Roopa Gururaj Column: ನಾವು ಕೊಡುವ ಅಮೂಲ್ಯ ಉಡುಗೊರೆ: ಸಮಯ
ಒಮ್ಮೆ ಯೋಚಿಸಿ ನೋಡಿ- ನಾವು ಎಷ್ಟೇ ಜವಾಬ್ದಾರಿ ಹೊತ್ತು ಕುಟುಂಬ ನಿರ್ವಹಣೆಗೆ ಕಷ್ಟ ಪಡುತ್ತಿದ್ದರೂ, ನಮ್ಮ ಮಕ್ಕಳಿಗೆ ಬಹಳ ಮುಖ್ಯವಾಗಿ ಕೊಡಬೇಕಾದದ್ದು ನಮ್ಮ ಸಮಯ ವನ್ನು. ಬಾಲ್ಯದಲ್ಲಿ ನಾವು ಅವರಿಗೆ ನೀಡಿದ ಸಮಯ ಮಾತ್ರ ಜೀವನದುದ್ದಕ್ಕೂ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಅದೆಷ್ಟೇ ಆಸ್ತಿಪಾಸ್ತಿ ಮಾಡಿದರೂ ತಂದೆ-ತಾಯಿಯರ ಪ್ರೀತಿ ಸಿಗದ ಮಕ್ಕಳು ಅನಾಥ ಭಾವದಲ್ಲಿ ಬಳಲುತ್ತಾರೆ
-
ಒಂದೊಳ್ಳೆ ಮಾತು
ಆ ಊರಿನಲ್ಲಿ ಒಂದು ಸರಕಾರಿ ಶಾಲೆ ಇತ್ತು. ಅಲ್ಲಿದ್ದ ಒಬ್ಬ ಶಿಕ್ಷಕಿ ಬಹಳ ಶ್ರದ್ಧೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಪ್ರತಿಯೊಂದು ಮಕ್ಕಳ ಮನಸ್ಸು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಪ್ರತಿ ತಿಂಗಳು ಆಯಾ ಮಕ್ಕಳ ಪೋಷಕ ರನ್ನು ಶಾಲೆಗೆ ಕರೆಸಿ ಸಭೆ ನಡೆಸಿ ಮಕ್ಕಳ ಓದು, ಆಟೋಟಗಳು, ಅಂಕಗಳು, ಹವ್ಯಾಸಗಳ ಕುರಿತು ಅವರ ಜತೆ ಚರ್ಚೆ ನಡೆಸುತ್ತಿದ್ದರು. ಸಭೆ ನಿಗದಿಪಡಿಸಿದ ದಿನ ಸಾಧಾರಣವಾಗಿ ಎಲ್ಲಾ ಮಕ್ಕಳ ಪೋಷಕರು ಬರುತ್ತಿದ್ದರು.
ಆದರೆ ಒಂದು ಮಗುವಿನ ತಂದೆ ಮಾತ್ರ ಎಂದೂ ಸಭೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕಿ, ಸಭೆಗೆ ಆ ಮಗುವಿನ ತಂದೆ ಬರಲೇಬೇಕೆಂದು ಕಡ್ಡಾಯ ಮಾಡಿದರು. ಆಗ ಆತ ಒಲ್ಲದ ಮನಸ್ಸಿನಿಂದ ಸಭೆಗೆ ಬಂದರು. ಸಭೆಗೆ ಬಂದಾಗಲೂ ಆತ ಶಿಕ್ಷಕಿಗೆ, “ನೀವು ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ಇಂದು ಬಂದಿದ್ದೇನೆ. ಬೇಗ ಹೇಳಿ ಏನು ವಿಷಯ?" ಎಂದು ಅವಸರಪಡಿಸಿದರು.
ಇದನ್ನೂ ಓದಿ: Roopa Gururaj Column: ಕಾಡುಜನಾಂಗದ ಮುಗ್ಧ ಬಾಲಕನ ಹಂಚಿ ತಿನ್ನುವ ಗುಣ
ಆಗ ಶಿಕ್ಷಕಿಯು ಮಾತನಾಡದೆ ಮಕ್ಕಳು ಬರೆದಿದ್ದ ಚಿತ್ರಗಳನ್ನು ಹುಡುಕಿ ಅವರ ಮಗಳು ಬರೆದಿದ್ದ ಚಿತ್ರವನ್ನು ತೆಗೆದು ಕೈಗೆ ಕೊಟ್ಟರು. ಚಿತ್ರದ ಶೀರ್ಷಿಕೆ- ‘ನನ್ನ ಮನೆ ಮತ್ತು ಮನೆ ಯಲ್ಲಿರುವವರು’. ಆ ತಂದೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರು. ಅವರ ಮಗಳು ತನಗೆ ತೋಚಿದಂತೆ, ಅಂಕುಡೊಂಕು ಗೆರೆಗಳಿಂದ ಚಿತ್ರವನ್ನು ಬರೆದಿದ್ದಳು.
ಚಿತ್ರದಲ್ಲಿ ಅವಳ ತಾಯಿ, ಅಣ್ಣ, ಅಜ್ಜಿ, ತಾತ ಹಾಗೂ ನಾಯಿಮರಿ ಎಲ್ಲಾ ಇದ್ದರು. ಆ ತಂದೆ ಬಹಳ ಕಸಿವಿಸಿಯಿಂದ ಮತ್ತೊಮ್ಮೆ ಚಿತ್ರವನ್ನು ದಿಟ್ಟಿಸಿ ನೋಡಿದರು. ಕಚಪಚ ಗೀಚಿದ ಗೆರೆಗಳ ಮಧ್ಯದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಅವರ ಚಿತ್ರ ಮಾತ್ರ ಕಾಣಲಿಲ್ಲ. ಆಗ ಶಿಕ್ಷಕಿಗೆ, “ಇದರಲ್ಲಿ ನನ್ನ ಕುಟುಂಬದ ಎಲ್ಲರೂ ಇದ್ದಾರೆ. ಆದರೆ ನನ್ನ ಮುದ್ದಿನ ಮಗಳು ನನ್ನನ್ನೇ ಬಿಟ್ಟಿದ್ದಾಳೆ, ಏಕೆ?" ಎಂದು ಕೇಳಿದರು.
ಆಗ ಶಿಕ್ಷಕಿ “ನಾನು ಸಹ ಇದೇ ಪ್ರಶ್ನೆಯನ್ನು ನಿಮ್ಮ ಮಗಳಿಗೆ ಕೇಳಿದೆ. ಆಗ ಆಕೆ, ‘ಟೀಚರ್ ನೀವು ಮನೆಯಲ್ಲಿ ಇರುವವರ ಬಗ್ಗೆ ಚಿತ್ರ ಬರೆಯಿರಿ ಎಂದು ಹೇಳಿದಿರಿ, ಆದರೆ ನಮ್ಮ ತಂದೆ ಯಾವಾಗಲೂ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ನಾನು ಅವರ ಚಿತ್ರ ಬರೆಯ ಲಿಲ್ಲ’ ಎಂದು ಹೇಳಿದಳು.
ಬಹುಶಃ ನೀವು ಮನೆಯಲ್ಲಿ ಹೆಚ್ಚು ಇರುವುದಿಲ್ಲ ಎಂದು ಕಾಣುತ್ತದೆ. ಆದ್ದರಿಂದ ನಿಮ್ಮ ಮಗಳ ಚಿತ್ರದಲ್ಲೂ ನೀವು ಬರಲಿಲ್ಲ" ಎಂದು ಹೇಳಿದರು. ಶಿಕ್ಷಕಿಯಿಂದ ಬಂದ ಈ ಮಾತು ಕೇಳಿ ಆ ಮಗುವಿನ ತಂದೆಗೆ ಹೊಟ್ಟೆಯ ಮೇಲೆ ಯಾರೋ ಗಟ್ಟಿಯಾಗಿ ಗುದ್ದಿದಂತಾಯಿತು, ಅವರ ಕರುಳೇ ಕಿತ್ತುಬಂದಂತಾಯಿತು. ಈ ಕ್ಷಣದವರೆಗೂ ಅವರು ‘ನನ್ನ ಕೆಲಸ, ನನ್ನ ಸಂಪಾದನೆ ಹೆಚ್ಚು’ ಎಂದುಕೊಂಡಿದ್ದರು.
ಆದರೆ ಅದು ಹೀಗಾಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. “ನಾನು ಮನೆಯಲ್ಲಿ ಹೆಚ್ಚು ಸಮಯ ಇರುತ್ತಿರಲಿಲ್ಲ ನಿಜ. ಆದರೆ ನಾನು ಈ ಮನೆಯವನೇ ಅಲ್ಲ ಎಂದು ನನ್ನ ಮಗಳು ತಿಳಿದುಕೊಳ್ಳುವಷ್ಟು ನಾನು ಮನೆಯಿಂದ ಹೊರಗಿರುತ್ತೇನೆಂದು ಇಂದು ನನ್ನ ಮಗಳಿಂದ ನನಗೆ ಗೊತ್ತಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ತಲೆ ತಗ್ಗಿಸಿದರು.
ಸ್ವಲ್ಪ ಹೊತ್ತಾದ ಮೇಲೆ, “ಇನ್ನು ಮುಂದೆ ನನ್ನ ವರ್ತನೆಯನ್ನು ಬದಲಾಯಿಸಿ ಕೊಳ್ಳುತ್ತೇನೆ. ನೀವು ಇಂದು ನನ್ನ ಕಣ್ಣು ತೆರೆಸಿದಿರಿ. ಇಷ್ಟು ಹಟತೊಟ್ಟು ನೀವು ನನ್ನನ್ನು ಶಾಲೆಗೆ ಕರೆಸದಿದ್ದಿದ್ದರೆ, ಈ ತಪ್ಪನ್ನು ನಾನು ಎಂದಿಗೂ ತಿದ್ದಿಕೊಳ್ಳಲು ಸಾಧ್ಯವಾಗುತ್ತಿರ ಲಿಲ್ಲ. ಇನ್ನು ಮುಂದೆ ಹೆಚ್ಚು ಸಮಯವನ್ನು ಕುಟುಂಬದತ್ತ ಕೊಡಲು ಪ್ರಯತ್ನಿಸುತ್ತೇನೆ" ಎಂದು ಶಿಕ್ಷಕಿಗೆ ಆಶ್ವಾಸನೆ ಕೊಟ್ಟು ಹೊರಟುಹೋದರು.
ಮುಂದೆ ಅದರಂತೆಯೇ ನಡೆದುಕೊಂಡರು. ಒಮ್ಮೆ ಯೋಚಿಸಿ ನೋಡಿ- ನಾವು ಎಷ್ಟೇ ಜವಾಬ್ದಾರಿ ಹೊತ್ತು ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದರೂ, ನಮ್ಮ ಮಕ್ಕಳಿಗೆ ಬಹಳ ಮುಖ್ಯವಾಗಿ ಕೊಡಬೇಕಾದದ್ದು ನಮ್ಮ ಸಮಯವನ್ನು. ಬಾಲ್ಯದಲ್ಲಿ ನಾವು ಅವರಿಗೆ ನೀಡಿದ ಸಮಯ ಮಾತ್ರ ಜೀವನದುದ್ದಕ್ಕೂ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಅದೆಷ್ಟೇ ಆಸ್ತಿಪಾಸ್ತಿ ಮಾಡಿದರೂ ತಂದೆ-ತಾಯಿಯರ ಪ್ರೀತಿ ಸಿಗದ ಮಕ್ಕಳು ಅನಾಥ ಭಾವದಲ್ಲಿ ಬಳಲುತ್ತಾರೆ. ನಮ್ಮ ಮಕ್ಕಳಿಗೆ ನಾವು ಕೊಡುವ ಅಮೂಲ್ಯ ಉಡುಗೊರೆ ಯೆಂದರೆ- ನಮ್ಮ ಸಮಯ ಮತ್ತು ಪ್ರೀತಿ...