Ramanand Sharma Column: ಭಾರತೀಯರ ವಿದೇಶಿ ಕನಸು ಕನಸಾಗಿಯೇ ಉಳಿಯುವುದೇ ?
ಅಮೆರಿಕದೊಂದಿಗೆ ಭಾರತವು ಸುಮಾರು 7 ಲಕ್ಷ ಕೋಟಿ ರುಪಾಯಿ ಮೌಲ್ಯದಷ್ಟು ವ್ಯಾಪಾರ-ವ್ಯವಹಾರವನ್ನು ಹೊಂದಿದ್ದು, ಟ್ರಂಪ್‌ರ ಈ ನಿರ್ಣಯದಿಂದಾಗಿ ಭಾರತದಿಂದ ರಫ್ತಾಗುವ ಉತ್ಪನ್ನ ಗಳಿಗೆ ಅಮೆರಿಕದಲ್ಲಿ ಬೆಲೆ ಹೆಚ್ಚಿ ಬೇಡಿಕೆ ಕುಸಿಯುವುದು ಗ್ಯಾರಂಟಿ. ಒಟ್ಟಿನಲ್ಲಿ, ಈವರೆಗಿನ ಆಪ್ತಸ್ನೇಹಿತ ಭಾರತವು ಅಮೆರಿಕದ ಪಾಲಿಗೆ ಕಡುವೈರಿಯಂತಾಗಿರುವುದು ಅಚ್ಚರಿಯೇ ಸರಿ!


ಯಕ್ಷ ಪ್ರಶ್ನೆ
ರಮಾನಂದ ಶರ್ಮಾ
ಭಾರತೀಯರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ತಮ್ಮ ದೇಶದ ಟೆಕ್ ಕಂಪನಿಗಳಿಗೆ ತಾಕೀತು ಮಾಡಿದ್ದಾರೆ. ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ನಡೆದ ‘ಅಮೆರಿಕ ಎಐ ಟೆಕ್ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, “ಅಮೆರಿಕದ ಕಂಪನಿಗಳು ಸ್ಥಳೀಯರಿಗೆ ಉದ್ಯೋಗಗಳನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಬೇಕು; ಉದ್ಯೋಗಗಳಿಗೆ ಭಾರತ ಮತ್ತು ಚೀನಾದವರ ನೇಮಕವನ್ನು ತಪ್ಪಿಸಬೇಕು ಹಾಗೂ ಆ ದೇಶಗಳಲ್ಲಿ ಕಾರ್ಖಾನೆಗಳ ಸ್ಥಾಪನೆಯನ್ನು ನಿಲ್ಲಿಸಬೇಕು" ಎಂದು ಸೂಚಿಸಿದ್ದಾರೆ.
ಮಾತ್ರವಲ್ಲದೆ, “ನಿಮ್ಮ ಜಾಗತಿಕವಾದಿ ಮನಸ್ಥಿತಿಯು ಅಮೆರಿಕವನ್ನು ಹಿಂದಕ್ಕೆ ತಳ್ಳಿದೆ. ಅಮೆರಿಕವು ನೀಡಿರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಾಕಷ್ಟು ಲಾಭ ಮಾಡಿಕೊಂಡಿದ್ದೀರಿ, ಆದರೆ ಅದನ್ನು ಹೊರದೇಶಗಳಲ್ಲಿ ಹೂಡಿಕೆ ಮಾಡಿದ್ದೀರಿ" ಎಂದು ಕೂಡ ಟ್ರಂಪ್ ಅಸಮಾಧಾನವನ್ನು ಹೊರ ಹಾಕಿ, “ಚೀನಾದಲ್ಲಿ ಕಂಪನಿಯ ಘಟಕಗಳನ್ನು ತೆರೆಯುತ್ತೀರಿ, ಭಾರತದ ಪ್ರತಿಭಾವಂತ ರನ್ನು ನೇಮಿಸಿಕೊಳ್ಳುತ್ತೀರಿ, ಐರ್ಲೆಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ.
ನನ್ನ ಆಡಳಿತದಲ್ಲಿ ಇನ್ನು ಮುಂದೆ ಇಂಥದ್ದು ನಡೆಯುವುದಿಲ್ಲ" ಎಂದು ಗುಡುಗಿ, ಅಲ್ಲಿನ ಟೆಕ್ ಕಂಪನಿಗಳಿಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ತಮ್ಮ ಹೇಳಿಕೆಗೆ ಸ್ವಲ್ಪ ತಿದ್ದುಪಡಿ ಮಾಡಿಕೊಳ್ಳಬಹುದೇ ವಿನಾ, ಎಂದೂ ರಾಜಿcಮಾಡಿಕೊಳ್ಳುವುದಿಲ್ಲ. ಅಂತೆಯೇ ಆ ಹೇಳಿಕೆ ಭಾರತದಲ್ಲಿ ಸಂಚಲನ ಮೂಡಿಸಿದೆ. ಬಾಗಿದ ಬೆನ್ನ ಮೇಲೆ ಇನ್ನೊಂದು ಗುದ್ದು ಎನ್ನುವಂತೆ, ಭಾರತೀಯರಿಗೆ ಉದ್ಯೋಗ ನಿರಾಕರಣೆಯ ಸುದ್ದಿ ಮಾಸುವ ಮೊದಲೇ, ತಾವು ಭಾರತದ ಆಪ್ತ ಸ್ನೇಹಿತ ಎಂದೇ ಹೇಳಿಕೊಳ್ಳುತ್ತಿದ್ದ ಟ್ರಂಪ್ ಭಾರತೀಯ ಸರಕುಗಳಿಗೆ ಶೇ.25ರಷ್ಟು ಸುಂಕ ವಿಧಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Ramanand Sharma Column: ದುಬಾರಿ ಟಿಕಟ್ ದರಕ್ಕೆ ಬೀಳುತ್ತಾ ಕಡಿವಾಣ ?
ಅಮೆರಿಕದೊಂದಿಗೆ ಭಾರತವು ಸುಮಾರು 7 ಲಕ್ಷ ಕೋಟಿ ರುಪಾಯಿ ಮೌಲ್ಯದಷ್ಟು ವ್ಯಾಪಾರ-ವ್ಯವಹಾರವನ್ನು ಹೊಂದಿದ್ದು, ಟ್ರಂಪ್‌ರ ಈ ನಿರ್ಣಯದಿಂದಾಗಿ ಭಾರತದಿಂದ ರಫ್ತಾಗುವ ಉತ್ಪನ್ನಗಳಿಗೆ ಅಮೆರಿಕದಲ್ಲಿ ಬೆಲೆ ಹೆಚ್ಚಿ ಬೇಡಿಕೆ ಕುಸಿಯುವುದು ಗ್ಯಾರಂಟಿ. ಒಟ್ಟಿನಲ್ಲಿ, ಈವರೆಗಿನ ಆಪ್ತಸ್ನೇಹಿತ ಭಾರತವು ಅಮೆರಿಕದ ಪಾಲಿಗೆ ಕಡುವೈರಿಯಂತಾಗಿರುವುದು ಅಚ್ಚರಿಯೇ ಸರಿ!
ಮತ್ತೊಂದೆಡೆ, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಸ್ವಾಮಿ ನಾರಾಯಣ ಮಂದಿರದ ಗೋಡೆಯ ಮೇಲೆ ಹಾಗೂ ಏಷ್ಯನ್ನರು ನಡೆಸುತ್ತಿದ್ದ ಎರಡು ರೆಸ್ಟೋರೆಂಟುಗಳ ಗೋಡೆಗಳ ಮೇಲೆ ದುಷ್ಕರ್ಮಿ ಗಳು ಜನಾಂಗೀಯ ನಿಂದನೆಯ ದ್ವೇಷಬರಹ ಬರೆದು ವಿರೂಪಗೊಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸುಮಾರು ಹತ್ತು ದಿನಗಳ ಹಿಂದೆ ಭಾರತೀಯರ ಮೇಲೆ ಜನಾಂಗೀಯ ಹಲ್ಲೆಯಾಗಿದೆ.
ಐರ್ಲೆಂಡ್‌ನಲ್ಲಿ 40ರ ಹರೆಯದ ಭಾರತೀಯನೊಬ್ಬನ ಮೇಲೆ ಜನಾಂಗೀಯ ದಾಳಿ ನಡೆದ ವರದಿಯಾಗಿದೆ. ‘ಇಂಗ್ಲಿಷ್ ಮಾತನಾಡದ ಭಾರತೀಯ ಮತ್ತು ಏಷ್ಯನ್ ಮೂಲದವರನ್ನು ಅವರವರ ದೇಶಗಳಿಗೆ ಗಡೀಪಾರು ಮಾಡಬೇಕು’ ಎಂಬುದಾಗಿ ಬ್ರಿಟಿಷ್ ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದು, ಅದು ಭಾರಿ ವೈರಲ್ ಆಗಿದೆ.
ಲಂಡನ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ‘ಮಾರ್ಕ್ಸ್ ಆಂಡ್ ಸ್ಪೆನ್ಸರ್ ಶಾಪ್’ನಲ್ಲಿ ಸಿಬ್ಬಂದಿಗಳಿಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದುದಕ್ಕೆ ಕೆರಳಿದ ಇಂಗ್ಲಿಷ್ ಮಹಿಳೆ ಯೊಬ್ಬಳು, ಆ ಮಳಿಗೆಯ ಮೇಲಧಿಕಾರಿಗಳಿಗೆ ತಾನು ದೂರು ನೀಡುತ್ತಿರುವುದಾಗಿ ‘ಎಕ್ಸ್’ (ಟ್ವಿಟರ್) ಮಾಧ್ಯಮದಲ್ಲಿ ಬರೆದುಕೊಂಡಿದ್ದಾಳಂತೆ. ಇದಕ್ಕೆ ನೆಟ್ಟಿಗರು, ‘ಇದು ಜನಾಂಗೀಯ ದ್ವೇಷ’ ಎಂದು ಪ್ರತಿಕ್ರಿಯಿಸಿದ್ದಾರಂತೆ.
ಜನಾಂಗೀಯ ದ್ವೇಷ ಅಥವಾ ವರ್ಣದ್ವೇಷ ಮತ್ತು ಮಣ್ಣಿನ ಮಕ್ಕಳಿಗೆ ಉದ್ಯೋಗ ಬೇಡಿಕೆಯು ಹೊಸ ಬೆಳವಣಿಗೆಯೇನಲ್ಲ, ಅದು ಹಲವು ರಾಷ್ಟ್ರಗಳಲ್ಲಿದೆ. ಆದರೆ, ಬಹಳ ಕಾಲದವರೆಗೆ ಆಗೊಮ್ಮೆ ಈಗೊಮ್ಮೆ ಕೇಳುತ್ತಿದ್ದ ಆ ಬೆಳವಣಿಗೆಯು ಈಗ ಬಹುತೇಕವಾಗಿ ದೈನಂದಿನ ಸುದ್ದಿ ಯಾಗಿ ಸದ್ದು ಮಾಡುತ್ತಿದೆ. ತಮಗೆ ನ್ಯಾಯಯುತವಾಗಿ ದೊರಕಬೇಕಾದ ಉದ್ಯೋಗಗಳನ್ನು ವಲಸಿಗರು, ಮುಖ್ಯವಾಗಿ ಭಾರತೀಯರು ಮತ್ತು ಚೀನಿಯರು ಕಬಳಿಸುತ್ತಿದ್ದಾರೆ ಎಂಬ ಭಾವನೆಯು ಅಮೆರಿಕದಂಥ ದೇಶಗಳಲ್ಲಿ ಕ್ರಮೇಣ ಬೇರೂರುತ್ತಿದೆ.
‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಹಾಗೂ ‘ಅಮೆರಿಕವು ಅಮೆರಿಕನ್ನರಿಗೆ ಮೊದಲು’ ಎಂಬ ಮಹತ್ವಾಕಾಂಕ್ಷಿ ಘೋಷವಾಕ್ಯಗಳ ಮೂಲಕ ಡೊನಾಲ್ಡ್ ಟ್ರಂಪ್ ಅಧಿಕಾರದ ಗದ್ದುಗೆ ಹಿಡಿದಿರು ವುದು ಗೊತ್ತಿರುವ ಸಂಗತಿಯೇ. ಹೀಗಾಗಿ, ಅಧಿಕಾರದ ಮೊದಲ ದಿನದಿಂದಲೇ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿರುವ ಅವರು, ತಮ್ಮ ಒಂದೊಂದೇ ಅಜೆಂಡಾವನ್ನು ಯಾವ ಮುಲಾಜಿಲ್ಲದೆ ಜಾರಿ ಮಾಡುತ್ತಿದ್ದಾರೆ. ಅಕ್ರಮ ವಲಸಿಗರನ್ನು ಹೊರಹಾಕುವುದು; ಜನ್ಮಜಾತ ನಾಗರಿಕ ಹಕ್ಕುಗಳಿಗೆ ಕೊಕ್; ಬ್ರಿಕ್ಸ್ ರಾಷ್ಟ್ರಗಳಿಂದಾಗುವ ಆಮದುಗಳಿಗೆ ಅತಿರೇಕದ ಸುಂಕ ಹೇರುವ ಧಮಕಿ; ‘ಬ್ಯೂಟಿಫುಲ್ ಬಿಲ್’ ವಿಧೇಯಕದ ಹೆಸರಿನಲ್ಲಿ, ಅಮೆರಿಕದಲ್ಲಿರುವ ವಲಸಿಗರು ಸ್ವದೇಶಕ್ಕೆ ಕಳಿಸುವ ಹಣ ಮತ್ತು ತಾಯ್ನಾಡಿನಲ್ಲಿ ಹೂಡಿಕೆ ಮಾಡುವ ಹಣದ ಮೇಲೆ ಶೇ.3.50ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ; ಪರಸ್ಪರ ವ್ಯಾಪಾರ-ವ್ಯವಹಾರದಲ್ಲಿ ಪ್ರತಿಸುಂಕ; ವೀಸಾ ನಿಯಮಾವಳಿಯಲ್ಲಿ ನಿರಂತರ ಬದಲಾವಣೆ ಮಾಡುವ ಮೂಲಕ ವಲಸಿಗರ ನಿದ್ರಾಭಂಗ; ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ನಿಷೇಧ ಅಥವಾ ನಿಯಂತ್ರಣ- ಇಂಥ ಕ್ರಮಗಳಿಗೆ ಮುಂದಾದ ನಂತರ ಟ್ರಂಪ್ ಈಗ ಕಂಪನಿಗಳಲ್ಲಿ ಭಾರತೀಯರನ್ನು ಮತ್ತು ಚೀನಿಯರನ್ನು ನೇಮಿಸಿಕೊಳ್ಳದಂತೆ, ಭಾರತ ಮತ್ತು ಚೀನಾದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸದಂತೆ ತಮ್ಮ ದೇಶದ ಟೆಕ್ ಕಂಪನಿಗಳಿಗೆ ಎಚ್ಚರಿಸಿದ್ದಾರೆ.
ಇದು ಭಾರತೀಯರ ‘ಅಮೆರಿಕ ಕನಸಿಗೆ’ ಕೊಳ್ಳಿಯಿಟ್ಟಿದೆ. ಮುಖ್ಯವಾಗಿ ‘ಎಚ್‌ಬಿ 1’ ವೀಸಾ ಆಕಾಂಕ್ಷಿಗಳನ್ನು ಧೃತಿಗೆಡಿಸಿದೆ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವವರಲ್ಲಿ ಟೆಕ್ಕಿಗಳೇ ಹೆಚ್ಚು ಎಂಬುದು ಗಮನಿಸಬೇಕಾದ ಅಂಶ. ಜಾಗತಿಕ ಪರಿಗಣನೆ ಯಲ್ಲಿ ಹೇಳುವುದಾದರೆ, ‘ಅಮೆರಿಕ ದೊಡ್ಡಣ್ಣ, ಒಂದಿಡೀ ಜಗತ್ತು ಅಮೆರಿಕದ ಸುತ್ತ ಗಿರಕಿ ಹೊಡೆಯುತ್ತದೆ’ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.
ಇಂದು ಅಮೆರಿಕ ಆಲೋಚಿಸಿದ್ದನ್ನು-ಮಾಡಿದ್ದನ್ನು ಜಗತ್ತು ನಾಳೆ ಮಾಡುತ್ತದೆ ಎಂಬ ಗ್ರಹಿಕೆ ಯಲ್ಲಿ ಸತ್ಯವಿದೆ. ಬಹುತೇಕ ರಾಷ್ಟ್ರಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಮೆರಿಕವನ್ನು ಅನುಸರಿಸುತ್ತವೆ. ‘ಭಾರತೀಯರಿಗೆ ಉದ್ಯೋಗವನ್ನು ನೀಡಬೇಡಿ, ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಬೇಡಿ’ ಎನ್ನುವ ಅಮೆರಿಕದ ನೀತಿಯನ್ನು ಉಳಿದ ರಾಷ್ಟ್ರಗಳೂ ಒಂದೊಮ್ಮೆ ಅನುಸರಿಸಿ ದರೆ, ನಮ್ಮ ದೇಶದ ಗತಿಯೇನು? ನಮ್ಮ ವಿದೇಶಿ ಆಕಾಂಕ್ಷಿಗಳ ಭವಿಷ್ಯ ವೇನು? ಅಮೆರಿಕದ ‘ವಲಸೆಗಾರ-ವಿರೋಧಿ ನೀತಿ’ ಮತ್ತು ‘ಮಣ್ಣಿನ ಮಕ್ಕಳಿಗೇ ಮೊದಲ ಆದ್ಯತೆ’ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಜಪಾನಿನ ಬಲಪಂಥೀಯ ರಾಷ್ಟ್ರೀಯ ಪಕ್ಷವು, ಬಹುಕಾಲ ಅಧಿಕಾರದಲ್ಲಿದ್ದ ಲಿಬರಲ್ ಡೆಮಾಕ್ರಟಿಕ್ ಪಕ್ಷವನ್ನು ಮಕಾಡೆ ಮಲಗಿಸಿ ಐತಿಹಾಸಿಕ ವಿಜಯವನ್ನು ಸಾಧಿಸಿದೆ.
ಅಪಾರ ಪ್ರಮಾಣದಲ್ಲಿ ಭಾರತೀಯ ವಲಸೆಗಾರರಿರುವ ಸೌದಿ ಅರೇಬಿಯಾ ಮತ್ತಿತರ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಲಸೆ ನೀತಿಯನ್ನು ಕ್ರಮೇಣ ಮರುಪರಿಶೀಲಿಸಲಾಗುತ್ತಿದೆಯಂತೆ. ಅಮೆರಿಕದ ಒಟ್ಟು ಜನಸಂಖ್ಯೆ 345 ಮಿಲಿಯನ್ ಇದ್ದು, ಇದರಲ್ಲಿ ಭಾರತೀಯರ ಸಂಖ್ಯೆಯು 5.40 ಮಿಲಿಯನ್ ನಷ್ಟಿದೆ (ಅಂದರೆ ಸುಮಾರು ಶೇ.1.6ರಷ್ಟು). ವಿದೇಶಗಳಲ್ಲಿರುವ ಭಾರತೀಯರ ಸಂಖ್ಯೆ ಸುಮಾರು 35.6 ಮಿಲಿಯನ್.
ಪ್ರತಿ ವರ್ಷ ಸುಮಾರು 2.50 ಮಿಲಿಯನ್ ಭಾರತೀಯರು ವಲಸಿಗರಾಗಿ ವಿದೇಶಗಳಿಗೆ ತೆರಳುತ್ತಾರೆ. ಜಾಗತಿಕವಾಗಿ ಈ ನಿಟ್ಟಿನಲ್ಲಿ ತುಲನೆ ಮಾಡಿದಾಗ ಭಾರತೀಯರ ಪ್ರಮಾಣವೇ ಹೆಚ್ಚು. 2011-2023ರ ಅವಧಿಯಲ್ಲಿ ಸುಮಾರು 1.80 ಮಿಲಿಯನ್ ಭಾರತೀಯರು ಭಾರತದ ಪೌರತ್ವವನ್ನು ತ್ಯಜಿಸಿ ಅನ್ಯದೇಶಗಳ ಪೌರತ್ವವನ್ನು ಪಡೆದಿದ್ದಾರೆ.
ಅದರಲ್ಲೂ ಅಮೆರಿಕದ ವಿಮಾನ ಹತ್ತುವವರ ಸಂಖ್ಯೆ ದಿಗಿಲು ಬೀಳುವಷ್ಟು ದೊಡ್ಡ ಪ್ರಮಾಣ ದಲ್ಲಿದೆ ಎನ್ನಲಾಗುತ್ತಿದ್ದು, ಸಮಸ್ಯೆಯ ಆಳವನ್ನು ಚೆನ್ನಾಗಿ ತಿಳಿದ ಟ್ರಂಪ್ ಈ ನಿಟ್ಟಿನಲ್ಲಿ ಗಂಭೀರ ವಾಗಿ ಫೀಲ್ಡ್‌ಗೆ ಇಳಿದಿದ್ದಾರೆ. ನಮ್ಮ ಊರು, ಪಕ್ಕದ ಊರು, ತಾಲೂಕು, ಜಿಲ್ಲೆ, ಉತ್ತರ-ದಕ್ಷಿಣ, ನಮ್ಮ ಭಾಷೆ ಎಂದೆಲ್ಲಾ ಬಡಿದಾಡುವ ನಾವು, ಟ್ರಂಪ್ ಅವರು ತಮ್ಮ ರಾಷ್ಟ್ರದ ಹಿತದೃಷ್ಟಿ ಯಿಟ್ಟುಕೊಂಡು ಅಲ್ಲಿನ ಮಣ್ಣಿನ ಮಕ್ಕಳಿಗೆ ಶರಣಾಗುವುದನ್ನು ವಿರೋಧಿಸುವ ನೈತಿಕತೆ ನಮ್ಮಲ್ಲಿದೆಯೇ ಎಂಬುದು ಯಕ್ಷಪ್ರಶ್ನೆ.
ಡೊನಾಲ್ಡ್ ಟ್ರಂಪ್ ಮೇಲ್ನೋಟಕ್ಕೆ ನಮಗೆ ಖಳನಾಯಕರಾಗಿ ಕಾಣುತ್ತಾರೆ. ಅಮೆರಿಕದಲ್ಲಿ ಬದುಕು ಪಡೆದವರು ಮತ್ತು ಬದುಕು ಪಡೆಯಲು ಮುಂದಾದವರು ಟ್ರಂಪ್‌ರ ಈ ನಿಲುವನ್ನು ವಿರೋಧಿಸು ವುದರಲ್ಲಿ ಅರ್ಥವಿದೆ. ಆದರೆ ಟ್ರಂಪ್‌ರ ಸ್ಥಾನದಲ್ಲಿ ಕುಳಿತು ನೋಡಿದಾಗ ಅವರ ನಿಲುವು ಸರಿ ಎನಿಸುತ್ತದೆ.
ಪ್ರತಿಯೊಬ್ಬರೂ ಸ್ವಹಿತದ ನಂತರವಷ್ಟೇ ಪರರ ಹಿತರಕ್ಷಣೆಯ ಕಡೆಗೆ ಗಮನ ಹರಿಸುವುದು. ಅದು ಬದುಕಿನ ವಾಡಿಕೆಯ ತತ್ವವೂ ಹೌದು. ಅಂತೆಯೇ, ಅಮೆರಿಕವು ವಲಸಿಗರ ರಾಷ್ಟ್ರವಾಗುವುದನ್ನು ತಡೆಯಲು ಟ್ರಂಪ್ ಮುಂದಾಗಿದ್ದಾರೆ. ಆದರೆ ವಾಸ್ತವದಲ್ಲಿ ಅವರು, ಕೇವಲ ಭಾರತೀಯರು ಮತ್ತು ಚೀನಿಯರನ್ನಷ್ಟೇ ಟಾರ್ಗೆಟ್ ಮಾಡುತ್ತಿರುವಂತೆ ಕಾಣುತ್ತದೆ. ಭಾರತೀಯರಂತೆ ಇನ್ನಿತರ ದೇಶದವರೂ ಗಮನಾರ್ಹ ಸಂಖ್ಯೆಯಲ್ಲಿದ್ದರೂ, ಸಿಲಿಕಾನ್ ವ್ಯಾಲಿಯಲ್ಲಿನ ಭಾರತೀಯ ಟೆಕ್ಕಿಗಳ ಅಪ್ರತಿಮ ಯಶಸ್ಸು ಅವರನ್ನು ಕಂಗೆಡಿಸಿದೆ ಎನ್ನಲಾಗುತ್ತಿದೆ.
ಭಾರತದ ಎಂಜಿನಿಯರುಗಳು ತಂತ್ರಜ್ಞಾನ ಪ್ರತಿಭೆಯ ಗಣಿಯೇ ಆಗಿದ್ದು, ಇವರು ಅಮೆರಿಕದ ಮಣ್ಣಿನ ಮಕ್ಕಳು ಮೇಲೇಳದಂತೆ ತಡೆಯೊಡ್ಡುತ್ತಿದ್ದಾರೆ ಎಂಬ ಭಾವನೆಯೂ ಇದೆ ಎನ್ನಲಾಗುತ್ತಿದೆ. ಆದರೆ ವಲಸಿಗರನ್ನು ತಡೆದು ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ತಮ್ಮ ನಿರ್ವಹಣಾ ವೆಚ್ಚವು ಪುಟಿದೇಳಬಹುದು ಎನ್ನುವ ಭಯ ಅಲ್ಲಿನ ಕಂಪನಿಗಳನ್ನು ಆವರಿಸಿದೆಯಂತೆ (ವಲಸಿಗ ರಿಗೂ ಮತ್ತು ಅಮೆರಿಕದ ಸ್ಥಳೀಯರಿಗೂ ವೇತನ ತಾರತಮ್ಯ ಇದೆ ಎಂದು ಹೇಳಲಾಗುತ್ತಿದೆ).
ಒಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಅವರ ಆದೇಶ ಮತ್ತು ಕಂಪನಿಗಳ ನಿರ್ಧಾರ ಇವುಗಳ ಮಧ್ಯೆ ಯಾವುದು ಹೆಚ್ಚು ತೂಗುತ್ತದೆ, ತಕ್ಕಡಿ ಯಾವ ಕಡೆಗೆ ವಾಲುತ್ತದೆ ಎಂಬುದನ್ನು ಕಾಲವಷ್ಟೇ ಹೇಳಬಲ್ಲದು.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)