Vinayaka M Bhat Column: ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ
ಹೈಕಮಾಂಡ್ ನಲ್ಲಿ ಶಿವಕುಮಾರ್ ಅವರಿಗಿರುವ ಖದರು ಅದು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಎಂಟೊಂಬತ್ತು ತಿಂಗಳುಗಳು ಕಳೆದಿರಲಿಲ್ಲ, ಗಂಭೀರವಾದ ಆರೋಪವನ್ನೆದುರಿಸುತ್ತಿರುವ, ಜೈಲು ವಾಸ ಮಾಡಿಬಂದ ಶಿವಕುಮಾರ್ ಅವರನ್ನು ಎಲ್ಲರಿಗೂ ಅಚ್ಚರಿಯಾಗುವಂತೆ ರಾಜ್ಯಾಧ್ಯಕ್ಷರ ಹುದ್ದೆಗೆ ಸೋನಿಯಾ ಗಾಂಧಿ ನೇಮಕ ಮಾಡಿದ್ದರು.
-
ವಿದ್ಯಮಾನ
ಒಂದು ದೃಷ್ಟಿಯಿಂದ 2019 ಡಿ.ಕೆ ಶಿವಕುಮಾರ್ ಅವರಿಗೆ ಕರಾಳ ವರ್ಷವೂ ಹೌದು, 2026ರಲ್ಲಿ ಅವರು ಎಲ್ಲಿದಾರೋ ಅಲ್ಲಿರಲಿಕ್ಕೆ ಪ್ರೇರಣೆಯನ್ನೊದಗಿಸಿದ ವರ್ಷವೂ ಹೌದು. 2019ರ ಸಪ್ಟೆಂಬರ್ ಮೂರರಿಂದ ಅಕ್ಟೋಬರ್ 23ರವರೆಗೆ, ಅಕ್ರಮ ಹಣ ವರ್ಗಾವಣೆಯ ಪ್ರಕರಣದಲ್ಲಿ ಡಿಕೆ ತಿಹಾರ್ ಜೈಲಿನಲ್ಲಿ ಕಾಲಕಳೆಯುವಂತಾಗಿತ್ತು. ಆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ತಿಹಾರ್ ಜೈಲಿಗೆ ಭೇಟಿಯಿತ್ತು ಅವರಿಗೆ ಧೈರ್ಯ ಹೇಳಿದ್ದರು.
ಶಿವಕುಮಾರ್ ಅವರು ಜೈಲಿನಿಂದ ಬಿಡುಗಡೆ ಯಾದಾಗ, ಮನೆಗೆ ಬಂದು ಮನೆಯವರ ಮುಖ ನೋಡುವುದಕ್ಕಿಂತ ಮುಂಚೆ, ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ನಂತರ ಬೆಂಗಳೂರಿಗೆ ಮರಳಿದ್ದನ್ನು ನೆನಪಿಸಿಕೊಳ್ಳಬಹದು. ಬೆಂಗಳೂರಿಗೆ ಬಂದ ಮೇಲೆ ನಡೆದ ಮೆರವಣಿಗೆ, ವಿಜಯೋ ತ್ಸವ ಇವೆಲ್ಲ ನಮಗೆ ಗೊತ್ತೇ ಇದೆ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಈ ಕಷ್ಟದ ಸಮಯದಲ್ಲಿ ಶಿವಕುಮಾರ್ ತೋರಿಸಿದ ಧೀರತನ ಹಾಗೂ ಸೋನಿಯಾ ಗಾಂಧಿಯವರ ಮಾನವೀಯ ನಡೆ, ಪಕ್ಷದ ಅಗ್ರಮಾನ್ಯ ನೇತಾರೆ ಯಾಗಿದ್ದ ಅವರು, ಭ್ರಷ್ಟಾಚಾರದ ಆರೋಪದಲ್ಲಿ ಜೈಲಿನಲ್ಲಿದ್ದವರನ್ನು ಹೋಗಿ ಭೇಟಿ ಮಾಡು ವುದು ಎಂದರೆ ಅದು ತಮ್ಮ ಹಾಗೂ ಪಕ್ಷದ ವರ್ಚಸ್ಸಿಗೆ ಹಾನಿಯಾಗಬಹುದಾದ ಅಪಾಯದ ಹೆಜ್ಜೆಯೇ ಆಗಿತ್ತು. ಆದರೆ ಅವರು ಪಕ್ಷನಿಷ್ಠ ಶಿವಕುಮಾರ್ ಅವರನ್ನು ಜೈಲಿಗೆ ಹೋಗಿ ಸಂತೈಸುವ ಧೈರ್ಯ ತೋರಿಸಿದ್ದನ್ನು ಮರೆಯುವ ಹಾಗಿಲ್ಲ.
ಹೈಕಮಾಂಡ್ ನಲ್ಲಿ ಶಿವಕುಮಾರ್ ಅವರಿಗಿರುವ ಖದರು ಅದು. ಜೈಲಿನಿಂದ ಬಿಡುಗಡೆಯಾಗಿ ಇನ್ನೂ ಎಂಟೊಂಬತ್ತು ತಿಂಗಳುಗಳು ಕಳೆದಿರಲಿಲ್ಲ, ಗಂಭೀರವಾದ ಆರೋಪವನ್ನೆದುರಿಸುತ್ತಿರುವ, ಜೈಲು ವಾಸ ಮಾಡಿಬಂದ ಶಿವಕುಮಾರ್ ಅವರನ್ನು ಎಲ್ಲರಿಗೂ ಅಚ್ಚರಿಯಾಗುವಂತೆ ರಾಜ್ಯಾ ಧ್ಯಕ್ಷರ ಹುದ್ದೆಗೆ ಸೋನಿಯಾ ಗಾಂಧಿ ನೇಮಕ ಮಾಡಿದ್ದರು.
ಇದನ್ನೂ ಓದಿ: Vinayaka M Bhat Column: ವೇತನ ಪರಿಷ್ಕರಣೆ, ಶಿವರಾತ್ರಿಯ ಮನೆಗೆ ಏಕಾದಶಿ ಬಂದಂತೆ !
ಜೈಲು ಅನುಭವಿಸಿ ಬಂದವರೊಬ್ಬರನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡುವುದೆಂದರೆ ಅದು ಸಣ್ಣ ನಿರ್ಧಾರವಲ್ಲ, ನ್ಯಾಯಾಲಯದ ದೃಷ್ಟಿಯಲ್ಲಿ ಅವರೊಬ್ಬ ಆರೋಪಿ/ಆಪಾದಿತನೇ ಸರಿ, ಆದರೆ ಜನರ ಕಣ್ಣಲ್ಲಿ ಜೈಲಿನಿಂದ ಬಂದವ ಎಂದ ಮೇಲೆ ಅಪರಾಧಿಯೇ ಆಗಿ ಬಿಡುತ್ತಾನೆ. ಆತನ ಕುರಿತು ನಕಾರಾತ್ಮಕ ಅಭಿಪ್ರಾಯವೇ ಸ್ವಾಭಾವಿಕವಾಗಿ ಜನರ ಮನಸ್ಸಿನಲ್ಲಿ ಉಳಿದುಬಿಡುತ್ತದೆ. ಆ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಿ ಚುನಾವಣೆಯನ್ನೆದುರಿಸುವುದು ಕಷ್ಟವಾಗಿಬಿಡುತ್ತದೆ.
ಆದರೆ, ಶಿವಕುಮಾರ ಅವರ ಪಕ್ಷ ನಿಷ್ಠೆಯನ್ನು ಅಂದು ಸೋನಿಯಾ ಗೌರವಿಸಿದ್ದರು. ಸೋನಿಯಾ ಗಾಂಧಿಯವರು ಇಟ್ಟ ವಿಶ್ವಾಸ ಹುಸಿಯಾಗಲಿಲ್ಲ, ಎಲ್ಲ ನಕಾರಾತ್ಮಕತೆಯನ್ನೂ ದಕ್ಕಿಸಿಕೊಂಡು, ಡಿಕೆ ಏಕಾಂಗಿಯಾಗಿ ಪಕ್ಷವನ್ನು ಕರ್ನಾಟಕದಲ್ಲಿ ಅಭೂತಪೂರ್ವವಾಗಿ ಸಂಘಟಿಸಿ ಅಧಿಕಾರಕ್ಕೆ ತಂದು ನಿಲ್ಲಿಸಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸೋತಿತ್ತು, ಈಗ ತನ್ನ ನಾಯಕತ್ವದಲ್ಲಿ ಪ್ರಚಂಡ ಬಹುಮತದಿಂದ ಗೆದ್ಶಾಗಿದೆ, ಹಾಗಾಗಿ ಮುಖ್ಯಮಂತ್ರಿ ಯಾಗುವ ತನ್ನ ಬಹುದಿನದ ಕನಸಿಗೆ ಸಿದ್ದರಾಮಯ್ಯ ಕಾಲ್ತೊಡಕಾಗಲಾರರು ಎಂದುಕೊಂಡಿದ್ದ ಶಿವಕುಮಾರ್ ಅವರಿಗೆ, ಮುಖ್ಯಮಂತ್ರಿಯಾಗಲು ಮೂರು ವರ್ಷ ಕಾಯ ಬೇಕಾಯಿತು ಪಾಪ! ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಂಪನ್ಮೂಲ ನಿಯೋಜನೆ ಯೂ ಸೇರಿ ಎಲ್ಲ ತಂತ್ರಗಾರಿಕೆಯೂ ಪ್ರಮುಖವಾಗಿ ಪಕ್ಷಾಧ್ಯಕ್ಷ ಡಿ.ಕೆ.ಶಿವಕುಮಾರ ಅವರದ್ದೇ ಆಗಿತ್ತಾದರೂ, ದುರದೃಷ್ಟಾವಶಾತ್ ಮುಖ್ಯಮಂತ್ರಿಯ ಆಯ್ಕೆಯ ಸಂದರ್ಭದಲ್ಲಿ ಹೈಕಮಾಂಡ್ ಹಾಗೂ ಬಹುತೇಕ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದು ಮಾತ್ರ ಸಿದ್ದರಾಮಯ್ಯನವರ ನಾಯಕತ್ವ ದಲ್ಲಿಯೇ ಆಗಿತ್ತು. ಈಗಲೂ ಶಾಸಕರ ಬೆಂಬಲದಿಂದ ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗಿದ್ದಲ್ಲ, ಅವರ ಪಕ್ಷನಿಷ್ಠೆಗೆ ಹೈಕಮಾಂಡು ನೀಡಿದ ಮರ್ಯಾದೆಯಿಂದಾಗಿ ಅವರು ಮುಖ್ಯಮಂತ್ರಿ ಯಾಗಿದ್ದಾರೆ.
ಅದಲ್ಲದಿದ್ದರೆ, ಇವ್ತತ್ತಿಗೂ ಎಂಬತ್ತು ಪ್ರತಿಶತ ಶಾಸಕರ ವಿಶ್ವಾಸ ಸಿದ್ದರಾಮಯ್ಯನವರ ಮೇಲೆಯೇ ಇತ್ತು ಎನ್ನುವುದು ಅವರಿಗೂ ತಿಳಿದ ವಿಷಯವೇ ಆಗಿದೆ. ಹತ್ತೆಂಟು ಶಾಸಕರನ್ನು ಹೊರತು ಪಡಿಸಿದರೆ, ಸಿದ್ದರಾಮಯ್ಯನವರಿಂದ ಅಧಿಕಾರ ಹಸ್ತಾಂತರವಾಗುವ ವಿಷಯದಲ್ಲಿ ಡಿಕೆ ಪರ ಮಾತನಾಡಿದವರು ತೀರಾ ಕಡಿಮೆಯೇ ನೋಡಿ!
ಅಂತೂ, ಶಿವಕುಮಾರ್ ಅವರ ಬಹಳ ಕಾಲದ ಕನಸು ನನಸಾಯಿತು, ಜೊತೆಗೆ ಬಹಳ ವರ್ಷದ ನಂತರ ಮೂಲ ಕಾಂಗ್ರೆಸ್ಸಿಗನೊಬ್ಬ ಕರ್ನಾಟಕದ ಮುಖ್ಯಮಂತ್ರಿಯಾದಂತೆಯೂ ಆಯಿತು. ಸಿದ್ದರಾಮಯ್ಯನವರು 8 ವರ್ಷ ಮುಖ್ಯಮಂತ್ರಿಯಾಗಿದ್ದರ, ಅವರು ಕಾಂಗ್ರೆಸ್ಸಿಗರಾಗಿರಲಿಲ್ಲವೇನು? ಎಂದು ಕೇಳಿದರೆ, ವಲಸಿಗನೊಬ್ಬ ಕಾಂಗ್ರೆಸ್ಸಿನ ಕಡೆಯಿಂದ ಮುಖ್ಯಮಂತ್ರಿಯಾಗಿದ್ದು ಅಂತಲೇ ಹೇಳಬೇಕಾಗುತ್ತದೆ. ಆಗಲೂ ಮೂಲ ಕಾಂಗ್ರೆಸ್ಸಿಗರು ಅವರನ್ನು ಪೂರ್ತಿ ಕಾಂಗ್ರೆಸ್ಸಿಗ ಎಂದು ಒಪ್ಪಿಕೊಂಡಿರಲಿಲ್ಲ, ಈಗಲೂ ಒಪ್ಪಿಕೊಳ್ಳುವುದಿಲ್ಲ.
ಅವರೊಬ್ಬ ವಲಸಿಗನಾಗಿಯೇ ಇಷ್ಟು ವರ್ಷ ಅಲ್ಲಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಸಿದ್ದರಾಮ ಯ್ಯನವರಿಗಿದ್ದ ರಾಜಕೀಯ ಜಾಣ್ಮೆಯಿಂದ ಯಾರನ್ನು ಎಲ್ಲಿ ಇಡಬೇಕೋ ಅಲ್ಲಲ್ಲಿ ಇಟ್ಟು, ಪಕ್ಷವನ್ನೂ, ಸರಕಾರವನ್ನೂ ಸಂಭಾಳಿಸಿದರೇ ವಿನಃ, ಅದು ಸರ್ವಸಮ್ಮತವಾಗಿ ಒಪ್ಪಿತವಾದದ್ದಾ ಗಿರಲಿಲ್ಲ ಎನ್ನುವ ಸತ್ಯವನ್ನು ಎಲ್ಲರೂ ಒಪ್ಪಲೇ ಬೇಕು.
ಆಗ ಕಾಂಗ್ರೆಸ್ಸಿಗೆ ಒಬ್ಬ ಪ್ರಬಲ ಜಾತಿಯ ಬೆಂಬಲವಿರುವ, ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ವರ್ಚಸ್ವೀ ನಾಯಕನ ಅಗತ್ಯವಿತ್ತು, ಒಂದು ಬಾರಿಯಾದರೂ ಮುಖ್ಯಮಂತ್ರಿ ಆಗಲೇ ಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದ ಸಿದ್ದರಾಮಯ್ಯನವರಿಗೆ ಜಾತ್ಯತೀತ ಸಿದ್ಧಾಂತವನ್ನು ನಂಬುವ ರಾಷ್ಟ್ರೀಯ ಪಕ್ಷವೊಂದರ ಆಶ್ರಯ ಬೇಕಾಗಿತ್ತು, ಎರಡೂ ಕೂಡಿ ಬಂದಿತ್ತು ಅಷ್ಟೆ. ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಅದೊಂದು ರಾಜಕೀಯದ ಅನಿವಾರ್ಯತೆ ಯಾಗಿತ್ತು.
ಇರಲಿ, ಮರಳಿ ನೂತನ ಮುಖ್ಯಮಂತ್ರಿಯ ವಿಷಯಕ್ಕೆ ಬರೋಣ. ಪ್ರಯತ್ನದಿಂದಲೋ ಅಥವಾ ಪ್ರಾರ್ಥನೆಯಿಂದಲೋ, ಕರ್ನಾಟಕಕ್ಕೆ ಒಬ್ಬ ಧಾರ್ಮಿಕ, ಸನಾತನಿ, ಆಸ್ತಿಕ ಮಖ್ಯಮಂತ್ರಿ ದೊರೆ ತಿದ್ದಂತೂ ನಿಜ. ಶಿವಕುಮಾರ್ ಅವರು ಕರ್ಣಾಟಕ ಕಂಡ ಹಿಂದಿನ ಎಲ್ಲ ಮುಖ್ಯಮಂತ್ರಿ ಗಳಿಗಿಂತ, ಅಷ್ಟೇ ಏಕೆ, ಬಿಜೆಪಿಯ ಮುಖ್ಯಮಂತ್ರಿಗಳಿಗಿಂತ ಹೆಚ್ಚು ಧಾರ್ಮಿಕರು ಎನ್ನಲು ಯಾವುದೇ ಹಿಂಜರಿಕೆ ಇಲ್ಲ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ತಮ್ಮ ಎರಡನೇ ಅವಧಿಯಲ್ಲಿ ಹೆಚ್ಚು ಆಸ್ತಿಕ ಮನೋಭಾವನೆಯನ್ನು ಹೊಂದಿದಂತೆ ಕಂಡುಬಂದಿತ್ತು ಬಿಡಿ. ಅದು ಅವರಿಗೆ ಅನಿವಾರ್ಯವೂ ಆಗಿತ್ತು ಅಂತ ಕಾಣುತ್ತದೆ. ಈ ಸಲ ಅವರು ಟಿಪ್ಪುವಿನ ಹೆಸರನ್ನೇ ಎತ್ತಲಿಲ್ಲ, ಸಾಧ್ಯವಾದಾಗಲೆಲ್ಲ ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲಿಲ್ಲ.
ಆದರೆ ಡಿಕೆ ಹಾಗಲ್ಲ, ಯಾವಾಗಲೂ ಆಸ್ತಿಕರಾಗಿಯೇ ಇದ್ದವರು. ಧಾರ್ಮಿಕತೆಯ ವಿಷಯದಲ್ಲಿ ಇತರ ಕಾಂಗ್ರೆಸ್ಸಿಗರಂತೆ ಇವರಿಗೆ ಢೋಂಗಿತನವಿಲ್ಲ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಪಕ್ಷದ ಹಿರಿಯರೆಲ್ಲ ಮಹಾಕುಂಭ ಸ್ನಾನದ ಕುರಿತು ಕೀಳಾಗಿ ಮಾತನಾಡುತ್ತಿದ್ದರೂ ತಲೆಕೆಡಿಸಿಕೊಳ್ಳದೇ, ಕುಟುಂಬ ಸಮೇತ ಪ್ರಯಾಗ್ ರಾಜ್‌ನ ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡುವ ಅವಕಾಶವನ್ನು ಡಿಕೆ ತಪ್ಪಿಸಿಕೊಂಡವರಲ್ಲ.
ಉಜ್ಜಯನಿಯ ಮಹಾಕಾಲನ ಸನ್ನಿಧಿಗೆ ಹೋಗದೇ ಬಿಡಲಿಲ್ಲ. ಆಸ್ಸಾಮಿನ ಚುನಾವಣಾ ಜವಾಬ್ದಾರಿ ಇರುವಾಗ, ಪ್ರಿಯಾಂಕಾ ಗಾಂಧಿಯವರನ್ನೂ ಜೊತೆಗೆ ಕರೆದುಕೊಂಡು ನೀಲಾಚಲದ ಶಕ್ತಿ ಪೀಠ ಕಾಮಾಕ್ಯಾ ದೇವಿಯ ದರ್ಶನ ಮಾಡಿಬಂದವರು. ಕೊಯಂಬತ್ತೂರಿನ ಸದ್ಗುರು ಆಶ್ರಮಕ್ಕೆ ತೆರಳಿ ಅಮಿತ್ ಶಾ ಪಕ್ಕಕ್ಕೆ ಕುಳಿತು ಬಂದು ಟೀಕೆ ಎದುರಿಸಿದರು.
ಪೂಜೆ ಪುನಸ್ಕಾರಗಳೆಲ್ಲ ಮೂಢನಂಬಿಕೆಗಳು ಎನ್ನುವ ಪಕ್ಷದಲ್ಲಿದ್ದರೂ, ತಾವು ನಂಬಿದ ಗುರುಗಳ ಭಾವಚಿತ್ರಕ್ಕೆ ಪ್ರಮಾಣವಚನ ವೇದಿಕೆಯ ಮೆಲೂ ಜಾಗ ಮಾಡಿಕೊಟ್ಟು ಗೌರವಿಸಿದವರು. ಆ ವೇದಿಕೆಯ ಮೇಲೆ ಖರ್ಗೆ, ಸಿದ್ದರಾಮಯ್ಯನವರ ಜೊತೆಗೆ ಸ್ವತಃ ರಾಹುಲ್ ಗಾಂಧಿಯವರೂ ಇದ್ದರು, ಆದರೆ ಡಿಕೆ ಮಾತ್ರ ಕ್ಯಾರೇ ಎನ್ನಲಿಲ್ಲ.
ತಮ್ಮ ನಂಬಿಕೆ ತಮ್ಮದು ಎನ್ನುವ ರೀತಿಯಿಂದಲೇ ನಿರ್ಭೀತಿಯಿಂದ ಅಜ್ಜಯ್ಯನವರ ಕುರಿತಾದ ತಮ್ಮ ಭಕ್ತಿಯ ಪ್ರದರ್ಶನ ಮಾಡಿದರು. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ’They are my brothers’ ಅಂದಿದ್ದು ಬಿಟ್ಟರೆ, ಡಿಕೆ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿದ್ದು ಸ್ವಲ್ಪ ಕಮ್ಮಿಯೇ ಅಂತ ಹೇಳಬಹುದು. ಇದನ್ನೆಲ್ಲ ನೋಡುವಾಗ, ಡಿ.ಕೆ ಶಿವಕುಮಾರ್ ಅವರಷ್ಟು ದೈವ ಭಕ್ತಿ ತೋರು ವವರು ಕರ್ನಾಟಕ ಬಿಜೆಪಿಯಲ್ಲೂ ಯಾರೂ ಇಲ್ಲವೆನ್ನಬಹುದು.
ಸದಾ ಹಿಂದುತ್ವದ ಮಂತ್ರವನ್ನು ಜಪಿಸುತ್ತಿದ್ದರೂ, ಕಾಂಗ್ರೆಸ್ಸಿಗರಿಗಿಂತ ಬಿಜೆಪಿಗರೇ ಇತ್ತೀಚೆಗೆ ಹೆಚ್ಚು ಜಾತ್ಯತೀತರಾಗಿ ಕಂಡುಬಿಡುತ್ತಾರೆ. ಡಿ.ಕೆ.ಶಿವಕುಮಾರ್ ಅವರ ಈ ದೈವ ಭಕ್ತಿ ಬಿಜೆಪಿಗರ ತಲೆಕೆಡಿಸಿ ದ್ದಂತೂ ಸತ್ಯ. ದೇವರು, ದೇವಸ್ಥಾನ, ಪೂಜೆಪುನಸ್ಕಾರಗಳು ಕೇವಲ ತಮ್ಮ ಬತ್ತಳಿಕೆಯ ಬಾಣ ವೆಂದುಕೊಂಡಿದ್ದ ಬಿಜೆಪಿಗರಿಗೆ ದೈವಭಕ್ತ ಡಿ.ಕೆ.ಶಿವಕುಮಾರರು ಮಗ್ಗುಲ ಮುಳ್ಳಾಗಿ ಕಂಡರೆ ಅಚ್ಚರಿಯಿಲ್ಲ. ಧಾರ್ಮಿಕ ನಡಾವಳಿ, ಸನಾತನಕ್ಕೆ ಅವರು ನೀಡುವ ಗೌರವಗಳು ಮುಂದಿನ ಚುನಾವಣೆಯಲ್ಲಿ ಶಿವಕುಮಾರ್ ಅವರ ಕೈಹಿಡಿದರೂ ಆಶ್ಚರ್ಯವಿಲ್ಲ.
ಈ ವಿಷಯದಲ್ಲಿ ಡಿಕೆ ಪ್ರಧಾನಿ ಮೋದಿಯವರನ್ನು ನಕಲು ಮಾಡುತ್ತಿದ್ದಾರೆ ಎನ್ನುವವರಿದ್ದಾರೆ, ಅವರ ಆಸ್ತಿಕ್ಯವೂ ಒಂದು ರಾಜಕೀಯ ತಂತ್ರವೆಂತ ಹೇಳುವವರೂ ಇದ್ದಾರೆ. ಎಲ್ಲರೂ ಅದನ್ನೇ ಮಾಡುತ್ತಿರುವಾಗ ತಪ್ಪೇನಿದೆ ಅದರಲ್ಲಿ ಅಲ್ವಾ? ದೇಶದಲ್ಲಿ ಇನ್ನು ಮುಂದೆ ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಕೆಣಕುತ್ತಾ, ಅಲ್ಪಸಂಖ್ಯಾತರ, ಸನಾತನದ ವಿರೋಧಿಗಳ ಸೆರಗು ಹಿಡಿದುಕೊಂಡು ರಾಜಕೀಯ ಮಾಡಿ ಅಧಿಕಾರದ ಗದ್ದುಗೆ ಏರುತ್ತೇವೆ ಎನ್ನುವುದು ಬರೀ ಭ್ರಮೆ ಯಾಗುತ್ತದೆ.
ಇನ್ನು ಮೇಲೆ ಭಾರತದಲ್ಲಿ ಬಹುಸಂಖ್ಯಾತ ಹಿಂದುಗಳನ್ನು ಕಡೆಗಣಿಸಿ ಚುನಾವಣೆಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಮೋದಿ, ಆರ್‌ಎಸ್‌ಎಸ್‌ನ ಹಿಂದುತ್ವ ಸಿದ್ದಾಂತವನ್ನೂ ಮೀರಿಸಿದಾಗ ಮಾತ್ರ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಬಹುದೇ ವಿನಃ ಅಲ್ಪಸಂಖ್ಯಾತರ ಓಲೈಕೆಯಷ್ಟೇ ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ ಎನ್ನುವ ಸತ್ಯ ಶಿವಕುಮಾರ್ ಅವರಿಗೆ ತಿಳಿದಂತಿದೆ.
ನೋಡಲು ಸ್ವಲ್ಪ ಒರಟನಂತೆ ತೋರ್ಪಡುವ ನಮ್ಮ ಹೊಸ ಮುಖ್ಯಮಂತ್ರಿಗಳ ಸಹನ ಶೀಲತೆಯ ಬಗ್ಗೆ ಒಂದೆರಡು ಮಾತನ್ನಾದರೂ ಹೇಳಲೇ ಬೇಕು. ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಪಕ್ಷದಲ್ಲಿ ಪ್ರಭಾವಶಾಲಿಯಾಗಿದ್ದ ಡಿಕೆ ಶಿವಕುಮಾರ್ ಅವರನ್ನೇ ಕೆಲಕಾಲ ಮಂತ್ರಿಮಂಡಳದೊಳಗೆ ಸೇರಿಸಿಕೊಂಡಿರಲಿಲ್ಲ, ಏನಾಗಿರಬೇಡ ಅವರಿಗೆ ಆಲೋಚನೆ ಮಾಡಿ! ಆದರೆ ಡಿಕೆ ಎರಡು ಮಾತನಾಡದೇ ಹಲ್ಲುಕಚ್ಚಿಕೊಂಡಿದ್ದರು ಪಾಪ.
ಈಗ ಅಧಿಕಾರ ಹಸ್ತಾಂತರದ ವಿಷದಲ್ಲೂ ಹಾಗೆಯೇ, ಸಿದ್ದರಾಮಯ್ಯನವರ ಬಣದವರು ‘ಅಧಿಕಾರ ಹಸ್ತಾಂತರದ ಒಪ್ಪಂದವೇ ಸುಳ್ಳು’, ‘ಮುಖ್ಯಮಂತ್ರಿಯ ಹುದ್ದೆ ಖಾಲಿ ಇಲ್ಲ’ ‘ಐದು ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ’ ಎಂದೆಲ್ಲ ದಿನನಿತ್ಯ ಹೇಳುತ್ತಿದ್ದರು. ಸಿದ್ದರಾಮಯ್ಯನವರ ಪುತ್ರನಂತೂ ಹೈಕಮಾಂಡ್ ತಮ್ಮ ತಂದೆಯವರ ಪರವಾಗಿಯೇ ಇದೆ ಎಂದು ಪದೇ ಪದೆ ಹೇಳಿದ್ದರು. ಇವೆಲ್ಲವನ್ನೂ ಡಿಕೆ ಸಹಿಸಿಕೊಂಡು ಬಂದರೇ ವಿನಃ ಪ್ರತಿಕ್ರಿಯೆಗಳನ್ನು ಕೊಡಲಿಲ್ಲ. ಇದು ಅವರ ಸಹನಾ ಗುಣಕ್ಕೆ ಹಾಗೂ ರಾಜಕೀಯ ಪ್ರೌಢತೆಗೆ ಸಾಕ್ಷಿ ಎನ್ನಬಹುದು.
ಶಿವಕುಮಾರ್ ಅವರು ಬಾರಿ ಬಾರಿಗೂ ಹಿಂದಿನ ಮುಖ್ಯಮಂತ್ರಿ ಬಂಗಾರಪ್ಪನವರನ್ನು, ಎಸ್.ಎಂ ಕೃಷ್ಣ ಅವರನ್ನು ನೆನೆಯುತ್ತಾರೆ. ಅದು ಸ್ವಾಭಾವಿಕವೇ ಆಗಿದೆ ಬಿಡಿ, ಬಂಗಾರಪ್ಪನವರೇ ಇವರನ್ನು ಮೊದಲು ಮಂತ್ರಿ ಮಾಡಿದ್ದು. ಕೃಷ್ಣರಿಗಂತೂ ಇವರು ’Blue eyed boy’. ಹಾಗಾಗಿ, ಅವರುಗಳನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಣೆ ಮಾಡುವುದು ತಪ್ಪಲ್ಲ, ಆದರೆ ಅವರು ಈ ಹೊತ್ತಿನಲ್ಲಿ ಇನ್ನೂ ಒಬ್ಬರನ್ನು ಪ್ರಜ್ಞಾಪೂರ್ವಕವಾಗಿ ಸ್ಮರಿಸಬೇಕಿದೆ.
ಕನಕಪುರವನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದ್ದ, 1983ರಲ್ಲಿ ಕನಕಪುರದಿಂದ ಶಾಸಕನಾಗಿ ಗೆದ್ದುಬಂದು, ತಮ್ಮ ಮೌಲ್ಯಾಧಾರಿತ ರಾಜಕಾರಣ ದಿಂದಾಗಿ ಕನ್ನಡ ಜನಮನದಲ್ಲಿ ಶಾಶ್ವತವಾದ ಸ್ಥಾನ ಪಡೆದಿರುವ, ಜಾತಿ ಮತಗಳನ್ನು ಮೀರಿದ ನಿಜವಾದ ರಾಷ್ಟ್ರನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆಯವರನ್ನು ಡಿಕೆ ಸ್ಮರಿಸಬೇಕಿದೆ ಹಾಗೂ ಹೆಗಡೆಯವರ ಮೌಲ್ಯಾಧಾರದ ರಾಜಕಣದಿಂದ ಪ್ರಭಾವಿತರಾಗುವ ಅಗತ್ಯವಿದೆ.
ಶಿವ ಸಂಕಲ್ಪಗಳು
ಹೊಸ ಮುಖ್ಯಮಂತ್ರಿಗಳು ಆದ್ಯತೆಯಾಗಿ ತೆಗೆದುಕೊಂಡು ಮಾಡಬೇಕಾದ ಒಂದಷ್ಟು ಕೆಲಸಗಳಿವೆ. ಮೊದಲನೆಯದಾಗಿ, ಕೇಂದ್ರ ಸರಕಾರದ ಜೊತೆಗಿನ ಕಳಚಿದ ಕೊಂಡಿಯನ್ನು ಮತ್ತೆ ಕೂಡಿಸಿ ಉತ್ತಮ ಬಾಂಧವ್ಯ ಹೊಂದಬೇಕಿದೆ. ಸಿದ್ದರಾಮಯ್ಯನವರು ನೀತಿ ಆಯೋಗದ ಸಭೆಗೆ ಸತತವಾಗಿ ಗೈರಾಗುತ್ತಿದ್ದರು, ಆದರೆ ಶಿವಕುಮಾರ್ ಅವರು ಈ ವಾರ ನಡೆದ ಸಭೆಯಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡಿರುವುದು ಸ್ವಾಗತಾರ್ಹ ಸಂಗತಿ.
ನೆರೆ ರಾಜ್ಯಗಳ ಜೊತೆಗಿನ ನೆಲಜಲಗಳ ವಿವಾದಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕಿದೆ. ದೊಡ್ಡ ಕೈಗಾರಿಕೋದ್ಯಮಿಗಳನ್ನು ರಾಜ್ಯದತ್ತ ಸೆಳೆಯಬೇಕಿದೆ. ಅಕ್ರಮ ವಲಸಿಗರು ಮುಂತಾದ ಆಂತರಿಕ ಭದ್ರತೆಯ ವಿಷಯಗಳ ಕುರಿತು ಶೀಘ್ರ ಗಮನಹರಿಸಬೇಕಿದೆ.
ಪುಕ್ಕಟೆ ಗ್ಯಾರಂಟಿಗಳಿಂದಾಗಿ ತೀವ್ರವಾಗಿ ಹದಗೆಟ್ಟುಹೋದ, ಸಾಲದ ಕೂಪದಲ್ಲಿ ಮುಳುಗಿ ಹೋಗಿರುವ ರಾಜ್ಯದ ಆರ್ಥಿಕತೆಯನ್ನು ಮೇಲೆತ್ತಲು ಕೆಲವು ನಿರ್ಣಾಯಕ ಹೆಜ್ಜೆಗಳನ್ನಿಡಬೇಕಿದೆ. ಕುಂಟುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕಿದೆ. ಎಲ್ಲಕ್ಕಿಂತ ಪ್ರಮುಖವಾಗಿ, ವಂದಿಮಾಗದರನ್ನು ದೂರವಿಟ್ಟು ಸರಿಯಾಗಿ ಮಾರ್ಗದರ್ಶನ ಮಾಡುವವರನ್ನು ತಮ್ಮ ಸುತ್ತಮುತ್ತ ಇಟ್ಟುಕೊಳ್ಳುವುದು, ತಮ್ಮ ಕುಟುಂಬಸ್ಥರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡುವುದು ಅತ್ಯಂತ ಅವಶ್ಯವಾಗಿ ಆಗಬೇಕಾದ ಕೆಲಸವಾಗಿದೆ.
ಕೊನೇ ಗುಟುಕು: ಶಿವಕುಮಾರ ಅವರು ಮುಖ್ಯಮಂತ್ರಿಯಾದ ಮರುದಿನದ ವಿಶ್ವವಾಣಿಯ ಆಕರ್ಷಕ ತಲೆಬರಹ ಹಾಗೂ ಚಿತ್ರ, ಶಿವನಿಗೆ ಹೋಲಿಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹಾಗೆ ನೋಡಿದರೆ ಮುಖ್ಯಮಂತ್ರಿಗಳ ಹೆಸರು ‘ಶಿವ’ ಅಂತ ಅಲ್ಲವೇ ಅಲ್ಲ, ಶಿವಕುಮಾರ ಅಂತಲ್ಲವೇ ಅವರ ಹೆಸರು? ವಿವಾದ ಏಕಾಯ್ತೋ ಗೊತ್ತಿಲ್ಲ. ಅವರು ಶಿವನಾಗಲಿ, ಕುಮಾರ ಶಿವನಾಗಲಿ (ಅಂದರೆ ಬಾಲ ಶಿವ) ಅಥವಾ ಶಿವನ ಕುಮಾರನಾಗಲಿ (ಗಣಪತಿ ಅಥವಾ ಷಣ್ಮುಖ) ಕರ್ನಾಟಕಕ್ಕೆ ಶಂಕರನಾಗಲಿ ಅಷ್ಟೇ. ‘ಶಂಕರ’ ಸಂಸ್ಕೃತ ಪದದ ನಿಷ್ಪತ್ತಿ ಹೀಗಿದೆ ‘ಶಂ-ಕಲ್ಯಾಣಂ ಕರೋತಿ ಇತಿ ಶಂಕರಃ’ ಲೋಕಕ್ಕೆ ಒಳಿತನ್ನುಂಟುಮಾಡುವವನನ್ನು ಶಂಕರ ಎನ್ನುತ್ತಾರೆ. ಶಿವ ಶಾಸನದಿಂದ ಕರ್ನಾಟಕದ ಕಲ್ಯಾಣವಾಗಲಿ ಎಂದು ಆಶಿಸೋಣ.