MarilingaGowda Malipatil Column: ಕೆಪಿಎಸ್ ಶಾಲೆಯ ಉಸಾಬರಿಯೇಕೆ ?
ಗುಣಮಟ್ಟದಲ್ಲಿ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂಥ ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನು ಸರಕಾರ ಪ್ರಾರಂಭಿಸಿತು. ಆದರೆ, ಇವಕ್ಕೆ ಸಂಬಂಧಿಸಿದ ‘ಶಾಲಾಭಿವೃದ್ಧಿ ಮತ್ತು ಮೇಲ್ವಿ ಚಾರಣಾ ಸಮಿತಿ’ಗೆ (ಎಸ್ ಡಿಎಂಸಿ) ಶಾಸಕರನ್ನು ಅಧ್ಯಕ್ಷರನ್ನಾಗಿ ಪರಿಗಣಿಸುವ ಶಿಕ್ಷಣ ಇಲಾಖೆಯ ನಿರ್ಧಾರವು ಈ ಹೊಸ ವ್ಯವಸ್ಥೆ ಯನ್ನು ಹಾಳುಗೆಡವಬಹುದು ಎಂಬ ಆತಂಕ ಪೋಷಕರಿಗಿದೆ

ಕರ್ನಾಟಕ ಪಬ್ಲಿಕ್ ಶಾಲೆ

ಕಳಕಳಿ
ಮರಿಲಿಂಗಗೌಡ ಮಾಲಿಪಾಟೀಲ್
ಉತ್ತಮ ಗುಣಮಟ್ಟದ, ಇಂಗ್ಲಿಷ್ ಮಾಧ್ಯಮದ ಮತ್ತು ದುಬಾರಿ ಶುಲ್ಕವಿರುವ ಖಾಸಗಿ ಶಾಲೆಗಳಲ್ಲಿ ಬಡವರ ಮಕ್ಕಳು ಕಲಿಯುವುದು ಅಸಾಧ್ಯ; ಹೀಗಾಗಿ ಸರಕಾರವೇ ಇಂಗ್ಲಿಷ್ ಮಾಧ್ಯಮದ ಶಾಲೆ ಗಳನ್ನು ಆರಂಭಿಸಲಿ ಎಂಬುದು ಪೋಷಕರ ಅಭಿಪ್ರಾಯವಾಗಿತ್ತು.
ಅಂತೆಯೇ, ಗುಣಮಟ್ಟದಲ್ಲಿ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂಥ ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನು ಸರಕಾರ ಪ್ರಾರಂಭಿಸಿತು. ಆದರೆ, ಇವಕ್ಕೆ ಸಂಬಂಧಿಸಿದ ‘ಶಾಲಾಭಿವೃದ್ಧಿ ಮತ್ತು ಮೇಲ್ವಿ ಚಾರಣಾ ಸಮಿತಿ’ಗೆ (ಎಸ್‌ಡಿಎಂಸಿ) ಶಾಸಕರನ್ನು ಅಧ್ಯಕ್ಷರನ್ನಾಗಿ ಪರಿಗಣಿಸುವ ಶಿಕ್ಷಣ ಇಲಾಖೆಯ ನಿರ್ಧಾರವು ಈ ಹೊಸ ವ್ಯವಸ್ಥೆಯನ್ನು ಹಾಳುಗೆಡವಬಹುದು ಎಂಬ ಆತಂಕ ಪೋಷಕರಿಗಿದೆ.
ಈ ಶಾಲೆಗಳನ್ನು ಪೋಷಕರ, ಅಧ್ಯಾಪಕರ ಮತ್ತು ಶಿಕ್ಷಣ ತಜ್ಞರ ಸುಪರ್ದಿಯಲ್ಲಿಯೇ ನಡೆಸಬಾರ ದೇಕೆ ಎಂಬ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ. ಬಡವ-ಶ್ರೀಮಂತರೆಂಬ ಭೇದವಿಲ್ಲದೆ ಎಲ್ಲಾ ಮಕ್ಕಳಿ ಗೂ ಶಿಕ್ಷಣವು ದೊರೆಯಬೇಕಿರುವುದು ಸಾಮಾಜಿಕ ಅಗತ್ಯ. ಆದರೆ ಖಾಸಗಿ ಶಾಲೆಗಳು ಹೆಚ್ಚತೊಡಗಿ ದಂತೆ, ‘ಇದು ಅಸಾಧ್ಯ’ ಎನಿಸತೊಡಗಿದ್ದೂ ವಾಸ್ತವವೇ.
ಇದನ್ನೂ ಓದಿ: Prabhu Chawla Column: ಟ್ರಂಪ್ ಅಭಿಯಾನ, ಮೋದಿಯವರ ವಿಶ್ವಗುರು ಎರಡೂ ಒಂದೇ
ಇಷ್ಟಾಗಿಯೂ ಖಾಸಗಿ ಶಾಲೆಗಳು ಜನಪ್ರಿಯವಾಗತೊಡಗಿದವು, ಅದೇ ವೇಳೆಗೆ ಸರಕಾರಿ ಶಾಲೆಗಳ ಲ್ಲಿನ ತೇರ್ಗಡೆ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿತ್ತು. ಇದನ್ನು ತಹಬಂದಿಗೆ ತರಲು ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ರಾಜ್ಯ ಸರಕಾರವು ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನು ಆರಂಭಿಸಿತು. ‘ಬಡವರ ಮಕ್ಕಳೂ ಬೆಳೆಯಬೇಕು’ ಎನ್ನುವವರಿಗೆ ಈ ಶಾಲೆಗಳು ವರದಾನ ವಾದವು.
ಈ ಶಾಲೆಗಳಲ್ಲಿ ಕನ್ನಡದ ಜತೆಗೆ ಇಂಗ್ಲಿಷ್ ಮಾಧ್ಯಮವೂ ಇದ್ದು, ಎಲ್‌ಕೆಜಿಯಿಂದ 12ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತದೆ. ಹೀಗಾದಾಗ ಪ್ರತಿ ವಿದ್ಯಾರ್ಥಿಯ ಮೇಲೂ ಶಿಕ್ಷಕರು ಗಮನಹರಿಸಲು ಸಾಧ್ಯ ಮತ್ತು ಶಿಕ್ಷಕರ ಬೋಧನಾ ಸಾಮರ್ಥ್ಯವೂ ಹೆಚ್ಚುತ್ತದೆ. ಈ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್, ಇಂಟರಾಕ್ಟಿವ್ ಬ್ಲ್ಯಾಕ್‌ಬೋರ್ಡ್, ಸುಸಜ್ಜಿತ ಪ್ರಯೋಗಾಲಯ ಮತ್ತು ಗ್ರಂಥಾಲಯ, ಸಿಸಿಟಿವಿ, ಅಗತ್ಯವಿರುವಷ್ಟು ಕೋಣೆಗಳು, ರಾಷ್ಟ್ರೀಯ ವಿದ್ಯಾರ್ಥಿ ವೇತನದ ಪರೀಕ್ಷೆಗಳನ್ನು ಎದುರಿಸಲು ವಿಶೇಷ ತರಗತಿಗಳು ಇಂಥ ವ್ಯವಸ್ಥೆ/ಪರಿಕರಗಳಲ್ಲದೆ ಸಾಕಷ್ಟು ಶಿಕ್ಷಕರೂ ಲಭ್ಯ.
ಒಟ್ಟಾರೆಯಾಗಿ, ಯಾವುದೇ ಖಾಸಗಿ ಶಾಲೆಗೆ ಸೆಡ್ಡು ಹೊಡೆಯಬಲ್ಲ ಸಜ್ಜಿಕೆಯಿಲ್ಲಿದೆ. ಈ ಶಾಲೆಗೆ ಹಿರಿಯ ಉಪನ್ಯಾಸಕರೊಬ್ಬರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುತ್ತಿದ್ದು, ಅವರು ತಿಂಗಳಲ್ಲಿ ಕನಿಷ್ಠ ೨ ಬಾರಿ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಬೇಕಿರು ತ್ತದೆ. ಈ ಸಜ್ಜಿಕೆ ಜನಪ್ರಿಯವಾದ ಕಾರಣದಿಂದಾಗಿ ಇಂದು ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳಿವೆ.
ಆದರೆ, ಪಾತ್ರೆಯಲ್ಲಿನ ಹಾಲಿಗೆ ಹನಿಯಷ್ಟು ಹುಳಿ ಬೆರೆತರೆ ಹಾಳಾಗುವಂತೆಯೇ, ಉತ್ತಮ ವ್ಯವಸ್ಥೆ ಯೊಂದು ಒಂದು ತಪ್ಪು ನಿರ್ಧಾರದಿಂದಾಗಿ ಕುಸಿಯಬಹುದು. ಕೆಡಹುವುದು ಸುಲಭ, ಆದರೆ ಕಟ್ಟುವುದು ಕಷ್ಟ! ಶಿಕ್ಷಣ ಇಲಾಖೆಯು ಇತ್ತೀಚೆಗೆ ಕೈಗೊಂಡ ನಿರ್ಧಾರವೊಂದು ಈ ಅಭಿಪ್ರಾಯಕ್ಕೆ ಕಾರಣವೆನ್ನಬಹುದು. ಕರ್ನಾಟಕ ಪಬ್ಲಿಕ್ ಶಾಲೆಗಳ ‘ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ’ಗೆ ಸ್ಥಳೀಯ ಶಾಸಕರನ್ನು ಪರಿಗಣಿಸಬೇಕೆಂದು ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ‘ಶಾಸಕರು ಇಲ್ಲೇಕೆ?’ ಎಂಬ ಪ್ರಶ್ನೆಯು ಪೋಷಕರಲ್ಲಿ ಮೂಡುವುದಕ್ಕೆ ಅದು ಕಾರಣವಾಗಿದೆ.
ಶಾಸಕರಿಲ್ಲದೆ ವಿದ್ಯಾಸಂಸ್ಥೆಯನ್ನು ನಡೆಸಲು ಸಾಧ್ಯವಿಲ್ಲವೆಂದು ಇಲಾಖೆ ಭಾವಿಸಿದೆಯೇ? ನಡೆಸ ಬಹುದು ಎಂದಾದರೆ ಶಾಸಕರನ್ನು ಈ ಶಾಲೆಗಳಿಂದ ದೂರವಿಡಬಾರದೇಕೆ? ಎಲ್ಲಾ ಕಡೆಗಳಲ್ಲೂ ಸ್ಥಳೀಯ ಶಾಸಕರು ಮೂಗು ತೂರಿಸುವುದು ಅನಿವಾರ್ಯವೇ? ಶಾಸಕರನ್ನು ಹೀಗೆ ಒಳಗೆ ಬಿಟ್ಟು ಕೊಂಡರೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು.
ಏಕೆಂದರೆ, ಬಹುತೇಕ ಶಾಸಕರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಖಾಸಗಿ ಶಾಲೆಗಳ ಜತೆ ನಂಟು ಹೊಂದಿದ್ದಾರೆ. ಬಹಳಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ, ಶಾಸಕರಲ್ಲದಿದ್ದರೆ ಅವರ ಸಂಬಂಧಿಕರು ಖಾಸಗಿ ಶಾಲೆಗಳನ್ನು ನಡೆಸುತ್ತಿರುವಂಥ ನಿದರ್ಶನಗಳಿವೆ. ಹೀಗೆ ಖಾಸಗಿ ಶಾಲೆಯೊಂದಿಗೆ ನಂಟು ಹೊಂದಿರುವ ಶಾಸಕರು, ಕರ್ನಾಟಕ ಪಬ್ಲಿಕ್ ಶಾಲೆಗಳ ‘ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ’ಯನ್ನು ಸೇರಿಕೊಂಡರೆ/ಅಧ್ಯಕ್ಷರಾದರೆ ಏನಾಗಬಹುದು? ಅದರಿಂದಾಗಿ ಒಳ್ಳೆಯ ವ್ಯವಸ್ಥೆ ಯೊಂದು ಕುಲಗೆಡುವ ಸಾಧ್ಯತೆಯೇ ಹೆಚ್ಚು.
ಶಾಸಕರ ಪ್ರವೇಶವಾಯಿತೆಂದರೆ, ರಾಜಕೀಯವೂ ಅಡಿಯಿಟ್ಟಿತು ಎಂದೇ ಅರ್ಥ. ಸ್ಥಳೀಯ ಶಾಸಕರು ಇಂಥ ಸಮಿತಿಯ ಅಧ್ಯಕ್ಷರಾದರೆ, ರಾಜಕೀಯವಾಗಿ ತಮ್ಮ ಎದುರಾಳಿಯಾಗಿರುವ ಪೋಷಕರ ಬಗ್ಗೆ ಅವರೆಂಥ ನಿಲುವು ತಳೆಯುತ್ತಾರೆಂಬುದನ್ನು ಯಾರಾದರೂ ಅರ್ಥಮಾಡಿ ಕೊಳ್ಳಬಹುದು. ಶಾಸಕರಿಗೆ ಸ್ವಂತ ಶಾಲೆಯ ಮೇಲಿರುವ ಆಸಕ್ತಿ ಮತ್ತು ಆದ್ಯತೆ ಸರಕಾರಿ ಶಾಲೆಗಳ ಮೇಲಿರಲು ಸಾಧ್ಯವೇ? ಇಂಥ ಸಂದರ್ಭದಲ್ಲಿ ಸ್ವಂತ ಶಾಲೆಯ ಉನ್ನತಿಗಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ಅಭಿವೃದ್ಧಿಗೆ ಅವರು ಪರೋಕ್ಷವಾಗಿ ಅಡ್ಡಗಾಲು ಹಾಕಿದರೆ ಅದನ್ನು ‘ಮಾನವ ಸಹಜ ವರ್ತನೆ’ ಎಂದಷ್ಟೇ ಭಾವಿಸಬಹುದು; ಆದರೆ ಇಂಥ ಸ್ವಾರ್ಥದ ಚರ್ಯೆಯಿಂದಾಗಿ ನಷ್ಟಕ್ಕೊಳ ಗಾಗುವುದು ಮಾತ್ರ ಇಂದಿನ ವಿದ್ಯಾರ್ಥಿಗಳು, ಅರ್ಥಾತ್ ಭವಿಷ್ಯದ ಭಾರತದ ಪ್ರಜೆಗಳು.
ಶಾಸಕರು ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರಾದರೆ, ಹಲವು ಪರೋಕ್ಷ ವಿಧಾನಗಳ ಮೂಲಕ ಕರ್ನಾಟಕ ಪಬ್ಲಿಕ್ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ನಿಯಂತ್ರಿಸಿ ತಮ್ಮ ಸ್ವಂತದ ಶಾಲೆಗೆ ನೆರವಾಗಬಹುದು. ಶಾಲಾಭಿವೃದ್ಧಿಗೆ ಹಣ ಪಡೆಯಲು ಶಾಲಾ ಮುಖ್ಯಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಚೆಕ್‌ಗೆ ಸಹಿ ಹಾಕಬೇಕಾಗುತ್ತದೆ.
ಆಗ ಶಾಸಕರು ಯಾವುದಾದರೂ ಕುಂಟುನೆಪ ಹೇಳಿ ಚೆಕ್‌ಗೆ ಸಹಿಹಾಕುವುದನ್ನು ವಿಳಂಬಿಸ ಬಹುದು, ಅನುದಾನ ಬಳಕೆಯಾಗದಂತೆ ಪರೋಕ್ಷವಾಗಿ ಯತ್ನಿಸಬಹುದು (ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆಗೆ ವಾರ್ಷಿಕ 5 ಲಕ್ಷ ರು. ಮತ್ತು ಪ್ರತಿ ತರಗತಿ ಕೊಠಡಿಯ ದುರಸ್ತಿಗೆ 1 ಲಕ್ಷ ರು. ಅನುದಾನ ಲಭ್ಯವಿದೆ), ಶಿಕ್ಷಕರನ್ನು ನಿರುತ್ಸಾಹಗೊಳಿಸಬಹುದು, ಪರೋಕ್ಷ ಒತ್ತಡ ಹೇರಿ ಚೆನ್ನಾಗಿ ಪಾಠ ಮಾಡಲಾಗದಂಥ ವಾತಾವರಣವನ್ನು ಸೃಷ್ಟಿಸಬಹುದು (ಇದೆಲ್ಲಾ ನಡೆಯುತ್ತಿದೆ ಎನ್ನು ತ್ತಿಲ್ಲ, ಆದರೆ ನಡೆಯುವ ಸಾಧ್ಯತೆಗಳಿವೆ). ಹೀಗೆಲ್ಲಾ ಆಗಿ ಸಕಾಲಕ್ಕೆ ಸರಿಯಾಗಿ ಹೆಜ್ಜೆಯಿಡ ದಿದ್ದಾಗ ಅಭಿವೃದ್ಧಿಯಲ್ಲಿ ಹಿಂದೆ ಬೀಳುವುದು ಸಹಜ.
ಶಾಸಕರಿಗೆ ತಂತಮ್ಮ ಕ್ಷೇತ್ರಗಳಲ್ಲಿ ಮಾಡಬೇಕಿರುವ ಅಭಿವೃದ್ಧಿ ಕೆಲಸಗಳು ಸಾಕಷ್ಟಿವೆ. ಕೆಲವು ಕ್ಷೇತ್ರಗಳನ್ನು ನೋಡಿದರೆ, ಶಾಸಕರು ಕೆಲಸವನ್ನೇ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಿರುವಾಗ, ಅವರಿಗೆ ಅನಗತ್ಯ ಹೊರೆ ಹೊರಿಸುವುದು ವಿವೇಕದ ನಡೆ ಅಲ್ಲ. ಕೆಲವೊಮ್ಮೆ ಏನೋ ಲೆಕ್ಕಾಚಾರ ಹಾಕಿ, ಇನ್ನಾವುದೋ ಯೋಚನೆಗಳ ಪ್ರಭಾವದಿಂದಾಗಿ ಇಂಥ ಒಂದಷ್ಟು ನಿರ್ಧಾರ ಗಳನ್ನು ಕೈಗೊಳ್ಳಲಾಗುತ್ತದೆ. ಶಾಸಕರನ್ನು ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿ ಮತ್ತು ಮೇಲ್ವಿ ಚಾರಣಾ ಸಮಿತಿಗೆ ಪರಿಗಣಿಸುವಂತೆ ಶಿಕ್ಷಣ ಇಲಾಖೆಯಿಂದ ಹೊಮ್ಮಿರುವ ಸೂಚನೆಯು ಅಂಥದೇ ಒಂದು ತಪ್ಪು ನಿರ್ಧಾರ.
ಇದರಿಂದ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎಂಬುದು ಮನವರಿಕೆಯಾದ ನಂತರ, ಅದರಿಂದ ಹಿಂದೆ ಸರಿಯುವುದು ಜಾಣತನ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ತನ್ನ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ. ಯಾಕೆಂದರೆ, ಶಿಕ್ಷಣ ಕ್ಷೇತ್ರ ಕಲುಷಿತವಾದರೆ ಒಂದು ತಲೆಮಾರೇ ಅದರಿಂದ ಹಾನಿಗೊಳಗಾಗುತ್ತದೆ, ಅದರ ಪರಿಣಾಮವನ್ನು ನಾಡು ಅನುಭವಿಸಬೇಕಾಗುತ್ತದೆ. ಸದ್ಯ ಕ್ಕಂತೂ ಕರ್ನಾಟಕ ಪಬ್ಲಿಕ್ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣದ ಅಗತ್ಯವನ್ನು ಪೂರೈಸು ತ್ತಿವೆ; ಅವನ್ನು ಹಾಗೇ ಮುಂದುವರಿಸುವುದು ಸರಿಯಾದ ನಿರ್ಧಾರ.
(ಲೇಖಕರು ಸಾಮಾಜಿಕ ಕಾರ್ಯಕರ್ತರು)