Vinayaka M Bhatta Column: ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ
ಚುನಾವಣಾ ಫಲಿತಾಂಶದ ದಿನ ದೆಹಲಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಯಲ್ಲಿ ತೊಡಗಿದರೆ, ಪ್ರಧಾನಿ ಮೋದಿಯವರು ಪಕ್ಷದ ಕಚೇರಿಯಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ದರು. “ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದೆಹಲಿಯ ಪ್ರತಿಯೊಬ್ಬ ನಿವಾಸಿಗೂ ನಾನು ಪತ್ರ ಬರೆದಿದ್ದೆ. ಇಂದು ನಮ್ಮನ್ನು ನಂಬಿ ಮತನೀಡಿದ್ದಕ್ಕಾಗಿ ದೆಹಲಿಯ ಪ್ರತಿಯೊಂದು ಕುಟುಂಬಕ್ಕೂ ನಾನು ಕೃತಜ್ಞತೆಯಿಂದ ತಲೆಬಾಗುವೆ

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ವಿದ್ಯಮಾನ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ ಆಂದೋಲನವು ಜನಲೋಕಪಾಲ ವಿಧೇಯಕವನ್ನು ಅಂಗೀ ಕರಿಸುವಂತೆ ಆಗ್ರಹಿಸಿ ಲಕ್ಷಾಂತರ ಜನರನ್ನು ಒಗ್ಗೂಡಿಸಿತ್ತು. ವ್ಯಾಪಕ ಪ್ರತಿಭಟನೆ ಗಳ ಹೊರತಾ ಗಿಯೂ ಈ ವಿಧೇಯಕ ಅಂಗೀಕಾರವಾಗಲಿಲ್ಲ. ಆಂದೋಲನ ದೊಳಗಿದ್ದ ಕೇಜ್ರಿವಾಲ್ ಬಣವು ವ್ಯವಸ್ಥಿತ ಬದಲಾವಣೆಯ ಅಗತ್ಯವನ್ನು ಗುರುತಿಸಿ, ಸಂಘಟನೆಯನ್ನು ರಾಜಕೀಯಕ್ಕೆ ಪರಿವರ್ತಿಸಿ ಕೊಳ್ಳಲು ಬಯಸಿತು. ಈ ಬಾರಿಯ ದೆಹಲಿ ವಿಧಾನಸಭಾ ಚುನಾ ವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ರಾಷ್ಟ್ರ ರಾಜಧಾನಿಯಲ್ಲಿನ ‘ಆಮ್ ಆದ್ಮಿ’ಯ ದಶಕದ ಆಡಳಿತವನ್ನು ಕೊನೆಗೊಳಿಸಿದೆ. ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ (ಆಪ್) ಹಲವು ಪ್ರಮುಖ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಜಯಗಳಿಸಿದ ಮತ್ತು ಬಿಜೆಪಿ ಯು ಹರಿಯಾಣವನ್ನು ಗೆದ್ದು ರಾಷ್ಟ್ರ ರಾಜಕಾರಣದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿ ಕೊಂಡ ಕೆಲವೇ ತಿಂಗಳ ನಂತರ ಈ ಬೆಳವಣಿಗೆಯಾಗಿದೆ, ಬಿಜೆಪಿಯ ಪರವಾಗಿ ಮತ್ತೊಂದು ಜನಾದೇಶ ಹೊಮ್ಮಿದೆ. ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಶತಕದ ನಂತರ ದೆಹಲಿಯಲ್ಲಿ ತನ್ನ ಪುನರು ತ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್, ಯಾವುದೇ ಸ್ಥಾನವನ್ನು ಗೆಲ್ಲಲು ವಿಫಲವಾಯಿತು; 1998 ರಿಂದ 15 ವರ್ಷಗಳ ಕಾಲ ದೆಹಲಿಯನ್ನು ಆಳಿದ್ದ ಕಾಂಗ್ರೆಸ್, ಹೀಗೆ ಸತತ 3ನೇ ಬಾರಿಯೂ ‘ಶೂನ್ಯ ಸಂಪಾದನೆ’ ಮಾಡಿ ಮುಜುಗರಕ್ಕೀಡಾಯಿತು!
ಇದನ್ನೂ ಓದಿ: Vinayaka M Bhatta Column: ಮಾತು ಮನಸ್ಸಿನ ಕೈಗನ್ನಡಿ, ಅಲ್ಲವೇ...?
ಚುನಾವಣಾ ಫಲಿತಾಂಶದ ದಿನ ದೆಹಲಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಯಲ್ಲಿ ತೊಡಗಿದರೆ, ಪ್ರಧಾನಿ ಮೋದಿಯವರು ಪಕ್ಷದ ಕಚೇರಿಯಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. “ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದೆಹಲಿಯ ಪ್ರತಿ ಯೊಬ್ಬ ನಿವಾಸಿಗೂ ನಾನು ಪತ್ರ ಬರೆದಿದ್ದೆ. ಇಂದು ನಮ್ಮನ್ನು ನಂಬಿ ಮತನೀಡಿದ್ದಕ್ಕಾಗಿ ದೆಹಲಿ ಯ ಪ್ರತಿಯೊಂದು ಕುಟುಂಬಕ್ಕೂ ನಾನು ಕೃತಜ್ಞತೆಯಿಂದ ತಲೆಬಾಗುವೆ.
ನಮಗೆ ತೆರೆದ ಹೃದಯದಿಂದ ಪ್ರೀತಿಯನ್ನು ನೀಡಿದ್ದೀರಿ, ತ್ವರಿತ ಅಭಿವೃದ್ಧಿಯ ಮೂಲಕ ಅದನ್ನು ಅನೇಕ ಪಟ್ಟು ಹಿಂದಿರುಗಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ರಾಜಕೀಯದಲ್ಲಿ ಸುಳ್ಳುಗಳು ಮತ್ತು ಮೋಸಕ್ಕೆ ಸ್ಥಳವಿಲ್ಲ ಎಂಬ ಬಲವಾದ ಸಂದೇಶವನ್ನು ದೆಹಲಿಯ ಜನರು ರವಾನಿಸಿದ್ದಾರೆ" ಎಂದರು ಮೋದಿ.
ತನ್ನ ಅಸಾಂಪ್ರದಾಯಿಕ ಮತ್ತು ವಿಲಕ್ಷಣ ರಾಜಕೀಯ ನಡೆಯಿಂದ ಒಂದು ರೀತಿಯಲ್ಲಿ ಸಿಂಹ ಸ್ವಪ್ನವಾಗಿದ್ದ ‘ಆಪ್’ ಅನ್ನು ದೆಹಲಿಯಲ್ಲಿ ಸೋಲಿಸುವುದು ಬಿಜೆಪಿಗರಿಗೆ ಈ ಬಾರಿ ಎಷ್ಟು ಮುಖ್ಯ ವಾಗಿತ್ತು ಎಂಬುದು ಅವರ ವಿಜಯೋತ್ಸವವನ್ನು ನೋಡಿದರೆ ಅರಿವಾಗುತ್ತದೆ.
ಲೋಕಸಮರವನ್ನು ಗೆದ್ದು 3ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೂ ಬಿಜೆಪಿ ಇಷ್ಟು ಸಂಭ್ರಮಿಸಿರಲಿಲ್ಲ. ತಮ್ಮ ತಂತ್ರಗಾರಿಕೆಯಿಂದ ಇಡೀ ರಾಷ್ಟ್ರವನ್ನು ವ್ಯಾಪಿಸಿದ್ದ ಮೋದಿ-ಶಾ ಜೋಡಿಯ ನಾಯಕತ್ವದ ಬಿಜೆಪಿಗೆ ದೆಹಲಿ ಮಾತ್ರ ಕಳೆದ ಎರಡೂವರೆ ದಶಕದಿಂದ ಮರೀಚಿಕೆ ಯಾಗೇ ಉಳಿದಿತ್ತು. ತಮ್ಮ ಕಾರ್ಯಶೈಲಿ ಮತ್ತು ವರ್ಚಸ್ಸಿನಿಂದ ಜಗನ್ನಾಯಕ ಎನಿಸಿಕೊಂಡಿರುವ ಮೋದಿಯವರಿಗೂ ‘ಮಾರು ಗೆದ್ದೆ, ಆದರೆ ಮನೆಯನ್ನು ಗೆಲ್ಲಲಾಗಲಿಲ್ಲವಲ್ಲ’ ಎಂಬಂತಾಗಿತ್ತು.
ಅಂತೂ, ದೆಹಲಿಯ ಶಾಹೀನ್‌ಬಾಗ್ ಸತ್ಯಾಗ್ರಹ ಮತ್ತು ಪಂಜಾಬಿನ ರೈತರ ಚಳವಳಿಯ ಕಾಲದಲ್ಲಿ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಕೇಜ್ರಿವಾಲ್ ಸರಕಾರದ ಅಸಹಕಾರಕ್ಕೆ ಬಿಜೆಪಿ ಈಗ ತಕ್ಕ ಉತ್ತರ ನೀಡಿದಂತಾಯ್ತು. ಭ್ರಷ್ಟಾಚಾರದ ಆರೋಪದಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿ ಜೈಲಿನಲ್ಲಿ ತಿಂಗಳುಗಟ್ಟಲೆ ಇಟ್ಟಿದ್ದರ ಪರಿಣಾಮ, ಅನುಕಂಪದ ಆಧಾರದಲ್ಲಿ ಜಾರ್ಖಂಡ್‌ನಲ್ಲಾದಂತೆ ಬಿಜೆಪಿ ಗೆ ತಿರುಗುಬಾಣವಾಗುವ ಸಾಧ್ಯತೆಯಿತ್ತಾದರೂ, ದೆಹಲಿಯ ಮತದಾರ ಈ ಬಾರಿ ಉಚಿತಗಳ ಆಕ ರ್ಷಣೆಗೆ ಮರುಳಾಗದೇ, ವಿಶ್ವಾಸಾರ್ಹತೆಗೆ ಮಹತ್ವ ನೀಡಿ ಕೇಜ್ರಿವಾಲರನ್ನು ಕೈಬಿಟ್ಟು ಬಿಜೆಪಿಯ ಕೈಹಿಡಿದ.
ಆದಾಯ ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ಆಗಿದ್ದ ಕೇಜ್ರಿವಾಲ್ ತಮ್ಮ ಹುದ್ದೆಗೆ ರಾಜೀ ನಾಮೆ ನೀಡಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರ ಲೋಕಪಾಲ್ ಸತ್ಯಾಗ್ರಹದ ಮೂಲಕ ಸಾರ್ವಜನಿಕ ಜೀವನಕ್ಕೆ ಅಡಿಯಿಟ್ಟಿದ್ದರು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕೇಜ್ರಿವಾಲ್, ಬಿಜೆಪಿ, ಕಾಂಗ್ರೆಸ್‌ನಂಥ ಪ್ರಬಲ ರಾಷ್ಟ್ರೀಯ ಪಕ್ಷಗಳಿಂದ ಮೊದಲಿನಿಂದಲೂ ಅಂತರ ಕಾಯ್ದುಕೊಂಡು, ಸ್ವತಂತ್ರವಾಗಿ ಪಕ್ಷವನ್ನು ಕಟ್ಟಿ, ಎರಡೆರಡು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಯೇರಿ, ದಿಲ್ಲಿಗರಿಗೆ ಉಚಿತಗಳ ಮೋಡಿ ಮಾಡಿ ಸತತ 10 ವರ್ಷ ಆಡಳಿತ ನಡೆಸಿ ಅಭೇದ್ಯರಾಗಿದ್ದ ಕಥೆ ರೋಚಕವಾಗೇ ಇದೆ.
ಅಣ್ಣಾ ಹಜಾರೆ ನೇತೃತ್ವದ ‘ಇಂಡಿಯಾ ಅಗೇನ್ಸ್ಟ್ ಕರಪ್ಷನ್’ ಆಂದೋಲನವು ಜನಲೋಕಪಾಲ ವಿಧೇಯಕವನ್ನು ಅಂಗೀಕರಿಸುವಂತೆ ಆಗ್ರಹಿಸಿ, 2 ವರ್ಷಗಳಲ್ಲಿ ದೇಶಾದ್ಯಂತ ಲಕ್ಷಾಂತರ ಜನರನ್ನು ಒಗ್ಗೂಡಿಸಿತ್ತು. ವ್ಯಾಪಕ ಪ್ರತಿಭಟನೆಗಳು, ಉಪವಾಸಗಳ ಹೊರತಾಗಿಯೂ ಈ ವಿಧೇಯ ಕವನ್ನು ಸಂಸತ್ತಿನಲ್ಲಿ ಅಂಗೀಕರಿಸಲಿಲ್ಲ.
ಆಂದೋಲನದೊಳಗಿದ್ದ ಕೇಜ್ರಿವಾಲ್ ಬಣವು ವ್ಯವಸ್ಥಿತ ಬದಲಾವಣೆಯ ಅಗತ್ಯವನ್ನು ಗುರುತಿಸಿ, ಸಂಘಟನೆಯನ್ನು ರಾಜಕೀಯಕ್ಕೆ ಪರಿವರ್ತಿಸಿಕೊಳ್ಳಲು ಬಯಸಿತು. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಏಕೈಕ ಮಾರ್ಗವೆಂದರೆ ರಾಜಕೀಯವನ್ನು ಸೇರುವುದು, ಸರಕಾರವನ್ನು ಪ್ರವೇಶಿ ಸುವುದು ಮತ್ತು ವ್ಯವಸ್ಥೆಯನ್ನು ಒಳಗಿನಿಂದಲೇ ಸ್ವಚ್ಛಗೊಳಿಸುವುದು ಎಂದು ನಿರ್ಧರಿಸಿತು, ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯ ಪಯಣವು ರಾಜಕೀಯ ಕ್ರಾಂತಿಯ ಕಡೆಗೆ ಹೊರಳಿತು. ಪರಿಣಾಮವಾಗಿ 2012ರ ಅಕ್ಟೋಬರ್ 2ರಂದು ‘ಆಮ್ ಆದ್ಮಿ ಪಕ್ಷ’ ಹುಟ್ಟಿಕೊಂಡಿತು.
ಹೀಗೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಉದ್ದೇಶದೊಂದಿಗೆ ರಾಮಲೀಲಾ ಮೈದಾನದಿಂದ ಶುರುವಾಗಿ ದೆಹಲಿಯ ಗದ್ದುಗೆಯನ್ನು ಏರುವವರೆಗೆ ಸಾಗಿದ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷದ ಪಯಣವು ಐತಿಹಾಸಿಕವೇ ಸರಿ. ಭಾರತದ ರಾಜಕೀಯದಲ್ಲಿ ಮತದಾರರಿಗೆ ಉಚಿತಗಳ ರುಚಿಯನ್ನು ಮೊದಲ ಬಾರಿಗೆ ತೋರಿಸಿ ಜನಪ್ರಿಯತೆ ಗಳಿಸಿದ್ದ ‘ಆಪ್’, ದೆಹಲಿ ವಿಧಾನಸಭೆಯ 70 ಸ್ಥಾನಗಳಲ್ಲಿ 28ನ್ನು ಗೆಲ್ಲುವ ಮೂಲಕ ರಾಜಕೀಯ ರಂಗಕ್ಕೆ ಪ್ರಭಾವಶಾಲಿಯಾಗಿಯೇ ಅಡಿಯಿಟ್ಟಿತು.
ಈ ಗೆಲುವು ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿತು. ನವದೆಹಲಿ ಕ್ಷೇತ್ರದಿಂದ 3 ಬಾರಿ ಮುಖ್ಯ ಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ರ ವಿರುದ್ಧ ಕೇಜ್ರಿವಾಲರು ಭರ್ಜರಿ ಅಂತರದಿಂದ ಜಯ ಗಳಿಸಿ ದ್ದರು. ದೆಹಲಿ ವಿಧಾನಸಭೆಯಲ್ಲಿ ಅಗತ್ಯ ಸಂಖ್ಯೆಯ ಕೊರತೆಯಿಂದಾಗಿ ಜನಲೋಕಪಾಲ್ ವಿಧೇ ಯಕವನ್ನು ಅಂಗೀಕರಿಸಲು ವಿಫಲವಾದ ನಂತರ, ‘ಆಪ್’ ಸರಕಾರವು 2014ರ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿ, ಹೊಸ ಜನಾದೇಶವನ್ನು ಪಡೆಯಲು ನಿರ್ಧರಿಸಿತು.
ದೆಹಲಿಯ ಮರುಚುನಾವಣೆಗೂ ಮೊದಲು, 2014ರ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ‘ಆಪ್’, ಪಂಜಾಬಿನಲ್ಲಿ 4 ಸ್ಥಾನಗಳನ್ನು ದಕ್ಕಿಸಿಕೊಳ್ಳುವ ಮೂಲಕ ದೇಶದ ಗಮನ ಸೆಳೆದಿತ್ತು. ಆ ಚುನಾವಣೆಯ ವೇಳೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕೇಜ್ರಿವಾಲರು, ವಾರಾಣಸಿಯಿಂದ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವ ಸುಳಿವನ್ನೂ ನೀಡಿದ್ದರು.
ಆದರೆ, ದೆಹಲಿ ಮತ್ತು ಪಂಜಾಬ್‌ನಲ್ಲಿನ ತನ್ನ ಯಶಸ್ಸನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸುವಲ್ಲಿ ‘ಆಪ್’ ಸಫಲವಾಗಲಿಲ್ಲ. ಮುಂದೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ‘ಆಪ್’ ಹಿನ್ನಡೆಯನ್ನು ಅನುಭವಿಸಿತು; ವಾಯವ್ಯ ಮತ್ತು ದಕ್ಷಿಣ ದೆಹಲಿಯನ್ನು ಹೊರತುಪಡಿಸಿ ದೆಹಲಿಯ ಹೆಚ್ಚಿನ ಕ್ಷೇತ್ರಗಳಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. 2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ, 70 ಸ್ಥಾನಗಳ ಪೈಕಿ 37ನ್ನು ಗೆದ್ದು ಭಾರಿ ಬಹುಮತವನ್ನು ಪಡೆಯುವ ಮೂಲಕ ಮಹತ್ವದ ಮೈಲು ಗಲ್ಲನ್ನು ಸಾಧಿಸಿದ್ದ ‘ಆಪ್’, 2020ರ ಚುನಾವಣೆಯಲ್ಲಿ 62 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿತು.
ಮೊಹಲ್ಲಾ ಕ್ಲಿನಿಕ್‌ಗಳು, 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್, ಉಚಿತ ನೀರು ಮತ್ತು ಮಹಿಳೆ ಯರಿಗೆ ಉಚಿತ ಬಸ್ ಪ್ರಯಾಣದಂಥ ಭರವಸೆಗಳನ್ನು ನೀಡಿದ ‘ಆಪ್’, ವಿವಿಧ ಸಾಮಾಜಿಕ ಸ್ತರದ ಜನರಿಗೆ ಗಮನಾರ್ಹ ಪ್ರಯೋಜನವನ್ನೇ ನೀಡಿತೆನ್ನಬೇಕು. ಮಾತ್ರವಲ್ಲದೆ, ‘ಆಪ್’ನ ತೆರಿಗೆ ಸಂಗ್ರಹ ಸುಧಾರಣೆಯು ಕಳೆದ 7 ವರ್ಷಗಳಲ್ಲಿ ಹೊಸ ತೆರಿಗೆಗಳನ್ನು ಪರಿಚಯಿಸದೆ, ದೆಹಲಿ ಸರಕಾರದ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಿತ್ತು.
ಒಟ್ಟಾರೆಯಾಗಿ, ಪರಿಣಾಮಕಾರಿ ಆಡಳಿತ ಮತ್ತು ತಳಮಟ್ಟದ ಬೆಂಬಲದಿಂದ ನಿರೂಪಿಸಲ್ಪಟ್ಟ ಪಕ್ಷದ ಆಡಳಿತ ವಿಧಾನವು, ಅದರ ಖ್ಯಾತಿಯನ್ನು ಗಟ್ಟಿಗೊಳಿಸಿತು, ವ್ಯಾಪಕ ಆಕರ್ಷಣೆಯನ್ನು ಮತ್ತಷ್ಟು ವಿಸ್ತರಿಸಿತು. 2021ರಲ್ಲಿ ದೆಹಲಿಯ ಗಡಿಯಲ್ಲಿ ರೈತರ ಬೃಹತ್ ಪ್ರತಿಭಟನೆಗಳಾದಾಗ ‘ಆಪ್’ ರೈತರಿಗೆ ಬೆಂಬಲ ನೀಡಿತು.
ಇದು 2022ರ ಸಂದರ್ಭದಲ್ಲಿ ‘ಆಪ್’ನ ಭವಿಷ್ಯವನ್ನು ಪರೋಕ್ಷವಾಗಿ ಉಜ್ವಲವಾಗಿಸಿತು. ಇದ ರಿಂದಾಗಿ, 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ‘ಆಪ್’ ಜನಪ್ರಿಯತೆ ಉತ್ತುಂಗಕ್ಕೇರಿ 92 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಗಳಿಸಿ ಅಧಿಕಾರ ವಹಿಸಿಕೊಂಡಿತು. 2022ರ ವಿಧಾನ ಸಭಾ ಚುನಾವಣೆಯ ನಂತರ ಗುಜರಾತ್ ರಾಜಕೀಯದಲ್ಲಿ ‘ಆಪ್’ ತೃತೀಯ ರಂಗವಾಗಿ ಹೊರ ಹೊಮ್ಮಿ ತು.
ಶೇ.12.92ರಷ್ಟು ಮತಗಳು ಮತ್ತು 5 ಸ್ಥಾನಗಳನ್ನು ಪಡೆದ ‘ಆಪ್’ ಗುಜರಾತ್ ರಾಜಕೀಯಕ್ಕೆ ಪ್ರವೇ ಶಿಸಿದ್ದು ಮಹತ್ವದ ಮೈಲುಗಲ್ಲಾಯಿತು. ಅಂತೆಯೇ, ಗೋವಾದಲ್ಲಿ ಶೇ.6ರಷ್ಟು ಮತ ಹಂಚಿಕೆ ಯೊಂದಿಗೆ 2 ಸ್ಥಾನಗಳನ್ನು ಗೆದ್ದಿತು. ಕನಿಷ್ಠ 4 ರಾಜ್ಯಗಳಲ್ಲಿ ಶೇ.6ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ದ್ದರಿಂದ ‘ಆಪ್’ಗೆ ರಾಷ್ಟ್ರೀಯ ಸ್ಥಾನಮಾನವೂ ದಕ್ಕಿತು.
ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ‘ಆಪ್’ ಪ್ರಾಮುಖ್ಯವನ್ನು ಪಡೆಯುತ್ತಿರುವುದರಿಂದ, ಹರಿಯಾಣವು ಮುಂದಿನ ಪಂಜಾಬ್ ಆಗಲಿದೆಯೇ ಎಂಬ ಪ್ರಶ್ನೆ ಕೂಡ ಎದ್ದಿತು. ದೆಹಲಿ ಮುನಿಸಿ ಪಲ್ ಕಾರ್ಪೊರೇಷನ್‌ಗೆ 2022ರಲ್ಲಿ ನಡೆದ ಚುನಾವಣೆಯಲ್ಲಿ, ಬಿಜೆಪಿಯ 15 ವರ್ಷಗಳ ಭದ್ರ ಕೋಟೆಯನ್ನು ಮುರಿಯುವಲ್ಲಿ ‘ಆಪ್’ ಯಶಸ್ವಿಯಾಯಿತು. 2017ರಲ್ಲಿ 49 ಸ್ಥಾನಗಳನ್ನು ಗೆದ್ದಿದ್ದ ‘ಆಪ್’, 2022ರ ಚುನಾವಣೆಯಲ್ಲಿ 134 ಸ್ಥಾನಗಳಿಗೆ ಭಾರಿ ಜಿಗಿತವನ್ನು ಕಂಡಿತು.
ಕೇಂದ್ರ ಸಚಿವರನ್ನೊಳಗೊಂಡ ಬಿಜೆಪಿಯ ತೀವ್ರ ಪ್ರಚಾರ ಪ್ರಯತ್ನಗಳ ಹೊರತಾಗಿಯೂ, ಭ್ರಷ್ಟಾಚಾರದ ಆರೋಪ ಮತ್ತು ಡಿಸಿಎಂ ಮೇಲಿನ ಸಿಬಿಐ ದಾಳಿಗಳ ನಡುವೆಯೂ ‘ಆಪ್’ ಗೆಲುವು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಕೇವಲ ಒಂದು ದಶಕದಷ್ಟು ಹಳೆಯ ಪಕ್ಷಕ್ಕೆ ಹೀಗೆ ದಕ್ಕಿದ ಗೆಲುವುಗಳು, ಬೆಳೆಯುತ್ತಿರುವ ಅದರ ಪ್ರಭಾವವನ್ನು ಒತ್ತಿಹೇಳಿದವು. 2021ರ ಚಂಡೀಗಢ ಮುನಿಸಿ ಪಲ್ ಕಾರ್ಪೊರೇಷನ್ ಚುನಾವಣೆಯಲ್ಲೂ ‘ಆಪ್’ ಮೊದಲ ಬಾರಿಗೆ ಸ್ಪರ್ಧಿಸಿ 14 ಸ್ಥಾನಗಳನ್ನು ಗಳಿಸಿ, 35 ಸ್ಥಾನಗಳ ಕಾರ್ಪೊರೇಷನ್‌ನಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
ಆದರೆ, ಅತಿಯಾದ ಆತ್ಮವಿಶ್ವಾಸ ಮತ್ತು ಅಧಿಕಾರದ ಮದದಿಂದಾಗಿ ಭ್ರಷ್ಟಾಚಾರದ ಸುಳಿಗೆ ಸಿಲುಕಿ ನಲುಗಿದ ಸರಕಾರ, ಆಡಳಿತಾರೂಢ ಮುಖ್ಯಮಂತ್ರಿಯ ಬಂಧನಕ್ಕೆ ಸಾಕ್ಷಿಯಾಗುವಂತಾಯಿತು; ಭಾರತದ ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಯೊಬ್ಬರು ಬಂಧನಕ್ಕೊಳ ಗಾಗುವ ಕುಖ್ಯಾತಿಗೂ ಕಾರಣವಾಗಿ ಅಂತಿಮವಾಗಿ ದೆಹಲಿಯ ಮತದಾರರ ವಿಶ್ವಾಸವನ್ನು ಅದು ಕಳೆದುಕೊಳ್ಳುವಂತಾಯಿತು.
ದೆಹಲಿಯಲ್ಲಿ ಸತತ 10 ವರ್ಷಗಳ ದರ್ಬಾರ್ ನಡೆಸಿದ್ದ ‘ಆಪ್’ ಸರಕಾರ, ಸಹಜವಾಗಿ ರೂಪು ಗೊಂಡಿದ್ದ ಆಡಳಿತ-ವಿರೋಧಿ ಅಲೆ, ನಾಯಕರುಗಳ ಅಹಂಕಾರದ ಮಾತುಗಳು, ಸರಕಾರದಲ್ಲಿನ ವ್ಯಾಪಕ ಭ್ರಷ್ಟಾಚಾರ ಮತ್ತಿತರ ಅನೇಕ ವೈರುದ್ಧ್ಯಗಳ ನಡುವೆಯೂ 44 ಪ್ರತಿಶತದಷ್ಟು ಮತಗಳಿಸಿ (ಗೆದ್ದ ಬಿಜೆಪಿಗಿಂತ ಕೇವಲ 3.5 ಪ್ರತಿಶತ ಕಡಿಮೆ), 22 ಸ್ಥಾನಗಳನ್ನು ಉಳಿಸಿಕೊಂಡಿದೆ. ಅಂದರೆ, ದೆಹಲಿಯಲ್ಲಿ ‘ಆಪ್’ ತನ್ನ ರಾಜಕೀಯ ಅಸ್ತಿತ್ವವನ್ನು ಇನ್ನೂ ಉಳಿಸಿಕೊಂಡಿದೆ ಎಂದರ್ಥ.
ಅಂಕಿ-ಅಂಶಗಳ ಪ್ರಕಾರ, ಕೇಜ್ರಿವಾಲ್ ಈ ಚುನಾವಣೆಯನ್ನು ‘ಇಂಡಿಯ’ ಒಕ್ಕೂಟದ ಜತೆಗೂಡಿ ಎದುರಿಸಿದ್ದಿದ್ದರೆ, ಈ ಬಾರಿಯೂ ಗದ್ದುಗೆ ಏರಬಹುದಿತ್ತು ಎಂಬ ಸಂಗತಿಯನ್ನು ಗಮನಿಸಬೇಕಿದೆ. ‘ಈ ಸೋಲಿನೊಂದಿಗೆ ಕೇಜ್ರಿವಾಲರ ಮತ್ತು ಆಮ್ ಆದ್ಮಿ ಪಕ್ಷದ ಕಥೆ ಇನ್ನು ಮುಗಿದಂತೆಯೇ’ ಎಂದು ಬೀಗುತ್ತಿರುವ ಬಿಜೆಪಿಗರು, ‘ದೆಹಲಿಯಲ್ಲಿ ಆಪ್ ಸೋತಿದ್ದು ನಿಜವಾದರೂ, ಸತ್ತಿಲ್ಲ’ ಎಂಬುದನ್ನು ಮರೆಯದಿದ್ದರೆ ಒಳಿತು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)