ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ಬಯಲುಸೀಮೆ ಮತ್ತು ಬೆಂಗಳೂರು ಸುತ್ತಮುತ್ತ ಚಕ್ಕೋತ ಎನ್ನುವುದು ಸಾಮಾನ್ಯ. ಮಲೆನಾಡಿ ನಲ್ಲಿ ಸಿಹಿ ಕಂಚಿ, ಹುಳಿ ಕಂಚಿ ಎನ್ನುವರು; ಅದರಲ್ಲೂ ಎರಡು ತಳಿಗಳಿವೆ! ಅದರ ಜತೆಯಲ್ಲೇ, ಕರಾವಳಿ, ಮಲೆನಾಡು, ಬಯಲುಸೀಮೆ ಎಲ್ಲವನ್ನೂ ಸೇರಿಸಿಕೊಂಡರೆ, ಚಕ್ಕೋತ ಮತ್ತು ಅದರ ಬಂಧುಗಳು ಎನ್ನಬಹುದಾದ ದುಡ್ಲಿ ಕಾಯಿ, ಹೆರಳೆ ಕಾಯಿ, ಗಜ ನಿಂಬೆ, ನಿಂಬೆ, ಕಾಡು ಕಿತ್ತಳೆ, ಕೊಡಗಿನ ಕಿತ್ತಳೆ, ಕಿನೋ.. ಹೀಗೆ ಹಲವು ಹಣ್ಣುಗಳು ಎಲ್ಲೆಡೆ ಹರಡಿವೆ!

ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

Profile Ashok Nayak Apr 11, 2025 5:59 AM

ಶಶಾಂಕಣ

ಮೊನ್ನೆ ತಾನೆ ಆತ್ಮೀಯರೊಬ್ಬರು ಎರಡು ಕಾಯಿಗಳನ್ನು ತಂದುಕೊಟ್ಟರು. ಅದನ್ನು ಕಾಯಿ ಎನ್ನಲೂಬಹುದು, ಹಣ್ಣು ಎನ್ನಲೂಬಹುದು. ಬಿಡಿಸಿದಾಗ, ಬಹು ಆಕರ್ಷಕವಾದ ಬಣ್ಣದ ತೊಳೆಗಳು. ರಸಭರಿತ, ಹುಳಿ, ವಗರು ರುಚಿ, ಉಪ್ಪು ಬೆರೆಸಿ ತಿಂದರೆ ನಾಲಗೆಗೆ ಹಿತ! ವೈಯಕ್ತಿಕವಾಗಿ ಆ ಹಣ್ಣು ನನಗೆ ತೀರಾ ಪರಿಚಿತವಲ್ಲದಿದ್ದರೂ, ನಮ್ಮ ನಾಡಿನಲ್ಲೆಲ್ಲಾ ಅದು ಸಾಕಷ್ಟು ವ್ಯಾಪಕ ವಾಗಿ ದೊರಕುತ್ತದೆ. ದೊಡ್ಡ ಗಾತ್ರದ ಆ ಹಣ್ಣಿನ ಹೆಸರು ‘ಚಕ್ಕೋತ’ ಎಂದರು ನಮ್ಮ ಗೆಳೆಯರು. ಚಕ್ಕೋತ ಹಣ್ಣಿನ ಹೆಸರನ್ನು ಸಾಕಷ್ಟು ಕೇಳಿಯೇ ಇದ್ದೇವೆ. ಆದರೆ, ಗೊಂದಲವಾಗುವುದು ಎಲ್ಲಿ ಎಂದರೆ, ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೇಳಿ ನೋಡಿ, ಒಬ್ಬೊಬ್ಬರು ಒಂದೊಂದು ಹೆಸರನ್ನು ಹಿಡಿದು ಆ ಹಣ್ಣನ್ನು ಕರೆಯುವುದುಂಟು.

ಬಯಲುಸೀಮೆ ಮತ್ತು ಬೆಂಗಳೂರು ಸುತ್ತಮುತ್ತ ಚಕ್ಕೋತ ಎನ್ನುವುದು ಸಾಮಾನ್ಯ. ಮಲೆನಾಡಿ ನಲ್ಲಿ ಸಿಹಿ ಕಂಚಿ, ಹುಳಿ ಕಂಚಿ ಎನ್ನುವರು; ಅದರಲ್ಲೂ ಎರಡು ತಳಿಗಳಿವೆ! ಅದರ ಜತೆಯಲ್ಲೇ, ಕರಾವಳಿ, ಮಲೆನಾಡು, ಬಯಲುಸೀಮೆ ಎಲ್ಲವನ್ನೂ ಸೇರಿಸಿಕೊಂಡರೆ, ಚಕ್ಕೋತ ಮತ್ತು ಅದರ ಬಂಧುಗಳು ಎನ್ನಬಹುದಾದ ದುಡ್ಲಿ ಕಾಯಿ, ಹೆರಳೆ ಕಾಯಿ, ಗಜ ನಿಂಬೆ, ನಿಂಬೆ, ಕಾಡು ಕಿತ್ತಳೆ, ಕೊಡಗಿನ ಕಿತ್ತಳೆ, ಕಿನೋ.. ಹೀಗೆ ಹಲವು ಹಣ್ಣುಗಳು ಎಲ್ಲೆಡೆ ಹರಡಿವೆ!

ಇವೆಲ್ಲವೂ ಸಿಟ್ರಸ್ ಕುಟುಂಬಕ್ಕೆ ಸೇರಿವೆ ಮತ್ತು ಇಲ್ಲೊಂದು ವಿಶೇಷವೂ, ಹೆಮ್ಮೆಯ ವಿಚಾರವೂ ಇದೆ- ಆ ಹೆಮ್ಮೆಯ ವಿಚಾರಕ್ಕೆ ಸಾಕಷ್ಟು ಪ್ರಚಾರ ಇಲ್ಲ ಎಂಬುದೂ ಒಂದು ವಾಸ್ತವ. ಅದೇನೆಂದರೆ, ಜಗತ್ತಿನ ಸಿಟ್ರಸ್ ಕುಟುಂಬದ ಎಲ್ಲಾ ಹಣ್ಣುಗಳಿಗೆ (ಕಿತ್ತಳೆ, ಮೂಸಂಬಿ, ನಿಂಬೆ, ಚಕ್ಕೋತ, ಕಿತ್ತಳೆ ಹೋಲುವ ನಾನಾ ತೆರನ ಹಣ್ಣುಗಳು) ನಮ್ಮ ದೇಶ ಮತ್ತು ಹಿಮಾಲಯದ ಸರಹದ್ದಿನ ಪ್ರಾಂತ್ಯ ಗಳು ಮೂಲ!

ಇದನ್ನೂ ಓದಿ: Shashidhara Halady Column: ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?

ನಮ್ಮ ದೇಶದ ವಿವಿಧ ಸಿಟ್ರಸ್ ತಳಿಗಳನ್ನು ಸಂಕರಗೊಳಿಸಿ, ಮೂಸಂಬಿ ಮೊದಲಾದ ಹಣ್ಣು ಗಳನ್ನು ಬೇರೆ ದೇಶದವರು ತಯಾರಿಸಿ, ಅದು ತಮ್ಮ ದೇಶದ್ದು ಎಂದು ಪ್ರಚಾರ ಮಾಡಿ ಕೊಂಡಿದ್ದಾರೆ. ಆದರೆ, ಇಡೀ ಜಗತ್ತಿಗೆ ಸಿಟ್ರಸ್ ಕುಟುಂಬದ ನಾನಾ ಸಸ್ಯಗಳನ್ನು, ಹಣ್ಣುಗಳನ್ನು, ಕಾಯಿಗಳನ್ನು ಪರಿಚಯಿಸಿದ್ದು ನಮ್ಮ ದೇಶ ಎಂದು ವ್ಯಾಪಕವಾಗಿ ಪ್ರಚಾರ ಮಾಡುವಲ್ಲಿ ನಾವು ಸೋತಿದ್ದೇವೆ.

ಸಿಟ್ರಸ್ ತಳಿಯ ಹಣ್ಣುಗಳು ಐತಿಹಾಸಿಕವಾಗಿಯೂ ಪ್ರಸಿದ್ಧ. ಐರೋಪ್ಯ ದೇಶಗಳ ಜನರು, ಸಂಪತ್ತು ಸಂಗ್ರಹಿಸುವ ಮತ್ತು ನಂತರ ವಸಾಹತು ಸ್ಥಾಪಿಸುವ ಉದ್ದೇಶದಿಂದ ಹಡಗಿನಲ್ಲಿ ತಿಂಗಳುಗಟ್ಟಲೆ ಪಯಣಿಸಿದಾಗ, ಅವರಲ್ಲಿ ‘ಸಿ’ ವಿಟಮಿನ್ ಕೊರತೆ ಕಾಣಿಸಿತು; ಸಿಟ್ರಸ್ ಪ್ರಭೇದದ ನಿಂಬೆ ಮೊದಲಾದ ಹಣ್ಣುಗಳ ರಸ ಸೇವಿಸಿದರೆ ಅದು ವಾಸಿಯಾಗುತ್ತದೆ ಎಂದು ಅವರೇ ಕಂಡುಹಿಡಿದು, ದೊಡ್ಡ ಮಟ್ಟದಲ್ಲಿ ನಿಂಬೆ, ಕಿತ್ತಳೆಗಳನ್ನು ನಮ್ಮಿಂದ ಕೊಂಡೊಯ್ದರು.

ಸಿಟ್ರಸ್ ಹಣ್ಣುಗಳ ರಸವನ್ನು ಸೇವಿಸಿ, ಸ್ಕರ್ವಿ ಮೊದಲಾದ ಕಾಯಿಲೆಗಳನ್ನು ವಾಸಿ ಮಾಡಿಕೊಂಡು, ಅವರ ಹಡಗುಗಳು ಇನ್ನಷ್ಟು ದೂರ ಚಲಿಸಿ, ಇನ್ನಷ್ಟು ವ್ಯಾಪಕವಾದ ಪ್ರದೇಶದಲ್ಲಿ ವಸಾಹತು ಗಳನ್ನು ಸ್ಥಾಪಿಸಿದರು. ಈ ನಿಟ್ಟಿನಲ್ಲಿ ನೋಡಿದರೆ, ನಿಂಬೆ, ಕಿತ್ತಳೆಗಳು ಯುರೋಪಿಯನ್ನರ ನೌಕಾ ಸಾಹಸಗಳಿಗೆ ಭೀಮಬಲ ನೀಡಿವೆ!

fruit sakkare ganchi R

ನಿಂಬೆ, ಕಿತ್ತಳೆ ಮೊದಲಾದ ಸಿಟ್ರಸ್ ಹಣ್ಣುಗಳು ನಮ್ಮ ದೇಶದ ಮೂಲದ್ದು ಎಂದು ಇನ್ನಷ್ಟು ಪ್ರಚಾರವನ್ನು ನಾವು ಮಾಡಬೇಕು ಎಂದೆನಲ್ಲಾ, ಅದರಿಂದೇನು ಲಾಭ ಅಥವಾ ಅದರ ಅವಶ್ಯಕತೆ ಏನಿದೆ ಎಂದು ಕೆಲವರಾದರೂ ಕೇಳಬಹುದು. ಇದನ್ನು ಪರಿಶೀಲಿಸಲು, ನಮ್ಮ ದೇಶಕ್ಕೆ ಬೇರೆ ಬೇರೆ ದೇಶಗಳಿಂದ ಬಂದಿರುವ ನಾನಾ ಸಸ್ಯ, ಹಣ್ಣುಗಳನ್ನು ನೋಡಬೇಕು.

ಉದಾಹರಣೆಗೆ, ದಕ್ಷಿಣ ಅಮೆರಿಕದ ದೇಶಗಳಿಂದ ಬಂದ ಮೆಣಸು ಸಸ್ಯದ ನಾನಾ ತಳಿಗಳು ಇಂದು ನಮ್ಮ ಅಡುಗೆಯ ರುಚಿ ಹೆಚ್ಚಿಸಿವೆ; ಜತೆಗೆ, ಅವೆಷ್ಟೋ ನೂರು ಮೆಣಸಿನ ತಳಿಗಳು ದಕ್ಷಿಣ ಅಮೆರಿಕ ದಲ್ಲಿವೆ ಎಂದು ಪ್ರಚಾರವಾಗಿದೆ. ಪೂರ್ವ ದೇಶಗಳ ಮೆಣಸಿನ ಕಾಳಿಗೆ ಪ್ರತಿಸ್ಪರ್ಧಿಯಾಗಿ ಮೆಣಸಿನ ಕಾಯಿ ಹರಡಿದ್ದು ಎಂದೂ ಹೇಳಬಹುದು.

ದಕ್ಷಿಣ ಅಮೆರಿಕದವರು, ಯುರೋಪಿಯನ್ನರು ಮೆಣಸಿನ ವಿಶ್ವ ಪರ್ಯಟನೆಯ ಕುರಿತು ವ್ಯಾಪಕ ಪ್ರಚಾರ ನೀಡಿದ್ದಾರೆ, ಅದು ಖಂಡಾಂತರ ಪಯಣ ನಡೆಸಿದ ಕುರಿತು ಅಧ್ಯಯನ ಮಾಡಿ ದಾಖಲಿಸಿ ದ್ದಾರೆ. ಅದೇ ಪ್ರಮಾಣದ ಪ್ರಚಾರ, ಅಧ್ಯಯನವು ಸಿಟ್ರಸ್ ಹಣ್ಣುಗಳ ಕುರಿತು ನಡೆದಿಲ್ಲ ಎಂದೇ ಹೇಳಬಹುದು. ಜತೆಗೆ, ಸಿಟ್ರಸ್ ಹಣ್ಣುಗಳು ಭಾರತದಿಂದ ಪ್ರಚುರಗೊಂಡಿವೆ ಎಂದು ದೊಡ್ಡ ದನಿಯಲ್ಲಿ ಹೇಳಲು, 18-19ನೇ ಶತಮಾನದ ಯುರೋಪಿಯನ್ ಸಂಶೋಧಕರಿಗೆ ತುಸು ಹಿಂಜರಿಕೆ ಯೂ ಇದ್ದಿರಬಹುದು; ಆದ್ದರಿಂದ, ನಿಂಬೆ, ಕಿತ್ತಳೆ ಮೊದಲಾದ ಹಣ್ಣುಗಳು ನಮ್ಮ ದೇಶದಿಂದ ಜಗತ್ತಿನಾದ್ಯಂತ ಹರಡಿ, ಮನುಕುಲದ ಆರೋಗ್ಯವನ್ನು ಉತ್ತಮ ಪಡಿಸಿವೆ ಎಂಬ ಸತ್ಯವು ಇನ್ನಷ್ಟು ಪ್ರಸಿದ್ಧಿ ಪಡೆದಿಲ್ಲವೇನೋ!

ಕನ್ನಡ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ, ಬೇರೆ ದೇಶಗಳಿಂದ ನಮ್ಮ ದೇಶಕ್ಕೆ ಬಂದ ಸಸ್ಯಗಳ ಕುರಿತು ಬಿ.ಜಿ.ಎಲ್.ಸ್ವಾಮಿ ಅವರು ವ್ಯಾಪಕವಾಗಿ ಬರೆದಿದ್ದಾರೆ. ಅದರಲ್ಲೂ, ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಎಂಬ ಪುಸ್ತಕದಲ್ಲಿ ಅವರು ಹೇಗೆ ಆ ದೂರದೇಶಗಳಿಂದ ಮೆಣಸಿನ ಕಾಯಿ ಮೊದಲಾದ ಸಸ್ಯಗಳು ನಮ್ಮ ದೇಶಕ್ಕೆ ಬಂದವು ಎಂದು ವಿವರಿಸಿದ್ದಾರೆ.

ಜತೆಗೆ, ಅದೇಕೋ ಗೊತ್ತಿಲ್ಲ, ನಮ್ಮಲ್ಲೂ ಒಂದು ಸಣ್ಣ ಮಟ್ಟದ ಕೀಳರಿಮೆ ಇದ್ದರೂ ಇರಬಹುದು. ನೋಡಿ ಬೇಕಾದರೆ, ದೂರದ ದಕ್ಷಿಣ ಅಮೆರಿಕದಿಂದಲೋ, ಯುರೋಪಿನಿಂದಲೋ ಬಂದ ತರಕಾರಿ ಮತ್ತು ಸಸ್ಯಗಳ ಕುರಿತು ನಮಗೆ ಸಾಕಷ್ಟು ಕುತೂಹಲ, ಅಪಾರ ಬೆರಗು ಸಹ! ಇದಕ್ಕೆ ಉದಾಹರಣೆ ನೀಡುವುದಾದರೆ, ಮತ್ತೆ ಮೆಣಸಿನ ಕಾಯಿಯೇ ಮುನ್ನೆಲೆಗೆ ಬರುತ್ತದೆ.

ಮೆಣಸಿನ ಕಾಯಿಯ ಕುರಿತು ಕನ್ನಡದಲ್ಲಿ, ಭಾರತದಲ್ಲಿ ಬಂದ ಸಾಹಿತ್ಯಕ್ಕೆ ಲೆಕ್ಕವೇ ಇಲ್ಲವೇನೋ! ಮೆಣಸಿನ ಕಾಯಿಯು ದಕ್ಷಿಣ ಅಮೆರಿಕದ ಸಸ್ಯ; ಅದನ್ನು ಕೊಲಂಬಸ್ (1451-1506) ಮತ್ತು ಯುರೋಪಿಯನ್ನರು ಹೊರ ಜಗತ್ತಿಗೆ ಪರಿಚಯಿಸಿದರು; ಪೋರ್ಚುಗೀಸರ ಮೂಲಕ ಅದು ನಮ್ಮ ದೇಶಕ್ಕೂ ಬಂದಿರಬೇಕು. ನಮ್ಮ ದೇಶದಲ್ಲಿ ಈ ವಿದೇಶಿ ಸಸ್ಯವು ಮಾಡಿದ ಕ್ರಾಂತಿ ಅಷ್ಟಿಷ್ಟಲ್ಲ. ನಾನಾ ರೀತಿಯ ಮೆಣಸಿನ ಗಿಡಗಳು, ಕಾಯಿಗಳು ನಮ್ಮ ನಾಲಗೆಯ ರುಚಿಯನ್ನು ತಣಿಸಿವೆ.

ಚೂರು ಮೆಣಸು, ಬೋಂಡಾ ಮೆಣಸು, ಜೀರಿಗೆ ಮೆಣಸು, ಕ್ಯಾಪ್ಸಿಕಂ, ಹಸಿ ಮೆಣಸು ಇತ್ಯಾದಿ. ವಿಶೇಷ ವೆಂದರೆ, ಮೆಣಸಿನ ಕಾಯಿಯು ಯುರೋಪಿನಲ್ಲಿ ಪರಿಚಯಗೊಳ್ಳುವ ತನಕ, ನಮ್ಮ ನಾಡಿನ ಕಾಳು ಮೆಣಸು ಮಾತ್ರ ಆ ಜನರಿಗೆ ಖಾರ ನೀಡುವ ಸಂಬಾರ ಪದಾರ್ಥ ಎನಿಸಿತ್ತು!

ಇದೇ ರೀತಿ, ಗೋಡಂಬಿ ಗಿಡವು ಮೂಲತಃ ದಕ್ಷಿಣ ಅಮೆರಿಕದ ಬ್ರೆಜಿಲ್ ಪ್ರದೇಶದ್ದು. ಇದನ್ನು ಸಹ ಯುರೋಪಿಯನ್ ನಾವಿಕರು ಗೋವಾ ಮೂಲಕ ನಮ್ಮ ದೇಶಕ್ಕೆ ಪರಿಚಯಿಸಿದರು. ಇಂದು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಗೋವಾದಲ್ಲಿ ಗೋಡಂಬಿ ಮರಗಳು ವ್ಯಾಪಕವಾಗಿ ಬೆಳೆದಿವೆ. ಜತೆಗೆ, ಉಡುಪಿ ಮತ್ತು ಇತರ ಜಿಲ್ಲೆಗಳಲ್ಲಿ ನೂರಾರು ಗೋಡಂಬಿ ಫ್ಯಾಕ್ಟರಿಗಳು ಆರಂಭಗೊಂಡು, ಸಾವಿರಾರು ಜನರಿಗೆ ಉದ್ಯೋಗ ನೀಡಿವೆ.

ಕರಾವಳಿ ಪ್ರದೇಶದಲ್ಲಿ ಗೋಡಂಬಿ ಕಾರ್ಖಾನೆಗಳು ಅವೆಷ್ಟಿವೆ ಎಂದರೆ, ನಮ್ಮ ದೇಶದಲ್ಲಿ ಬೆಳೆಯುವ ಗೋಡಂಬಿ ಅವುಗಳ ಹೊಟ್ಟೆ ತುಂಬಿಸಲು ಸಾಕಾಗುವುದಿಲ್ಲ, ಆದ್ದರಿಂದ, ಆಫ್ರಿಕಾ ದಿಂದ ಹಡಗುಗಟ್ಟಲೆ ಗೋಡಂಬಿಯನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.

ಇರಲಿ, ಕಿತ್ತಳೆ, ನಿಂಬೆ ಮೊದಲಾದ ಸಿಟ್ರಸ್ ಹಣ್ಣುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲೇಬೇಕು. ಆಗಲೇ ನಾವು ಅದರ ಹಿರಿಮೆಯನ್ನು ಇನ್ನಷ್ಟು ದೊಡ್ಡದಾಗಿ ಹೇಳಿಕೊಳ್ಳಬಹುದು, ಪ್ರಚಾರ ಮಾಡಿ ಕೊಳ್ಳಬಹುದು! 15 ಮತ್ತು 16ನೇ ಶತಮಾನದಲ್ಲಿ ಯುರೋಪಿನಿಂದ ಹಡಗಿನಲ್ಲಿ ಪೂರ್ವ ದತ್ತ ಹೊರಟ ಯುರೋಪಿಯನ್ ನಾವಿಕರ ಪಡೆಯು, ಹಲವು ತಿಂಗಳುಗಳ ಕಾಲ ಸಮುದ್ರದಲ್ಲಿ ಪಯಣಿಸುವಾಗ, ಅವರಿಗೆ ವಿಟಮಿನ್ ‘ಸಿ’ ಕೊರತೆಯಾಗಿ, ಸ್ಕರ್ವಿ ಎಂಬ ಯಾತನಾಮಯ ರೋಗ ಕಾಡುತ್ತಿತ್ತು.

ಅದನ್ನು ಅವರು ಸಮರ್ಥವಾಗಿ ಎದುರಿಸಿದ್ದು ನಿಂಬೆ ಮತ್ತು ಸಿಟ್ರಸ್ ಜಾತಿಯ ಹಣ್ಣುಗಳ ಬಳಕೆಯಿಂದ, ನಿಂಬೆ ರಸವನ್ನು ನಿಯತವಾಗಿ ಸೇವಿಸುವ ಮೂಲಕ. ಆದ್ದರಿಂದ, ಬ್ರಿಟಿಷರು 17ನೇ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ನಡೆಸಿದ ವಸಾಹತುಶಾಹಿ ದಂಡಯಾತ್ರೆಯ ಯಶಸ್ಸಿಗೆ, ನಮ್ಮ ದೇಶದ ನಿಂಬೆ ಮತ್ತು ಸಿಟ್ರಸ್ ಹಣ್ಣುಗಳ ಕೊಡುಗೆ ಅಪಾರ, ಅಮೂಲ್ಯ!

ಆದರೆ, ಅದಕ್ಕೂ ಬಹಳ ಪುರಾತನ ಕಾಲದಲ್ಲಿ ನಡೆದ ವಲಸೆ, ನಂತರ ಅರೇಬಿಯನ್ ವರ್ತಕರ ಮೂಲಕ ನಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳು ಯುರೋಪ್ ತಲುಪಿದವು ಎಂದು ತಿಳಿಯ ಲಾಗಿದೆ. 2ನೇ ಶತಮಾನದಲ್ಲೇ ಇಟಲಿ ಮತ್ತು ರೋಮ್ ಸಾಮ್ರಾಜ್ಯವನ್ನು ನಮ್ಮ ದೇಶದ ನಿಂಬೆ ಪ್ರವೇಶಿಸಿತ್ತು. ಪರ್ಷಿಯಾ, ಇರಾಕ್, ಈಜಿಪ್ಟ್‌ಗೆ ಕ್ರಿ.ಶ.700ರಲ್ಲಿ ನಿಂಬೆ ಪ್ರವೇಶವಾಯಿತು.

10ನೇ ಶತಮಾನದಲ್ಲಿ ಅರೇಬಿಯಾದ ತೋಟಗಳಲ್ಲಿ ನಿಂಬೆಯನ್ನು ಅಲಂಕಾರಿಕ ಸಸ್ಯವನ್ನಾಗಿ ಬೆಳೆಸಲಾಗುತ್ತಿತ್ತು. ಯುರೋಪ್‌ನಲ್ಲಿ 15ನೇ ಶತಮಾನದಲ್ಲಿ, ಅಮೆರಿಕದಲ್ಲಿ 16ನೇ ಶತಮಾನದಲ್ಲಿ ನಿಂಬೆಯ ತೋಟಗಳು, ಕಿತ್ತಳೆಯ ತೋಟಗಳು (ಆರೆಂಜರಿ) ತಲೆ ಎತ್ತಿದವು ಯುರೋಪಿನ ಆರೆಂಜರಿ ಗಳು ಪ್ರಖ್ಯಾತ ಮತ್ತು ಪ್ರತಿಷ್ಠೆಯ ವನಗಳಾಗಿದ್ದವು!

1493ರಲ್ಲಿ ಕ್ರಿಸ್ಟೊಫರ್ ಕೊಲಂಬಸನು ನಿಂಬೆಯ ಬೀಜಗಳನ್ನು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಅಮೆರಿಕಕ್ಕೆ ಕೊಂಡೊಯ್ದ. ರಾಯಲ್ ನೇವಿಯ ವೈದ್ಯ ಜೇಮ್ಸ್ ಲಿಂಡ್‌ನು ಸ್ಕರ್ವಿ ರೋಗ ತಡೆಯಲು ನಿಂಬೆ ಮತ್ತು ಇತರ ಸಿಟ್ರಸ್ ಹಣ್ಣುಗಳ ಪ್ರಯೋಗ ಮಾಡಿದ್ದು 1747ರಲ್ಲಿ. ಪುರಾತನ ಕಾಲದಿಂದಲೂ ನಮ್ಮ ದೇಶದ ಹಿಮಾಲಯದ ತಪ್ಪಲಿನಲ್ಲಿ, ಅಸ್ಸಾಂ, ಮ್ಯಾನ್ಮಾರ್, ದಕ್ಷಿಣ ಚೀನಾ ಪ್ರದೇಶದಲ್ಲಿ ನಿಂಬೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತಿತ್ತು (ಪ್ರಾಯಶಃ ನಮ್ಮ ಪಶ್ಚಿಮ ಘಟ್ಟಗಳ ಕಾಡಿನಲ್ಲೂ ಇದು ಸಹಜವಾಗಿ ಬೆಳೆಯುತ್ತಿತ್ತು; ಅಲ್ಲಿ ಕಾಡು ಕಿತ್ತಳೆ ಇಂದಿಗೂ ಇದೆ).

ಹುಳಿ ಕಿತ್ತಳೆ ಅಥವಾ ಕಾಡು ಕಿತ್ತಳೆ (ಬಿಟ್ಟರ್ ಆರೆಂಜ್) ಮತ್ತು ಸಿಟ್ರಾನ್ (ಕಾಡು ನಿಂಬೆ) ಗಿಡಗಳ ಸಂಕರದಿಂದ ನಿಂಬೆಯ ತಳಿಗಳು ಉತ್ಪನ್ನಗೊಂಡವು. ನಿಸರ್ಗದಲ್ಲೇ ಈ ಸಂಕರ ನಡೆದು, ನಿಂಬೆ ಮತ್ತು ಇತರ ಹಲವು ಸಿಟ್ರಸ್ ತಳಿಗಳು ರೂಪುಗೊಂಡವು. ವಿಟಮಿನ್ ‘ಸಿ’ ಹೇರಳವಾಗಿರುವ ನಿಂಬೆಯು, ಹುಳಿ ಗುಣ ಹೊಂದಿದ್ದು, ನಾನಾ ರೀತಿಯಲ್ಲಿ ಬಳಕೆಯಾಗುತ್ತಿದೆ. ಔಷಧವಾಗಿ ನಿಂಬೆ ರಸ ಪ್ರಮುಖವಾಗಿ ಬಳಕೆಯಾಗಿದೆ.

ಸಿಟ್ರಸ್ ಪ್ರಭೇದದ ಮೂಲವು ನಮ್ಮ ದೇಶ ಮತ್ತು ದಕ್ಷಿಣ ಏಷ್ಯಾವೇ ಆದರೂ, ಇಂದು ವಿದೇಶಗಳಲ್ಲಿ ಇವುಗಳ ವಿವಿಧ ತಳಿಗಳ ಅಭಿವೃದ್ಧಿ ಆಗಿದೆ. ಮೂಸಂಬಿ ಹಣ್ಣು ಮೂಲತಃ ನಮ್ಮ ದೇಶದ ಸಿಟ್ರಸ್ ಪ್ರಭೇದಗಳಿಂದ ರೂಪುಗೊಂಡ ಹಣ್ಣು. ಆದರೆ, ಇಂದು ಅಽಕೃತ ಮಾಹಿತಿಯನ್ನು ಗಮನಿಸಿದರೆ, ಮೂಸಂಬಿಯು ಇರಾನಿನ ದಕ್ಷಿಣ ಭಾಗದ ಹಣ್ಣು ಎಂದು ಪರಿಚಯಗೊಳ್ಳುತ್ತಿದೆ!

ಅದಕ್ಕೆ ಕಾರಣವಿದೆ. ಮೂಸಂಬಿಯು ಹುಳಿ ಕಿತ್ತಳೆ (ಸಿಟ್ರಸ್ ಆರೆಂಟಿಯಮ್) ಮತ್ತು ಕಾಡು ನಿಂಬೆ / ಗಜ ನಿಂಬೆ (ಸಿಟ್ರಸ್ ಮೆಡಿಕಾ) ಸಸ್ಯಗಳ ಸಂಕರದಿಂದ ರೂಪುಗೊಂಡ ಹಣ್ಣು. ಸಿಟ್ರಸ್ ಮೆಡಿಕಾದ ಮೂಲವು ಹಿಮಾಲಯದ ತಪ್ಪಲು. ಹುಳಿ ಕಿತ್ತಳೆ ಸಹ ಭಾರತ ಮೂಲದ್ದು. ಇವೆರಡನ್ನೂ ಸಂಕರಗೊಳಿಸಿ, ಮೂಸಂಬಿ ಎಂಬ ಹಣ್ಣನ್ನು ಉತ್ಪಾದಿಸಿದ ಕೀರ್ತಿ ಇರಾನ್‌ಗೆ ಸಂದಿದೆ!

ಮೂಸಂಬಿಯ ವಿಭಿನ್ನ ತಳಿಯು ಮೊಸಾಂಬಿಕ್ ದೇಶದಲ್ಲಿ ರೂಪುಗೊಂಡಿದ್ದು, ಇದನ್ನು ಪೋರ್ಚುಗೀಸರು ಭಾರತಕ್ಕೆ ತಂದರು ಎಂದು ದಾಖಲೆಗಳು ಹೇಳುತ್ತವೆ. ಮೂಸಂಬಿ ಎಂಬ ಪದವು ಇರಾನ್ ಮತ್ತು ಮೊಸಾಂಬಿಕ್ ಪದಗಳಿಂದ ಬಂದಿದೆ ಎನ್ನಲಾಗಿದೆ. ಮೂಸಂಬಿಯ ಮೂಲ ಇರಾನ್ ದೇಶವಾದರೂ, ಅದನ್ನು ರೂಪುಗೊಳಿಸುವಲ್ಲಿ ಬಳಸಿದ ಎರಡು ಸಿಟ್ರಸ್ ಸಸ್ಯಗಳು ನಮ್ಮ ದೇಶದ್ದು ಎಂದು ಅಭಿಮಾನಪಟ್ಟುಕೊಳ್ಳಬಹುದು.

ಮೂಸಂಬಿಯ ವಿಶೇಷವೆಂದರೆ, ಇದನ್ನು ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ಇರಾನ್ ದೇಶದಲ್ಲಿ ನೆಗಡಿ ಜ್ವರವಾದಾಗ ಇದರ ರಸವನ್ನು ನಾಟಿ ಔಷಧವಾಗಿ ಉಪಯೋಗಿ ಸುವರು! ವಾಣಿಜ್ಯಿಕ ಮತ್ತು ಕೃಷಿಯ ದೃಷ್ಟಿಯಿಂದ, ಚಕ್ಕೋತ, ದುಡ್ಲಿ, ಹೆರಳೆ ಕಾಯಿ ಮೊದಲಾದ ಹಣ್ಣುಗಳ ಕುರಿತು ಸಂಶೋಧನೆ ನಡೆಯುವ ಅಗತ್ಯವಿದೆ.

ದೇವನಹಳ್ಳಿ ಚಕ್ಕೋತ ಹೆಸರುವಾಸಿ. ಇದನ್ನೇ ಇನ್ನಷ್ಟು ಅಭಿವೃದ್ಧಿ ಪಡಿಸಿ, ಮೂಸುಂಬಿಯ ರೀತಿ ಪ್ರಸಿದ್ಧಗೊಳಿಸಿದರೆ, ಕೃಷಿಕರಿಗೆ, ಗಿಡ ಬೆಳೆಯುವವರಿಗೆ ಆದಾಯದ ಮೂಲವೂ ಆದೀತು. ಚಕ್ಕೋತ, ಸಿಹಿಕಂಚಿ, ಹೆರಳೆಕಾಯಿಗಳಿಗೆ ಅಂಥದೊಂದು ವಾಣಿಜ್ಯಿಕ ಪೊಟೆನ್ಶಿಯಲ್ ಇದೆ. ನಮ್ಮ ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ತಜ್ಞರು ಈ ಕುರಿತು ಗಮನ ಹರಿಸಿಯಾರೇ?