Mohan Vishwa Column: ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ
ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ನಕ್ಸಲ್ ಚಳವಳಿಯು 1980ರ ದಶಕದಲ್ಲಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಆಂಧ್ರಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ 1980 ರಲ್ಲಿ ನಕ್ಸಲ್ ಸಂಘಟನೆ ಸ್ಥಾಪನೆಯಾಯಿತು. ಭೂಮಾಲೀಕರನ್ನು ಅಪಹರಿಸಿ ಹಳ್ಳಿಯ ಜನರ ಮುಂದೆ ಕ್ಷಮೆ ಯಾಚಿಸುವಂತೆ ಬಲವಂತ ಮಾಡುವುದು, ಹಣ ನೀಡುವಂತೆ ಒತ್ತಾಯಿಸು ವುದು ಅವರ ಚಳವಳಿಯ ನಿತ್ಯದ ಕೆಲಸವಾಗಿತ್ತು

ಅಂಕಣಕಾರ ಮೋಹನ್ ವಿಶ್ವ

1967ರಲ್ಲಿ, ಚಾರು ಮಜುಂದಾರ್, ಕಾನು ಸನ್ಯಾಲ್ ಮತ್ತು ಜಂಗಲ್ ಸಂಥಾಲ್ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್ ವಾದಿಿ ಒಂದು ಬಣವು ‘ಸಿಲಿಗುರಿ ಗುಂಪು’ ಎಂದು ಕರೆಯಲ್ಪಟ್ಟು, ಚೀನಾದ ಕಮ್ಯುನಿಸ್ಟ್ ಕ್ರಾಂತಿ ಮಾದರಿಯನ್ನು ಭಾರತ ದಲ್ಲಿ ಜಾರಿಗೆ ತರಲು ಬಯಸಿತ್ತು. ಅಂದು ಮಜುಂದಾರ್ ಬರೆದ 8 ದಾಖಲೆಗಳು ನಕ್ಸಲೈಟ್ ಚಳವಳಿಯ ಅಡಿಪಾಯವಾಗಿತ್ತು ಮತ್ತು ಅವರ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿದ್ದಂಥ ಸಮ್ಮಿಶ್ರ ಸರಕಾರದ ಭಾಗವಾಗಿತ್ತು. ಪಕ್ಷವು ತಮ್ಮ ಸಿದ್ಧಾಂತವನ್ನು ಬೆಂಬಲಿಸುತ್ತದೆ ಎಂದು ಮಜುಂದಾರ್ ನಂಬಿದ್ದರು, ಆದರೆ ಅವರು ಜಾರಿಗೆ ತರಬೇಕೆಂದು ಕೊಂಡಿದ್ದ ಸಶಸ ದಂಗೆಯನ್ನು ಅವರ ಪಕ್ಷ ಬೆಂಬಲಿಸಲಿಲ್ಲ. ಇದರಿಂದ ಪಕ್ಷದಲ್ಲಿ ಆಂತರಿಕ ಸಂಘರ್ಷ ಪ್ರಾರಂಭವಾಗಿ 1967ರಲ್ಲಿ ನಕ್ಸಲ್ ದಂಗೆ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ವಿಭಜನೆಯಾಗಿ, ಮಾವೋವಾದಿ ಸಿದ್ಧಾಂತವನ್ನು ಬೆಂಬಲಿಸುವ ವಿವಿಧ ಗುಂಪುಗಳಾದವು.
ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ನಕ್ಸಲ್ ಚಳವಳಿಯು 1980ರ ದಶಕದಲ್ಲಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಆಂಧ್ರಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ 1980ರಲ್ಲಿ ನಕ್ಸಲ್ ಸಂಘಟನೆ ಸ್ಥಾಪನೆಯಾಯಿತು. ಭೂಮಾಲೀಕರನ್ನು ಅಪಹರಿಸಿ ಹಳ್ಳಿಯ ಜನರ ಮುಂದೆ ಕ್ಷಮೆ ಯಾಚಿಸುವಂತೆ ಬಲವಂತ ಮಾಡುವುದು, ಹಣ ನೀಡು ವಂತೆ ಒತ್ತಾಯಿಸುವುದು ಅವರ ಚಳವಳಿಯ ನಿತ್ಯದ ಕೆಲಸವಾಗಿತ್ತು. 1985ರಲ್ಲಿ, ವಾರಂಗಲ್ ಜಿಲ್ಲೆಯ ಪೊಲೀಸ್ ನಿರೀಕ್ಷಕರ ಮೇಲೆ ಈತನ ಗುಂಪು ಗೆರಿಲ್ಲಾ ದಾಳಿ ಮಾಡಿ ಬರ್ಬರವಾಗಿ ಕೊಂದಿತು.
ಇದನ್ನೂ ಓದಿ: Mohan Vishwa Column: ಅಂಬೇಡ್ಜರ್ ಮತ್ತು ಆರೆಸ್ಸೆಸ್: ಸಮಾನ ಚಿಂತನೆಗಳು
2003ರಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಅವರ ಕಾರಿನ ಮೇಲೆ ತಿರುಪತಿಯಲ್ಲಿ ಬಾಂಬ್ ದಾಳಿ ನಡೆಸಿತು. ಹೋರಾಟದ ಹೆಸರಲ್ಲಿ ಶಸ್ತ್ರಾಸ್ತ್ರ ಗಳನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ನಕ್ಸಲ್ ನಾಯಕರು ಮಾಡುತ್ತಾ ಬಂದರು. 2009-2010ರ ನಡುವೆ ನಕ್ಸಲ್ ಚಟುವಟಿಕೆ ತೀವ್ರವಾಗಿ 2000ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಯಿತು. ನಗರ ಪ್ರದೇಶಗಳಲ್ಲಿ ಇದ್ದುಕೊಂಡು ಮಾವೋವಾದವನ್ನು ಬೆಂಬಲಿಸುತ್ತಿದ್ದ ಎಡಚರ ಪಟಾಲಂ, ನಕ್ಸಲರು ನಡೆಸುತ್ತಿದ್ದ ಕೃತ್ಯಗಳನ್ನು ಬೆಂಬಲಿಸುತ್ತಿತ್ತು.
2010ರಲ್ಲಿ ಛತ್ತೀಸ್‌ಗಢದ ದಾಂತೇವಾಡದಲ್ಲಿ ನಕ್ಸಲರು ನಡೆಸಿದ ಭೀಕರ ದಾಳಿಯಲ್ಲಿ 84 ಸೈನಿಕರು ಮೃತಪಟ್ಟರು. 2009 ಮತ್ತು 2010ರಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 998 ನಾಗರಿಕರು ಹಾಗೂ ಭದ್ರತಾ ಪಡೆಯ 586 ಸಿಬ್ಬಂದಿ ಅಸುನೀಗಿದರು. 2019ರಲ್ಲಿ ಅಮಿತ್ ಶಾ ಕೇಂದ್ರದಲ್ಲಿ ಗೃಹ ಸಚಿವರಾದ ನಂತರ, 2026ರ ಮಾರ್ಚ್ ಅಂತ್ಯದ ವೇಳೆಗೆ ಭಾರತ ವನ್ನು ‘ನಕ್ಸಲ್-ಮುಕ್ತ’ ದೇಶವನ್ನಾಗಿಸುವ ಪಣ ತೊಟ್ಟರು.
ಏಕೆಂದರೆ, ಆ ಕಾಲಘಟ್ಟದಲ್ಲಿ ನಕ್ಸಲ್ ಅಥವಾ ಎಡಪಂಥೀಯ ಉಗ್ರಗಾಮಿ ಸಂಘಟನೆಗಳ ಸಮಸ್ಯೆಯು ಕಾಶ್ಮೀರದ ಸಮಸ್ಯೆಗಿಂತ ದೊಡ್ಡದಾಗಿತ್ತು. ಅಂತೆಯೇ, ಪಡೆಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಮಾವೋವಾದಿಗಳ ಸಾವಿನ ಸಂಖ್ಯೆ ಹೆಚ್ಚಾಯಿತು. 2019ರಲ್ಲಿ 154; 2020ರಲ್ಲಿ 134; 2021ರಲ್ಲಿ 128; 2022ರಲ್ಲಿ 66; 2023ರಲ್ಲಿ 57 ಮತ್ತು 2024ರಲ್ಲಿ 255 ಮಾವೋವಾದಿಗಳನ್ನು ಹೊಡೆದುರುಳಿಸಲಾಯಿತು.
ಸ್ವಾತಂತ್ರ್ಯಾನಂತರದಲ್ಲಿ 1990ರ ದಶಕದವರೆಗೆ, ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ವ್ಯವಸ್ಥಿತ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಪ್ರಗತಿಯ ವಿಷಯದಲ್ಲಿ ಕೆಲವು ಪ್ರದೇಶಗಳು ಹಿಂದು ಳಿದಿದ್ದವು. ಇದನ್ನೇ ಮುಂದಿಟ್ಟುಕೊಂಡು ನಕ್ಸಲರು ಆ ಪ್ರದೇಶಗಳಲ್ಲಿ ಜನರನ್ನು ಹಿಂಸಾ ಚಾರಕ್ಕೆ ಪ್ರಚೋದಿಸಿದರು. ಹಿಂಸಾಚಾರವನ್ನು ದಮನಿಸಿ ಅಭಿವೃದ್ಧಿಯನ್ನು ಮುನ್ನೆಲೆಗೆ ತರಲು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನೇಪಾಳದ ಪಶುಪತಿನಾಥದಿಂದ ಆಂಧ್ರಪ್ರದೇಶದ ತಿರುಪತಿಯವರೆಗೆ ವಿಸ್ತರಿಸಿರುವ ‘ರೆಡ್ ಕಾರಿಡಾರ್’ನಲ್ಲಿ 4 ಹಂತದ ತಂತ್ರಗಾರಿಕೆಯನ್ನು ಕೇಂದ್ರ ಸರಕಾರ ರೂಪಿಸಿತು.
ನಕ್ಸಲರ ವಿರುದ್ಧದ ಕೇಂದ್ರ ಸರಕಾರ ಕ್ರಿಯಾಯೋಜನೆಯ ಮೊದಲ ಹಂತದಲ್ಲಿ, ‘ಬಂದೂಕುಗಳನ್ನು ಕೈಗೆತ್ತಿಕೊಂಡವರ ಮತ್ತು ಹಿಂಸಾಚಾರಕ್ಕೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವುದು’ ಸೇರಿತ್ತು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ ರಾಜ್ಯ ಪೊಲೀಸ್ ಮತ್ತು ಕೇಂದ್ರ ಸಶಸ ಪೊಲೀಸ್ ಪಡೆಗಳಿಗೆ ( CAPF) ತರಬೇತಿಯನ್ನೂ, ಆಕ್ರಮಣಕಾರಿ ರೈಫಲ್‌ಗಳನ್ನೂ, ಹೆಚ್ಚಿನ ವ್ಯಾಪ್ತಿ ಹೊಂದಿರುವ ಆಧುನಿಕ ಶಸ್ತ್ರಾಸ್ತ್ರಗಳನ್ನೂ ನೀಡಲಾಯಿತು. ಎರಡನೇ ಹಂತದಲ್ಲಿ, ಹೆಚ್ಚಿನ ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ ಭದ್ರತಾ ಉಪಸ್ಥಿತಿಯನ್ನು ಹೆಚ್ಚಿಸಲು, CAPF ಮತ್ತು ರಾಜ್ಯ ಪೊಲೀಸರ ಸಹಯೋಗದೊಂದಿಗೆ ನಕ್ಸಲರ ಪ್ರದೇಶವನ್ನು ತೆರವುಗೊಳಿಸಲು ವ್ಯವಸ್ಥಿತ ವಾಗಿ ಕೆಲಸ ಮಾಡುವ ‘ಫಾರ್ವರ್ಡ್ ಆಪರೇಟಿಂಗ್ ಬೇಸ್’ ( FOB) ಎಂಬ ಶಿಬಿರಗಳನ್ನು ಹೆಚ್ಚಾಗಿ ಸ್ಥಾಪಿಸಲಾಯಿತು.
ಕಳೆದ 5 ವರ್ಷಗಳಲ್ಲಿ 302 ಹೊಸ ಶಿಬಿರಗಳನ್ನು ಸ್ಥಾಪಿಸಲಾಗಿದೆ. ನಕ್ಸಲರ ಪ್ರದೇಶಗಳನ್ನು ತೆರವುಗೊಳಿಸುತ್ತಿದ್ದಂತೆ ಅವುಗಳನ್ನು ರಾಜ್ಯ ಪೊಲೀಸರಿಗೆ ಹಸ್ತಾಂತರಿಸಿ ಠಾಣೆಗಳನ್ನು ಸ್ಥಾಪಿಸಿ ಮುಂದಕ್ಕೆ ಸಾಗಲಾಗುತ್ತಿತ್ತು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 2014ರ ನಂತರ ಹೀಗೆ 612 ಠಾಣೆಗಳನ್ನು ನಿರ್ಮಾಣ ಮಾಡಲಾಗಿದೆ (ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸ್ಥಾಪಿತ ವಾಗಿದ್ದು ಕೇವಲ 66 ಠಾಣೆಗಳು). ಈ ಠಾಣೆಗಳಲ್ಲಿ, ಸ್ಥಳೀಯರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಧುನಿಕ ಸಂವಹನ ಸೌಲಭ್ಯ ಮತ್ತು ಸಾಕಷ್ಟು ಸಶಸ್ತ್ರ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ.
ನಕ್ಸಲರ ವಿರುದ್ಧ ಹೋರಾಡುವ ಪಡೆಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಡ್ರೋನ್‌ಗಳು, ಉಪಗ್ರಹ ಚಿತ್ರಣ ಮತ್ತು ಕೃತಕ ಬುದ್ಧಿ ಮತ್ತೆ (ಎಐ) ಸೇರಿದಂತೆ ವಿವಿಧ ತಂತ್ರಜ್ಞಾನವನ್ನು ಬಳಸಿಕೊಂಡು ಗುಪ್ತಚರ ಮಾಹಿತಿ ಸಂಗ್ರಹಣೆಯನ್ನು ಆಧುನೀಕರಿಸಲಾಗಿದೆ. ಇದರಿಂದಾಗಿ, ನಕ್ಸಲೀಯರ ಚಲನ ವಲನಗಳ ಜಾಡು ಹಿಡಿಯಲು ನಮ್ಮ ಭದ್ರತಾ ಪಡೆಗಳಿಗೆ ಸಾಧ್ಯವಾಗಿದೆ. ಈ ಹಿಂದೆಲ್ಲಾ, ನಕ್ಸಲರ ಹೊಂಚುದಾಳಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳ ಸಾವು-ನೋವು ಸಂಭವಿಸುತ್ತಿದ್ದವು; ಈಗ ನಕ್ಸಲರು ಎಲ್ಲಿ ಅಡಗಿದ್ದಾರೆ ಎಂಬುದನ್ನು ಡ್ರೋನ್‌ಗಳ ಸಹಾಯದಿಂದ ನೋಡಬಹುದಾಗಿದೆ.
ನಕ್ಸಲರ ಸ್ಥಳದ ಟ್ರ್ಯಾಕಿಂಗ್, ಮೊಬೈಲ್ ಫೋನ್ ಚಟುವಟಿಕೆಗಳು, ಕರೆಯ ದಾಖಲೆಗಳು ಮತ್ತು ಸಾಮಾಜಿಕ ಜಾಲತಾಣದ ಚಟುವಟಿಕೆಗಳ ವಿಶ್ಲೇಷಣೆಯ ಮೂಲಕ ಅವರ ಚಲನ ವಲನವನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಗಿದೆ. ಭದ್ರತಾ ಸಿಬ್ಬಂದಿಗೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ಕಾರ್ಯಾಚರಣೆಯನ್ನು ಮತ್ತು ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ಸುಗಮಗೊಳಿಸಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಗೃಹ ಇಲಾಖೆಯ ಅವಿರತ ಪ್ರಯತ್ನದಿಂದಾಗಿ ಕಳೆದ 10 ವರ್ಷಗಳಲ್ಲಿ 7500ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ಕಾಡಿನೊಳಗಿರುವ ಉಳಿದ ನಕ್ಸಲರ ಶರಣಾಗತಿಯ ನಿಟ್ಟಿನಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇದರ ಜತೆಗೆ ನಕ್ಸಲರ ಉನ್ನತ ಮಟ್ಟದ ನಾಯಕರನ್ನು ಮುಗಿಸುವ ಕೆಲಸವನ್ನು ಭದ್ರತಾ ಪಡೆಗಳು ಮಾಡುತ್ತಿವೆ.
ಕಳೆದ 5 ವರ್ಷಗಳಲ್ಲಿ ಇಂಥ 15 ನಾಯಕರ ಕಥೆಯನ್ನು ಮುಗಿಸಲಾಗಿದೆ. ಜತೆಗೆ ರಾಜ್ಯ ನಕ್ಸಲ್ ಸಂಘಟನೆಯ ಇಬ್ಬರು ಸದಸ್ಯರು, ವಲಯ ನಕ್ಸಲ್ ಸಂಘಟನೆಯ 31 ಸದಸ್ಯರು, ಪ್ರದೇಶ ನಕ್ಸಲ್ ಸಂಘಟನೆಯ 59 ಸದಸ್ಯರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ನಕ್ಸಲರಿಗೆ ಶರಣಾಗತಿಯನ್ನು ಮೊದಲ ಆದ್ಯತೆಯಾಗಿ ನೀಡಲಾಗುತ್ತದೆ; ಆದರೂ ಶರಣಾಗದೆ ಜನಸಾಮಾನ್ಯರಿಗೆ ತೊಂದರೆ ಕೊಡುವುದನ್ನು ಮುಂದುವರಿಸಿದಾಗ, ಜನರನ್ನು ರಕ್ಷಿಸಲೆಂದು ಭದ್ರತಾ ಪಡೆಗಳು ನಕ್ಸಲರನ್ನು ಹೊಡೆದುರುಳಿಸಿವೆ.
ಮೂರನೆಯ ಹಂತವು, ನಕ್ಸಲರಿಗೆ ಬರುವ ಹಣ ಮತ್ತು ಶಸಾಸ ಪೂರೈಕೆಯನ್ನು ಸಂಪೂ ರ್ಣವಾಗಿ ನಿಲ್ಲಿಸುವುದನ್ನು ಒಳಗೊಂಡಿದೆ. ಸುಲಿಗೆಯ ರೀತಿಯಲ್ಲಿ ರಸ್ತೆ ಕಾಮಗಾರಿಯ ಗುತ್ತಿಗೆದಾರರಿಂದ ಅಕ್ರಮವಾಗಿ ಹಣವನ್ನು ವಸೂಲಿ ಮಾಡುವುದು ನಕ್ಸಲರ ಹಣಕಾಸಿನ ಪ್ರಮುಖ ಮೂಲವಾಗಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ನಕ್ಸಲರ ಹಣದ ಮೂಲವನ್ನು ತಡೆಯಲು, ಗುತ್ತಿಗೆದಾರರು ಮಾಡಿದ ಕೆಲಸಗಳಿಗೆ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಯಿತು. ನಂತರ ನಕ್ಸಲರಿಂದ ಹಣ ಸುಲಿಗೆಗೆ ಒಳಗಾಗುವುದನ್ನು ತಡೆಯಲು ಗುತ್ತಿಗೆದಾರರಿಗೆ ಭದ್ರತಾ ಪಡೆಗಳ ರಕ್ಷಣೆಯನ್ನು ನೀಡಲಾ ಯಿತು.
ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಪ್ರತ್ಯೇಕ ವಿಭಾಗವನ್ನು ರಚಿಸಿ, 40 ಕೋಟಿ ರುಪಾಯಿಗಳಿಗಿಂತ ಹೆಚ್ಚು ಮೌಲ್ಯದ ನಕ್ಸಲರ ಆಸ್ತಿಗಳನ್ನು ಇದುವರೆಗೂ ವಶಪಡಿಸಿಕೊ ಳ್ಳಲಾಗಿದೆ. ಅವರ ಹಣ ವರ್ಗಾವಣೆ ಚಟುವಟಿಕೆಗಳನ್ನು ಜಾರಿ ನಿರ್ದೇಶನಾಲಯವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತದೆ ಮತ್ತು ಅದು ಇದುವರೆಗೂ 12 ಕೋಟಿ ರು. ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದೆ.
ವಿದೇಶಿ ನೆರವನ್ನು ನಿಯಂತ್ರಿಸಲು, ಶಂಕಿತ ಎನ್‌ಜಿಒಗಳ ಖಾತೆಗಳನ್ನು ಸ್ಥಗಿತಗೊಳಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಕ್ರಿಯಾಯೋಜನೆಯ 4ನೇ ಹಂತದಲ್ಲಿ, ಒಂದು ಪ್ರದೇಶವನ್ನು ನಕ್ಸಲರಿಂದ ಮುಕ್ತಗೊಳಿಸಿದ ನಂತರ ಅಲ್ಲಿ ಅಭಿವೃದ್ಧಿ ಯೋಜನೆ ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯೋಜನೆಗಳ ಪ್ರಯೋಜನವನ್ನು ಪಡೆಯಲು ಪ್ರಾರಂ ಭಿಸಿದ ನಂತರ, ಜನರು ಹಳ್ಳಿಗಳಲ್ಲಿ ನಕ್ಸಲರ ಪರವಾಗಿ ನಿಲ್ಲುವುದಿಲ್ಲ.
ಕೇಂದ್ರ ಸರಕಾರವು ಕಳೆದ 10 ವರ್ಷಗಳಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 11503 ಕಿ.ಮೀ.ನಷ್ಟು ರಸ್ತೆಗಳನ್ನು ನಿರ್ಮಿಸಿದೆ ಹಾಗೂ ಮುಂಬರುವ ವರ್ಷಗಳಲ್ಲಿ ಹೆಚ್ಚುವರಿ ಯಾಗಿ 17589 ಕಿ.ಮೀ.ನಷ್ಟು ರಸ್ತೆಗಳನ್ನು ನಿರ್ಮಿಸಲು 20815 ಕೋಟಿ ರುಪಾಯಿಗಳನ್ನು ಮೀಸಲಿಟ್ಟಿದೆ.
ಸಂವಹನ ಸೌಲಭ್ಯಕ್ಕಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಟವರ್‌ಗಳ ಸ್ಥಾಪನೆ ಪ್ರಾರಂಭವಾಗಿದ್ದು, ಮೊದಲ ಸುತ್ತಿನಲ್ಲಿ 4080 ಕೋಟಿ ರು. ವೆಚ್ಚದಲ್ಲಿ 2343 ಟವರ್‌ಗಳು ಸ್ಥಾಪನೆಯಾಗಿವೆ. ಸರಕಾರಿ ಯೋಜನೆಗಳ ಮೂಲಕ, 4-ಜಿ ವೈಶಿಷ್ಟ್ಯಕ್ಕೆ ಹೊಂದಾಣಿಕೆ ಯಾಗುವ 8527 ಟವರ್‌ಗಳನ್ನು ನಿರ್ಮಿಸಲು ಯೋಜನೆ ಸಿದ್ಧವಾಗಿದೆ.
ಹೆಚ್ಚು ಪರಿಣಾಮ ಬೀರುವ 90 ಜಿಲ್ಲೆಗಳಲ್ಲಿ 1007 ಬ್ಯಾಂಕ್ ಶಾಖೆಗಳು ಮತ್ತು 5731 ಅಂಚೆ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಅನಿಲ ಸಂಪರ್ಕ, ಶೌಚಾಲಯಗಳು, ಮನೆಗಳು ಮತ್ತು ಆಹಾರ ಧಾನ್ಯಗಳು ಸೇರಿದಂತೆ 300 ಯೋಜನೆಗಳಲ್ಲಿ 112ನ್ನು ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಮಾರ್ಪಡಿಸಿ ಜನರಿಗೆ ತಲುಪಿಸಲಾಗಿದೆ. ನಕ್ಸಲ್ ಪೀಡಿತ 48 ಜಿಲ್ಲೆಗಳಲ್ಲಿ ಯುವಕರಿಗೆ ತರಬೇತಿ ನೀಡುವ ಸಲುವಾಗಿ, 495 ಕೋಟಿ ರು. ವೆಚ್ಚದಲ್ಲಿ 48 ಐಟಿಐ ಕೇಂದ್ರ ಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಹಾಗೂ 61 ಕೌಶಲಾಭಿವೃದ್ಧಿ ಕೇಂದ್ರಗಳನ್ನು ತೆರೆಯಲಾಗಿದೆ.
ಕೇಂದ್ರ ಸರಕಾರದ ಈ ನಾಲ್ಕು ಆಯಾಮದ ಕ್ರಿಯಾಯೋಜನೆಯ ಪರಿಣಾಮವಾಗಿ, 2014ರಲ್ಲಿ 10 ರಾಜ್ಯಗಳಲ್ಲಿ 126ರಷ್ಟಿದ್ದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆಯು 2025ರಲ್ಲಿ 12ಕ್ಕೆ ಇಳಿದಿದೆ. 2014ರಿಂದ ಈಚೆಗೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ಜನಸಾಮಾನ್ಯರ ಸಾವಿನ ಸಂಖ್ಯೆಯಲ್ಲಿ ಶೇ.70ರಷ್ಟು ಕಡಿಮೆಯಾಗಿದೆ. 2014ರಲ್ಲಿ, ಛತ್ತೀಸ್‌ಗಢ ರಾಜ್ಯದಲ್ಲಿ 18500 ಚದರ ಕಿ.ಮೀ.ನಷ್ಟಿದ್ದ ನಕ್ಸಲ್ ಪೀಡಿತ ಪ್ರದೇಶವಿಂದು 8500 ಚದರ ಕಿ.ಮೀ.ಗೆ ಇಳಿದಿದೆ; ಅತಿಹೆಚ್ಚು ನಕ್ಸಲ್ ಪೀಡಿತವಾಗಿದ್ದ ರಾಜ್ಯದ ಬಕ್ಸರ್ ಜಿಲ್ಲೆಯಲ್ಲಿ ‘ಬಕ್ಸರ್ ಒಲಿಂಪಿಕ್ಸ್’ ಆಯೋಜನೆಗೊಳಿಸಿ ಅಲ್ಲಿನ ಜನರ ವಿಶ್ವಾಸ ಗಳಿಸುವ ಮೂಲಕ, 2026ರ ಮಾರ್ಚ್ ಅಂತ್ಯಕ್ಕೆ ಭಾರತವನ್ನು ನಕ್ಸಲರಿಂದ ಮುಕ್ತಗೊಳಿಸುವ ಸ್ಪಷ್ಟ ಸಂದೇಶವನ್ನು ನೀಡಲಾಗಿದೆ.