ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Srivathsa Joshi Column: ಮದವೇರಿದ್ದಿರುವಂಥ ಹಸ್ತಿ ನಡೆಯೇ ಮತ್ತೇಭವಿಕ್ರೀಡಿತಂ...

ಶಾರ್ದೂಲವಿಕ್ರೀಡಿತ ಅಂತ ಇನ್ನೊಂದಿದೆ, ಅದರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ (ತಿಳಿರುತೋರಣ 9 ಜೂನ್ 2024). ಮತ್ತೇಭವಿಕ್ರೀಡಿತವು ಒಂದು ರೀತಿಯಲ್ಲಿ ಶಾರ್ದೂಲವಿಕ್ರೀಡಿತದ ಮಗು. ಅಯ್ಯೋ ಅದ್ಹೇಗಾಗುತ್ತೆ ಶಾರ್ದೂಲ ಅಂದ್ರೆ ಹುಲಿ, ಮತ್ತೇಭ (ಮತ್ತ+ಈಭ) ಅಂದ್ರೆ ಮದಿಸಿದ ಆನೆ. ಹಾಗಾದ್ರೆ ಹುಲಿಯ ಹೊಟ್ಟೆಯಲ್ಲಿ ಆನೆ ಹುಟ್ಟುತ್ತಾ? ಅಂತೆಲ್ಲ ಕೇಳ್ಬೇಡಿ.

ಮದವೇರಿದ್ದಿರುವಂಥ ಹಸ್ತಿ ನಡೆಯೇ ಮತ್ತೇಭವಿಕ್ರೀಡಿತಂ...

-

ತಿಳಿರು ತೋರಣ

srivathsajoshi@yahoo.com

ಅಪಘಾತಂಗಳ ಕಂಡು ಕಂಡು ಕುಸಿದೆಂ ಢಿಕ್ಕೀ ಪ್ರಿಯರ್ ಈ ಜನರ್| ಚಪಲರ್ ವೇಗದ ಸಾಹಸೋದ್ಯಮಗಳಿಂ ಸಿಕ್ಕಂತೆ ಮುನ್ನುಗ್ಗುವರ್| ಜಪಿಪಂತಾಯಿತಕಾಲಮೃತ್ಯುವನಿವರ್ ಜೀವಕ್ಕೆ ಹಾಹಾರವಂ| ಕೃಪೆಯಂ ದೇವನದೆಂತು ಗೈಯುವನು ಪೇಳ್ ಕಾಲಂಗೆ ನೇರಾದರಂ||’- ಇದೇನಿದು ಸೋಮೇಶ್ವರ ಶತಕದ ಪದ್ಯದಂತೆ ಭಾಸವಾಗುತ್ತಿದೆ, ಆದರೆ ಪ್ರೊ.ಅ.ರಾ.ಮಿತ್ರರೋ ಇನ್ನ್ಯಾರೋ ಆಧುನಿಕ ಹಾಸ್ಯಕವಿಗಳು ರಚಿಸಿರುವಂತಿದೆ ಎಂದು ನೀವು ಅಂದುಕೊಂಡಿರಾದರೆ ಎರಡೂ ಊಹೆಗಳು ನಿಜವೇ! ಸೋಮೇಶ್ವರ ಶತಕದಿಂದಾಯ್ದ ಪದ್ಯದಂತೆ ತೋರಲಿಕ್ಕೆ ಕಾರಣ ಇದು ಅದೇ ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿರುವುದು. ಮತ್ತು, ಸ್ವತಃ ಅ.ರಾ.ಮಿತ್ರರೇ ಇದನ್ನು ತಮ್ಮ ‘ಛಂದೋ ಮಿತ್ರ’ ಪುಸ್ತಕದಲ್ಲಿ ಮತ್ತೇಭವಿಕ್ರೀಡಿತ ವೃತ್ತ ಛಂದಸ್ಸಿಗೆ ಒಂದು ಉದಾಹರಣೆಯಾಗಿ ರಚಿಸಿರು ವಂಥದು.

ಅಂದ ಹಾಗೆ ಈ ಪದ್ಯವನ್ನು ಇನ್ನೊಂಚೂರು ಆಧುನಿಕಗೊಳಿಸುವುದಾದರೆ ಬೆಂಗಳೂರಿನಲ್ಲಿ ಸದ್ಯಕ್ಕೆ ಸುದ್ದಿಯಲ್ಲಿರುವ ರಸ್ತೆಗುಂಡಿಗಳನ್ನು ಇನ್ನಷ್ಟು ಅಗೆದು ‘ಗುಂಡೀ ಪ್ರಿಯರ್ ಈ ಜನರ್’ ಎನ್ನಬಹುದಿತ್ತೇನೋ. ಮತ್ತೇಭವಿಕ್ರೀಡಿತ. ಹೆಸರು ಕೇಳಿಯೇ ಇರುತ್ತೀರಿ, ಪ್ರೌಢಶಾಲೆಯಲ್ಲಿ ಹಳೆಗನ್ನಡ ಪದ್ಯಗಳ ಕಲಿಕೆಯಲ್ಲಿ ಛಂದಸ್ಸಿನ ಬಗ್ಗೆ ತಿಳಿದುಕೊಳ್ಳುವಾಗ ಮತ್ತೇಭವಿಕ್ರೀಡಿತ ಎಂಬೊಂದು ಅಕ್ಷರವೃತ್ತ ಪ್ರಕಾರದ ಬಗ್ಗೆ ಓದಿದ್ದು ನೆನಪಿರಬಹುದು ಎಂದುಕೊಳ್ಳುವೆ.

ಶಾರ್ದೂಲವಿಕ್ರೀಡಿತ ಅಂತ ಇನ್ನೊಂದಿದೆ, ಅದರ ಬಗ್ಗೆ ಹಿಂದೊಮ್ಮೆ ಬರೆದಿದ್ದೆ (ತಿಳಿರುತೋರಣ 9 ಜೂನ್ 2024). ಮತ್ತೇಭವಿಕ್ರೀಡಿತವು ಒಂದು ರೀತಿಯಲ್ಲಿ ಶಾರ್ದೂಲವಿಕ್ರೀಡಿತದ ಮಗು. ಅಯ್ಯೋ ಅದ್ಹೇಗಾಗುತ್ತೆ ಶಾರ್ದೂಲ ಅಂದ್ರೆ ಹುಲಿ, ಮತ್ತೇಭ (ಮತ್ತ+ಈಭ) ಅಂದ್ರೆ ಮದಿಸಿದ ಆನೆ. ಹಾಗಾದ್ರೆ ಹುಲಿಯ ಹೊಟ್ಟೆಯಲ್ಲಿ ಆನೆ ಹುಟ್ಟುತ್ತಾ? ಅಂತೆಲ್ಲ ಕೇಳ್ಬೇಡಿ.

ಶಾರ್ದೂಲವಿಕ್ರೀಡಿತದಲ್ಲಿ ಪ್ರತಿ ಪಾದದಲ್ಲಿ 19 ಅಕ್ಷರಗಳು, ಮತ್ತೇಭವಿಕ್ರೀಡಿತದಲ್ಲಿ ಪ್ರತಿ ಪಾದ ದಲ್ಲಿ 20 ಅಕ್ಷರಗಳು. ಶಾರ್ದೂಲದಲ್ಲಿ ಪ್ರತಿ ಪಾದದ ಮೊದಲ ಅಕ್ಷರ ಗುರು ಆಗಿರುತ್ತದೆ, ಅದರ ಬದಲಿಗೆ ಮತ್ತೇಭದಲ್ಲಿ ಎರಡು ಲಘುಗಳು. ಆದ್ದರಿಂದಲೇ ಅಕ್ಷರಗಳ ಸಂಖ್ಯೆ ಒಂದು ಹೆಚ್ಚುವುದು. ಮತ್ತೆಲ್ಲ ಸೇಮ್ ಟು ಸೇಮ್. ಪ್ರತಿ ಪಾದದ ಒಟ್ಟು ಮಾತ್ರೆಗಳ ಮೊತ್ತ ಮೂವತ್ತೇ. ಹಾಗಾಗಿ ಹಾಡುವ/ಗುನುಗುನಿಸುವ ಧಾಟಿಯಲ್ಲೂ ಅಂಥದೇನೂ ವ್ಯತ್ಯಾಸ ಬಾರದು.

ಇದನ್ನೂ ಓದಿ: Srivathsa Joshi Column: ತಕ್ಕ ರೀತೀಲಿ ಕಲಿಸಿದ್ರೆ ಲೆಕ್ಕ ಬಿಡ್ಸೋದೂ ಯಾವ್‌ ಲೆಕ್ಕ ?

ಮತ್ತೇಭವನ್ನು ಶಾರ್ದೂಲದ ಮಗು (ಮಗು ಎನ್ನುವುದಕ್ಕಿಂತ ಇಂಗ್ಲಿಷ್‌ಲ್ಲಾದರೆ off-shoot ಪದ ಹೆಚ್ಚು ಸೂಕ್ತ) ಎನ್ನಲಿಕ್ಕೆ ಇನ್ನೊಂದು ಕಾರಣವೂ ಇದೆ. ಶಾ.ವಿ ವೃತ್ತವನ್ನು ಸಂಸ್ಕೃತ ಶ್ಲೋಕ ರಚನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕನ್ನಡದ ಪದ್ಯಗಳೂ ಕೆಲವಿವೆ, ಇಲ್ಲವೆಂದಲ್ಲ. ಆದರೆ ಸಂಸ್ಕೃತ ಶ್ಲೋಕಗಳಿಗೆ ಶಾ.ವಿ ಹೆಚ್ಚು ಒಗ್ಗಿ ಬರುತ್ತದೆ.

ಪ್ರತಿ ಪಾದದ ಮೊದಲ ಮೂರೂ ಅಕ್ಷರಗಳು ಗುರು ಆಗಿರಬೇಕಾದ್ದು, ಸಂಸ್ಕೃತದಲ್ಲಿ ಅಂಥ ಪದಗಳು ಯಥೇಚ್ಛವಿರುವುದು ಸಂಸ್ಕೃತ ಕವಿಗಳ ಶಾ.ವಿ ಒಲವಿಗೆ ಕಾರಣ. ಕನ್ನಡದಲ್ಲಿ ಹಾಗಲ್ಲ. ಸಂಸ್ಕೃತದಲ್ಲಿಲ್ಲದ ಹ್ರಸ್ವ ಎ, ಹ್ರಸ್ವ ಒ ಕನ್ನಡದ ವಿಶೇಷತೆಯಾದ್ದರಿಂದ, ಅದಲ್ಲದೆಯೂ ಹ್ರಸ್ವಾಕ್ಷರಗಳುಳ್ಳ ಪದಗಳು ಕನ್ನಡದಲ್ಲಿ ಹೆಚ್ಚು ಆದ್ದರಿಂದ, ಶಾರ್ದೂಲದ ಪಾದಾದಿಯ ಗುರುವಿನ ಬದಲಿಗೆ ಎರಡು ಲಘುಗಳನ್ನು ಬಳಸೋಣವೆಂದು ಯಾವ ಕನ್ನಡ ಕವಿಗೆ ಹೊಳೆಯಿತೋ ಆತ ನಿಜಕ್ಕೂ ಗ್ರೇಟ್!

ಕೆಲವು ಇತಿಹಾಸಜ್ಞರ ಪ್ರಕಾರ ಆತ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ. ಕ್ರಿ.ಶ 634ರ ಸುಮಾರಿನ ಐಹೊಳೆ ಶಾಸನವೊಂದರಲ್ಲಿ, ವರದಾ ನದಿಯನ್ನು ಸ್ತುತಿಸುತ್ತ ರವಿಕೀರ್ತಿ ಬರೆದ ಪದ್ಯ ಮೊತ್ತಮೊದಲ ಮತ್ತೇಭವಿಕ್ರೀಡಿತ ಛಂದಸ್ಸಿನ ಪದ್ಯ ಎನ್ನಲಾಗುತ್ತದೆ. ಆರಂಭಿಕ ಗೌರವವೆಂದು ಇರಬಹುದು, ಆ ಪದ್ಯ ಸಂಸ್ಕೃತದಲ್ಲೇ ಇದೆ: ‘ವರದಾಂ ತುಂಗತರಂಗ ರಂಗವಿಲಸದ್ಧಂಸಾವಲೀ ಮೇಖಲಾಂ| ವನವಾಪೀ ಮವಮಜ್ಜತಸ್ಸುರನದೀ ಪ್ರಸ್ಪರ್ಧಿನೀಂ ಸಂಪದಾ| ಮಹತೀಂ ಯಾಂ ಸುಮಹಾರ್ಣವಂ ಚ ಪರಿತ ಸ್ಸ್ವಾಚ್ಛಾದಿತೋರ್ವೀತಲಾಂ| ಸ್ಥಲದುರ್ಗಂಜಲ ದುರ್ಗತಾಮಿವ ಗತಾಂ ತಾಂ ತತ್ಕ್ಷಣೇ ಪಶ್ಯತು||’ ಇದರ ಭಾವಾರ್ಥ- ಸುಂದರವಾದ ಅಲೆಗಳ ಪ್ರವಾಹವಿರುವ, ಹಂಸಗಳ ಸಮೂಹವನ್ನೇ ವಡ್ಯಾಣದಂತೆ ಧರಿಸಿರುವ, ದೇವಲೋಕದ ನದಿಯೊಡನೆ ಸ್ಪರ್ಧೆಗಿಳಿದಿರುವ, ದೊಡ್ಡದೊಂದು ಸಮುದ್ರವೇ ಭೂಮಿಯನ್ನು ಆವರಿಸಿರುವಂತೆ ಕಾಣುವ, ಭೂಪ್ರದೇಶವನ್ನು ಜಲದುರ್ಗ ವನ್ನಾಗಿಸಿರುವ ವರದಾ ನದಿಯನ್ನು ನೋಡಿಯೇ ಕಣ್ತುಂಬಿಸಿಕೊಳ್ಳಬೇಕು ಎಂದು.

ಹೊಸ ಛಂದಸ್ಸನ್ನು ಕನ್ನಡಕ್ಕಾಗಿಯೇ ಹುಟ್ಟಿಸಿದ ಮೇಲೆ ತೆಲುಗಿನ ಕವಿಗಳೂ ಅದನ್ನು ಬಳಸಿ ಮೆರೆಸಿದರು. ಪೋತನ, ಪೆದ್ದನ, ತಿಕ್ಕನ, ನನ್ನಯಭಟ್ಟ, ಅನ್ನಯ್ಯ, ವೇಂಕಟಪತಿ, ಶ್ರೀನಾಥುಡು ಮುಂತಾದ ತೆಲುಗು ಕವಿಗಳು ಮಾತ್ರವಲ್ಲದೇ ಸ್ವತಃ ಕೃಷ್ಣದೇವರಾಯನೂ ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿ ಹುಲುಸಾದ ಸಾಹಿತ್ಯಕೃಷಿ ಮಾಡಿದ್ದಾರೆ. ಶೃಂಗಾರ, ಹಾಸ್ಯ, ವೀರ, ಕರುಣ, ರೌದ್ರ, ಶಾಂತ ಮುಂತಾದ ನವರಸಗಳನ್ನೂ ಮತ್ತೇಭವಿಕ್ರೀಡಿತದಲ್ಲೇ ಹರಿಸಿದ್ದಾರೆ.

ನಮಗೆ ಕನ್ನಡಿಗರಿಗೆ ಅಜರಾಮರವೆನಿಸಿದ ಸೋಮೇಶ್ವರ ಶತಕದ ಪದ್ಯಗಳೇ ಸಾಕು ಮತ್ತೇಭವಿ ಕ್ರೀಡಿತದ ಮತ್ತೇರಲಿಸಲಿಕ್ಕೆ. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಶೆಯಂ ಮಾಡದಂ...’, ‘ಇರಿಯಲ್ ಬಲ್ಲೊಡೆ ವೀರನಾಗು ಧರೆಯೊಳ್ ನಾನಾ ಚಮತ್ಕಾರಮಂ...’, ‘ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ...’ ನಮಗೆ ಐದನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿದ್ದವು.

‘ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾಭೂಷಣಂ...’, ‘ಧರೆ ಬೀಜಂಗಳ ನುಂಗೆ ಬೇಲಿ ಹೊಲನೆಲ್ಲಂ ಮೇದೊಡಂ ಗಂಡ ಹೆಂ...’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನ್ಯಗ್ರೋಧ ಬೀಜಂ ಕೆಲಂ...’ ಇವು ಹತ್ತನೆಯ ತರಗತಿಯಲ್ಲಿ ತೃತೀಯಕನ್ನಡ ಪಠ್ಯಪುಸ್ತಕದಲ್ಲಿದ್ದವು. ‘ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸಂಗಳಂ ಕೇಳುತಂ...’, ‘ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್ ಫಲಂ ತೀವಿದಾ...’, ‘ಸರಿಯೇ ಸೂರ್ಯಗೆ ಕೋಟಿ ಮಿಂಚುಬುಳುಗಳ್ ನಕ್ಷತ್ರವೆಷ್ಟಾ ದೊಡಂ...’, ‘ಗಿಡವೃಕ್ಷಂಗಳಿಗಾರು ನೀರನೆರೆವರ್ ನಿತ್ಯಂ ಮಹಾರಣ್ಯದೊಳ್...’, ‘ಕೊಳನಂ ತಾವರೆಯಂ ತಳಿರ್ತ ವನಮಂ ಪೂದೋಟಮಂ ವಾಜಿಯಂ...’ ಮುಂತಾದುವು ಆಮೇಲೆ ಆಸಕ್ತಿ ಯಿಂದ ಓದಿ ಅರಗಿಸಿಕೊಂಡಂಥವು.

ಅಕ್ಯಾಡೆಮಿಕ್ ವಿವರಗಳು ಅಷ್ಟು ಸಾಕು. ಈಗ ಮತ್ತೊಮ್ಮೆ ಈ ಅಂಕಣಬರಹವನ್ನು ಮೊದಲ ಪ್ಯಾರಾದಲ್ಲಿದ್ದಂತೆಯೇ ಲಘು ಧಾಟಿಗೆ ತಿರುಗಿಸೋಣ. ಅ.ರಾ.ಮಿತ್ರ ಅವರು ‘ಛಂದೋಮಿತ್ರ’ ಪುಸ್ತಕದಲ್ಲಿ ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲೇ ಇನ್ನೊಂದಿಷ್ಟು ತಮಾಷೆ ಪದ್ಯಗಳನ್ನು ಹೊಸೆದಿದ್ದಾರೆ. ಬೆಂಗಳೂರಿಗೆ ಟ್ರಾನ್ಸ್ ಫರ್ ಆಗಿ ಬಂದವನೊಬ್ಬನ ಗೋಳು, ಹೀಗೆ: ‘ನನಗೇಕಿಲ್ಲಿಗೆ ಬೆಂಗಳೂರು ನಗರಕ್ಕಾಯ್ತಪ್ಪ ವರ್ಗಾಂತರಂ| ಮನೆಯೇ ಸಿಕ್ಕುವುದಿಲ್ಲಿ ಕಷ್ಟ ಮನೆಗೆಡ್ವಾನ್ಸೇನು ಸಾಮಾನ್ಯವೇ| ಕೊನೆಗಾ ನರ್ಸರಿ ಶಾಲೆಗೂನು ತೆರಬೇಕಲ್ಲಪ್ಪ ಭಾರೀ ಹಣಂ| ಅನುಮಾನಕ್ಕೆಡೆ ಯಿಲ್ಲದಂಥ ಬದುಕೇ ದುಸ್ತಾರಮೀ ಊರಿನೊಳ್||’ ಪಾಪ ಅವನ ಅವಸ್ಥೆ, ಕಷ್ಟಗಳು ಇನ್ನೊಂದು ಪದ್ಯದಲ್ಲೂ ಮುಂದುವರಿದಿವೆ: ‘ತುಳಿದೆಂ ಸಾವಿರ ಶಾಲೆಮೆಟ್ಟಿಲುಗಳಂ ಪುತ್ರಂಗೆ ಸೀಟೊಂದಕೇ| ಕಳೆದೇ ಬಿಟ್ಟರು ಮಾನ ವಂತಿಗೆಗಳಂ ಕೇಳುತ್ತ ಧಾರಾಳದಿಂ| ಮಳೆ ಯನ್ನೆಲ್ಲಿ ತರೋಣ ಹೇಳಿ ಬರದಿಂ ಕಂಗೆಟ್ಟ ಆದಾಯದೊಳ್| ತಳಿಯನ್ನುತ್ತಮ ರೀತಿಯಿಂ ಬೆಳೆಸಲಿಕ್ಕೆಲ್ಲಿರ್ಪುದಂತರ್ಜಲಂ||’ ಆದರೆ, ಅವನೊಬ್ಬನಿಗೇ ಅಲ್ಲ ಕಷ್ಟಗಳಿರುವುದು; ರಾಮರಾಜ್ಯ ಎಂಬುದು ಕನಸು, ಪ್ರತಿಯೊಬ್ಬರ ಜೀವನವೂ ದುಸ್ತರವೇ: ‘ಜನಸಾಮಾನ್ಯರ ಜೀವನಿರ್ವಹಣೆಯೇಂ ಸಾಮಾನ್ಯವೆಂ ದೆಂಬೆಯಾ| ಘನಸರ್ಕಾರದ ದ್ರವ್ಯನೀತಿಯೊಳಗೇ ಕಟ್ಟಿತ್ತುಸಿರ್ ಸರ್ವರಾ| ಮುನಿಸೇ ಉಕ್ಕದು ಯಾಕೆ ಆಡಳಿತದಿಂ ಕಂಗೆಟ್ಟ ಸಾಮಾನ್ಯರೊಳ್| ಕನಸೇ ರಮ್ಯವೊ ರಾಮರಾಜ್ಯವೆನುವರ್ ಎಂದಿತ್ತೊ ನಾ ಕಾಣೆನೇ||’ ಕೆಲವರು ಕುಡಿತದಂಥ ಕೆಟ್ಟ ಚಟಗಳಿಂದಾದರೂ ಕಷ್ಟಗಳನ್ನು ಮರೆಯುವ ಪ್ರಯತ್ನ ಮಾಡುತ್ತಾರೆ ಅಷ್ಟೇ: ‘ಮನೆಯಲ್ಲೇ ಕುಡಿಯೋಣವೆಂದರದಕಂ ಕರ್ಫ್ಯೂ ವಿಧಾನಂ ಗಡಾ| ಶನಿಕಾಟಂ ಗಳು ಅಶ್ರುವಾಯು ಸಿಡಿತಂ ಪತ್ನೀಸುಪುತ್ರರ್ಕಳಿಂ| ಕೊನೆಗಾ ಮಾಲಿಕ ಕೂಡ ಒಮ್ಮಿಗಿಲೆ ಲಾಠೀಚಾರ್ಜು ಗೈಸಿರ್ದಪಂ| ಕೊನೆಯಾಯ್ತೇ ನನಗೊಂದೆ ಸೂತ್ರವದುವೇ ಕಂಡಲ್ಲಿ ಗುಂಡಿಕ್ಕುವೆಂ||’- ಈ ಎಲ್ಲ ಪದ್ಯಗಳನ್ನು ಸೋಮೇಶ್ವರ ಶತಕದ ಪದ್ಯಗಳ ಧಾಟಿಯಲ್ಲೇ ಗಟ್ಟಿಯಾಗಿ ಓದಿಕೊಳ್ಳಿ ಅಥವಾ ಗುನುಗುನಿಸಿ.

ಸಕ್ಕತ್ ಮಜಾ ಬರುತ್ತದೆ. ಅ.ರಾ.ಮಿತ್ರರಂತೆಯೇ ತಮಾಷೆಯಾಗಿ, ನಿತ್ಯಜೀವನದ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ, ಛಂದಸ್ಸನ್ನು ಪಾಲಿಸಿಯೇ ಚಂದದ ಪದ್ಯ ಹೊಸೆಯಬಲ್ಲವರು ಈಗಿನ ಕವಿಗಳ ಪೈಕಿಯೂ ಇದ್ದಾರೆ, ನನ್ನ ಮಿತ್ರವರ್ಗದಲ್ಲೇ ಇದ್ದಾರೆ ಎನ್ನುವುದು ನನಗೆ ಯಾವತ್ತಿಗೂ ಹೆಮ್ಮೆಯ ವಿಚಾರ. ಅವರೆಲ್ಲರ ಪ್ರತಿಭೆಯನ್ನು ಅಂಕಣದಲ್ಲಿ ಸಂದರ್ಭೋಚಿತವಾಗಿ ಪ್ರದರ್ಶಿಸುವುದು ಮತ್ತೂ ಸಂತೋಷದ ವಿಚಾರ.

ಮತ್ತೇಭವಿಕ್ರೀಡಿತ ಛಂದಸ್ಸಿನಲ್ಲಿರುವ ಅಂಥ ಕೆಲವು ರಚನೆಗಳನ್ನು ಇಲ್ಲಿ ನಿಮ್ಮ ಮನೋ ರಂಜನೆಗಾಗಿ ಸೇರಿಸಿಕೊಳ್ಳುತ್ತಿದ್ದೇನೆ. ವಸುಮತಿ ರಾಮಚಂದ್ರ ಅವರ ಅಡುಗೆ ಮನೆಯಲ್ಲಿ ತಯಾರಾದ ಪದ್ಯ, ದ್ವಿತೀಯಾಕ್ಷರ ಪ್ರಾಸವಿಲ್ಲವಾದರೂ ಮತ್ತೇಭವಿಕ್ರೀಡಿತದ ಅಕ್ಷರ ಲೆಕ್ಕ ಮಾತ್ರೆ ಲೆಕ್ಕ ಎಲ್ಲ ಪಕ್ಕಾ ಇದೆ. ಸೋಮೇಶ್ವರ ಶತಕದ ಪದ್ಯದಂತೆ ಓದಿಕೊಳ್ಳುತ್ತಿರುವಾಗಲೇ ಬಾಯಿಯಲ್ಲಿ ನೀರೂರಿಸಿಕೊಳ್ಳಲಿಕ್ಕೂ ಆಗುತ್ತದೆ: ‘ತೊಗರೀಬೇಳೆಯ ಗೂದೆಹಣ್ಣ ತಿಳಿಯಾ ಸಾರನ್ನು ನಾ ಮಾಡಿದೇ| ಘಮಘಮ್ಮೆನ್ನುವ ಹಿಂಗು ಸಾಸ್ವೆಗಳನೂ ವೊಗ್ಗರ್ಣೆಯಂ ನೀಡ್ದೆನುಂ| ಸವತೇಕಾಯಿಯ ಹೆಚ್ಚಿ ಮಜ್ಗೆಹುಳಿಯಾ ನಾ ಮಾಡಿದೇ ಕೊಂಚವೇ| ಜೊತೆಯಲ್ಲಿದ್ದರೆ ಚೆಂದವೆಂದು ಕರಿದೇ ಉಪ್ಮೆಣ್ಸು ಹಪ್ಳಂಗಳಾ||’ ಇಷ್ಟು ಪೊಗದಸ್ತಾಗಿ ಊಟ ಆದಮೇಲೆ ತಾಂಬೂಲ ಬೇಡವೇ? ಅದನ್ನೊದಗಿಸಿದ್ದಾರೆ ನಂಜುಂಡ ಭಟ್, ತಾಂಬೂಲದಿಂದಲೇ ಕೆಲವರಿಗೆ ಹೇಗೆ ಮತ್ತೇರುತ್ತದೆಂದು ಬಣ್ಣಿಸುತ್ತ: ‘ಜಗಿವರ್ ತಂಬುಲಮಂ ತಮಾಖುಸಹಿತಂ ಬಾಯ್ಮುಚ್ಚಿ ರಾಸಿಕ್ಯದಿಂ| ದಗಿವರ್ ಜಂಜಡಮೆಲ್ಲವಂ ಜಡಿ ಯುತಂ ಜೊಲ್ಲೆರ್ಚಿ ಜಾಲಾಡುತಂ| ಬಿಗಿವರ್ ಬೊಬ್ಬಿರಿದಳ್ಕರಂ ಮಡಿಸುತಂ ಬೀಡಾಡದಂತೆಲ್ಲವಂ| ಸಿಗಿವರ್ ಸಂಸ್ಕೃತಸಾರಸರ್ವಮುಗಿವರ್ ಕಂಡಲ್ಲಿ ಪಾಂಡಿತ್ಯದಿಂ||’ ಇನ್ನೂ ಒಂದಿಷ್ಟು ಕಾವ್ಯವಿನೋದ ಬೇಕಿದ್ದರೆ, ಮತ್ತೇರಿದ ಆನೆಗಳ ಹಿಂಡು ನೀರಾಟವಾಡುವ ಚಿತ್ರಣವನ್ನೇ ಮತ್ತೇಭವಿಕ್ರೀಡಿತ ಛಂದದ ಪದ್ಯವಾಗಿಸಿದ್ದಾರೆ ಮೋಹಿನಿ ದಾಮ್ಲೆ:

‘ಹದುಳೆಲ್ಲೆಲ್ಲಿಹುದೆಂದು ಬೇಸಗೆಯಲೀ ಕಾಡೆಲ್ಲವೋಡಾಡುತ| ಮುದದಿಂ ಸೊಂಡಿಲನೆತ್ತಿ ವೀಕ್ಷಿಸಿದವೋ ನೋಡಲ್ಲದೋಯೆನ್ನುತ| ಉದಯಾಸ್ತಂಗಳ ಭಾನವಿಲ್ಲದೊಲು ಕಾಸಾರಂಗಳಂ ಪೊಕ್ಕುತ| ಮದಿಸಿರ್ದಾನೆಗಳಾಡೆ ನೀರಿನೊಳಗಂ ಕಲ್ಲೋಲ ಪೆರ್ಚಿತ್ತಲಾ||’ ಆಮೇಲೆ ಕೊಂಚ ಹೊತ್ತು ರಾಮಧ್ಯಾನ ಮಾಡುತ್ತೀರಾದರೆ ಶ್ರೀರಾಮನ ವರ್ಣನೆಯಿದೆ ಕೆ.ವಿ.ರಾಮಪ್ರಸಾದ್ ಅವರಿಂದ: ‘ಮನುಜಾಕಾರಮನಾಂತನಂ ರಘುಜನಂ ಕೌಸಲ್ಯೆಯಾ ಕಂದನಂ| ಚಣದೊಳ್ ರಕ್ಕಸಸೈನ್ಯಮಂ ಸಮರ ದೊಳ್ ಕೊಂದಾತನಂ ರಾಮನಂ| ಹನುಮನ್ ಪೂಜಿಪ ಮೂರ್ತಿ

ಯಂ ಸೊಬಗಿನೊಳ್ ಕಂದರ್ಪನಂ ಮೀರ್ದನಂ| ನೆನೆವೆನ್ ಲಕ್ಷ್ಮಣನಣ್ಣನಂ ಕರುಣಿಯಂ ಭೂಜಾತೆಯಂ ಗೆಲ್ದನಂ||’ ಅಥವಾ, ರೇಖಾಗಣಿತದಲ್ಲಿ ಪೈಥಾಗೊರಸ್ ಪ್ರಮೇಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾದರೆ ಅದು ಪುರಾತನ ಭಾರತೀಯ ಗಣಿತಜ್ಞರಿಗೂ ಗೊತ್ತಿತ್ತೆಂದೂ, ನೆನಪಿಡಲಿಕ್ಕೆ ಸುಲಭವಿದೆಯೆಂದೂ ತಿಳಿಸುತ್ತಾರೆ ವೃಕ್ಷವರ್ಧನ ಹೆಬ್ಬಾರ್: ‘ವ್ಯಥೆ ಪೈಥಾಗೊರಸೆಂಬ ನಾಮ ವಿಧಿಸಲ್ ಸತ್ಯಾಂಶವಾಲೋಚಿಸಲ್| ಶ್ರುತಿ ಕಲ್ಪಾಂಗದಿ ಶುಲ್ವ ಸೂತ್ರದೊಳಿರಲ್ ಬೌಧಾಯನ ಶ್ಲೋಕದೊಳ್| ಕತೆಯಲ್ ಕರ್ಣದ ವರ್ಗ ಲಂಬವಿರುವಾ ಮೂರ್ಕೋನದಾಕಾರದಿ| ಪ್ರತಿಕಾಶಂತಿರೆ ವರ್ಗ ಕೂಡಿದೊಡನೈ ಮಿಕ್ಕಿದ್ದ ಬಾಹುಂಗಳಾ||’ ಇವೆಲ್ಲಕ್ಕಿಂತಲೂ ಒಂದು ತೂಕ ಹೆಚ್ಚಿನದು... ಎನ್ನಲಿಕ್ಕೆ ಹೊರಟಿದ್ದೆ, ಆದರೆ ಲೈಟ್ ರೀಡಿಂಗ್ ಅಲ್ಲವೇ, ಹಾಗಾಗಿ ಹೋಲಿಕೆ ಬೇಡ. ಮೃತ್ಯುಂಜಯ ತೇಜಸ್ವಿ ಅವರ ಈ ಮತ್ತೇ ಭವಿಕ್ರೀಡಿತ ರಚನೆಗಳನ್ನು wholesome entertainment ಎಂಬಂತೆ ಆಸ್ವಾದಿಸಿ.

ಮೊದಲಿಗೆ, ಕಳಲೆ(ಎಳೆ ಬಿದಿರು) ಪಲ್ಯದ ಬಗೆಗೊಂದು: ‘ಎಳೆಯಾಗಿರ್ಪ ಸುಕೋಮಲಾರ್ದ್ರ ತನುವಂ ಹೊಂದಿರ್ಪ ಕರ್ಮಾರಮಂ| ಮಳೆಯೊಳ್ ಸಾಗುತ ಕಾಡಿನಲ್ಲಿ ಕಡಿವರ್ ಮುಂಜಾನೆ ನಮ್ಮೂರಿನೊಳ್| ಜಲದೊಳ್ ಖಂಡಗಳೆಲ್ಲಮಂ ನೆನೆಸುತಾ ಮೂರ್ನಾಲ್ಕು ರಾತ್ರಿಂಗಳೊಳ್| ಕಳಲೇ ಪಲ್ಯವ ಮಾಡಿ ಕೂಡಿ ಮೆಲುವರ್ ಮಧ್ಯಾಹ್ನ ಸಂತೋಷದೊಳ್||’ ಹಾಗೆಯೇ, ಬೇಸಗೆಯಲ್ಲಿ ಮಾವಿನಹಣ್ಣುಗಳ ಸೀಸನ್‌ನಲ್ಲಿ ಬೇರೆಬೇರೆ ತಳಿಗಳ ಮಾಯ್ನಣ್ಣು ಸಿಗುತ್ತವಲ್ವಾ, ಅವುಗಳ ರುಚಿ ನೋಡಿ: ‘ಮಲಗೋವಾ ರಸಪೂರಿ ಪೈರಿ ವನರಾಜ್ ಬಾದಾಮಿ ಸಿಂದೂರ ಚೌನ್ಸ್| ಮಲೆನಾಡಲ್ಲಿಹ ಕಾಟುಮಾವ್ ಮಿಯಜಕೀಯಲಾನ್ಸೋ ಕೇಸರ್ ಹಪೂಸ್| ಗಿಳಿಯಂ ಹೋಲುವ ಮಾವು ಲಂಗಡವಿರಲ್ ನೀಲಂ ಸಫೇದ್ ಮಲ್ಲಿಕಾ| ಕುಳಿತೆನ್ ಮೆಲ್ಲುತಲೆಲ್ಲವನ್ನು ಸುಖದೊಳ್ ಬಾಯಲ್ಲಿ ನೀರೂರಿರಲ್||’ ಸಂಜೆಹೊತ್ತು ಕಾಫಿ/ ಟೀಯ ಜತೆಗೆ ಗೋಳಿಬಜೆ ಬೋಂಡಾ ಇತ್ಯಾದಿ ಮೆಲ್ಲುವ ಅಭ್ಯಾಸ ನಿಮಗಿದೆಯಾದರೆ ಒಂದು ವಿಷಯ ಗೊತ್ತಿರಲಿ.

ಭೂಲೋಕದಲ್ಲಿ ನಿಮ್ಮನ್ನೂ ಸೇರಿದಂತೆ ಹಲವರಿಗೆ ಈ ಅಭ್ಯಾಸ ಇರುವುದು ಕೈಲಾಸದಲ್ಲಿ ಶಿವನಿಗೂ ಗೊತ್ತಾಗಿದೆಯಂತೆ. ಮಾತ್ರವಲ್ಲ, ತನಗೂ ಕಾಫಿಯ ಜತೆಗೆ ಬಿಸಿಬಿಸಿ ಬೋಂಡಾ ಬೇಕೆಂದು ಗಿರಿಜೆಯ ಬಳಿ ಅಲವತ್ತುಕೊಂಡನಂತೆ ಕೈಲಾಸವಾಸ ಗೌರೀಶ ಈಶ! ‘ಚಳಿಯಂ ನೀಗಲು ಕಾಫಿಯಂತೆ ಜೊತೆಯೊಳ್ ಗೋಳೀಬಜೇ ಬೋಂಡ ಭೂ| ತಲದೊಳ್ ಸಿಕ್ಕುವುವಂತೆ ಗೊತ್ತೆ ಗಿರಿಜೇ ಪಾನೀಪುರೀ ಬಜ್ಜಿಗಳ್| ಕೆಲವನ್ನಾದರು ಮಾಡಲಿಕ್ಕೆ ತಿಳಿ ನೀನೆನ್ನುತ್ತ ಕೈಲಾಸದೊಳ್| ಜಲಕಂಠೇಶ್ವರ ಕೋರುತಿದ್ದ ಚಳಿಯೊಳ್ ಮುಸ್ಸಂಜೆಯಾಗುತ್ತಿರಲ್||’ ಆದರೆ, ಕಾಫಿ-ಬೋಂಡಾ ಮಾಡಿಕೊಡುವವರು ಸ್ವರ್ಣಹಾರ ತೆಗೆಸಿಕೊಡುವಂತೆ ಬೇಡಿಕೆಯಿಡುತ್ತಾರೆ ಇದು ಭೂಲೋಕದಲ್ಲಿ ಮನೆಮನೆಕಥೆ ಎಂಬ ವಿಚಾರವೂ ಪರಮೇಶ್ವರನಿಗೆ ಗೊತ್ತಾಗಿರುತ್ತದೆ: ‘ಕೊಡಿಸಲ್ ಸ್ವರ್ಣದ ಹಾರಮಂ ಸತಿಗೆ ನಾ ಮಲ್ಲೇಶ್ವರಂ ಚಿನ್ನದಂ| ಗಡಿಯಂ ಪೊಕ್ಕೆನಿ ದೇನು ಕಷ್ಟಮೆನುತಾ ವಿಶ್ವಾಸ ಮಂ ತೋರುತಾ| ಕಡಲೇಕಾಯಿಯ ಜಾತ್ರೆಯಂತೆ ಜನರಂ ನೋಡುತ್ತಲಲ್ಲೆಲ್ಲು ಕಾ| ಲಿಡಲಿಕ್ಕಾಗದೆ ಹಾಗೆಯೇ ಮರಳಿದೆವ್ ವ್ಯಾಪಾರವಂ ಮಾಡದೇ||’ ಮೃತ್ಯುಂಜಯ ತೇಜಸ್ವಿ ಅವರ ವಸ್ತುವೈವಿಧ್ಯ ಹಾಸ್ಯಕ್ಕಷ್ಟೇ ಸೀಮಿತವಲ್ಲ.

ಕೂಡಲೀ ಕ್ಷೇತ್ರದಲ್ಲಿ ತುಂಗೆ-ಭದ್ರೆಯರ ಸಂಗಮದ ಬಗೆಗಿನ ಈ ಪದ್ಯವನ್ನು ಗಮನಿಸಿ: ‘ಪರಮಾನಂದದೊಳೀಶನನ್ನೆ ಪತಿಯೆಂದೆನ್ನುತ್ತಲಾ ಪಾರ್ವತೀ| ಹರನರ್ಧಾಂಗದಿ ಸೇರಿಕೊಂಡ ಪರಿಯೊಳ್ ತುಂಗಾನದೀ ಭದ್ರೆಯಂ| ಹರುಷೋಲ್ಲಾಸದಿ ಕೂಡಿಕೊಂಡು ಜೊತೆಯಲ್ಲೊಂದಾಗಿ ತಾದಾತ್ಮ್ಯದೊಳ್| ಹರಿವಳ್ ಮುಂದಕೆ ತುಂಗಭದ್ರೆ ಹೆಸರೊಳ್ ಶ್ರೀಕೂಡಲೀ ಕ್ಷೇತ್ರದೊಳ್||’ ಇತ್ತೀಚೆಗೆ ಆಪರೇಷನ್ ಸಿಂದೂರ್ ವೇಳೆಗೆ ಬರೆದ ಈ ಪದ್ಯದಲ್ಲಂತೂ ವೀರರಸ ಹೇಗೆ ಉಕ್ಕಿಹರಿದಿದೆ ನೋಡಿ! ‘ಸಿಡಿಲೋ ಬೆಂಕಿಯ ಬಾಣವೋ ಕ್ಷಿಪಣಿಯೋ ಬ್ರಹ್ಮಾಸ್ತ್ರವೇ ನುಗ್ಗಿತೋ| ಮೃಡನೇ ತನ್ನಯ ನೇತ್ರವಂ ತೆರೆದನೋ ಸೌಧಾಮಿನೀ ಸೋಟವೋ| ಸಿಡಿಯಲ್ ಸ್ಫೋಟಕ ಮಧ್ಯರಾತ್ರಿ ಕಳೆಯಲ್ ಪಾಪಿಷ್ಠರಂ ಕೊಲ್ಲುತಾ| ನಡುಗುತ್ತೀಪರಿ ಯೋಚಿಸುತ್ತಲಿಹರೇಂ ಮುಸ್ಲಿಂ ಭಯೋತ್ಪಾದಕರ್||’ ಅಂತೆಯೇ ಕ-ಕಾರ ಬಳ್ಳಿಯ ಎಲ್ಲ ಅಕ್ಷರಗಳೂ ಕಾಣಸಿಗುವ ಈ ಪದ್ಯದಲ್ಲಿ ಕೃಷ್ಣಪರಮಾತ್ಮನ ಗುಣಗಾನ: ‘ಕರೆಯನ್ನಾಲಿಸಿ ಕಾಯ್ದೆ ನೀ ಕಿರುಚಿರಲ್ ನಾರೀಮಣೀ ಕೀರುತುಂ| ಕುರುಗಳ್ ಕೂಟವು ಕೃಷ್ಣೆಯಂ ಕೆಣಕಿರಲ್ ಕೇಶಕ್ಕೆ ಕೈಯಿಕ್ಕುತಂ| ಧುರದೊಳ್ ಕೊಲ್ಲೆನೆನುತ್ತ ಕೋರೆ ಮರಳಲ್ ಗಾಂಡೀವಿ ತಾನ್ ಕೌರವಂ| ಹರಿ ನೀ ಕಂಡೆಯೊ ವಿಶ್ವರೂ ಪದೊಳಗಾ ಪಾರ್ಥಂಗೆ ಕಃಚಿತ್ ಕ್ಷಣಂ||’ ಮತ್ತು ಕೊನೆಯಲ್ಲಿ ಹ-ಕಾರ ಬಳ್ಳಿಯುಳ್ಳ ಮತ್ತೇಭದಿಂದಲೇ ಹರಿಚಿತ್ತ ಸತ್ಯ ಎಂಬ ನಿವೇದನೆ. ಎಷ್ಟೆಂದರೂ ಗಜೇಂದ್ರಮೋಕ್ಷ ಪ್ರಸಂಗದಲ್ಲಿ ಕರಿ- ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಪೊರೆದವನು ಹರಿಯೇ ತಾನೆ? ‘ಹರಿಯೇ ಕೌಸ್ತುಭ ಹಾರನೇ ಮಹಿಮನೇ ವಿಷ್ಣೋ ಮಹೀಧಾರಿಯೇ| ಸೆರೆಯೊಳ್ ಹುಟ್ಟಿದ ದೇವನೇ ಮಣಿವೆನೈ ಹೂವಿಟ್ಟು ಹೃತ್ಪದ್ಮದೊಳ್| ಅರಿವಂ ಹೆಚ್ಚಿಸಿ ಹೇ ರಮೇಶ ಸಲಹೈ ಹೊನ್ನಾಸೆಯಂ ಹೋಗಿಸೈ| ಉರಿಸೈ ಹೌಮ್ಯದೊಲೆನ್ನ ಪಾಪದುರಹಂಕಾರಂಗಳಂ ಪ್ರತ್ಯಹಃ||’ ಹೀಗೆ, ದಸರೆಯ ಮೆರುಗನ್ನು ಹೆಚ್ಚಿಸಲಿಕ್ಕೆ ಮತ್ತೇಭ ಗಳದೊಂದು ಮೋಹಕ ಮೆರವಣಿಗೆ! ಈ ವಿಜಯದಶಮಿಯ ಶುಭದಿನದಿಂದ ಕವಿಗಳು ಛಂದ-ಚಂದದ ಕವಿತೆಗಳ ರಚನೆಯತ್ತ ಆಸಕ್ತಿ ಬೆಳೆಸಲಿ, ಮತ್ತೇಭವೋ ಮತ್ತೊಂದೋ ಅಂತೂ ಛಂದದ ಕವಿತೆಗಳೇ ಹೆಚ್ಚಾಗಿ ಅವರ ಪೆನ್ನಿಂದ/ಕೀಬೋರ್ಡಿಂದ ಮೂಡಿಬರಲೆಂದು ಛಂದೋಬದ್ಧ ಕವಿತೆಗಳ ಖಾಯಿಶಿಯುಳ್ಳವನಾಗಿ ನನ್ನ ಹಾರೈಕೆ. ಎಲ್ಲರಿಗೂ ನಾಡಹಬ್ಬ ನವರಾತ್ರಿಯ ಶುಭಾಶಯಗಳು.