Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ
ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಹಿಡಿದು ಸೆಲ್‌ನಲ್ಲಿಯೇ ಮಾತನಾಡುತ್ತಿರುವುದು, ಐಸಿಸ್ ಜತೆ ನಂಟು ಹೊಂದಿದ್ದ ಉಗ್ರನೊಬ್ಬ ಆರಾಮಾಗಿ ವಿಡಿಯೋಗಳನ್ನು ನೋಡಿಕೊಂಡು, ಫೋನ್‌ನಲ್ಲಿ ಮಾತನಾ ಡುತ್ತಿರುವುದು ಮುಂತಾದ ದೃಶ್ಯಗಳು ಪರಪ್ಪನ ಅಗ್ರಹಾರ ಜೈಲಿನಿಂದ ವೈರಲ್ ಆಗುತ್ತಿದ್ದಂತೆ, ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
-
ಅಶ್ವತ್ಥಕಟ್ಟೆ
ಸೆರೆಮನೆಯ ಕಲ್ಪನೆಗೆ ಶತಮಾನದ ಇತಿಹಾಸವಿದೆ. ತಪ್ಪು ಮಾಡಿದವರನ್ನು ಶಿಕ್ಷಿಸಲು ಒಬ್ಬೊಬ್ಬರು ಒಂದೊಂದು ರೀತಿಯ ಸೆರೆಮನೆಗಳನ್ನು ನಿರ್ಮಿಸಿರುವ ಹತ್ತಾರು ಉದಾ ಹರಣೆಗಳಿವೆ. ರಾಜ-ಮಹಾರಾಜರ ಕಾಲದಲ್ಲಿ ಈ ಜೈಲುಗಳನ್ನು ಭೂಗತ ಸ್ವರೂಪದಲ್ಲಿ ಸಿದ್ಧಪಡಿಸುತ್ತಿದ್ದರು. ಆದರೆ ಕಾಲ ಬದಲಾದಂತೆ, ಜೈಲುಗಳ ಸ್ವರೂಪವೂ ಬದಲಾಗಿದೆ. ಆಧುನಿಕ ಜೈಲುಗಳಲ್ಲಿ ಹೂದೋಟ, ಯೋಗ ಕೇಂದ್ರ, ಗ್ರಂಥಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ.
ಇದರೊಂದಿಗೆ ಕೌಶಲಾಭಿವೃದ್ಧಿಗೆ ಬೇಕಿರುವ ತರಬೇತಿಯನ್ನು ನೀಡುವುದನ್ನು ನೋಡಿ ದ್ದೇವೆ. ಇದಕ್ಕೆ ಯಾರ ತಕರಾರೂ ಇಲ್ಲ. ಆದರೆ ಈ ಅಧಿಕೃತ ಸೌಲಭ್ಯಗಳನ್ನು ಮೀರಿ ನೀಡುವ ‘ರಾಜಾತಿಥ್ಯ’ಕ್ಕೆ ಕೊನೆಯೆಂದು ಎನ್ನುವುದು ಹಲವರ ಪ್ರಶ್ನೆಯಾಗಿದೆ. ಕಳೆದೊಂದು ವಾರದಿಂದ ಚರ್ಚೆಯಾಗುತ್ತಿರುವ ವಿಷಯವೆಂದರೆ, ಈ ಎಲ್ಲ ಕನಿಷ್ಠ ಸೌಲಭ್ಯ ಮೀರಿ, ‘ಅಕ್ರಮ’ ರೀತಿಯಲ್ಲಿ ಸೌಲಭ್ಯಗಳನ್ನು ನೀಡಿರುವುದು.
ಇದೇ ಈಗ ವಿವಾದಕ್ಕೆ ಕಾರಣವಾಗಿದೆ. ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಹಿಡಿದು ಸೆಲ್‌ನಲ್ಲಿಯೇ ಮಾತನಾಡುತ್ತಿರುವುದು, ಐಸಿಸ್ ಜತೆ ನಂಟು ಹೊಂದಿದ್ದ ಉಗ್ರನೊಬ್ಬ ಆರಾಮಾಗಿ ವಿಡಿಯೋಗಳನ್ನು ನೋಡಿಕೊಂಡು, ಫೋನ್‌ನಲ್ಲಿ ಮಾತನಾ ಡುತ್ತಿರುವುದು ಮುಂತಾದ ದೃಶ್ಯಗಳು ಪರಪ್ಪನ ಅಗ್ರಹಾರ ಜೈಲಿನಿಂದ ವೈರಲ್ ಆಗುತ್ತಿದ್ದಂತೆ, ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ದರ್ಶನ್ ಆಂಡ್ ಗ್ಯಾಂಗ್ ಅನುಭವಿಸಿದ್ದ ರಾಜಾತಿಥ್ಯದ ಬಳಿಕ ಈ ವಿಡಿಯೋಗಳು ಬಹಿರಂಗ ವಾಗಿರುವುದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವುದಂತೂ ಸತ್ಯ.
ಜೈಲಿನಲ್ಲಿ ಈ ರೀತಿ ‘ಅಕ್ರಮ’ವಾಗಿ ರಾಜಾತಿಥ್ಯ ಸಿಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ‘ಓಪನ್’ ಸೀಕ್ರೆಟ್. ಜೈಲಿನಿಂದ ಹೊರಗಡೆ ಸಕ್ರಮವಾಗಿ ಸಿಗುವ ಎಲ್ಲ ವಸ್ತುಗಳು ‘ಅಕ್ರಮ’ವಾಗಿ ಜೈಲಿನ ಗೋಡೆಯೊಳಗೆ ಸಿಗುತ್ತವೆ. ಆದರೆ ಅದಕ್ಕೆ ಇಂತಿಷ್ಟು ಅಂತ ಪಾವತಿಸಬೇಕಷ್ಟೇ!
ಆಗಾಗ್ಗೆ ಜೈಲುಗಳ ಮೇಲೆ ನಡೆಯುವ ದಾಳಿಯಲ್ಲಿ ಎಣ್ಣೆ, ಸಿಗರೇಟ್, ಮೊಬೈಲ್ ಅಷ್ಟೇ ಏಕೆ ಗಾಂಜಾ, ಅಫೀಮು ಸಿಕ್ಕಿರುವ ಹತ್ತಾರು ಉದಾಹರಣೆ ಇವೆ. ಆದರೆ ಈ ಎಲ್ಲ ವಿಷಯ ಗಳು ‘ಗೌಪ್ಯ’ವಾಗಿ ನಡೆಯುವ ಕಾರ್ಯಾಚರಣೆಯಷ್ಟೇ. ಈ ರೀತಿಯ ಅಕ್ರಮಗಳನ್ನು ತಡೆಗಟ್ಟಲು ದಶಕಗಳಿಂದ ಹತ್ತು ಹಲವು ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಈ ರೀತಿಯ ಪ್ರಯತ್ನ ನಡೆಸಿದ ಅಧಿಕಾರಿಗಳು ‘ಬದಲಾದರೇ’ (ವರ್ಗ) ಹೊರತು ಜೈಲಿನಲ್ಲಿರುವ ವ್ಯವಸ್ಥೆ ಬದಲಾಗಿಲ್ಲ ಎನ್ನುವುದು ವಾಸ್ತವ. ಕಳೆದೊಂದು ವರ್ಷದಲ್ಲಿ ನಿರಂತರವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸಾಕ್ಷ್ಯ ಸಮೇತ ಮಾಹಿತಿ ಸಿಗುತ್ತಿದೆ. ಆದರೆ ಸಾಕ್ಷ್ಯವೇ ಸಿಗದಂತೆ ರಾಜ್ಯದ ಹಲವು ಜೈಲುಗಳಲ್ಲಿ ನಡೆಯುವ ಅಕ್ರಮಕ್ಕೆ ಹೊಣೆ ಯಾರು? ಎನ್ನುವುದಕ್ಕೆ ಉತ್ತರವಿಲ್ಲ.
ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಒಂದು ವಾರ ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ತಪಾಸಣೆ ಮಾಡಲು ಅಧಿಕಾರಿಗಳು ಮುಂದಾಗು ತ್ತಾರೆ. ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದಾಗ ಕೆಲವೊಮ್ಮೆ ಅಕ್ರಮವಾಗಿ ಸಂಗ್ರಹಿಸಿಟ್ಟು ಕೊಂಡಿರುವ ವಸ್ತುಗಳು ಸಿಗುತ್ತವೆ. ಆದರೆ ಬಹುತೇಕ ಸಮಯದಲ್ಲಿ ತಪಾಸಣೆ ನಡೆಸುವ ಅಧಿಕಾರಿಗಳು ಖಾಲಿ ಕೈಯಲ್ಲಿ ವಾಪಸಾಗುವುದನ್ನು ನೋಡಿದ್ದೇವೆ.
ಒಳಗೆ ನಡೆಯುತ್ತಿರುವ ಅಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ಮೇರೆಗೆ ದಾಳಿ ನಡೆಸಿದರೂ, ತಪಾಸಣೆ ಸಮಯದಲ್ಲಿ ಏನೂ ಸಿಗದಿರುವುದಕ್ಕೆ ಕಾರಣ ಜೈಲಿನಲ್ಲಿರುವ ‘ವ್ಯವಸ್ಥಿತ’ ನೆಟ್‌ವರ್ಕ್. ಈ ನೆಟ್‌ವರ್ಕ್ ಅನ್ನು ಭೇದಿಸಿ, ಕಾರ್ಯಾಚರಣೆ ನಡೆಸುವಲ್ಲಿ ಬಹುತೇಕ ಅಧಿಕಾರಿಗಳು ವಿಫಲರಾಗುತ್ತಾರೆ.
ವಿಕೃತ ಕಾಮಿ ಉಮೇಶ್ ರೆಡ್ಡಿ, ಲಷ್ಕರ್ ಎ ತೋಯ್ಬಾ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಫೋನ್ ಬಳಸುತ್ತಿರುವ ವಿಡಿಯೋ ಹೊರಬರುತ್ತಿದ್ದಂತೆ ಪ್ರತಿಪಕ್ಷ ನಾಯಕರು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಸರಕಾರ ಸತ್ತು ಹೋಗಿದೆ ಎನ್ನುವ ಮಾತನ್ನು ಆಡುತ್ತಿದ್ದಾರೆ.
ಆದರೆ ವಾಸ್ತವದಲ್ಲಿ ನೋಡುವುದಾದರೆ, ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ವ್ಯವಸ್ಥೆಯನ್ನು ಸರಿಪಡಿಸ ದಿರುವುದಕ್ಕೆ ‘ಭ್ರಷ್ಟ’ ವ್ಯವಸ್ಥೆ ಒಂದು ಕಾರಣವಾದರೆ, ಸಿಬ್ಬಂದಿಗಳ ಕೊರತೆ ಮತ್ತೊಂದು ಕಾರಣ ಎಂದರೆ ತಪ್ಪಾಗುವುದಿಲ್ಲ. ರಾಜ್ಯ, ಕೇಂದ್ರ ಸರಕಾರಗಳು ಕಾರಾಗೃಹಗಳ ಮೇಲಿನ ಒತ್ತಡವನ್ನು ನಿವಾರಿಸಲು ಹಲವು ಕ್ರಮಗಳನ್ನು ‘ಕಾಗದ’ದಲ್ಲಿ ವಹಿಸಿದೆ.
ಹೊಸ ಕಾರಾಗೃಹ ನಿರ್ಮಾಣಕ್ಕೆ ಅನುದಾನವನ್ನು ನೀಡಿವೆ. ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವಲ್ಲಿ ಸರಕಾರಗಳು ವಿಫಲ ವಾಗುತ್ತಲೇ ಬಂದಿವೆ. ಸಚಿವ ಪರಮೇಶ್ವರ್ ಅವರು, ಹೊಸದಾಗಿ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಸೋಮವಾರದ ಸಭೆಯಲ್ಲಿ ಹೇಳಿದ್ದಾರೆ. ಆದರೆ ಶೇ.50ರಷ್ಟು ಹುದ್ದೆಗಳು ಖಾಲಿಯಿರುವಾಗ ಏಕಾಏಕಿ ನೇಮಕ ಹೇಗೆ ಸಾಧ್ಯ ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಸಿಬ್ಬಂದಿಗಳ ಸಂಖ್ಯೆ ಏರುತ್ತಿಲ್ಲ ಎನ್ನುವ ಆರೋಪ ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ ಅಂಕಿ-ಅಂಶದ ಪ್ರಕಾರ, ಕರ್ನಾಟಕ ಮಾತ್ರವಲ್ಲದೇ ಇಡೀ ದೇಶ ದಲ್ಲಿ ಈ ಸಮಸ್ಯೆಯಿದೆ.
ದೇಶದಲ್ಲಿ ಒಟ್ಟು 152 ಕೇಂದ್ರ ಕಾರಾಗೃಹಗಳಿದ್ದು, ಅವುಗಳಲ್ಲಿ 1,90,416 ಪುರುಷ, 7675 ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 198,150 ಕೈದಿಗಳನ್ನು ಬಂಧಿಸಿಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಅದೇ ಅಂಕಿ-ಅಂಶದ ಪ್ರಕಾರ 2023ರ ಅಂತ್ಯಕ್ಕೆ ಈ ಎಲ್ಲ ಕಾರಾಗೃಹಗಳಲ್ಲಿ 232,294 ಪುರುಷ, 6772 ಮಹಿಳೆಯರು ಸೇರಿದಂತೆ ಒಟ್ಟು 239,136 ರಷ್ಟು ವಿವಿಧ ಪ್ರಕರಣಗಳ ಕೈದಿಗಳಿದ್ದಾರೆ.
ಅಂದರೆ ಸಾಮರ್ಥ್ಯಕ್ಕಿಂತ ಶೇ.120ರಷ್ಟು ಹೆಚ್ಚು ಮಂದಿ ಕೈದಿಗಳು ಒಳಗಿದ್ದಾರೆ. ಅದರಲ್ಲಿ ಹಿಳೆಯರ ಬ್ಯಾರಕ್ ನಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಕೈದಿಗಳಿದ್ದಾರೆ. ಆದರೆ ಪುರುಷರ ಬ್ಯಾರಕ್‌ಗಳಲ್ಲಿ ಹೆಚ್ಚುವರಿ ಶೇ.122ರಷ್ಟು ಕೈದಿಗಳನ್ನು ಕೂಡಿ ಹಾಕಲಾಗಿದೆ.
ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ರಾಜ್ಯದಲ್ಲಿಒಟ್ಟು ಎಂಟು ಕಾರಾಗೃಹಗಳಿದ್ದು, ಅವುಗಳಲ್ಲಿ 7855 ಪುರುಷ, 492 ಮಹಿಳಾ ಹಾಗೂ ೧೦ ತೃತೀಯ ಲಿಂಗಿ ಕೈದಿಗಳು ಸೇರಿದಂತೆ ಒಟ್ಟು 8357 ಮಂದಿ ಇರಲು ಅವಕಾಶವಿದೆ. ಆದರೆ 2023ರ ಅಂಕಿ-ಅಂಶದ ಪ್ರಕಾರ ರಾಜ್ಯದ ಕಾರಾಗೃಹಗಳಲ್ಲಿ 9530 ಪುರುಷ, 336 ಮಹಿಳೆ ಸೇರಿದಂತೆ ಒಟ್ಟು 9866 ಕೈದಿಗಳು ಅಂದರೆ, ಶೇ.118ರಷ್ಟು ಹೆಚ್ಚುವರಿ ಕೈದಿಗಳನ್ನು ಬಂಧಿಸಿಡಲಾಗಿದೆ.
ಇನ್ನು ಪರಪ್ಪನ ಅಗ್ರಹಾರ ಜೈಲಿನ ಬಗ್ಗೆ ನೋಡುವುದಾದರೆ, ಒಟ್ಟು ೨೦ ಬ್ಯಾರಕ್‌ಗಳಲ್ಲಿ ೧೫ನ್ನು ಕೈದಿಗಳನ್ನು ಇಡಲು ಬಳಸಲಾಗುತ್ತಿದೆ. ಅದರಲ್ಲಿ ಒಟ್ಟು ಐದು ಸಾವಿರಕ್ಕೂ ಹೆಚ್ಚು ಕೈದಿಗಳಿದ್ದಾರೆ.
ಮೂಲಗಳ ಪ್ರಕಾರ ಪರಪ್ಪನ ಅಗ್ರಹಾರದಲ್ಲಿ ಪ್ರತಿಯೊಂದು ಬ್ಯಾರಕ್‌ನಲ್ಲಿ 300 ರಿಂದ 350 ಕೈದಿಗಳನ್ನು ಬಂಧಿಸಿಡಲಾಗುತ್ತಿದೆ. ಆದರೆ ಸಿಬ್ಬಂದಿಗಳ ಕೊರತೆಯಿರುವುದರಿಂದ ಇಡೀ ಬ್ಯಾರಕ್ ಅನ್ನು ನಿಭಾಯಿಸಲು ಒಬ್ಬ ಅಥವಾ ಇಬ್ಬರನ್ನು ಮಾತ್ರ ನೇಮಿಸಲಾಗಿದೆ. ರಾಷ್ಟ್ರೀಯ ಅಪರಾಧ ರೆಕಾರ್ಡ್ ವಿಭಾಗ ಬಿಡುಗಡೆಗೊಳಿಸಿರುವ 2023ರ ಅಂಕಿ-ಅಂಶದ ಪ್ರಕಾರ ಕರ್ನಾಟಕದಲ್ಲಿರುವ ಕಾರಾಗೃಹ ಇಲಾಖೆಗೆ ಒಟ್ಟು 4179 ಹುದ್ದೆಗಳು ಮಂಜೂ ರಾಗಿದ್ದರೆ, ಕಾರ್ಯನಿರ್ವಹಿಸುತ್ತಿರುವುದು ಮಾತ್ರ 3089 ಮಂದಿ.
ಅಂದರೆ ಸುಮಾರು 1090 ಹುದ್ದೆಗಳು ಖಾಲಿಯಿದೆ. ಅದೇ ಪರಪ್ಪನ ಅಗ್ರಹಾರ ಜೈಲಿಗೆ, 800 ಹುದ್ದೆ ಮಂಜೂರಾಗಿದ್ದು, ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಮಾತ್ರ 400 ಸಿಬ್ಬಂದಿ ಗಳ ಆಚೀಚೆ ಇದೆ. ಅಂದರೆ ಬರೋಬ್ಬರಿ ಶೇ.50ರಷ್ಟು ಹುದ್ದೆಗಳು ಖಾಲಿಯಿವೆ. ರಾಜ್ಯದ ಬಹುದೊಡ್ಡ ಕಾರಾಗೃಹ ಎನಿಸಿರುವ ಪರಪ್ಪನ ಅಗ್ರಹಾರದಲ್ಲಿ ಈ ಪ್ರಮಾಣ ದಲ್ಲಿ ಖಾಲಿ ಹುದ್ದೆಗಳಿದ್ದರೆ ನಿರ್ವಹಣೆ ಮಾಡುವುದಾದರೂ ಹೇಗೆ ಎನ್ನುವುದು ಕೆಳಹಂತದ ಸಿಬ್ಬಂದಿಯ ಪ್ರಶ್ನೆಯಾಗಿದೆ.
ಪರಪ್ಪನ ಅಗ್ರಹಾರದೊಳಗೆ ನಡೆಯುತ್ತಿರುವ ರಾಜಾತಿಥ್ಯ ವಿಷಯ ಇದೀಗ ರಾಷ್ಟ್ರೀಯ ಸುದ್ದಿಯಾಗಿದೆ. ಆದರೆ ಇದು ಕೇವಲ ಪರಪ್ಪನ ಅಗ್ರಹಾರಕ್ಕೆ ಸೀಮಿತವಾಗಿರುವ ಸಮಸ್ಯೆ ಅಲ್ಲ. ಜೈಲಿನೊಳಗೆ ನಡೆಯುತ್ತಿರುವ ಇಂಥ ವಿಷಯ ಬಹಿರಂಗವಾಗಬೇಕಿದ್ದರೆ, ಒಂದೋ ಅದು ಜೈಲಿನೊಳಗಿರುವ ಕೈದಿಗಳಿಂದ ಆಗಬೇಕು, ಇಲ್ಲವೇ ಜೈಲಿನ ಸಿಬ್ಬಂದಿಗಳೇ ಅದನ್ನು ಬಹಿರಂಗಪಡಿಸಬೇಕು.
ಇಲ್ಲದೇ ಹೋದರೆ, ಒಳಗೆ ನಡೆಯುವ ವಿಷಯ ಹೊರ ಬರುವುದಕ್ಕೆ ಅಸಾಧ್ಯ. ಹೀಗಿರುವಾಗ ಪರಪ್ಪನ ಅಗ್ರಹಾರದಲ್ಲಿ ಉಮೇಶ್ ರೆಡ್ಡಿ ಇರಲಿ, ಉಗ್ರನೇ ಇರಲಿ ಫೋನಲ್ಲಿ ಮಾತಾಡಿ ರುವ ಸ್ಪಷ್ಟ ವಿಡಿಯೋ ಬಹಿರಂಗವಾಗಿದೆ ಎನ್ನುವುದಾದರೆ, ಆ ವಿಡಿಯೋವನ್ನು ಮಾಡುವುದಕ್ಕೆ ಮತ್ತೊಂದು ಫೋನ್ ಬಳಕೆಯಾಗಿದೆ.
ಸದ್ಯ ಈ ಪ್ರಕರಣವನ್ನು ‘ದರ್ಶನ್ ಆಪ್ತ ಧ್ವನೀರ್ ಇಂದ ವಿಡಿಯೋ ಬಹಿರಂಗವಾಗಿದೆ’ ಎಂದು ಹೇಳಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆದರೆ ಆತನಿಗೆ ಈ ವಿಡಿಯೊ ಕೊಟ್ಟಿರುವುದು ಯಾರು? ರಾಜಾ ರೋಷವಾಗಿ ವಿಡಿಯೋ ಮಾಡಿಕೊಂಡರೂ ಅಪರಾಽಗಳು ಅದನ್ನು ನೋಡಿಕೊಂಡೂ ಸುಮ್ಮನಿದ್ದರು ಎನ್ನುವುದಾದರೆ, ಅವರಿಗೆ ವಿಡಿಯೋ ಮಾಡಿದ ವ್ಯಕ್ತಿಯ ಮೇಲೆ ನಂಬಿಕೆ ಎಷ್ಟಿರಬೇಕು? ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಇನ್ನು, ಸದ್ಯ ‘ಹಾಟ್ ಟಾಪಿಕ್’ ಆಗಿರುವ ಪರಪ್ಪನ ಅಗ್ರಹಾರದ ರಾಜಾತಿಥ್ಯ ಪ್ರಕರಣ ಇನ್ನೆರಡು ದಿನಗಳಲ್ಲಿ ತಣ್ಣಗಾಗಲಿದೆ. ಈಗಾಗಲೇ ಇಬ್ಬರನ್ನು ಅಮಾನತು, ಕೆಲವರನ್ನು ವರ್ಗಾವಣೆ ಮಾಡುವ ಮೂಲಕ ‘ಕಠಿಣ ಕ್ರಮ’ ತೆಗೆದುಕೊಂಡಿದ್ದೇವೆ ಎಂದು ಸರಕಾರ ಹೇಳುತ್ತಿದೆ.
ವಿವಾದವಾಗಿದ್ದ ವಿಷಯವನ್ನು ತಣ್ಣಗಾಗಿಸಲು ಈ ಅಮಾನತು, ವರ್ಗಾವಣೆಯ ಶಿಕ್ಷೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಮುಂದಿನ ಕೆಲ ದಿನಗಳ ಕಾಲ ಜೈಲಿನಲ್ಲಿ ಕೆಲ ‘ಕಟ್ಟುನಿಟ್ಟಿನ’ ಕ್ರಮವಿರುತ್ತದೆ ಎಂದು ಎಲ್ಲರೂ ಭಾವಿಸಿಕೊಂಡಿರುತ್ತಾರೆ.
ಮುಂದೊಂದು ದಿನ ಮತ್ತೊಂದು ವಿಡಿಯೋ, ಫೋಟೋ ವೈರಲ್ ಆದಾಗ ಮತ್ತೆ ಅದೇ ಗಲಾಟೆ, ವಿವಾದ, ಕಠಿಣ ಕ್ರಮದ ಎಚ್ಚರಿಕೆ ಹಾಗೂ ಕೆಲವೊಂದಷ್ಟು ಅಧಿಕಾರಿಗಳ ‘ತಲೆದಂಡ’ದ ಶಿಕ್ಷೆ. ಹಾಗೆ ನೋಡಿದರೆ, ಈ ರಾಜಾತಿಥ್ಯ ಪ್ರಕರಣವನ್ನೇ ಮುಂದಿಟ್ಟು ಕೊಂಡು ದರ್ಶನ್‌ಗೆ ಹಾಸಿಗೆ, ದಿಂಬು ನೀಡಲು ‘ಜೈಲ್ ಮ್ಯಾನ್ಯುಯಲ್’ ಅನ್ನು ತೋರಿಸು ತ್ತಿರುವ ಜೈಲಧಿಕಾರಿಗಳ ವಿರುದ್ಧ ಮತ್ತೊಮ್ಮೆ ದರ್ಶನ್ ಪರ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದರೂ ಅಚ್ಚರಿಯಿಲ್ಲ.
ಈ ಕಾರಣಕ್ಕಾಗಿಯೇ ಧನ್ವೀರ್ ವಿಡಿಯೋಗಳನ್ನು ಲೀಕ್ ಮಾಡಿದ್ದಾರೆ ಎನ್ನುವ ಆರೋಪವೂ ಇದೆ. ಇನ್ನೊಂದೆಡೆ ಕಾರಾಗೃಹ ವಿಭಾಗಕ್ಕೆ ಎಡಿಜಿಪಿಯಾಗಿ ಬಿ.ದಯಾನಂದ್ ಅವರು ಬಂದ ಬಳಿಕ ಕೆಲವೊಂದಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದ ಕೆಳಮಟ್ಟದಲ್ಲಿ ಅಧಿಕಾರಿಗಳಿಗೆ ‘ಕೈ’ಕಟ್ಟಿ ಹಾಕಿದಂತಾಗಿರುವ ಮಾತುಗಳೂ ಇದೆ. ಈ ಕಾರಣಕ್ಕೂ ಈ ವಿಡಿಯೋ ದೀಢೀರ್ ಎಂದು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿವೆ ಎನ್ನುವ ಗುಸುಗುಸು ಸಹ ಇದೆ.
ಒಟ್ಟಾರೆ ಪ್ರಕರಣದಲ್ಲಿ ಒಂದಂತೂ ನಿಜ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ ಎನ್ನಲಾಗುತ್ತಿರುವ ರಾಜಾತಿಥ್ಯ ಪ್ರಕರಣ ಇದೇ ಮೊದಲೂ ಅಲ್ಲ, ಕೊನೆಯೂ ಅಲ್ಲ. ಇಡೀ ವ್ಯವಸ್ಥೆ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರಿಂದ, ಸ್ವಚ್ಛಗೊಳಿಸುವುದು ಅಂದು ಕೊಂಡಷ್ಟು ಸುಲಭವೂ ಅಲ್ಲ ಎನ್ನುವುದು ವಾಸ್ತವ.