ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎದೆಗೆ ಬಿದ್ದ ಅಕ್ಷರಕ್ಕೆ ಒಲಿದ ಪಂಪ ಪ್ರಶಸ್ತಿಯ ಫಲ!

ಸಾಹಿತ್ಯದ ತಾತ್ವಿಕ ನಡೆಗಳಲ್ಲಿ ಜೊತೆಯಾಗಿ ನುಡಿದಂತೆ ಕೇಳಿಸುತ್ತದೆ. ಭಾಷಿಕ ಸ್ವರೂಪ ದಲ್ಲಿ ಮಾತ್ರ ಭಿನ್ನ. ಕೆಲವು ತಾತ್ವಿಕತೆಗಳಲ್ಲಿ ಆ ಭಿನ್ನತೆಯನ್ನು ಗುರುತಿಸಬಹುದು. ಪಂಪ ಆದಿ ಪುರಾಣದಲ್ಲಿ ಪ್ರಭುತ್ವದೊಳಗಿದ್ದೇ ಪ್ರಭುತ್ವವನ್ನ ಪ್ರತಿಭಟಿಸುವ, ವಿರೋಧಿಸುವುದನ್ನು ‘ಪೆರರೀವುದೇಂ ಪೆರರಿಂದಮಪ್ಪುದೇಂ’ ಎಂಬುದನ್ನು ಕಲಿಸಿ ಕೊಡುತ್ತಾನೆ.

ಎದೆಗೆ ಬಿದ್ದ ಅಕ್ಷರಕ್ಕೆ ಒಲಿದ ಪಂಪ ಪ್ರಶಸ್ತಿಯ ಫಲ!

-

Profile
Ashok Nayak Apr 27, 2026 2:08 PM

ಪರಾಮರ್ಶೆ

ಡಾ.ಎಲ್ಲಪ್ಪ ಜಿ.ಬಾಗಲಕೋಟೆ

ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಸಾಲು ಬಸವಣ್ಣನವರದು. ಕೆಲವು ಪದಗಳನ್ನು ಪಲ್ಲಟಿಸಿ, ಬರೆದರೆ ‘ನುಡಿಯೊಳಗೂ ಮುತ್ತಿನ ನಡೆಯಂತಿರಬೇಕು’ ಎನ್ನುವ ಮಟ್ಟಿಗೆ ಬರೆಹ ಕಟ್ಟಿ ಬರೆಯುವ ‘ಮನೋ ಮಾಲೆಗಾರನ್’ ಎಂದರೆ ಅದು ದೇವನೂರು ಮಹಾದೇವ ಅವರು. ಕನ್ನಡಿಗರಿಂದ ದೇಮ, ಮಹಾದೇವಣ್ಣ, ಮಹಾದೇವ್ ಮಾಮ ಎಂದೆ ಆದರದ ಸಂಬೋಧನೆಗೆ ಪಾತ್ರರಾಗಿದ್ದಾರೆ. ಕನ್ನಡಿಗರ ಒಡಲಾಳದ ಲೇಖಕ.

ಗಮನಿಸಿ, ಕನ್ನಡದ ಬಹುತೇಕ ಕವಿ ಸಾಹಿತಿಗಳಿಗೆ ಮೂಲ ಹೆಸರು ಮತ್ತು ಕಾವ್ಯನಾಮಗಳು ಇರುವುದನ್ನು ಗಮನಿಸಬಹುದು. ಆದರೆ, ಇವರಿಗೆ ಕಾವ್ಯನಾಮವೆಂಬುದಿಲ್ಲ. ನಾಮವೇ ಕಾವ್ಯವಾಗಿ ಪ್ರಚಲಿತದಲ್ಲಿದೆ!

ಕನ್ನಡದ ಬರಹಗಾರರಲ್ಲಿ ಪ್ರಮುಖರಾದ ದೇವನೂರು ಮಹಾದೇವ ಅವರಿಗೆ ಈ ವರ್ಷದ ಪಂಪ ಪ್ರಶಸ್ತಿ ದೊರೆತಿದೆ.

ಪಂಪ ಮತ್ತು ಮಹಾದೇವರ ತಾತ್ವಿಕ ಅನುಸಂಧಾನ

ಪಂಪನಿಗೂ ಮತ್ತು ಮಹಾದೇವರಿಗೂ ಏನು ಸಂಬಂಧ? ಕೇವಲ ಪ್ರಶಸ್ತಿ ಸಂಬಂಧವೋ, ಕನ್ನಡದ ಲೇಖಕ ಎಂಬ ಕಾರಣವೋ ಆಗಿ ನೋಡಲಾಗುವುದಿಲ್ಲ. ಅದರ ಆಚೆಗೆ ಮೀರಿದ ಕಾವ್ಯ ಧೋರಣೆ ಮತ್ತು ತತ್ವದ ನಿಲುವು ಪರಸ್ಪರ ಸಾಮ್ಯತೆಗೆ ಒಳಗಾಗುತ್ತಾರೆ.

ಕಾವ್ಯದ ಪ್ರಜ್ಞೆ, ಬರಹದ ಚೌಕಟ್ಟು, ಹಾಗೂ ತಾತ್ವಿಕತೆ ದೇವನೂರರಲ್ಲಿ ಜೀವಿಸಿದ್ದಾರೆ. ಇವರಿಬ್ಬರ ಕಾಲದ ಅಂತರ ಬಹುದೂರ. ಒಬ್ಬರದು 10ನೇ ಶತಮಾನ. ಇನ್ನೊಬ್ಬರದು 21ನೇ ಶತಮಾನ. ಆದರೂ ಸಾಹಿತ್ಯ ಪ್ರಜ್ಞೆಯ ದರ್ಶನದಲ್ಲಿ ಬೆಸೆದುಕೊಳ್ಳುತ್ತಾರೆ.

ಇದನ್ನೂ ಓದಿ: R T Vittalmurthy Column: ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

‘ಮಾನವ ಜಾತಿ ತಾನೊಂದೇ ವಲಂ’ ಎನ್ನುವ ಪಂಪನ ಮಾತಿಗೂ, ‘ಸಂಬಂಜ ಅನ್ನೋದು ದೊಡ್ಡದು ಕಣಾ’ ಎನ್ನುವ ದೇವನೂರು ಮಹಾದೇವರ ಮಾತಿಗೂ, ಪಂಪನ ಜಾತಿ ಪ್ರಶ್ನೆ ಯನ್ನು ಮಾನವ ಕುಲ ಸಂಬಂಧದೊಂದಿಗೆ ವಿಸ್ತರಿಸುವ ಪ್ರಕ್ರಿಯೆಯಾಗಿ ಬೆಳೆದು ಬಂದಂತೆ ಕಾಣುತ್ತದೆ.

ಈ ಹಿಂದಿನ ವಿಮರ್ಶಕರು ಪಂಪನನ್ನು ಕುಮಾರವ್ಯಾಸನೊಂದಿಗೆ ಮುಖಾಮುಖಿಯಾಗಿ ವಿಮರ್ಶಿಸಿದ ಅನೇಕ ಪುಟಗಳ ಸಾಹಿತ್ಯವಿದೆ. ಆದರೆ ಈ ಕಾಲಮಾನದಲ್ಲಿ ಮಹಾದೇವ ರೊಟ್ಟಿಗೆ ಅದನ್ನು ಇಟ್ಟು ನೋಡಬೇಕಿದೆ. ಪಂಪ ಪ್ರಶಸ್ತಿಗೆ ನಿಜವಾದ ಅರ್ಥ ಸಿಕ್ಕಿದ್ದರೆ ಅದು ದೇವನೂರು ಮಹಾದೇವರ ಆಯ್ಕೆಯಲ್ಲಿ ಸಾರ್ಥಕತೆ ಇದೆ ಎನಿಸುತ್ತದೆ. ಹಾಗಂತ ಈ ಹಿಂದಿನವರೆಗೆ ಕೊಡ ಮಾಡಿದ ಪ್ರಶಸ್ತಿಯನ್ನು ಅಲ್ಲಗಳೆಯುತ್ತಿಲ್ಲ!

ಸಾಹಿತ್ಯದ ತಾತ್ವಿಕ ನಡೆಗಳಲ್ಲಿ ಜೊತೆಯಾಗಿ ನುಡಿದಂತೆ ಕೇಳಿಸುತ್ತದೆ. ಭಾಷಿಕ ಸ್ವರೂಪ ದಲ್ಲಿ ಮಾತ್ರ ಭಿನ್ನ. ಕೆಲವು ತಾತ್ವಿಕತೆಗಳಲ್ಲಿ ಆ ಭಿನ್ನತೆಯನ್ನು ಗುರುತಿಸಬಹುದು. ಪಂಪ ಆದಿಪುರಾಣದಲ್ಲಿ ಪ್ರಭುತ್ವದೊಳಗಿದ್ದೇ ಪ್ರಭುತ್ವವನ್ನ ಪ್ರತಿಭಟಿಸುವ, ವಿರೋಧಿಸುವು ದನ್ನು ‘ಪೆರರೀವುದೇಂ ಪೆರರಿಂದಮಪ್ಪುದೇಂ’ ಎಂಬುದನ್ನು ಕಲಿಸಿಕೊಡುತ್ತಾನೆ.

ಪ್ರಭುತ್ವಕ್ಕೆ ತಲೆಬಾಗದ ಸ್ವಂತಿಕೆ ಮತ್ತು ಸಾಹಿತ್ಯದ ಸ್ವಾತಂತ್ರ್ಯವನ್ನು ಹೇಳುವ ಈ ಗಡಸು ತನ ದೇವನೂರ ಮಹಾದೇವರಲ್ಲೂ ಹಾದು ಹೋಗುತ್ತದೆ. ಈ ಸಿದ್ಧಾಂತದ ಪಾಠ ದೇವನೂರರಿಗೂ ಪ್ರಭಾವಿಸಿದೆ. ಶಿಕ್ಷಣದಲ್ಲಿ ಬೋಧನಾ ಮಾಧ್ಯಮ ಕನ್ನಡ ಆಗುವರೆಗೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಾಗಲಿ, ಅದರಲ್ಲಿ ಭಾಗವಹಿಸುವುದಾಗಲಿ ಮಾಡುವು ದಿಲ್ಲ ಎಂಬ ಬದ್ಧತೆಯನ್ನು ಅವರು ಪ್ರರ್ಶಿಸಿದರು. ಈ ಸೈದ್ಧಾಂತಿಕ ನಿಲುವಿನಿಂದಾಗಿ ಅನಂತರ ನೃಪತುಂಗ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನಯವಾಗಿಯೇ ತಿರಸ್ಕರಿಸಿದರು.

ಆಡಂಬರವಿಲ್ಲದ ಬರಹಕ್ಕೆ ಅಪರಿಮಿತ ಪ್ರಭಾವ!

ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು ಎಂಬ ಮಾತಿದೆ. ಬರೆದದ್ದು ಕಡಿಮೆ ಎಂದರೆ ಕಡಿಮೆ! ಬೆರಳೆಣಿಕೆಗೆ ಸಿಗುತ್ತದೆ. ಪರಿಣಾಮ ಮಾತ್ರ ಅಗಾಧ. ಮಾತು, ಪಂಪನಂತೆ ಹಿತ ಮಿತವಾದರೂ ಅಪರಮಿತವಾದ ಪ್ರಭಾವ. ತಣ್ಣಗೆ ಉರಿಯುವ ಬತ್ತಿಯೊಳಗಿನ ಬೆಳಕಿನ ಬರೆಹ. ಆಡಂಬರವಿಲ್ಲ ಆತುರವಿಲ್ಲ. ಆಕ್ರೋಶವೂ ಇಲ್ಲ. ಸಂಕಟವೂ ಸಾವಧಾನದ ಬೆನ್ನೇರಿ ಬಾರನೆತ್ತುವ ಬರಹ. ಒಳಗೆ ಉರಿ ಹೊರಗೆ ಬೆಳಕು. ವೈಚಾರಿಕ ನೆಲೆಗಟ್ಟಿನ ಚೌಕಟ್ಟಿ ನೊಳಗೆ ಅನಾವರಣಗೊಳ್ಳುವ ದಲಿತ ಲೋಕದ ಜೀವಂತಿಕೆ ಆವರಿಸಿಕೊಳ್ಳುತ್ತದೆ. ಯಾರ ಜಪ್ತಿಗೂ ಸಿಗದ ನವಿಲುಗಳಂತೆ!

ತನ್ನೆದೆಗೆ ಬಿದ್ದ ಅಕ್ಷರದ ಭೂಮಿಗೆ ಇಂದಲ್ಲ ನಾಳೆ ಫಲ ಕೊಡುವ ಆಶಯ. ಇದು ಅವರ ಅಕ್ಷರ ಫಲ ಸಂಸ್ಕೃತಿಯ ಬಗೆಗಿರುವ ನಂಬಿಕೆ. ಎದೆಯ ಭೂಮಿ ಒಳಗೆ ಬಿತ್ತುವ ಅಕ್ಷರ ಬೀಜಗಳ ತಾಕತ್ತು!

ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಮತ್ತು ಲೋಹಿಯರಂತವರ ವಿಚಾರಧಾರೆಗಳು ಹದಗೊಂಡ ನೆಲ. ಇವರ ಕಾವ್ಯ ಕಣದೊಳಗೆ ಅಮಾಸ, ಕುರಿಯಯ್ಯ, ಚೆನ್ನ, ಕುಸುಮ ಬಾಲೆ, ಜ್ಯೋತ್ಯವ್ವ, ಸಾಕವ್ವ, ಅಕ್ಕಮಹಾದೇವಿ ಫಸಲಿನ ರಾಶಿ ಇದೆ.

ಬಡತನ, ಅಸ್ಪೃಶ್ಯತೆ, ಅಮಾನವೀಯತೆ ಮತ್ತು ಅಸಹಾಯಕತೆಗಳು ಸಮಾಜದ ವಿಕಲಾಂಗತೆಯನ್ನು ತೋರಿಸುತ್ತವೆ. ಕರುಣೆ, ಪ್ರೀತಿ ಮತ್ತು ಸಂಬಂಧಗಳ ಮೂಲಕ ಮನುಷ್ಯತ್ವವನ್ನು ಕಟ್ಟುವ ಒಳನೋಟಗಳು ಇಂದಿನ ಅಗತ್ಯವನ್ನು ಒತ್ತಿ ಹೇಳುತ್ತವೆ.

ಯಾವ ಜೀವಿಯು ತನ್ನಷ್ಟಕ್ಕೆ ತಾನಿಂಬ- ಸಮದೃಷ್ಟಿ ಮನುಷ್ಯ ಘೋರಂಧಾಕಾರದ ಕೂಪಗಳನ್ನು ಸೃಷ್ಟಿ ಮಾಡಿಕೊಂಡಿದ್ದಾನೆ. ಜಾತಿ, ಧರ್ಮ, ಲಿಂಗ, ವರ್ಣ, ವರ್ಗ ಇತ್ಯಾದಿ ಗಳು ಜಗತ್ತನ್ನು ತಲ್ಲಣಗೊಳಿಸುತ್ತಿವೆ. ಅಸಮಾನತೆ, ಅಸಮಾಧಾನಗಳನ್ನು ಹುಟ್ಟು ಹಾಕಿವೆ. ಆದರೆ ಮೂಲತಃ ಮನುಷ್ಯ ಜೀವಿ ಆಗಿಲ್ಲ.

ಪ್ರತಿಯೊಂದು ಜೀವಿಯೊಂದಿಗೆ ಸಮಾನಾಂತರ ಸಂವೇದನಾಶೀಲತೆ ಹೊಂದಿದ್ದಾನೆ. ಒಂದು ಪರಿಸರದಲ್ಲಿ ಉಸಿರಾಡುವ ಜೀವಿಯೊಂದಿಗೆ ಪರಸ್ಪರ ಸ್ಪಂದನೆಗೆ ಒಳಗಾಗುತ್ತಾನೆ. ಮಾನವ ಕುಲ ಒಂದು ಎಂಬ ಪಂಪನ ಹೇಳಿಕೆಯು ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ ಎಂಬ ದೇವನೂರರ ಮಾತಿಗೂ ಪರಸ್ಪರ ಸಂಬಂಧಗಳನ್ನು ಸಮೀಕರಿಸುವ ರ್ಥವನ್ನೇ ಹೇಳುತ್ತವೆ. ಅವರ ಬರೆಹದ ಫ್ರೇಮ್ ಯಾವುದು? ಫ್ರೇಮ್ ಯಾವುದು? ಅನ್ನುವುದಕ್ಕೆ ಎರಡು ಉದಾಹರಣೆಗಳನ್ನು ನೀಡಬಹುದು.

ಒಂದು, ಸಿದ್ದಲಿಂಗಯ್ಯನವರು ಹೇಳಿದ ಮನೆ ಮಂಚಮ್ಮನ ಕಥೆಯ ನಿರ್ವಚನ. ಎರಡು, ಅಶೋಕ್ ಪೈ ಅವರು ಹೇಳಿದ ಸಂಶೋಧನಾ ಸತ್ಯ. ಇವೆರಡೂ ಅವರ ಪ್ರಜ್ಞೆಯ ಧಾತು ಗಳನ್ನು ವಿಸ್ತರಿಸುತ್ತವೆ ಮತ್ತು ತಾತ್ವಿಕ ಚೌಕಟ್ಟನ್ನು ಅರ್ಥೈಸುತ್ತವೆ. ಮಂಚಮ್ಮ ಗ್ರಾಮ ದೇವತೆ. ಆ ಊರಿನ ಜನರೆ ಸೇರಿ ಆಕೆಗೊಂದು ಗುಡಿಮನೆಯನ್ನು ಕಟ್ಟುತ್ತಾರೆ.

ಅದು ಚಾವಣಿ ಮಟ್ಟಕ್ಕೆ ಬಂದಾಗ, ಆ ಮಂಚಮ್ಮದೇವಿ ಒಬ್ಬನಲ್ಲಿ ಆವಾಹಿಸಿಕೊಂಡು ಹೀಗೆ ಕೇಳುತ್ತಾಳೆ- ‘ಏನ್ ಮಾಡ್ತಾ ಇದ್ದೀರಾ ನನ್ನ ಮಕ್ಕಳ’? ಅಬ್ಬ, ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದ. ‘ನಿಮಗೆಲ್ಲ ಮನೆ ಇದೆಯಾ’ ಎಂದು ಮರು ಪ್ರಶ್ನೆ ಹಾಕಿದಳು. ಅದರೊಳಗೊಬ್ಬ ‘ನನಗಿಲ್ಲ ತಾಯಿ’ ಅಂದ.

‘ಹಾಗಾದರೆ ನಿಮಗೆಲ್ಲರಿಗೂ ಮನೆ ಆಗೋವರೆಗೂ ನನಗೂ ಮನೆ ಬೇಡ’ ಎಂದು ನಿರಾ ಕರಿಸುತ್ತಾಳೆ. ಈಗಲೂ ಆಕೆ ಚಾವಣಿ ಇಲ್ಲದ ಗುಡಿಯಲ್ಲಿ ಪೂಜಿತಳಾಗುತ್ತಿದ್ದಾಳೆ. ‘ಇಂತಹ ಚಾವಣಿ ಇಲ್ಲದ ಗುಡಿಯಲ್ಲಿ ಬುದ್ಧನ ಕಾರುಣ್ಯ ಇಟ್ಟರೆ ಅದೇ ನನ್ನ ದೇವರಾಗುತ್ತದೆ’ ಎನ್ನುತ್ತಾರೆ ದೇವನೂರು ಮಹಾದೇವ ಅವರು. ದೇವರು ಮತ್ತು ಮನುಷ್ಯ ಸಂಬಂಧಗಳ ನಡುವೆ ಅಂತರ ಗಟ್ಟಿ ಆಗಿರುವಾಗ ಇಂತಹ ಸಮಾನತೆಯ ಸೂಕ್ಷ್ಮತೆಯನ್ನು ಸಮಾಜದ ಮುಂದೆ ಇಡುತ್ತಾರೆ.

ಅಶೋಕ್ ಪೈ ಅವರು ಮನಸ್ಸಿನ ಮೇಲೆ ನಡೆದ ಸಂಶೋಧನೆ ಕುರಿತದ್ದು. ಎರಡು ಕೊಠಡಿ ಗಳಿವೆ, ಅದರಲ್ಲಿ ಜನರಿದ್ದಾರೆ. ಒಂದು ಕೊಠಡಿಯಲ್ಲಿ ಟಿವಿ ಇದೆ ಇನ್ನೊಂದರಲ್ಲಿ ಇಲ್ಲ. ಟಿವಿಯಲ್ಲಿ ಬರುವ ದುಃಖ, ಸಂತೋಷದ ಅನುಭವಗಳು ಆ ಕೊಠಡಿಗೆ ಮಾತ್ರ ಸೀಮಿತ ವಾಗುವುದಿಲ್ಲ. ಪಕ್ಕದ ಕೊಠಡಿಯಲ್ಲಿನ ಟಿವಿ ನೋಡದವರ ಮೇಲೂ ಕೂಡ ಪ್ರಭಾವ ಉಂಟಾಗುತ್ತದೆಯಂತೆ. ಈ ಸತ್ಯ ಏನನ್ನು ಹೇಳುತ್ತದೆ ಎಂದರೆ, ಒಂದು ಪರಿಸರದಲ್ಲಿ ಉಸಿರಾಡುವ ಜೀವಿಗಳು ತಮ್ಮ ದುಃಖ ದುಮ್ಮಾನಗಳು ಪರಸ್ಪರ ಕಂಪನ, ಅನುಕಂಪನದ ಮೂಲಕ ಭಾಗಿಯಾಗುತ್ತವೆ.

ಹಾಗಾಗಿ ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ. ಜೀವಸಂಕುಲವೆಲ್ಲ ಒಂದೇ ಎನ್ನುವುದು ನಿಸರ್ಗ ಸತ್ಯ. ಹೀಗಿರುವ ಮನುಷ್ಯ ಬೇರೆ, ಮನುಷ್ಯ ಜೀವಿ ಬೇರೆ ಆಗಿ ಬಿಟ್ಟಿದ್ದಾನೆ. ಮನುಷ್ಯ ಜೀವಿ ‘ತನ್ನಂತೆ ಇತರರನ್ನು ಕುರಿತು’ ಯೋಚನೆ ಮಾಡುತ್ತಾನೆ. ಆದರೆ ಮನುಷ್ಯ ಮಾತ್ರ ‘ತನ್ನನ್ನು, ತನ್ನ ಬಗ್ಗೆ’ ಮಾತ್ರ ಯೋಚಿಸುತ್ತಾನೆ. ಇದರಿಂದ ಮನುಷ್ಯನ ಸೋಲಿಗೆ ಸ್ಪಷ್ಟನೆ ಸಿಕ್ಕಂತಾಗುತ್ತದೆ ಎನ್ನುವ ಜೀವ ಪರವಾದ ಸಾಹಿತಿಗೆ ಸಿಕ್ಕ ಈ ಪ್ರಶಸ್ತಿಯ ಮೌಲ್ಯವೂ ಹೆಚ್ಚಿದೆ.