ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಕರಾವಳಿ ಭಾವ ಬಂದರು...ಸ್ವಲ್ಪ ದಾರಿಬಿಡಿ!

‘ಕಾಂತಾರ’ ಸೃಷ್ಟಿಸಿದ ಮೋಡಿಯು ಕನ್ನಡಿಗರ ಮನದಲ್ಲಿನ್ನೂ ಹಸಿರಾಗಿದೆ. ಈ ಚಲನ ಚಿತ್ರವು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದ ಉದ್ದಗಲಕ್ಕೂ ಸುದ್ದಿ ಮಾಡಿದ್ದು ಒಂದು ವಿಶೇಷ. ಆರಂಭ ಚೆನ್ನಾಗಿದ್ದರೆ ಮುಂದಿನ ಓಟವೂ ಚೆನ್ನಾಗಿರುತ್ತದೆ ಎಂಬ ಮಾತಿದೆ. ಮೇಲೆ ಉಲ್ಲೇಖಿಸಿರುವ ಚಿತ್ರಗಳೆಲ್ಲ ವನ್ನೂ ನೀವಾಳಿಸಿ ತೆಗೆಯುವಂತೆ ಕರಾವಳಿಗರ ಇತ್ತೀಚಿನ ಚಿತ್ರ ‘ಸು ಫ್ರಮ್ ಸೋ’ ಸ್ಯಾಂಡಲ್ ವುಡ್‌ ನಲ್ಲಿ ಭಾರಿ ಅಬ್ಬರ ಮಾಡುತ್ತಿದೆ.

ಕರಾವಳಿ ಭಾವ ಬಂದರು...ಸ್ವಲ್ಪ ದಾರಿಬಿಡಿ!

Ashok Nayak Ashok Nayak Aug 25, 2025 9:41 AM

ಚಿತ್ರ ಲಹರಿ

ರಮಾನಂದ ಶರ್ಮಾ

ಕರ್ನಾಟಕದ ಕರಾವಳಿ ಭಾಗದ ಹಳ್ಳಿಯೊಂದರ ಬದುಕಿನ ವೈಖರಿ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವ ಒಂದು ಪ್ರಾಮಾಣಿಕ ಮತ್ತು ಸಾರ್ಥಕ ಪ್ರಯತ್ನವೇ ‘ಸು ಫ್ರಮ್ ಸೋ’. ಚಿತ್ರರಂಗದ ‘ಕೆಲವು ಅನಿವಾರ್ಯತೆಗಳಿಗೆ’ ಬಲಿಯಾಗದೆಯೇ ನೈಜತೆಯನ್ನು ಕಾಪಾಡಿಕೊಂಡಿರುವುದು ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ಸ್ಯಾಂಡಲ್‌ವುಡ್’ ಎಂದೇ ಕರೆಯಲ್ಪಡುವ ಕನ್ನಡ ಚಿತ್ರರಂಗವು ತೀರಾ ಇತ್ತೀಚಿನವರೆಗೂ ‘ಬೆಂಗಳೂರು- ಕೇಂದ್ರಿತ’ವಾಗಿತ್ತು. ನಿರ್ಮಾಪಕರು, ನಿರ್ದೇಶಕರು, ತಾರೆಯರು, ಸಂಗೀತಗಾರರು, ಹಾಡುಗಾರರು, ಫೈನಾನ್ಷಿಯರ್ ಗಳು, ಹಂಚಿಕೆದಾರರು ಎಲ್ಲರೂ ಬಹುತೇಕವಾಗಿ ಬೆಂಗಳೂರಿ ನವರೇ ಆಗಿರುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಭಾಷೆಗಳ ಕೆಲವು ದೃಶ್ಯಾವಳಿಗಳು ಕನ್ನಡ ಚಿತ್ರಗಳಲ್ಲಿ ಕಾಣುತ್ತಿದ್ದವು. ಈ ಭಾಷೆಗಳು ಕೇವಲ ಹಾಸ್ಯಪಾತ್ರಗಳಿಗೆ ಸೀಮಿತವಾಗಿದ್ದವೇ ಹೊರತು, ಸಂಪೂರ್ಣ ಚಲನಚಿತ್ರದಲ್ಲಿ ಪ್ರಸ್ತುತಿ ಗೊಂಡಿದ್ದು ವಿರಳವೇ.

ಕನ್ನಡ ಚಿತ್ರರಂಗದ ಈ ಸೋಗಲಾಡಿತನದ ಬಗ್ಗೆ ಆಗಾಗ ಮೆಲುದನಿಯಲ್ಲಿ ಅಸಮಾಧಾನ ಹೊಮ್ಮಿದ್ದಿದೆ. ಕರಾವಳಿಯವರು ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದು ಅಪರೂಪವಾದರೂ (ಈಗ ಹಾಗಿಲ್ಲ ಎನ್ನಿ!) ದೂರದ ಬಾಲಿವುಡ್‌ನಲ್ಲಿ ಮಿಂಚಿದ್ದಾರೆ ಮತ್ತು ಮಿಂಚುತ್ತಿದ್ದಾರೆ.

ಗುರುದತ್, ಫೈಟರ್ ಶೆಟ್ಟಿ, ಸುನಿಲ್ ಶೆಟ್ಟಿ, ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ, ದೀಪಿಕಾ ಪಡುಕೋಣೆ ಹೀಗೆ ಹುಡುಕಿ ಬರೆದರೆ ಈ ಪಟ್ಟಿ ಇನ್ನೂ ಉದ್ದವಾಗಬಹುದು. ಬಾಲಿವುಡ್‌ನಲ್ಲಿ ಸಲ್ಲುವವರು ಸ್ಯಾಂಡಲ್‌ವುಡ್‌ನಲ್ಲೇಕೆ ಸಲ್ಲುವುದಿಲ್ಲ? ಎಂಬ ಚರ್ಚೆ ನಡೆಯುತ್ತಿರುವಂತೆಯೇ ಕರಾವಳಿಗರು ‘ಒಂದು ಮೊಟ್ಟೆಯ ಕಥೆ’ಯ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಭರ್ಜರಿ ಮೊಟ್ಟೆ ಇಟ್ಟರು (ಇದಕ್ಕೂ ಮುಂಚೆ ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ’ ಮುಂತಾದ ಪ್ರಯತ್ನ ಗಳಾಗಿದ್ದವು ಎನ್ನಿ!).

ಮುಂದೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಿತ್ರದ ಮೂಲಕ ಸ್ಯಾಂಡಲ್‌ ವುಡ್‌ನಲ್ಲಿ ಒಂದೊಂದೇ ತರಗತಿಗಳನ್ನು ದಾಟುತ್ತಾ, ಮುಂದೆ ‘ಕಾಂತಾರ’ ಚಿತ್ರದಿಂದ ‘ಕರಾವಳಿ ಗರು ಬರುತ್ತಿದ್ದೇವೆ, ದಾರಿಬಿಡಿ’ ಎನ್ನುತ್ತಾ ಭಾರಿ ಸದ್ದು ಮಾಡಿದರು.

ಇದನ್ನೂ ಓದಿ: Ramanand Sharma Column: ಪತ್ರಿಕೆಯನ್ನೂ ಪಾಳಿಯಲ್ಲಿ ಓದುವ ಪರಿಪಾಠ...!

ಈ ಪೈಕಿ, ‘ಕಾಂತಾರ’ ಸೃಷ್ಟಿಸಿದ ಮೋಡಿಯು ಕನ್ನಡಿಗರ ಮನದಲ್ಲಿನ್ನೂ ಹಸಿರಾಗಿದೆ. ಈ ಚಲನ ಚಿತ್ರವು ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದ ಉದ್ದಗಲಕ್ಕೂ ಸುದ್ದಿ ಮಾಡಿದ್ದು ಒಂದು ವಿಶೇಷ. ಆರಂಭ ಚೆನ್ನಾಗಿದ್ದರೆ ಮುಂದಿನ ಓಟವೂ ಚೆನ್ನಾಗಿರುತ್ತದೆ ಎಂಬ ಮಾತಿದೆ. ಮೇಲೆ ಉಲ್ಲೇಖಿಸಿರುವ ಚಿತ್ರಗಳೆಲ್ಲವನ್ನೂ ನೀವಾಳಿಸಿ ತೆಗೆಯುವಂತೆ ಕರಾವಳಿಗರ ಇತ್ತೀಚಿನ ಚಿತ್ರ ‘ಸು ಫ್ರಮ್ ಸೋ’ ಸ್ಯಾಂಡಲ್ ವುಡ್‌ನಲ್ಲಿ ಭಾರಿ ಅಬ್ಬರ ಮಾಡುತ್ತಿದೆ.

ಕೇವಲ 5-6 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಚಿತ್ರ ಈಗಾಗಲೇ ಹತ್ತತ್ತಿರ 100 ಕೋಟಿ ಗಳಿಸಿದೆ ಎನ್ನುವ ವರದಿಯು ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ ಮೂಡಿಸಿದೆ. ಈ ಚಿತ್ರವು ಬಿಡುಗಡೆಯಾಗಿ ಒಂದು ತಿಂಗಳಾದರೂ ಇನ್ನೂ ಬಿಗಿಯಾಗಿ ಕಚ್ಚಿಕೊಂಡಿರುವುದನ್ನು ನೋಡಿ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲಾ ಎದ್ದು ಕುಳಿತು ಕಣ್ಣುಜ್ಜಿಕೊಂಡು ಬೆಕ್ಕಸ ಬೆರಗಾಗಿ ನೋಡು ತ್ತಿದ್ದಾರೆ.

‘ಕನ್ನಡ ಚಿತ್ರಗಳಿಗೆ ಪ್ರೇಕ್ಷಕರೇ ಬರುವುದಿಲ್ಲ’ ಎಂದೇ ಗೋಳಾಡುತ್ತಿದ್ದ ಇವರು, ತಾವು ಲೆಕ್ಕಾಚಾರ ದಲ್ಲಿ ಸೋತಿದ್ದೆಲ್ಲಿ? ತಮ್ಮ ಸಮೀಕರಣ ಎಲ್ಲಿ ತಪ್ಪಾಗಿದೆ? ಎಂದೇ ಗಂಭೀರವಾಗಿ ಯೋಚಿಸು ತ್ತಿದ್ದಾರೆ. ದಶಕಗಳಿಂದ ಚಿತ್ರರಂಗದಲ್ಲಿದ್ದವರು, ಆಜೀವ ಸದಸ್ಯರಂತೆ ಇಲ್ಲಿಯೇ ತಳ ಊರಿಕೊಂಡು ಕೂತಿದ್ದವರು ಈ ಅದ್ಭುತ ಯಶಸ್ಸನ್ನು ಕಂಡು ದಂಗಾಗಿದ್ದಾರೆ.

ಈ ‘ಕರಾವಳಿ ಎಕ್ಸ್ ಪ್ರೆಸ್’ ದಿನ ಬೆಳಗಾಗುವುದರೊಳಗೆ ಸ್ಯಾಂಡಲ್‌ವುಡ್‌ನಲ್ಲಿ ಠಿಕಾಣಿ ಹೂಡು ತ್ತಿರುವುದನ್ನು ಕಂಡು ನಿಬ್ಬೆರಗಾಗಿದ್ದಾರೆ. ಒಂದು ಮಾತಂತೂ ನಿಜ. ‘ಸು ಫ್ರಮ್ ಸೋ’ ಚಿತ್ರವಂತೂ ಸೂಪರ್‌ಹಿಟ್, ಈಗಲೂ ತುಂಬಿದ ಗೃಹಗಳ ಪ್ರದರ್ಶನವನ್ನು ಕಾಣುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ, ಬೇರೆ ಘಟಾನುಘಟಿಗಳು ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಇದು ಮುಂದೂ ಡುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರ ‘ಕೂಲಿ’ ಚಿತ್ರದ ಆರ್ಭಟಕ್ಕೂ ‘ಸು ಫ್ರಮ್ ಸೋ’ ಜಗ್ಗಲಿಲ್ಲ. ನಿಜ ಹೇಳ ಬೇಕೆಂದರೆ, ಸ್ಯಾಂಡಲ್‌ವುಡ್‌ನವರು ಹೇಳುವ ತಥಾಕಥಿತ ‘ಫಾರ್ಮುಲಾ’ ಅಥವಾ ‘ಸಿದ್ಧಸೂತ್ರ’ ಈ ಚಿತ್ರದಲ್ಲಿಲ್ಲ. ಚಾಕೊಲೇಟ್ ಮುಖದ ಹೀರೋಗಳಾಗಲೀ, ದ್ವೇಷ ಕಾರುವ ರಗಡ್ ಮುಖದ ಖಳನಾಯಕರಾಗಲೀ ಇಲ್ಲಿಲ್ಲ. ರತಿ ವರ್ಚಸ್ಸಿನ ನಾಯಕಿಯಿಲ್ಲ, ಐಷಾರಾಮಿ ಬಂಗಲೆ ಗಳು, ಹೈ-ಎಂಡ್ ಕಾರುಗಳು ಬೈಕುಗಳು, ಪಂಚತಾರಾ ಹೋಟೆಲುಗಳ ಪ್ರದರ್ಶನವಿಲ್ಲ.

ವಿದೇಶಿ ಲೊಕೇಶನ್‌ಗಳ ಮಾತಿರಲಿ ಕಾಶ್ಮೀರ-ಊಟಿಗಳ ತಂಟೆಗೂ ಚಿತ್ರತಂಡದವರು ಹೋಗಿಲ್ಲ. ಮೈ ನವಿರೇಳಿಸುವ ಕಾರ್-ಚೇಸ್, ಅಳುಮುಂಜಿ ಅಮ್ಮಣ್ಣಿಯರು, ಒಣ ಉಪದೇಶ ಕೊಡುವ ‘ಅಮೃತಾಂಜನ್’ ಪಾರ್ಟಿಗಳು ಇಲ್ಲಿಲ್ಲ. ಇಲ್ಲಿ ಹೀರೋ ಹತ್ತು ಜನರೊಂದಿಗೆ ಏಕಾಂಗಿಯಾಗಿ ಹೊಡೆದಾಡುವುದಿಲ್ಲ, ಹೀರೋ-ಹೀರೋಯಿನ್ ಪಾರ್ಕ್‌ನಲ್ಲಿ ವಿಹರಿಸುತ್ತಾ ಯುಗಳಗೀತೆ ಹಾಡು ವುದಿಲ್ಲ.... ಸ್ವಿಮ್ ಸೂಟು, ಐಟಂ ಸಾಂಗು, ದ್ವಂದ್ವಾರ್ಥದ ಸಂಭಾಷಣೆ, ಕರ್ಣಕಠೋರ/ ಕರ್ಣಾ ನಂದಕರ ಹಾಡುಗಳು, ಹೀರೋಯಿಸಂ ಡೈಲಾಗುಗಳು, ಬಿಲ್ಡಪ್ಪುಗಳು ಈ ಯಾವುದೂ ಇದರಲ್ಲಿಲ್ಲ.

ಅರೆ! ಎಲ್ಲವೂ ಇಲ್ಲ ಇಲ್ಲ ಅನ್ನುತ್ತಾ ಹೋದರೆ, ಈ ಚಿತ್ರದಲ್ಲಿ ಇರೋದಾದರೂ ಏನು ಹಾಗಾದರೆ?! ಚಿತ್ರವನ್ನು ಕಟ್ಟುವಲ್ಲಿ ಪ್ರತಿಯೊಬ್ಬರೂ ತೋರಿರುವ ಶ್ರದ್ಧೆಯೇ ‘ಸು ಫ್ರಮ್ ಸೋ’ ಚಿತ್ರದ ಜೀವಾಳ ಹಾಗೂ ಯಶಸ್ಸಿಗೆ ಅದುವೇ ಕಾರಣ. ಒಂದಿಬ್ಬರು ಮೂವರನ್ನು ಬಿಟ್ಟರೆ ಹೆಚ್ಚಿನವರು ಮೊದಲ ಬಾರಿ ಬಣ್ಣ ಹಚ್ಚಿದಂತಿದೆ; ಆದರೂ ಅವರ ಅಭಿನಯದಲ್ಲಿ ಅನುಭವದ ಮೂಸೆ ಎದ್ದು ಕಾಣು ತ್ತದೆ.

ಹೀರೋಯಿನ್‌ಗೆ ಅಷ್ಟೊಂದು ಪ್ರಾಮುಖ್ಯ ಇಲ್ಲದಿರುವುದರಿಂದ, ‘ಯಾರು ಹೀರೋಯಿನ್?’ ಎಂಬುದು ಪ್ರೇಕ್ಷಕರಿಗೆ ಚಿತ್ರದ ಕೊನೆಯವರೆಗೂ ತಿಳಿಯದಿರುವುದು ಈ ಚಿತ್ರದ ವಿಶೇಷ. ಕಥೆಯ ಪ್ರಸ್ತುತಿಯಲ್ಲಿ ಹೀರೋಯಿನ್ ಮೇಲೆಯೇ ಕ್ಯಾಮರಾವನ್ನು ಫೋಕಸ್ ಮಾಡಿದಂತೆ ಕಾಣುವುದಿಲ್ಲ. ಪಾತ್ರಗಳನ್ನು ಕಟ್ಟಿಕೊಟ್ಟಿರುವ ಪರಿ ಹೇಗಿದೆಯೆಂದರೆ, ಪ್ರತಿಯೊಬ್ಬ ಪಾತ್ರಧಾರಿಯೂ ನಮ್ಮ ಅಕ್ಕ-ಪಕ್ಕದಲ್ಲೇ ಇರುವಂತೆ ಅಥವಾ ವಠಾರವೊಂದರ ಸಹವರ್ತಿಗಳಂತೆ-ಸಾಮಾನ್ಯರಂತೆ ಕಾಣುತ್ತಾರೆ.

ಇವರೆಲ್ಲರೂ ಅಭಿನಯಕ್ಕಿಂತ ತಮ್ಮ ಮ್ಯಾನರಿಸಂ ಮೂಲಕವೇ ಪ್ರೇಕ್ಷಕರು ಕುರ್ಚಿಗೆ ಅಂಟಿಕೊಳ್ಳು ವಂತೆ ಮಾಡುತ್ತಾರೆ. ಪಾತ್ರದ ಪ್ರಸ್ತುತಿಯಲ್ಲಿ ಒಬ್ಬರು ಇನ್ನೊಬ್ಬರನ್ನು ಮೀರಿಸಿರುವುದು ಇಲ್ಲಿನ ಒಂದು ವಿಶೇಷ. ಯಾರನ್ನೂ ಅತಿರೇಕವಾಗಿ ಹೈಲೈಟ್ ಮಾಡಿಲ್ಲವಾದರೂ, ರವಿಯಣ್ಣ ಪಾತ್ರಧಾರಿ ಗಮನ ಸೆಳೆಯುತ್ತಾರೆ ಹಾಗೂ ಎಲ್ಲರ ಮೆಚ್ಚುಗೆಯನ್ನು ಗಳಿಸುತ್ತಾರೆ.

ರವಿಯಣ್ಣ ಪಾತ್ರಧಾರಿಯ ‘ಎದ್ದಾಳು’ ಪರ್ಸನಾಲಿಟಿ, ಗಾಂಭೀರ್ಯ, ಮ್ಯಾನರಿಸಂ, ಸ್ಕೂಟರ್ ಚಲಾಯಿಸುವ ಪರಿ, ಡೈಲಾಗ್ ಡೆಲಿವರಿ ಶೈಲಿ, ಚಿತ್ರದ ಕೊನೆಯಲ್ಲಿ ಬರುವ ಅವರ ರೊಮಾನ್ಸ್ ಅನ್ನು ಪ್ರೇಕ್ಷಕರು ಬಹುಕಾಲ ನೆನಪಿಡುತ್ತಾರೆ. ಹಾಗೆಯೇ ಊರಿನ ಸಮಿತಿಯ ಅಧ್ಯಕ್ಷನಾಗಿ ರವಿಯಣ್ಣನಿಗೆ ಎಲ್ಲಾ ಜವಾಬ್ದಾರಿ ಹೊರಿಸುವ ರಾಮದಾಸ ಮಿಮಿಯವರ ಅದ್ಭುತ ಕನ್ನಡ ಭಾಷಣ ಕಿವಿಯಲ್ಲಿ ಗುನುಗುತ್ತದೆ ಮತ್ತು ಕಣ್ಣಿಗೆ ಅಮರಿಕೊಳ್ಳುತ್ತದೆ.

“ರವಿಯಣ್ಣನಿಗೆ ಎಲ್ಲಾ ಗೊತ್ತು, ಅವರೇ ಎಲ್ಲಾ ನಿಭಾಯಿಸುತ್ತಾರೆ" ಎನ್ನುವ ಅಧ್ಯಕ್ಷನ ಮಾತು ನೈಜತೆಗೆ ಹಿಡಿದ ಕನ್ನಡಿ. ಇಂದಿಗೂ ಈ ಮಾತು ಬಹುತೇಕ ಹಳ್ಳಿಗಳಲ್ಲಿ ಸದಾ ಕೇಳುತ್ತದೆ. ಅಂದರೆ, ‘ನಮ್ಮ ಪಟೇಲರು, ಹೆಗಡೆಯವರು, ಭಟ್ಟರು, ನಾಯಕರು, ಗೌಡರು, ಪಾಟೀಲರು, ದೇಶಪಾಂಡೆ ಯವರು ಹೇಳಿದಂತೆ’ ಎನ್ನುವ ಪರಿಪಾಠವನ್ನು ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಕಾಣಬಹುದು.

‘ಸು ಫ್ರಮ್ ಸೋ’ ಅನ್ನು ‘ಹಾಸ್ಯಚಿತ್ರ’ ಎಂಬುದಾಗಿ ಪ್ರಚಾರ ಮಾಡಿದರೂ, ಇದು ನೂರಕ್ಕೆ ನೂರರಷ್ಟು ಹಾಸ್ಯಚಿತ್ರವಲ್ಲ. ಚಿತ್ರವಿಡೀ ಕರಾವಳಿ ಭಾಗದ ಭಾಷೆಯಿರುವುದರಿಂದ ಅದನ್ನು ಅನುಸರಿಸಲು ಸಾಧ್ಯವಾಗದವರಿಗೆ ಸ್ವಲ್ಪ ಗೊಂದಲವಾಗಬಹುದು, ಅಷ್ಟೇ. “ಬಂದರೋ ಬಂದರು ಭಾವ ಬಂದರು..." ಎಂಬುದು ಈ ಚಿತ್ರದಲ್ಲಿನ ಏಕೈಕ ಹಾಡು. ಆದರೆ ಇದು ಚಿತ್ರದ ದೆಸೆಯನ್ನೇ ತಿರುಗಿಸಿಬಿಟ್ಟಿದೆ, ರಾಜ್ಯಾದ್ಯಂತ ಜನರು ಗುನುಗುವಂತೆ ಮಾಡಿದೆ.

ಇದು ಪಡ್ಡೆ ಹುಡುಗರ ನೆಚ್ಚಿನ ‘ಟೈಮ್ ಪಾಸ್’ ಹಾಡಾಗಿಬಿಟ್ಟಿದೆ. ಹಾಡುಗಳ ವಿಷಯದಲ್ಲಿ ‘ಮುಂಗಾರು ಮಳೆ’ ಮಾಡಿದ್ದ ಮೋಡಿಯನ್ನು, ‘ಸು ಫ್ರಮ್ ಸೋ’ ಚಿತ್ರವು ಇದೊಂದೇ ಹಾಡಿನಿಂದ ಮಾಡಿಬಿಟ್ಟಿದೆ. ಏಕೆಂದರೆ, ಇದು ಸುಮಧುರ ಹಾಡು ಅಲ್ಲದಿದ್ದರೂ ಜನರಿಗೆ ಮೆಚ್ಚುಗೆ ಆಗಿದೆ. ನರ್ಸರಿ ಹುಡುಗರು ಈ ಹಾಡನ್ನು ಹೇಳಿಕೊಂಡು ತಮಗಿಷ್ಟವಾದಂತೆ ಡಾನ್ಸ್ ಮಾಡುವುದನ್ನು ನೋಡಿದಾಗ, ಈ ಹಾಡಿನ ಜನಪ್ರಿಯತೆಯ ಮಟ್ಟ ಅರಿವಿಗೆ ಬರುತ್ತದೆ.

ರಾಜಕೀಯ ವಿಡಂಬನೆ ಮತ್ತು ಜೋಕುಗಳಿಗೂ ಈ ಹಾಡು ಧಾರಾಳವಾಗಿ ಬಳಕೆಯಾಗುತ್ತಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಯಥೇಚ್ಛವಾಗಿ ಬಳಸಿ ಮಜಾ ತೆಗೆದುಕೊಳ್ಳು ತ್ತಿದ್ದಾರೆ. ಕರ್ನಾಟಕದ ಕರಾವಳಿ ಭಾಗದ ಹಳ್ಳಿಯೊಂದರ ಬದುಕಿನ ವೈಖರಿ ಮತ್ತು ಸಂಸ್ಕೃತಿ ಯನ್ನು ಅನಾವರಣಗೊಳಿಸುವ ಒಂದು ಪ್ರಾಮಾಣಿಕ ಮತ್ತು ಸಾರ್ಥಕ ಪ್ರಯತ್ನವೇ ‘ಸು ಫ್ರಮ್ ಸೋ’ ಚಿತ್ರದ ರೂಪದಲ್ಲಿ ಕೆನೆಗಟ್ಟಿದೆ.

ಕಥೆಗೆ ಎಲ್ಲೂ ಅಪಚಾರವಾಗದಂತೆ ಎಚ್ಚರಿಕೆ ವಹಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಆರಂಭ ದಲ್ಲಿನ ಕುಡಿಯುವ ದೃಶ್ಯ ಹಾಗೂ ಅಂತ್ಯದ ಹೊಡೆದಾಟದ ದೃಶ್ಯವನ್ನು ಸ್ವಲ್ಪ ಕಡಿತಗೊಳಿಸ ಬಹುದಿತ್ತು ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ಕೇಳಿಬರುತ್ತಿದೆ. ಇಷ್ಟನ್ನು ಹೊರತುಪಡಿಸಿದರೆ ಒಂದಿಡೀ ಚಿತ್ರ ರಸದೌತಣವನ್ನೇ ನೀಡುತ್ತದೆ. ಚಿತ್ರರಂಗದ ‘ಕೆಲವು ಅನಿವಾರ್ಯತೆಗಳಿಗೆ’ ಬಲಿ ಯಾಗದೆಯೇ ನೈಜತೆಯನ್ನು ಕಾಪಾಡಿಕೊಂಡಿರುವುದು ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.

ವಿವಿಧ ಭಾಷೆಗಳಿಗೆ ಡಬ್ ಆಗುವ ಇಲ್ಲವೇ ರೀಮೇಕ್ ಆಗುವ ಭಾಗ್ಯವೂ ‘ಸು ಫ್ರಮ್‌ ಸೋ’ ಚಿತ್ರದ್ದು. “ಕರಾವಳಿ ಜನರು ಬ್ಯಾಂಕಿಂಗ್ ಮತ್ತು ಹೋಟೆಲ್ ಬಿಜಿನೆಸ್‌ನಲ್ಲಿ ಎತ್ತಿದ ಕೈ" ಎಂಬ ಮಾತು ಇದುವರೆಗೂ ಕೇಳಿಬರುತ್ತಿದ್ದುದುಂಟು; ಈಗ ಆ ಪಟ್ಟಿಗೆ ಚಿತ್ರರಂಗವೂ ಸೇರಿಕೊಂಡಿರುವುದು ಶ್ಲಾಘನೀಯ ಬೆಳವಣಿಗೆಯೇ ಸರಿ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)