕೇವಲ ಭಕ್ತಿಯೊಂದೇ ದಾರಿ ಎಂದು ಸತ್ಯವನ್ನು ಮನವರಿಕೆ ಮಾಡಿಕೊಟ್ಟು ಅಂತರ್ಧಾನನಾದನು.
ತನ್ನ ತಪ್ಪು ಅರಿತುಕೊಂಡ ಪ್ರಹ್ಲಾದನು ತಕ್ಷಣವೇ ನರ-ನಾರಾಯಣರ ಪಾದಗಳಿಗೆ ಶರಣಾಗಿ, ಅವರನ್ನು ಸ್ತುತಿಸಿದನು. ಭಕ್ತನ ಶರಣಾಗತಿಗೆ ಒಲಿದ ನಾರಾಯಣನು, ನಿನ್ನ ಭಕ್ತಿಗೆ ನಾನು ಪರಾಜಿತ ನಾಗಿದ್ದೇನೆ, ವರವನ್ನು ಕೇಳು ಎಂದನು. ಪ್ರಹ್ಲಾದನು ತನಗೆ ಯುದ್ಧದಿಂದ ಬಂದ ಪಾಪಗಳ ನಾಶ ಮತ್ತು ಸದಾ ಹರಿಭಕ್ತಿಯಲ್ಲಿ ಮನಸ್ಸಿಡುವಂತೆ ವರಗಳನ್ನು ಕೇಳಿ ಪಡೆದನು. ನಂತರ ರಾಜ್ಯವನ್ನು ಅಂಧಕಾಸುರನಿಗೆ ಒಪ್ಪಿಸಿ, ತಾನು ಹರಿನಾಮ ಸ್ಮರಣೆ ಮಾಡುತ್ತಾ ದಾನವರಿಗೆ ಹಿತೋಪದೇಶಕ ನಾದನು.
ಒಬ್ಬ ವ್ಯಕ್ತಿ ಎಷ್ಟೇ ಧರ್ಮಾತ್ಮನೂ, ಜ್ಞಾನಿಯೂ ಮತ್ತು ಒಳ್ಳೆಯವನಾಗಿದ್ದರೂ, ತನ್ನ ‘ಒಳ್ಳೆಯತನ’ ಅಥವಾ ‘ಧರ್ಮಪಾಲನೆ’ಯ ಬಗ್ಗೆಯೂ ಸಣ್ಣ ಅಹಂಕಾರ ಹೊಂದಿದಾಗ ಅವನ ಎಲ್ಲ ಒಳ್ಳೆಯ ಗುಣಗಳ ಕರ್ಮ ಆ ಅಹಂಕಾರ ನುಂಗಿ ಹಾಕುತ್ತದೆ. ನಾನೇ ಉತ್ಕೃಷ್ಟ ಉಳಿದವರು ಸಾಮಾನ್ಯರು ಎನ್ನುವ ಧೋರಣೆ ನಮ್ಮಲ್ಲಿದ್ದಾಗ ನಾವು ಎಷ್ಟೇ ದೈವಭಕ್ತರಾಗಿದ್ದರು ಸಹ ನಮ್ಮ ಒಳ್ಳೆಯತನ ಯಾರಿಗೂ ತಲುಪುವುದಿಲ್ಲ.
ಅಹಂಕಾರವಿದ್ದಲ್ಲಿ ದೈವತ್ವ ಇರಲು ಸಾಧ್ಯವೇ ಇಲ್ಲ. ಆದ್ದರಿಂದಲೇ ನಾವು ಎಷ್ಟೇ ಬೆಳೆದರೂ, ವಿದ್ಯಾವಂತರಾಗಿ ದೈವ ಕೃಪೆಯಿಂದ ಸಿರಿವಂತರಾಗಿ ಬದುಕಿದರು ಸಹ ಅದರ ಅಹಂಕಾರವನ್ನು ಮೈಗೂಡಿಸಿಕೊಳ್ಳಬಾರದು. ನಮ್ಮ ಕೊನೆಯುಸಿರು ಇರುವವರೆಗೂ ನಮಗೆ ಸದಾ ಕಲಿಯಲು ಏನಾದರೂ ಇದ್ದೇ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನಮಗಿಂತ ಶ್ರೇಷ್ಠರು ಮತ್ತೊಬ್ಬರು ಪ್ರಪಂಚ ದಲ್ಲಿ ಇದ್ದೇ ಇರುತ್ತಾರೆ ಎನ್ನುವ ಅರಿವಿದ್ದಾಗ ನಾವು ವಿನಯದಿಂದ ವರ್ತಿಸುತ್ತೇವೆ. ಈ ಜಗತ್ತಿನಲ್ಲಿ ದೇವರನ್ನು, ಮನುಷ್ಯರನ್ನು ಅಹಂಕಾರ ಅಥವಾ ಯುದ್ಧದಿಂದ ಗೆಲ್ಲಲು ಸಾಧ್ಯವಿಲ್ಲ, ಕೇವಲ ನಿಷ್ಕಲ್ಮಷ ಭಕ್ತಿ ಮತ್ತು ಸ್ನೇಹದಿಂದ ಮಾತ್ರ ಎಂಥವರನ್ನೂ ಒಲಿಸಿಕೊಳ್ಳಲು ಸಾಧ್ಯ.