ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

ಎಡ-ಬಲ ನಿಲುವಿನ ಕಾರ್ಮಿಕ ಸಂಘಟನೆಗಳು ತಮ್ಮ ನಿಲುವಿಗೆ ತಕ್ಕಂತೆ ಹೇಳಿಕೆ ನೀಡಿ ದ್ದನ್ನು ಬಿಟ್ಟರೆ ಹೊಸ ಕಾಯಿದೆಯ ಇನ್ನೂ ವಿಶದವಾಗಿ ಮಾತನಾಡಿಲ್ಲ. ಬ್ರಿಟಿಷರ ಅವಧಿಯ ಕಾನೂನುಗಳೂ ಸೇರಿದಂತೆ 29 ಹಳೆಯ ಕಾರ್ಮಿಕ ಕಾನೂನುಗಳನ್ನು ಪರಿಷ್ಕರಿಸಿ ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.

ಕಾರ್ಮಿಕರ ಕಾನೂನು ಕಾರ್ಮಿಕರ ಹಿತ ಕಾಯಬಲ್ಲುದೇ ?

-

ಲೋಕಮತ

ಮೂರ‍್ನಾಲ್ಕು ದಶಕಗಳ ಹಿಂದೆ ಈ ಕಾನೂನು ಜಾರಿಯಾಗಿದ್ದರೆ ದೇಶದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗುತ್ತಿತ್ತು. ಒಂದೋ ದೊಡ್ಡ ಮಟ್ಟದಲ್ಲಿ ಸ್ವಾಗತಿಸು ತ್ತಿದ್ದರು, ಇಲ್ಲವೇ ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗುತ್ತಿದ್ದರು. ಈಗ ಇವೆರಡೂ ಕಾಣಿಸುತ್ತಿಲ್ಲ.

ದೇಶದ ಕೋಟ್ಯಂತರ ಕಾರ್ಮಿಕರು ಮತ್ತು ಉದ್ದಿಮೆಗಳಿಗೆ ಸಂಬಂಧಿಸಿದ ಹೊಸ ಕಾರ್ಮಿಕ ಸಂಹಿತೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಗೆ ನೇರವಾಗಿ ಸಂಬಂಧಿಸಿದ ಸುದ್ದಿಯಾದರೂ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಸಿಗಲಿಲ್ಲ. ನಮ್ಮ ನೇತಾರರಿಗೂ ಇದು ಮಹತ್ವದ್ದೆನಿಸಲಿಲ್ಲ.

ಎಡ-ಬಲ ನಿಲುವಿನ ಕಾರ್ಮಿಕ ಸಂಘಟನೆಗಳು ತಮ್ಮ ನಿಲುವಿಗೆ ತಕ್ಕಂತೆ ಹೇಳಿಕೆ ನೀಡಿ ದ್ದನ್ನು ಬಿಟ್ಟರೆ ಹೊಸ ಕಾಯಿದೆಯ ಇನ್ನೂ ವಿಶದವಾಗಿ ಮಾತನಾಡಿಲ್ಲ. ಬ್ರಿಟಿಷರ ಅವಧಿಯ ಕಾನೂನುಗಳೂ ಸೇರಿದಂತೆ ೨೯ ಹಳೆಯ ಕಾರ್ಮಿಕ ಕಾನೂನುಗಳನ್ನು ಪರಿಷ್ಕರಿಸಿ ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.

2025ರ ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ಸಂಹಿತೆ ಐತಿಹಾಸಿಕ ಎನ್ನುವುದು ಕೇಂದ್ರ ಸರಕಾರದ ಘೋಷಣೆ. 29 ಹಳೆಯ ಕಾನೂನುಗಳನ್ನು ೪ ಸಂಹಿತೆಗಳಾಗಿ ಪರಿವರ್ತಿ ಸಿರುವುದರಿಂದ ಉದ್ಯೋಗದಾತರಿಗೆ ಮತ್ತು ಕಾರ್ಮಿಕರಿಗೆ ಕಾನೂನು ಪಾಲನೆ ಪ್ರಕ್ರಿಯೆ ಸುಲಭವಾಗಲಿದೆ.

ಇದನ್ನೂ ಓದಿ: Lokesh Kaayarga Column: ವಂಚಕರ ಚಾಲಾಕಿತನಕ್ಕೆ ಮದ್ದರೆಯುವವರಾರು ?

ಬದಲಾದ ಉದ್ಯಮ ಜಗತ್ತಿಗೆ ಪೂರಕವಾದ ಈ ಸಂಹಿತೆ ಕಾರ್ಮಿಕರು ಮತ್ತು ಉದ್ಯೋಗಿ ಗಳ ಹಿತ ಕಾಯಲಿದೆ ಎನ್ನುವುದು ಕೇಂದ್ರ ಕಾರ್ಮಿಕ ಸಚಿವಾಲಯದ ಅಭಿಮತ. ಬಿಹಾರ ಚುನಾವಣೆ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಪ್ರತಿಪಕ್ಷ ನಾಯಕರು, ‘ಸಂಹಿತೆ ಕಾರ್ಮಿಕ ವಿರೋಧಿ’ ಎನ್ನುವುದನ್ನು ಬಿಟ್ಟರೆ ಮಹತ್ವದ ಹೇಳಿಕೆಯನ್ನೇನೂ ನೀಡಿಲ್ಲ.

ಕಾರ್ಮಿಕರ ಉದ್ಯೋಗ ಸುರಕ್ಷತೆಯನ್ನು ಈ ಕಾನೂನು ಮತ್ತಷ್ಟು ಅಪಾಯಕ್ಕೆ ತಳ್ಳಿದೆ ಎನ್ನುವುದು ಎಡಪಕ್ಷಗಳ ಬೆಂಬಲಿತ ಕಾರ್ಮಿಕ ಸಂಘಟನೆಗಳ ವಾದ. ಐದು ವರ್ಷಗಳಿಂದ ಬಾಕಿ ಉಳಿದಿದ್ದ ನಾಲ್ಕು ಕಾರ್ಮಿಕ ಸಂಹಿತೆಗಳಾದ ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020, ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ 2020 ಈಗಾಗಲೇ ಜಾರಿಗೆ ತಂದಿದೆ.

ವೇತನ ಸಂಹಿತೆ ಪ್ರಕಾರ ಇನ್ನು ಮುಂದೆ ಪ್ರತಿ ತಿಂಗಳ ಏಳನೇ ತಾರೀಕಿನೊಳಗೆ ಕನಿಷ್ಠ ವೇತನ ಪಾವತಿ ಕಡ್ಡಾಯ. ಯಾವುದೇ ರಾಜ್ಯದಲ್ಲಿ ಕೇಂದ್ರ ಸರಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನಿಗದಿ ಮಾಡುವಂತಿಲ್ಲ. ಗ್ರ್ಯಾಚುಟಿ ಪಡೆಯಲು ಇನ್ನು ಐದು ವರ್ಷ ಕಾಯಬೇಕಿಲ್ಲ.

Screenshot_1 ಋ

ಒಂದು ವರ್ಷ ಸೇವೆ ಸಲ್ಲಿಸಿದವರೂ ಗ್ರ್ಯಾಚುಟಿ ಪಡೆಯಲು ಅರ್ಹರಾಗುತ್ತಾರೆ. ಒಟ್ಟು ಸಂಬಳದಲ್ಲಿ ಶೇ.50ರಷ್ಟು ಮೊತ್ತವನ್ನು ವೇತನ ಎಂದು ಪರಿಗಣಿಸುವುದರಿಂದ ಇದಕ್ಕೆ ತಕ್ಕಂತೆ ಭವಿಷ್ಯನಿಧಿ, ಗ್ರಾಚ್ಯುಟಿ ಮತ್ತು ಪಿಂಚಣಿ ಮೊತ್ತವನ್ನು ನಿಗದಿ ಮಾಡಬೇಕಾಗುತ್ತದೆ.

ವೇತನಕ್ಕೆ ಸಂಬಂಧಿಸಿದ ಈ ನಿಯಮಗಳಿಗೆ ಕಾರ್ಮಿಕ ಸಂಘಟನೆಗಳಿಂದ ಆಕ್ಷೇಪ ಬಂದಿಲ್ಲ. ಆದರೆ ಕೈಗಾರಿಕಾ ಸಂಬಂಧಗಳ ಸಂಹಿತೆಯಲ್ಲಿ ಹೇಳಲಾದ ಕೆಲವು ಅಂಶಗಳು ಕಾರ್ಮಿಕ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಇನ್ನು ಮುಂದೆ ನೌಕರರ ನೇಮಕ, ವಜಾ, ಸಂಪು ಮತ್ತು ಕಾರ್ಮಿಕ ಸಂಘಟನೆಗಳ ನಿಯಮಗಳು ಬದಲಾಗಲಿವೆ. ಈ ಮೊದಲು ೧೦೦ ಅಥವಾ ಅದಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಉದ್ದಿಮೆ ಘಟಕಗಳನ್ನು ಸರಕಾರದ ಅನುಮತಿ ಇಲ್ಲದೆಯೇ ಮುಚ್ಚಬಹುದಿತ್ತು.

ಕಾರ್ಮಿಕರನ್ನು ಮನೆಗೆ ಕಳುಹಿಸಬಹುದಿತ್ತು. ಇನ್ನು ಮುಂದೆ 300 ಉದ್ಯೋಗಿಗಳವರೆಗಿನ ಕಂಪನಿಗಳು ಕೂಡ ಸರಕಾರದ ಅನುಮತಿ ಪಡೆಯದೇ ನೌಕರರನ್ನು ವಜಾಗೊಳಿಸ ಬಹುದು. ಲಾಕ್‌ಡೌನ್ ಘೋಷಿಸಬಹುದು. ಒಂದು ವೇಳೆ ನೌಕರರು ಮುಷ್ಕರ ಹೂಡುವು ದಾದರೆ 60 ದಿನಗಳ ಮೊದಲು ನೋಟಿಸ್ ನೀಡಬೇಕು. ಈ ಮೊದಲು ಒಂದೂವರೆ ತಿಂಗಳ ಮುಂಚೆ ನೋಟಿಸ್ ನೀಡಬೇಕಿತ್ತು. ಈ ಎರಡು ಅಂಶಗಳ ಬಗ್ಗೆ ಕಾರ್ಮಿಕ ವಲಯದಿಂದ ತೀವ್ರ ಆಕ್ಷೇಪವಿದೆ.

ಸದ್ಯದ ಅಂದಾಜು ಪ್ರಕಾರ ದೇಶದಲ್ಲಿ ಸುಮಾರು 56.4 ಕೋಟಿ ಜನರು ವಿವಿಧ ಉದ್ಯೋಗ ಗಳಲ್ಲಿ ನಿರತರಾಗಿದ್ದಾರೆ. ಇವರಲ್ಲಿ ಶೇ.40ಕ್ಕಿಂತ ಹೆಚ್ಚು ಮಂದಿ ಅಸಂಘಟಿತ ವಲಯದ ಅರೆಕಾಲಿಕ ಉದ್ಯೋಗಿಗಳು. ಶೇ.26ರಷ್ಟು ಜನ ಕೈಗಾರಿಕಾ ಘಟಕಗಳಲ್ಲಿ ಕೆಲಸ ಮಾಡು ತ್ತಿದ್ದಾರೆ.

ಶೇ.50ರಷ್ಟು ಉದ್ದಿಮೆಗಳಲ್ಲಿ ಇರುವ ಸರಾಸರಿ ಉದ್ಯೋಗಿಗಳ ಸಂಖ್ಯೆ ಕೇವಲ 20. ಅಂದರೆ ನಮ್ಮ ಉದ್ದಿಮೆಗಳಲ್ಲಿರುವ ನೌಕರರ ಸರಾಸರಿ ಸಂಖ್ಯೆ 86ರಷ್ಟಿದೆ. ಅಂದರೆ ಹೊಸ ಕೈಗಾರಿಕಾ ಸಂಹಿತೆ ಪ್ರಕಾರ ಬಹುತೇಕ ಉದ್ದಿಮೆಗಳಿಗೆ ಯಾವುದೇ ಕ್ಷಣದಲ್ಲಿ ಬೀಗ ಮುದ್ರೆ ಘೋಷಿಸಿ ನೌಕರರನ್ನು ಕೈ ಬಿಡಬಹುದು. ಇದಕ್ಕೆ ಸರಕಾರದ ಅನುಮತಿ ಬೇಕಿಲ್ಲ.

ಕಾರ್ಮಿಕ ಕಾಯಿದೆಯ ಮುಖ್ಯ ಉದ್ದೇಶವೇ ನೌಕರರ ಉದ್ಯೋಗ ಭದ್ರತೆ. ಇದಕ್ಕೆ ಒತ್ತು ನೀಡದೇ ಹೋದರೆ ಸರಕಾರದ ಯಾವುದೇ ಸಂಹಿತೆಯನ್ನು ಕಾರ್ಮಿಕರ ಪರ ಎಂದು ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರಕಾರ ಉದ್ಯೋಗದಾತರ ಒತ್ತಡಕ್ಕೆ ಮಣಿದಿದೆ ಎನ್ನುವುದು ಸಿಐಟಿಯು ಸೇರಿದಂತೆ ಪ್ರತಿಪಕ್ಷ ಬೆಂಬಲಿತ ಕಾರ್ಮಿಕ ಸಂಘಟನೆಗಳ ಆರೋಪ.

ಹೂಡಿಕೆಯನ್ನು ಆಕರ್ಷಿಸುವುದು ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಸುಗಮ ವಾತಾವರಣ ನಿರ್ಮಿಸುವುದು ಈ ಸಂಹಿತೆಗಳ ಪ್ರಮುಖ ಗುರಿಯಾಗಿದ್ದು, ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಹಕ್ಕುಗಳು ದುರ್ಬಲಗೊಂಡಿವೆ. ಈ ಸಂಹಿತೆಗಳಿಂದ ಕಾರ್ಮಿಕರಿಗೆ ಆಗುವ ಸಣ್ಣ ಲಾಭ ಗಳು, ಉದ್ಯೋಗದಾತರಿಗೆ ಸಿಗುವ ದೊಡ್ಡ ಅನುಕೂಲಗಳ ಮುಂದೆ ನಗಣ್ಯ ಎನ್ನುವುದು ಹೆಚ್ಚಿನವರ ಅಭಿಪ್ರಾಯ.

ಅನುಕೂಲದ ದೃಷ್ಟಿಯಿಂದ ನೋಡಿದರೆ ಅಸಂಘಟಿತ ವಲಯದ ಕಾರ್ಮಿಕರತ್ತ ಸಂಹಿತೆ ಹೆಚ್ಚಿನ ಕೃಪಾದೃಷ್ಟಿ ತೋರಿಸಿದೆ. ಇನ್ನು ಮುಂದೆ ಯಾವುದೇ ಘಟಕವಾದರೂ ಕಾರ್ಮಿಕ ರಿಗೆ ನೇಮಕ ಪತ್ರಗಳನ್ನು ನೀಡುವುದು ಕಡ್ಡಾಯ. ಮೊದಲ ಬಾರಿಗೆ, ಗಿಗ್ ಕಾರ್ಮಿಕರು, ಪ್ಲಾಟ್ ಫಾರ್ಮ್ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಉದ್ಯೋಗಿಗಳನ್ನು ಸಾಮಾ ಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ತರಲಾಗಿದೆ.

ಇನ್ನು ಮುಂದೆ ಈ ನೌಕರರಿಗೂ ಇಪಿಎಫ್, ಇಎಸ್ಐಸಿ, ವಿಮೆ, ಹೆರಿಗೆ ರಜೆ ಮತ್ತು ಪಿಂಚಣಿ‌ ಯಂತಹ ಪ್ರಯೋಜನಗಳು ಲಭ್ಯವಾಗಲಿವೆ. ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತರು, ಡಬ್ಬಿಂಗ್ ಕಲಾವಿದರು ಮತ್ತು ಸ್ಟಂಟ್ ವ್ಯಕ್ತಿಗಳು ಸೇರಿದಂತೆ ಡಿಜಿಟಲ್ ಮತ್ತು ಆಡಿಯೋ-ವಿಶುವಲ್ ಕೆಲಸಗಾರರು ಇನ್ನು ಮುಂದೆ ಕಾರ್ಮಿಕರ ವ್ಯಾಪ್ತಿಗೆ ಬರಲಿದ್ದು ಈ ಕಾಯಿದೆ ಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಕಟ್ಟುನಿಟ್ಟಾಗಿ ಜಾರಿಯಾದರೆ ಕಡ್ಡಾಯ ನೇಮಕಾತಿ ಪತ್ರ, ದೃಢೀಕೃತ ವೇತನ ಚೀಟಿ ಮತ್ತು ಪಾವತಿಸಿದ ವಾರ್ಷಿಕ ರಜೆಯಂತಹ ನಿಯಮಗಳು ಪ್ರತಿಯೊಬ್ಬ ಕೆಲಸಗಾರನಿಗೆ ಹೆಚ್ಚಿನ ಸ್ಥಿರತೆ, ಘನತೆ ಮತ್ತು ಉದ್ಯೋಗ ಭದ್ರತೆಯನ್ನು ಒದಗಿಸುವುದು ನಿಶ್ಚಿತ.

ಫುಡ್ ಮತ್ತು ದಿನಸಿ ಸಾಮಾನುಗಳನ್ನು ಡೆಲಿವರಿ ಮಾಡುವ ಕಂಪನಿಗಳು ಇನ್ನು ತಮ್ಮ ವಾರ್ಷಿಕ ವಹಿವಾಟಿನ ಶೇ.12ರಷ್ಟು ಮೊತ್ತವನ್ನು ಸಾಮಾಜಿಕ ಭದ್ರತಾ ನಿಧಿಗೆ ನೀಡಬೇಕು. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆಯಡಿ ಸುರಕ್ಷಿತ ಕೆಲಸದ ವಾತಾವರಣವನ್ನು ಒದಗಿಸುವುದು ಕಡ್ಡಾಯವಾಗಿದೆ.

40 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗಿದೆ. ಹಂಗಾಮಿ ನೌಕರರು, ಗುತ್ತಿಗೆ ಆಧಾರಿತ ನೌಕರರು ಕೂಡ ಇನ್ನು ಮುಂದೆ ಸಂಘಟಿತ ವಲಯದ ಕಾಯಂ ನೌಕರರಂತೆ ರಜೆ, ನಿಶ್ಚಿತ ಕೆಲಸದ ಅವಧಿ, ವೈದ್ಯಕೀಯ ಮತ್ತು ಸಾಮಾಜಿಕ ಭದ್ರತೆಯ ನೆರವು ಪಡೆಯಲಿದ್ದಾರೆ.

ಇನ್ನು ಮುಂದೆ ಮಹಿಳಾ ಕಾರ್ಮಿಕರ ಒಪ್ಪಿಗೆ ಮತ್ತು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಗಣಿ ಸೇರಿದಂತೆ ಎಲ್ಲಾ ಕೈಗಾರಿಕೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿವಾಹಿತ ಮಹಿಳಾ ಉದ್ಯೋಗಿಗಳು ತಮ್ಮ ಕುಟುಂಬದ ವ್ಯಾಖ್ಯೆಯಲ್ಲಿ ಪೋಷಕರನ್ನು ಸೇರಿಸಬಹುದು. ಈ ಮೂಲಕ ಅವರಿಗೂ ವಿಮೆ ಮತ್ತು ಇತರ ಸೌಲಭ್ಯಗಳು ದೊರೆಯಲಿವೆ.

ಕೆಲಸದ ಅವಧಿಯನ್ನು ದಿನಕ್ಕೆ 8 ರಿಂದ 12 ಗಂಟೆಗಳಿಗೆ ವಿಸ್ತರಿಸಲು ಹೊಸ ಕಾಯಿದೆ ಅವಕಾಶ ಮಾಡಿಕೊಟ್ಟಿದೆ. ಆದರೆ ವಾರಕ್ಕೆ ಒಟ್ಟು 48 ಗಂಟೆಗಳ ಕೆಲಸದ ಅವಧಿಯ ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅಂದರೆ ಕಡಿಮೆ ಸಿಬ್ಬಂದಿಯೊಂದಿಗೆ ಹೆಚ್ಚು ಕೆಲಸ ತೆಗೆದುಕೊಳ್ಳಲು ಹೊಸ ಸಂಹಿತೆ ಕಂಪನಿಗಳಿಗೆ ಸ್ವಾತಂತ್ರ್ಯ ನೀಡಿದೆ.

ಮುಖ್ಯವಾಗಿ ಸಂಘಟಿತ ಮತ್ತು ಅಸಂಘಟಿತ ವಲಯದ ಪ್ರತಿಯೊಬ್ಬ ಕಾರ್ಮಿಕನಿಗೂ ಕೇಂದ್ರ ಸರಕಾರವು ನಿಗದಿಪಡಿಸಿದ ‘ರಾಷ್ಟ್ರೀಯ ಮಟ್ಟದ ಕನಿಷ್ಠ ವೇತನ’ ನೀಡುವುದು ಕಡ್ಡಾಯ. ಸದ್ಯ ಕರ್ನಾಟಕದಂತಹ ರಾಜ್ಯಗಳಲ್ಲಿ ಕನಿಷ್ಠ ವೇತನ ಪ್ರಮಾಣ ೧೪ ಸಾವಿರ ದಿಂದ 20 ಸಾವಿರ ರು. ತನಕ ಇದ್ದು ಉಳಿದ ರಾಜ್ಯಗಳಿಗಿಂತ ಮೇಲ್ಮಟ್ಟದಲ್ಲಿದೆ. ಆದರೆ ಈಶಾನ್ಯ ರಾಜ್ಯಗಳು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಇನ್ನು ಮುಂದೆ ಕನಿಷ್ಠ ವೇತನವನ್ನು ಕೇಂದ್ರವೇ ನಿಗದಿ ಮಾಡಲಿದೆ.

ಪ್ಲಾಂಟೇಷನ್ ಕಾರ್ಮಿಕರನ್ನೂ ಈಗ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರಲಾಗಿದೆ. ೧೦ಕ್ಕಿಂತ ಹೆಚ್ಚು ಕಾರ್ಮಿಕರು ಅಥವಾ ೫ ಅಥವಾ ಹೆಚ್ಚಿನ ಹೆಕ್ಟೇರ್ ಗಳನ್ನು ಹೊಂದಿರುವ ತೋಟ ಗಳಿಗೆ ಕಾರ್ಮಿಕ ಕಾಯಿದೆ ಅನ್ವಯವಾಗಲಿದೆ. ಈ ಕಾರ್ಮಿಕರು ಮತ್ತು ಅವರ ಕುಟುಂಬ ಗಳು ಇಎಸ್‌ಐ ವೈದ್ಯಕೀಯ ಸೌಲಭ್ಯ, ರಿಯಾಯಿತಿ ದರದಲ್ಲಿ ಶಿಕ್ಷಣ ಸೌಲಭ್ಯಗಳನ್ನು ಪಡೆಯಬಹುದು. ತೋಟದ ಮಾಲೀಕರು ಇನ್ನು ಮುಂದೆ ರಾಸಾಯನಿಕಗಳನ್ನು ಸಿಂಪಡಿ ಸಲು, ಸಂಗ್ರಹಿಸಿ ಬಳಸಲು ತರಬೇತಿ ಪಡೆದ ಕಾರ್ಮಿಕರನ್ನಷ್ಟೇ ಬಳಸಿಕೊಳ್ಳ ಬೇಕಾಗಿದೆ. ಇವರಿಗೆ ತಕ್ಕ ರಕ್ಷಣಾ ಸಾಧನಗಳನ್ನು ಒದಗಿಸುವುದು ಮಾಲೀಕರ ಜವಾಬ್ದಾರಿಯಾಗಲಿದೆ.

ಕಾರ್ಮಿಕ ಕಾನೂನುಗಳ ಖಾತರಿ, ಭರವಸೆಯ ಹೊರತಾಗಿಯೂ ಬಹುತೇಕ ಕಾರ್ಮಿಕರು ಉದ್ಯೋಗ ಉಳಿಸಿಕೊಳ್ಳಲು ಆದ್ಯತೆ ನೀಡುತ್ತಾರೆ. ಕಾನೂನು, ನಿಯಮಗಳ ಉಲ್ಲಂಘನೆ ಯಾದರೂ ಹೆಚ್ಚಿನವರು ದೂರು ನೀಡಲು ಮುಂದಾಗುವುದಿಲ್ಲ. ಒಂದು ವೇಳೆ ದೂರು ನೀಡಿದರೆ ಉದ್ಯೋಗಕ್ಕೆ ಕುತ್ತಾಗುವ ಇಲ್ಲವೇ ಅನಗತ್ಯ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಗಳು ಹೆಚ್ಚು. ಕಾರ್ಮಿಕ ಸಂಹಿತೆ ಕಾನೂನಿನ ಬೆದರಿಕೆಯಾಗದೆ ಕಾರ್ಮಿಕರು ಮತ್ತು ಉದ್ಯೋಗದಾತರು ವೃತ್ತಿ ಮತ್ತು ವ್ಯಕ್ತಿ ಗೌರವ, ಘನತೆಗಳೊಂದಿಗೆ ಪಾಲಿಸುವ ಸಂಹಿತೆ ಯಾಗಬೇಕಿದೆ.