ಕಳಕಳಿ
ರಮಾನಂದ ಶರ್ಮಾ
ಪಿಂಚಣಿ ವ್ಯವಸ್ಥೆಯಲ್ಲಿನ ಲೋಪದೋಷಗಳು, ಪಿಂಚಣಿಯ ಉನ್ನತೀಕರಣ ಮುಂತಾದ ವಿಷಯಗಳಿಗೆ ಸಂಬಂಧಿಸಿ ಪಿಂಚಣಿದಾರರು ನ್ಯಾಯಾಲಯದಲ್ಲಿ ಸುದೀರ್ಘ ಅವಧಿ ಯವರೆಗೆ ಹೋರಾಡುವುದನ್ನು ತಪ್ಪಿಸಲು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಸರಕಾರದ ಮುಂದೆ ಒಂದಿಷ್ಟು ಬೇಡಿಕೆಗಳನ್ನು ಇರಿಸಿದ್ದಾರೆ. ಸರಕಾರವು ಅವುಗಳತ್ತ ಕಣ್ಣು ಹಾಯಿಸುವುದೇ?
ಎಲ್ಲಾ ನಿವೃತ್ತರನ್ನು, ಹಿರಿಯ ನಾಗರಿಕರನ್ನು ಕೊಂದುಬಿಡಿ. 65 ವರ್ಷ ಆದವರೆಲ್ಲರನ್ನೂ ಸಾಯಿಸಿ ಬಿಡಿ"- ಹೀಗೆಂದು ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಇತ್ತೀಚೆಗೆ ಅತೀವ ಆಕ್ರೋಶ ಮತ್ತು ವ್ಯಾಕುಲದಿಂದ ಸದನದಲ್ಲಿ ಕೂಗಾಡಿದರಂತೆ. ನಿವೃತ್ತರು ದಿನನಿತ್ಯದ ಬದುಕಿನಲ್ಲಿ ಅನುಭವಿಸುವ ಅವಮಾನ, ನಿರ್ಲಕ್ಷ್ಯ, ಏಕಾಂಗಿತನ, ಆರ್ಥಿಕ ಸಂಕಷ್ಟ ಮತ್ತು ಹೀನಾಯ ಸ್ಥಿತಿಯನ್ನು ಅವರು ಮನಮಿಡಿಯುವಂತೆ ವಿಸ್ತೃತವಾಗಿ ಬಿಚ್ಚಿಟ್ಟ ರಂತೆ. ಅವರು ಸದನದಲ್ಲಿ ಮಾಡಿದ ಈ ಭಾಷಣವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಭಾರಿ ಲೈಕ್ ಗಳನ್ನು ಪಡೆಯುತ್ತಿದೆ ಎನ್ನಲಾಗುತ್ತಿದೆ.
ಸಂಜಯ್ ರಾವತ್ ಅವರು ಬಳಸಿದ ‘ಕೊಂದುಬಿಡಿ’ ಮತ್ತು ‘ಸಾಯಿಸಿಬಿಡಿ’ ಎಂಬ ಆಕ್ರೋಶದ ನುಡಿಗಳು ಸರಕಾರದ ಕಣ್ಣು ತೆರೆಸಬೇಕು. ಸಮಾಜವಾದಿ ಪಕ್ಷದ ಸದಸ್ಯೆ ಜಯಾ ಬಚ್ಚನ್ ಕೂಡ ವರ್ಷದ ಹಿಂದೆ ಸದನದಲ್ಲಿ ಹೀಗೇ ಕೂಗಾಡಿದ್ದರು. ನಿವೃತ್ತರ ಬವಣೆಯು ‘ಬಡವಾ ನೀ ಮಡಗಿದಂತೆ ಇರು’ ಎಂಬ ರೀತಿಯಲ್ಲಿ ಮುಂದುವರಿದಿದೆ.
ಕೇರಳ ಸರಕಾರವು ಹಿರಿಯ ನಾಗರಿಕರ ಆಯೋಗ ರಚಿಸಿ, ಅವರ ಸಮಸ್ಯೆಗಳತ್ತ ಗಮನ ಹರಿಸಲು ಮುಂದಾಗಿದೆ; ಆದರೆ ದೇಶದ ಬೇರಾವ ರಾಜ್ಯವಾಗಲೀ ಅಥವಾ ಕೇಂದ್ರ ಸರಕಾರವಾಗಲೀ ಈ ನಿಟ್ಟಿನಲ್ಲಿ ಗಮನಹರಿಸಿದ ಮಾಹಿತಿಯಿಲ್ಲ.
ಇದನ್ನೂ ಓದಿ: Ramanand Sharma Column: ಕರಾವಳಿ ಭಾವ ಬಂದರು...ಸ್ವಲ್ಪ ದಾರಿಬಿಡಿ!
ಈ ನಿವೃತ್ತರು ಅಥವಾ ಹಿರಿಯ ನಾಗರಿಕರು ದೇಶವನ್ನು ಕಟ್ಟಿದವರು. ತಮ್ಮ ಸೇವಾವಧಿ ಮುಗಿದು ನಿವೃತ್ತರಾದ ನಂತರ ದೊರಕುವ ಕಾಟಾಚಾರದ ಪಿಂಚಣಿಯಲ್ಲಿ (ಹಲವರಿಗೆ ಆ ಭಾಗ್ಯವೂ ಇಲ್ಲ) ಅಥವಾ ಸೇವಾವಧಿಯಲ್ಲಿ ಹೊಟ್ಟೆ-ಬಟ್ಟೆ ಕಟ್ಟಿ ಉಳಿಸಿದ ಹಣವನ್ನು ಬ್ಯಾಂಕಿನಲ್ಲಿ ಇಟ್ಟು, ಅದರಿಂದ ದೊರಕುವ ಬಡ್ಡಿಯಲ್ಲಿ ಬದುಕಿನ ಬಂಡಿಯನ್ನು ಓಡಿಸುವವರು. ಈ ಪೈಕಿ ಅದೆಷ್ಟೋ ಜನ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.
ಇತ್ತೀಚೆಗೆ ವೃದ್ಧಾಶ್ರಮಗಳ ಮತ್ತು ಹಿರಿಯ ನಾಗರಿಕರ ವಸತಿಗೃಹಗಳ ಸಂಖ್ಯೆಯು ಹೆಚ್ಚುತ್ತಿರು ವುದು ಕಟುಸತ್ಯ. ಹಲವು ಹಿರಿಯ ಜೀವಗಳು ತಮ್ಮ ಮಕ್ಕಳಿಂದ ಒದಗುವ ಅವಮಾನ/ನಿರ್ಲಕ್ಷ್ಯದ ಹೊರತಾಗಿಯೂ, ಏನೂ ನಡೆದಿಲ್ಲವೆಂಬಂತೆ ಮುಖವಾಡ ಹಾಕಿಕೊಂಡು, ಕೊನೆಯ ದಿನಗಳನ್ನು ನಿರೀಕ್ಷಿಸುತ್ತಾ, ‘ನಮ್ಮನ್ನು ನಿನ್ನ ಪಾದದಲ್ಲಿ ಬೇಗನೆ ಸೇರಿಸಿಕೋ’ ಎಂದು ದೇವರನ್ನು ಬೇಡುತ್ತಾ ಕಾಲ ಕಳೆಯುತ್ತಾರೆ.
ಹಾಗೆಂದ ಮಾತ್ರಕ್ಕೆ, ತಮ್ಮ ಮಕ್ಕಳು-ಮೊಮ್ಮಕ್ಕಳೊಂದಿಗೆ ಸುಖವಾಗಿ ಕಾಲ ಕಳೆಯುತ್ತಿರುವ ವಯೋವೃದ್ಧರು ಇಲ್ಲವೇ ಇಲ್ಲ ಎಂದೇನಲ್ಲ; ಆದರೆ ವರದಿಗಳ ಪ್ರಕಾರ ಇಂಥವರ ಸಂಖ್ಯೆ ಹೇಳಿಕೊಳ್ಳುವಷ್ಟು ಹೆಚ್ಚೇನೂ ಇಲ್ಲ. ನಿವೃತ್ತರ ಪಿಂಚಣಿ ವ್ಯವಸ್ಥೆಯಲ್ಲೂ ಬದಲಾವಣೆ ಯಾಗಿದ್ದು, ಎನ್‌ಪಿಎಸ್ /ಯುಪಿಎಸ್ ಹೆಸರಿನಲ್ಲಿ ಮೊದಲಿನಂತೆ ನಿರ್ದಿಷ್ಟ ಪಿಂಚಣಿ ಇಲ್ಲ ದಂತಾಗಿದೆ. ಹೀಗಾಗಿ ಎಲ್ಲವೂ ಗೊಂದಲಮಯವಾಗಿದೆ, ಹಿರಿಯ ನಾಗರಿಕರ ಬದುಕು ಹೈರಾ ಣಾಗಿದೆ.

ಇತ್ತೀಚೆಗೆ ಜಾರಿ ಮಾಡಲು ಉದ್ದೇಶಿಸಿರುವ ಯುಪಿಎಸ್ ಪಿಂಚಣಿ ವ್ಯವಸ್ಥೆಗೆ ಸ್ಪಂದನೆಯೇ ಇಲ್ಲ ಎನ್ನಲಾಗುತ್ತದೆ. ಹಿರಿಯ ನಾಗರಿಕರಿಗೆ ಅಮರಿಕೊಳ್ಳುವ ಅನಾರೋಗ್ಯದ ಸಮಸ್ಯೆ ಎಲ್ಲರಿಗೂ ತಿಳಿದ ವಿಷಯವೇ. 70 ವರ್ಷ ಆದವರಿಗೆ ಆರೋಗ್ಯವಿಮೆ ಭಾಗ್ಯವಿಲ್ಲ, ಅಕಸ್ಮಾತ್ ಇದ್ದರೂ ಹಲವು ಷರತ್ತುಗಳಿಗೆ ಅದು ಒಳಪಟ್ಟಿರುತ್ತದೆ. ಅವರು ಯಾವುದೇ ಸಾಲಕ್ಕೆ ಅರ್ಹರಿರುವುದಿಲ್ಲ, ವಾಹನ ಚಾಲನಾ ಪರವಾನಗಿ/ ಅನುಮತಿಯನ್ನು ಪಡೆಯಲಾಗುವುದಿಲ್ಲ.
ಅವರಿಗೆ ಯಾರೂ ಉದ್ಯೋಗವನ್ನು ನೀಡುವುದಿಲ್ಲವಾದ್ದರಿಂದ, ಬದುಕಿನ ಬಂಡಿಯನ್ನು ಎಳೆಯಲು ಅವರು ಇನ್ನೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಅವರು ತಮ್ಮ ಸೇವಾವಧಿ ಪೂರ್ತ (60-65 ವರ್ಷದವರೆಗೆ) ಸರಕಾರಕ್ಕೆ ತೆರಿಗೆಯನ್ನೂ, ಆರೋಗ್ಯ-ಜೀವವಿಮಾ ಪ್ರೀಮಿಯಂ ಅನ್ನೂ ಕಟ್ಟಿರುತ್ತಾರೆ; ಆದರೂ ನಿವೃತ್ತಿಯ ನಂತರವೂ ಅವರು ಎಲ್ಲಾ ರೀತಿಯ ತೆರಿಗೆಯನ್ನು ನೀಡಬೇಕು.
ವಿಶೇಷವೆಂದರೆ, ಜೀವನರಥ ಓಡಿಸಲೆಂದು ನೀಡಲಾಗುವ ಅಲ್ಪಮೊತ್ತದ ಪಿಂಚಣಿಗೂ ತೆರಿಗೆ ನೀಡಬೇಕು. ಹೀಗಾಗಿ ‘ಇದು ಸಂಬಳವಲ್ಲ, ಬದುಕಲು ನೀಡುವ ಜೀವನಾಂಶ. ಇದಕ್ಕೂ ತೆರಿಗೆಯೇ?’ ಎಂದು ಹಲವು ವಯೋವೃದ್ಧರು ಕೇಳುತ್ತಿದ್ದಾರೆ.
ನಿವೃತ್ತರಿಗೆಂದು ಯಾವುದೇ ರೀತಿಯ ವಿನಾಯಿತಿ ಅಥವಾ ಸ್ಕೀಮ್‌ಗಳು ಇಲ್ಲ. ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರವು ಇಳಿಯುತ್ತಿರುವುದರಿಂದ ಅವರ ಆದಾಯದಲ್ಲಿ ಕುಸಿತವಾಗುತ್ತಿದೆ. ‘ಬಾಗಿದ ಬೆನ್ನಿನ ಮೇಲೆ ಇನ್ನೊಂದು ಗುದ್ದು’ ಎನ್ನುವಂತೆ ಈ ಬಡ್ಡಿ ಆದಾಯಕ್ಕೆ ತೆರಿಗೆ ಬೇರೆ!
ಒಂದು ಕಾಲಕ್ಕೆ, ಹಿರಿಯರು ಇರಿಸುವ ಠೇವಣಿ ಮೇಲೆ ಶೇ.1ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗು ತ್ತಿತ್ತು, ಅದನ್ನೀಗ ಶೇ.0.50ಕ್ಕೆ ಇಳಿಸಲಾಗಿದೆ. ಸರಕಾರವು ಜನಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ವನ್ನು ನೀಡುತ್ತದೆ. ಆದರೆ ಹಿರಿಯ ನಾಗರಿಕರಿಗೆ ಸಂಬಂಧಿಸಿ ಯಾವುದೇ ಸ್ಕೀಮ್ ಇರುವುದಿಲ್ಲ. ಇವರಿಗೆ ರೈಲು ಮತ್ತು ವಿಮಾನ ಪ್ರಯಾಣದಲ್ಲಿ ನೀಡಲಾಗುತ್ತಿದ್ದ ಶೇ.50ರ ವಿನಾಯಿತಿಯನ್ನೂ ತೆಗೆದು ಹಾಕಲಾಗಿದೆ.
ಅದನ್ನು ಮರಳಿ ನೀಡಲಾಗುವುದೆಂಬ ಮಾತು ಕೇವಲ ಭರವಸೆಯಾಗಿಯೇ ಉಳಿದಿದೆ. ಈ ವಿಷಯ ದಲ್ಲಿ ಏನಾದರೂ ಕೇಳಿದರೆ, ‘ಇಂದಲ್ಲದಿದ್ದರೆ ನಾಳೆ ಆಗುತ್ತದೆ’ ಎಂಬ ಉತ್ತರ ಸಿಗುತ್ತದೆ. ಆ ನಾಳೆ ಗಾಗಿ ನಿವೃತ್ತರು ಕಾಯುತ್ತಿದ್ದಾರೆ...
ನಿವೃತ್ತರಿಗೆ ನೀಡುವ ಪಿಂಚಣಿಯಲ್ಲಿ ಏಕರೂಪತೆ ಇರುವುದಿಲ್ಲ. ಕೆಲವರಿಗೆ ಹಳೆಯ ಪಿಂಚಣಿ ಸ್ಕೀಮ್, ಹಲವರಿಗೆ ಹೊಸ ಸ್ಕೀಮ್, ಮತ್ತೆ ಕೆಲವರಿಗೆ ಇತ್ತೀಚಿನ ಯುಪಿಎಸ್ ಸ್ಕೀಮ್. ಕೆಲವರ್ಗದ ಪಿಂಚಣಿದಾರರಿಗೆ, ಪ್ರತಿ ಬಾರಿ ವೇತನ ಪರಿಷ್ಕರಣೆಯಾದ ನಂತರ ಪಿಂಚಣಿಯೂ ಪರಿಷ್ಕರಣೆ ಯಾಗುತ್ತದೆ. ಆದರೆ ಮತ್ತೆ ಕೆಲವರಿಗೆ ಮೊದಲ ತಿಂಗಳು ತೆಗೆದುಕೊಂಡ ಪಿಂಚಣಿಯು ಕೊನೆಯ ಉಸಿರು ಇರುವವರೆಗೂ ಹಾಗೆಯೇ ಇರುತ್ತಿದ್ದು, ಆಗೊಮ್ಮೆ ಈಗೊಮ್ಮೆ ತುಟ್ಟಿಭತ್ಯೆ ರೀತಿಯಲ್ಲಿ ಸ್ವಲ್ಪ ‘ಕಾಳು’ ಹಾಕಲಾಗುತ್ತದೆ.
ಬ್ಯಾಂಕ್‌ನ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿಯ ಉನ್ನತೀಕರಣದ ಭಾಗ್ಯವಿಲ್ಲ, ಅದಕ್ಕಾಗಿ ಅವರು ಎರಡು ದಶಕಗಳಿಂದ ಹೋರಾಡುತ್ತಿದ್ದಾರೆ. ‘ಇಂದಲ್ಲ ನಾಳೆ ಆಗುತ್ತದೆ’ ಎಂದು ಶಬರಿಯಂತೆ ನಿರೀಕ್ಷಿಸಿದ ಇಂಥ ಸಾವಿರಾರು ಮಂದಿ ಇಹಲೋಕ ತ್ಯಜಿಸಿದ್ದಾರೆ.
ನಮ್ಮ ದೇಶದಲ್ಲಿ ಪಿಂಚಣಿ ವಿಷಯದಲ್ಲಿ ಜನಪ್ರತಿನಿಧಿಗಳಿಗೊಂದು ನಿಯಮಾವಳಿಯಾದರೆ, ಜನಸಾಮಾನ್ಯರಿಗೊಂದು ನಿಯಮಾವಳಿ. ಜನಪ್ರತಿನಿಧಿಗಳು ತಮ್ಮ ಹುದ್ದೆಗೆ ಅನುಸಾರವಾಗಿ ಪಿಂಚಣಿ ಪಡೆಯುತ್ತಾರಂತೆ. ಶಾಸಕರಾಗಿ ಒಂದು ಪಿಂಚಣಿ, ಮಂತ್ರಿಯಾಗಿ ಒಂದು, ಉಪರಾಷ್ಟ್ರಪತಿ ಯಾಗಿ ಒಂದು, ಪ್ರಧಾನಿಯಾಗಿ ಒಂದು ಮತ್ತು ರಾಷ್ಟ್ರಪತಿಯಾಗಿ ಒಂದು ಹೀಗೆ ಎಲ್ಲಾ ಹುದ್ದೆಗಳಿಗೆ ಪಿಂಚಣಿ ಪಡೆಯುತ್ತಾರಂತೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಜಗದೀಪ್ ಧನಕರ್ ಅವರು, ಹಿಂದೊಮ್ಮೆ ರಾಜಸ್ಥಾನದಲ್ಲಿ ಶಾಸಕರಾಗಿದ್ದರು; ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ರಾಜಸ್ಥಾನದಲ್ಲಿ ಶಾಸಕರಾಗಿದ್ದ ಬಾಬತ್ತನ್ನೂ ಮುಂದಿಟ್ಟುಕೊಂಡು ಅವರು ಪಿಂಚಣಿಗೆ ಅರ್ಜಿ ಗುಜರಾಯಿಸಿದ್ದಾರೆ.
ಅದು ಸದ್ಯದಲ್ಲಿಯೇ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆಯಂತೆ! ಮಾಧ್ಯಮಗಳ ವರದಿಯ ಪ್ರಕಾರ ಅವರು ಶಾಸಕರಾಗಿ 42000 ರುಪಾಯಿ, ಲೋಕಸಭಾ ಸದಸ್ಯರಾಗಿ 45000 ರುಪಾಯಿ, ಉಪ ರಾಷ್ಟ್ರಪತಿ ಯಾಗಿ 200000 ರುಪಾಯಿ- ಹೀಗೆ ಮೂರು ರೀತಿಯ ಪಿಂಚಣಿಯನ್ನು ಪಡೆಯುತ್ತಾ ರಂತೆ.
ಸಾಲದೆಂಬಂತೆ, 3-4 ಜನ ಸಿಬ್ಬಂದಿಗಳು, ಬಂಗಲೆ, ವೈದ್ಯರ ಸೌಲಭ್ಯಗಳು ಬೇರೆ! ಹಾಗೆಯೇ, ಇಂಥ ಜನಪ್ರತಿನಿಧಿಗಳ ವಯಸ್ಸು 7೦ ವರ್ಷವನ್ನು ಮೀರಿದರೆ, ಪಿಂಚಣಿಯನ್ನು ಶೇ.20ರಷ್ಟು ಹೆಚ್ಚಿಸ ಲಾಗುವುದು, ಕಾಲಕಾಲಕ್ಕೆ ಪಿಂಚಣಿಯಲ್ಲಿ ಉನ್ನತೀಕರಣ ಬೇರೆ. ಜನಸಾಮಾನ್ಯರಿಗೆ ಇದು ಸಾಧ್ಯವೇ? ಒಂದು ಪಿಂಚಣಿಯೇ ಕನಸಾಗಿರುವಾಗ ಮೂರು ಬಗೆಯ ಪಿಂಚಣಿಗಳು ನನಸಾಗುವು ದೆಲ್ಲಿಂದ ಬಂತು!
‘ಜನಪ್ರತಿನಿಧಿಯೇತರ’ ಪಿಂಚಣಿದಾರರಿಗೆ ಇಂಥ ಹೆಚ್ಚಳ ಮತ್ತು ಉನ್ನತೀಕರಣ ಗಗನಕುಸುಮವೇ! ‘ಪಿಂಚಣಿಯ ಉನ್ನತೀಕರಣ ಮತ್ತು ಹೆಚ್ಚಳವು ಯಾವುದೇ ಪಿಂಚಣಿದಾರರ ಹಕ್ಕು’ ಎನ್ನುವ ನ್ಯಾಯಾಲಯದ ಮಹತ್ವದ ತೀರ್ಪು ಇದೆ ಎಂದು ಹೇಳಲಾಗುತ್ತಿದ್ದು, ಅದನ್ನು ಪಡೆಯಲು ಹೋರಾಡಬೇಕು. ಏಕೆಂದರೆ, ಎಷ್ಟೇ ವರ್ಷ ಸೇವೆ ಸಲ್ಲಿಸಿರಲಿ, 80-90 ವರ್ಷ ವಯಸ್ಸಾಗಿರಲಿ, ಅಂಥ ಜನಸಾಮಾನ್ಯರಿಗೆ ಪಿಂಚಣಿಯ ಉನ್ನತೀಕರಣವಿಲ್ಲ.
ಕೆಲವು ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಈ ವಿಷಯವನ್ನು ಚರ್ಚಿಸಲು ನಿವೃತ್ತ ರೊಡನೆ contractual relationship ಇಲ್ಲ ಎಂದು ಹೇಳಿ ನುಣುಚಿಕೊಳ್ಳುತ್ತಿವೆಯಂತೆ. ಸೇವೆಗೆ ಸಂಬಂಧಪಟ್ಟ ಪ್ರಕರಣಗಳು ಇತ್ಯರ್ಥಗೊಳ್ಳಲು ಸುದೀರ್ಘ ಸಮಯ ಹಿಡಿಯುತ್ತಿದೆ. ಅಂತೆಯೇ, ಇಂಥ ಹಿರಿಯ ನಾಗರಿಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಸಂಜಯ್ ರಾವತ್ ಹೀಗೆ ಗಟ್ಟಿದನಿಯಲ್ಲಿ ಒತ್ತಾಯಿಸಿದಂತೆ ಕಾಣುತ್ತದೆ.
ಪಿಂಚಣಿದಾರರ ಸಮಸ್ಯೆಗಳು, ಪಿಂಚಣಿ ವ್ಯವಸ್ಥೆಯಲ್ಲಿನ ಲೋಪದೋಷಗಳು, ಪಿಂಚಣಿಯ ಉನ್ನತೀಕರಣ ಮುಂತಾದ ವಿಷಯಗಳಿಗೆ ಸಂಬಂಧಿಸಿ ಪಿಂಚಣಿದಾರರು ನ್ಯಾಯಾಲಯದಲ್ಲಿ ಸುದೀರ್ಘ ಅವಧಿಯವರೆಗೆ ಹೋರಾಡುವುದನ್ನು ತಪ್ಪಿಸಲು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಒಂದಿಷ್ಟು ಬೇಡಿಕೆಗಳನ್ನು/ಸಲಹೆಗಳನ್ನು ಸರಕಾರದ ಸಮ್ಮುಖದಲ್ಲಿ ಮಂಡಿಸಿ ದ್ದಾರೆ.
“60 ವರ್ಷ ದಾಟಿದ ಪ್ರತಿಯೊಬ್ಬರಿಗೂ ಪಿಂಚಣಿ ನೀಡಬೇಕು, ಪಿಂಚಣಿದಾರರ ಸ್ಟೇಟಸ್ ಪ್ರಕಾರ ಪಿಂಚಣಿ ನೀಡಬೇಕು, ಪಿಂಚಣಿದಾರರ ಕೊನೆಯುಸಿರು ಇರುವವರೆಗೆ ಅವರಿಗೆ ವಿಮಾ ಸೌಲಭ್ಯನೀಡಿ ಸರಕಾರವೇ ಅದರ ಪ್ರೀಮಿಯಂ ಅನ್ನು ಭರಿಸಬೇಕು, ಆದ್ಯತೆಯ ಮೇರೆಗೆ ಹಿರಿಯ ನಾಗರಿಕರ ಪ್ರಕರಣಗಳನ್ನು ನ್ಯಾಯಾಲಯಗಳು ವಿಚಾರಣೆಗೆ ತೆಗೆದುಕೊಂಡು ತೀರ್ಪು ನೀಡಬೇಕು, ಎಲ್ಲಾ ಪಟ್ಟಣ-ನಗರಗಳಲ್ಲಿ ಹಿರಿಯ ನಾಗರಿಕರಿಗಾಗಿ ವಸತಿ ಸೌಲಭ್ಯ ಕಲ್ಪಿಸಬೇಕು" ಎಂದು ತಿಳಿಸಿರುವ ಸಂಜಯ್ ರಾವತ್ ಅವರು, “ಹಿರಿಯ ನಾಗರಿಕರ ಬಳಿ ಇರುವ ವಾಹನಗಳು ಹೆಚ್ಚು ಬಳಕೆಯಾಗದೆ ಇರುವುದರಿಂದ, 10-15 ವರ್ಷಕ್ಕೆ ಕಾರುಗಳನ್ನು ಸ್ಕ್ರ್ಯಾಪ್ ಮಾಡುವ ನಿಯಮಾವಳಿಯನ್ನು ಹಿರಿಯ ನಾಗರಿಕರಿಗೆ ಅನ್ವಯಿಸಬಾರದು" ಎಂದೂ ಸರಕಾರವನ್ನು ಆಗ್ರಹಿಸಿದ್ದಾರೆ.
ಹಾಗೆ ನೋಡಿದರೆ, ನಿವೃತ್ತರ ಮತ್ತು ಹಿರಿಯ ನಾಗರಿಕರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಸರಕಾರದ ಮುಂದೆ ನಿರಂತರವಾಗಿ ಮಂಡಿಸಲಾಗುತ್ತಿದೆ. ಸಂಸದರ ಮೂಲಕ ನೂರಾರು ಮನವಿ ಗಳನ್ನು ಸಂಬಂಧಪಟ್ಟ ಸಚಿವರಿಗೆ ಸಲ್ಲಿಸಲಾಗಿದೆ. ಆದರೆ ಬಹುತೇಕ ಸಂಸದರು ಸಂಜಯ್ ರಾವತ್ ಅವರ ರೀತಿಯಲ್ಲಿ ಹೀಗೆ ಗಟ್ಟಿದನಿ ಎತ್ತಿ ಸರಕಾರದ ಗಮನ ಸೆಳೆದಿರಲಿಲ್ಲ. ಸರಕಾರವು ಈ ಬಾರಿಯಾದರೂ, ನಿರ್ಲಕ್ಷಿಸಲ್ಪಟ್ಟ ನಿವೃತ್ತರ ಮತ್ತು ಹಿರಿಯ ನಾಗರಿಕರ ಸಮಸ್ಯೆಗಳತ್ತ ಕಣ್ಣು ಹಾಯಿಸಬಹುದೇ ಎಂದು ಕಾತರದಿಂದ ಎದುರುನೋಡಲಾಗುತ್ತಿದೆ.
(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)