Vinayaka V Bhat Column: ಕನ್ನಡ ಚಳವಳಿಗಳ ಹುಟ್ಟು, ಸಂಘಟನೆ ಮತ್ತು ಸಾಧನೆ
ಏಕೀಕರಣದ ಹೋರಾಟಗಳ ಫಲವಾಗಿ, ವಾಯವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ, ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು, ತುಳುನಾಡಿಗೆ ಸೇರಿದ್ದ ಕೆಲವು ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.

-

ವಿದ್ಯಮಾನ
ಸುಮಾರು 80ರ ದಶಕದವರೆಗೂ ಬೆಂಗಳೂರು ಈಗ ನೋಡುತ್ತಿರುವ ಹಾಗಿರಲಿಲ್ಲ, ಇಲ್ಲಿ ಬದುಕಬೇಕಾದರೆ ತಮಿಳು, ತೆಲುಗು ಅರ್ಥವಾಗಬೇಕು ಎನ್ನುವ ಕಾಲವಿತ್ತು. ಬೆಂಗಳೂರಿನ ಜನನಿಬಿಡ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಗಾಂಧಿನಗರ ಮುಂತಾದೆಡೆಗಳಲ್ಲಿ ತಮಿಳು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಲವದು. ನಗರದಾದ್ಯಂತ ಕನ್ನಡದ ನಾಮಫಲಕಗಳು ಈಗಿನಂತೆ ಕಾಣುತ್ತಿರಲಿಲ್ಲ, ತಮಿಳು-ಇಂಗ್ಲಿಷ್ ಫಲಕಗಳೇ ಕಣ್ಣಿಗೆ ರಾಚುತ್ತಿದ್ದವು.
ಹೆಚ್ಚೂ ಕಡಿಮೆ ಹದಿನಾರು ರಾಜ್ಯಗಳಲ್ಲಿ ಅವಕ್ಕೇ ಪ್ರತ್ಯೇಕವಾದ ನಾಡಗೀತೆ ಇದ್ದರೂ, ಕರ್ನಾಟಕ ನಾಡಗೀತೆ ಅತ್ಯಂತ ಪ್ರಸಿದ್ಧವಾದದ್ದಾಗಿದೆ. ಕಾರಣ ಅದರಲ್ಲಿ ಪ್ರಸ್ತುತಪಡಿಸಿರುವ ಸಮಷ್ಟಿಯ ಧೋರಣೆ ಹಾಗೂ ಒಕ್ಕೂಟ ಪ್ರಜ್ಞೆಯೇ ಆಗಿದೆ. ಅಧಿಕೃತವಲ್ಲದಿದ್ದರೂ, ನಮ್ಮ ರಾಜ್ಯವನ್ನು ಬಿಟ್ಟರೆ ಒಂದೆರಡು ರಾಜ್ಯಗಳಿಗೆ ಮಾತ್ರ ಪ್ರತ್ಯೇಕ ಧ್ವಜವಿದೆ. ಹಿಂದಿ ಭಾಷೆಯೊಂದನ್ನು ಬಿಟ್ಟರೆ ಕನ್ನಡಕ್ಕೆ ಬಂದಷ್ಟು ಜ್ಞಾನಪೀಠ ಪ್ರಶಸ್ತಿ ಇನ್ನಾವ ಭಾಷೆಗೂ ಬಂದಿಲ್ಲ.
ಸಾಹಿತ್ಯ ಸೃಜನೆಗೆ ನಮಗೆ ಸರಿಸಾಟಿ ಯಾರೂ ಇಲ್ಲ. ಸಾಹಿತ್ಯದಲ್ಲಿ ಭಾವಗೀತೆ ಎನ್ನುವ ನವಿರು ಸಾಹಿತ್ಯ ಪ್ರಕಾರ ಬೇರಾವ ಭಾಷೆಯಲ್ಲೂ ಇಲ್ಲ. ಕನ್ನಡದ ಹಾಗೂ ಕರುನಾಡಿನ ಹಿರಿಮೆಯ ಬಗ್ಗೆ ಹೇಳುತ್ತಾ ಹೋದರೆ ಹೀಗೆ ಸಾವಿರಾರು ಸಂಗತಿಗಳನ್ನು ಹೇಳಬಹುದು.
ಇಷ್ಟೆ ಹಿರಿಮೆ-ಗರಿಮೆಗಳಿದ್ದರೂ ಕನ್ನಡಿಗರು ಕನ್ನಡಕ್ಕಾಗಿ ಇನ್ನೂ ಹೋರಾಡುತ್ತಲೇ ಇದ್ದೇವೆ. ಇಲ್ಲಿಯವರೆಗೆ, ಒಂದು ಪ್ರಬಂಧವನ್ನೇ ಬರೆಯಬಹುದಾದಷ್ಟು ಚಳವಳಿಗಳಾಗಿವೆ. ಕನ್ನಡದ ಹಾಗೂ ಕನ್ನಡಿಗರ ಅಸ್ಮಿತೆಯ ಉಳಿವಿಗೆ ಚಳವಳಿಗಳು ಇನ್ನೂ ನಡೆಯುತ್ತಲೇ ಇವೆ ಎನ್ನುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಕನ್ನಡದ ಅಸ್ಮಿತೆಯ ಉಳಿವಿಗೆ ನಡೆದ ಬಹುತೇಕ ಹೋರಾಟ, ಚಳವಳಿಗಳು, ಅನ್ಯಭಾಷಿಕರ, ಕೇಂದ್ರ ಸರಕಾರದ ವಿರುದ್ಧ ನಡೆದದ್ದಲ್ಲ, ಬದಲಿಗೆ ಕನ್ನಡಿಗರೇ ಆರಿಸಿ ಕಳುಹಿಸಿದ ಅಧಿಕಾರಸ್ಥರ ಅಥವಾ ಸರಕಾರಗಳ ಜತೆಗೆ ಎನ್ನುವುದು ಇನ್ನೂ ಖೇದದ ಸಂಗತಿ ಯಾಗಿದೆ.
ಇದನ್ನೂ ಓದಿ: Vinayaka V Bhat Column: ಸರಕಾರದ ಕೆಲಸವನ್ನು ಸರಕಾರವೇ ಮಾಡಿದರೆ ಚೆನ್ನ
ಏಕೀಕರಣದ ಹೋರಾಟಗಳ ಫಲವಾಗಿ, ವಾಯವ್ಯ ಕರ್ನಾಟಕದ ಎಲ್ಲ ಜಿಲ್ಲೆಗಳು ಬಾಂಬೆ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದರೆ, ಈಶಾನ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳು ಹೈದರಾಬಾದ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆ ಗೊಂಡವು, ತುಳುನಾಡಿಗೆ ಸೇರಿದ್ದ ಕೆಲವು ಜಿಲ್ಲೆಗಳು ಮದ್ರಾಸ್ ರಾಜ್ಯದಿಂದ ಬೇರ್ಪಟ್ಟು ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು. ಹೀಗೆ 1956ರಲ್ಲಿ ಬಾಂಬೆ, ಹೈದರಾಬಾದ್, ಮದ್ರಾಸ್ ರಾಜ್ಯಗಳಿಂದ ಬೇರ್ಪಟ್ಟ ಜಿಲ್ಲೆಗಳು ಮೈಸೂರು ರಾಜ್ಯಕ್ಕೆ ಸೇರಿಕೊಂಡು ವಿಶಾಲ ಮೈಸೂರು ರಾಜ್ಯದ ಉದಯ ವಾಯಿತು ಹಾಗೂ ಕಾಲಾನಂತರದಲ್ಲಿ ಮೈಸೂರು ರಾಜ್ಯ ಕರ್ನಾಟಕವಾಯಿತು.
ಕನ್ನಡ ಭಾಷಿಕರನ್ನು ಒಟ್ಟಿಗೆ ತರುವ ಕರ್ನಾಟಕ ಏಕೀಕರಣದಿಂದ ಪ್ರಾರಂಭವಾದ ಈ ಹೋರಾಟ, ಇನ್ನೂ ನಿಲ್ಲಲಿಲ್ಲ. ಏಕೀಕರಣೋತ್ತರ ಕರ್ನಾಟಕವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಲು ರೂಪಿಸಿದ ಬೌದ್ಧಿಕ ಹಾಗೂ ಭೌತಿಕ, ಈ ಎರಡು ನೆಲೆಗಳಲ್ಲೂ ನಡೆಸಿದ ಚಳವಳಿಗಳನ್ನು ಕನ್ನಡ ಚಳವಳಿ ಎಂದು ಗುರುತಿಸಬಹುದಾಗಿದೆ. ಬೌದ್ಧಿಕವಾಗಿ ಅಥವಾ ಸೈದ್ಧಾಂತಿಕವಾಗಿ ಕರ್ನಾಟಕ ವನ್ನು ರೂಪಿಸುವ ಕಾರ್ಯದಲ್ಲಿ ಪ್ರಧಾನವಾದ ಪಾತ್ರವಹಿಸಿದ್ದು ಸೃಜನಶೀಲವಾದ ಸಾಹಿತ್ಯ ಸೃಷ್ಟಿ. ಇದು ಕನ್ನಡದ ಸಂವೇದನೆಯನ್ನು ಕಾಯ್ದುಕೊಂಡು ಬಂದ ಸಾಂಸ್ಕೃತಿಕ ಪ್ರಕ್ರಿಯೆ ಯಾಗಿದೆ.
ಈ ಪ್ರಕ್ರಿಯೆ ‘ಕವಿರಾಜಮಾರ್ಗ’ಕಾರನಿಂದ ಮೊದಲ್ಗೊಂಡು ಬೇಂದ್ರೆ, ಕುವೆಂಪು ಅವರನ್ನು ಒಳಗೊಂಡಂತೆ ನವ್ಯ ಸಾಹಿತ್ಯ ಸೃಷ್ಟಿಯವರೆಗೂ ಮುಂದುವರಿದಿದೆ. ಇದು, ಸಂಸ್ಕೃತ, ಇಂಗ್ಲಿಷ್ ಹಾಗೂ ಇನ್ನಿತರ ಭಾಷೆಗಳನ್ನು ಬಳಸಿಕೊಂಡು ಕನ್ನಡದ ಅನನ್ಯತೆಯನ್ನು ಉಳಿಸಿಕೊಳ್ಳಲು ನಡೆಸಿದ ಸುಪ್ತ ಪ್ರಯತ್ನವಾಗಿತ್ತು. ಈ ಕಾಲಘಟ್ಟದಲ್ಲಿ ಕನ್ನಡದದಷ್ಟು ಸಾಹಿತ್ಯ ಸೃಷ್ಟಿ ಬಹುತೇಕ ಇನ್ನಾವ ಪ್ರಾದೇಶಿಕ ಭಾಷೆಗಳಲ್ಲೂ ಆಗಿಲ್ಲ. ಕನ್ನಡ ಇನ್ನೂ ಸಜೀವವಾಗಿರುವುದು ಇದೇ ಕಾರಣ ಕ್ಕಾಗಿ ಎಂದರೂ ತಪ್ಪಾಗಲಾರದು.

ಬೌದ್ಧಿಕತೆಯನ್ನು ಮೀರಿದ ಭಿನ್ನ ಸ್ವರೂಪದ ಚಳವಳಿಯ ಪ್ರಕ್ರಿಯೆಗಳು ಕಾಣಿಸಿಕೊಂಡದ್ದು ಏಕೀಕರಣದ ನಂತರವೇ ಎಂದು ಹೇಳಬಹುದು. ಏಕೀಕೃತ ಕರ್ನಾಟಕವು, ಕನ್ನಡ ಭಾಷಿಕರ ಎಲ್ಲ ಪ್ರದೇಶಗಳನ್ನು ಒಂದೇ ಆಡಳಿತದ ತೆಕ್ಕೆಗೆ ಪೂರ್ತಿಯಾಗಿ ತೆಗೆದುಕೊಂಡಿರಲಿಲ್ಲ. ಅಕ್ಕಲಕೋಟೆ, ಸೊಪುರ, ಕಾಸರಗೋಡು, ಆದವಾನಿ, ರಾಯದುರ್ಗ, ತಾಳವಾಡಿ, ನೀಲಗಿರಿ ಮೊದಲಾದವು ಕನ್ನಡ ರಾಜ್ಯಕ್ಕೆ ಇನ್ನೂ ಸೇರಲಿಲ್ಲ.
ಏಕೀಕರಣವಾಗಿದ್ದರೂ, ಗಡಿಭಾಗಗಳ ಕನ್ನಡಿಗರು ಭಾಷಿಕ ಕೀಳರಿಮೆಗೆ ಒಳಗಾಗೇ ಇದ್ದರು. ಗಡಿನಾಡನ್ನು ಬಿಡಿ, ನಾಡಿನ ರಾಜಧಾನಿಯೂ, ರಾಜಕೀಯ ವ್ಯವಸ್ಥೆಯ ಕೇಂದ್ರವೂ ಆಗಿದ್ದ ಬೆಂಗಳೂರು ನಗರ, ಕನ್ನಡೇತರರ ಪ್ರಾಬಲ್ಯದ ಕೇಂದ್ರವಾಗಿತ್ತು. ಹಾಗಾಗಿ, 60ರ ದಶಕದಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಆಶೋತ್ತರಗಳ ಈಡೇರಿಕೆಗಾಗಿ ಕನ್ನಡಿಗರು ಮತ್ತೆ ಸಂಘಟಿತರಾಗುವ ಅನಿವಾರ್ಯತೆ ಉಂಟಾಯಿತು.
ಸಾಂಸ್ಕೃತಿಕವಾಗಿ ಒಪ್ಪುತ್ತಿದ್ದ ‘ಕರ್ನಾಟಕ’ ಎಂಬ ಹೆಸರಿಗೆ ಬದಲಾಗಿ, ವಿಶಾಲ ಮೈಸೂರು ರಾಜ್ಯ ವೆಂಬ ಹೆಸರಿನಿಂದ ಏಕೀಕರಣವನ್ನು ಸಾಧಿಸಿದ್ದು ಅನೇಕ ಕನ್ನಡಿಗರಲ್ಲಿ ಅಸಮಾಧಾನ ವನ್ನು ಸೃಷ್ಟಿಸಿತ್ತು. ಇದಕ್ಕೆ ಮುಂಬಯಿ ಹಾಗೂ ಹೈದರಾಬಾದ್ ಕರ್ನಾಟಕದ ಕನ್ನಡಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದೂ ಇದೆ. ಇಂಥ ಹಲವು ಕಾರಣಗಳಿಂದಾಗಿ, ನಾಡಿನ ಏಕೀಕರಣ ಎಲ್ಲರಿಗೂ ಸಂಪೂರ್ಣವಾಗಿ ಸಮಾಧಾನವನ್ನು ತಂದಿರಲಿಲ್ಲ. ಮತ್ತು ಅದು ಸಮಗ್ರವಾಗಿ ಕನ್ನಡ ಭಾಷಿಕ ರನ್ನು ಒಗ್ಗೂಡಿಸುವ ಉದ್ದೇಶಿತ ಗುರಿಯನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ.
ಇದರ ಪರಿಣಾಮವೇ ಬೆಂಗಳೂರಿನಲ್ಲಿ ಕನ್ನಡ ಚಳವಳಿ ಸಂಘಟಿತ ರೂಪ ಪಡೆದು, ನಾಡಿನ ಉಳಿದೆಡೆಗಳಿಗೆ ಕ್ರಮೇಣ ಆವರಿಸಲು ಕಾರಣವಾಯ್ತು. ಮೈಸೂರು ಸಂಸ್ಥಾನದ ಆಡಳಿತ ಕೇಂದ್ರ ವಾಗಿದ್ದ ಬೆಂಗಳೂರು ಏಕೀಕರಣದ ನಂತರ ರಾಜ್ಯದ ರಾಜಧಾನಿಯಾಗಿ ಮುಂದುವರಿ ಯಿತು. ಅದರಿಂದ ನಗರದ ಬೆಳವಣಿಗೆಯೇನೋ ಆಯಿತು. ಆದರೆ ನಾಡು, ನುಡಿ, ಸಂಸ್ಕೃತಿಗಳ ಕೇಂದ್ರ ಸ್ಥಾನವಾಗಿ ಅದು ತನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಸಮಗ್ರವಾಗಿ ಕನ್ನಡಿಗರಲ್ಲಿ ಭರವಸೆ ಮೂಡಿಸುವ ಹಾಗೂ ಅವರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕರುನಾಡ ರಾಜಧಾನಿ ಬೆಂಗಳೂರು ವಿಫಲವಾಯಿತು. ಇದಕ್ಕೆ ಪ್ರಮುಖ ಕಾರಣವೆಂದರೆ ಅಲ್ಲಿ ನೆಲೆಸಿದ್ದ ಕನ್ನಡೇತರರ ಪ್ರಾಬಲ್ಯ, ಶಿಕ್ಷಣ, ಉದ್ಯೋಗಗಳನ್ನರಸಿ ಅಥವಾ ಇಲ್ಲಿನ ಉತ್ತಮ ಹವಾಮಾನವನ್ನು ಬಯಸಿ ಬರುವ ಕನ್ನಡೇತರರ ಸಂಖ್ಯೆಯಾಗಿತ್ತು.
ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣದ ನಂತರವೂ ಅನೇಕ ಉದ್ದಿಮೆಗಳನ್ನು ಬೆಂಗಳೂರು ಆಕರ್ಷಿಸಿತು. ಇವುಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಬಹುಪಾಲು ಪಕ್ಕದ ತಮಿಳುನಾಡಿನವರಾಗಿದ್ದರು. ಜತೆಗೆ, ಹಿಂದಿಯೂ ಸೇರಿ ಇತರ ಭಾಷಿಕರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಕೇಂದ್ರ ಸರಕಾರಿ ಉದ್ಯಮಗಳಲ್ಲೂ ಇವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು.
ಬೆಂಗಳೂರಿನಲ್ಲಿದ್ದ ಐಟಿಐ, ಬಿಇಎಲ್, ಎಚ್‌ಎಂಟಿ, ಮೈಕೋ ಮೊದಲಾದ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ಮೊದಲಿನಿಂದಲೂ ತೀರಾ ಕಡಿಮೆಯೇ ಇತ್ತು. ಸ್ಥಳೀಯ ಕನ್ನಡಿಗರಿಗೆ ಪ್ರಾತಿ ನಿಧ್ಯ ಕೊಡಬೇಕೆಂಬ ನಿಯಮವನ್ನು ಕೇಂದ್ರ ಸರಕಾರಿ ಸಂಸ್ಥೆಗಳು ಉಲ್ಲಂಘಿಸಿದ್ದವು.
ಅಂಚೆ, ತಂತಿ, ರೈಲ್ವೆ ಮೊದಲಾದ ಇಲಾಖೆಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಬೆರಳೆಣಿಕೆ ಯಷ್ಟಿತ್ತು. ಸಾರಿಗೆ, ಪೊಲೀಸು ಇಲಾಖೆಗಳಂಥ ರಾಜ್ಯ ಸರಕಾರಿ ನೌಕರಿಗಳಲ್ಲೂ ತಮಿಳರು, ತೆಲುಗಿನವರದ್ದೇ ಪಾರಮ್ಯವಿತ್ತು. ಸುಮಾರು 80ರ ದಶಕದವರೆಗೂ ನಮ್ಮ ರಾಜಧಾನಿ ಈಗ ನೋಡುತ್ತಿರುವ ಹಾಗಿರಲಿಲ್ಲ, ಬೆಂಗಳೂರಿನಲ್ಲಿ ಬದುಕಬೇಕಾದರೆ ತಮಿಳು, ತೆಲುಗು ಅರ್ಥವಾಗ ಬೇಕು ಎನ್ನುವ ಕಾಲವಿತ್ತು.
ಬೆಂಗಳೂರಿನ ಜನನಿಬಿಡ ಪ್ರದೇಶಗಳಾದ ರೈಲ್ವೆ ನಿಲ್ದಾಣ ಕೆಂಪೇಗೌಡ ಬಸ್ ನಿಲ್ದಾಣ, ಗಾಂಧಿನಗರ ಮೊದಲಾದ ಕಡೆಗಳಲ್ಲಿ ತಮಿಳು ಮಾತನಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಲ ಅದು. ನಗರದಾದ್ಯಂತ ಕನ್ನಡದ ನಾಮಫಲಕಗಳು ಈಗಿನಂತೆ ಕಾಣುತ್ತಿರಲಿಲ್ಲ.
ಬದಲಾಗಿ ತಮಿಳು ಹಾಗೂ ಇಂಗ್ಲಿಷ್ ಫಲಕಗಳೇ ಕಣ್ಣಿಗೆ ರಾಚುತ್ತಿದ್ದವು. ಬೆಂಗಳೂರಿನಲ್ಲಿ ಕೆಲಸ ಮಾಡುವ ಕಟ್ಟಡ ಕಾರ್ಮಿಕರು, ಕೂಲಿ ಆಳುಗಳು, ಆಟೋ ಚಾಲಕರು ಮುಂತಾಗಿ ತಮಿಳರೇ ಆಗಿದ್ದರು. ತೆಲುಗು, ಮಲಯಾಳಂ, ಹಿಂದಿ, ಮರಾಠಿ ಭಾಷೆಗಳನ್ನು ಆಡುವವರನ್ನೂ ಅಲ್ಲಲ್ಲಿ ನೋಡಬಹುದಿತ್ತು. ದೂರದ ಊರುಗಳಿಂದ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದ ಕನ್ನಡಿಗರು, ಕನ್ನಡೇತರರಿಂದ ಅವಮಾನ, ಕೀಟಲೆಗಳನ್ನು ಅನುಭವಿಸುವ ಪರಿಸ್ಥಿತಿ ಇತ್ತು.
ಈಗೇನೂ ಬೆಂಗಳೂರಿನ ಪರಿಸ್ಥಿತಿ ಪೂರ್ಣ ಸುಧಾರಿಸಿದೆ ಅಂತ ಅಲ್ಲ; ಆದರೆ 60ರ ದಶಕಕ್ಕಿಂತ ಉತ್ತಮ ಎನ್ನಬಹುದೇನೋ. ಆಗ ಬೆಂಗಳೂರು ನಗರದಲ್ಲಿ ಕನ್ನಡತನವನ್ನು ಮೂಡಿಸಲು ಮುಂದೆ ಬಂದವರು ಬೆರಳೆಣಿಕೆಯಷ್ಟು ಸಂಖ್ಯೆಯ ಮಂದಿ ಮಾತ್ರ. ಅ.ನ.ಕೃಷ್ಣರಾವ್, ಕೋಣಂದೂರು ಲಿಂಗಪ್ಪ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ಮೈ.ಸು.ನಟರಾಜ, ಶೇಷಗಿರಿರಾವ್, ಕರ್ಲಮಂಗಲಂ ಶ್ರೀಕಂಠಯ್ಯ, ತಿ.ತಾ.ಶರ್ಮ, ಎಂ.ವಿ.ಸುಬ್ಬರಾವ್ ಮೊದಲಾದವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.
ಇವರೆಲ್ಲ 1960ರ ದಶಕದ ಆರಂಭಿಕ ವರ್ಷಗಳಲ್ಲಿ ಕನ್ನಡದ ಚಳವಳಿಗಾಗಿ ತಮ್ಮನ್ನು ಸಮರ್ಪಿಸಿ ಕೊಂಡವರು. ಆದರೆ, ಇವರೆಲ್ಲರನ್ನು ಒಂದು ವೇದಿಕೆಯಡಿಗೆ ತಂದ ಕೋಣಂದೂರು ಲಿಂಗಪ್ಪ ಅವರ ಪ್ರಯತ್ನಗಳು ಪ್ರಧಾನವಾಗಿ ಕಂಡವು. ಹಾಗಾಗಿ, ಬೆಂಗಳೂರಿನಲ್ಲಿ ಕನ್ನಡ ಚಳವಳಿಗೆ ಆರಂಭಿಕ ನೆಲೆಗಟ್ಟನ್ನು ಒದಗಿಸಿದ ಕೀರ್ತಿ ಲಿಂಗಪ್ಪ ಅವರಿಗೆ ಸಲ್ಲುತ್ತದೆ.
ಆಮೇಲೆ, ಶಾಂತವೇರಿ ಗೋಪಾಲಗೌಡರು ರಾಜಕೀಯವಾಗಿ ತಮ್ಮದೇ ಆದ ರೀತಿಯಲ್ಲಿ ಕನ್ನಡಕ್ಕಾಗಿ ಚಿಂತನೆ ನಡೆಸಿದ್ದರು. ಇದೇ ದಿಕ್ಕಿನಲ್ಲಿ ಸಾಹಿತ್ಯಿಕವಾಗಿ ಕುವೆಂಪು ಮೊದಲಾದವರು ಕಾರ್ಯಪ್ರವ್ರತ್ತ ರಾಗಿದ್ದರು. ಪ್ರಗತಿಶೀಲ ವಲಯದಲ್ಲಿ ಅ.ನ.ಕೃ. ಆದಿಯಾಗಿ ಅನೇಕರು ಈ ಕುರಿತು ತಾತ್ತ್ವಿಕ ತಳಹದಿ ಯನ್ನು ರೂಪಿಸಲು ಪ್ರಯತ್ನಗಳನ್ನು ಮಾಡಿದ್ದನ್ನು ಇಂದು ನಾವು ಸ್ಮರಿಸಲೇಬೇಕು.
ಕೋಣಂದೂರು ಲಿಂಗಪ್ಪನವರು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ ತಮಿಳರಿಂದ ಅಪಮಾನಕ್ಕೆ ಒಳಗಾದರು. ಈ ಅಪಮಾನದ ಪರಿಣಾಮವಾಗಿ ಅವರು ‘ಕರ್ನಾಟಕ ಯುವಜನ ಸಭಾ’ವನ್ನು ಹುಟ್ಟುಹಾಕುವಂತಾಯ್ತು. 1957ರ ವೇಳೆಗೆ ಲೋಹಿಯಾ ಅವರ ಕರೆಯನ್ನು ಅನುಸರಿಸಿ ‘ಅಂಗ್ರೇಜಿ ಹಠಾವೋ’ ಚಳವಳಿ ಆರಂಭಗೊಂಡಿತ್ತು. ಮೈಸೂರಿನಲ್ಲಿ ಕುವೆಂಪು ಅವರು ಸಹ ಈ ಕರೆಗೆ ಸ್ಪಂದಿಸಿದರು. ಇದಕ್ಕೆ ಪ್ರತಿಯಾಗಿ ಇಂಗ್ಲಿಷ್ ಪ್ರಾಧ್ಯಾಪಕರ ರಾಷ್ಟ್ರೀಯ ಸಭೆಯೊಂದು ಮೈಸೂರಿ ನಲ್ಲಿ ನಡೆಯಿತು.
ಇದಕ್ಕೆ ಪ್ರತಿಕ್ರಿಯಿಸಲು ಕೋಣಂದೂರು ಲಿಂಗಪ್ಪ, ಪುರ್ಣಚಂದ್ರ ತೇಜಸ್ವಿ, ಕೆ. ಎಚ್. ಶ್ರೀನಿವಾಸ, ಕಡಿದಾಳ್ ಶಾಮಣ್ಣ ಮೊದಲಾದ ವಿದ್ಯಾರ್ಥಿಗಳಿಗೆ ಕುವೆಂಪು ಪ್ರೇರಣೆ ನೀಡಿದ್ದರು. ಈ ಇಂಗ್ಲಿಷ್ ಪ್ರಾಧ್ಯಾಪಕರಿಗೆ ಪ್ರತಿಕ್ರಿಯಿಸಲು ಇಂಗ್ಲಿಷಿನಲ್ಲಿಯೇ ಪ್ರತಿಭಟನಾ ಕರಪತ್ರಗಳನ್ನು ರಚಿಸುವುದು ಅನಿವಾರ್ಯವಾಯಿತು. ಆಗ ಇಂಗ್ಲಿಷ್ ವಿರುದ್ಧ ಇಂಗ್ಲಿಷಿನಲ್ಲಿಯೇ ಕರಪತ್ರವೊಂದನ್ನು ಬರೆದು ಕೊಟ್ಟವರು ಯು. ಆರ್.ಅನಂತಮೂರ್ತಿ; ಇಂಗ್ಲಿಷ್ ಪ್ರಾಧ್ಯಾಪಕರ ಸಭೆಯಲ್ಲಿ ಕನ್ನಡದ ಯುವಕರು ಈ ಕರಪತ್ರಗಳನ್ನು ಹಂಚುವುದರ ಮೂಲಕ ಕನ್ನಡದ ಪ್ರಾಶಸ್ತ್ಯದ ಕಡೆಗೆ ಗಮನ ಸೆಳೆದಿದ್ದರು.
1963ರ ವೇಳೆಗೆ, ಕನ್ನಡ ನಾಡು ಏಕೀಕೃತವಾಗಿ ಏಳೆಂಟು ವರುಷಗಳಾಗಿದ್ದವು. ಆದರೆ, ಕನ್ನಡಿಗರ ಆಶೋತ್ತರಗಳು ಮಾತ್ರ ಈಡೇರಿರಲಿಲ್ಲ. ಈ ಕುರಿತು ಜಾಗೃತಿ ಮೂಡಿಸಲು ಆ ವರ್ಷದ ನವೆಂಬರ್ ಒಂದರಂದು ಸ್ವಾತಂತ್ರ್ಯೋತ್ಸವದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಲು ಸಂಯುಕ್ತ ರಂಗ ಯೋಜಿಸಿತು. ಅದರಂತೆ 1963ರ ನವೆಂಬರ್ ಒಂದನೇ ತಾರೀಖನ್ನು ರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ರಾಜ್ಯೋತ್ಸವ, ನಾಡಿನ ಎಲ್ಲ ಕನ್ನಡಪರ ಸಂಘಟನೆಗಳನ್ನೂ ಬೆಂಗಳೂರಿನ ಧರ್ಮಾಂಬುಽ ಕೆರೆಯ ಮೈದಾನದಲ್ಲಿ ಸೇರುವಂತೆ ಮಾಡಿತು. ನಂತರ ಪ್ರತಿ ವರ್ಷವೂ ಈ ಆಚರಣೆ ಜಾರಿಯಲ್ಲಿ ಉಳಿಯಿತು. ಕನ್ನಡಕ್ಕಾಗಿ ದುಡಿದ ರಾಮಮೂರ್ತಿ ಅವರ ಉತ್ಸಾಹ, ಅಭಿಮಾನಗಳನ್ನು ಕಂಡು ಅವರನ್ನು ‘ಕನ್ನಡ ಸೇನಾನಿ’ ಎಂದು ಕರೆಯಲಾಯಿತು.
ಏಕೆಂದರೆ ಕನ್ನಡ ಕಾರ್ಯಕರ್ತರ ಮೊಕದ್ದಮೆಗಳಲ್ಲಿ ಸದಾ ಇವರೇ ಜಾಮೀನುದಾರರು. ಕನ್ನಡದ ಕಾರಣಕ್ಕಾಗಿ ಇವರು ಅನೇಕ ಮೊಕದ್ದಮೆಗಳನ್ನೂ ಎದುರಿಸಿದರು. ಬೆಂಗಳೂರಿನಲ್ಲಿ ಕನ್ನಡತನ ವನ್ನು ಮೂಡಿಸುವುದಕ್ಕೆ ಕನ್ನಡ ಯುವಜನ ಸಭಾದ ವೇದಿಕೆಯನ್ನು ಬಳಸಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಚಳವಳಿ ಹೂಡುವುದಕ್ಕೆ ಮೊದಲು, ನಾಡಿನ ಇತರ ಜಿಲ್ಲೆ, ತಾಲೂಕುಗಳಲ್ಲಿ ಪ್ರವಾಸ ಮಾಡಿ, 120ಕ್ಕೂ ಹೆಚ್ಚಿನ ಶಾಖೆಗಳನ್ನು ತೆರೆದು ಸಂಘಟಿಸಿದ್ದು ಗಮನಾರ್ಹ ಸಂಗತಿ.
1959ರ ವೇಳೆಗೆ ಕನ್ನಡದ ಸ್ಥಿತಿಗತಿಗಳ ಸುಧಾರಣೆಗಾಗಿ ಕನ್ನಡಿಗರು ಸಂಘಟಿತರಾಗುವುದು ಅನಿವಾರ್ಯ ಎಂಬ ವಾತಾವರಣವನ್ನು ಮೂಡಿಸಲಾಗಿತ್ತು. ಇದಕ್ಕೆ ಸಾಹಿತಿ ಅ.ನ.ಕೃ. ಅವರ ಪ್ರಯತ್ನ, ಪ್ರವಾಸ ಕಾರ್ಯಕ್ರಮಗಳು ಹೆಚ್ಚಿನ ಹುರುಪನ್ನು ತಂದಿದ್ದವು. 1960ರ ಮಣಿಪಾಲದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅ.ನ.ಕೃ. ಅವರು, ತಮ್ಮ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಕನ್ನಡಿಗರ ಆವಶ್ಯಕತೆಯನ್ನು ಎತ್ತಿ ಹೇಳಿದ್ದರು.
ಸಮ್ಮೇಳನದಲ್ಲಿದ್ದ ಕನ್ನಡ ಯುವಜನ ಸಭಾದ ಯುವಕರು, ಕನ್ನಡ ಯುವಜನ ಸಭೆಯನ್ನು ವರಕವಿ ಬೇಂದ್ರೆ ಅವರಿಂದ ವಿಧ್ಯುಕ್ತವಾಗಿ ಉದ್ಘಾಟನೆ ಮಾಡಿಸಿದ್ದು (28-12-1960) ಒಂದು ದಾಖಲೆ. ಲಿಂಗಪ್ಪನವರು ಸಭಾದ ಸಂಚಾಲಕರಾಗಿ ನಾಡಿನ ವಿವಿಧ ಕಡೆಗಳಲ್ಲಿ ಅ.ನ.ಕೃ. ಅವರಿಂದ ಭಾಷಣ ಮಾಡಿಸಿ ಜಾಗೃತಿ ಮೂಡಿಸಿದರು.
ಮುಂದೆ ಬೆಂಗಳೂರಿನಲ್ಲಿ ಸಭೆ ಸೇರಿ ಎಂ.ವಿ.ಸುಬ್ಬರಾಯರ ಸಾಹಿತ್ಯ ಕುಟೀರದ ಅಡಿಯಲ್ಲಿ ಕನ್ನಡ ಕೆಲಸದ ರೂಪರೇಷೆಗಳನ್ನು ಸಿದ್ಧಪಡಿಸಲಾಯಿತು. ಇದರಲ್ಲಿ ಬಹುಪಾಲು ಹಿರಿಯ ಸಾಹಿತಿ, ಕಲಾವಿದರು ಭಾಗವಹಿಸಿದ್ದರು. ಸಭಾದವರು ಹಿರಿಯರ ಸಹಕಾರ ಪಡೆದು ಆಲೂರು ವೆಂಕಟ ರಾಯರ ಕರೆಗೆ ಓಗೊಟ್ಟು ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವವನ್ನು (1961) ಆಚರಿಸಿದ್ದು ಗಮನಾರ್ಹ. ಅಲ್ಲದೆ ಬೆಂಗಳೂರಿನಲ್ಲಿ ಕನ್ನಡಿಗರನ್ನು ಸಂಘಟಿಸಿ ಪ್ರತಿಕ್ರಿಯಿಸುವಂತೆ ಮಾಡಲು ಸಭಾದ ಯುವಕರು ಕನ್ನಡ ದಿನವನ್ನು ಆಚರಿಸಲು ಕರೆಕೊಟ್ಟರು.
ಇದಾದ ನಂತರ ದಾವಣಗೆರೆಯಲ್ಲಿ ಬೃಹತ್ ಸಮಾವೇಶವೊಂದನ್ನು ನಡೆಸಲು ಸಿದ್ಧತೆಗಳನ್ನು ಮಾಡಲಾಯಿತು. 1962ರಲ್ಲಿ ಬೆಂಗಳೂರಿನಲ್ಲಿ ಸಭಾದ ಮೊದಲ ಬೃಹತ್ ಅಧಿವೇಶನ ನಡೆಯಿತು. ಕನ್ನಡ ಭುವನೇಶ್ವರಿ ಬಾವುಟವನ್ನು ಹಾರಿಸುವುದರೊಂದಿಗೆ ಉದ್ಘಾಟನೆಗೊಂಡ ಈ ಬೃಹತ್ ಅಧಿವೇಶನ, ಕನ್ನಡ ಚಳವಳಿಯ ಚರಿತ್ರೆಯಲ್ಲಿ ಮುಖ್ಯ ಸ್ಥಾನ ಪಡೆಯುತ್ತದೆ.
ಇಲ್ಲಿ ಕನ್ನಡ, ಕನ್ನಡಿಗ, ಕರುನಾಡಿನ ಹಿತಕ್ಕೆ ಸಂಬಂಧಿಸಿದಂತೆ 15 ನಿರ್ಣಯಗಳನ್ನು ಮಂಡಿಸಿ ಸ್ವೀಕರಿಸಲಾಯಿತು. ನಾಡಿನ ಗಡಿಗಳು, ರೈಲ್ವೆ, ಪ್ರಶಸ್ತಿ, ಕನ್ನಡ ಬೆರಳಚ್ಚು ಯಂತ್ರ, ವಿಶ್ವವಿದ್ಯಾ ಲಯಗಳಲ್ಲಿನ ಶಿಕ್ಷಣ, ಮಾಧ್ಯಮ, ಸಾಂಸ್ಕೃತಿಕ ವೇದಿಕೆಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ, ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ, ಆರ್ಥಿಕ ಅಭಿವೃದ್ಧಿ ಮುಂತಾದ ಎಲ್ಲ ವಿಚಾರಗಳೂ ನಿರ್ಣಯಗಳಲ್ಲಿ ಸೇರಿದ್ದವು.
ಆದರೆ, ಬೆಂಗಳೂರಿನ ಚಾಮರಾಜಪೇಟೆಯ ರಾಮಸೇವಾ ಮಂಡಲಿಯವರು ತಮ್ಮ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಕಲಾವಿದರನ್ನು ಕರೆಸದೆ, ಸಭೆಯ ನಿರ್ಣಯಗಳಿಗೆ ಸೆಡ್ಡು ಹೊಡೆದಿದ್ದರು. ಮದರಾಸಿನಿಂದ ಎಂ.ಎಸ್. ಸುಬ್ಬುಲಕ್ಷ್ಮಿಯವರನ್ನು ಕರೆಸಿ ಸಂಗೀತ ಕಛೇರಿ ಯನ್ನು ನಡೆಸಿ ಕನ್ನಡಪರ ಕಾರ್ಯಕರ್ತರ ಪ್ರತಿಭಟನೆಗೆ ಗುರಿಯಾಗುವಂತೆ ಮಾಡಿತು.
ಶಾಂತ ರೀತಿಯಲ್ಲಿ ಕನ್ನಡದ ಕಳಕಳಿಯನ್ನು ಪ್ರದರ್ಶಿಸುತ್ತಿದ್ದ ಕಾರ್ಯಕರ್ತರನ್ನು ಇತರ ಭಾಷಿಕ ಕಿಡಿಗೇಡಿಗಳು ಕೆಣಕಿದರು. ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆದು, ಪೊಲೀಸರಿಂದ ಲಾಠಿಪ್ರಹಾರವೂ ಆಯಿತು. ತಮಿಳು ಪತ್ರಿಕೆಗಳು ಇದನ್ನು ಭಾಷಿಕ ದ್ವೇಷವೆಂದು ತಿರುಚಿ ಬರೆದವು.
ಕನ್ನಡಿಗರು ಸಂಕುಚಿತ ಮನೋಭಾವದವರು ಎಂಬ ಪಟ್ಟ ಕಟ್ಟಲು ಪ್ರಯತ್ನಿಸಿದ ಈ ಘಟನೆ, ಮುಂದೆ ಕನ್ನಡ ಚಳವಳಿಯನ್ನು ಭಿನ್ನ ಸ್ವರೂಪದಲ್ಲಿ ಸಂಯೋಜಿಸಲು ಎಡೆಮಾಡಿಕೊಟ್ಟಿತು. ಕನ್ನಡಕ್ಕಾಗಿ, ಕರುನಾಡಿನ ಅಸ್ಮಿತೆಗಾಗಿ ಹೋರಾಡಿದವರನ್ನು ಸ್ಮರಿಸುವುದಕ್ಕಾಗಿಯಾದರೂ, ಕನ್ನಡ ಪರ ಚಳವಳಿಗಳ ಕುರಿತು, ಗೋಕಾಕ್, ಸರೋಜಿನಿ ಮಹಿಷಿ ಮುಂತಾದ ವರದಿಗಳ ಕುರಿತು ಇನ್ನೂ ಸ್ವಲ್ಪ ಬರೆಯಬೇಕಿದೆ, ಮುಂದಿನ ವಾರ ಮುಂದುವರಿಯುತ್ತೇನೆ.