MarilingaGowda Mali Patil Column: ಕರುನಾಡ ರಾಜಕೀಯದಲ್ಲಿ ಮಧುಜಾಲದ ಕರಾಳ ಅಧ್ಯಾಯ
ಇಂಥ ಮಧುಜಾಲ ಎಂಬ ಕೊಳಕು, ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಗುಲ್ಲೆಬ್ಬಿ ಸತೊಡಗಿದೆ. ರಾಜಕೀಯದ ಹೋರಾಟ ಎಂದರೆ ಅದು ಸಾವು-ಬದುಕಿನ ಹೋರಾಟವೇನೂ ಅಲ್ಲ. ರಾಜಕೀಯದ ಗೆಲುವುಗಳು ಜನರ ಆಶೀರ್ವಾದದಿಂದ ಸಿದ್ಧಿಸುವಂಥ ಸೌಭಾಗ್ಯಗಳು. ಆದರೆ ರಾಜಕೀಯ ವಿರೋಧಿಗ ಳನ್ನು ಹಣಿಯುವ ಯತ್ನವಾಗಿ, ತಂತ್ರವಾಗಿ ‘ಮಧುಜಾಲ’ ಕರ್ನಾಟಕದ ರಾಜಕೀಯ ವಲಯದೊಳಗೆ ಎಡಗಾಲಿಟ್ಟು ಬಂದಿದೆಯೆಂದರೆ, ನಮ್ಮ ರಾಜಕಾರಣದಲ್ಲಿ ನೈತಿಕತೆಯ ಅಧಃಪತನ ವಾಗಿದೆ ಎಂದೇ ಅರ್ಥ!

ಅಂಕಣಕಾರ ಮಲಿಲಿಂಗಗೌಡ ಮಾಲಿ ಪಾಟೀಲ್

ಕ್ರಿಯಾಲೋಪ
ಮರಿಲಿಂಗಗೌಡ ಮಾಲಿ ಪಾಟೀಲ್
ಮಧುವನ ಕರೆದರೆ.. ತನುಮನ ಸೆಳೆದರೆ, ಶರಣಾಗು ನೀನು ಆದರೆ’- ಇದು ಕನ್ನಡ ಚಲನಚಿತ್ರ ಗೀತೆಯೊಂದರ ಸಾಲು. ‘ಮಧುಜಾಲ’ (ಹನಿಟ್ರ್ಯಾಪ್) ಕರೆದರೆ? ಅನುಮಾನವೇ ಇಲ್ಲ, ಆಗಲೂ ತನುಮನ ಸೆಳೆಯುತ್ತದೆ. ಪತಂಗವೊಂದು ಬೆಂಕಿಗೆ ತಾನಾಗೇ ಧುಮುಕಿ ಸುಟ್ಟು ಬೂದಿ ಯಾಗು ವಂತೆ, ಪುರುಷಜೀವವು ಮಧುಜಾಲದ ಆಕರ್ಷಣೆಗೆ ಸಿಲುಕಿ ತನ್ನ ಬದುಕನ್ನು ನಾಶ ಪಡಿಸಿಕೊಳ್ಳು ತ್ತದೆ. ಮಧುಜಾಲಕ್ಕೆ ನಿಲುಕುವುದರ ಪರಿಣಾಮ ಸ್ಪಷ್ಟಗೋಚರವಾಗಿದ್ದರೂ, ಆ ಜಾಲದ ಸೆಳೆತದ ಮುಂದೆ ಸಂಭವನೀಯ ಅಪಾಯವು ನಗಣ್ಯವೆನಿಸುತ್ತದೆ. ಪುರುಷ ತನ್ನ ನಿಯಂತ್ರಣವನ್ನು ಕಳೆದು ಕೊಳ್ಳುತ್ತಾನೆ. ಇಂಥ ಮಧುಜಾಲವು ಗೂಢಚರ್ಯೆಯ ವಲಯದಲ್ಲಿ ಹೆಚ್ಚು ಬಳಕೆಯಲ್ಲಿತ್ತು.
ಮಿಲಿಟರಿ ರಹಸ್ಯಗಳನ್ನು ಅರಿಯಲು ಹೆಣ್ಣನ್ನು ಅಸವಾಗಿ ಬಳಸಿ, ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಖೆಡ್ಡಾಗೆ ಕೆಡವಲಾಗುತ್ತಿತ್ತು. ಮಧುಜಾಲಕ್ಕೆ ಸಿಲುಕಿದ ಪರಿಣಾಮವಾಗಿ ಅನೇಕ ಅಇಕಾರಿಗಳ ತಲೆದಂಡವೂ ಆಗಿತ್ತು. ಯುದ್ಧದಲ್ಲಿ ಸೈನ್ಯವೊಂದು ಜಯಿಸಿದೆ ಅಂದರೆ, ಆ ಗೆಲುವಿನ ಹಿಂದೆ ನಡೆದಿರಬಹುದಾದ ಮಧುಜಾಲದ ಬಗ್ಗೆಯೂ ಚರ್ಚೆಯಾಗುತ್ತಿತ್ತು.
ಇದನ್ನೂ ಓದಿ: MarilingaGowda Malipatil Column: ಕೆಪಿಎಸ್ ಶಾಲೆಯ ಉಸಾಬರಿಯೇಕೆ ?
ಇಂಥ ಮಧುಜಾಲ ಎಂಬ ಕೊಳಕು, ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಗುಲ್ಲೆಬ್ಬಿ ಸತೊಡಗಿದೆ. ರಾಜಕೀಯದ ಹೋರಾಟ ಎಂದರೆ ಅದು ಸಾವು-ಬದುಕಿನ ಹೋರಾಟವೇನೂ ಅಲ್ಲ. ರಾಜಕೀಯದ ಗೆಲುವುಗಳು ಜನರ ಆಶೀರ್ವಾದದಿಂದ ಸಿದ್ಧಿಸುವಂಥ ಸೌಭಾಗ್ಯಗಳು. ಆದರೆ ರಾಜಕೀಯ ವಿರೋಧಿಗಳನ್ನು ಹಣಿಯುವ ಯತ್ನವಾಗಿ, ತಂತ್ರವಾಗಿ ‘ಮಧುಜಾಲ’ ಕರ್ನಾಟಕದ ರಾಜಕೀಯ ವಲಯದೊಳಗೆ ಎಡಗಾಲಿಟ್ಟು ಬಂದಿದೆಯೆಂದರೆ, ನಮ್ಮ ರಾಜಕಾರಣದಲ್ಲಿ ನೈತಿ ಕತೆಯ ಅಧಃಪತನ ವಾಗಿದೆ ಎಂದೇ ಅರ್ಥ!
ಕರ್ನಾಟಕದ ರಾಜಕಾರಣವು ಹಲವಾರು ಪ್ರಾತಃಸ್ಮರಣೀಯ ಹೆಸರುಗಳನ್ನು ಒಳಗೊಂಡ ಒಂದು ವ್ಯವಸ್ಥೆ ಮತ್ತು ಪರಂಪರೆ. ಹಲವು ರಾಜಕೀಯ ನಾಯಕರನ್ನು ಬೆಳೆಸಿ ಪ್ರಸಿದ್ಧರನ್ನಾಗಿಸಿದ ಇತಿಹಾಸ ನಮ್ಮ ರಾಜ್ಯದ್ದು. ಪ್ರಾಮಾಣಿಕತೆಯೇ ಉಸಿರಾಗಿರುವ, ಜನರ ಬಗೆಗಿನ ಕಾಳಜಿಯೇ ರಾಜಕೀಯ ಎಂದು ಪರಿ ಭಾವಿಸಿರುವ ರಾಜಕಾರಣಿಗಳು ಈಗಲೂ ಇದ್ದಾರೆ. ಹಿಂದೆಲ್ಲಾ ರಾಜಕೀಯ ದಲ್ಲಿ ಪಕ್ಷವು ಪರಿಗಣನೆಗೆ ಬಂದರೂ, ವೈಯಕ್ತಿಕ ವಿಷಯಗಳಲ್ಲಿ ರಾಜಕೀಯ ದೂರವೇ ಇರುತ್ತಿತ್ತು.
ಒಂದು ಪಕ್ಷದ ನಾಯಕರ ಮನೆತನವು, ಮತ್ತೊಂದು ಪಕ್ಷದ ನಾಯಕರ ಮನೆತನದೊಂದಿಗೆ ವೈವಾ ಹಿಕ ಸಂಬಂಧವನ್ನು ಬೆಳೆಸುತ್ತಿತ್ತು. ವೈಯಕ್ತಿಕ ಜಿದ್ದು, ದ್ವೇಷಗಳು ರಾಜಕೀಯದ ಅಂಗಳಕ್ಕೆ ಕಾಲಿ ಡುತ್ತಿರಲಿಲ್ಲ. ಹೀಗಾಗಿ ಕರ್ನಾಟಕದ ರಾಜಕೀಯ ಸಜ್ಜಿಕೆಯು ಒಂದು ಸುಸಂಸ್ಕೃತ ಸಮರಕ್ಕೆ ವೇದಿಕೆ ಯಾಗಿರುತ್ತಿತ್ತು.
ರಾಜಕೀಯದಲ್ಲಿ ಎದುರಾಳಿಗಳನ್ನು ಹಣಿಯಲು ಚುನಾವಣೆವರೆಗೂ ಕಾಯುವ ಸಭ್ಯತೆ ಅಲ್ಲಿ ಕಾಣಬರುತಿತ್ತು. ಆದರೆ ಇಂದು? ರಾಜಕೀಯ ನಾಯಕರಿಗೆ ಅವರ ಕ್ಷೇತ್ರವೇ ದೇವಾಲಯ. ಕ್ಷೇತ್ರದ ಜನರಿಗೆ ಒಳ್ಳೆಯದನ್ನು ಮಾಡುವ ಮೂಲಕ ರಾಜಕೀಯದಲ್ಲಿ ಮೇಲುಗೈ ಸಾಧಿಸುವುದು ಸಾಧ್ಯ. ಕೆಲವು ವರ್ಷಗಳ ಹಿಂದೆ ಉತ್ತರಕರ್ನಾಟಕ ಭಾಗವು ಅತಿವೃಷ್ಟಿಯ ಅನಾಹುತದಿಂದ ತತ್ತರಿಸಿದಾಗ ಮತದಾರರೊಬ್ಬರು, “ಇಂಥ ನೈಸರ್ಗಿಕ ಪ್ರಕೋಪಗಳು ರಾಜಕಾರಣಿಗಳಿಗೆ ಬ್ಲೆಸ್ಸಿಂಗ್ ಇನ್ ಡಿಸ್ ಗೈಸ್ (ರೂಪಾಂತರಿ ಆಶೀರ್ವಾದ) ಅಲ್ಲವೇ?" ಎಂದಿದ್ದರು.
ಅಂದರೆ, ನೈಸರ್ಗಿಕ ಪ್ರಕೋಪಗಳಿಂದಾಗಿ ಜನರು ತೊಂದರೆಗೊಳಗಾಗಬಾರದು ನಿಜ; ಆದರೆ ಅದಕ್ಕೆ ಬಲಿಪಶುಗಳಾದವರಿಗೆ ಒಳ್ಳೆಯ ಪರಿಹಾರ ನೀಡಿ ಹೊಸ ಬದುಕನ್ನು ಕಟ್ಟಿಕೊಟ್ಟರೆ, ಅಂಥ ನಾಯಕ ರನ್ನು ಸಂತ್ರಸ್ತರು, ಅಂದರೆ ಆ ಕ್ಷೇತ್ರದ ಮತದಾರರು, ಜೀವನಪೂರ್ತಿ ಮರೆಯುವುದಿಲ್ಲ ಎನ್ನು ವುದು ಆ ಮತದಾರರ ವಾದದ ಸಾರಾಂಶವಾಗಿತ್ತು. ಆದರೆ ರಾಜಕಾರಣಿಗಳು ಇಂಥ ಅವಕಾಶ ಗಳನ್ನು ಬಳಸಿಕೊಳ್ಳುತ್ತಾರಾ? ಎಂಬುದು ಇಂದಿಗೂ ಚರ್ಚಾಸ್ಪದ ವಿಷಯ.
ಯಾಕೆಂದರೆ, ನೈಸರ್ಗಿಕ ಪ್ರಕೋಪಕ್ಕೆ ಸಿಲುಕಿದವರಿಗೆ ಹೊಸ ಬದುಕನ್ನು ಕೊಟ್ಟಿಕೊಟ್ಟವರ ಉದಾಹರಣೆಗಳು ಕಮ್ಮಿ. ಆದರೂ, ಜನಪರ ಕಾಳಜಿಯಿರುವ ಕೆಲವು ನಾಯಕರಾದರೂ ಇದ್ದಾರೆ, ರಾಜಕೀಯಕ್ಕೆ ಪ್ರವೇಶಿಸಲು ಬಯಸುವ ಯುವಜನರಿಗೆ ಮಾದರಿಯಾಗಬಲ್ಲ ಇಂಥವರ ಸಂಖ್ಯೆ ಹೆಚ್ಚಬೇಕು ಎಂಬುದು ಜನರ ಸಹಜ ಆಶಯ. ಆದರೆ ಇಂಥ ಆಶೋತ್ತರಕ್ಕೆ ಕೊಳ್ಳಿಯಿಡುವಂಥ ಸಂಸ್ಕೃತಿ ಬೆಳೆಯಲಾರಂಭಿಸಿದೆ.
ಕೆಲವು ವರ್ಷಗಳಿಂದೀಚೆಗೆ ಹೆಣ್ಣನ್ನು ಸರಕಿನಂತೆ ಕಾಣುವ ಪದ್ಧತಿ ಬೆಳೆಯುತ್ತಾ, ರಾಜಕೀಯವು ತಲುಪಿರುವ ಅಧಃಪತನಕ್ಕೆ ಅದು ಕನ್ನಡಿ ಹಿಡಿಯಲಾರಂಭಿಸಿದೆ. ‘ಸರಕು’ ಎಂದರೆ ಮನಸ್ಸಿಲ್ಲದ, ವ್ಯಕ್ತಿತ್ವವಿಲ್ಲದ ಒಂದು ವಸ್ತು. ಹೆಣ್ಣನ್ನು ‘ವಸ್ತು’ ಎಂದು ಪರಿಭಾವಿಸುವ ಕೆಲ ನಿರ್ಲಜ್ಜ ಮತ್ತು ಅಹಂಕಾರಿ ಪುರುಷರು, ಹೆಣ್ಣನ್ನು ಬಳಸಿಕೊಳ್ಳುತ್ತಿರುವ ಪರಿಯನ್ನು ಕಂಡು ರಾಜ್ಯ ರಾಜಕೀಯವು ದಂಗುಬಡಿದಿದೆ. ಇದರ ಪರಮಾವಧಿ ಎನ್ನುವಂತೆ ‘ಮಧುಜಾಲ’ವು ಕರ್ನಾಟಕ ರಾಜಕೀಯದಲ್ಲಿ ತನ್ನ ಕರಾಳಹಸ್ತವನ್ನು ಚಾಚತೊಡಗಿದೆ.
‘ಹೆಣ್ಣು ಮಾಯೆ, ಹೆಣ್ಣಿಗೆ ಮರುಳಾಗದವರು ಯಾರೂ ಇಲ್ಲ’ ಎಂಬಂಥ ಸವಕಲು ವಾಕ್ಯಗಳು ಹಾಸುಹೊಕ್ಕಾಗಿರುವಂತೆಯೇ, ಜನನಾಯಕರೆನಿಸಿಕೊಂಡವರು ಹೆಣ್ಣೆಂಬ ಮೋಹ ಪಾಶಕ್ಕೆ ಸಿಲುಕಬಾರದು ಎಂಬ ಸಾಮಾಜಿಕ ಪ್ರಜ್ಞೆಯೂ ಢಾಳಾಗಿಯೇ ಇದೆ. ಈ ಕಾರಣಕ್ಕಾಗಿಯೇ, ‘ಹೆಣ್ಣಿನ ವಿಷಯಕ್ಕೆ ತಳಕು ಹಾಕಿಕೊಂಡು ಕೆಟ್ಟ ಸುದ್ದಿಗಳು ಹಬ್ಬಿದರೆ ರಾಜಕೀಯ ಸಮಾಧಿ ಆದಂತೆ’ ಎಂಬ ಎಚ್ಚರಿಕೆ ಉಳ್ಳವರು ತಮ್ಮ ಚಾಪಲ್ಯಕ್ಕೆ ಒಂದೊಮ್ಮೆ ಕಡಿವಾಣ ಹಾಕಲಾಗದಿದ್ದರೂ, ಅದಕ್ಕೆ ಸಂಬಂಧಿಸಿದಂಥ ವಿಷಯಗಳು ರಹಸ್ಯವಾಗಿ ಇರುವಂತೆ ನಿರ್ವಹಿಸುತ್ತಾರೆ.
ಆದರೆ ಇಂಥದೊಂದು ದೌರ್ಬಲ್ಯ ಇರುವುದರ ಅರಿವಿರುವವರು ಅವರನ್ನು ಮಧುಜಾಲಕ್ಕೆ ಕೆಡವಿ ರಾಜಕೀಯವಾಗಿ ಮುಗಿಸುವ, ತನ್ಮೂಲಕ ತಮ್ಮ ರಾಜಕೀಯದ ಭವಿಷ್ಯವನ್ನು ಸುಗಮ ವಾಗಿಸಿ ಕೊಳ್ಳುವ ಕಸರತ್ತಿಗೆ ಮುಂದಾಗುತ್ತಾರೆ. ಮೊದಲೆಲ್ಲಾ, ಮಧುಜಾಲದಲ್ಲಿ ಸಿಲುಕಿಸಲು ಒಂದಷ್ಟು ಸಿದ್ಧತೆಗಳಾದರೂ ಬೇಕಿತ್ತು. ಆದರೆ, ತಂತ್ರಜ್ಞಾನದ ಬೆಳವಣಿಗೆ ಪರಾಕಾಷ್ಠೆ ತಲುಪಿರುವ ಇಂದಿನ ದಿನಗಳಲ್ಲಿ ಎಲ್ಲರ ಕೈಗಳಲ್ಲೂ ಕ್ಯಾಮರಾಗಳಿವೆ.
ಒಬ್ಬ ಕಾಲು ಜಾರಿದರೆ ಸಾಕು, ಅದನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ವ್ಯಕ್ತಿಯು, ಹಾಗೆ ಕಾಲುಜಾರಿ ದಾತನನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾನೆ. ಇಂದು ಪರಿಚಯ ಬೆಳೆಸಿ ಕೊಳ್ಳಲು ಮಾಧ್ಯಮಗಳು ಬೇಕಾದಷ್ಟಿವೆ, ಏಕಾಂತಕ್ಕೂ ಸಾಕಷ್ಟು ಅವಕಾಶಗಳಿವೆ. ಕಮಿಟ್ ಆದದ್ದು ಕ್ಯಾಮರಾದಲ್ಲಿ ಸೆರೆಯಾದರೆ ಸಾಕು ಎಂಬ ಪರಿಸ್ಥಿತಿ ಇರುವಾಗ, ಮಧುಜಾಲಕ್ಕೆ ಕೆಡ ವೋದೂ ಅತ್ಯಂತ ಸುಲಭ.
ಮಧುಜಾಲ ಎಂದರೆ ಅದೊಂದು ಗುಪ್ತ ಕಾರ್ಯಾಚರಣೆ. ಹೆಣ್ಣು ಇಲ್ಲಿ ಪ್ರಧಾನ ಅಸ. ಮಿಕವನ್ನು ಮೊದಲೇ ಗುರುತಿಸಿ, ಹೆಣ್ಣು ಆತನಿಗೆ ಪರಿಚಯವಾಗುವಂತೆ ಮಾಡಿ, ರೊಮ್ಯಾಂಟಿಕ್ ಮಾತು ಗಳಿಂದ, ಅನಿವಾರ್ಯವಾದರೆ ಲೈಂಗಿಕ ಸಂಬಂಧವನ್ನು ಬೆಳೆಸಿ ಆತನಿಂದ ಮಾಹಿತಿ ಪಡೆಯು ವುದೇ ಮಧುಜಾಲ. ಹೆಣ್ಣಿನ ಮೋಹಕ್ಕೆ ವಶವಾದ ಗಂಡು ಆಕೆಯ ಮೆಚ್ಚುಗೆ ಗಳಿಸಲು, ತಾನು ರಹಸ್ಯವಾಗಿ ಇರಿಸಬೇಕಾದ ಮಾಹಿತಿಗಳನ್ನು ಆಕೆಗೆ ತಿಳಿಸುತ್ತಾನೆ.
ಪಾಕಿಸ್ತಾನದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಗೆ ಮಾಹಿತಿ ಸೋರಿಕೆ ಮಾಡಿದ್ದಾನೆ ಎಂಬ ಆರೋಪದ ಮೇರೆಗೆ ಕಾನ್ಪುರದ ಆರ್ಡನೆನ್ಸ್ ಫ್ಯಾಕ್ಟರಿಯ ಕುಮಾರ್ ವಿಕಾಸ್ ಎಂಬ ಉದ್ಯೋಗಿಯನ್ನು ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹದಳವು ಬಂಧಿಸಿರುವುದು ಇದಕ್ಕೆ ತಾಜಾ ಉದಾಹರಣೆ. ಈತನೊಂದಿಗೆ ಗೂಢಚಾರಿಣಿಯೊಬ್ಬಳು ಸ್ನೇಹ ಬೆಳೆಸಿದಳು; ನೇಹಾ ಶರ್ಮ ಎಂಬ ಹೆಸರಿನಲ್ಲಿ ಪರಿಚಿತಳಾದ ಆಕೆಗೆ ಸೇನಾ ಶಸ್ತ್ರಾಸ್ತ್ರ ಉತ್ಪಾದನೆ, ಮಷಿನ್ ಲೇಔಟ್, ಪ್ರೊಡಕ್ಷನ್ ಚಾರ್ಟ್, ಉದ್ಯೋಗಿಗಳ ಹಾಜರಾತಿ ಪಟ್ಟಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿ ಗಳನ್ನು ವಾಟ್ಸ್ಯಾಪ್ ಮೂಲಕ ಹಂಚಿಕೊಂಡಿದ್ದ ಆರೋಪದ ಮೇಲೆ ವಿಕಾಸ್‌ನನ್ನು ಬಂಧಿಸಿದ ಎಟಿಎಸ್ ತನಿಖೆ ಆರಂಭಿಸಿದೆ.
‘ಮಾತಾಹರಿ’ ಎಂಬ ಮಾಯಾಂಗನೆಯ ಪ್ರಸ್ತಾಪ ಇಲ್ಲದಿದ್ದರೆ ಮಧುಜಾಲದ ಬಗೆಗಿನ ಯಾವುದೇ ಲೇಖನ ಅಪೂರ್ಣ ಎಂದೇ ಅರ್ಥ. ಮಾರ್ಗರೇಟಾ ಗೀರ್ಟ್ರೂಡಾ ಎಂಬಾಕೆ 1876ರಲ್ಲಿ ನೆದರ್ಲ್ಯಾಂ ಡ್‌ನಲ್ಲಿ ಜನಿಸಿದಳು. ಶ್ರೀಮಂತ ವ್ಯಾಪಾರಿಯೊಬ್ಬನ ಮಗಳಾಗಿದ್ದ ಈಕೆ ಸೇನಾಧಿಕಾರಿಯೊಬ್ಬನನ್ನು ಮದುವೆಯಾದಳು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದರೂ, ಆ ಪೈಕಿ ಒಂದು ಮಗು ಜನನದ ಕೆಲ ಹೊತ್ತಿನಲ್ಲೇ ಅಸುನೀಗಿತು. ನಂತರ ಅವರ ದಾಂಪತ್ಯದಲ್ಲಿ ವಿರಸ ಕಾಣಿಸಿಕೊಂಡಿತು,
1902ರಲ್ಲಿ ವಿಚ್ಛೇದನವೂ ಆಯಿತು. ಬಳಿಕ ಪ್ಯಾರಿಸ್‌ಗೆ ವಲಸೆ ಬಂದ ಮಾರ್ಗರೇಟಾ ಗೀರ್ಟ್ರೂಡಾ, ನರ್ತಕಿಯಾಗಿ ಬದುಕು ಕಂಡುಕೊಂಡಳು. ಆಗ ಈಕೆಗೆ ಮಾತಾಹರಿ (ಬೆಳಗಿನ ಕಣ್ಣು) ಎಂಬ ಹೆಸರು ಬಂತು. 1905ರ ಬಳಿಕ ಈಕೆ ಯುರೋಪ್‌ನ ಸಾಂಸ್ಕೃತಿಕ ವಲಯದಲ್ಲಿ ಹೆಸರಾದಳು. ಒಂದು ದಶಕದ ಕಾಲ ನರ್ತಕಿಯಾಗಿ ಬದುಕು ಸವೆಸಿದ ಈಕೆ ಹಲವರ ಆಕರ್ಷಣೆಯ ಕೇಂದ್ರಬಿಂದು ವಾದಳು.
ಹಲವು ಭಾಷೆಗಳನ್ನು ಸುಲಲಿತವಾಗಿ ಮಾತಾಡಬಲ್ಲ ಸಾಮರ್ಥ್ಯವಿದ್ದ ಈಕೆ ಓರ್ವ ವೇಶ್ಯೆಯೂ ಆಗಿದ್ದಳು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಈಕೆ ಬೇಹುಗಾರಿಕೆ ಮಾಡುತ್ತಿದ್ದಾಳೆ ಎಂಬ ಅನುಮಾನ ಹಲವರಿಗೆ ಬಂದಿತ್ತು. ಜರ್ಮನಿ ಮಿಲಿಟರಿಯ ಮೇಜರ್‌ಗಳಲ್ಲಿ ಒಬ್ಬನಾಗಿದ್ದ ಅರ್ನಾಲ್ಡ್ ಕಲ್ಲೆ ಎಂಬಾತ ಈಕೆಯ ಪ್ರಿಯತಮರಲ್ಲಿ ಒಬ್ಬನಾಗಿದ್ದ. ಒಂದು ಹಂತದಲ್ಲಿ ಆತನಿಗೂ ಮಾತಾಹರಿಯ ಬಗ್ಗೆ ಕಿರಿಕಿರಿ ಎನ್ನಿಸಿ ಈಕೆಯನ್ನು ನಿವಾರಿಸಿಕೊಳ್ಳಲು ಯತ್ನಿಸಿದ್ದ.
ಮಾತಾಹರಿಯನ್ನು ಪ್ಯಾರಿಸ್‌ನ ಒಂದು ಐಷಾರಾಮಿ ಹೋಟೆಲ್‌ನಲ್ಲಿ 1917ರಲ್ಲಿ ಬಂಧಿಸ ಲಾಯಿತು. ಈಕೆಯ ಪ್ರಿಯತಮ ಅರ್ನಾಲ್ಡ್ ಕಲ್ಲೆ ಈಕೆಯ ಬಂಧನಕ್ಕೆ ಮಾಹಿತಿದಾರ ಎನ್ನ ಲಾಗುತ್ತಿದೆ. 50 ಸಾವಿರ ಫ್ರೆಂಚ್ ಸೈನಿಕರ ಸಾವಿಗೆ ಈಕೆ ಕಾರಣ ಎಂದು ಆರೋಪಿಸಲಾಗಿತ್ತು. ಈ ಸಾವುಗಳಿಗೆ ಈಕೆ ಹೇಗೆ ಕಾರಣ ಎಂಬ ಬಗ್ಗೆ ನಿರ್ದಿಷ್ಟ ಪುರಾವೆಗಳು ಹಾಗೂ ಫ್ರೆಂಚ್ ಸೈನ್ಯದ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡಿದ ಬಗ್ಗೆ ಸಾಕ್ಷ್ಯಗಳು ಇಲ್ಲದಿದ್ದರೂ, ಫ್ರೆಂಚ್ ಸರಕಾರ ಈಕೆಯ ಮೇಲೆ ಬೇಹುಗಾರಿಕೆಯ ಆರೋಪ ಹೊರಿಸಿ, ದಾರುಣ ಜೈಲುವಾಸಕ್ಕೆ ಈಡುಮಾಡಿತು ಮತ್ತು ಅಂತಿಮವಾಗಿ ಮರಣದಂಡನೆ ವಿಧಿಸಿತು.
ಮಾತಾಹರಿಯ ಮೂಲಕ ಆರಂಭವಾದ ಮಧುಜಾಲದ ಬೇಹುಗಾರಿಕೆ ಮುಂದೆ ಬಹಳಷ್ಟು ಪ್ರಕರಣಗಳಿಗೆ ನಾಂದಿ ಹಾಡಿತು. ಇಂದಿಗೂ ಮಧುಜಾಲದ ಹಲವಾರು ಪ್ರಕರಣಗಳು ಸುದ್ದಿ ಯಾಗುತ್ತಿವೆ. ಹೆಣ್ಣಿನ ಬಗೆಗಿನ ಪುರುಷನ ದೌರ್ಬಲ್ಯವೇ ಮಧುಜಾಲದ ಅಡಿಪಾಯ. ಭಾರತದ ಇತಿಹಾಸದಲ್ಲಿ ಪ್ರಚಂಡ ಬುದ್ಧಿವಂತನೆಂದು ಹೆಸರಾದ ಚಾಣಕ್ಯನು, ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ವಿಷಕನ್ಯೆಯರನ್ನು ಬಳಸಿದ್ದನ್ನು ಮಧುಜಾಲಕ್ಕೆ ಸಮಾನಾಂತರವಾಗಿ ಉದಾಹರಿಸ ಬಹುದು.
ಮಿಲಿಟರಿ ಗೂಢಚರ್ಯೆಯಲ್ಲಿ ಮಧುಜಾಲವು ಸ್ವಾಭಾವಿಕವೇ ಆಗಿರಬಹುದು; ಆದರೆ ರಾಜ ಕೀಯಕ್ಕೆ ಇದರ ಪ್ರವೇಶವಾಗುವುದನ್ನು ಖಂಡಿತ ಒಪ್ಪಲಾಗದು. ರಾಜಕಾರಣ ಹೊಲಸೆದ್ದಿದೆ ಎಂಬ ಆರೋಪ ಈಗಾಗಲೇ ಕೇಳಿಬರುತ್ತಿದೆ. ಅದನ್ನು ಶುದ್ಧೀಕರಿಸುವ ಪ್ರಯತ್ನ ಮಾಡಬೇಕೇ ಹೊರತು, ಅದನ್ನು ಇನ್ನಷ್ಟು ಅಧಃಪತನಕ್ಕೆ ದೂಡುವುದು ಸರ್ವಥಾ ಸರಿಯಲ್ಲ. ಸಜ್ಜನರು ರಾಜಕೀಯ ವನ್ನು ಪ್ರವೇಶಿಸಬೇಕಿರುವುದು ಅಪೇಕ್ಷಣೀಯ. ಮಧುಜಾಲಕ್ಕೆ ಮುಂದಾಗುವವರನ್ನು/ಒಳಗಾಗು ವವರನ್ನು ಅವರೆಷ್ಟೇ ಪ್ರಭಾವಿಯಾಗಿದ್ದರೂ ಮುಲಾಜು ನೋಡದೆ ಉಚ್ಚಾಟಿಸಬೇಕು. ಈ ಪಿಡುಗು ರಾಜಕೀಯ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕ ಜೀವನದಲ್ಲಿ ಮುಂದೆಂದೂ ತಲೆಯೆತ್ತದಂತೆ ನೋಡಿ ಕೊಳ್ಳಬೇಕಿರುವುದು ಎಲ್ಲರ ಜವಾಬ್ದಾರಿ.
(ಲೇಖಕರು ಸಾಮಾಜಿಕ ಕಾರ್ಯಕರ್ತರು)