Prathap Simha Column: ಸಮಸ್ತ ಕಾರ್ಯಕರ್ತರ ಪಾಲಿಗೆ ಅವರು ʼಅಪ್ಪಾಜಿʼ ಆದ ಕಥೆ !
ಯಡಿಯೂರಪ್ಪನವರು ಈಗ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದು ರಾಜಕೀಯ ಸಂಧ್ಯಾಕಾಲದಲ್ಲಿದ್ದರೂ ನಮ್ಮ ಕಾರ್ಯಕರ್ತರು ಇವತ್ತಿಗೂ ಅವರನ್ನು ಪ್ರೀತಿಸುವುದಕ್ಕೆ, ಗೌರವಿಸುವುದಕ್ಕೆ ಇಂಥ ಅಸಂಖ್ಯ ಉದಾಹರಣೆಗಳೇ ಕಾರಣ. ಇಂಥ ಉದಾಹರಣೆ ಗಳಿಂದಲೇ ಕಾರ್ಯಕರ್ತರು ಅವರನ್ನು ‘ಯಡಿಯೂರಪ್ಪ ಸಾಹೇಬರು’ ಅನ್ನುವುದನ್ನು ಬಿಟ್ಟು ‘ಅಪ್ಪಾಜಿ’ ಎನ್ನಲಾರಂಭಿಸಿದರು.
-
ಗುಣಗಾನ
ಪ್ರತಾಪ್ ಸಿಂಹ
ಅವತ್ತು 2008ರ ಮೇ 30. ಹೆಗಲ ಮೇಲೆ ಹಸಿರು ಶಾಲು ಹಾಕಿಕೊಂಡು, ‘ನಾನು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ...’ ಎನ್ನುತ್ತಾ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ವಿಧಾನಸೌಧದ ಎದುರು ನೆರೆದಿದ್ದ ಬಿಜೆಪಿಯ ಹತ್ತಾರು ಸಾವಿರ ಸಂಖ್ಯೆಯ ಕಾರ್ಯ ಕರ್ತರು, ಟಿವಿ ಮುಖಾಂತರ ವೀಕ್ಷಿಸುತ್ತಿದ್ದ ಬಿಜೆಪಿಯ ಲಕ್ಷಾಂತರ ಕಟ್ಟಾಳುಗಳು, ಹಿತೈಷಿ ಗಳು ತಾವೇ ಮುಖ್ಯಮಂತ್ರಿಯಾದೆವೇನೋ ಎಂಬಂತೆ ಸಂಭ್ರಮಿಸುತ್ತಿದ್ದರು.
2007ರಲ್ಲಿ ಎಂಟೇ ದಿನಕ್ಕೆ ಆಧಿಕಾರ ಕಳೆದುಕೊಂಡ ನೋವಿಗೆ ಅವತ್ತು ಮುಲಾಮು ಹಚ್ಚಿದಂತಿತ್ತು. ಪ್ರಮಾಣ ವಚನ ಸಮಾರಂಭಕ್ಕೆ ಈಗಿನ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು, ಎಲ್.ಕೆ.ಆಡ್ವಾಣಿಯವರು, ಪ್ರಕಾಶ್ ಸಿಂಗ್ ಬಾದಲ, ವೆಂಕಯ್ಯನಾಯ್ಡು ಸೇರಿದಂತೆ ಎಲ್ಲ ಗಣ್ಯಮಾನ್ಯರು ಬಂದಿದ್ದರು. ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬಿಜೆಪಿ ಮೊದಲ ಬಾರಿಗೆ ಯಡಿಯೂರಪ್ಪನವರ ಮೂಲಕ ದಕ್ಷಿಣದಲ್ಲಿ ಅಧಿಕಾರ ಹಿಡಿದಿತ್ತು.
ಮುಖ್ಯಮಂತ್ರಿಯಾದ ನಂತರ ಯಾರಾದರೂ ಕಾರ್ಯಕರ್ತರು ಯಾವುದಾದರೂ ಕೆಲಸ, ಮನವಿ ಹಿಡಿದುಕೊಂಡು ಹೋದರೆ ‘ಘಟನೋತ್ತರ ಆದೇಶಕ್ಕಾಗಿ ಕಡತ ಮಂಡಿಸುವುದು, ಬಿಎಸ್‌ವೈ" ಎಂದು ಸಹಿ ಹಾಕುವಂಥ ದಾಢಸಿತನ ತೋರಿದರು!
ಯಡಿಯೂರಪ್ಪನವರು ಈಗ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದು ರಾಜಕೀಯ ಸಂಧ್ಯಾಕಾಲದಲ್ಲಿದ್ದರೂ ನಮ್ಮ ಕಾರ್ಯಕರ್ತರು ಇವತ್ತಿಗೂ ಅವರನ್ನು ಪ್ರೀತಿಸುವುದಕ್ಕೆ, ಗೌರವಿಸುವುದಕ್ಕೆ ಇಂಥ ಅಸಂಖ್ಯ ಉದಾಹರಣೆಗಳೇ ಕಾರಣ. ಇಂಥ ಉದಾಹರಣೆ ಗಳಿಂದಲೇ ಕಾರ್ಯಕರ್ತರು ಅವರನ್ನು ‘ಯಡಿಯೂರಪ್ಪ ಸಾಹೇಬರು’ ಅನ್ನುವುದನ್ನು ಬಿಟ್ಟು ‘ಅಪ್ಪಾಜಿ’ ಎನ್ನಲಾರಂಭಿಸಿದರು.
ಇದನ್ನೂ ಓದಿ: Prathap Simha: ಬಾನು ಮೇಡಂ ಸೀರೆಯುಟ್ಟು, ಹಣೆಗೆ ಕುಂಕುಮ, ಮಲ್ಲಿಗೆ ಹೂವು ಮುಡಿದು ದಸರಾಗೆ ಬರೋದಾದ್ರೆ ಬನ್ನಿ: ಪ್ರತಾಪ್ ಸಿಂಹ
‘ಮೂಗಿನ ತುದಿಯೇ ಕೋಪ, ಪೆಟ್ಟು ಬಿದ್ದರೂ ಆಶ್ಚರ್ಯವಿಲ್ಲ, ಮೂಡು ನೋಡಿ ಮಾತ ನಾಡಬೇಕು. ರಾಜಕೀಯಕ್ಕೆ ಇವೆಲ್ಲ ಪೂರಕ ಅಂಶಗಳಲ್ಲ. ಆದರೂ ಹುಟ್ಟು ಕೋಪಿಷ್ಟ ನೊಬ್ಬ ಹೇಗೆ ಅಪ್ಪಾಜಿಯಾದರು?’ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಬಹುದು. ಅವರು ಶೀಘ್ರಕೋಪಿಯೇ ಹೊರತು ದೀರ್ಘದ್ವೇಷಿಯಲ್ಲ.
ಕೋಪ ತಣಿದ ಕೂಡಲೇ ಕರೆಸಿ ಉಪ್ಪಿಟ್ಟು ತಿನ್ನಿಸಿ, ಕೆಲಸ ಮಾಡಿಕೊಟ್ಟು ಕಳುಹಿಸು ತ್ತಿದ್ದರು. ಸಾರ್ವಜನಿಕವಾಗಿ ಅವರಲ್ಲಿ ಕಾಣುತ್ತಿದ್ದ ಸಿಟ್ಟು ಸಾತ್ವಿಕವಾಗಿರುತ್ತಿತ್ತು. ಯಡಿಯೂರಪ್ಪನವರ ಸಿಟ್ಟು ಸೆಡವುಗಳ ಹಿಂದೆ ಹೆಂಗರುಳೂ ಇದೆ. ಅದಕ್ಕೆ ಉದಾಹರಣೆ ಬೇಕಾ? ಬಡವನ ಮನೆಯಲ್ಲಿ ಹೆಣ್ಣುಮಗಳು ಹುಟ್ಟಿದರೆ ಅವಳು ಮನೆಗೆ ಭಾರವಲ್ಲ, ಅವಳು ಮನೆಯ ‘ಭಾಗ್ಯಲಕ್ಷಿ’ ಎಂದು ಯೋಜನೆಯನ್ನೇ ತಂದರು.
ಅವಳ ಭವಿಷ್ಯಕ್ಕಾಗಿ ಒಂದು ಲಕ್ಷ ರುಪಾಯಿ ಮುಡಿಪಾಗಿಡುವ ಯೋಜನೆ ಅದಾಗಿತ್ತು. ಆ ಹೆಣ್ಣುಮಗಳ ಶಾದಿ ಬಗ್ಗೆ ಯೋಚಿಸಲಿಲ್ಲ, ಅವಳನ್ನ ಶಾಲೆಗೆ ಸೇರಿಸಿ ವಿದ್ಯಾಲಕ್ಷ್ಮಿಯನ್ನಾಗಿ ಮಾಡುವುದಕ್ಕಾಗಿ ಸೈಕಲ್ ಕೊಟ್ಟರು. ರೆಕ್ಕೆ ಪುಕ್ಕ ಬಂದ ಮೇಲೆ ಗೂಡು ತೊರೆದು ಹಾರಿ ಹೋಗುವ ಹಕ್ಕಿಗಳಂತೆ ವೃದ್ಧ ತಂದೆ-ತಾಯಂದಿರನ್ನು ಊರಲ್ಲಿ ಬಿಟ್ಟು ಮಕ್ಕಳು ಪೇಟೆ ಸೇರಿದರೇನಂತೆ? ಆಳುವ ಪಕ್ಷಕ್ಕೆ ಹಿರಿಯರನ್ನು ಸಾಕಿ ಸಲಹುವ ಸಾಮಾಜಿಕ ಜವಾಬ್ದಾರಿ ಯಿದೆಯೆಂದು ಅರಿತು ‘ಸಂಧ್ಯಾಸುರಕ್ಷಾ’ ಯೋಜನೆಯನ್ನು ಜಾರಿಗೆ ತಂದರು.
ವೃದ್ಧಾಪ್ಯ, ವಿಧವಾ ವೇತನವನ್ನು ಹೆಚ್ಚಿಸಿದರು. ನಲವತ್ತು ವರ್ಷ ದಾಟಿದ ಅವಿವಾಹಿತ ಹೆಣ್ಣುಮಕ್ಕಳನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತಂದರು. ರೈತರ ವಿಷಯ ಬಂದರೆ ಅವರು ಮೃದುವಾಗುತ್ತಿದ್ದರು. ಉಪಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದ ಅವರು, ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಸಾಲವನ್ನೂ ಒಳಪಟ್ಟಂತೆ ರೈತರು ಪಾವತಿಸಬೇಕಿದ್ದ ಬಡ್ಡಿ ಮನ್ನಾ ಮಾಡಿದರು.
ಕರೆಂಟಿನ ಬಿಸಿಯಲ್ಲಿ ರೈತನ ಬದುಕು ಮತ್ತು ಬೆಳೆ ಸುಟ್ಟು ಹೋಗಬಾರದೆಂದು ಭಾವಿಸಿ ಆತನ ಲಕ್ಷಾಂತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದರು. ಹಾಗೆಯೇ ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳಲ್ಲ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಕೈಹಾಕಿದರು. ಜೋಳಕ್ಕೆ, ಭತ್ತಕ್ಕೆ ಕೇಂದ್ರ ಸರಕಾರ ಕೊಡುವ ಕನಿಷ್ಠ ಬೆಂಬಲ ಬೆಲೆಗೆ 150 ರು. ಸೇರಿಸಿಕೊಟ್ಟು ಖರೀದಿ ಮಾಡಿದರು.
ಕಳೆದ ಮೂರು ದಶಕಗಳನ್ನು ನೋಡಿದರೆ ನಮ್ಮ ರಾಜ್ಯದ ಒಂದಿಂದು ಭಾಗಗಳು ಬರ, ನೆರೆಗೆ ತುತ್ತಾಗುತ್ತಲೇ ಬಂದಿವೆ. ಆದರೆ ಮುಖ್ಯಮಂತ್ರಿಯಾದವರಿಗೆ ದೂರದೃಷ್ಟಿ ಇರಬೇಕಾಗುತ್ತದೆ. ಎಸ್.ಎಂ. ಕೃಷ್ಣ ಅವರು ಮೂರು ವರ್ಷಗಳ ಸತತ ಬರ ಬಂದಾಗ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿಹನಿ ನೀರನ್ನೂ ಕಾಪಿಟ್ಟು ಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ ‘ಕಾಯಕ ಕೆರೆ’ ಎಂಬ ಯೋಜನೆ ಯನ್ನು ಜಾರಿಗೆ ತಂದಿದ್ದರು.
ಅದೇ ರೀತಿ, ಬರ ಎದುರಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಕೆರೆಗಳು ನೀರಿಗಾಗಿ ಬಾಯ್ಬಿಟ್ಟುಕೊಂಡು ಕುಳಿತಿವೆ, ಬತ್ತಿದ ಕೆರೆಗಳಿಂದಾಗಿ ದನಕರುಗಳು ಬಳಲಿವೆ ಎಂಬು ದನ್ನು ಕಂಡಕೂಡಲೇ 19 ಕೆರೆಗಳಿಗೆ ಕಬಿನಿಯಿಂದ ನೀರು ತುಂಬಿಸಲು 219 ಕೋಟಿ ರುಪಾಯಿಯನ್ನು ನಿಂತ ನಿಲುವಿನ ಬಿಡುಗಡೆ ಮಾಡಿದವರು ಬಿಎಸ್‌ವೈ.
2013ರಲ್ಲಿ ಸಿದ್ದರಾಮಯ್ಯನವರ ಸರಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲಿ ಬೆಳಗಾವಿ ಆಧಿವೇಶನದಲ್ಲಿ ಕಬ್ಬುಬೆಳೆಗಾರ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ. ಅವರು ವಾರಕ್ಕೊಮ್ಮೆ ಬರುವ ಮೈಸೂರಿನ ಮಾರ್ಗಮಧ್ಯದಲ್ಲಿ ಸಿಗುವ ಮಂಡ್ಯದಲ್ಲಿ, ತಾನೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿಕೊಟ್ಟು ರೈತ ಸುಟ್ಟುಕೊಂಡು ಸಾವಾದ. ಆದರೆ ಸಿದ್ದರಾಮಯ್ಯನವರ ಸ್ಪಂದನೆ ಹೇಗಿತ್ತು? ಅದಕ್ಕೂ ಮೊದಲು ಮುಖ್ಯಮಂತ್ರಿಯಾಗಿದ್ದ ಬಿಎಸ್‌ವೈ ಕೂಡ ಕಬ್ಬು ಬೆಳೆಗಾರರ ಸಮಸ್ಯೆ ಎದುರಿಸಿದ್ದರು.
ಕೂಡಲೇ ಕಬ್ಬಿನ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೈಹಾಕಿದರು. ಬರ, ನೆರೆಯಂಥ ಪ್ರಕೃತಿ ವಿಕೋಪಗಳಾದರೆ ಕೂಡಲೇ ರೈತನ ಸಂಕಷ್ಟಕ್ಕೆ ಸ್ಪಂದಿಸಲು 500 ಕೋಟಿಯನ್ನು ಮೀಸಲಿಡುವ ಆವರ್ತ ನಿಧಿಯನ್ನು ಆರಂಭಿಸಿದರು.
ರಾಜಕೀಯವಾಗಿಯೂ ಸೋಷಿಯಲ್ ಎಂಜಿನಿಯರಿಂಗ್ ಅನ್ನು ಯಡಿಯೂರಪ್ಪನವರು 2008ಲ್ಲಿ ಮುಖ್ಯಮಂತ್ರಿಯಾದ ಕೂಡಲೇ ಆರಂಭಿಸಿದ್ದರು. ಸಣ್ಣ ಸಣ್ಣ ಜಾತಿಗಳನ್ನೂ ಗುರುತಿಸಿ ಸಮಾವೇಶ ನಡೆಸಿದರು. ಅವರ ಬೇಡಿಕೆ, ನೋವನ್ನು ಆಲಿಸಿ ಸ್ಪಂದಿಸುವ ಕೆಲಸ ಮಾಡಿದರು. ಅವರಲ್ಲಿ ನಾಯಕತ್ವ ಬೆಳೆಸುವ ಕಾರ್ಯಕ್ಕೂ ಕೈಹಾಕಿದರು.
ನಮ್ಮ ಹಿಂದುಳಿದ ಜಾತಿ, ವರ್ಗ, ಜನಾಂಗಗಳಲ್ಲಿ ಹೆಮ್ಮೆಯನ್ನು ಮೂಡಿಸಬೇಕೆಂದು ಕನಕ, ವಾಲ್ಮೀಕಿ ಜಯಂತಿಯನ್ನು ಆರಂಭಿಸಿದರು. ಇಂಥ ಆದರ್ಶ ವ್ಯಕ್ತಿಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಹೆಮ್ಮೆಯಿಂದ ಮುನ್ನಡೆಯಿರಿ ಎಂಬ ಸಂದೇಶ ಕೊಟ್ಟಿದ್ದರು.
24 ಕೋಟಿ ಕೊಟ್ಟು ‘ಕನಕ ಪ್ರಾಧಿಕಾರ’ ರಚಿಸಿದರು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನ್‌ರಾಂ, ವಾಲ್ಮೀಕಿ, ಕನಕ ಭವನಗಳ ನಿರ್ಮಾಣಕ್ಕೆ ಕೈಹಾಕುವ ಮೂಲಕ ಮದುವೆ, ಮುಂಜಿ ಅಥವಾ ಯಾವುದೇ ಸಮಾರಂ ಭವಿರಲಿ, ಎಲ್ಲರಂತೆ ಭವ್ಯ ಕಟ್ಟಡಗಳ ಆಚರಿಸಿ ಎಂದು ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಂದಾದವರು ಬಿಎಸ್‌ವೈ. ಕನಕ ಜಯಂತಿ, ವಾಲ್ಮೀಕಿ ಜಯಂತಿಗೆ ರಜಾ ಘೋಷಣೆ ಮಾಡಿದ್ದೇ ಅವರು.
ಬಸವ ವಸತಿ ಯೋಜನೆ ಆರಂಭಿಸಿ ಪ್ರತಿ ಪಂಚಾಯಿತಿಗೆ ಗರಿಷ್ಠ 300 ಮನೆಗಳನ್ನು ಕೊಟ್ಟರು. ಅಷ್ಟೇ ಅಲ್ಲ, ಪ್ರತಿ ನಗರ ಸಭೆಗಳಿಗೆ 25 ಕೋಟಿ, ಮಹಾನಗರಪಾಲಿಕೆಗಳಿಗೆ ತಲಾ ವಾರ್ಷಿಕ 50 ಕೋಟಿ ನೀಡಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೋನಿಯಾ ಗಾಂಧಿ ನಿಯಂತ್ರಿತ ಯುಪಿಎ ಸರಕಾರ ದುಡ್ಡನ್ನೇ ಕೊಡದೆ ಹೋದಾಗ, ‘ನೀವು ಕೊಡದಿದ್ದರೇನಂತೆ, ನಾನೇ ಗ್ರಾಮಗಳ ರಸ್ತೆಯನ್ನು ಅಭಿವೃದ್ಧಿ ಮಾಡುತ್ತೇನೆ’ ಎಂದು ‘ನಮ್ಮ ಗ್ರಾಮ, ನಮ್ಮ ರಸ್ತೆ’ ಯೋಜನೆಯನ್ನು ಜಾರಿಗೆ ತಂದರು.
4 ಸಾವಿರ ಸುವರ್ಣ ಗ್ರಾಮಗಳನ್ನು ತಲಾ 75 ಲಕ್ಷದಿಂದ 2 ಕೋಟಿವರೆಗೂ ನೀಡಿ ಅಭಿವೃದ್ಧಿಪಡಿಸಿದರು. ಅವರು 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬೆಳಗ್ಗೆ 8 ಗಂಟೆಯ ತಿಂಡಿಗೆ ಮೊದಲು ಆ ದಿನದ ಎಲ್ಲ ಪತ್ರಿಕೆಗಳ ವರದಿಗಳನ್ನು ಪಟ್ಟಿ ಮಾಡಿ, ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬೇಕೆಂಬುದನ್ನು ಸಿದ್ಧಮಾಡಿ ಅಧಿಕಾರಿಗಳು ಅವರ ಟೇಬಲ್ಲಿನ ಮೇಲಿಟ್ಟಿರಬೇಕಿತ್ತು. ಸೂಕ್ತ ಕ್ರಮಕ್ಕೆ ಸೂಚನೆ ಕೊಟ್ಟ ನಂತರವೇ ಬ್ರೇಕ್ ಫಾಸ್ಟ್.
ಅದು ಯಾರೇ ಆಗಿರಲಿ, ಯಾವುದೇ ವ್ಯಕ್ತಿಯನ್ನು ಇಡಿ ಇಡಿಯಾಗಿ ಒಪ್ಪಿಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ. ಬಿಡಿ ಬಿಡಿಯಾಗಿ ವ್ಯಕ್ತಿಯ ಕೆಲಸ, ಸಾಧನೆ, ಸಂವೇದನೆಯನ್ನು ನೋಡಿದಾಗ ಮನಸ್ಸಿಗೆ ಹತ್ತಿರವಾಗುತ್ತಾರೆ. ಯಡಿಯೂರಪ್ಪ ಸಾಹೇಬರು ನಮಗೆ ಅಪ್ಯಾಯಮಾನರಾಗುವುದು ಇದೇ ಕಾರಣಕ್ಕೆ. ಐವತ್ತು ವರ್ಷಗಳ ರಾಜಕೀಯ ಜೀವನ ದೊಂದಿಗೆ ಇವತ್ತು 84ನೇ ವರ್ಷಕ್ಕೆ ಅವರು ಕಾಲಿಡುತ್ತಿದ್ದಾರೆ. ಹ್ಯಾಪಿ ಬರ್ತ್ ಡೇ ಸರ್!
(ಲೇಖಕರು ಮಾಜಿ ಸಂಸದರು)