Mohan Vishwa Column: ‘ಆಪರೇಷನ್ ಅಲ್ ಅನ್ಫಾಲ್’ ಕರಾಳ ಅಧ್ಯಾಯ
ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಆಡಳಿತದ ಅವಧಿಯಲ್ಲಿ ನಡೆದ ‘ಆಪರೇಷನ್ ಅಲ್ ಅನ್ಫಾಲ್’ ಇಂತಹದ್ದೇ ಒಂದು ಭೀಕರ ದುರಂತ. 1988ರ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಉತ್ತರ ಇರಾಕ್ನ ಕುರ್ಡಿಷ್ ಜನಸಮುದಾಯದ ವಿರುದ್ಧ ನಡೆಸಲಾದ ಈ ಸೇನಾ ಕಾರ್ಯಾಚರಣೆ ಆಧುನಿಕ ಜಗತ್ತಿನ ಅತ್ಯಂತ ಭೀಕರ ಜನಾಂಗೀಯ ನರಮೇಧಗಳಂದು ಎಂದು ಗುರುತಿಸಲ್ಪಟ್ಟಿದೆ. ಅಧಿಕಾರ, ರಾಜಕೀಯ ನಿಯಂತ್ರಣ ಮತ್ತು ಭದ್ರತೆಯ ಹೆಸರಿನಲ್ಲಿ ಮಾನವ ಜೀವಗಳಿಗೆ ನೀಡಲಾದ ಬೆಲೆ ಎಷ್ಟು ಅಮಾನವೀಯವಾಗಿತ್ತು ಎಂಬುದಕ್ಕೆ ಅನ್ಫಾಲ್ ಆಪರೇಷನ್ ಸಾಕ್ಷಿಯಾಗಿದೆ.
-
ವೀಕೆಂಡ್ ವಿತ್ ಮೋಹನ್
ವಿಶ್ವದ ಇತಿಹಾಸದಲ್ಲಿ ಯುದ್ಧಗಳು ನಡೆದಿವೆ, ಸಾಮ್ರಾಜ್ಯಗಳು ವಿಸ್ತರಿಸಿವೆ, ಅಧಿಕಾರಕ್ಕಾಗಿ ರಾಷ್ಟ್ರಗಳು ಪರಸ್ಪರ ಹೋರಾಡಿವೆ. ಆದರೆ ಒಂದು ದೇಶದ ಆಡಳಿತಗಾರನೇ ತನ್ನ ದೇಶದ ನಾಗರಿಕರ ವಿರುದ್ಧ ಸೇನೆಯನ್ನು ಬಳಸಿಕೊಂಡು, ಒಂದು ನಿರ್ದಿಷ್ಟ ಜನಾಂಗವನ್ನು ವ್ಯವಸ್ಥಿತ ವಾಗಿ ನಾಶಪಡಿಸಲು ಮುಂದಾದಾಗ ಅದು ಕೇವಲ ಯುದ್ಧದ ಕ್ರೌರ್ಯವಾಗಿ ಉಳಿಯುವುದಿಲ್ಲ; ಮಾನವ ನಾಗರಿಕತೆಯ ಮೇಲಿನ ಅಪರಾಧವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ.
ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಆಡಳಿತದ ಅವಧಿಯಲ್ಲಿ ನಡೆದ ‘ಆಪರೇಷನ್ ಅಲ್ ಅನ್ಫಾಲ್’ ಇಂತಹದ್ದೇ ಒಂದು ಭೀಕರ ದುರಂತ. 1988ರ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಉತ್ತರ ಇರಾಕ್ನ ಕುರ್ಡಿಷ್ ಜನಸಮುದಾಯದ ವಿರುದ್ಧ ನಡೆಸಲಾದ ಈ ಸೇನಾ ಕಾರ್ಯಾಚರಣೆ ಆಧುನಿಕ ಜಗತ್ತಿನ ಅತ್ಯಂತ ಭೀಕರ ಜನಾಂಗೀಯ ನರಮೇಧಗಳಂದು ಎಂದು ಗುರುತಿಸಲ್ಪಟ್ಟಿದೆ. ಅಧಿಕಾರ, ರಾಜಕೀಯ ನಿಯಂತ್ರಣ ಮತ್ತು ಭದ್ರತೆಯ ಹೆಸರಿನಲ್ಲಿ ಮಾನವ ಜೀವಗಳಿಗೆ ನೀಡಲಾದ ಬೆಲೆ ಎಷ್ಟು ಅಮಾನವೀಯವಾಗಿತ್ತು ಎಂಬುದಕ್ಕೆ ಅನ್ಫಾಲ್ ಆಪರೇಷನ್ ಸಾಕ್ಷಿಯಾಗಿದೆ.
ಇರಾಕ್ನ ಉತ್ತರ ಭಾಗದಲ್ಲಿ ನೆಲೆಸಿದ್ದ ಕುರ್ಡಿಷ್ ಜನರು ತಮ್ಮದೇ ಆದ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಐತಿಹಾಸಿಕ ಗುರುತನ್ನು ಹೊಂದಿರುವ ಸಮುದಾಯ. ಇರಾಕ್ ಮಾತ್ರವಲ್ಲದೆ ಟರ್ಕಿ, ಇರಾನ್ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿಯೂ ಕುರ್ಡಿಷ್ ಜನಸಂಖ್ಯೆ ನೆಲೆಸಿದೆ. ಇರಾಕ್ನಲ್ಲಿ ದೀರ್ಘಕಾಲದಿಂದ ಕುರ್ಡಿಷ್ ಸಮುದಾಯವು ಹೆಚ್ಚಿನ ಸ್ವಾಯತ್ತತೆ ಮತ್ತು ರಾಜಕೀಯ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿತ್ತು.
ಇದನ್ನೂ ಓದಿ: Mohan Vishwa Column: ಚಿನ್ನ ಬೆಲೆ ಇಳಿಕೆ: ಮೋದಿ ದೂರದೃಷ್ಟಿ
ಕುರ್ಡಿಷ್ ರಾಜಕೀಯ ಸಂಘಟನೆಗಳು ಮತ್ತು ಪೆಶ್ಮಗಾರ್ ಎಂಬ ಸಶಸ್ತ್ರ ಹೋರಾಟಗಾರರು ಇರಾಕ್ ಸರ್ಕಾರದ ವಿರುದ್ಧ ಹಲವು ಹಂತಗಳಲ್ಲಿ ಸಂಘರ್ಷ ನಡೆಸಿದ್ದರು. ಇದೇ ಸಂದರ್ಭದಲ್ಲಿ 1980ರಿಂದ 1988ರವರೆಗೆ ಇರಾನ್ ಮತ್ತು ಇರಾಕ್ ನಡುವೆ ಭೀಕರ ಯುದ್ಧ ನಡೆಯುತ್ತಿತ್ತು. ಈ ಯುದ್ಧದ ಸಂದರ್ಭದಲ್ಲಿ ಕೆಲವು ಕುರ್ಡಿಷ್ ಸಶಸ್ತ್ರ ಸಂಘಟನೆಗಳು ಇರಾನ್ನೊಂದಿಗೆ ಸಹಕಾರ ಹೊಂದಿದ್ದವು. ಇದನ್ನು ನೆಪವಾಗಿಸಿಕೊಂಡ ಸದ್ಧಾಂ ಹುಸೇನ್ ಆಡಳಿತ, ಉತ್ತರ ಇರಾಕ್ನ ಕುರ್ಡಿಷ್ ಪ್ರದೇಶಗಳನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೆಂದು ಪರಿಗಣಿಸಿತು. ಆದರೆ ಸಶಸ್ತ್ರ ಸಂಘಟನೆಗಳ ವಿರುದ್ಧದ ಹೋರಾಟವೆಂದು ಆರಂಭವಾದ ಕ್ರಮ, ಕ್ರಮೇಣ ಸಾಮಾನ್ಯ ನಾಗರಿಕ ರನ್ನೇ ಗುರಿಯಾಗಿಸಿಕೊಂಡ ವ್ಯವಸ್ಥಿತ ದಮನ ಮತ್ತು ಹತ್ಯಾಕಾಂಡವಾಗಿ ಪರಿವರ್ತನೆ ಯಾಯಿತು.
1988ರ ಫೆಬ್ರವರಿ 23ರಂದು ಆರಂಭಗೊಂಡ ಈ ಕಾರ್ಯಾಚರಣೆ ಸೆಪ್ಟೆಂಬರ್ 6ರವರೆಗೆ ವಿವಿಧ ಪ್ರದೇಶಗಳಲ್ಲಿ ಮುಂದುವರಿಯಿತು. ಇರಾಕ್ನ ಉತ್ತರ ಭಾಗದಲ್ಲಿ ಕುರ್ಡಿಷ್ ಹೋರಾಟಗಾರರ ಪ್ರಭಾವವಿದ್ದ ಪ್ರದೇಶಗಳನ್ನು ಹಂತ ಹಂತವಾಗಿ ಸುತ್ತುವರಿದು, ಹಳ್ಳಿಗಳ ಮೇಲೆ ದಾಳಿ ನಡೆಸಿ, ಜನರನ್ನು ಬಂಧಿಸಿ, ಅವರನ್ನು ನಿರ್ದಿಷ್ಟ ಬಂಧನ ಕೇಂದ್ರಗಳಿಗೆ ಕರೆದೊಯ್ಯುವ ವ್ಯವಸ್ಥಿತ ಕಾರ್ಯತಂತ್ರವನ್ನು ಅನುಸರಿಸಲಾಯಿತು. ಈ ಕಾರ್ಯಾಚರಣೆಯ ಪ್ರಮುಖ ಹೊಣೆಗಾರರಲ್ಲಿ ಒಬ್ಬನಾಗಿದ್ದವನು ‘ಅಲಿ ಹಸನ್ ಅಲ್ ಮಜೀದ್’. ಆಪರೇಷನ್ ಅನ್ಫಾಲ್ನ ಅತ್ಯಂತ ಭೀಕರ ಮುಖವೆಂದರೆ ರಾಸಾಯನಿಕ ಅಸ್ತ್ರಗಳ ಬಳಕೆ. ಸಾಮಾನ್ಯ ಯುದ್ಧದಲ್ಲಿ ಶತ್ರು ಸೇನೆಯೊಂದಿಗೆ ಹೋರಾಡುವ ಬದಲು, ವಿಷಕಾರಿ ರಾಸಾಯನಿಕಗಳನ್ನು ಬಳಸಿಕೊಂಡು ಜನವಸತಿ ಪ್ರದೇಶಗಳನ್ನೇ ದಾಳಿಯ ಗುರಿಯಾಗಿಸಲಾಯಿತು.
ಸಾಸಿವೆ ಅನಿಲ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವ ಸಾರಿನ್ನಂತಹ ರಾಸಾಯನಿಕ ಅಸ್ತ್ರಗಳ ಬಳಕೆಯ ಬಗ್ಗೆ ತನಿಖಾ ವರದಿಗಳು ದಾಖಲಿಸಿವೆ. ಇಂತಹ ಅಸ್ತ್ರಗಳು ಮಾನವನ ಚರ್ಮ, ಕಣ್ಣು, ಉಸಿರಾಟದ ವ್ಯವಸ್ಥೆ ಮತ್ತು ನರಮಂಡಲದ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಅನಿಲದ ಸಂಪರ್ಕಕ್ಕೆ ಬಂದವರು ತೀವ್ರ ಉಸಿರಾಟದ ತೊಂದರೆ, ದೃಷ್ಟಿ ನಷ್ಟ, ದೇಹದ ಅಂಗಾಂಗ ಗಳಿಗೆ ಹಾನಿ, ಸೆಳೆತ ಮತ್ತು ಸಾವಿಗೆ ಒಳಗಾಗಬಹುದು.
ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇಂತಹ ದಾಳಿಗಳಿಂದ ಸೈನಿಕರಷ್ಟೇ ಅಲ್ಲದೆ ತಮ್ಮ ಮನೆ ಗಳಲ್ಲಿ ವಾಸಿಸುತ್ತಿದ್ದ ಸಾಮಾನ್ಯ ನಾಗರಿಕರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಬಲಿಯಾದರು. ಹಳ್ಳಿಗಳ ಮೇಲೆ ದಾಳಿ ನಡೆದಾಗ ಜೀವ ಉಳಿಸಿಕೊಳ್ಳಲು ಓಡಿಹೋದವರಿಗೂ ಸುರಕ್ಷಿತ ಆಶ್ರಯ ಸಿಗುವುದು ಕಷ್ಟವಾಗಿತ್ತು. ಈ ಕರಾಳ ಇತಿಹಾಸದಲ್ಲಿ ಅತ್ಯಂತ ಹೆಚ್ಚು ನೆನಪಿಸಿ ಕೊಳ್ಳಲಾಗುವ ಘಟನೆ 1988ರ ಮಾರ್ಚ್ 16ರಂದು ನಡೆದ ‘ಹಲಬ್ಜಾ’ ರಾಸಾಯನಿಕ ದಾಳಿ.
ಇರಾಕ್ನ ಕುರ್ಡಿಷ್ ಪ್ರದೇಶದಲ್ಲಿರುವ ಹಲಬ್ಜಾ ಪಟ್ಟಣವು ಆ ದಿನ ಇತಿಹಾಸದ ಅತ್ಯಂತ ಭೀಕರ ರಾಸಾಯನಿಕ ದಾಳಿಗಳಲ್ಲಿ ಒಂದಕ್ಕೆ ಸಾಕ್ಷಿಯಾಯಿತು. ಇರಾನ್- ಇರಾಕ್ ಯುದ್ಧದ ಸಂದರ್ಭ ದಲ್ಲಿ ಇರಾನ್ ಪಡೆಗಳು ಮತ್ತು ಕುರ್ಡಿಷ್ ಪೆಶ್ಮಗಾರ್ ಹೋರಾಟಗಾರರು ಆ ಪ್ರದೇಶದಲ್ಲಿ ಮುನ್ನಡೆ ಸಾಧಿಸಿದ್ದ ಹಿನ್ನೆಲೆಯಲ್ಲಿ ಇರಾಕ್ ಸೇನೆಯು ಪಟ್ಟಣದ ಮೇಲೆ ದಾಳಿ ನಡೆಸಿತು. ಆರಂಭದಲ್ಲಿ ಸಾಂಪ್ರದಾಯಿಕ ಬಾಂಬ್ ದಾಳಿ ಮತ್ತು ವಾಯುದಾಳಿಗಳು ನಡೆದವು. ನಂತರ ರಾಸಾಯನಿಕ ಅಸ್ತ್ರಗಳನ್ನು ಬಳಸಲಾಯಿತು.
ಪಟ್ಟಣದ ಬೀದಿಗಳಲ್ಲಿ, ಮನೆಗಳಲ್ಲಿ, ನೆಲಮಾಳಿಗೆಗಳಲ್ಲಿ ಮತ್ತು ಆಶ್ರಯ ಪಡೆದ ಸ್ಥಳಗಳಲ್ಲಿ ಜನರು ಸಾವನ್ನಪ್ಪಿದರು. ಕೆಲವರು ತಮ್ಮ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡೇ ಮೃತಪಟ್ಟಿದ್ದರೆ, ಇನ್ನೂ ಕೆಲವರು ಮನೆಗಳಿಂದ ಹೊರಬರಲಾರದೆ ವಿಷಕಾರಿ ಅನಿಲಕ್ಕೆ ಬಲಿಯಾದರು. ಸಾವಿರಾರು ಜನರು ಕೆಲವೇ ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡರು. ಹಲಬ್ಜಾ ಸ್ಮಾರಕ ಸಂಸ್ಥೆಯ ಇತಿಹಾಸದ ದಾಖಲೆಯ ಪ್ರಕಾರ, ಈ ದಾಳಿಯಲ್ಲಿ 5000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 10000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ದಾಳಿಯಿಂದ ಬದುಕುಳಿದವರಲ್ಲಿ ಅನೇಕರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಎದುರಿಸ ಬೇಕಾಯಿತು. ಹಲಬ್ಜಾ ದಾಳಿ ಕೇವಲ ಒಂದು ಪಟ್ಟಣದ ಮೇಲಿನ ದಾಳಿಯಾಗಿರಲಿಲ್ಲ, ರಾಸಾಯನಿಕ ಅಸ್ತ್ರಗಳನ್ನು ನಾಗರಿಕರ ವಿರುದ್ಧ ಬಳಸಿದಾಗ ಅದರ ಪರಿಣಾಮ ಎಷ್ಟು ಭೀಕರ ವಾಗಿರುತ್ತದೆ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಘಟನೆ ಅದು.
ದಾಳಿಯ ನಂತರದ ವರ್ಷಗಳಲ್ಲಿಯೂ ಬದುಕುಳಿದವರು ಆರೋಗ್ಯ ಸಮಸ್ಯೆಗಳಿಂದ ಬಳಲಿದರು. ಉಸಿರಾಟದ ಕಾಯಿಲೆಗಳು, ಕಣ್ಣುಗಳ ಸಮಸ್ಯೆಗಳು, ದೈಹಿಕ ಅಂಗವೈಕಲ್ಯಗಳು ಮತ್ತು ಮಾನಸಿಕ ಆಘಾತಗಳು ಅನೇಕ ಕುಟುಂಬಗಳನ್ನು ಕಾಡಿದವು. ಒಂದು ದಿನದ ದಾಳಿ ಹಲವು ತಲೆಮಾರುಗಳ ಜೀವನವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಹಲಬ್ಜಾ ಒಂದು ನೋವಿನ ಉದಾಹರಣೆ ಯಾಯಿತು.
ರಾಸಾಯನಿಕ ಅಸ್ತ್ರಗಳ ನಿಷೇಧ ಮತ್ತು ಅವುಗಳ ಸಂಪೂರ್ಣ ನಿರ್ಮೂಲನೆಗಾಗಿ ಜಾಗತಿಕ ಮಟ್ಟದಲ್ಲಿ ನಡೆದ ಪ್ರಯತ್ನಗಳಿಗೆ ಈ ದುರಂತವೂ ಮಹತ್ವದ ಹಿನ್ನೆಲೆಯಾಯಿತು. ರಾಸಾಯನಿಕ ಅಸ್ತ್ರಗಳ ನಿಷೇಧ ಒಪ್ಪಂದ, 1997ರಲ್ಲಿ ಜಾರಿಗೆ ಬಂದಿದ್ದು, ಇಂತಹ ದುರಂತಗಳು ಮತ್ತೆ ನಡೆಯ ದಂತೆ ತಡೆಯುವ ಅಂತಾರಾಷ್ಟ್ರೀಯ ಬದ್ಧತೆಯ ಪ್ರಮುಖ ಭಾಗವಾಯಿತು.
ಆಪರೇಷನ್ ಅನಾಲ್ನ ದುರಂತವು ಹಲಬ್ಜಾ ದಾಳಿಯ ಅಂತ್ಯಗೊಳ್ಳಲಿಲ್ಲ. ಎಂಟು ಹಂತಗಳಲ್ಲಿ ನಡೆದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅನೇಕ ಗ್ರಾಮೀಣ ಪ್ರದೇಶಗಳನ್ನು ಸುತ್ತು ವರಿಯಲಾಯಿತು. ಜನರನ್ನು ಅವರ ಮನೆಗಳಿಂದ ಹೊರಹಾಕಿ ಬಂಧನ ಕೇಂದ್ರಗಳಿಗೆ ಕರೆದೊಯ್ಯ ಲಾಯಿತು. ಪುರುಷರನ್ನು ಮಹಿಳೆಯರು ಮತ್ತು ಮಕ್ಕಳಿಂದ ಪ್ರತ್ಯೇಕಿಸಲಾಯಿತು, ಅನೇಕ ಕುಟುಂಬಗಳು ತಮ್ಮ ಬಂಧುಗಳನ್ನು ಕೊನೆಯ ಬಾರಿಗೆ ನೋಡಿದ ಸಂದರ್ಭವೇ ಅದು.
ಬಂಧನಕ್ಕೆ ಒಳಗಾದ ಸಾವಿರಾರು ಜನರು ಮತ್ತೆ ತಮ್ಮ ಮನೆಗಳಿಗೆ ಮರಳಲಿಲ್ಲ. ಕೆಲವು ಪ್ರದೇಶ ಗಳಲ್ಲಿ ಸಾಮೂಹಿಕ ಹತ್ಯೆಗಳು ನಡೆದಿದ್ದು, ಮೃತದೇಹಗಳನ್ನು ಸಾಮೂಹಿಕ ಸಮಾಧಿ ಗಳಲ್ಲಿ ಹೂಳಲಾಯಿತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಸಹ ಬಂಧನದಲ್ಲಿಟ್ಟು ಅಮಾನವೀಯ ಪರಿಸ್ಥಿತಿಗಳಲ್ಲಿ ಇರಿಸಲಾಗಿತ್ತು. ನೂರಾರು ಹಳ್ಳಿಗಳಲ್ಲ, ಸಾವಿರಾರು ಹಳ್ಳಿಗಳಲ್ಲಿದ್ದ ಮನೆಗಳು, ಶಾಲೆಗಳು, ಮಸೀದಿಗಳು, ಬಾವಿಗಳು, ಕೃಷಿಭೂಮಿಗಳು ಮತ್ತು ವಿದ್ಯುತ್ ಸೌಲಭ್ಯಗಳು ಧ್ವಂಸಗೊಂಡವು.
ಜನರ ಜೀವನೋಪಾಯದ ಮೂಲವನ್ನೇ ನಾಶಪಡಿಸುವ ಮೂಲಕ ಒಂದು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಸ್ತಿತ್ವಕ್ಕೆ ಹೊಡೆತ ನೀಡಲಾಯಿತು. ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ತನಿಖಾಧಿಕಾರಿಗಳು ಸುಮಾರು 18 ಟನ್ಗಳಷ್ಟು ವಶಪಡಿಸಿಕೊಂಡ ಇರಾಕ್ ಸರ್ಕಾರದ ದಾಖಲೆಗಳನ್ನು ಪರಿಶೀಲಿಸಿದ್ದರು. ಜೊತೆಗೆ 350ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಬದುಕುಳಿದವರನ್ನು ಸಂದರ್ಶಿಸಿದ್ದರು.
ಹ್ಯೂಮನ್ ರೈಟ್ಸ್ ವಾಚ್ನ ಅಂದಾಜಿನ ಪ್ರಕಾರ, 1988ರ ಅನಾಲ್ ಆಪರೇಷನ್ ಅವಧಿಯಲ್ಲಿ ಕನಿಷ್ಠ 50000ರಿಂದ ಗರಿಷ್ಠ 100000 ಕುರ್ಡಿಷ್ ಜನರು ಕೊಲ್ಲಲ್ಪಟ್ಟರು ಅಥವಾ ಕಾಣೆಯಾದರು. ಈ ಪ್ರಕರಣದ ಕುರಿತು ಇರಾಕ್ನಲ್ಲಿ ನಂತರ ನಡೆದ ನ್ಯಾಯಾಂಗ ವಿಚಾರಣೆಯೂ ಇತಿಹಾಸದಲ್ಲಿ ಮಹತ್ವ ಪಡೆದಿದೆ. ಸದ್ದಾಂ ಹುಸೇನ್ ಆಡಳಿತ ಪತನಗೊಂಡ ನಂತರ ಸ್ಥಾಪನೆಯಾದ ಇರಾಕ್ ಹೈ ಟ್ರಿಬ್ಯೂನಲ್ನಲ್ಲಿ ಆಪರೇಷನ್ ಅನಾಲ್ಗೆ ಸಂಬಂಧಿಸಿದ ವಿಚಾರಣೆ ನಡೆಯಿತು.
ಅಲಿ ಹಸನ್ ಅಲ್ ಮಜೀದ್ ಸೇರಿದಂತೆ ಪ್ರಮುಖ ಅಧಿಕಾರಿಗಳ ವಿರುದ್ಧ ನರಮೇಧ ಮತ್ತು ಇತರ ಅಪರಾಧಗಳ ಆರೋಪಗಳನ್ನು ವಿಚಾರಣೆ ನಡೆಸಲಾಯಿತು. 2007ರಲ್ಲಿ ಅಲಿ ಹಸನ್ ಅಲ್ ಮಜೀದ್ ಮತ್ತು ಇತರ ಇಬ್ಬರು ಹಿರಿಯ ಅಧಿಕಾರಿಗಳಿಗೆ ನರಮೇಧ ಸೇರಿದಂತೆ ಸಂಬಂಧಿತ ಅಪರಾಧಗಳಲ್ಲಿ ಶಿಕ್ಷೆ ವಿಧಿಸಲಾಯಿತು. ನಂತರ ಅಲ್ ಮಜೀದ್ಗೆ ವಿಧಿಸಿದ್ದ ಮರಣದಂಡನೆ ಯನ್ನು ಜಾರಿಗೊಳಿಸಲಾಯಿತು. 2008ರಲ್ಲಿ ಶಿಕ್ಷೆ ದೃಢಪಟ್ಟ ಬಳಿಕ 2009ರ ಜನವರಿ 25ರಂದು ಆತನನ್ನು ಗಲ್ಲಿಗೇರಿಸಲಾಯಿತು.