ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಅವಭೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು

ರನ್ನನಂತೂ ಗದಾಯುದ್ಧದಲ್ಲಿ ಅವಭೃತವನ್ನು ಬೇರೆಯೇ ಆಯಾಮಕ್ಕೇರಿಸಿದ್ದಾನೆ. “ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು" ಎಂದು ಭೀಮ ಸೇನನ ಬಾಯಿಯಿಂದ ಹೇಳಿಸಿದ್ದಾನೆ. “ಈ ದುರ್ಯೋಧನನನ್ನು ನನ್ನ ಕೋಪವೆಂಬ ಬೆಂಕಿಗೆ ಆಹುತಿ ಕೊಡುತ್ತಿದ್ದೇನೆ. ಈತನ ಹಸಿಯಾದ ಮಾಂಸವನ್ನು ಕುರುಕ್ಷೇತ್ರ ಯುದ್ಧವೆಂಬ ಯಾಗದ ಬೆಂಕಿಯಲ್ಲಿ ಬಲಿ ಕೊಟ್ಟರೇನೇ ನನ್ನ ಕೋಪಾಗ್ನಿಯು ತಣಿಯುವುದು.

ತಿಳಿರುತೋರಣ

ಅವಬೃತವೆಂದರೆ ದೇವರ ವಾರ್ಷಿಕ ಗ್ರಾಮಭೇಟಿಯೂ ಹೌದು ಒಂದು ಕಾಲಕೆ ಸತ್ತು ಹೋದ ಭಾಷೆಗೆ ಮರುಜೀವ ನೀಡಿದ ಇಸ್ರೇಲಿಗರು! ಕರಾವಳಿಯಲ್ಲಿ ಬೇರೆ ಹಲವು ದೇವಸ್ಥಾನಗಳಲ್ಲಿರುವಂತೆಯೇ ನಮ್ಮೂರಿನ ದೇವಸ್ಥಾನದಲ್ಲೂ ಲಕ್ಷದೀಪೋತ್ಸ ವದ ಮಾರನೆದಿನ ಅವಭೃತ. ಅದು ಕಾರ್ತಿಕ ಮಾಸ ಕೃಷ್ಣ ಪಕ್ಷದ ಪಾಡ್ಯದ ದಿನ. ಹೋಳಿಹಬ್ಬದ ಬಣ್ಣಗಳ ಆಚರಣೆ ಅಷ್ಟೇನೂ ಗೊತ್ತಿಲ್ಲದ ನಮಗೆ ಅವಭೃತವೇ ಹೋಳಿಹಬ್ಬ, ಓಕುಳಿಯಾಟ. ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿ ರುವ ‘ದೇವರಗುಂಡಿ’ ಎಂಬ ಜಾಗಕ್ಕೆ ಪಲ್ಲಕಿಯಲ್ಲಿ ಉತ್ಸವ ಸಾಗುತ್ತದೆ.

ಅವಭೃತ (ಅಥವಾ ಅವಭೃಥ) ಎಂದರೆ ಯಾವುದೇ ಯಜ್ಞವಾಗಲೀ ಮಂಗಳ ಕಾರ್ಯ ವಾಗಲೀ ಸಮಾಪ್ತಗೊಳ್ಳುವ ಹಂತದಲ್ಲಿ ನಡೆಯುವ ಒಂದು ವಿಧಿವಿಧಾನ. ಯಜ್ಞ ಮಾಡಿ ದವರಿಗೆ, ಪಾಲ್ಗೊಂಡವರಿಗೆ, ಯಜ್ಞಕ್ಕಾಗಿ ಬೇರೆಬೇರೆ ರೀತಿಯಿಂದ ಸಹಕಾರ ನೀಡಿದವರಿಗೆ... ಹೀಗೆ ಎಲ್ಲರಿಗೂ ಧನ್ಯತೆ ಮತ್ತು ಕೃತಕೃತ್ಯತೆಯ ಭಾವ ತರುವ ಕ್ಷಣ.

ಮಹಾಭಾರತದಲ್ಲಿ ಯುಧಿಷ್ಠಿರನು ಮಾಡಿದ ರಾಜಸೂಯ ಯಾಗದ ಸಮಾಪ್ತಿ ಹೇಗಿತ್ತು ಎಂದು ಕುಮಾರವ್ಯಾಸ ಮಾಡಿರುವ ಬಣ್ಣನೆ ನೋಡಿ: “ಶ್ರುತಿ ವಿಧಾನದ ವಿಮಳ ಪೂರ್ಣಾ| ಹುತಿಯ ಪಾರಾಯಣದ ನಿಗಮ| ಪ್ರತತಿಗಳ ಪರಿಪೂತ ಪರಿಮಳಮಯ ದಿಶಾವಳಿಯ| ಕ್ರತು ಸಮಾಪ್ತಿಯಲವಭೃತದ ಭೂ| ಪತಿಯ ವಿಮಳಸ್ನಾನ ಪುಣ್ಯೋ| ಚಿತದಲೋಕುಳಿ ಯಾಡಿ ದಣಿದುದು ಲೋಕ ಸುರನರರ||"

ಈ ಷಟ್ಪದಿಯ ಭಾವಾರ್ಥ: “ವೇದೋಕ್ತಿಗಳ ವಿಧಾನದಂತೆ ಪೂರ್ಣಾಹುತಿಯನ್ನು ಕೊಟ್ಟರು. ವೇದ ಮಂತ್ರಗಳು ಹವಿಸ್ಸಿನ ಸುವಾಸನೆಗಳಿಂದ ದಶದಿಕ್ಕುಗಳು ಸುಗಂಧದಿಂದ ತುಂಬಿದವು. ಯಜ್ಞಸಮಾಪ್ತಿಯ ಬಳಿಕ ಅವಭೃತಸ್ನಾನ ಆಯಿತು. ಓಕುಳಿಯಾಟದಿಂದ ಭೂಲೋಕ ದೇವಲೋಕಗಳು ತಣಿದವು..." ಎಂದು.

ಇದನ್ನೂ ಓದಿ: Srivathsa Joshi Column: ಕನ್ನಡ ವಾಙ್ಮಯಕ್ಕೆ ಸೇರಲಿರುವ ಅರ್ಥಪೂರ್ಣ ಪುಸ್ತಕವಿದು !

ಅದೇ ರಾಜಸೂಯ ಯಾಗದಲ್ಲಿ ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸುವ ಯುಧಿಷ್ಠಿರನ ನಿರ್ಧಾರದಿಂದ ರೋಷಭರಿತನಾದ ಶಿಶುಪಾಲನು ಅಲ್ಲಿಯೇ ಭೀಷ್ಮಾಚಾರ್ಯರನ್ನು ನಿಂದಿಸಿದ್ದು, ಅದರಿಂದ ಕುಪಿತನಾದ ಭೀಮನು ಶಿಶುಪಾಲನನ್ನು ಕೊಲ್ಲಲಿಕ್ಕೆ ಮುಂದಾ ದದ್ದು, ಶಿಶುಪಾಲನು ಕೃಷ್ಣನನ್ನೂ ಮೂದಲಿಸಿದ್ದು, ಅಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದದ್ದು... ಅಷ್ಟೆಲ್ಲ ಆದಮೇಲೂ ಯುಧಿಷ್ಠಿರನು “ಅಗ್ರಪೂಜೆಯಂ ನಾರಾಯಣಂಗೆ ಕೊಟ್ಟವಭೃಥಸ್ನಾನದೊಳ್ ಪಿರಿದುಮೊಸಗೆಯಂ ಮಾಡಿದನು" ಎಂಬ ವಿವರಗಳೊಂದಿಗೆ ಪಂಪಭಾರತದಲ್ಲಿ ಆದಿಕವಿ ಪಂಪನೂ ಯಾಗ ಸಮಾಪ್ತಿಯಲ್ಲಿ ಅವಭೃತದ ಚಿತ್ರಣವನ್ನು ಸೊಗಸಾಗಿ ಕೊಟ್ಟಿದ್ದಾನೆ.

ರನ್ನನಂತೂ ಗದಾಯುದ್ಧದಲ್ಲಿ ಅವಭೃತವನ್ನು ಬೇರೆಯೇ ಆಯಾಮಕ್ಕೇರಿಸಿದ್ದಾನೆ. “ದುರ್ವಹ ದುರ್ಯೋಧನ ದೇಹ ಪ್ರಹರಣ ಲೋಹಿತದಿನ್ ಅವಭೃಥ ಸವನಮ್ ಆದುದು" ಎಂದು ಭೀಮಸೇನನ ಬಾಯಿಯಿಂದ ಹೇಳಿಸಿದ್ದಾನೆ. “ಈ ದುರ್ಯೋಧನನನ್ನು ನನ್ನ ಕೋಪವೆಂಬ ಬೆಂಕಿಗೆ ಆಹುತಿ ಕೊಡುತ್ತಿದ್ದೇನೆ. ಈತನ ಹಸಿಯಾದ ಮಾಂಸವನ್ನು ಕುರುಕ್ಷೇತ್ರ ಯುದ್ಧವೆಂಬ ಯಾಗದ ಬೆಂಕಿಯಲ್ಲಿ ಬಲಿಕೊಟ್ಟರೇನೇ ನನ್ನ ಕೋಪಾಗ್ನಿಯು ತಣಿಯುವುದು.

Screenshot_9 R

ಯಾರಿಂದಲೂ ಸೋಲನ್ನಪ್ಪದ ವೀರನಾಗಿದ್ದ ದುರ್ಯೋಧನನ ದೇಹಕ್ಕೆ ಹೊಡೆದ ಗದೆಯ ಪೆಟ್ಟಿನಿಂದ ಚಿಮ್ಮಿದ ನೆತ್ತರಿನಿಂದ ನನ್ನ ದೇಹಕ್ಕೆ ಯಾಗದ ಕೊನೆಯಲ್ಲಿ ಮಾಡ ಬೇಕಾಗಿದ್ದ ಅವಭೃತ ಸ್ನಾನ ಆದಂತಾಯಿತು" ಎಂದು ಭೀಮಸೇನ ನುಡಿಯುತ್ತಾನೆ. ಯುದ್ಧದಲ್ಲಿ ತೊಡೆಗಳನ್ನು ಮುರಿಸಿಕೊಂಡು ಹೆಳವನಾಗಿ ನೆಲದ ಮೇಲೆ ಉರುಳಿಬಿದ್ದಿದ್ದ, ಅದರಿಂದಾಗಿ ಸೂರ್ಯಸಾರಥಿ ಅರುಣನಂತೆ ಕಾಣುತ್ತಿದ್ದ, ದುರ್ಯೋಧನನನ್ನು ದ್ರೌಪದಿಗೆ ತೋರಿಸಿ ಭೀಮನು “ಹಗೆತನ ಕೊನೆಗೊಂಡಿತು ಈಗ ಮುಡಿಯನ್ನು ಕಟ್ಟಿಕೋ" ಎನ್ನುತ್ತಾನೆ.

“ಹಲವು ವರ್ಷಗಳ ಅರಣ್ಯವಾಸ ಮತ್ತು ಅಜ್ಞಾತವಾಸದ ಸಮಯದಲ್ಲಿ ಮುಡಿಯನ್ನು ಕಟ್ಟಿಕೊಳ್ಳದೆ ಇದ್ದುದರಿಂದ, ಹೇಗೆ ಕಟ್ಟಿಕೊಳ್ಳಬೇಕೆಂಬುದನ್ನೇ ಮರೆತಿದ್ದೇನೆ; ಹಗೆಯನ್ನು ಕೊಂದ ನೀನೇ ನನಗೆ ಮುಡಿಯನ್ನು ಕಟ್ಟಬೇಕು" ಎಂದ ದ್ರೌಪದಿಯು ಭೀಮನ ಕೈಯನ್ನು ಹಿಡಿದು ತನ್ನ ತುರುಬಿನತ್ತ ಎಳೆದುಕೊಳ್ಳುತ್ತಾಳೆ.

ದ್ರೌಪದಿಯ ಹರಡಿಕೊಂಡಿದ್ದ ತಲೆಗೂದಲನ್ನು ಒಟ್ಟುಗೂಡಿಸಿ ಹೆಣೆದು ಮುಡಿಯನ್ನು ಕಟ್ಟಿಬಿಗಿಯುತ್ತಾನೆ ಭೀಮಸೇನ. ಕಟ್ಟಿದ ಮುಡಿಯೊಡನೆ ಹೂಮಾಲೆಯಿಂದ ಅಲಂಕಾರ ಗೊಂಡ ದ್ರೌಪದಿಯ ಆ ಸಿಂಗಾರ, ಆ ಭಾವ, ಆ ರೂಪ, ಆ ಬೆಡಗು, ಆ ಸೌಂದರ‍್ಯ, ಆ ಬಿಂಕ, ಆ ಚಂಚಲವಾದ ಕಣ್ಣಂಚಿನ ನೋಟದ ಸೊಬಗು, ಆ ಸೊಗಸು, ಆ ಲಾವಣ್ಯ, ಆ ಪುಣ್ಯ, ಆ ನಸುನಗೆಯ ಮನೋಹರತೆಯು ಭೀಮಸೇನನನ್ನು ಯಾವ ಯಾವ ರೀತಿಗಳಲ್ಲಿ ಮನಸೆಳೆ ಯಿತೋ ಎಂಬುದು ಕಲ್ಪನಾತೀತವಾದುದು.

ರನ್ನನು ಚಿತ್ರಿಸಿದ ಈ ಅವಭೃತವು ಏಕಕಾಲಕ್ಕೆ ರೋಮಾಂಚಕಾರಿ ಮತ್ತು ಶೃಂಗಾರಮಯ ಕೂಡ. ಅವಭೃತದ ಇನ್ನೊಂದು ಮಾದರಿಯೆಂದರೆ ದೇವಸ್ಥಾನಗಳ ದೀಪೋತ್ಸವ-ರಥೋ ತ್ಸವಗಳ ಸಮಾಪ್ತಿ. ಬೇರೆ ಕಡೆಯಲ್ಲೂ ಇರಬಹುದು ಆದರೆ ನನಗೆ ಗೊತ್ತಿರುವಂತೆ ಕರ್ನಾಟಕದ ಕರಾವಳಿಯಲ್ಲಿರುವ ಬಹುತೇಕ ದೇವಸ್ಥಾನಗಳಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ಅವಭೃತ ಆಚರಣೆ ಇದ್ದೇಇರುತ್ತದೆ.

ನಾಲ್ಕೈದು ದಿನಗಳ ಕಾಲ ನಡೆಯುವ ವಾರ್ಷಿಕ ಜಾತ್ರೆ ಮಹೋತ್ಸವದಲ್ಲಿ ಕೊನೆಯ ದಿನ ಉತ್ಸವಮೂರ್ತಿಯನ್ನು ಪಲ್ಲಕಿಯಲ್ಲಿರಿಸಿ ಹತ್ತಿರದ ನದಿ ಅಥವಾ ಇನ್ನಿತರ ಜಲಾವಾಸದ ಬಳಿಗೊಯ್ದು ಅಲ್ಲಿ ಭಕ್ತಾದಿಗಳ ಪುಣ್ಯಸ್ನಾನ, ದೇವರ ಮೂರ್ತಿಯ ಮೇಲಿಂದ ಅಭಿಷೇಕ ಮಾಡಿದ ನೀರಿಗೆ ತಲೆಯೊಡ್ಡುವ ಅವಕಾಶ, ಹೋಳಿ ಹಬ್ಬದಲ್ಲಿ ಮಾಡಿದಂತೆ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಓಕುಳಿಯಾಟ, ನದಿಯಿಂದ ದೇವಸ್ಥಾನಕ್ಕೆ ಹಿಂದಿರುಗುವಾಗ ಅಲ್ಲಲ್ಲಿ ಕಟ್ಟೆಪೂಜೆಗಳು, ಪಲ್ಲಕ್ಕಿ ಉತ್ಸವವು ದೇವಸ್ಥಾನದ ಪ್ರಾಂಗಣವನ್ನು ತಲುಪಿದ ಮೇಲೂ ಆ ದಿನವಷ್ಟೇ ವಿಶೇಷವಾಗಿ ನಡೆಯುವ ಕೆಲವು ವಿಧಿವಿಧಾನಗಳು... ವಭೃತವನ್ನು ಅನನ್ಯವಾಗಿಸುತ್ತವೆ, ಆಕರ್ಷಕಗೊಳಿಸುತ್ತವೆ, ಮತ್ತು ಪ್ರತಿವರ್ಷದ ಅವಭೃತವನ್ನು ವರ್ಷ ವಿಡೀ ಎದುರುನೋಡುವಂತೆ ಮಾಡುತ್ತವೆ.

ಈ ಸಂಪ್ರದಾಯಗಳ ಹಿಂದೆ ಎಂಥ ಉನ್ನತ ಆಶಯಗಳಿರುತ್ತವೆ ಎಂದು ಗಮನಿಸಿದರೆ ನಮ್ಮ ಹಿರಿಯರ ಬಗ್ಗೆ ಅಭಿಮಾನವೆನಿಸುತ್ತದೆ. ಏಕೆಂದರೆ, ದೇವಸ್ಥಾನದ ಗರ್ಭಗುಡಿ ಯಲ್ಲಿರುವ ದೇವರ ಮೂರ್ತಿಯನ್ನು ಬೇರೆ ಪರ್ವದಿನಗಳಲ್ಲಿ ಕಿರು ಉತ್ಸವಗಳಲ್ಲಿ ಹೆಚ್ಚೆಂದರೆ ಒಳ ಮತ್ತು ಹೊರ ಪ್ರಾಂಗಣಕ್ಕೆ, ದೇವಸ್ಥಾನದ ಪ್ರಾಕಾರದೊಳಗೇ ಇರುವ ಲಲಿತಮಂಟಪದಂಥ ಜಾಗಕ್ಕಷ್ಟೇ ತರಲಾಗುತ್ತದೆ.

ಆದರೆ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವರು ಊರಿನ ಎಲ್ಲೆಡೆ ರಥದಲ್ಲಿಯೋ ಪಲ್ಲಕ್ಕಿಯಲ್ಲೋ ಸಂಚರಿಸುವುದು, ಮನೆಮನೆಗೆ ತೆರಳಿ ಭಕ್ತರನ್ನು ಭೇಟಿಯಾದನು ಎಂಬ ಭಾವನೆ ತರುವ ಕಟ್ಟೆಪೂಜೆಗಳಲ್ಲಿ ಭಾಗವಹಿಸುವುದು, ಅವಭೃತದ ವಿಶೇಷಗಳು... ಇವೆಲ್ಲವೂ ಅಂತರಂಗದಿಂದ ಬಹಿರಂಗಕ್ಕೆ, ಸೂಕ್ಷ್ಮದಿಂದ ಸ್ಥೂಲಕ್ಕೆ, ಸಂಕುಚಿತತೆಯಿಂದ ವೈಶಾಲ್ಯಕ್ಕೆ ತೆರೆದುಕೊಳ್ಳುವ ದೇವಾಲಯ ಪರಿಕಲ್ಪನೆಯನ್ನು ದೃಢಗೊಳಿಸುತ್ತವೆ.

ಇಂಥದೊಂದು ಸಮಾಜಮುಖಿ ಚಿಂತನೆ ಇರುವುದರಿಂದಲೇ ದೇವಸ್ಥಾನದ ಉತ್ಸವವು ಭಕ್ತಸಂದಣಿಯ ಮತ್ತು ಸಮಾಜದಲ್ಲಿನ ಎಲ್ಲರ ಉತ್ಸಾಹಕ್ಕೆ ಕಾರಣವಾಗುತ್ತದೆ. ಅವಭೃತದ ಬಗೆಗೆ ಇಷ್ಟೆಲ್ಲ ಯೋಚನಾಲಹರಿ ಹರಿಯುವಂತಾದದ್ದು ಮೊನ್ನೆ ನಮ್ಮ ಕೌಟುಂಬಿಕ ವಾಟ್ಸ್ಯಾಪ್ ಗ್ರೂಪಲ್ಲಿ ನಮ್ಮೂರಿನ (ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳ ಗ್ರಾಮ) ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದ ಈ ವರ್ಷದ ಲಕ್ಷದೀಪೋತ್ಸವ ಮತ್ತು ಅವಭೃತದ ಕೆಲವು ದೃಶ್ಯ ತುಣುಕುಗಳನ್ನು ನೋಡಿದಾಗ. ಅದಕ್ಕೆ ಸಂಬಂಧಿಸಿದಂತೆ ಕೆಲವು ಸ್ವಾರಸ್ಯಕರ ವಿನೋದ ಅಂಶಗಳನ್ನೂ, ಹೃದಯಸ್ಪರ್ಶಿ ಎನಿಸಬಹುದಾದ ಚಿಂತನೆ ಗಳನ್ನೂ ಇಂದಿನ ಅಂಕಣದಲ್ಲಿ ನಿಮ್ಮೊಡನೆ ಹಂಚಿಕೊಳ್ಳಬೇಕೆಂದಿದ್ದೇನೆ.

ಕರಾವಳಿಯಲ್ಲಿ ಬೇರೆ ಹಲವು ದೇವಸ್ಥಾನಗಳಲ್ಲಿರುವಂತೆಯೇ ನಮ್ಮೂರಿನ ದೇವಸ್ಥಾನ ದಲ್ಲೂ ಲಕ್ಷದೀಪೋತ್ಸವದ ಮಾರನೆದಿನ ಅವಭೃತ. ಅದು ಕಾರ್ತಿಕ ಮಾಸ ಕೃಷ್ಣ ಪಕ್ಷದ ಪಾಡ್ಯದ ದಿನ. ಹೋಳಿಹಬ್ಬದ ಬಣ್ಣಗಳ ಆಚರಣೆ ಅಷ್ಟೇನೂ ಗೊತ್ತಿಲ್ಲದ ನಮಗೆ ಅವಭೃತವೇ ಹೋಳಿಹಬ್ಬ, ಓಕುಳಿಯಾಟ.

ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ‘ದೇವರಗುಂಡಿ’ ಎಂಬ ಜಾಗಕ್ಕೆ ಪಲ್ಲಕಿಯಲ್ಲಿ ಉತ್ಸವ ಸಾಗುತ್ತದೆ. ಆಗಷ್ಟೇ ಮಳೆಗಾಲ ಮುಗಿದಿರುವುದರಿಂದ ಆ ಕಿರುತೊರೆಯಲ್ಲಿ ಇನ್ನೂ ಸಾಕಷ್ಟು ನೀರಿನ ಹರಿವು ಇರುತ್ತದೆ. ದೇವರ ಸಾಂಗತ್ಯದಲ್ಲೇ ಹಿತಮಿತ ಜಲಕ್ರೀಡೆಗೆ ಅನುಕೂಲಕರವಾಗಿರುತ್ತದೆ.

ಹಿಂದಿರುಗುತ್ತ ಕಟ್ಟೆಪೂಜೆಗಳು. ಒಂದು ಕಟ್ಟೆಪೂಜೆ ನಾವೆಲ್ಲ ಚಿಕ್ಕಂದಿನಲ್ಲಿ ಓದಿದ್ದ ಮತ್ತು ದೇವಸ್ಥಾನಕ್ಕೆ ಕೂಗಳತೆಯ ದೂರದಲ್ಲೇ ಇರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಶ್ವತ್ಥವೃಕ್ಷದ ಬುಡದಲ್ಲಿ. ಆ ಶಾಲೆ ಈಗ ಶಾಶ್ವತವಾಗಿ ಮುಚ್ಚಿ ಕಟ್ಟಡವು ಪಾಳುಬಿದ್ದಿದೆಯಾದರೂ ಕಟ್ಟೆಪೂಜೆ ಸಾಂಗವಾಗಿ ನೆರವೇರುತ್ತದೆ.

ವಾರ್ಷಿಕ ಗ್ರಾಮಭೇಟಿಗೆ ಹೊರಟ ದೇವರು ಗ್ರಾಮದ ಶಾಲೆಯ ಆವರಣವನ್ನೂ ಪಾವನ ಗೊಳಿಸಬೇಕು ಎಂದು ಆ ಕಾಲದಲ್ಲಿ ಯೋಜಿಸಿದ್ದ ನಮ್ಮ ಹಿರಿಯರನ್ನು, ಈಗಲೂ ಮುಂದುವರಿಸಿಕೊಂಡು ಬಂದಿರುವ ಗ್ರಾಮಸ್ಥರನ್ನು, ಇದಕ್ಕಾಗಿ ಮೆಚ್ಚಲೇಬೇಕು.

ಇನ್ನೊಂದು, ದೇವರು ನಿಜವಾಗಿಯೂ ಊರು ಸುತ್ತಲಿಕ್ಕೆ ಹೋಗುತ್ತಾನೆಂಬ ಕಲ್ಪನೆಯನ್ನು ಸಾಂಕೇತಿಕವಾಗಿ ಬಿಂಬಿಸಲಿಕ್ಕೋ ಎಂಬಂತಿರುವ ವಿನೋದ ಆಚರಣೆ. ಅದೇನೆಂದರೆ, ಕಟ್ಟೆಪೂಜೆಗಳನ್ನು ಮುಗಿಸಿದ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಹೊರ ಪ್ರಾಂಗಣವನ್ನು ತಲುಪಿದಾಗ ದೇವಸ್ಥಾನದ ಹೆಬ್ಬಾಗಿಲನ್ನು ಒಮ್ಮೆ ಮುಚ್ಚಲಾಗುತ್ತದೆ.

ಒಳಗಿಂದ ಒಬ್ಬರು ಮತ್ತು ಹೊರಗಿನಿಂದ ಒಬ್ಬರು ಬಾಗಿಲಿನ ಬಳಿ ನಿಂತು ಸಂಸ್ಕೃತ ಶ್ಲೋಕವೊಂದರ ಭಾಗಗಳನ್ನು ಸಂವಾದದ ರೀತಿಯಲ್ಲಿ ಹೇಳುತ್ತಾರೆ. ಅದು, ಊರು ಸುತ್ತಲಿಕ್ಕೆ ಹೋಗಿದ್ದ ಕೃಷ್ಣನು ಮನೆಗೆ ಹಿಂದಿರುಗಿ ಬಾಗಿಲು ಬಡಿದಾಗ ಒಳಗಿದ್ದ ಸತ್ಯಭಾಮೆ ಬೇಕಂತಲೇ ಬಾಗಿಲು ತೆರೆಯದೆ ಕೃಷ್ಣನನ್ನು ಸತಾಯಿಸಿದಳು ಎನ್ನುವ ಪ್ರಹಸನ.

ಅಲ್ಲಿ ನೆರೆದವರೆಲ್ಲರೂ ನಿಶ್ಶಬ್ದದಿಂದಿದ್ದು, ಸಂಸ್ಕೃತ ಅರ್ಥ ಆಗದಿದ್ದರೂ ಆಸಕ್ತಿಯಿಂದ ಕೇಳುವ ಆ ಸಂಭಾಷಣೆ ಹೀಗೆ ಸಾಗುತ್ತದೆ: ಸ: “ಅಂಗುಲ್ಯಾ ಕಃ ಕವಾಟಂ ಪ್ರಹರತಿ?" (ಕೈಬೆರಳಿನಿಂದ ಬಾಗಿಲನ್ನು ತಟ್ಟುತ್ತಿರುವವರು ಯಾರು?) ಕೃ: “ಕುಟಿಲೇ ಅಹಂ ಮಾಧವಃ" (ಕುಟಿಲೆಯೇ, ನಾನು ಮಾಧವ!) ಸ: “ಕಿಂ ವಸಂತಃ?" (ಅಂದರೆ ವಸಂತನೋ? ವಸಂತ ಋತುವಿಗೆ ಮಾಧವ ಎಂಬ ಹೆಸರೂ ಇದೆ.) ಕೃ: “ನೋ ಚಕ್ರೀ" (ನಾನು ಸುದರ್ಶನ ಚಕ್ರವನ್ನು ಧರಿಸಿದವನು).

ಸ: “ಕಿಂ ಕುಲಾಲಃ?" (ಚಕ್ರಿಯೆಂದರೆ ನೀನು ಕುಂಬಾರನೋ?)

ಕೃ: “ನ ಹಿ ಧರಣಿಧರಃ" (ಇಲ್ಲ, ನಾನು ಭೂಮಿಯನ್ನು ಹೊತ್ತವನು. ವರಾಹಾವತಾರದ ಉಲ್ಲೇಖವಿದು.)

ಸ: “ಕಿಂ ದ್ವಿಜಿಹ್ವಃ -ಣೀಂದ್ರಃ?" (ಹಾಗಿದ್ದರೆ ನೀನು ಎರಡೆಳೆ ನಾಲಿಗೆಯ ಹಾವೇ? ಭೂಮಿಯನ್ನು ಹೊತ್ತ ಆದಿಶೇಷ ಎಂಬರ್ಥದಲ್ಲಿ ಈ ಪ್ರಶ್ನೆ)

ಕೃ: “ನಾಹಂ ಘೋರಾಹಿಮರ್ದೀ" (ಇಲ್ಲ, ನಾನು ಘೋರವಾದ ಹಾವನ್ನು ಮರ್ದಿಸಿದವನು. ಇಲ್ಲಿ ಬಂದಿರುವುದು ಕೃಷ್ಣನು ಬಾಲ್ಯದಲ್ಲಿ ಮಾಡಿದ್ದ ಕಾಳಿಂಗ ಮರ್ದನದ ಉಲ್ಲೇಖ)

ಸ: “ಕಿಮುತ ಖಗಪತಿಃ?" (ಹಾವನ್ನು ಕೊಲ್ಲುವವನಾದರೆ ನೀನು ಪಕ್ಷಿರಾಜ ಗರುಡನೋ?)

ಕೃ: “ನೋ ಹರಿಃ" (ಅಲ್ಲ, ನಾನು ಹರಿ!) ಸ: “ಕಿಂ ಕಪೀಂದ್ರಃ?" (ಹರಿ ಎಂಬ ಪದಕ್ಕೆ ಕಪಿ ಎಂಬ ಅರ್ಥವೂ ಇದೆ, ಹಾಗಿದ್ದರೆ ನೀನು ಕಪೀಶನೋ?)

ಇತ್ಯೇವಂ ಸತ್ಯಭಾಮಾಯಾಃ ಪ್ರತಿವಚನಜಿತಃ ಪಾತುವಶ್ಚಕ್ರ ಪಾಣಿಃ|| (ಹೀಗೆ ಸತ್ಯಭಾಮೆ ಯ ಪ್ರಶ್ನೆಗಳಿಗೆ ನಿರುತ್ತರನಾಗಿ ಸೋತ ಚಕ್ರಪಾಣಿ ಶ್ರೀಮನ್ನಾರಾಯಣನು ನಮ್ಮೆಲ್ಲರನ್ನೂ ಕಾಪಾಡಲಿ) ಎಂದು ಎಲ್ಲರೂ ಹೇಳಿ ರಾಮ್ ರಾಮ್ ಗೋವಿಂದಾನ್ನಿ ಗೋವಿಂದಾ ಎನ್ನುವಾಗ ಹೆಬ್ಬಾಗಿಲನ್ನು ತೆರೆದು ಪಲ್ಲಕ್ಕಿ ಉತ್ಸವ ಒಳಪ್ರಾಂಗಣ ತಲುಪುತ್ತದೆ.

ಈ ಸಂಪ್ರದಾಯವೂ ಹಾಗೆಯೇ. ಪಾತ್ರಧಾರಿಗಳು ಬದಲಾಗಿದ್ದಾರೆಯಷ್ಟೇ ಹೊರತು ಪ್ರತಿವರ್ಷವೂ ಅನೂಚಾನವಾಗಿ ನಡೆದುಕೊಂಡು ಬಂದಿದೆ, ಈ ವರ್ಷವೂ ನಡೆದಿದೆ.

ಅಲ್ಲಿ ಒಳಪ್ರಾಂಗಣದಲ್ಲಿ ಇನ್ನೊಂದು ಹೃದಯಸ್ಪರ್ಶಿ ಏರ್ಪಾಡು. ಬೇರೆಲ್ಲ ದಿನಗಳಲ್ಲಿ ಪಲ್ಲಕ್ಕಿ ಉತ್ಸವದ ವೇಳೆ ಪಲ್ಲಕ್ಕಿ ಹೊತ್ತವರು ಆ ಒಳಪ್ರಾಂಗಣದಲ್ಲಿ ಮಾಮೂಲಿಯಾಗಿ ನಡುಮಧ್ಯದಲ್ಲೇ ಎಂಬಂತೆ ನಡೆದು ಸಾಗುವುದಾದರೆ, ಅವಭೃತದ ದಿನ ಆ ಒಂದು ಸುತ್ತಿನಲ್ಲಿ ಮಾತ್ರ ಪಲ್ಲಕ್ಕಿಯನ್ನು ಮಹಿಳಾಭಕ್ತಗಣ ಕೈಮುಗಿದು ನಿಂತಿರುವಲ್ಲಿಗೆ ಆತು ಕೊಂಡು ಎಷ್ಟು ಸಾಧ್ಯವೋ ಅಷ್ಟು ಹತ್ತಿರಕ್ಕೊಯ್ದು ನಿಧಾನವಾಗಿ ಚಲಿಸಿ ಅವರೆಲ್ಲರಿಗೂ ಅತ್ಯಂತ ಹತ್ತಿರದಿಂದ ಉತ್ಸವಮೂರ್ತಿಯನ್ನು ನೋಡಿ ಕಣ್ತುಂಬಿಸಿ ಕೊಳ್ಳುವ, ಹೂವು ಅರ್ಪಿಸಿ ಧನ್ಯರಾಗುವ ಅವಕಾಶ.

ಇದೂ ಅಷ್ಟೇ, ನಾನು ಚಿಕ್ಕವನಿದ್ದಾಗಲೂ ಕಣ್ಣಾರೆ ನೋಡಿದ್ದು, ಈಗ ದೂರದ ಅಮೆರಿಕ ದಲ್ಲಿರುತ್ತ ವಿಡಿಯೊ ತುಣುಕಿನಲ್ಲಿ ನೋಡುತ್ತಿರುವುದಾದರೂ, ಅದೇ ಶ್ರದ್ಧೆಯಿಂದ ನಡೆದುಕೊಂಡು ಬಂದಿದೆ. ನನಗನಿಸುವಂತೆ ಇದೊಂದು ಚಿಂತನಯೋಗ್ಯ ವಿಚಾರ.

ದೇವಸ್ಥಾನದ ಎಲ್ಲ ಆಗುಹೋಗುಗಳಲ್ಲೂ ಪುರುಷರಿಗಿಂತ ಸ್ವಲ್ಪಮಟ್ಟಿಗೆ ದೂರದಲ್ಲಿಯೇ ನಿಂತು ಪಾಲ್ಗೊಳ್ಳಬೇಕಾಗುತ್ತದೆ ಹೆಂಗಸರು/ಹೆಣ್ಮಕ್ಕಳು. ಗರ್ಭಗುಡಿಯೊಳಗಂತೂ ಯಾರಿಗೂ ಪ್ರವೇಶವೇ ಇಲ್ಲ.

ಅರ್ಚಕರು, ಪರಿಚಾರಕರು, ಪಾಠಾಳಿಗಳು, ಪಲ್ಲಕ್ಕಿ ಹೊರುವವರು, ಪತಾಕೆ ಬಾವುಟ ಗೆಜ್ಜೆಕೋಲು ದೀವಟಿಗೆಗಳನ್ನು ಹೊತ್ತು ನಡೆಯುವವರು ಎಲ್ಲ ಗಂಡಸರೇ. ಅವರೆಲ್ಲರಿಗೂ ದೇವರ ಸಾಮೀಪ್ಯ ಅನಾಯಾಸವಾಗಿ ಸಿಗುತ್ತದೆ.

ಅಷ್ಟೇ ಅಲ್ಲ, ನಮ್ಮೂರಿನ ದೇವಸ್ಥಾನದಲ್ಲಿ ಹೇಗೆಂದರೆ ಗರ್ಭಗುಡಿಯ ಎದುರು ಭಾಗದಲ್ಲಿ ರುವ ಜಾಗ ಗಂಡಸರಿಗೆ ಕುಳಿತುಕೊಳ್ಳಲಿಕ್ಕೆ, ಎಡಬಲ ಬದಿಯ ಅಂಬಲಗಳು ಹೆಂಗಸರು ಕುಳಿತುಕೊಳ್ಳಲಿಕ್ಕೆ. ಅದೇನೂ ತಾರತಮ್ಯ ಮೇಲುಕೀಳು ಅಂತಲ್ಲ, ಒಂಥರದ ಅಲಿಖಿತ ಸಂವಿಧಾನ. ಹಾಗಿರುವಾಗ ಅವಭೃತದ ದಿನ ವಿಶೇಷವಾಗಿ ದೇವರು ಹೆಂಗಳೆಯರ ಹತ್ತಿರಕ್ಕೇ ಬಂದು ಹರಸಿದನೆಂಬ ಭಾವನೆ ತರಿಸುವ ಈ ಏರ್ಪಾಡನ್ನು ಯಾರು ಆರಂಭಿಸಿದರೋ ಅವರು ನಿಸ್ಸಂಶಯವಾಗಿ ವಂದ್ಯರು. ಆ ದೃಶ್ಯವನ್ನು ವಿಡಿಯೋದಲ್ಲಿ ನೋಡಿದರೂ ಹೃದಯತುಂಬಿ ಬರುತ್ತದೆ.

ನಿಜ, ಇವೆಲ್ಲ ಸಾಂಕೇತಿಕ ಚಿಕ್ಕಪುಟ್ಟ ಸಂಪ್ರದಾಯಗಳು. ಆದರೆ ಇವುಗಳ ಅರ್ಥ-ಆಶಯ-ಉದ್ದೇಶಗಳನ್ನು ಅರಿತಾಗ, ಸೂಕ್ಷ್ಮವಾಗಿ ಗಮನಿಸಿದಾಗ “ಅಂತರಂಗದಿಂದ ಬಹಿರಂಗಕ್ಕೆ, ಸೂಕ್ಷ್ಮದಿಂದ ಸ್ಥೂಲಕ್ಕೆ, ಸಂಕುಚಿತತೆಯಿಂದ ವೈಶಾಲ್ಯಕ್ಕೆ ತೆರೆದುಕೊಳ್ಳುವ ಪರಿಕಲ್ಪನೆ" ಯನ್ನು ದೇವಸ್ಥಾನದ ಉತ್ಸವದಲ್ಲಿ ನಮ್ಮ ಹಿರಿಯರು ಅದೆಷ್ಟು ಕಾಳಜಿಯಿಂದ ಅಳವಡಿಸಿಕೊಂಡರೆಂದು ಅಭಿಮಾನವುಂಟಾಗುತ್ತದೆ.

ಮಹಿಳಾಭಕ್ತರಿಗೆ ಸನಿಹದರ್ಶನದ ಪಲ್ಲಕ್ಕಿ ಸುತ್ತು ಆದ ಮೇಲೆ ಮುಂದಿನ ಕಾರ್ಯಕ್ರಮ ಮಹಾಮಂಗಳಾರತಿ. ಆಗಲೂ ಒಂದು ಕೌತುಕದ ಆಚರಣೆ. ಅವಭೃತದ ದಿನ ಮಧ್ಯಾಹ್ನದ ಮಂಗಳಾರತಿಯ ವೇಳೆ ಮಾತ್ರ. ಗರ್ಭಗುಡಿಗೆ ತುಸು ದೂರದಲ್ಲಿ ಎದುರಿಗಿರುವ ಪುಷ್ಕರಿಣಿಯ ಮೆಟ್ಟಿಲ ಮೇಲೆ ಒಬ್ಬರು ಕನ್ನಡಿ ಹಿಡಿದು ನಿಂತುಕೊಂಡು ಸೂರ್ಯರಶ್ಮಿಯ ಪ್ರತಿಫಲಿತ ಜ್ಯೋತಿಯನ್ನು ದೇವರ ವಿಗ್ರಹದ ಮೇಲಕ್ಕೆ ಹಾಯಿಸುತ್ತಾರೆ.

ಅದು, ಊರಿಡೀ ಸುತ್ತಿಬಂದ ದೇವರು ಮೈಮೇಲಿನ ಆಭರಣಗಳಾವುವನ್ನೂ ಕಳೆದು ಕೊಂಡಿಲ್ಲ ತಾನೆ ಎಂದು ದೃಢಪಡಿಸಲು ಅನುವಾಗುವುದಕ್ಕೆ ಅಂತೆ! ಎಂಥ ಕುಶಾಗ್ರಮತಿ ಆಲೋಚನೆ! ಬಾಲ್ಯದಲ್ಲಿ ಇದನ್ನೆಲ್ಲ ನಾವು ಬೆರಗುಗಣ್ಣಿಂದ ನೋಡುತ್ತಿದ್ದೆವು. ಏನು, ಏಕೆ ಎಂದು ಅರ್ಥವಾಗುತ್ತಿರಲಿಲ್ಲ.

ದೇವರು ಗರ್ಭಗುಡಿಯಲ್ಲೇ ಯಾವಾಗಲೂ ಬಂದಿಯಾಗಿ ಇರುವುದಿಲ್ಲ, ಗ್ರಾಮಸ್ಥರೆಲ್ಲರ ಯೋಗಕ್ಷೇಮ ವಿಚಾರಿಸಲಿಕ್ಕಾಗಿ ವರ್ಷಕ್ಕೊಮ್ಮೆ ಅವರ ಹತ್ತಿರಕ್ಕೆ, ಅವರಿದ್ದಲ್ಲಿಗೇ- ಬಲಿಯ ಮನೆಗೆ ವಾಮನ ಬಂದಂತೆ, ಭಗೀರಥಗೆ ಶ್ರೀಗಂಗೆ ಬಂದಂತೆ, ಮುಚುಕುಂದಗೆ ಶ್ರೀಮುಕುಂದ ಬಂದಂತೆ, ವಿದುರನ ಮನೆಗೆ ಶ್ರೀಕೃಷ್ಣ ಬಂದಂತೆ, ವಿಭೀಷಣನ ಮನೆಗೆ ಶ್ರೀರಾಮ ಬಂದಂತೆ- ಬರುತ್ತಾನೆ, ಗ್ರಾಮಭೇಟಿಯ ತನ್ನ ಕ್ರಮವನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ ಎಂಬ ದೃಢವಿಶ್ವಾಸ ಮೂಡಿಸುವ, ಬೇರೆಬೇರೆ ರೀತಿಗಳನ್ನು ಕಂಡೂಕಾಣದಂತೆ ಆಳವಾಗಿ ಒಳಗೊಂಡ, ಅವಭೃತ ಒಂದು ಭಕ್ತಿಪೂರ್ವಕ ವಿಸ್ಮಯವೇ ಸೈ!

ಶ್ರೀವತ್ಸ ಜೋಶಿ

View all posts by this author