ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಪತ್ರಿಕೆಯನ್ನೂ ಪಾಳಿಯಲ್ಲಿ ಓದುವ ಪರಿಪಾಠ...!

ಪತ್ರಿಕೆಗಳ ಅವಿಭಾಜ್ಯ ಅಂಗವಾಗಿ ಬರುತ್ತಿದ್ದ ಪುರವಣಿಗಳು ಬಹುತೇಕ ಸ್ಥಗಿತಗೊಂಡಿವೆ ಅಥವಾ ಒಂದೆರಡು ಪುಟಗಳಿಗೆ ಅವು ಸೀಮಿತವಾಗಿವೆ. 5-6 ಆವೃತ್ತಿಗಳನ್ನು ಹೊಂದಿರುವ ಮುಂಬೈ ಮೂಲದ ಇಂಗ್ಲಿಷ್ ಪತ್ರಿಕೆಯೊಂದು, ಮುದ್ರಣ ಆವೃತ್ತಿಯನ್ನು ಕೈಬಿಟ್ಟು ಡಿಜಿಟಲ್ ಆವೃತ್ತಿಗೆ ಶರಣಾಗಿ, ಮುದ್ರಣ ಕಾಗದ, ಮುದ್ರಣ ಮತ್ತು ಸಾರಿಗೆ ವೆಚ್ಚವನ್ನು ಉಳಿಸಿದೆ.

ಪೇಪರ್‌ ದೋಸೆ

ರಮಾನಂದ ಶರ್ಮಾ

ಇದು ಸಾಕಷ್ಟು ವರ್ಷಗಳ ಹಿಂದೆ ಕಾಣಬರುತ್ತಿದ್ದ ದೃಶ್ಯ: ಕಚೇರಿಗೆ ಹೋಗುವವರ ಲಂಚ್ ಬಾಕ್ಸ್ ಸಂಗಡ ಒಂದು ದಿನಪತ್ರಿಕೆಯೋ, ವಾರಪತ್ರಿಕೆಯೋ, ಮಾಸಪತ್ರಿಕೆಯೋ ಇರುತ್ತಿತ್ತು. ಮಹಿಳಾ ಉದ್ಯೋಗಿಗಳಂತೂ ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟು ಹಿಡಿದು, ತಮ್ಮ ಇಳಿದಾಣ ಬರುವವರೆಗೆ ಪತ್ರಿಕೆಯಲ್ಲಿನ ತಮ್ಮ ನೆಚ್ಚಿನ ಧಾರಾವಾಹಿಯನ್ನು ಓದುತ್ತಿದ್ದರು.

ನಿಲ್ದಾಣಕ್ಕೆ ಬಸ್ಸು ಬರುವವರೆಗೆ, ಬಸ್ಸು ಹತ್ತಿದ ನಂತರ ಕಚೇರಿ ತಲುಪುವವರೆಗೆ, ಮಧ್ಯಾಹ್ನದ ಊಟದ ವೇಳೆ, ಕಚೇರಿಯಲ್ಲಿ ಸ್ವಲ್ಪ ಬಿಡುವಾದಾಗ ಪತ್ರಿಕೆಗಳ ಪುಟವನ್ನು ತಿರುವಿ ಹಾಕುವುದು ಸಾಮಾನ್ಯವಾಗಿತ್ತು (‘ಆಫೀಸ್‌ನಲ್ಲಿ ಯಾರೂ ಪೇಪರ್ ಓದಬಾರದು, ನಿಮ್ಮ ನಿಮ್ಮ ಕೆಲಸ ಮಾಡಬೇಕು’ ಎಂದು ಮೇಲಧಿಕಾರಿಗಳು ಗದರಿಸುತ್ತಿದ್ದರು ಎನ್ನಿ!).

ದೂರ ಪ್ರಯಾಣದ ಬಸ್ಸುಗಳಲ್ಲಿ ಏನಿಲ್ಲವೆಂದರೂ ಕಾಲುಭಾಗದಷ್ಟು ಪ್ರಯಾಣಿಕರು ಪತ್ರಿಕೆಯಲ್ಲಿ ಮುಖ ಹುದುಗಿಸಿ ಟೈಮ್‌ಪಾಸ್ ಮಾಡುತ್ತಿದ್ದರು. ಯಾರಾದರೊಬ್ಬರ ಕೈಯಲ್ಲಿ ಪತ್ರಿಕೆ ಕಂಡರೆ, ಅದರ ಪುಟಗಳು ಬೇರೆಯಾಗಿ, ನಿಜಕ್ಕೂ ಪತ್ರಿಕೆ ಖರೀದಿಸಿದ್ದವರು ಬಸ್ ನಿಂದ ಇಳಿಯುವಾಗ ಅದರ ಪುಟಗಳಿಗಾಗಿ ಪರದಾಡಬೇಕಿತ್ತು.

ಆದರೆ ಈ ದೃಶ್ಯವೀಗ ಕ್ರಮೇಣ ಮಸುಕಾಗುತ್ತಿದೆ. ‘ಕಚೇರಿಗೆ ನಿಯತವಾಗಿ ಬರುವ ಪತ್ರಿಕೆಗಳನ್ನೂ ಕಣ್ಣೆತ್ತಿ ನೋಡುವವರಿಲ್ಲ’ ಎನ್ನುವ ಮಾತು ಅಲ್ಲಲ್ಲಿ ಕೇಳುವುದುಂಟು; ಪತ್ರಿಕೆಯ ಸ್ಥಳವನ್ನು ಈಗ ಸ್ಮಾರ್ಟ್ ಫೋನು ಆಕ್ರಮಿಸಿರುವುದೇ ಇದಕ್ಕೆ ಬಹುತೇಕ ಕಾರಣ. ಇಂದು ದೇಶದಲ್ಲಿ 1,46,045ರಷ್ಟು ನೋಂದಾಯಿತ ಪಬ್ಲಿಕೇಷನ್‌ಗಳಿದ್ದು ಅವುಗಳಲ್ಲಿ 20,821ರಷ್ಟು ದಿನಪತ್ರಿಕೆಗಳಾಗಿವೆ.

ಇದನ್ನೂ ಓದಿ: Ramanand Sharma Column: ಭಾರತೀಯರ ವಿದೇಶಿ ಕನಸು ಕನಸಾಗಿಯೇ ಉಳಿಯುವುದೇ ?

ಅವುಗಳ ಒಟ್ಟಾರೆ ಪ್ರಸಾರ ಸಂಖ್ಯೆ ಸುಮಾರು 45 ಕೋಟಿ ಎನ್ನಲಾಗುತ್ತಿದ್ದು, 331 ಶತಕೋಟಿ ರುಪಾಯಿ ಮೌಲ್ಯದ ಈ ಉದ್ಯಮವು 9.10 ಲಕ್ಷ ಜನರಿಗೆ ಪ್ರತ್ಯಕ್ಷವಾಗಿ, ೧೮.೨೦ ಲಕ್ಷ ಜನರಿಗೆ ಪರೋಕ್ಷವಾಗಿ ಬದುಕು ನೀಡುತ್ತಿದೆ. ಈ ಮುದ್ರಣ ಮಾಧ್ಯಮವು ಪ್ರಸ್ತುತ ಜಗತ್ತಿನಾದ್ಯಂತ ಸ್ವಲ್ಪ ಹಿನ್ನಡೆಯನ್ನು ಕಂಡಿದ್ದರೂ, ಭಾರತದಲ್ಲಿ ಕರೋನಾ ಮಹಾಮಾರಿ ವಕ್ಕರಿಸುವವರೆಗೆ ಸುಮಾರು ಶೇ.4.7ರ ಬೆಳವಣಿಗೆಯನ್ನು ದಾಖಲಿಸಿತ್ತು.

ಇಂಥ ಮುದ್ರಣ ಮಾಧ್ಯಮವಿಂದು ಓದುಗರ ಕೊರತೆಯಿಂದ ಸಂಕಷ್ಟದ ಸ್ಥಿತಿಯನ್ನು ಎದುರಿಸು ತ್ತಿದೆ ಎನ್ನಲಾಗುತ್ತಿದೆ. ಒಂದು ಕಾಲಕ್ಕೆ, ಕೆಲವು ಪತ್ರಿಕೆಗಳು ಪ್ರತಿದಿನವೂ 30-40 ಪುಟಗಳನ್ನು ನೀಡುತ್ತಿದ್ದುದುಂಟು ಆದರೀಗ ಬಹುತೇಕ ಪತ್ರಿಕೆಗಳು 10-20 ಪುಟಗಳಿಗೆ ಸೀಮಿತವಾಗಿವೆ.

ಪತ್ರಿಕೆಗಳ ಅವಿಭಾಜ್ಯ ಅಂಗವಾಗಿ ಬರುತ್ತಿದ್ದ ಪುರವಣಿಗಳು ಬಹುತೇಕ ಸ್ಥಗಿತಗೊಂಡಿವೆ ಅಥವಾ ಒಂದೆರಡು ಪುಟಗಳಿಗೆ ಅವು ಸೀಮಿತವಾಗಿವೆ. 5-6 ಆವೃತ್ತಿಗಳನ್ನು ಹೊಂದಿರುವ ಮುಂಬೈ ಮೂಲದ ಇಂಗ್ಲಿಷ್ ಪತ್ರಿಕೆಯೊಂದು, ಮುದ್ರಣ ಆವೃತ್ತಿಯನ್ನು ಕೈಬಿಟ್ಟು ಡಿಜಿಟಲ್ ಆವೃತ್ತಿಗೆ ಶರಣಾಗಿ, ಮುದ್ರಣ ಕಾಗದ, ಮುದ್ರಣ ಮತ್ತು ಸಾರಿಗೆ ವೆಚ್ಚವನ್ನು ಉಳಿಸಿದೆ.

ಇಂಗ್ಲೆಂಡ್‌ನಲ್ಲಿ ಅಲ್ಲಿನ ಪ್ರತಿಷ್ಠಿತ ‘ದಿ ಇಂಡಿಪೆಂಡೆಂಟ್’ ಪತ್ರಿಕೆ ಡಿಜಿಟಲ್ ಆಗಿದ್ದರೆ, ಮತ್ತೆ ಕೆಲವು ಪತ್ರಿಕೆಗಳು ತಮ್ಮ ಒಂದಿಷ್ಟು ಆವೃತ್ತಿಗಳನ್ನು ನಿಲ್ಲಿಸಿವೆ. ಈವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ‘ಇ-ಪೇಪರ್’ ಅನ್ನು, ಒಂದೊಂದೇ ಪತ್ರಿಕಾ ಸಂಸ್ಥೆಗಳು ಕ್ರಮೇಣ ‘ಪೇಮೆಂಟ್ ಕೆಟಗರಿ’ಗೆ ಅನಿವಾರ್ಯವಾಗಿ ಮತ್ತು ಮನಸ್ಸಿಲ್ಲದ ಮನಸ್ಸಿನಿಂದ ಬದಲಾಯಿಸುತ್ತಿವೆ. ಪತ್ರಿಕೆಗಳ ಪ್ರಸರಣ ಕಡಿಮೆಯಾದಾಗ ಪತ್ರಿಕೆಗಳಿಗೆ ಬರುವ ಜಾಹೀರಾತು ಕಡಿಮೆಯಾಗುತ್ತದೆ ಅಥವಾ ನಿಂತು ಹೋಗುತ್ತದೆ.

ಅಂದರೆ, ಪತ್ರಿಕೆಗಳ ಪ್ರಸರಣದ ಮೇಲೆ ಜಾಹೀರಾತು ಆದಾಯವು ಅವಲಂಬಿತವಾಗಿರುತ್ತದೆ. ಪತ್ರಿಕೆಗಳ ಆದಾಯದಲ್ಲಿ ಶೇ.೬೦-೭೦ ಭಾಗವು ಜಾಹೀರಾತಿನಿಂದ ಬಂದರೆ, ಶೇ.೨೦-೩೦ ಭಾಗವು ಚಂದಾದಾರರಿಂದ/ ಖರೀದಿದಾರರಿಂದ ಬರುತ್ತದೆ ಎನ್ನಲಾಗುತ್ತದೆ. ಜಾಹೀರಾತು ಮತ್ತು ಚಂದಾ ಇವೆರಡೂ ಕ್ಷೀಣಿಸಿದರೆ ಪತ್ರಿಕೆಗಳು ನಲುಗುತ್ತವೆ.

ಯಾವುದೇ ಉದ್ಯಮದಲ್ಲಿ ಒಂದು ವಸ್ತುವಿನ ಮಾರಾಟದ ದರವು, ಅದರ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ. ವಿಪರ್ಯಾಸವೆಂದರೆ, ಮುದ್ರಣ ಮಾಧ್ಯಮದಲ್ಲಿ ಮಾರಾಟ ದರವು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇರುತ್ತದೆ. ಪತ್ರಿಕೆಗೆ ಆಗುವ ಉತ್ಪಾದನಾ ವೆಚ್ಚದಲ್ಲಿ ಗಣನೀಯ ಭಾಗ ನ್ಯೂಸ್‌ ಪ್ರಿಂಟ್‌ನದ್ದೇ ಆಗಿರುತ್ತದೆ. ಇದಕ್ಕೆ ಸಾಗಾಟ, ವಿತರಣೆಗಾರರ/ ಮಾರಾಟಗಾರರ ಕಮಿಷನ್ ಮುಂತಾದ ವೆಚ್ಚಗಳೂ ಸೇರಿಕೊಳ್ಳುತ್ತವೆ.

ಪರಿಣಾಮವಾಗಿ, ಒಂದು ಅಂದಾಜಿನ ಪ್ರಕಾರ ಸುಮಾರು ೧೦ ಪುಟದ ಒಂದು ದಿನಪತ್ರಿಕೆಯು ಓದುಗನ ಕೈ ತಲುಪುವ ವೇಳೆಗೆ ಅದರ ಉತ್ಪಾದನಾ ವೆಚ್ಚವು ಸುಮಾರು ೧೮-೨೦ ರುಪಾಯಿಗೆ ಮುಟ್ಟಿರುತ್ತದೆ (ಇದು ವರ್ಷಗಳ ಹಿಂದಿನ ಲೆಕ್ಕಾಚಾರ, ಈಗ ಇನ್ನೂ ಹೆಚ್ಚಾಗಿರಬಹುದು). ಜತೆಗೆ ಪತ್ರಿಕೆಯ ನಿರ್ವಹಣಾ ವ್ಯವಸ್ಥೆ ಮತ್ತು ಸಿಬ್ಬಂದಿಗಳ ವೇತನ ಮುಂತಾದವೂ ಸೇರಿಕೊಳ್ಳುತ್ತವಲ್ಲಾ, ಹೀಗಾಗಿ ಪತ್ರಿಕೆಗೆ ೩೦-೩೫ ರುಪಾಯಿಯಷ್ಟು ಮುಖಬೆಲೆಯನ್ನಾದರೂ ಇಡಬೇಕಾಗುತ್ತದೆ.

ಆದರೆ ನಮ್ಮಲ್ಲಿ ಯಾರಾದರೂ ಇಷ್ಟು ಹಣ ಕೊಟ್ಟು ದಿನಪತ್ರಿಕೆಯನ್ನು ಕೊಳ್ಳುವುದುಂಟಾ? ಹೀಗಾಗಿ ಪತ್ರಿಕೆಗಳಿಗೆ ಜಾಹೀರಾತುಗಳು ಅನಿವಾರ್ಯ. ಕರೋನಾ ಮಹಾಮಾರಿಯು ಮುದ್ರಣ ಮಾಧ್ಯಮಕ್ಕೆ ಬಲವಾದ ಪೆಟ್ಟನ್ನು ಕೊಟ್ಟಿದೆ ಎಂಬ ಮಾತಿನಲ್ಲಿ ಸ್ವಲ್ಪ ಹುರುಳಿದ್ದರೂ, ಪತ್ರಿಕೆಗಳು ಎದುರಿಸುತ್ತಿರುವ ಮೇಲೆ ಉಲ್ಲೇಖಿಸಿದಂಥ ಸಮಸ್ಯೆ-ಸವಾಲುಗಳಿಗೆ ದಶಕಗಳ ಇತಿಹಾಸವಿದೆ.

ಕರೋನಾ ಒಂದು ನೆಪವಷ್ಟೇ. ಇತ್ತೀಚಿನ ದಿನಗಳಲ್ಲಿ ಹೊಸ ಪತ್ರಿಕೆಗಳು/ನಿಯತಕಾಲಿಕಗಳು ಶುರುವಾಗುವುದು ಅಪರೂಪವಾಗುತ್ತಿದೆ ಎನ್ನಬೇಕು. ಇನ್ನು, ಪತ್ರಿಕೆಗಳು ಹೊಸ ಆವೃತ್ತಿಗಳನ್ನು ಹೊರತರುವ ಸಾಹಸ ಮಾಡುತ್ತಿಲ್ಲ. ದಿನಪತ್ರಿಕೆಗಳ ಪ್ರಸರಣಕ್ಕೆ ಮೊದಲ ‘ಶಾಕ್’ ಒದಗಿದ್ದು ೨೪ಗಿ೭ ಸುದ್ದಿ ವಾಹಿನಿಗಳ ಮಹಾಪೂರದಿಂದ. ‘ಆಯಾ ದಿನದ, ಆಯಾ ಕ್ಷಣದ ವರ್ತಮಾನಗಳನ್ನು ಸುದ್ದಿವಾಹಿನಿಯಲ್ಲಿ ನೋಡಿದ ಮೇಲೆ ಪತ್ರಿಕೆಗಳೇಕೆ?’ ಎಂಬ ಕುತರ್ಕಕ್ಕೆ ಕೆಲವರು ಒಡ್ಡಿಕೊಂಡಿದ್ದ ರಿಂದಾಗಿ, ಕೆಲ ಪತ್ರಿಕೆಗಳ ಪ್ರಸರಣ ಕುಸಿಯಿತು.

ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನಡುವಿನ ವ್ಯತ್ಯಾಸ, ಅವು ನೀಡುವ ಮಾಹಿತಿ-ವೈವಿಧ್ಯ ವನ್ನು ತುಲನೆ ಮಾಡುವ ಗೋಜಿಗೆ ಇಂಥವರು ಹೋಗಲಿಲ್ಲ ಎನ್ನಬೇಕು. ಸಾಮಾನ್ಯವಾಗಿ, ವಾರ ಪತ್ರಿಕೆ-ಮಾಸಪತ್ರಿಕೆಗಳನ್ನು ಓದುವವರು ಮಹಿಳೆಯರು. ಇಂಥ ನಿಯತಕಾಲಿಕಗಳ ಪ್ರಸರಣಕ್ಕೆ ಸರ್ಕ್ಯುಲೇಟಿಂಗ್ ಲೈಬ್ರರಿಗಳು ರಸ್ತೆಯ ‘ಹಂಪ್’ಗಳಾಗಿ ಪರಿಣಮಿಸಿದರೆ, ಟಿವಿ ಧಾರಾವಾಹಿಗಳು ಬಂದ ಮೇಲೆ ಈ ನಿಯತಕಾಲಿಕಗಳು ಡ್ರಾಯಿಂಗ್ ರೂಮ್‌ನಿಂದಲೇ ಬಹುತೇಕವಾಗಿ ಮಾಯವಾದವು

ಎನ್ನಬೇಕು. ಇಂದು ಸುದ್ದಿಗಳು/ವಿದ್ಯಮಾನಗಳು, ಅವು ಘಟಿಸುತ್ತಿರುವಂತೆಯೇ ಅಂಗೈಯಲ್ಲಿನ ಮೊಬೈಲ್ ಗಳಲ್ಲಿ, ಅಂತರ್ಜಾಲ ಮಾಧ್ಯಮದಲ್ಲಿ ಲಭ್ಯವಾಗಿ ಬಿಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು-ಯುವಕರು ಸೇರಿದಂತೆ ಹೆಚ್ಚಿನವರು ಪತ್ರಿಕೆಗಳತ್ತ ಕಣ್ಣು ಹಾಯಿಸಲು ಹೋಗುತ್ತಿಲ್ಲ. ಮನೆಯಲ್ಲಿನ ಮಧ್ಯವಯಸ್ಕರು, ನಿವೃತ್ತರು ಮತ್ತು ಬದುಕಿನ ಮುಸ್ಸಂಜೆಯಲ್ಲಿರುವವರು ಮಾತ್ರವೇ ಪತ್ರಿಕೆ ಗಳನ್ನು ಒಂದು ಮಟ್ಟಿಗೆ ನೆಚ್ಚಿದ್ದಾರೆ.

ವಿಪರ್ಯಾಸವೆಂದರೆ, ಹಲವರು ಪತ್ರಿಕೆಯನ್ನು ಅಗತ್ಯವಸ್ತು ಎನ್ನದೆ avoidable luxury ಎಂದು ಪರಿಗಣಿಸುತ್ತಾರೆ. ದಿನಕ್ಕೆ ೨೫ ರುಪಾಯಿ ತೆತ್ತು ಪಾನ್ ಬೀಡಾ ತಿಂದು ಉಗುಳುವಾಗ, ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ವೇಟರ್ ನೀಡಿದ ಬಿಲ್ಲನ್ನು ಪರಿಷ್ಕರಿಸದೇ ಪಾವತಿಸುವಾಗ, ಹೋಟೆಲ್‌ನಲ್ಲಿ ಧಾರಾಳವಾಗಿ ‘ಟಿಪ್ಸ್’ ನೀಡಿ ಅದಕ್ಕೆ ಪ್ರತಿಯಾಗಿ ವೇಟರ್‌ನಿಂದ ‘ಸಲಾಮ್’ ಸ್ವೀಕರಿಸುವಾಗ ಇಲ್ಲದ ಹಣದ ಲೆಕ್ಕಾಚಾರವು, ೫-೬ ರುಪಾಯಿ ಕೊಟ್ಟು ಪತ್ರಿಕೆಯನ್ನು ಕೊಳ್ಳುವಾಗ ದಿಢೀರನೆ ಮುನ್ನೆಲೆಗೆ ಬಂದುಬಿಡುತ್ತದೆ!

ಒಂದು ವಠಾರದಲ್ಲಿ ೬-೭ ಮನೆಗಳಿದ್ದರೆ, ವೈವಿಧ್ಯಕ್ಕಾದರೂ ೬-೭ ಪತ್ರಿಕೆಗಳನ್ನು ತರಿಸದೇ, ಒಂದೇ ಪತ್ರಿಕೆಯನ್ನು ಅಷ್ಟೂ ಮನೆಯವರು ‘ಪಾಳಿಯಲ್ಲಿ ಓದುವ’ ಪರಿಪಾಠವನ್ನು ಈಗಲೂ ಕೆಲವೆಡೆ ಕಾಣಬಹುದು! ಪತ್ರಿಕೆಗಳನ್ನು ಓದುವ ನಿಟ್ಟಿನಲ್ಲಿ ಕನ್ನಡಿಗರು ಬೇರೆ ರಾಜ್ಯದವರಿಗಿಂತ ಹಿಂದೆ ಎಂಬುದೊಂದು ಮಾತಿದೆ. ಹತ್ತತ್ತಿರ ೭ ಕೋಟಿಯಷ್ಟು ಜನಸಂಖ್ಯೆಯಿರುವ ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳ ಒಟ್ಟಾರೆ ಪ್ರಸರಣ ಸಂಖ್ಯೆಯು ಸರಿಸುಮಾರು ೩೦ ಲಕ್ಷದಷ್ಟಿದೆಯಂತೆ.

ಆದರೆ ಕರ್ನಾಟಕದ ಅರ್ಧದಷ್ಟು ಜನಸಂಖ್ಯೆಯಿರುವ ಕೇರಳದಲ್ಲಿ ಮಲಯಾಳಂ ಪತ್ರಿಕೆಗಳ ಪ್ರಸರಣ ಸಂಖ್ಯೆ ೬೫ ಲಕ್ಷವಂತೆ. ಮಲಯಾಳಂನ ಕೆಲವೊಂದು ಪತ್ರಿಕೆಗಳದ್ದು ಹೊರರಾಜ್ಯ/ವಿದೇಶಿ ಆವೃತ್ತಿಗಳೂ ಇವೆಯಂತೆ. ಖ್ಯಾತ ಲೇಖಕ ಹಾಗೂ ಪತ್ರಕರ್ತ ಖುಷ್ವಂತ್ ಸಿಂಗ್ ಅವರು, “ರಾಜಕೀಯವಾಗಿ ತುಂಬಾ ಕ್ರಿಯಾಶೀಲ ರಾಜ್ಯ ಕೇರಳ. ಇಲ್ಲಿನ ಜನರು ಮುಂಜಾನೆ ಒಂದು ಕೈಯಲ್ಲಿ ಲುಂಗಿಯ ಚುಂಗು ಎತ್ತಿಹಿಡಿದು, ಮತ್ತೊಂದು ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು, ಕಂಕುಳಲ್ಲಿ ಒಂದು ಪತ್ರಿಕೆಯನ್ನು ಸಿಕ್ಕಿಸಿಕೊಂಡು ಮನೆಯತ್ತ ಧಾವಿಸುವುದು ತೀರಾ ಸಾಮಾನ್ಯ" ಎನ್ನುವ ಮೂಲಕ ಕೇರಳಿಗರ ಪತ್ರಿಕಾ ವ್ಯಾಮೋಹ ಮತ್ತು ಅಲ್ಲಿನ ಪತ್ರಿಕೆಗಳ ಪ್ರಸರಣದ ಬಗ್ಗೆ ಪ್ರಶಂಸಿಸಿದ್ದುಂಟು!

ತೀವ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತು ಹಾಗೂ ಜೀವನಶೈಲಿಯಲ್ಲಿ ಮುದ್ರಣ ಮಾಧ್ಯಮ ದೆಡೆಗಿದ್ದ ಒಲವು ಡಿಜಿಟಲ್ ಮಾಧ್ಯಮದತ್ತ ಹೊರಳುವುದನ್ನು ತಡೆಯಲು ಮತ್ತು ಅಲ್ಲಗಳೆಯಲು ಸಾಧ್ಯವಿಲ್ಲ. ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವುದಕ್ಕೂ, ಡಿಜಿಟಲ್ ಸ್ವರೂಪದಲ್ಲಿ ಅದನ್ನು ಅವಲೋಕಿಸುವುದಕ್ಕೂ ವ್ಯತ್ಯಾಸವಿದೆ.

ಸುದ್ದಿ, ಸಂದರ್ಶನ, ಅಂಕಣಬರಹ, ವ್ಯಕ್ತಿಚಿತ್ರ, ಮತ್ತಿತರ ಮಾಹಿತಿಗಳನ್ನು ಮುದ್ರಿತ ಸ್ವರೂಪದಲ್ಲಿ ಓದುವಾಗಿನ ಖುಷಿ ಮತ್ತು ಸಂತೃಪ್ತಿಯೇ ಬೇರೆ. ಜತೆಗೆ, ಮುದ್ರಣ ಮಾಧ್ಯಮದ ಕಾರ್ಯಭಾರವು ಒಂದು ಹವ್ಯಾಸವಾಗಿರದೆ ‘ಗಂಭೀರ ಬಿಜಿನೆಸ್’ ಆಗಿರುತ್ತದೆ. ಇದರಲ್ಲಿ ಹೊರ ಜಗತ್ತಿನ ಆಗು ಹೋಗು ಗಳ ಬಗ್ಗೆ ಮಾಹಿತಿ ಕೊಡುವುದರೊಂದಿಗೆ ಸಮಾಜಕ್ಕೆ ಒಳಿತು ಮಾಡುವ, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ಸರಿಪಡಿಸುವ ಕಳಕಳಿ ಇರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ, ಮಿಕ್ಕ ಸ್ವರೂಪಗಳಿಗೆ ಹೋಲಿಸಿದಾಗ ಮುದ್ರಣ ಮಾಧ್ಯಮವು ಈಗಲೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ಅದನ್ನು avoidable luxury ಎಂದು ಪರಿಗಣಿಸದೇ, ಅತ್ಯವಶ್ಯಕ ವಸ್ತು ಎಂದು ತಿಳಿಯಬೇಕಾಗಿದೆ. ದಿನಪತ್ರಿಕೆ ಬರುವುದು ಕೊಂಚ ತಡವಾದರೆ ಅಥವಾ ಬಾರದೇ ಇದ್ದರೆ, ಪತ್ರಿಕಾಲಯಕ್ಕೆ ರಜೆಯಿದ್ದರೆ ಓದುಗರು ಚಡಪಡಿಸುವ ದೃಶ್ಯ ಒಂದು ಕಾಲಕ್ಕೆ ಸಾಮಾನ್ಯವಾಗಿತ್ತು; ಈಗ ಅಂಥ ತೀವ್ರತೆ-ತವಕ ಕಡಿಮೆಯಾಗಿದ್ದರೂ, ದಿನಪತ್ರಿಕೆಯೊಂದನ್ನು ಓದುವುದರೊಂದಿಗೆ ಆಯಾ ದಿನವನ್ನು ಆರಂಭಿಸುವುದನ್ನು ಮುಂದುವರಿಸುವುದು ಆರೋಗ್ಯಕರ ಪರಿಪಾಠವಾಗಬಲ್ಲದು.

(ಲೇಖಕರು ಆರ್ಥಿಕ ಮತ್ತು ರಾಜಕೀಯ

ವಿಶ್ಲೇಷಕರು)