ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Srivathsa Joshi Column: ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ... ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಸುವರದರಂತೆ ಕಾಣುವನು ಎಂದಿದ್ದಾರೆ ನಿಜಗುಣ ಶಿವಯೋಗಿಗಳು. ಭಗವಂತನು ಭಕ್ತರ ಮನೋಭಾವ ಮತ್ತು ಭಕ್ತಿಯ ತೀವ್ರತೆಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಸಾಕ್ಷಾತ್ಕಾರವಾಗುತ್ತಾನೆ.

ಶಿವ ಮಾನಸಪೂಜೆಯ ಮೆರುಗು, ಭಕ್ತಿಯ ಒಳ-ಹೊರಗು

-

ತಿಳಿರುತೋರಣ

ಶ್ರೀ ಶಂಕರಾಚಾರ್ಯರು ರಚಿಸಿದ ಸ್ತೋತ್ರರತ್ನಗಳ ಪೈಕಿ ಅನ್ಯಾದೃಶ ಹೊಳಪಿನ ‘ಶಿವ ಮಾನಸಪೂಜಾ ಸ್ತೋತ್ರ’ ತುಂಬ ಇಷ್ಟವಾಗುತ್ತದೆ. ಇದು ಅಂಥಿಂಥದಲ್ಲ, ಅಧ್ಯಾತ್ಮದ ಆಳ-ಅಗಲ-ಎತ್ತರಗಳ ಪರಿಮಿತಿಯವರೆಗೂ, ಬಹುಶಃ ಅದರಾಚೆಗೂ, ಅರ್ಥವಿಸ್ತಾರ ವುಳ್ಳದ್ದು ಅಂತನಿಸುವುದು. ಈ ಸ್ತೋತ್ರದ ಸಾಹಿತ್ಯವೇನೂ- ಶಂಕರಾ ಚಾರ್ಯರ ಬೇರೆ ಕೆಲವು ರಚನೆಗಳಿಗೆ ಹೋಲಿಸಿದರೆ- ಕಬ್ಬಿಣದ ಕಡಲೆ ಯಲ್ಲ. ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವಿಲ್ಲದವರೂ ಪರಿಚಿತ ಶಬ್ದಗಳ ಮೂಲಕ ವಾಚ್ಯಾರ್ಥವನ್ನು ತಿಳಿದು ಕೊಳ್ಳುವುದಕ್ಕೆ ಕಷ್ಟವೇನಿಲ್ಲ.

ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ... ಹರನ ಭಕ್ತರಿಗೆ ಹರ ಹರಿಯ ಭಕ್ತರಿಗೆ ಹರಿ ನರರೇನು ಭಾವಿಸುವರದರಂತೆ ಕಾಣುವನು ಎಂದಿದ್ದಾರೆ ನಿಜಗುಣ ಶಿವಯೋಗಿಗಳು. ಭಗವಂತನು ಭಕ್ತರ ಮನೋಭಾವ ಮತ್ತು ಭಕ್ತಿಯ ತೀವ್ರತೆಗೆ ತಕ್ಕಂತೆ ವಿವಿಧ ರೂಪಗಳಲ್ಲಿ ಸಾಕ್ಷಾತ್ಕಾರವಾಗುತ್ತಾನೆ. ದೇವರದು ಒಂದೇ ನಿರ್ದಿಷ್ಟ ರೂಪ ಅಲ್ಲವೆಂದು ಈ ಸಾಲುಗಳ ಒಟ್ಟು ತಾತ್ಪರ್ಯ.

ನನಗಿದರಲ್ಲಿ ತುಂಬ ಗಾಢತೆಯುಳ್ಳ ಸಾಲು ಅಂತನಿಸುವುದು ‘ಅವರವರ ಭಕುತಿಗೆ’ ಎಂಬುದು. ಮನುಷ್ಯರಲ್ಲಿ ಹೇಗೆ ಒಬ್ಬೊಬ್ಬರ ಬೆರಳಚ್ಚು ಕೂಡ ಅನನ್ಯವಾಗಿರುತ್ತದೆ, ಅಥವಾ ಹೇಗೆ ಒಬ್ಬೊಬ್ಬರ ಕಣ್ಣಿನ ಪಾಪೆ ಕೂಡ ಅನನ್ಯವಾಗಿರುತ್ತದೆ ಅಂತೆಲ್ಲ ವಿಜ್ಞಾನದ ಮೂಲಕ ಕಂಡುಹಿಡಿಯಲಾಗಿದೆಯೋ ಅದೇ ರೀತಿ ಭಗವಂತನ ಬಗೆಗಿನ ಒಲವು-ನಿಲುವುಗಳೂ; ಅದನ್ನೇ ಭಕ್ತಿ ಎನ್ನುವುದಾದರೆ ಭಕ್ತಿ- ಒಬ್ಬೊಬ್ಬರದೂ ಒಂದೊಂದು ರೀತಿಯಲ್ಲಿರುತ್ತದೆ.

ಆದ್ದರಿಂದಲೇ ನಮಗೆ ಸುತ್ತಮುತ್ತಲೂ ಭಕ್ತಿಯ ಬಹುವಿಧಗಳು ಬಹುರೂಪಗಳು ಕಂಡು ಬರುತ್ತಲೇ ಇರುತ್ತವೆ. ಪ್ರಾಥಮಿಕ ಶಾಲೆಯ ವಿಜ್ಞಾನ ತರಗತಿಯಲ್ಲಿ ಪ್ರಯೋಗದ ಮೂಲಕ ಕಂಡುಕೊಂಡಿದ್ದೆವಲ್ವಾ- ನೀರಿಗೆ ತನ್ನದೇ ಆದ ಆಕಾರವಿರುವುದಿಲ್ಲ, ಯಾವ ಪಾತ್ರೆಯಲ್ಲಿ ತುಂಬಿಸುತ್ತೇವೋ ಆ ಪಾತ್ರೆಯ ಆಕಾರವನ್ನು ಪಡೆಯುತ್ತದೆ ಎಂದು? ಭಗವಂತನೂ ನೀರಿನಂತೆಯೇ. ಯಾವ ಭಕ್ತನೊಳಗೆ ತುಂಬಿಕೊಳ್ಳುತ್ತಾನೋ ಆ ಆಕಾರ/ರೂಪ ಪಡೆದುಕೊಳ್ಳುತ್ತಾನೆ. ಭಕ್ತಿಯೂ ನೀರಿನಂತೆಯೇ. ಯಾವ ಭಕ್ತನೊಳಗೆ ತುಂಬಿ ಕೊಂಡಿದೆಯೋ ಅದೇ ರೀತಿಯನ್ನು ಪಡೆದುಕೊಳ್ಳುತ್ತದೆ!

ಈ ಹಿನ್ನೆಲೆಯಲ್ಲೇ ನನಗೆ ಶಂಕರಾಚಾರ್ಯವಿರಚಿತ ಸ್ತೋತ್ರರತ್ನಗಳ ಪೈಕಿ ಅನ್ಯಾದೃಶ ಹೊಳಪಿನ ‘ಶಿವ ಮಾನಸಪೂಜಾ ಸ್ತೋತ್ರ’ ತುಂಬ ಇಷ್ಟವಾಗುವುದು. ಇದು ಅಂಥಿಂಥದಲ್ಲ ಅಧ್ಯಾತ್ಮದ ಆಳ-ಅಗಲ-ಎತ್ತರಗಳ ಪರಿಮಿತಿಯವರೆಗೂ, ಬಹುಶಃ ಅದರಾಚೆಗೂ, ಅರ್ಥವಿಸ್ತಾರವುಳ್ಳದ್ದು ಅಂತನಿಸುವುದು. ಈ ಸ್ತೋತ್ರದ ಸಾಹಿತ್ಯವೇನೂ- ಶಂಕರಾ ಚಾರ್ಯರ ಬೇರೆ ಕೆಲವು ರಚನೆಗಳಿಗೆ ಹೋಲಿಸಿದರೆ- ಕಬ್ಬಿಣದ ಕಡಲೆಯಲ್ಲ.

ಇದನ್ನೂ ಓದಿ: Srivathsa Joshi Column: ಗ್ವಾಕಮೂಲಿಯ ಮೂಲವಸ್ತುವಿನ ಹೆಸರಿನ ಮೂಲ

ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವಿಲ್ಲದವರೂ ಪರಿಚಿತ ಶಬ್ದಗಳ ಮೂಲಕ ವಾಚ್ಯಾರ್ಥ ವನ್ನು ತಿಳಿದುಕೊಳ್ಳುವುದಕ್ಕೆ ಕಷ್ಟವೇನಿಲ್ಲ. ಇಡೀ ಸ್ತೋತ್ರದಲ್ಲಿ ನಾಲ್ಕು ಮತ್ತೊಂದು ಶ್ಲೋಕಗಳಷ್ಟೇ ಇರುವುದು. ಛಂದಸ್ಸಿನ ದೃಷ್ಟಿಯಿಂದಲೂ, ಮೊದಲ ನಾಲ್ಕು ಶ್ಲೋಕಗಳು ಜನಪ್ರಿಯ ಶಾರ್ದೂಲವಿಕ್ರೀಡಿತ ವೃತ್ತದಲ್ಲಿದ್ದರೆ ಕೊನೆಯ ಶ್ಲೋಕವೂ ಅಷ್ಟೇ ಚಿರಪರಿಚಿತ ಮಾಲಿನೀ ವೃತ್ತದಲ್ಲಿ ಇರುವುದು, ಇದರ ಪಠನ-ಗಾಯನ-ಮನನಗಳನ್ನು ಅತಿಸುಲಭ ವಾಗಿಸಿದೆ.

ಸ್ತೋತ್ರದ ಪೂರ್ಣಪಠ್ಯ ಮತ್ತು ಭಾವಾನುವಾದ ಹೀಗಿದೆ:

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ

ನಾನಾರತ್ನ ವಿಭೂಷಿತಂ ಮೃಗಮದಾ ಮೋದಾಂಕಿತಂ ಚಂದನಮ್|

ಜಾತೀ ಚಂಪಕ ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ

ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ ||

ಸೌವರ್ಣೇ ನವರತ್ನಖಂಡ ರಚಿತೇ ಪಾತ್ರೇ ಘೃತಂ ಪಾಯಸಂ

ಭಕ್ಷ್ಯಂ ಪಂಚವಿಧಂ ಪಯೋದಽಯುತಂ ರಂಭಾಫಲಂ ಪಾನಕಮ್|

ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರ ಖಂಡೋಜ್ಜ್ವಲಂ

ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು||

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ

ವೀಣಾ ಭೇರಿ ಮೃದಂಗ ಕೋಹಲಕಲಾ ಗೀತಂ ಚ ನೃತ್ಯಂ ತಥಾ|

ಸಾಷ್ಟಾಂಗಂ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ಸಮಸ್ತಂ ಮಯಾ

ಸಂಕಲ್ಪೇನ ಸಮರ್ಪಿತಂ ತವ ವಿಭೋ ಪೂಜಾಂ ಗೃಹಾಣ ಪ್ರಭೋ||

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ

ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿ ಸ್ಥಿತಿಃ|

ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ

ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್||

ಕರ ಚರಣ ಕೃತಂ ವಾ ಕಾಯಜಂ ಕರ್ಮಜಂ ವಾ

ಶ್ರವಣ ನಯನಜಂ ವಾ ಮಾನಸಂ ವಾಧಿಪರಾಧಮ್|

ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ

ಜಯ ಜಯ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

“ರತ್ನಖಚಿತವಾದ ಆಸನವನ್ನು ನಿನಗಾಗಿ ಕಲ್ಪಿಸಿಟ್ಟಿದ್ದೇನೆ. ಹಿಮವತ್ಪರ್ವತದಿಂದ ಹರಿಯುವ ಶುದ್ಧ ನೀರನ್ನು ನಿನ್ನ ಸ್ನಾನಕ್ಕೆಂದು ತಂದಿದ್ದೇನೆ. ನಿನಗೆ ತೊಡಿಸಲು ದಿವ್ಯ ವಾದ ವಸ್ತ್ರಗಳು ಮತ್ತು ವಜ್ರವೈಡೂರ್ಯಾದಿ ಆಭರಣಗಳನ್ನು ಸಜ್ಜುಗೊಳಿಸಿದ್ದೇನೆ.

ಅಂಗಲೇಪನಕ್ಕಾಗಿ ಕಸ್ತೂರಿಯ ಘಮ ಸೇರಿಸಿದ ಚಂದನ, ಜಾಜಿ ಮಲ್ಲಿಗೆ ಸಂಪಿಗೆಯೇ ಮೊದಲಾದ ಹೂವುಗಳು, ಬಿಲ್ವಪತ್ರೆ, ಧೂಪ, ದೀಪ- ಎಲ್ಲವನ್ನೂ ಹೃತ್ಪೂರ್ವಕವಾಗಿ, ನನ್ನ ಹೃತ್ಕಲ್ಪನೆಯಲ್ಲೇ ಸಿದ್ಧಗೊಳಿಸಿದ್ದೇನೆ.

Shiva

ನವರತ್ನಗಳ ಮೆರುಗಿನಿಂದ ಹೊಳೆಯುವ ಬಂಗಾರದ ಬೋಗುಣಿಯಲ್ಲಿ ಪಾಯಸ, ಹಾಲು-ತುಪ್ಪಗಳನ್ನು ಸೇರಿಸಿ ಮಾಡಿದ ಐದು ವಿಧದ ಭಕ್ಷ್ಯಗಳು, ಬಾಳೆಹಣ್ಣಿನ ರಸಾಯನ, ತರಕಾರಿ-ಕಂದಮೂಲಗಳಿಂದ ಮಾಡಿದ ರುಚಿಕರ ಪದಾರ್ಥಗಳು, ಕುಡಿಯಲು ಕರ್ಪೂರ ಸುಗಂಧಯುಕ್ತ ಜಲ, ಮೆಲ್ಲಲು ಪರಿಮಳದ್ರವ್ಯಭರಿತ ತಾಂಬೂಲ-ಇವೆಲ್ಲವೂ ನಿನ್ನ ಸೇವನೆಗಾಗಿ.

ಅಷ್ಟೇಅಲ್ಲ, ವಿಶ್ರಾಂತಿಯ ವೇಳೆ ನಿನ್ನ ಸೇವೆಗಾಗಿ ಛತ್ರ-ಚಾಮರಗಳಿವೆ, ಗಾಳಿಯಾಡಿಸಲು ಬೀಸಣಿಕೆಯಿದೆ, ಮುಖದರ್ಶನಕ್ಕೆ ಕನ್ನಡಿಯಿದೆ. ನಿನ್ನ ಮನಸ್ಸಿನ ರಂಜನೆಗೆಂದು ವೀಣೆ, ಮೃದಂಗ, ಢಕ್ಕೆ, ಡಮರುಗಳೊಂದಿಗೆ ಗೀತನೃತ್ಯ ಗೋಷ್ಠಿಯನ್ನೂ ಮಂತ್ರಘೋಷವನ್ನೂ ಆಯೋಜಿಸಿದ್ದೇನೆ.

ನಾನು ಭಕ್ತಿಯಿಂದ, ಮನಃಶಕ್ತಿಯಿಂದ ಅರ್ಪಿಸುತ್ತಿರುವ ಇವೆಲ್ಲವನ್ನೂ ದಯಮಾಡಿ ಸ್ವೀಕರಿಸು. ಶಂಭೋಶಂಕರನೇ ನಿನಗೆ ಸಾಷ್ಟಾಂಗ ವಂದನೆ ಸಮರ್ಪಿಸುತ್ತೇನೆ. ನನ್ನ ಆತ್ಮ ವೆಂದರೆ ನೀನೇ. ನನ್ನ ಬುದ್ಧಿಯೇ ಗಿರಿಜೆ. ನನ್ನ ಪಂಚಪ್ರಾಣಗಳು ನಿನ್ನ ಕಿಂಕರರು. ನನ್ನ ಶರೀರ ನಿನ್ನ ಮಂದಿರ.

ಇಂದ್ರಿಯಭೋಗವೇ ನಿನ್ನ ಪೂಜೆ. ನಿದ್ರೆಯೇ ಸಮಾಧಿ, ನಡಿಗೆಯೇ ಪ್ರದಕ್ಷಿಣೆ. ನನ್ನ ಮಾತುಗಳೆಲ್ಲ ನಿನ್ನದೇ ಸ್ತೋತ್ರವಾದರೆ ನಾನು ಮಾಡುವುದೆಲ್ಲವೂ ನಿನ್ನ ಆರಾಧನೆ! ಇದರಲ್ಲಿ ನನ್ನ ಕೈ, ಕಾಲು, ದೇಹ, ಮಾತು, ಕಿವಿ, ಕಣ್ಣು ಅಥವಾ ಮನಸ್ಸಿನಿಂದ ತಿಳಿದೋ ತಿಳಿಯದೆಯೋ ಏನೇ ತಪ್ಪು ಸಂಭವಿಸಿದ್ದರೂ ಅದೆಲ್ಲವನ್ನೂ ಕರುಣಾಸಾಗರನಾದ ನೀನು ಕ್ಷಮಿಸಬೇಕು".

ಇದು ಷೋಡಷೋಪಚಾರಗಳ ವೈಭವದ ಪೂಜೆಯಲ್ಲ, ಭಕ್ತನೊಬ್ಬ ತನ್ನ ಮನಸ್ಸಿನಲ್ಲೇ ಭಗವಂತನ ಆರಾಧನೆ ಮಾಡುವ ಕಲ್ಪನೆ. ಈ ಸ್ತೋತ್ರದಲ್ಲಿ ಹೇಳಿರುವ ಅಷ್ಟೂ “ನಿನಗೋ ಸ್ಕರ ಅದನ್ನು ಮಾಡಿಟ್ಟಿದ್ದೇನೆ, ಇದನ್ನು ಮಾಡಿಟ್ಟಿದ್ದೇನೆ"ಗಳು ಭೌತಿಕವಲ್ಲ. ಕೇವಲ ಆ ಭಕ್ತನ ಮಾನಸಿಕ ಸೃಷ್ಟಿ. ಆದ್ದರಿಂದಲೇ ವಿಭಿನ್ನವೂ ವಿಶಿಷ್ಟವೂ ಆದ ಈ ಸ್ತೋತ್ರ, ಬಾಹ್ಯಾಡಂಬರ ಮತ್ತು ತೋರಿಕೆಯ ಚಾಪಲ್ಯಗಳೇ ಅಧಿಕವಾಗಿ ಪೊಳ್ಳು ಭಕ್ತಿಯನ್ನು ಪ್ರದರ್ಶಿಸುವವರ ಕಣ್ತೆರೆಸುವಂಥದು.

ಭಕ್ತಿಯೆಂದರೆ devotion ಮುಖ್ಯವೇ ಹೊರತು demonstration ಅಲ್ಲ ಎನ್ನುವುದನ್ನು ಶಂಕರಾಚಾರ್ಯರು ಸೋದಾಹರಣವಾಗಿ ಪ್ರತಿಪಾದಿಸಿದ್ದಾರೆ ಇದರಲ್ಲಿ. ಹಾಗೆ ನೋಡಿದರೆ ಬಸವಣ್ಣನವರು “ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಯ್ಯ ಬಡವನು... ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ..." ಎಂದಿದ್ದು ಕೂಡ ಇದೇ ಭಾವದಲ್ಲಿ ಅಲ್ಲವೇ? ಶಿವನಿಗೆ ಆಡಂಬರದ ಭಕ್ತಿ ಅವಶ್ಯವಿಲ್ಲ, ಇಷ್ಟವಾಗು ವುದೂ ಇಲ್ಲ; ಆರ್ದ್ರವಾದ, ಅಂತಃಸತ್ವದ ಅತಿಸರಳ ಭಕ್ತಿಯಿಂದ ಶಿವ ಸಂತೃಪ್ತ.

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ; ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ; ನಾದವ ನುಡಿಸಿದ ರಾವಣಂಗೆ ಅರೆ ಆಯುಷ್ಯವಾಯ್ತು, ವೇದವನೋದಿದ ಬ್ರಹ್ಮನ ಶಿರ ಹೋಯಿತು. ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!

ಶಿವ ಮಾನಸಪೂಜಾ ಸ್ತೋತ್ರ ಇಷ್ಟವಾಗುವುದಕ್ಕೆ, ಆಪ್ತವೆನಿಸುವುದಕ್ಕೆ, ನನಗೆ ವ್ಯಕ್ತಿಗತ ಕಾರಣವೂ ಒಂದಿದೆ. 1970ರ ದಶಕದಲ್ಲಿ ಮೊತ್ತಮೊದಲ ಬಾರಿಗೆ ನಮ್ಮ ಮನೆಗೆ ಟೇಪ್ ರೆಕಾರ್ಡರ್ ತಂದಿದ್ದರು ಆಗಷ್ಟೇ ಮುಂಬೈಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ ನನ್ನ ಅಣ್ಣ. ಅದರಲ್ಲಿ ನಾವೇ ಮಾತಾಡಿದ್ದನ್ನು, ಹಾಡಿದ್ದನ್ನು, ನಗಾಡಿದ್ದನ್ನು ಧ್ವನಿಮುದ್ರಿಸಿ ಮತ್ತೆ ನಾವೇ ಕೇಳಬಹುದೆಂಬ ಸಂಗತಿ ಆಗಿನ ಮಟ್ಟಿಗೆ ನಮಗೆಲ್ಲ ತುಂಬ ಅಚ್ಚರಿಯದು.

ಹಾಗೆ ತಂದಿದ್ದ ಟೇಪ್ ರೆಕಾರ್ಡರ್‌ನಲ್ಲಿ ನಮ್ಮ ಮನೆಮಂದಿಯ ಮಾತುಕತೆ, ಹಾಡು-ಹರಟೆ ನಗು-ಕೇಕೆಗಳನ್ನು ಧ್ವನಿಮುದ್ರಿಸಿಕೊಂಡಿದ್ದೆವು. ಅದನ್ನೇ ಮತ್ತೆಮತ್ತೆ ಕೇಳಿ ಸಂತೋಷ ಪಟ್ಟಿದ್ದೆವು. ಅಂಥ ಮಕ್ಕಳಾಟಗಳಲ್ಲೆಲ್ಲ ಮೂಗು ತೂರಿಸದ, ತನ್ನ ಪಾಡಿಗೆ ತಾನು ಯಂತ್ರದಂತೆ ಮನೆಗೆಲಸ ಮಾಡಿಕೊಂಡಿರುತ್ತಿದ್ದ ಅಮ್ಮನನ್ನೂ ಯಾವ್ದಾದ್ರೂ ಹಾಡುಹಸೆಯನ್ನೋ ಪುರಾಣಕಥೆಯನ್ನೋ ಹೇಳುವಂತೆ ಪೀಡಿಸಿದ್ದೆವು.

ಮೊದಲು ಒಲ್ಲೆನೆಂದ ಅವರು ಕೊನೆಗೂ ನಮ್ಮ ಒತ್ತಾಯಕ್ಕೆ ಮಣಿದು, ತುಪ್ಪದದೀಪಕ್ಕೆ ಬತ್ತಿ ಹೊಸೆಯುತ್ತಿರುವಾಗಲೇ ಈ ‘ರತ್ನೈಃ ಕಲ್ಪಿತಮಾಸನಂ ಹಿಮಜಲೈಃ...’ ಸ್ತೋತ್ರ ಹೇಳಿ ಅದರ ಧ್ವನಿಮುದ್ರಣಕ್ಕೆ ಒಪ್ಪಿದ್ದರು. ಅದು ತುಂಬ ಚೆನ್ನಾಗಿ ಮೂಡಿಬಂದಿತ್ತು ಕೂಡ. ಆಗ ಆ ಸ್ತೋತ್ರದ ವಿಶೇಷತೆಯೇನೂ ನನಗಂತೂ ಖಂಡಿತ ಗೊತ್ತಿರಲಿಲ್ಲ.

ಏಕೆಂದರೆ ನಾವು ಚಿಕ್ಕಮಕ್ಕಳು ದಿನಾ ಬಾಯಿಪಾಠ ಹೇಳುತ್ತಿದ್ದ ರಾಮರಕ್ಷಾ, ಶುಭಂ ಕರೋತಿ ಕಲ್ಯಾಣಂ ಸ್ತೋತ್ರಗಳಲ್ಲಿ ಅದು ಸೇರಿರಲಿಲ್ಲ. ಆದರೆ ಅಮ್ಮನ ಧ್ವನಿ ಎಂಬ ಕಾರಣಕ್ಕಾಗಿ, ಕ್ಯಾಸೆಟ್ ಹಳತಾಗಿ ಹಾಳಾಗುತ್ತದೆಂದು ದಶಕಗಳ ನಂತರ ಅದನ್ನು ಕ್ಯಾಸೆಟ್‌ ನಿಂದ ಡಿಜಿಟಲ್ ರೂಪಕ್ಕೆ ಬದಲಾಯಿಸಿ ಸಂಗ್ರಹಿಸಿಡಲಾಯ್ತು. ಈಗ ಅಮ್ಮ ನಮ್ಮೊಡ ನಿಲ್ಲ. ಅವರ ಧ್ವನಿ ಈ ಸ್ತೋತ್ರವಾಗಿ ನಮ್ಮೊಡನಿದೆ! ಪ್ರತಿವರ್ಷ ಅಮ್ಮನ ಪುಣ್ಯತಿಥಿ ಯಂದು, ಮತ್ತು ನೆನಪಾಗುವ ಯಾವುದೇ ದಿನವಾದರೂ, ನಮ್ಮ ಕೌಟುಂಬಿಕ ವಾಟ್ಸ್ಯಾಪ್ ಗ್ರೂಪಲ್ಲಿ ಅಮ್ಮನ ಧ್ವನಿಯಲ್ಲಿ ‘ರತ್ನೈಃ ಕಲ್ಪಿತಮಾಸನಂ...’ ಮೊಳಗುತ್ತದೆ, ಎಲ್ಲರ ಕಣ್ಣುಗಳನ್ನು ತೇವವಾಗಿಸುತ್ತದೆ.

ಇರಲಿ, ಮತ್ತೆ ಈ ಸ್ತೋತ್ರದ ಆಧ್ಯಾತ್ಮಿಕ ವಿಶೇಷತೆಗೆ ಬಂದರೆ, ಇನ್ನೊಂದು ಅನನ್ಯ ಅಂಶ ವನ್ನೂ ನಾವಿದರಲ್ಲಿ ಗಮನಿಸಬಹುದು. ಸಾಮಾನ್ಯವಾಗಿ ದೇವರ ಸ್ತೋತ್ರಗಳಲ್ಲಿ ಮೊದಲು ದೇವರ ಪ್ರಶಂಸೆ, ತದನಂತರ ಅವನ ಮುಂದೆ ಬೇಡಿಕೆಗಳ ಪಟ್ಟಿ ಸಲ್ಲಿಸುವಂತೆ ಇರುವುದೇ ಹೆಚ್ಚು. ನಮ್ಮ ವ್ಯಾವಹಾರಿಕ ಜೀವನದಲ್ಲೂ ಇನ್ನೊಬ್ಬರಿಗೆ ಹೊಗಳಿಕೆಯ ಬೆಣ್ಣೆ ಹಚ್ಚಿ, ಅಥವಾ ಲಂಚದ ತುಪ್ಪ ಸವರಿ ನಮ್ಮ ಕಾರ್ಯಸಾಧನೆ ಸುಗಮವಾಗಿಸುವ ದಾರಿ ಮಾಡಿಕೊಳ್ಳುತ್ತೇವಲ್ಲ, ಆ ರೀತಿ. ಇನ್ನು ಕೆಲವು ಸ್ತೋತ್ರಗಳಲ್ಲಿ ಫಲಶ್ರುತಿ ಎಂಬ ಭಾಗವಿರುವುದುಂಟು- ಇದನ್ನು ದಿನಾ ಪಠಿಸಿದರೆ ಇಂತಿಂಥ ಫಲ ಸಿಗುತ್ತದೆ, ಬೆಳಗ್ಗೆ ಸಂಜೆ ಪಠಿಸಿದರೆ ಫಲ ದ್ವಿಗುಣವಾಗುತ್ತದೆ ಮುಂತಾಗಿ ಸ್ವಲ್ಪ ಪ್ರಲೋಭನೆಯ ಬ್ರೈನ್‌ವಾಷಿಂಗ್ ಎಂದರೂ ತಪ್ಪಲ್ಲ. ಆದರೆ ಶಿವ ಮಾನಸಪೂಜಾ ಸ್ತೋತ್ರ ಅಂಥದಲ್ಲ. ಇದರಲ್ಲಿ ಬೇಡಿಕೆಗಳ ಪಟ್ಟಿಯಿಲ್ಲ, ಮಾತ್ರವಲ್ಲ ಭಕ್ತನೇ ಇಲ್ಲಿ ಕೊಡುಗೈ ದೊರೆ.

ಕೊಡುವವನ ಕೈ ಯಾವಾಗಲೂ ಮೇಲೆ, ತೆಗೆದುಕೊಳ್ಳುವವನದು ಕೆಳಗೆ ತಾನೆ? ಹಾಗಾಗಿ ಭಗವಂತನಿಗಿಂತಲೂ ಭಕ್ತನ ಔನ್ನತ್ಯವೇ ಹೆಚ್ಚಿನದು. ಅಷ್ಟಾಗಿ ಶಿವನನ್ನು ಏನೆಂದು ಬೇಡುವುದು? ಮೊದಲೇ ಅವನು ಭೋಳೆಶಂಕರನೆಂದು ಹೆಸರಾದವನು! ‘ಸಿರಿವೆನ್ನೆಲ’ ತೆಲುಗು ಚಿತ್ರದ ಹಾಡು ನನಗಿಲ್ಲಿ ನೆನಪಾಗುತ್ತಿದೆ.

ಅದರಲ್ಲಿ ನಾಯಕ ಒಬ್ಬ ಕೊಳಲುವಾದಕ, ಆತ ಕುರುಡ. ನಾಯಕಿ ಚಿತ್ರಕಲಾವಿದೆ, ಮೂಕಿ. ಒಮ್ಮೆ ಅವರಿಬ್ಬರೂ ಶಿವಾಲಯಕ್ಕೆ ಹೋಗಿ ಪ್ರಾರ್ಥಿಸುವ ಸನ್ನಿವೇಶ. ‘ಶಿವನಲ್ಲಿ ಏನೆಂದು ಬೇಡಿಕೊಂಡೆ?’ ಎಂದು ಆತನನ್ನು ಸನ್ನೆಗಳ ಮೂಲಕವೇ ಕೇಳುತ್ತಾಳವಳು. ಆಗ ಅವನು ಅಂತರಾಳದಿಂದ ಹೇಳುವ ಹಾಡು “ಆದಿಭಿಕ್ಷುವು ವಾಡಿನೇದಿ ಕೋರೇದಿ?..." ತುಂಬ ಹೃದಯಸ್ಪರ್ಶಿಯಾಗಿದೆ. “ತಿರುಕನಾದ, ಬೂದಿ ಬಳಿದುಕೊಂಡ ಆ ಶಿವನನ್ನು ಏನೆಂದು ಬೇಡುವುದು? ಮಧುರ ಕಂಠದ ಕೋಗಿಲೆಗೆ ಬರೀ ಕಪ್ಪುಬಣ್ಣ ಕೊಟ್ಟಿದ್ದಾನೆ; ಗರ್ಜನೆಯಿಂದ ಹೆದರಿಸುವ ಮೋಡಗಳಿಗೆ ಚಂದಚಂದದ ಬಣ್ಣಗಳನ್ನು ಬಳೆದಿದ್ದಾನೆ!

ಅಂಥವನನ್ನು ಏನೆಂದು ಬೇಡುವುದು? ಮಧು-ಮಕರಂದ-ಸುಗಂಧದ ಸುಂದರ ಪುಷ್ಟ ಗಳಿಗೆ ಬರೀ ಮೂರು ದಿನಗಳ ಆಯುಷ್ಯವಿತ್ತಿದ್ದಾನೆ; ಬೋರಲಾಗಿ ಬಿದ್ದಿರುವ ಬಂಡೆಕಲ್ಲು ಗಳಿಗೆ ಚಿರಾಯುವಾಗಿರಿ ಎಂದಿದ್ದಾನೆ!

ಅವನನ್ನೇನೆಂದು ಬೇಡಲಿ? ಗಿರಿಜೆಯೊಡನೆ ತನ್ನದೇ ವಿವಾಹ ನಡೆಯುವುದಕ್ಕೆ ಕಾರಣ ನಾದ ಮನ್ಮಥನನ್ನು ಸುಟ್ಟುಬಿಟ್ಟಿದ್ದಾನೆ; ಮೂರುಲೋಕಗಳಿಗೆ ಉಪಟಳ ಕೊಡುವ ರಾಕ್ಷಸರಿಗೆ ವರಗಳನ್ನಿತ್ತು ಕರುಣೆಯಿಂದ ನೋಡಿಕೊಂಡಿದ್ದಾನೆ! ಅಂಥವನ ಹತ್ತಿರ ಕೋರಿಕೆ ಸಲ್ಲಿಸುವುದಕ್ಕೂ ಒಂದು ಅರ್ಥ ಇದೆಯೇ...?" ಇವು ನಾಯಕನ ಹತಾಶೆಯ ಮಾತುಗಳು ಎಂದು ಅನಿಸಬಹುದು.

ಆದರೆ ಹಾಗಲ್ಲ, ಯಾರಿಗೆ ಏನು ಕೊಡಬೇಕು, ಎಷ್ಟು ಕೊಡಬೇಕು ಮತ್ತು ಯಾವಾಗ ಕೊಡಬೇಕು ಎಂದು ಆ ಪರಮೇಶ್ವರನಿಗೆ ಚೆನ್ನಾಗಿ ಗೊತ್ತು, ನಮ್ಮ ಕೋರಿಕೆಯಿಂದ ಅದು ಬದಲಾಗದು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ.

ಆದರೆ ನಾವೆಲ್ಲ ಹುಲುಮಾನವರು, ಸಾಮಾನ್ಯರು. ಆದಿಶಂಕರರಲ್ಲಿರುವಂಥ ತಪಃಶಕ್ತಿ ನಮಗಿಲ್ಲ, ಅಂಧ ಕೊಳಲುವಾದಕನ ಆಪೋಜ್ಯೋತಿಗೆ ಗೋಚರಿಸುವ ವಿಚಾರಗಳು ನಮಗೆ ಕಂಡುಬರುವುದಿಲ್ಲ. ನಾವು ಬಾಹ್ಯಾಂಬರ ಪ್ರಿಯರು. ಪ್ರದರ್ಶನರತಿಯ ವಿಪರೀತ ಹುಚ್ಚಿ ನವರು. ನಮ್ಮ ಪೂಜಾ ವಿಧಿವಿಧಾನಗಳು, ವ್ರತನೇಮನಿಷ್ಠೆಗಳು, ಭಕ್ತಿಯ ಹಾವಭಾವಗಳು ಎಲ್ಲರ ಗಮನ ಸೆಳೆಯಬೇಕು, ಎಲ್ಲರನ್ನೂ ಆಕರ್ಷಿಸುವಂತೆ ಇರಬೇಕೆಂದು ನಾವು ಬಯಸುತ್ತೇವೆ.

ಸಮಯ ಮತ್ತು ಹಣ ಎಷ್ಟು ಖರ್ಚಾದರೂ ಸರಿಯೇ, ಪ್ರದರ್ಶನಗೊಳ್ಳದ ಭಕ್ತಿ ಭಕ್ತಿಯೇ ಅಲ್ಲ ಎಂಬ ಧೋರಣೆಯನ್ನು ಬೆಳೆಸಿಕೊಳ್ಳುತ್ತೇವೆ. ಶತಚಂಡಿಕಾ ಯಾಗವೇ ಇರಲಿ ಸತ್ಯನಾರಾಯಣ ಪೂಜೆಯೇ ಇರಲಿ ಅಲ್ಲಿ ಪುರೋಹಿತರಿಂದ ಬಣ್ಣಬಣ್ಣದ ಮಂಡಲಗಳು ರಾರಾಜಿಸದಿದ್ದರೆ ಪೂಜೆಗೆ ಖದರೇ ಬರುವುದಿಲ್ಲ. ಅದರಲ್ಲೂ ಈಗ ಫೇಸ್‌ಬುಕ್, ಇನ್ಸ್ಟಾ ಗ್ರಾಮ್ ಮತ್ತಿತರ ಸಾಮಾಜಿಕ ಮಾಧ್ಯಮಗಳು ಬಂದಮೇಲಂತೂ ಭಕ್ತಿ ಪ್ರದರ್ಶನವೆಂಬ ಬೂಟಾಟಿಕೆ ವಿಪರೀತವಾಗಿದೆ.

ವಾಮಮಾರ್ಗಗಳನ್ನು ಬಳಸಿ ದುಡ್ಡು ರಾಶಿ ಹಾಕುವವರದು ಇನ್ನೊಂದು ಪರಿ. ಅಂಥ ಧನಿಕರು ದೇವರನ್ನು ಚಿನ್ನದ ಕವಚದಿಂದ ಮುಚ್ಚುತ್ತಾರೆ. ದೇವಸ್ಥಾನಕ್ಕೆ ಚಿನ್ನದ ಬಾಗಿಲನ್ನು ಮಾಡಿಸಿ ಕೊಡುತ್ತಾರೆ. ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಅವರ ಹೆಸರನ್ನು ಅಮೃತಶಿಲೆಯ ಫಲಕದಲ್ಲಿ ಕೆತ್ತಲಾಗುತ್ತದೆ.

ದೇವಸ್ಥಾನಕ್ಕೆ ಬಂದವರೆಲ್ಲರೂ ದೇವರನ್ನು ಸ್ಮರಿಸುವ ಬದಲು ಚಿನ್ನದ ಬಾಗಿಲಿನ ಅಂದ ವನ್ನೇ ಕೊಂಡಾಡುತ್ತಾರೆ. ಧನಿಕರ ವತಿಯಿಂದ ಜರುಗಿದ ಪೂಜೆ ಬಹಳ ಸೊಗಸಾಗಿತ್ತು, ಅಭಿಷೇಕ ಚೆನ್ನಾಗಿ ಮಾಡಿಸಿದರು, ಅಲಂಕಾರ ಅದ್ಭುತವಾಗಿತ್ತು, ಪ್ರಸಾದ ಪಂಚಾಮೃತ ಗಳೂ ಪೊಗದಸ್ತಾಗಿದ್ದವು ಎಂದೇ ಸ್ಮರಿಸಿಕೊಳ್ಳುತ್ತಾರೆ.

ಅದಕ್ಕೆ ಸರಿಯಾಗಿ ಮಾಧ್ಯಮಗಳಲ್ಲಿ ಮಸಾಲೆ. ಯಾರೋ ರಾಜಕಾರಣಿಯೋ ಸೆಲೆಬ್ರಿಟಿಯೋ ದೇವಸ್ಥಾನಕ್ಕೆ ಹೋಗಿ ದೇವದರ್ಶನ ಪಡೆದರೆ ಅದು ಸುದ್ದಿವಾಹಿನಿಗಳಿಗೆ ಸುಗ್ರಾಸ. ಕ್ರಿಕೆಟರನೊಬ್ಬ ಕುಕ್ಕೆಸುಬ್ರಹ್ಮಣ್ಯದಲ್ಲಿ ನಾಗಸೇವೆ ಮಾಡಿಸಿದರೆ ಚಿತ್ರಸಮೇತ ಸುದ್ದಿ ಪ್ರಕಟ.

ಅಮಿತಾಭ್ ಬಚ್ಚನ್ ಇರುಮುಡಿ ಕಟ್ಟಿಕೊಂಡು ‘ಸ್ವಾಮಿಯೇ ಶರಣಮಯ್ಯಪ್ಪ’ ಎಂದರೆ, ತಮಿಳುನಾಡಿನ ರಾಜಕಾರಣಿ ಕೊಲ್ಲೂರು ಮೂಕಾಂಬಿಕೆಗೆ ಚಿನ್ನದ ಖಡ್ಗ ಅರ್ಪಿಸಿದರೆ ಅದು ಮುಖಪುಟದಲ್ಲಿ ದಪ್ಪಕ್ಷರಗಳ ಸುದ್ದಿ. ಸಮಾಜಕಲ್ಯಾಣ ಯೋಜನೆಗಳ ವಿವರ ಗಳಾಗಲಿ, ವಿಜ್ಞಾನದ ಪ್ರಗತಿಯ ವಾರ್ತೆಗಳಾಗಲಿ ಪೇಲವವೆನಿಸುವ ಮಾಧ್ಯಮಗಳಿಗೆ ರಾಜಕಾರಣಿಗಳ, ಸೆಲೆಬ್ರಿಟಿಗಳ ಭಕ್ತಿಪ್ರದರ್ಶನ ಪ್ರಮುಖ ಸುದ್ದಿಗಳಾಗುತ್ತವೆ!

ನಮ್ಮನ್ನು ಆವರಿಸಿದ ಇಂಥ ಅಜ್ಞಾನದ ಕವಚವನ್ನು ಸರಿಸಲೆಂದೇ ಶಂಕರಾಚಾರ್ಯರು ರಚಿಸಿದ ಶಿವ ಮಾನಸ ಪೂಜೆಯ ಸ್ತೋತ್ರವಿರುವುದು. ಇದರ ಸುಶ್ರಾವ್ಯ ಧ್ವನಿಮುದ್ರಣಗಳು ಯೂಟ್ಯೂಬ್‌ನಲ್ಲಿ ಬೇಕಾದಷ್ಟು ಇವೆ. ಸ್ತೋತ್ರದಲ್ಲಿ ದೈವಿಕಭಾವ ತುಂಬಿತುಳುಕುವದನ್ನು ಗಮನಿಸುವ, "heavenly recital!" ಎಂದು ಮೆಚ್ಚುಗೆ ವ್ಯಕ್ತಪಡಿಸುವ ವಿದೇಶಿಯರು ಇದರ ಮಹತ್ತ್ವವೇನು, ಅರ್ಥವೇನು, ಸಾಹಿತ್ಯವೇನು ತಿಳಿಸುತ್ತೀರಾ ಎಂದು ಕೇಳಿಕೊಂಡಿರುವ ಪ್ರತಿಕ್ರಿಯೆಗಳು ಅಲ್ಲೇ ಕೆಳಗೆ ಓದಲಿಕ್ಕೆ ಸಿಗುತ್ತವೆ.

ಅಂಥ ಜಿಜ್ಞಾಸುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವುದಕ್ಕೆ, ಭಾರತೀಯರಾಗಿದ್ದೂ ಸ್ತೋತ್ರದ ಬಗ್ಗೆ ನಮಗೇ ಗೊತ್ತಿಲ್ಲವಲ್ಲ ಎಂದು ಹೇಳಲು ನಾಚಿಕೆಯೆನಿಸುತ್ತದೆ. ಏಕೆಂದರೆ ‘ತೋಟ ಶೃಂಗಾರ, ಒಳಗೆ ಗೋಳಿಸೊಪ್ಪು’ ಎನ್ನುವಂತೆ ನಮ್ಮದು ಭಕ್ತಿಭಾವದ ಅಬ್ಬರ ಆಡಂಬರ, ಒಳಗೆ ಅಜ್ಞಾನದ ಕತ್ತಲೆಯ ಕಪ್ಪು! ಹೇ ಜಗದೀಶ್ವರನೇ, ಈ ಶಿವರಾತ್ರಿಯಿಂದ ಮೊದಲ್ಗೊಂಡಾದರೂ ನಮ್ಮೆಲ್ಲರ ಮಾನಸ ಮಂದಿರದಲ್ಲಿ ನೆಲೆಸಿ ಮನ ಬೆಳಗಿ ಕಾಪಾಡು.