Gururaj Gantihole Column: ಎಲ್ʼನಿನೊ ತಂದ ಬರಗಾಲ ಮತ್ತು ಎಲ್ಲಿ ನೀರು ಎಂಬ ಎಚ್ಚರಿಕೆ
ಇಂದಿಗೂ ನಮ್ಮ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಊರಿನ ಜನರ ನೀರಿನ ಬವಣೆ ನೀಗಿಸಲು ಕಟ್ಟುತ್ತಿದ್ದ ಆ ಬೃಹತ್ ಕೆರೆಯ ಏರಿಯು ಮಳೆಯ ರಭಸಕ್ಕೆ ಪದೇಪದೇ ಒಡೆಯುತ್ತಿತ್ತು. ಊರಿನ ಒಳಿತಿಗಾಗಿ ಮತ್ತು ಆ ಕೆರೆಯ ಕಟ್ಟೆ ಭದ್ರವಾಗಿ ನಿಲ್ಲಲಿ ಎಂಬ ಏಕೈಕ ಉದ್ದೇಶದಿಂದ, ಪಾಳೆಯಗಾರರ ಮನೆತನದ ಕೆಂಚಮ್ಮ ಎಂಬ ತುಂಬು ಗರ್ಭಿಣಿ ಸೊಸೆ ತನ್ನ ಪ್ರಾಣವನ್ನೇ ಕೆರೆಗೆ ಬಲಿದಾನ ಮಾಡಿದಳು ಎಂಬ ಚಾರಿತ್ರಿಕ ಐತಿಹ್ಯವಿದೆ.
-
ಗಂಟಾಘೋಷ
ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸದಲ್ಲಿ ನೀರಿಗೆ ಪ್ರಾಣಕ್ಕಿಂತಲೂ ಮಿಗಿಲಾದ ಪವಿತ್ರ ಸ್ಥಾನವನ್ನು ನೀಡಲಾಗಿದೆ. ನಮ್ಮ ಪೂರ್ವಜರು ಕೆರೆಗಳನ್ನು ಕೇವಲ ಮಣ್ಣು ಮತ್ತು ನೀರಿನ ಗುಂಡಿಗಳಾಗಿ ನೋಡಿರಲಿಲ್ಲ, ಬದಲಾಗಿ ಅವುಗಳನ್ನು ತಮ್ಮ ಬದುಕಿನ ಜೀವನಾಡಿಗಳೆಂದು ಪೂಜಿಸಿದ್ದರು. ನೀರು ಎಷ್ಟು ಅಮೂಲ್ಯ ಮತ್ತು ಅದಕ್ಕಾಗಿ ನಮ್ಮ ಹಿರಿಯರು ಎಂತಹ ಮಹಾನ್ ಬಲಿದಾನಕ್ಕೂ ಸಿದ್ಧರಿದ್ದರು ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ಮತ್ತು ಜಾನಪದ ಕಥೆಗಳಲ್ಲಿ ಅಡಗಿರುವ ಎರಡು ಚಾರಿತ್ರಿಕ ಘಟನೆಗಳೇ ಜ್ವಲಂತ ಸಾಕ್ಷಿಯಾಗಿವೆ.
ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಮದಗದ ಕೆರೆಯ ನಿರ್ಮಾಣದ ಕಥೆಯು ಇಂದಿಗೂ ನಮ್ಮ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಊರಿನ ಜನರ ನೀರಿನ ಬವಣೆ ನೀಗಿಸಲು ಕಟ್ಟುತ್ತಿದ್ದ ಆ ಬೃಹತ್ ಕೆರೆಯ ಏರಿಯು ಮಳೆಯ ರಭಸಕ್ಕೆ ಪದೇಪದೇ ಒಡೆಯುತ್ತಿತ್ತು. ಊರಿನ ಒಳಿತಿಗಾಗಿ ಮತ್ತು ಆ ಕೆರೆಯ ಕಟ್ಟೆ ಭದ್ರವಾಗಿ ನಿಲ್ಲಲಿ ಎಂಬ ಏಕೈಕ ಉದ್ದೇಶದಿಂದ, ಪಾಳೆಯ ಗಾರರ ಮನೆತನದ ಕೆಂಚಮ್ಮ ಎಂಬ ತುಂಬು ಗರ್ಭಿಣಿ ಸೊಸೆ ತನ್ನ ಪ್ರಾಣವನ್ನೇ ಕೆರೆಗೆ ಬಲಿದಾನ ಮಾಡಿದಳು ಎಂಬ ಚಾರಿತ್ರಿಕ ಐತಿಹ್ಯವಿದೆ.
ಊರಿನ ಜನರ ದಾಹ ತೀರಿಸುವ ಒಂದು ಕೆರೆಗಾಗಿ ನವಮಾಸದ ಗರ್ಭಿಣಿಯೊಬ್ಬಳು ತನ್ನ ಪ್ರಾಣ ವನ್ನೇ ಅರ್ಪಿಸಿದಳು ಎಂದರೆ, ಆ ಕಾಲದಲ್ಲಿ ಜಲಮೂಲಗಳಿಗೆ ಎಷ್ಟೊಂದು ಮಹತ್ವವಿತ್ತು ಎಂಬುದು ನಮ್ಮ ಕರುಳು ಹಿಂಡುತ್ತದೆ. ಆಕೆಯ ತ್ಯಾಗದಿಂದ ಭದ್ರವಾಗಿ ನಿಂತ ಆ ಮದಗದ ಕೆರೆಯು ಇಂದಿಗೂ ಸಾವಿರಾರು ಎಕರೆ ಕೃಷಿಭೂಮಿಗೆ ಜೀವಜಲವನ್ನು ನೀಡುತ್ತಿದ್ದು, ಜನರು ಇಂದಿಗೂ ಆಕೆಯನ್ನು ಮದಗದ ಕೆಂಚಮ್ಮ ಎಂದು ದೇವತೆಯಂತೆ ಪೂಜಿಸುತ್ತಾರೆ. ಇದೇ ರೀತಿ, ದಾವಣಗೆರೆ ಜಿಯಲ್ಲಿರುವ ಏಷ್ಯಾದ ಎರಡನೇ ಅತಿದೊಡ್ಡ ಮಣ್ಣಿನ ಕಟ್ಟೆಯ ಕೆರೆಯಾದ ಶಾಂತಿ ಸಾಗರದ ಹಿಂದಿರುವ ಇತಿಹಾಸವು ಜಲಸಂರಕ್ಷಣೆಯ ಪರಮೋಚ್ಚ ಹೋರಾಟವನ್ನು ಕಣ್ಣಿಗೆ ಕಟ್ಟುತ್ತದೆ.
ಇದನ್ನೂ ಓದಿ: Gururaj Gantihole Column: ಷಡ್ಯಂತ್ರಗಳ ರಾಜಕೀಯ ನಾಟಕಗಳಿಗೆ ಒಂದು ಮಿತಿ ಬೇಡವೇ ?
ಹನ್ನೆರಡನೇ ಶತಮಾನದಲ್ಲಿ ನಿರ್ಮಾಣವಾದ ಈ ಬೃಹತ್ ಕೆರೆಯ ರೂವಾರಿ ಶಾಂತವ್ವ ಎಂಬ ರಾಜಕುಮಾರಿ. ತನ್ನ ನಾಡಿನ ರೈತರು ಮತ್ತು ಪ್ರಜೆಗಳು ಮಳೆಗಾಲ ವಿಫಲವಾದಾಗ ನೀರಿನ ಕೊರತೆಯಿಂದ ಅನುಭವಿಸುತ್ತಿದ್ದ ಭೀಕರ ಬವಣೆಯನ್ನು ಕಣ್ಣಾರೆ ಕಂಡ ಆಕೆ, ತನ್ನ ಇಡೀ ರಾಜವೈಭವ, ಯೌವನ ಮತ್ತು ಮನೆಮಠದ ಸಂಪತ್ತೆಲ್ಲವನ್ನೂ ಸಮರ್ಪಿಸಿ ಈ ಕೆರೆಯ ನಿರ್ಮಾಣಕ್ಕೆ ಮುಂದಾದಳು. ಎರಡು ಗುಡ್ಡಗಳ ನಡುವೆ ಬೃಹತ್ ಏರಿಯನ್ನು ಕಟ್ಟುವ ಆ ಕಠಿಣ ಹೋರಾಟದಲ್ಲಿ ಆಕೆ ಸಮಾಜದ ನಿಂದನೆ ಮತ್ತು ಅಪವಾದಗಳನ್ನು ಎದುರಿಸಿ ಸೂಳೆಕೆರೆ ಎಂಬ ಕಟು ಹೆಸರಿನ ಕಳಂಕವನ್ನೂ ಸಹಿಸಿಕೊಂಡಳು. ಆದರೂ ಛಲ ಬಿಡದೆ ತನ್ನ ಜನರ ದಾಹ ತೀರಿಸಲು ಆಕೆ ಪಟ್ಟ ಶ್ರಮ ಕಲ್ಪನೆಗೂ ನಿಲುಕದ್ದು.
ನೂರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟು ನಿರ್ಮಿಸಿದ ಈ ಜಲಮೂಲಗಳೇ ಇಂದಿಗೂ ನಮ್ಮ ಮತ್ತು ಮೂಕಪ್ರಾಣಿಗಳ ಪ್ರಾಣ ಉಳಿಸುತ್ತಿವೆ. ಆದರೆ ಇಂದು ನಾವು ಆ ಹಿರಿಯರ ತ್ಯಾಗವನ್ನು ಮರೆತು, ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಕೆರೆಗಳನ್ನು ನಿರ್ಮಿಸುವ ಬದಲು, ಇರುವ ಕೆರೆಗಳನ್ನೇ ಮಣ್ಣು ಹಾಕಿ ಮುಚ್ಚುತ್ತಿದ್ದೇವೆ. ತ್ವರಿತ ಹಣದ ಆಸೆಗೆ ಬಿದ್ದು ಭೂವ್ಯವಹಾರದ ದಂಧೆಗಾಗಿ ಕೆರೆಗಳ ಒಡಲನ್ನು ಬಗೆದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಿರುವುದು ಮುಂದಿನ ಪೀಳಿಗೆಗೆ ನಾವು ಮಾಡುತ್ತಿರುವ ಅತಿದೊಡ್ಡ ದ್ರೋಹವಾಗಿದೆ.
ಸ್ಥಳೀಯ ಜಲಸಂರಕ್ಷಣೆಯ ಅನಿವಾರ್ಯತೆ: ಇತ್ತೀಚೆಗೆ ಎದುರಾದ ಕೇವಲ ಒಂದೇ ಒಂದು ಭೀಕರ ಬರಗಾಲವು ನಮ್ಮ ಇಡೀ ಆಡಳಿತ ವ್ಯವಸ್ಥೆಯ ಅಸಹಾಯಕತೆಯನ್ನು ಮತ್ತು ನೀರಿನ ನಿರ್ವಹಣೆ ಯಲ್ಲಿ ನಾವೆಷ್ಟು ದುರ್ಬಲರಾಗಿದ್ದೇವೆ ಎಂಬುದನ್ನು ಕನ್ನಡಿಯಂತೆ ತೋರಿಸಿದೆ. ಜಾಗತಿಕ ಹವಾಮಾನ ವೈಪರೀತ್ಯ ಮತ್ತು ಪೆಸಿಫಿಕ್ ಮಹಾಸಾಗರದ ಉಷ್ಣಾಂಶ ಏರಿಕೆಯಿಂದ ಉಂಟಾಗುವ ಎಲ್ನಿನೊ ಪರಿಣಾಮವು ನಮ್ಮ ಮುಂಗಾರು ಮಳೆಯನ್ನು ಅಸ್ತವ್ಯಸ್ತಗೊಳಿಸಿದಾಗ, ಇಡೀ ರಾಜ್ಯದಲ್ಲಿ ಎಲ್ಲಿ ನೀರು ಎಂದು ಹಾಹಾಕಾರ ಪಡುವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣ ವಾಯಿತು.
ಮಳೆಯ ಅಭಾವ ಸೃಷ್ಟಿಯಾದ ಕ್ಷಣವೇ ನಮ್ಮ ಕಣ್ಣ ಮುಂದಿದ್ದ ಕೆರೆ, ಕಟ್ಟೆ ಮತ್ತು ಜಲಾಶಯ ಗಳು ಸಂಪೂರ್ಣವಾಗಿ ಬತ್ತಿ ಹೋಗಿ ಬಿರುಕು ಬಿಟ್ಟ ಬಂಜರು ಭೂಮಿಯಾಗಿ ಮಾರ್ಪಟ್ಟವು. ಈ ಎಲ್ನಿನೊ ವಿದ್ಯಮಾನವು ನಮಗೆ ಒಂದು ಅತ್ಯಂತ ಕಟುವಾದ ಪಾಠವನ್ನು ಕಲಿಸಿದೆ. ಜಾಗತಿಕ ಹವಾಮಾನ ವೈಪರೀತ್ಯದಿಂದಾಗಿ ದೊಡ್ಡ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆ ಕೈಕೊಟ್ಟಾಗ, ದೂರದ ಬೃಹತ್ ಜಲಾಶಯಗಳಿಂದ ಕೊಳವೆಗಳ ಮೂಲಕ ನೀರು ತರುವ ಕೇಂದ್ರೀಕೃತ ವ್ಯವಸ್ಥೆಗಳು ಸಂಪೂರ್ಣವಾಗಿ ನೆಲಕಚ್ಚುತ್ತವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಕೈಹಿಡಿಯುವುದು ಸ್ಥಳೀಯ ಜಲಸಂರಕ್ಷಣೆ ಮಾತ್ರ ಎಂಬ ಸತ್ಯವನ್ನು ಎಲ್ನಿನೊ ನಮಗೆ ಮನವರಿಕೆ ಮಾಡಿಕೊಟ್ಟಿದೆ.
ನಮ್ಮ ಪೂರ್ವಜರು ಭೌಗೋಳಿಕ ಪರಿಸ್ಥಿತಿ ಹಾಗೂ ಜಲಚಕ್ರವನ್ನು ಅರ್ಥಮಾಡಿಕೊಂಡೇ, ಎತ್ತರದ ಪ್ರದೇಶದಿಂದ ಹರಿಯುವ ನೀರು ತಗ್ಗಿನ ಪ್ರದೇಶದ ಕೆರೆಗಳನ್ನು ಒಂದಾದರ ಮೇಲೊಂದರಂತೆ ತುಂಬಿಸುವ ಸರಪಳಿ ಕೆರೆಗಳ ವ್ಯವಸ್ಥೆಯನ್ನು ರೂಪಿಸಿದ್ದರು. ಸ್ಥಳೀಯವಾಗಿ ಸುರಿಯುವ ಅಲ್ಪ ಸ್ವಲ್ಪ ಮಳೆನೀರನ್ನೂ ವ್ಯರ್ಥವಾಗದಂತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ನಮ್ಮ ಸ್ಥಳೀಯ ಕೆರೆಗಳಿಗಿತ್ತು. ಆದರೆ ಇಂದು ಆ ಕೆರೆಗಳಲ್ಲಿ ನೀರಿಗಿಂತ ಹೆಚ್ಚಾಗಿ ಕಸ, ಕಟ್ಟಡಗಳ ತ್ಯಾಜ್ಯ ಮತ್ತು ಹೂಳು ತುಂಬಿಕೊಂಡಿರುವುದರಿಂದ ಮಳೆ ಬಿದ್ದರೂ ನೀರು ನಿಲ್ಲದಂತಾಗಿದೆ.
ವಿಜ್ಞಾನಿಗಳ ಕಳವಳ: ಹವಾಮಾನ ವೈಪರೀತ್ಯದ ಇಂತಹ ಹೊಡೆತಗಳನ್ನು ತಡೆದುಕೊಳ್ಳಲು ಕರ್ನಾಟಕ ಸರ್ಕಾರವು ಈಗಲೇ ಒಂದು ಸಮಗ್ರ ಮತ್ತು ದೂರದೃಷ್ಟಿಯ ಜಲ ಯೋಜನೆಯನ್ನು ರೂಪಿಸಬೇಕಿದೆ. ಪ್ರಸ್ತುತ ಮತ್ತು ಭವಿಷ್ಯದ ಜನಸಂಖ್ಯೆಗೆ ಅನುಗುಣವಾಗಿ ಹಳೆಯ ಕೆರೆಗಳಿಗೆ ಮರುಜೀವ ನೀಡುವುದು ಮತ್ತು ಅಗತ್ಯವಿರುವ ಕಡೆ ಹೊಸ ಕೆರೆಗಳನ್ನು ನಿರ್ಮಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕು. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ವನ್ನು ಕೇವಲ ಒಂದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿ ನೋಡದೆ, ಅದನ್ನು ಒಂದು ಮಹಾಭಿಯಾನದ ರೂಪದಲ್ಲಿ ಸಮರೋಪಾದಿಯಲ್ಲಿ ನಡೆಸಬೇಕು.
ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದು ಮಾತ್ರವಲ್ಲ, ಆ ಜಾಗದಲ್ಲಿ ತುಂಬಿಸಲಾಗಿರುವ ಮಣ್ಣು ಮತ್ತು ಹೂಳನ್ನು ಸಂಪೂರ್ಣವಾಗಿ ತೆಗೆದು ಕೆರೆಯ ಮೂಲಭೌತಿಕ ಸ್ವರೂಪವನ್ನು ಮರುಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿeನ ತಜ್ಞರಾದ ಡಾ.ಟಿ.ವಿ.ರಾಮಚಂದ್ರ ಅವರ ನೇತೃತ್ವದ ವರದಿಯು ನಮ್ಮ ಕಣ್ಣು ತೆರೆಸುವಂತಿದೆ. ಈ ವರದಿಯ ಪ್ರಕಾರ ನಗರ ಪ್ರದೇಶದ ಶೇಕಡಾ ತೊಂಬತ್ತೆಂಟರಷ್ಟು ಕೆರೆಗಳು ಈಗಾಗಲೇ ಒತ್ತುವರಿಯಾಗಿವೆ.
ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ಬೆಂಗಳೂರು ನಗರವೊಂದರ ಏಳು ನೂರ ಅರವತ್ತು ಜಲಮೂಲಗಳಿದ್ದವು, ಆದರೆ ಇಂದು ಆ ಸಂಖ್ಯೆ ಕೇವಲ ಇನ್ನೂರ ಹದಿನಾರಕ್ಕೆ ಕುಸಿದಿದೆ. ಇಂದು ಕೇವಲ ಕೆರೆಗಳನ್ನಷ್ಟೇ ಅಲ್ಲದೆ, ಕೆರೆಗಳ ನಡುವಿನ ನೈಸರ್ಗಿಕ ಸಂಪರ್ಕ ಕಾಲುವೆಗಳನ್ನು ಒತ್ತುವರಿಮುಕ್ತಗೊಳಿಸಬೇಕು ಹಾಗೂ ಕೆರೆಗಳಿಂದ ತೆಗೆದ ಫಲವತ್ತಾದ ಹೂಳು ಮಣ್ಣನ್ನು ರೈತರ ಕೃಷಿ ಭೂಮಿಗೆ ನೀಡುವ ವ್ಯವಸ್ಥಿತ ಯೋಜನೆ ಜಾರಿಯಾಗಬೇಕು.
ನಾಡಿಗೆ ಎದುರಾಗಲಿರುವ ಈ ಭೀಕರ ಜಲಸಂಕಷ್ಟದ ಕುರಿತು ಈಶ್ವರ ದೈತೋಟ, ಶಿವಾನಂದ ಕಳವೆ ಹಾಗೂ ಆನಂದ್ ಮಲ್ಲಿಗವಾಡ ಅವರಂತಹ ಜಲಯೋಧರು ದಶಕಗಳ ಹಿಂದೆಯೇ ಸರ್ಕಾರ ಮತ್ತು ಸಮಾಜವನ್ನು ಎಚ್ಚರಿಸಿದ್ದರು. ಕೇವಲ ಮುನ್ನೆಚ್ಚರಿಕೆ ನೀಡುವುದಷ್ಟೇ ಅಲ್ಲದೆ, ಜನಜಾಗೃತಿ ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಬತ್ತಿಹೋಗಿದ್ದ ಹತ್ತಾರು ಕೆರೆಗಳ ಹೂಳೆತ್ತಿಸಿ ಮರುಜೀವ ನೀಡುವ ಮೂಲಕ ಇವರು ತೋರಿದ ದೂರದೃಷ್ಟಿಯ ಹೋರಾಟ ನಮಗಿಂದು ಮಾದರಿಯಾಗ ಬೇಕಿದೆ.
ಕಿರು ತಡೆ ಅಣೆಕಟ್ಟುಗಳ ನಿರ್ಮಾಣ: ಬೃಹತ್ ಕೆರೆಗಳ ಪುನರುಜ್ಜೀವನದ ಜೊತೆಗೆ, ಗ್ರಾಮೀಣ ಭಾಗದಲ್ಲಿ ಹರಿಯುವ ಸಣ್ಣಪುಟ್ಟ ಜಲಮೂಲಗಳ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಮಳೆಗಾಲ ದಲ್ಲಿ ಜೀವಕಳೆ ತುಂಬಿಕೊಳ್ಳುವ ನೈಸರ್ಗಿಕ ಹಳ್ಳ ಮತ್ತು ಕೊಳ್ಳಗಳು ಹರಿಯುವ ಪ್ರತಿಯೊಂದು ಜಾಗದಲ್ಲೂ ಸರಣಿ ರೂಪದಲ್ಲಿ ಕಿರು ತಡೆ ಅಣೆಕಟ್ಟುಗಳನ್ನು ನಿರ್ಮಿಸುವುದು ಅತ್ಯಂತ ಅವಶ್ಯಕವಾಗಿದೆ. ಕೇವಲ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಬೃಹತ್ ಅಣೆಕಟ್ಟುಗಳಿಂದ ಮಾತ್ರ ಇಡೀ ರಾಜ್ಯದ ನೀರಿನ ದಾಹವನ್ನು ತೀರಿಸಲು ಸಾಧ್ಯವಿಲ್ಲ.
ದೊಡ್ಡ ಅಣೆಕಟ್ಟುಗಳ ಜೊತೆಗೆ ಇಂತಹ ಸಾವಿರಾರು ವಿಕೇಂದ್ರೀಕೃತ ಕಿರು ತಡೆ ಅಣೆಕಟ್ಟುಗಳು ಸೇರಿದಾಗ ಮಾತ್ರ ಅದೊಂದು ಅತ್ಯಂತ ಬಲಿಷ್ಠವಾದ ಹಾಗೂ ಸಮಾನವಾದ ಜಲ ವಿತರಣಾ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ. ಈ ತಡೆ ಅಣೆಕಟ್ಟುಗಳು ಮಳೆಗಾಲದಲ್ಲಿ ವೇಗವಾಗಿ ಹರಿದು ಸಮುದ್ರ ಸೇರುವ ನೀರನ್ನು ಅಲ್ಲ ತಡೆದು ನಿಲ್ಲಿಸಿ, ಮಣ್ಣಿನ ಸವೆತವನ್ನು ತಪ್ಪಿಸುತ್ತವೆ ಹಾಗೂ ಸುತ್ತಮುತ್ತಲಿನ ಅಂತರ್ಜಲ ಮಟ್ಟವನ್ನು ಅಗಾಧವಾಗಿ ಹೆಚ್ಚಿಸುತ್ತವೆ.
ಇದಕ್ಕೆ ಪುಷ್ಟಿ ನೀಡುವಂತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣದ ವೈeನಿಕ ಅಧ್ಯಯನವೊಂದು ಮಹತ್ವದ ಅಂಶಗಳನ್ನು ಬಹಿರಂಗಪಡಿಸಿದೆ. ಸಣ್ಣ ಹಳ್ಳಗಳ ಮತ್ತು ತೊರೆಗಳ ಉದ್ದಕ್ಕೂ ನಿರ್ಮಿಸಲಾದ ಕಿರು ತಡೆ ಅಣೆಕಟ್ಟುಗಳು ಬೇಸಿಗೆಯ ಒಣ ತಿಂಗಳುಗಳಲ್ಲಿ ಅಪಾರ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ನೀರಿನ ಹರಿವನ್ನು ನಿಯಂತ್ರಿಸುತ್ತವೆ ಮತ್ತು ಕೃಷಿ ಚಟುವಟಿಕೆಗಳಿಗೆ ಜೀವದಾನ ನೀಡುತ್ತವೆ ಎಂದು ಈ ಅಧ್ಯಯನ ಸ್ಪಷ್ಟಪಡಿಸಿದೆ.
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಇಂತಹ ಸ್ಥಳೀಯ ಜಲ ಸಂರಕ್ಷಣಾ ರಚನೆಗಳ ಮತ್ತು ಕೃಷಿ ಹೊಂಡಗಳ ನಿರ್ಮಾಣದಿಂದಾಗಿ ಅಂತರ್ಜಲ ಮರುಪೂರಣದ ಪ್ರಮಾಣವು ಶೇಕಡಾ ಹತ್ತರಷ್ಟು ಹೆಚ್ಚಳ ಕಂಡಿದೆ. ಬೃಹತ್ ಅಣೆಕಟ್ಟುಗಳ ನಿರ್ಮಾಣಕ್ಕೆ ದಶಕಗಳೇ ಬೇಕಾದರೆ, ಕಿರು ತಡೆ ಅಣೆಕಟ್ಟುಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ಮಾಣಗೊಂಡು ತಳಮಟ್ಟದ ಜನರಿಗೆ ನೇರ ಲಾಭ ತಂದುಕೊಡುತ್ತವೆ.
ಪ್ರತ್ಯೇಕ ಜಲನಿಧಿ ಸ್ಥಾಪನೆ: ಈ ಎಲ್ಲಾ ದೂರದೃಷ್ಟಿಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ತಕ್ಷಣವೇ ಒಂದು ಪ್ರತ್ಯೇಕ ಜಲ ಸಂರಕ್ಷಣಾ ನಿಧಿಯನ್ನು ಸ್ಥಾಪಿಸಬೇಕು. ನಾಡಿನ ಜಲಮೂಲ ಗಳನ್ನು ಉಳಿಸುವ ಈ ಪುಣ್ಯದ ಕೆಲಸಕ್ಕೆ ಸಾರ್ವಜನಿಕರು, ರೈತರು ಮತ್ತು ಸಂಘಸಂಸ್ಥೆ ಗಳು ತಮ್ಮ ಸ್ವಇಚ್ಛೆಯಿಂದ ಆರ್ಥಿಕ ದೇಣಿಗೆ ನೀಡಲು ಮುಕ್ತ ಹಾಗೂ ಪಾರದರ್ಶಕ ಅವಕಾಶ ಕಲ್ಪಿಸಬೇಕು. ಹಿಂದೆ ನಮ್ಮ ನಾಡಿನಲ್ಲಿ ಕೆರೆ ಮತ್ತು ಕಲ್ಯಾಣಿಗಳನ್ನು ಕಟ್ಟಿಸುವುದು ಧರ್ಮದ ಕೆಲಸವೆಂದು ಭಾವಿಸುವ ಸಂಪ್ರದಾಯವಿತ್ತು; ಆ ಸಮುದಾಯದ ಸಹಭಾಗಿತ್ವದ ಮನಸ್ಥಿತಿಯನ್ನು ನಾವು ಮತ್ತೆ ಜಾಗೃತಗೊಳಿಸಬೇಕಿದೆ.
ಇದರ ಜೊತೆಗೆ, ಬೃಹತ್ ಉದ್ಯಮಗಳು ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳು ಪ್ರತಿವರ್ಷ ಕಡ್ಡಾಯವಾಗಿ ಮೀಸಲಿಡುವ ಸಾರ್ವಜನಿಕ ಸಾಮಾಜಿಕ ಜವಾಬ್ದಾರಿ ನಿಧಿಯ ಬಹುಪಾಲನ್ನು ಕೆರೆಗಳ ನಿರ್ಮಾಣ, ಜಲಾನಯನ ಪ್ರದೇಶಗಳ ಅಭಿವೃದ್ಧಿ ಮತ್ತು ತಡೆ ಅಣೆಕಟ್ಟುಗಳ ಸ್ಥಾಪನೆಗೆ ವಿನಿಯೋಗಿಸುವಂತೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ, ಕೆರೆಗಳ ದತ್ತು ಸ್ವೀಕಾರಕ್ಕೆ ರೂಪುರೇಷೆ ನೀಡಬೇಕು. ಜಲಸಂರಕ್ಷಣೆಯ ಮಹತ್ವವನ್ನು ಸರ್ಕಾರಕ್ಕೆ ಮತ್ತು ಪ್ರತಿಯೊಬ್ಬ ಪ್ರಜೆಗೂ ಮತ್ತೊಮ್ಮೆ ನೆನಪಿಸುವ ಕಾಲವಿದು.
ನಮ್ಮೂರಿನ ಕೆರೆಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಕಾನೂನುಗಳು, ಪ್ರಾಧಿಕಾರಗಳು ಮತ್ತು ಸರ್ಕಾರಿ ಇಲಾಖೆಗಳು ಕೇವಲ ಕಾಗದದ ಮೇಲಷ್ಟೇ ಅಲ್ಲದೆ ತಳಮಟ್ಟದಲ್ಲಿ ಹೇಗೆ ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಕೆರೆಗಳ ಸಂರಕ್ಷಣೆ ಮತ್ತು ಕಿರು ತಡೆ ಅಣೆಕಟ್ಟುಗಳ ನಿರ್ಮಾಣ ಎಂಬುದು ನಾಳಿನ ಪ್ರಶ್ನೆಯಲ್ಲ, ಬದಲಾಗಿ ಇದು ಇಂದಿನ ಅತ್ಯಂತ ತುರ್ತು ಆದ್ಯತೆಯಾಗಿದೆ. ನೀರಿಲ್ಲದ ನಾಡಿನಲ್ಲಿ ಎಷ್ಟೇ ಆರ್ಥಿಕ ಪ್ರಗತಿಯಾ ದರೂ ಆ ಅಭಿವೃದ್ಧಿ ಸಂಪೂರ್ಣ ಶೂನ್ಯ ಎಂಬ ಕಟು ಸತ್ಯವನ್ನು ಅರಿತು, ಭವಿಷ್ಯದ ಪೀಳಿಗೆಗೆ ಸುಭಿಕ್ಷವಾದ ನಾಡನ್ನು ಬಿಟ್ಟುಹೋಗಲು ನಾವೆಲ್ಲರೂ ಇಂದೇ ಕಂಕಣಬದ್ಧರಾಗಬೇಕಿದೆ.