ಲೋಕಮತ
ಬದುಕು ತುಂಬಾನೇ ಫಾಸ್ಟ್ ಆಗಿದೆ. ಇದು ಪಟಾಪಟ್ ಜಮಾನ ಎಂದವರಿಗೆ ಇದಕ್ಕೆ ಅಪವಾದ ವಾಗಿರುವ ಎರಡು ವಿಷಯಗಳನ್ನು ಎತ್ತಿ ತೋರಿಸಬಹುದು. ಒಂದು ನಮ್ಮ ಬೆಂಗಳೂರಿನ ಟ್ರಾಫಿಕ್. ಇನ್ನೊಂದು ನಮ್ಮ ಸರಕಾರಿ ಇಲಾಖೆಗಳ ಸರ್ವರ್. ಬೆಂಗಳೂರಿನ ಸಂಚಾರ ಸಮಸ್ಯೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿತ ವಿಚಾರ. ಈ ಬಗ್ಗೆ ವಿವರಣೆ ಬೇಕಿಲ್ಲ. ಹಾಗೆಯೇ ಯಾವುದೇ ಸರಕಾರಿ ಇಲಾಖೆಗೆ ಭೇಟಿ ಕೊಟ್ಟಾಗ, ಕೇಳಿಸಿಕೊಳ್ಳಲೇಬೇಕಾದ ಮಾತು- ಸರ್ವರ್ ಸ್ಲೋ. ಏರ್ ಟೆಲ್ ಮತ್ತು ಜಿಯೋ 5ಜಿ ಬಳಿಕ 6 ಜಿ ಸೇವೆ ನೀಡಲು ಪೈಪೋಟಿಗೆ ಬಿದ್ದರೂ ನಮ್ಮ ಸರಕಾರಿ ಇಲಾಖೆಗಳ ಸರ್ವರ್ ಸಮಸ್ಯೆ ಸುಧಾರಿಸುವುದೇ ಇಲ್ಲ. 10ಜಿ ತಂತ್ರಜ್ಞಾನ ಬಂದಾಗಲೂ ಸ್ಲೋ ಸರ್ವರ್ ಸಮಸ್ಯೆ ಸುಧಾರಣೆಯಾಗುವ ಸಾಧ್ಯತೆ ಕಡಿಮೆ. ಇದು ಆಡಳಿತ ಯಂತ್ರಕ್ಕೂ ಅನ್ವಯವಾಗುವ ಮಾತು.
ನಮ್ಮ ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಚಿವರು ಪೈಪೋಟಿಗೆ ಬಿದ್ದವರಂತೆ ದಿನಕ್ಕೊಂದು ಕಾನೂನು, ನಿಯಮಗಳನ್ನು ತರುತಿದ್ದಾರೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವಾಗ ಸಾಮಾನ್ಯವಾಗಿ ಹೇಳುವ ಮಾತೊಂದಿದೆ- ‘ಇನ್ನು ಜನರು ಎಲ್ಲೂ ಹೋಗಬೇಕಾಗಿಲ್ಲ. ಮಧ್ಯವರ್ತಿ ಗಳನ್ನು ಆಶ್ರಯಿಸಬೇಕಿಲ್ಲ. ಮನೆಯಲ್ಲಿ ಕುಳಿತೇ ಅರ್ಜಿ ಹಾಕಬಹುದು. ಶುಲ್ಕ ಪಾವತಿಸಬಹುದು. ತಮಗೆ ಬೇಕಾದ ಸೇವೆ ಪಡೆದುಕೊಳ್ಳಬಹುದು’. ಹಾಗೆಂದು ಈ ಇಲಾಖೆಗಳಡಿ ಬರುವ ಯಾವ ಕಚೇರಿಗಳಲ್ಲೂ ಕ್ಯೂ ಕಡಿಮೆಯಾಗಿಲ್ಲ. ಮಧ್ಯವರ್ತಿಗಳ ನೆರವು ಇಲ್ಲದೆ ಯಾವ ಕೆಲಸವೂ ಆಗು ತ್ತಿಲ್ಲ. ಮುಂದೆ ಆಗುವ ಭರವಸೆಯೂ ಇಲ್ಲ.
ಯಾವುದೇ ಸೇವೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ ನಮಗೆ ಹಲವು ರೀತಿಯಲ್ಲಿ ನೆರವಾಗಿದೆ. ಖಾಸಗಿ ವಲಯವು ಇದೇ ತಂತ್ರಜ್ಞಾನ ಬಳಸಿಕೊಂಡು ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಹಾಲು, ತರಕಾರಿ, ಔಷಧಿಯಿಂದ ಹಿಡಿದು ಯಾವುದೇ ವಸ್ತು ಬೇಕಿದ್ದರೂ ಕ್ಷಣ ಮಾತ್ರದಲ್ಲಿ ಮನೆ ಬಾಗಿಲಿಗೆ ಬರುತ್ತಿದೆ. ನಗರಕ್ಕೆ ಸೀಮಿತವಾದ ಈ ಸೇವೆಗಳು ಇನ್ನು ಕೆಲವೇ ದಿನಗಳಲ್ಲಿ ನಮ್ಮ ಪ್ರತಿಯೊಂದು ಹಳ್ಳಿಗಳನ್ನು ತಲುಪುವುದರಲ್ಲಿ ಅನುಮಾನವಿಲ್ಲ. ಆದರೆ ಸರಕಾರದ ಸೇವೆಯ ವಿಚಾರ ಬಂದಾಗ ಮನೆ ಬಾಗಿಲಿಗೆ ಬಿಡಿ, ಸಂಬಂಧಪಟ್ಟ ಕಚೇರಿಗೆ ಹತ್ತಾರು ಬಾರಿ ಎಡತಾಕಿದರೂ ಸಮಸ್ಯೆ ಬಗೆಹರಿಯುವುದಿಲ್ಲ.
ಇದನ್ನೂ ಓದಿ: Lokesh Kaayarga Column: ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?
ಕಾರಣ ಸ್ಪಷ್ಟ. ಯಾವುದೇ ತಂತ್ರಜ್ಞಾನ ತಾನಾಗಿಯೇ ಸೇವೆ ನೀಡುವುದಿಲ್ಲ. ಅದನ್ನು ಸರಿಯಾಗಿ ಬಳಸಿಕೊಳ್ಳುವ ತಲೆ ಮತ್ತು ಕೈಗಳಿರಬೇಕು. ಸೇವೆ ನೀಡುವ ಮನಸ್ಸಿದ್ದರೆ, ನೀಡುವ ಕೈಗಳಿದ್ದರೆ ತಲುಪಿಸಲು ಈಗ ನೂರಾರು ಮಾರ್ಗಗಳಿವೆ. ಆದರೆ ‘ಕಾಣಿಕೆ’ ಸಂದಾಯವಾಗದ ಹೊರತು ಸೇವೆ ಸಲ್ಲಲೇಬಾರದು ಎಂದು ಯೋಚಿಸುವವರನ್ನು ಯಾವ ತಂತ್ರಜ್ಞಾನದಿಂದಲೂ ರಿಪೇರಿ ಮಾಡಲಾ ಗದು. ಟೆಕ್ ದೈತ್ಯ ಎಲಾನ್ ಮಸ್ಕ್, ಮನುಷ್ಯನ ಯೋಚನೆ, ಸಂವೇದನೆಯನ್ನು ಗ್ರಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಧಾವಂತದಲ್ಲಿದ್ದಾರೆ. ಇದರ ಬದಲು ಮನುಷ್ಯನ ಯೋಚನೆ ಯನ್ನೇ ಒಳಿತಿನೆಡೆಗೆ ಒಯ್ಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೆ ಇಡೀ ವಿಶ್ವವೇ ಸುಭಿಕ್ಷೆಯತ್ತ ಸಾಗುತ್ತಿತ್ತು.
ಮನೆ ತೆರಿಗೆ, ಜನನ-ಮರಣ ಪ್ರಮಾಣ ಪತ್ರ, ವಂಶಾವಳಿ, ಆದಾಯ ಪ್ರಮಾಣ ಪತ್ರ, ಪಹಣಿ, ಋಣ ಭಾರ ರಾಹಿತ್ಯ ಪ್ರಮಾಣ ಪತ್ರ, ಭೂ ಸಾಗುವಳಿ ಪತ್ರ, ಭೂ ನಕ್ಷೆ, ಜಮೀನಿನ ಸರ್ವೇ, ನೋಂದಣಿ, ವಿಕ್ರಯ, ವಿಭಾಗ ಪತ್ರ, ಭೂ ಪರಿವರ್ತನೆ, ಪಡಿತರ,ನಿರಾಕ್ಷೇಪಣೆ ಪತ್ರ... ಹೀಗೆ ಹತ್ತಾರು ಸೇವೆಗಳ ಕೇಂದ್ರ ಬಿಂದು ಕಂದಾಯ ಇಲಾಖೆ. ಕಳೆದ ಮೂರು ದಶಕಗಳಿಂದ ಕಂದಾಯ ಇಲಾಖೆಯ ಸೇವೆಯನ್ನು ಸುಗಮ ಮತ್ತು ಸುಲಲಿತಗೊಳಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಲೇ ಇದೆ. ಹಾಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ನಿರ್ದಿಷ್ಟ ಗಡುವನ್ನು ನೀಡಿ ಇಲಾಖೆಯ ಸೇವೆ ಯನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರಿಗೆ ಸೇವೆ ನೀಡುವ ವಿಚಾರದಲ್ಲಿ ಈ ಇಲಾಖೆಯನ್ನು ಮುಂದಕ್ಕೆ ಒಯ್ಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅವರ ಮಾತಿನಲ್ಲೇ ವ್ಯಕ್ತವಾಗುತ್ತಿದೆ.
ಭೂಮಿ, ಭೂ ಕಂದಾಯ ಮತ್ತು ಭೂ ಒಡೆತನಕ್ಕೆ ಸಂಬಂಧಿಸಿ ಕಳೆದ 10 ವರ್ಷಗಳಲ್ಲಿ ಜಾರಿಗೆ ತಂದ ಹೊಸ ನಿಯಮ, ಹೊಸ ಕಾನೂನು ಮತ್ತು ತಿದ್ದುಪಡಿಗಳಿಗೆ ಲೆಕ್ಕವಿಲ್ಲ. ಆದರೆ ತಂತ್ರಜ್ಞಾನದ ಬದಲಾವಣೆಯ ಕಾರಣ ಪಹಣಿ ಸೇರಿದಂತೆ ಒಂದಷ್ಟು ಸೇವೆಗಳು ಜನರಿಗೆ ಕೈಗೆಟಕುತ್ತಿವೆ. ಆದರೆ ಸಿಬ್ಬಂದಿ ಹಸ್ತಕ್ಷೇಪ ಅನಿವಾರ್ಯವಾದ ಪ್ರಕರಣಗಳಲ್ಲಿ ಜನಸ್ನೇಹಿ ಸೇವೆ ನೀಡಲು ಇನ್ನೂ ಸಾಧ್ಯ ವಾಗಿಲ್ಲ. ಮುಖ್ಯವಾಗಿ ಮನೆ, ಆಸ್ತಿ ಮತ್ತು ಜಮೀನಿನ ಮಾಲೀಕತ್ವದ ಗೊಂದಲವನ್ನು ಕಾಯಂ ಆಗಿ ಬಗೆಹರಿಸುವಲ್ಲಿ ಈ ತನಕ ಯಾವುದೇ ನಿಯಮ, ಕಾನೂನುಗಳು ನೆರವಾಗಿಲ್ಲ. ಕಾರಣ ಇವು ಇಲಾಖೆಯ ಸಿಬ್ಬಂದಿಗಳೇ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಮಾಡಬೇಕಾದ ಕೆಲಸ.
ಉದಾಹರಣೆಗೆ ಕಾವೇರಿ 2.0 ಸಾಫ್ಟ್‌ವೇರ್ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಿರ್ವಹಿಸಲು ಸರಕಾರ ತಂದ ವ್ಯವಸ್ಥೆ. ‘ಇನ್ನು ಮುಂದೆ ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರತಿ ಸಾಲು ನಿಲ್ಲುವ ಅವಶ್ಯಕತೆ ಇಲ್ಲ. ಜನರು ಮನೆಯಲ್ಲೇ ಕುಳಿತು ನೋಂದಣಿಗೆ ಬೇಕಾದ ಅರ್ಜಿ ತುಂಬಬಹುದು ಮತ್ತು ಶುಲ್ಕ ಪಾವತಿಸಬಹುದು. ಕೇವಲ ಹೆಬ್ಬೆಟ್ಟು ಗುರುತು ಮತ್ತು ಫೋಟೋ ತೆಗೆಸಲು ಮಾತ್ರ ಕಚೇರಿಗೆ ಹೋದರೆ ಸಾಕು’ ಎಂದು ಸರಕಾರ ಹೇಳಿಕೊಂಡಿತ್ತು. ಆದರೆ ಕಾವೇರಿ 1.0 ತಂತ್ರಾಂಶ ಇರುವಾಗಲೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ಯೂ ನಿಲ್ಲುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಈಗಲೂ ಕಡಿಮೆಯಾಗಿಲ್ಲ. ಕೇಳಿದರೆ ಉತ್ತರ ಮೊದಲೇ ಸಿದ್ಧ- ಸರ್ವರ್ ಸ್ಲೋ. ಒಂದು ವೇಳೆ ನೀವು ಕಾನೂನು, ನಿಯಮಗಳನ್ನು ತಿಳಿದಿದ್ದು ನೇರವಾಗಿ ಸಂಪರ್ಕಿಸಿ ದರೆ ಈ ಕಚೇರಿಗಳ ಕಂಪ್ಯೂಟರ್ ಪರದೆ ನಿಮ್ಮ ಮುಂದೆ ತೆರೆದುಕೊಳ್ಳುವುದೇ ಇಲ್ಲ. ಎಂದಿನಂತೆ ಮಧ್ಯವರ್ತಿಗಳನ್ನು ಹಿಡಿದು ಹೋದರೆ ಕೆಲಸ ಸಲೀಸು.
ಸರಕಾರದ ಪ್ರಕಾರ ನಿಮ್ಮ ಜಮೀನಿನ ನಕ್ಷೆ, ಹದ್ದುಬಸ್ತು, ಪೋಡಿ ಮತ್ತು ತಾತ್ಕಾಲಿಕ ಪೋಡಿ ಸೇವೆಗಳಿಗಾಗಿ ಮೋಜಿನಿ ವಿ3 ಪೋರ್ಟಲ್ ಬಳಸಿ ಅರ್ಜಿ ಸಲ್ಲಿಸಬಹುದು. ಪೋಡಿ ಸೇವೆ ತ್ವರಿತ ಗೊಳಿಸಲು ಸರ್ವೆ ಇಲಾಖೆಗೆ ಸರಕಾರವೂ ಸೂಚನೆ ನೀಡಿದೆ. ಆದರೆ ರಾಜ್ಯದ ಅರ್ಧಕ್ಕಿಂತ ಹೆಚ್ಚು ರೈತರ ಜಮೀನುಗಳಿಗೆ ಸರಿಯಾದ ನಕ್ಷೆ ಇಲ್ಲ. ಒಂದೇ ಸರ್ವೇ ನಂಬರ್‌ನಲ್ಲಿ ನೋಂದಣಿ ಯಾಗಿರುವ, ಹತ್ತಾರು ಜನರ ಜಮೀನುಗಳನ್ನು ದುರಸ್ತಿಗೊಳಿಸಿ ಪ್ರತ್ಯೇಕ ನಕ್ಷೆ ಮತ್ತು ಸರ್ವೇ ನಂಬರ್ ನೀಡಬೇಕಾದರೆ ಇದಕ್ಕೆ ಸಾವಿರಾರು ಸಿಬ್ಬಂದಿಗಳ ಪ್ರತ್ಯೇಕ ವಿಭಾಗವೇ ಬೇಕು. ಸದ್ಯಕ್ಕೆ ಅರ್ಜಿ ಹಾಕಿ ಒತ್ತಡ ಹೇರಿದವರಿಗಷ್ಟೇ ಪೋಡಿ ಭಾಗ್ಯ ಸಿಗುತ್ತಿದೆ.
ದಿಶಾಂಕ್ ಆ್ಯಪ್ ಮೂಲಕ ಜಮೀನಿನ ಸರ್ವೆ ನಂಬರ್ ಮತ್ತು ಭೂಮಿಯ ವಿವರಗಳನ್ನು (ಭೂಮಾಲೀಕರ ಹೆಸರು, ವಿಸ್ತೀರ್ಣ) ಜಿಪಿಎಸ್ ಮೂಲಕ ಪಡೆಯಬಹುದು. ಭೂಮಿ ಖರೀದಿಸುವ ಮುನ್ನ ಆಸ್ತಿಯ ನೈಜತೆಯನ್ನು ಪರಿಶೀಲಿಸುವ ಸದುದ್ದೇಶದಿಂದ ಈ ಆ್ಯಪ್ ರೂಪಿಸಲಾಗಿದೆ. ಆದರೆ ಎಲ್ಲ ರೈತರ ಜಮೀನಿನ ಪೋಡಿ ಕಾರ‌್ಯ ಪೂರ್ಣಗೊಳ್ಳದ ಹೊರತು ಈ ಆ್ಯಪ್ ಮೂಲಕ ಯಾವುದನ್ನೂ ನಿರ್ಧರಿಸಲು ಸಾಧ್ಯವಿಲ್ಲ. ಈಗ ಈ ಆ್ಯಪ್ ಬಳಸಿದರೆ ಒಂದೇ ಸರ್ವೆ ನಂಬರ್‌ನಡಿ ಬರುವ ಎಲ್ಲ ಭೂ ಹಿಡುವಳಿದಾರರ ಪಟ್ಟಿಯೇ ಬರುತ್ತದೆ.
ಗ್ರಾಮೀಣ ಪ್ರದೇಶದ ಆಸ್ತಿಗಳ (ಮನೆ/ನಿವೇಶನ) ಮಾಲೀಕತ್ವದ ದಾಖಲೆಗಳನ್ನು (ಫಾರಂ-9 ಮತ್ತು ಫಾರಂ-11) ಡಿಜಿಟಲ್ ರೂಪಕ್ಕೆ ತರುವ ಉದ್ದೇಶದಿಂದ ಇದೀಗ ಸರಕಾರ ‘ಇ-ಸ್ವತ್ತು-2’ ತಂತ್ರಾಂಶ ಅನುಷ್ಠಾನಕ್ಕೆ ತಂದಿದೆ. ಜನರಿಗೆ ಮಾಲೀಕತ್ವ ನೀಡುವುದಕ್ಕಿಂತಲೂ ಅವರ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ತರುವುದು ಈ ತಂತ್ರಾಂಶದ ಮುಖ್ಯ ಉದ್ದೇಶ. ಗ್ರಾಮೀಣ ಪ್ರದೇಶದಲ್ಲಿ ತಮ್ಮ ಪಾಡಿಗೆ ತಾವು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದವರಿಗೆ ಈ ತಂತ್ರಾಂಶವೇ ಮುಳುವಾಗುತ್ತಿದೆ.
ಇನ್ನು ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಭೂ ಒಡೆತನ ನೀಡುವ ಉದ್ದೇಶದಿಂದ ಜಾರಿ ಮಾಡಲಾದ ಬಗರ್ ಹುಕುಂ ಸಕ್ರಮ (ಫಾರಂ 50, 53, 57) ಯೋಜನೆ 10 ವರ್ಷಗಳ ಹಿಂದೆ ಜಾರಿಯಾದರೂ ಈ ಅರ್ಜಿಗಳು ವಿಲೇವಾರಿ ಸಮಿತಿ ಮುಂದಿವೆ. ಗ್ರಾಮೀಣ (94ಇ) ಮತ್ತು ನಗರ (94ಇಇ) ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ನೀಡುವ ಯೋಜನೆ ಪೂರ್ತಿಯಾಗಿ ದಿಕ್ಕು ತಪ್ಪಿದೆ. 94 ಇ ಅಡಿ ದಾಖಲಾದ ಎಲ್ಲ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕಾದರೆ ಇನ್ನೊಂದು ಕರ್ನಾಟಕವೇ ಸೃಷ್ಟಿಯಾಗಬೇಕು. ಭೂ ಪರಿವರ್ತನೆ ಸರಳೀಕರಣ ಯೋಜನೆ, ಸ್ವಾಮಿತ್ವ ಯೋಜನೆ ಇತ್ಯಾದಿ ಹಲವು ಯೋಜನೆಗಳು ಸದುದ್ದೇಶದಿಂದಲೇ ಜಾರಿಗೆ ಬಂದರೂ ಅಂತಿಮವಾಗಿ ಇವು ಗ್ರಾಮೀಣ ಜನರ ಬದುಕನ್ನು ಹಸನಾಗಿಸುವ ಬದಲು ಅಸಹನೀಯಗೊಳಿಸುತ್ತಿವೆ.
ಸರಕಾರದ ವಿವಿಧ ಇಲಾಖೆಗಳ ಸಾವಿರಕ್ಕೂ ಹೆಚ್ಚು ಸೇವೆಗಳನ್ನು ‘ಸಕಾಲ’ ವ್ಯಾಪ್ತಿಯಡಿ ತರಲಾಗಿದೆ. ಇದರ ಪ್ರಕಾರ 30 ದಿನಗಳೊಳಗೆ ಅಧಿಕಾರಿಗಳು ಯಾವುದೇ ಅರ್ಜಿಯನ್ನು ಇತ್ಯರ್ಥ ಮಾಡಬೇಕು. ಅರ್ಜಿ ತಿರಸ್ಕೃತವಾದರೆ ಸಕಾರಣಗಳನ್ನಿತ್ತು ಹಿಂಬರಹ ನೀಡಬೇಕು. ಆದರೆ ಅಧಿಕಾರಿಗಳು ಮತ್ತು ಜನರು ಈ ಕಾಯಿದೆಯ ಅಸ್ತಿತ್ವವನ್ನೇ ಮರೆತಿದ್ದಾರೆ. ಬಹುತೇಕ ಸಂದರ್ಭ ಗಳಲ್ಲಿ ಸರಕಾರಿ ಕಚೇರಿಗಳಲ್ಲಿ ಜನರು ನೀಡಿದ ಅರ್ಜಿಗೆ ಸ್ವೀಕೃತಿ ಪತ್ರವನ್ನೇ ನೀಡುವುದಿಲ್ಲ. ಸ್ವೀಕೃತಿ ಪತ್ರ ಇಲ್ಲದ ಹೊರತು ಅರ್ಜಿಯನ್ನು ನೀಡಿರುವುದಕ್ಕೆ ಯಾವುದೇ ದಾಖಲೆ ನೀಡಲು ಸಾಧ್ಯ ವಾಗುವುದಿಲ್ಲ.
ಸರ್ವರ್ ಸ್ಲೋ ಒಂದೇ ಅಲ್ಲ. ಸೇವೆ ನೀಡುವುದಕ್ಕಿಂತ ಸೇವೆ ನೀಡದಿರಲು ಅಧಿಕಾರಿಗಳ ಬಳಿ ನೂರಾರು ಕಾರಣಗಳಿರುತ್ತವೆ. ಜನರ ಜುಟ್ಟು ಹಿಡಿಯಲು ಸಾಕಷ್ಟು ನಿಯಮ, ಕಾನೂನುಗಳಿವೆ. ನೀವು ಭಾರತದ ಹೆಮ್ಮೆಯ ಪ್ರಜೆಯಾದರೂ, ಈ ಕಾನೂನುಗಳು ಕ್ಷಣ ಮಾತ್ರದಲ್ಲಿ ನಿಮ್ಮನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಬಹುದು. ನೀವು ಕಷ್ಟಪಟ್ಟು ನಿವೇಶನ ಖರೀದಿಸಿ, ಮನೆ ಕಟ್ಟಲು ಹೊರಡುತ್ತೀರಿ ಎಂದುಕೊಳ್ಳಿ. ಸ್ಥಳೀಯ ಪ್ರಾಧಿಕಾರದಿಂದ ಕಟ್ಟಡ ನಕ್ಷೆ ಪಡೆಯಬೇಕಾದರೆ ನಿಮ್ಮ ಇಂಜಿನಿಯರ್ ನೀಡಿದ ನಕ್ಷೆ ಸಾಕಾಗುವುದಿಲ್ಲ.
ನಮಗೆ ಬೇಕಿರುವ ನಕ್ಷೆಯೇ ಬೇರೆ ಎನ್ನುವ ಅಧಿಕಾರಿಗಳು, ‘ಇಂಥವರನ್ನು ಸಂಪರ್ಕಿಸಿ’ ಎನ್ನುತ್ತಾರೆ. ಅವರು ನೀವು ಕಟ್ಟುವ ಮನೆ ಅಂತಸ್ತಿಗೆ ಸರಿಯಾಗಿ ಯಾವುದೇ ‘ಉಲ್ಲಂಘನೆ’ ಇಲ್ಲದ ರೆಡಿಮೇಡ್ ನಕ್ಷೆಯೊಂದನ್ನು ನೀಡುತ್ತಾರೆ. ಮನೆ ನಿಮ್ಮ ಇಂಜಿನಿಯರ್ ನೀಡಿದ ಪ್ಲ್ಯಾನ್‌ನಂತೆ ಪೂರ್ಣ ಗೊಳ್ಳುತ್ತದೆ. ಇದೀಗ ವಿದ್ಯುಚ್ಛಕ್ತಿ ಮತ್ತು ನೀರಿನ ಸಂಪರ್ಕ ಪಡೆಯಬೇಕಾದರೆ ಕಟ್ಟಡ ಮುಕ್ತಾಯ ಮತ್ತು ವಾಸಯೋಗ್ಯ ಪ್ರಮಾಣ ಪತ್ರ ನೀಡುವುದು ಕಡ್ಡಾಯ. ಸ್ಥಳೀಯ ಪ್ರಾಧಿಕಾರಕ್ಕೆ ಸಿಆರ್ ಮತ್ತು ಒಸಿ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದಾಗ ನೀವು ಅಡಕತ್ತರಿಯಲ್ಲಿ ಸಿಲುಕಿರುವುದು ತಿಳಿಯುತ್ತದೆ.
ಮಹಾನಗರಗಳಲ್ಲಿ ದುಬಾರಿ ಹಣ ತೆತ್ತು ಕಟ್ಟಿಸಿದ ಮನೆಗಳನ್ನು ಸ್ಥಳೀಯ ಪ್ರಾಧಿಕಾರದ ನಿಯಮ ಗಳ ಅನ್ವಯವೇ ಕಟ್ಟಿಸುವುದು ದೂರದ ಮಾತು. ಇಲ್ಲಿ ನಿರ್ಮಾಣವಾದ, ನಿರ್ಮಾಣ ಗೊಳ್ಳು ತ್ತಿರುವ, ನಿರ್ಮಾಣವಾಗಲಿರುವ ಶೇ.99ರಷ್ಟು ಕಟ್ಟಡಗಳನ್ನು ನಿಯಮಗಳನ್ನು ಉಲ್ಲಂಘಿಸಿಯೇ ಕಟ್ಟುವುದು ಅನಿವಾರ್ಯ. ಪ್ರಾಧಿಕಾರದ ಅನುಮತಿ ಪಡೆದ ಮೂಲ ನಕ್ಷೆ ಮತ್ತು ಇಂಜಿನಿಯರ್ ಅಥವಾ ಆರ್ಕಿಟೆಕ್ಟ್ ನೀಡಿದ ನಕ್ಷೆ ಪ್ರಕಾರ ನಿರ್ಮಾಣಗೊಂಡ ಮನೆ ಅಥವಾ ಕಟ್ಟಡದಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಅಧಿಕಾರಿಗಳ ಮನವ ಸಂತೈಸದೇ ಹೋದರೆ ನಿಮಗೆ ನೀರು, ಕರೆಂಟು ಯಾವುದೂ ಸಿಗಲಾರದು.
ಇಷ್ಟಾದ ಬಳಿಕವೂ ನಿಮ್ಮ ಮನೆಯನ್ನು ‘ಅಕ್ರಮ’ ಎಂದು ಪರಿಗಣಿಸಿ ಅಧಿಕಾರಿಗಳು ಕೆಡವಲು ಮುಂದಾಗಬಹುದು. ಅಂದರೆ ಮುಂದೆಂದೂ ನೀವು ಅಧಿಕಾರಿಗಳ ವಿರುದ್ಧ, ನಾಯಕರ ವಿರುದ್ಧ ಧ್ವನಿ ಎತ್ತಬಾರದು !
ಮಾತ್ರವಲ್ಲ ನಿಮ್ಮ ಮೇಲೆ ಕನಿಕರ ತೋರಿ ಅಕ್ರಮ-ಸಕ್ರಮದ ಹೆಸರಿನಲ್ಲಿ ಹೊಸ ಯೋಜನೆ ಗಳನ್ನು ಜಾರಿಗೊಳಿಸಿದಾಗ ದುಬಾರಿ ದಂಡ ತೆತ್ತು ಸಕ್ರಮಗೊಳಿಸಿಕೊಳ್ಳಲು ಸಿದ್ಧರಿರಬೇಕು. ನಗರ ಪ್ರದೇಶಗಳಿಗೆ ಸೀಮೀತವಾಗಿದ್ದ ಈ ಅಕ್ರಮ -ಸಕ್ರಮ ದಂಧೆಯನ್ನು ಈಗ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲಾಗಿದೆ. ಭೂ ಪರಿವರ್ತನೆ ಹೆಸರಿನಲ್ಲಿ ಜಾರಿಗೊಳಿಸಿರುವ ಹೊಸ ಕಾನೂನು, ನೀವು ತಾತ- ಮುತ್ತಾತನ ಕಾಲದಿಂದ ಅನುಭವಿಸಿಕೊಂಡ ಬಂದ ಮನೆಯನ್ನೂ ಅಕ್ರಮ ಎಂದು ಪರಿಗಣಿಸಲು ಸಿದ್ಧವಾಗಿದೆ. ಇದು ಬೇರೆಯೇ ಕಥೆ. ಇನ್ನೊಮ್ಮೆ ಚರ್ಚಿಸೋಣ.