Prakash Hegde Column: ಮೊಬೈಲ್, ಎಐ ಮತ್ತು ರಕ್ಷಣಾ ವ್ಯವಸ್ಥೆಗಳ ಬೆನ್ನೆಲುಬು
ನಾಲ್ಕು ದಶಕಗಳ ಹಿಂದೆ ಪ್ರಕೃತಿದತ್ತವಾದ ಅಪರೂಪದ ಸಿಲಿಕಾ ಮರಳು ಇಲೆಕ್ಟ್ರಾನಿಕ್ ಜಗತ್ತಿನ ಮಹತ್ವದ ಆವಿಷ್ಕಾರಗಳಿಗೆ ನಾಂದಿಯಾದಂತೆ, ಪ್ರಸ್ತುತ ಜಾಗತಿಕ ಚರ್ಚೆ ಯಲ್ಲಿರುವ ನೈಸರ್ಗಿಕ ಕೊಡುಗೆಗಳಾದ ‘ಅಪರೂಪದ ಭೂ-ಖನಿಜಾಂಶಗಳು’ ( Rare Earth Elements) ಅಧುನಿಕ ಇಲೆಕ್ಟ್ರಾನಿಕ್ ಯುಗದ ಕ್ಯಾಟಲಿಸ್ಟ್ ಅಗುತ್ತಿರುವುದು ‘ಡೇಜಾವು’ ಸನ್ನಿವೇಶದ ವಿರಾಟರೂಪವೆನಿಸಿತು.
-
ಸ್ವಯಂಪ್ರಕಾಶ
ಪ್ರಕಾಶ ಹೆಗಡೆ
ಅತ್ಯಾವಶ್ಯಕ ಹಾಗೂ ನಿರ್ಣಾಯಕ ಭೂ-ಖನಿಜಗಳು ಇಂದು ಶಕ್ತಿಯ ಹೊಸ ವಾಸ್ತವಿ ಕತೆಯಾಗಿವೆ. ಇವು ಶುದ್ಧ ಇಂಧನ ಪರಿವರ್ತನೆ, ವಿದ್ಯುತ್ ಚಲನೆಯ ವ್ಯವಸ್ಥೆಗಳು, ಉನ್ನತ ಇಲೆಕ್ಟ್ರಾನಿP, ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಧುನಿಕ ರಕ್ಷಣಾ ವ್ಯವಸ್ಥೆ ಗಳ ಹಿಂದಿನ ಮೂಲ ಚಾಲನಾಶಕ್ತಿಯಾಗಿವೆ. ಭಾರತವು ಈ ಕ್ಷೇತ್ರದಲ್ಲಿ ಎರಡು ಸುರಕ್ಷಿತ ಸರಬರಾಜು ಸರಪಳಿಗಳ ವೇದಿಕೆಗಳಲ್ಲಿ ತನ್ನ ಕಾರ್ಯತಂತ್ರವನ್ನು ಕೇಂದ್ರೀಕರಿಸಿದೆ.
ಕಾಲೇಜಿನ ದಿನಗಳಲ್ಲಿ ಬೆಂಗಳೂರಿನ ಅವೆನ್ಯೂ ರಸ್ತೆಯ ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಗಳಲ್ಲಿ ಆಯ್ದ ‘ಲೈಫ್’ ಮತ್ತು ‘ನ್ಯಾಷನಲ್ ಜಿಯೋಗ್ರಾಫಿಕ್’ ಪತ್ರಿಕೆಗಳನ್ನು ಕೊಂಡು, ಓದಿ, ಶೆಲ್ಫಿನಲ್ಲಿ ಚಂದವಾಗಿ ಶೇಖರಿಸಿಡುವ ಹವ್ಯಾಸವಿತ್ತು. ಮಾಹಿತಿ ಭಂಡಾರ ಗಳಾದ ಈ ನಿಯತಕಾಲಿಕೆಗಳ ಪುಟಗಳನ್ನು ಆಗಾಗ ತಿರುವುತ್ತ ‘ಮಧುರಸ್ಮೃತಿ’ ಯನ್ನು ನವೀಕರಿಸುವಾಗ ನ್ಯಾಷನಲ್ ಜಿಯೋಗ್ರಾಫಿಕ್ ಅಕ್ಟೋಬರ್ 1982ರ ಪುಟಗಳಲ್ಲಿ ಸೆಮಿ ಕಂಡಕ್ಟರ್ ಚಿಪ್ ಆವಿಷ್ಕಾರಕ್ಕೆ ಸಿಲಿಕಾ ಮರಳು ಪೂರಕವೆಂದು ವಿವರಿಸಿದ ಲೇಖನ ಇಂದಿನ ಪರಿಸರಕ್ಕೆ ಸಾಮ್ಯ ಕಲ್ಪಿಸಿತು.
ನಾಲ್ಕು ದಶಕಗಳ ಹಿಂದೆ ಪ್ರಕೃತಿದತ್ತವಾದ ಅಪರೂಪದ ಸಿಲಿಕಾ ಮರಳು ಇಲೆಕ್ಟ್ರಾನಿಕ್ ಜಗತ್ತಿನ ಮಹತ್ವದ ಆವಿಷ್ಕಾರಗಳಿಗೆ ನಾಂದಿಯಾದಂತೆ, ಪ್ರಸ್ತುತ ಜಾಗತಿಕ ಚರ್ಚೆ ಯಲ್ಲಿರುವ ನೈಸರ್ಗಿಕ ಕೊಡುಗೆಗಳಾದ ‘ಅಪರೂಪದ ಭೂ-ಖನಿಜಾಂಶಗಳು’ ( Rare Earth Elements)ಅಧುನಿಕ ಇಲೆಕ್ಟ್ರಾನಿಕ್ ಯುಗದ ಕ್ಯಾಟಲಿಸ್ಟ್ ಅಗುತ್ತಿರುವುದು ‘ಡೇಜಾವು’ ಸನ್ನಿವೇಶದ ವಿರಾಟರೂಪವೆನಿಸಿತು.
ನಿಜ. ಚಿನ್ನ, ಬೆಳ್ಳಿ, ಅಷ್ಟೇಕೆ ತಾಮ್ರವೂ ಅಪರೂಪದ ಲೋಹಗಳ ಗುಂಪಿಗೇ ಸೇರುತ್ತವೆ. ಆದರೆ ನಾನಿಲ್ಲಿ ಹೇಳುತ್ತಿರುವುದು ಹದಿನೇಳು ಅತ್ಯಂತ ಅಪರೂಪದ-ಅಗತ್ಯದ ವಿಶೇಷ ಭೂ-ಖನಿಜಾಂಶಗಳ ಕುರಿತು. ಈ ‘ವಿಶೇಷ’ ಅಥವಾ ‘ಅಪರೂಪದ’ ಭೂ-ಖನಿಜಾಂಶಗಳು ಆಧುನಿಕ ತಂತ್ರಜ್ಞಾನಗಳಿಗೆ ಅವಶ್ಯವೆನಿಸಿದ ಕಚ್ಚಾ ವಸ್ತು.
ಇದನ್ನೂ ಓದಿ: Prakash Hegde Column: ಎಐ ಯುಗ: ಅವಕಾಶಗಳು, ಸವಾಲುಗಳು ಮತ್ತು ಭಾರತದ ಪಾತ್ರ
ಇವುಗಳಲ್ಲಿ ನಿಯೋಡಿಮಿಯಂ, ಪ್ರಾಸಿಯೊಡಿಮಿಯಂ, ಲ್ಯಾಂಥನಂ, ಸೀರಿಯಂ ಮುಂತಾ ದವು ಸಾಮಾನ್ಯವಾಗಿ ಬಳಸಲ್ಪಡುವಂಥವು. ಇವುಗಳನ್ನು ವಾಹನಗಳ ಎಕ್ಸಾ ವ್ಯವಸ್ಥೆ ಗಳಲ್ಲಿ ಮತ್ತು ಕೈಗಾರಿಕೆಯಲ್ಲಿ ಪ್ರೇರಕಗಳಾಗಿ ಬಳಸಲಾಗುತ್ತಿದೆ. ವಿದ್ಯುತ್ ವಾಹನಗಳು ಮತ್ತು ಇಲೆಕ್ಟ್ರಾನಿಕ್ ಗಳಲ್ಲಿ ಶಾಶ್ವತ ಮ್ಯಾಗ್ನೆಟ್ ತಯಾರಿಸಲೂ ಇವು ಅವಶ್ಯಕ.
ಜತೆಗೆ, ವಿವಿಧ ಇಲೆಕ್ಟ್ರಾನಿಕ್ ಸಾಧನಗಳ ಬ್ಯಾಟರಿಗಳಲ್ಲಿ, ವಿಮಾನದ ಎಂಜಿನ್‌ಗಳಿಗೆ ಅಗತ್ಯವಾದ ಉಚ್ಚ ಬಲದ ಮಿಶ್ರಲೋಹಗಳಲ್ಲಿ, ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ, ಹಾಗೆಯೇ ಪರಮಾಣು ರಿಯಾಕ್ಟರ್‌ಗಳಲ್ಲಿ ನಿಯಂತ್ರಣ ರಾಡ್‌ಗಳಾಗಿ ಈ ಭೂ-ಖನಿಜಾಂಶ ಗಳನ್ನು ಬಳಸಲಾಗುತ್ತದೆ. ಜಗತ್ತಿನಲ್ಲಿ ಇವುಗಳ ಲಭ್ಯತೆ ಸೀಮಿತವಾಗಿರುವುದರಿಂದ, ಈ ಭೂ-ಖನಿಜಾಂಶಗಳು ಆರ್ಥಿಕ ಮತ್ತು ಭೌಗೋಳಿಕ/ರಾಜಕೀಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ದೇಶಗಳು ಸ್ವದೇಶಿ ಉತ್ಪಾದನೆ ಮತ್ತು ಸುರಕ್ಷಿತ ಸರಬರಾಜು ಸರಪಳಿಗಳತ್ತ ಗಮನ ಹರಿಸುತ್ತಿವೆ.
ಗ್ರೀನ್‌ಲ್ಯಾಂಡ್'ನಲ್ಲಿ ಸುಮಾರು ಹದಿನೈದು ಲಕ್ಷ ಟನ್‌ಗಳಷ್ಟು ಅಪರೂಪದ ಭೂ-ಖನಿಜ ಗಳ ಭಂಡಾರವಿರುವುದರಿಂದ, ಅಮೆರಿಕವು ಗ್ರೀನ್ ಲ್ಯಾಂಡ್ ಅನ್ನು ತನ್ನ ತೆಕ್ಕೆಗೆ ಸೇರಿಸಿ ಕೊಳ್ಳುವ ಹುಚ್ಚು ಸಾಹಸವನ್ನು ಪ್ರದರ್ಶಿಸುತ್ತಿದೆ.
ಈ ಅಪರೂಪದ ಭೂ-ಖನಿಜಾಂಶಗಳ ಅನ್ವೇಷಣೆ ಇತಿಹಾಸದ ದೃಷ್ಟಿಯಿಂದ ಇತ್ತೀಚಿ ನದ್ದೇ. ಚಿನ್ನ ಮತ್ತು ಬೆಳ್ಳಿಯ ಉಪಯೋಗ ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿತ್ತು. ಇಲೆಕ್ಟ್ರಾನಿಕ್ ವಲಯದ ಪ್ರಗತಿಯಿಂದಾಗಿ ಅಪರೂಪದ ಭೂ-ಖನಿಜಗಳ ಕುರಿತಾಗಿ ನಮಗೆ ಕಳೆದ ಎಂಟು ದಶಕಗಳಿಂದ ತಿಳಿಯಲಾರಂಭಿಸಿದೆ.
ಮೊದಲ ಅಪರೂಪದ ಭೂ-ಖನಿಜಾಂಶವಾದ ಇಟ್ರಿಯಾ ಅನ್ನು 1794ರಲ್ಲಿ ಪತ್ತೆ ಹಚ್ಚಲಾಗಿದ್ದು, ಕೊನೆಯದಾದ ಪ್ರೊಮಿಥಿಯಂ ಅನ್ನು 1945ರಲ್ಲಿ ಗುರುತಿಸಲಾಯಿತು. ಇಂದಿನ ಅಂದಾಜಿನ ಪ್ರಕಾರ, ಭೂಮಿಯಲ್ಲಿ ಇನ್ನೂ ಗಣಿಗಾರಿಕೆ ಮಾಡದೆ ಉಳಿದಿರುವ ಬಂಗಾರದ ಪ್ರಮಾಣ ಐವತ್ತು ಸಾವಿರ ಟನ್‌ಗಳು ಮಾತ್ರವಾಗಿದ್ದರೆ, ಅಪರೂಪದ ಭೂ-ಖನಿಜಾಂಶಗಳ ಜಾಗತಿಕ ಸಂಗ್ರಹವು 110 ಕೋಟಿ ಟನ್‌ಗಳಷ್ಟು ದೊಡ್ಡದಾಗಿದೆ.
ಇವುಗಳನ್ನು ‘ಅಪರೂಪದ ಭೂ-ಖನಿಜಾಂಶಗಳು’ ಎಂದು ಕರೆಯುವುದಕ್ಕೆ ಕಾರಣ, ಅವು ಭೂಮಿಯಲ್ಲಿ ಅತಿ ಕಡಿಮೆ ಸಾಂದ್ರತೆಯಲ್ಲಿ ಕಂಡುಬರುವುದೇ ಹೊರತು, ಸಂಪೂರ್ಣ ವಾಗಿ ಲಭ್ಯವಿಲ್ಲವೆಂದಲ್ಲ. ಸ್ವಲ್ಪ ಪ್ರಮಾಣದ ಅಪರೂಪದ ಭೂ-ಖನಿಜಾಂಶಗಳನ್ನು ಪಡೆಯಲು ಪರ್ವತದಷ್ಟು ಮಣ್ಣು ಮತ್ತು ಕಲ್ಲುಗಳನ್ನು ಸಂಸ್ಕರಿಸಬೇಕಾಗುತ್ತದೆ. ಈ ಸಂಸ್ಕರಣಾ ಪ್ರಕ್ರಿಯೆಗಳು ಅತ್ಯಂತ ಸಂಕೀರ್ಣವಾಗಿದ್ದು, ಪರಿಸರಕ್ಕೆ ಹೆಚ್ಚು ಮಾಲಿನ್ಯ ಉಂಟುಮಾಡುವ ಸ್ವಭಾವದ್ದಾಗಿವೆ.
ಜಗತ್ತಿನ ಅಪರೂಪದ ಭೂ-ಖನಿಜಾಂಶಗಳ ಒಟ್ಟು ಸಂಗ್ರಹವು ಚೀನಾದಲ್ಲಿ ಅತ್ಯಂತ ಹೆಚ್ಚು ಅಂದರೆ, ಸುಮಾರು 4.5 ಕೋಟಿ ಟನ್‌ಗಳಷ್ಟಿವೆ. ಮಧ್ಯಪ್ರಾಚ್ಯದಲ್ಲಿ ತೈಲ ಇದ್ದಂತೆ, ಚೀನಾದಲ್ಲಿ ಈ ಭೂ-ಖನಿಜದ ಭಂಡಾರವಿದೆ. ಬ್ರೆಜಿಲ್‌ನಲ್ಲಿ ಸುಮಾರು 2.1 ಕೋಟಿ ಟನ್ ಗಳಿದ್ದರೆ, ಭಾರತವು ಮೂರನೆಯ ಸ್ಥಾನದಲ್ಲಿದ್ದು ಸುಮಾರು 69 ಲಕ್ಷ ಟನ್‌ಗಳಷ್ಟು ಸಂಗ್ರಹವನ್ನು ಹೊಂದಿದೆ.
ಹೀಗೆ ಭೂ-ಖನಿಜದ ಪ್ರಯೋಜನಗಳನ್ನು ಪಡೆದಿರುವ ಚೀನಾ, ವೆಚ್ಚ ದಕ್ಷತೆ ಹಾಗೂ ತಾಂತ್ರಿಕ ಪ್ರಗತಿಯಿಂದಾಗಿ ತನ್ನ ಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದೆ; ಇಂದು ಅಪರೂಪದ ಭೂ-ಖನಿಜಾಂಶಗಳ ಗಣಿಗಾರಿಕೆ ಮತ್ತು ಸಂಸ್ಕರಣೆಯನ್ನು ನಿಯಂತ್ರಿಸುವ ಮೂಲಕ ಚೀನಾ ಬಹುತೇಕ ಜಾಗತಿಕ ಏಕಸ್ವಾಮ್ಯವನ್ನು ಹೊಂದಿದೆ. ಬೆಲೆಗಳು, ಸರಬರಾಜು ಮತ್ತು ಬೇಡಿಕೆಗಳನ್ನು ಪ್ರಾಯೋಗಿಕವಾಗಿ ಚೀನಾದ ನಿರ್ಧರಿಸಲಾಗುತ್ತಿದೆ.
ಇತರೆ ದೇಶಗಳಿಗೆ, ಕನಿಷ್ಠ ಈಗಿನ ಪರಿಸ್ಥಿತಿಯಲ್ಲಿ, ಚೀನಾ ನಿಗದಿಪಡಿಸುವ ವೇಗ ಮತ್ತು ನೀತಿಗಳನ್ನು ಅನುಸರಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯಿಲ್ಲ. ಈ ವರ್ಷ ಚೀನಾ ಈ ಭೂ-ಖನಿಜಾಂಶಗಳ ಸರಬರಾಜಿನ ಮೇಲೆ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸಿರುವುದು ಈ ಏಕಾಧಿಕಾರದ ಶಕ್ತಿಯ ಫಲ.
ಏಕಸಾಮ್ಯವು ಅಸಮತೋಲನವನ್ನು ಹುಟ್ಟುಹಾಕಬಹುದು. ಚೀನಾ ಅಸಹಕಾರಿಯಾಗಿ ನಡೆದುಕೊಂಡರೆ, ಜಾಗತಿಕ ಸರಬರಾಜು ಸರಪಳಿಗಳು ಹಾಗೂ ಅನೇಕ ದೇಶಗಳ ಉತ್ಪಾದನಾ ವಲಯವೇ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಇಂಥ ಏಕಾಧಿಕಾರವು ಜಾಗತಿಕ ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಪರಿಸರವನ್ನು ಒದಗಿಸುವುದಿಲ್ಲ.
ಅಪರೂಪದ ಈ ಅತ್ಯಾವಶ್ಯಕ ಹಾಗೂ ನಿರ್ಣಾಯಕ ಭೂ-ಖನಿಜಗಳು ಇಂದು ಶಕ್ತಿಯ ಹೊಸ ವಾಸ್ತವಿಕತೆಯಾಗಿವೆ. ಇವು ಶುದ್ಧ ಇಂಧನ ಪರಿವರ್ತನೆ, ವಿದ್ಯುತ್ ಚಲನೆಯ ವ್ಯವಸ್ಥೆಗಳು, ಉನ್ನತ ಇಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ (ಎಐ) ಮತ್ತು ಆಧುನಿಕ ರಕ್ಷಣಾ ವ್ಯವಸ್ಥೆಗಳ ಹಿಂದಿನ ಮೂಲ ಚಾಲನಾಶಕ್ತಿಯಾಗಿವೆ.
ಭಾರತವು ಈ ಕ್ಷೇತ್ರದಲ್ಲಿ ಎರಡು ಸುರಕ್ಷಿತ ಸರಬರಾಜು ಸರಪಳಿಗಳ ವೇದಿಕೆಗಳಲ್ಲಿ ತನ್ನ ಕಾರ್ಯತಂತ್ರವನ್ನು ಕೇಂದ್ರೀಕರಿಸಿದೆ. ದೇಶದೊಳಗಿನ ಅನ್ವೇಷಣೆ, ಶುದ್ಧೀಕರಣ, ಮರು ಬಳಕೆ ಮತ್ತು ಮರುಪಡೆಯುವಿಕೆಯನ್ನು ಒಗ್ಗೂಡಿಸಿದ ಸಂಘಟಿತ ಮಿಷನ್ ಮೊದಲನೆ ಯದಾದರೆ, ವಿದೇಶಗಳಲ್ಲಿ ಅವಲಂಬನೆಯಿಂದುಂಟಾಗುವ ಅಪಾಯ ತಗ್ಗಿಸಲು ಅನೇಕ ಸಹಭಾಗಿತ್ವಗಳನ್ನು ವಿಸ್ತರಿಸುವ ರಾಜತಾಂತ್ರಿಕ ಮಿಷನ್ ಎರಡನೆಯದಾಗಿದೆ.
ಅವುಗಳಲ್ಲಿ ಅಮೆರಿಕ ನೇತೃತ್ವದ ಫೋರ್ಜ್ ಒಪ್ಪಂದವು ಅತ್ಯವಶ್ಯಕ ಭೂ-ಖನಿಜಗಳ ಸರಬರಾಜು ಸರಪಳಿಯನ್ನು ವೈವಿಧ್ಯಗೊಳಿಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಹಕಾರ ವನ್ನು ನಿರ್ಮಿಸುವ ದಾರಿ ತೋರಿಸುತ್ತದೆ. ಫೋರ್ಜ್ ಉಪಕ್ರಮವು ತಂತ್ರಜ್ಞಾನ ಸರಬ ರಾಜು ಸರಪಳಿಯ ವಿಶಾಲ ದೃಷ್ಟಿಕೋನದೊಂದಿಗೆ ಹೊಂದಾಣಿಕೆಯಾಗಿದ್ದು, ಇದರಲ್ಲಿ ಭಾರತವು ಇತ್ತೀಚೆಗೆ ಸಹಿ ಮಾಡಿದ ‘ಪ್ಯಾಕ್ಸ್ ಸಿಲಿಕಾ’ ಕೂಡ ಸೇರಿದೆ.
ಪ್ಯಾಕ್ಸ್ ಸಿಲಿಕಾ ಉದ್ದೇಶವು ಉನ್ನತ ಮಟ್ಟದ ಸೆಮಿಕಂಡಕ್ಟರ್‌ಗಳು, ಸುಧಾರಿತ ಉತ್ಪಾದನೆ ಮತ್ತು ‘ಎಐ’ ಮೂಲಸೌಕರ್ಯವನ್ನು ಸುರಕ್ಷಿತಗೊಳಿಸುವುದಾಗಿದೆ. ಈ ಹಿನ್ನೆಲೆಯಲ್ಲಿ, ಭಾರತವು ಇತ್ತೀಚೆಗೆ ಬ್ರೆಜಿಲ್ ಜತೆ ಮಾಡಿಕೊಂಡ ಒಪ್ಪಂದವೂ ಮಹತ್ವ ಪಡೆದಿದ್ದು, ಅನ್ವೇಷಣೆ, ಸಂಸ್ಕರಣೆ ಮತ್ತು ತಂತ್ರಜ್ಞಾನ ಸಹಕಾರದ ಅವಕಾಶಗಳನ್ನು ಅದು ವಿಸ್ತರಿಸು ತ್ತದೆ.
ಒಂದೆಡೆ ಅಮೆರಿಕ ನೇತೃತ್ವದ ಜಾಗತಿಕ ಉಪಕ್ರಮಗಳಲ್ಲಿ ಭಾರತ ಭಾಗವಹಿಸುತ್ತಿದ್ದರೆ, ಮತ್ತೊಂದೆಡೆ ಬ್ರೆಜಿಲ್‌ನಂಥ ಸಂಪನ್ಮೂಲ ಸಮೃದ್ಧ ದೇಶಗಳೊಂದಿಗೆ ನೇರ ಸಹಭಾಗಿತ್ವ ಗಳನ್ನು ಬೆಳೆಸುವ ಮೂಲಕ, ಅತಿಯಾದ ಅವಲಂಬನೆಯ ಅಪಾಯವನ್ನು ಕಡಿಮೆ ಮಾಡಿ ತನ್ನ ತಂತ್ರಾತ್ಮಕ ಆಯ್ಕೆಗಳನ್ನು ಬಲಪಡಿಸುತ್ತಿದೆ.
ವಿಶಿಷ್ಟ ಲಕ್ಷಣಗಳ ಆಧಾರದ ಮೇಲೆ, ಭೂಮಿಯಲ್ಲಿ ಒಟ್ಟು ಹದಿನೇಳು ಅಪರೂಪದ ಭೂ-ಖನಿಜಾಂಶಗಳಿವೆಯೆಂದು ಜಿಯೋ-ಕೆಮಿಸ್ಟ್‌ಗಳು ಖಚಿತಪಡಿಸಿದ್ದಾರೆ. ಅವುಗಳಲ್ಲಿ ಎಂಟು ಮಾತ್ರವೇ ಭಾರತದಲ್ಲಿ ಲಭ್ಯವಿವೆ. ಲಾಂಥನಮ, ಸೀರಿಯಮ್, ನಿಯೋಡಿಮಿಯಂ, ಪ್ರಾಸಿಯೊಡಿಮಿಯಂ ಮತ್ತು ಸಮಾರಿಯಂ ಮುಂತಾದ ಭೂ-ಖನಿಜಾಂಶಗಳ ಜಗತ್ತಿನ ಮೂರನೇ ಅತಿದೊಡ್ಡ ಸಂಗ್ರಹ ಹೊಂದಿರುವುದರ ಜತೆಗೆ, ಕಡಿಮೆ ವೆಚ್ಚದ ಕಾರ್ಮಿಕ ಶಕ್ತಿಯ ಬೆಂಬಲದಿಂದ ಭಾರತವು ಕೆಲವು ಉತ್ಪಾದನಾ ಚಟುವಟಿಕೆಗಳಲ್ಲಿ ಮುಂಚೂಣಿಗೆ ಬರಲು ಸಾಧ್ಯವಿದೆ.
ಕಲ್ಲಿದ್ದಲಿನಲ್ಲಿ ಸಹ ಸ್ವಾಭಾವಿಕವಾಗಿ ಕೆಲವು ಪ್ರಮಾಣದ ಅಪರೂಪದ ಭೂ-ಖನಿಜಾಂಶ ಗಳು ಇರುತ್ತವೆ. ಕಲ್ಲಿದ್ದಲನ್ನು ಸುಟ್ಟ ನಂತರ ದೊರಕುವ - ಆಶ್‌ನಲ್ಲಿ ಈ ಖನಿಜಾಂಶಗಳು ಹೆಚ್ಚು ಸಾಂದ್ರತೆಯಲ್ಲಿ ಇರುತ್ತವೆ. ಇಂಥವನ್ನು ಹೊರತೆಗೆಯುವ ಯೋಜನೆಯನ್ನು ಭಾರತವು ಬೆಲ್ಜಿಯಂನ ಕಂಪನಿಗಳ ಸಹಕಾರದೊಂದಿಗೆ ರೂಪಿಸುತ್ತಿದೆ.
ಸಾಮಾನ್ಯವಾಗಿ ಮೊನಜೈಟ್ ಮುಂತಾದ ಖನಿಜಗಳಲ್ಲಿ ಅನೇಕ ಅಪರೂಪದ ಭೂ-ಖನಿಜಾಂಶಗಳಿವೆ. ಭಾರತದಲ್ಲಿ, ವಿಶೇಷವಾಗಿ ಕೇರಳದ ಕರಾವಳಿ ಮರಳುಗಳಲ್ಲಿ ಮೊನ ಜೈಟ್‌ನ ಅಂಶಗಳು ಕಂಡುಬರುತ್ತವೆ. ಆದರೆ ಇವುಗಳನ್ನು ಶುದ್ಧೀಕರಿಸುವುದು ಹುಲ್ಲಿನ ಮೆದೆಯಲ್ಲಿ ಸೂಜಿ ಹುಡುಕುವಂಥ ಪ್ರಕ್ರಿಯೆ.
ಉದಾಹರಣೆಗೆ, ಅಪರೂಪದ ಭೂ-ಖನಿಜಾಂಶಗಳನ್ನು ಬೇರ್ಪಡಿಸಲು ದ್ರಾವಣ ಎಕ್ಸ್ ಟ್ರಾಕ್ಷನ್ ಮತ್ತು ಐಯಾನ್ ವಿನಿಮಯಗಳಂಥ ಬಹು ಹಂತದ ಸಂಕೀರ್ಣ ಪ್ರಕ್ರಿಯೆ ಗಳನ್ನು ಸಂಪೂರ್ಣವಾಗಿ ನಿಭಾಯಿಸುವ ಪರಿಣತಿಯ ಅಗತ್ಯವಿರುತ್ತದೆ. 1950ರ, ಜಗತ್ತು ಅಪರೂಪದ ಭೂ-ಖನಿಜಾಂಶಗಳ ಮಹತ್ವವನ್ನು ಅರಿಯುವ ದಶಕಗಳ ಮುಂಚೆಯೇ, ಭಾರತವು ಈ ತಂತ್ರಾತ್ಮಕ ಖನಿಜಗಳ ಗಣಿಗಾರಿಕೆ ಮತ್ತು ಸಂಸ್ಕರಣೆಗೆ ‘ಇಂಡಿಯಾ ರೇರ್ ಅx ಲಿಮಿಟೆಡ್ ಕಂಪನಿ’ಯನ್ನು ಸ್ಥಾಪಿಸಿತ್ತು.
75 ವರ್ಷಗಳ ನಂತರದ ಇಲೆಕ್ಟ್ರಾನಿಕ್ ಯುಗದಲ್ಲಿ, ಈ ಸಂಸ್ಥೆ ಭಾರತಕ್ಕೆ ಮುಂಚೂಣಿಯ ಸ್ಥಾನ ಒದಗಿಸಿಕೊಡಬೇಕಾಗಿತ್ತು. ಆದರೆ ವಾಸ್ತವದಲ್ಲಿ, ತೆರಿಗೆದಾರರ ಹಣದಿಂದ ಪೋಷಿಸ ಲಾಗುತ್ತಿರುವ ಈ ‘ಪಿಎಸ್‌ಯು’ ಸುಪ್ತ ಸ್ಥಿತಿಯಲ್ಲಿದ್ದು, ಪುರಾತನ ಗಣಿಗಳು, ಹಳೆಯ ತಂತ್ರ ಜ್ಞಾನ ಮತ್ತು ಸಿಎಕ್ಸ್‌ಒ ಹುದ್ದೆಗಳಲ್ಲಿನ ನೇತೃತ್ವದ ಕೊರತೆಗಳ ಸಂಸ್ಥೆಯಾಗಿ ಪುನರುತ್ಥಾನ ಕ್ಕಾಗಿ ಸರಕಾರದ ಬೆಂಬಲದ ನಿರೀಕ್ಷಣೆಯಲ್ಲಿದೆ.
ಅಪರೂಪದ ಭೂ-ಖನಿಜಾಂಶಗಳ ಕ್ಷೇತ್ರದಲ್ಲಿ ಭಾರತವು ಇತ್ತೀಚಿನ ವರ್ಷಗಳಲ್ಲಿ ಮಹತ್ವದ ಮುನ್ನಡೆ ಸಾಧಿಸುತ್ತಿದ್ದು, ಅವುಗಳ ಮೇಲೆ ಅವಲಂಬಿತವಾಗಿರುವ ಕೈಗಾರಿಕೆ ಗಳಿಗೆ ಭವಿಷ್ಯದ ಸರಬರಾಜನ್ನು ಭದ್ರಪಡಿಸುವ ದಿಕ್ಕಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ದೇಶದೊಳಗೆ ಅನ್ವೇಷಣೆ, ಸಂಸ್ಕರಣೆ, ಮರುಬಳಕೆ ಮತ್ತು ಮರುಪಡೆಯುವಿಕೆಯನ್ನು ಒಗ್ಗೂಡಿಸಿದ ನೀತಿಕ್ರಮಗಳು, ಜತೆಗೆ ವಿದೇಶಗಳಲ್ಲಿ ತಂತ್ರಾತ್ಮಕ ಸಹಭಾಗಿತ್ವಗಳು, ಸರಬರಾಜಿನ ಅಪಾಯಗಳನ್ನು ಕಡಿಮೆ ಮಾಡುತ್ತಿವೆ. ಈ ಪ್ರಯತ್ನಗಳ ಮೂಲಕ ವಿದ್ಯುತ್ ವಾಹನಗಳು, ಇಲೆಕ್ಟ್ರಾನಿP, ಸೆಮಿಕಂಡಕ್ಟರ್‌ಗಳು ಮತ್ತು ರಕ್ಷಣಾ ಕೈಗಾರಿಕೆಗಳಿಗೆ ಅಗತ್ಯ ವಾದ ಅಪರೂಪದ ಭೂ-ಖನಿಜಾಂಶಗಳ ಸ್ಥಿರ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಚಿತಪಡಿಸುವಲ್ಲಿ ಭಾರತವು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಭಾರತವು ಇಂದಿನ ಅತ್ಯಂತ ಅನುಕೂಲಕರ ಪರಿಸರದ ಸುವರ್ಣಾವಕಾಶವನ್ನು ಬಳಸಿ ಕೊಂಡರೆ, ಭೂತಕಾಲದ ಅನುತ್ಪಾದಕ ತಪ್ಪುಗಳನ್ನು ಅಳಿಸಬಹುದು, ಭವಿಷ್ಯದ ಯಶಸ್ಸು ಖಾತ್ರಿಯಾಗಬಹುದು.
(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ
ವಿದ್ಯಮಾನಗಳ ವಿಶ್ಲೇಷಕರು)