ರಸದೌತಣ
naadigru@gmail.com
(ಭಾಗ-12)
ವಿದ್ಯಾರ್ಥಿನಿಲಯದ ಅಡುಗೆ ಭಟ್ಟ ‘ನಳಪಾಕ’ನನ್ನು ಕೆಲಸದಿಂದ ತೆಗೆಯಲಾಗಿದೆ ಎಂಬ ವರ್ತಮಾನವನ್ನು ಮೊಬೈಲ್ ಫೋನಿನ ಮೂಲಕ ಸ್ವತಃ ಅವನ ಬಾಯಿಂದಲೇ ಕೇಳಿದ ಶಿಷ್ಯರು ನಿಜಕ್ಕೂ ಅಪ್ರತಿಭರಾಗಿದ್ದರು. ಕಾರಣ, ಒಂದು ಸ್ಥಾಪಿತ ವ್ಯವಸ್ಥೆಯೊಳಗೆ ಏನಾದರೊಂದು ‘ಮಹ ತ್ಕಾರ್ಯ’ ನಡೆದು ಪ್ರಸಿದ್ಧಿ ಒದಗಿದಾಗ ಅದರ ಶ್ರೇಯವನ್ನು ತಮ್ಮದಾಗಿಸಿಕೊಳ್ಳಲು ‘ನಾ ಮುಂದು, ತಾ ಮುಂದು’ ಎಂಬ ರೀತಿಯಲ್ಲಿ ಆ ವ್ಯವಸ್ಥೆಯ ಸಹಭಾಗಿಗಳು ಹಾತೊರೆಯುವುದುಂಟು. ಕೆಲವೊಮ್ಮೆಯಂತೂ, ಆ ‘ಮಹತ್ಕಾರ್ಯ’ದ ಹತ್ತಿರ ಹತ್ತಿರಕ್ಕೂ ಸುಳಿಯದವರು, ‘ನಮ್ಮದೂ ಒಂದು ಕೈ ಇರಲಿ’ ಎನ್ನುವಂತೆ ಆ ಪ್ರಸಿದ್ಧಿಯಲ್ಲಿ ಪಾಲು ತೆಗೆದುಕೊಳ್ಳಲು ಕೈಚಾಚುವುದುಂಟು. ಇದು ಈ ವ್ಯಾವಹಾರಿಕ ಜಗತ್ತಿನಲ್ಲಿ ಕಾಣಬರುವ ‘ಸ್ವಾರ್ಥಲೇಪಿತ’ ನಡೆಯೇ ಸರಿ. ಆದರಿಲ್ಲಿ ಶಾರದೆಯ ಕಥಾನಕದಲ್ಲಿ ಜರುಗಿರುವುದು ಯಾವುದೇ ‘ಮಹತ್ಕಾರ್ಯ’ವಲ್ಲ, ಇಲ್ಲಿ ಆಗಿರುವುದು ಒಂದು ‘ಅಸಹಜ ಎಡವಟ್ಟು’! ಇಷ್ಟಾಗಿಯೂ, ಒಂದಿಷ್ಟು ಮಂದಿ ಒಬ್ಬರಾದ ಮೇಲೆ ಒಬ್ಬರಂತೆ ತಾವಾಗಿಯೇ ಮುಂದೆ ಬಂದು ಇಲ್ಲವೇ ಫೋನ್ ಕರೆ ಮಾಡಿ, ತಮ್ಮ ಕಡೆಯಿಂದ ಆಗಿರಬಹುದಾದ ತಪ್ಪನ್ನು ಒಪ್ಪಿಕೊಳ್ಳಲು ಹೀಗೆ ಹಾತೊರೆಯುತ್ತಿರುವುದೇಕೆ? ಅದಕ್ಕೆ ಕಾರಣವಾಗಿರುವ ಶಕ್ತಿಯಾ ದರೂ ಯಾವುದು? ಎಂದು ಶಿಷ್ಯರು ತಮ್ಮತಮ್ಮಲ್ಲೇ ಪ್ರಶ್ನಿಸಿಕೊಳ್ಳುತ್ತಿದ್ದರು...
ಇದನ್ನೂ ಓದಿ: Yagati Raghu Naadig Column: ಕಳ್ಳಬೆಕ್ಕಿನ ಬೇಟೆಯ ಪಂದ್ಯದಲ್ಲಿ ಬಿತ್ತು ಮೊದಲ ವಿಕೆಟ್.. !
“ನಿಮ್ಮ ಮನಸ್ಸಿನ ಗೊಂದಲ ನನಗರ್ಥವಾಯಿತು..." ಎಂಬ ದನಿ ತೇಲಿ ಬಂದಾಗಲೇ ಶಿಷ್ಯರು ಕಲ್ಪನಾ ಲೋಕದಿಂದ ವಾಸ್ತವಕ್ಕೆ ಬಂದಿದ್ದು. ಆ ದನಿ ಅವಧೂತರದ್ದು. ಕೆಲ ಕ್ಷಣದ ಮುಂಚೆ ಶಿಷ್ಯರೆಡೆಗೆ ನೋಡುತ್ತಾ “ಕಳ್ಳಬೆಕ್ಕಿನ ಬೇಟೆ ಎಂಬ ಲೀಗ್ ಮ್ಯಾಚ್‌ನಲ್ಲಿ ಮೊದಲ ವಿಕೆಟ್ ಬಿತ್ತು..." ಎಂದು ಹೇಳಿ ಕಣ್ಣು ಮಿಟುಕಿಸಿದ್ದ ಅವಧೂತರು, ಶಿಷ್ಯರು ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದರು. ಶಿಷ್ಯರಲ್ಲಿನ ‘ವಿಶ್ಲೇಷಣಾ’ ಮತ್ತು ‘ವಿಚಕ್ಷಣಾ’ ಸಾಮರ್ಥ್ಯಗಳಿಗೆ ಸಾಣೆ ಹಿಡಿಯಲೆಂದು ಅವಧೂತರು ಆಗಾಗ ಹೀಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಒಡ್ಡುವುದು ವಾಡಿಕೆಯಾಗಿತ್ತು. ಅಂತೆಯೇ, ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ಮುಳುಗಿದ್ದ ಶಿಷ್ಯರನ್ನು ಉದ್ದೇಶಿಸಿ ಅವಧೂತರು, “ಅಯ್ಯಾ, ನಿನ್ನೆಯ ಕಥನಭಾಗದಲ್ಲಿ ನಾನೊಂದು ಮಾತು ಹೇಳಿದ್ದೆ, ನೆನಪಿದೆಯೇ? ‘ಸಂಕಷ್ಟಕ್ಕೆ ಸಿಲುಕಿದ ಆರ್ತಜೀವದ ಪ್ರಾರ್ಥನೆಯು ನಿಜಕ್ಕೂ ಪ್ರಾಮಾಣಿಕ ವಾಗಿದ್ದರೆ, ನೈತಿಕತೆಯ ಭಂಡಾರವನ್ನೇ ತುಂಬಿಕೊಂಡಿದ್ದರೆ, ಯಾವ ಗುರು ಅಥವಾ ದೇವರನ್ನು ಉದ್ದೇಶಿಸಿ ಅದರ ಸಲ್ಲಿಕೆಯಾಗಿರುತ್ತದೋ ಅಂಥ ಉದ್ದೇಶಿತ ದಿವ್ಯಶಕ್ತಿಗಳು ಆ ಪ್ರಾರ್ಥನೆಗೆ ಓಗೊಡುತ್ತವೆ. ಅದರ ಪರಿಣಾಮವಾಗಿ, ಸಂತ್ರಸ್ತರ ಸಂಕಟ-ಸಂಕಷ್ಟಗಳಿಗೆ ಕಾರಣರಾದವರೆಲ್ಲಾ ಆ ಪ್ರಕರಣದಲ್ಲಿ ಸಾಕ್ಷ್ಯ ಹೇಳುವುದಕ್ಕೆ ಬರಬೇಕಾಗುತ್ತದೆ’ ಎಂದು ನಿನ್ನೆ ನಾನು ನಿಮಗೆ ಹೇಳಿದ್ದೆ, ಅಲ್ಲವೇ? ಅಂತೆಯೇ, ಹತಭಾಗ್ಯೆ ಶಾರದೆಯ ಕಥನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪಾತ್ರಧಾರಿ ಗಳಾಗಿರುವ ಸಂಸ್ಥೆಯ ಮ್ಯಾನೇಜರ್, ಮಠದ ಸ್ವಾಮೀಜಿ, ಪಟ್ಟಣದ ಪ್ರಭಾವಿ ರಾಜಕಾರಣಿ, ಸರ್ಕಲ್ ಇನ್ಸ್‌ಪೆಕ್ಟರ್, ಅಡುಗೆಭಟ್ಟ ‘ನಳಪಾಕ’ ಮುಂತಾದ ಪಾತ್ರಗಳನ್ನೆಲ್ಲಾ ಆ ದೈವನಿರ್ಮಿತ ಅಗೋಚರ ನ್ಯಾಯಾಲಯವೇ ಹೀಗೆ ‘ಸಾಕ್ಷ್ಯ ಹೇಳಲು’ ಕರೆಸಿಕೊಳ್ಳುತ್ತಿದೆ ಕಣ್ರಯ್ಯಾ..." ಎಂದು ಹೇಳಿ ನಕ್ಕರು.
ಈ ಮಾತಿಗೆ ಶಿಷ್ಯರಲ್ಲೊಬ್ಬರು ಕುತೂಹಲಭರಿತರಾಗಿ, “ಆದರೆ ಗುರುಗಳೇ, ನೀವೇ ಉಲ್ಲೇಖಿಸಿದಂತೆ ಶಾರದೆಯ ವಿಷಯದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದು, ಆಕೆಯನ್ನು ಅನೈತಿಕ ಕಾರ್ಯಕ್ಕೆ ಎಳೆಯಲು ಯತ್ನಿಸಿದ್ದು ‘ಒಬ್ಬ ವ್ಯಕ್ತಿ’ ಮಾತ್ರವೇ. ಕಥನಕ್ರಮದಲ್ಲಿ ನೀವೇ ಹೇಳುತ್ತಾ ಹೋದಂತೆ, ಸಂಸ್ಥೆಯ ಆವರಣದಲ್ಲಿ ಸೇರಿಕೊಂಡಿರುವ ಈ ‘ಕಳ್ಳಬೆಕ್ಕನ್ನು’ ಓಡಿಸಿಬಿಟ್ಟರೆ, ಅಲ್ಲಿ ಆವರಿಸಿಕೊಂಡಿ ರುವ ನಕಾರಾತ್ಮಕ ಛಾಯೆ ನಿವಾರಣೆಯಾಗುವುದರ ಜತೆಜತೆಗೆ, ಸಂತ್ರಸ್ತೆ ಶಾರದೆಗೆ ನ್ಯಾಯವೂ ಸಿಗಬೇಕಾದ್ದು ಕ್ರಮ. ಅಂದರೆ, ಅನೈತಿಕ ಕಾರ್ಯಕ್ಕೆ ಮುಂದಾದ ಕಳ್ಳಬೆಕ್ಕಿನಲ್ಲಿ ಮಾತ್ರವೇ ತಪ್ಪಿತಸ್ಥ ಭಾವನೆಯಿರಬೇಕು ಮತ್ತು ಅದು ಮಾತ್ರವೇ ಶಿಕ್ಷೆಗೆ ಕೊರಳೊಡ್ಡಬೇಕು, ಅಲ್ಲವೇ? ಆದರೆ ಈ ಪ್ರಸಂಗದಲ್ಲಿ ಸಂಸ್ಥೆಯ ಮ್ಯಾನೇಜರ್, ಮಠದ ಸ್ವಾಮೀಜಿ, ಪಟ್ಟಣದ ರಾಜಕಾರಣಿ, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ವಿದ್ಯಾರ್ಥಿನಿಲಯದ ಅಡುಗೆಭಟ್ಟ ಇಷ್ಟೂ ಮಂದಿ ಪೈಪೋಟಿಗೆ ಬಿದ್ದವರಂತೆ ಹೀಗೆ ನಿಮ್ಮಲ್ಲಿ ಅಹವಾಲು ಸಲ್ಲಿಸಿ ತಪ್ಪನ್ನು ಒಪ್ಪಿಕೊಳ್ಳುತ್ತಿರುವುದೇಕೆ? ಅಲ್ಲಿಗೆ, ಒಂದು ‘ಕಳ್ಳಬೆಕ್ಕು’ ಶುರುಹಚ್ಚಿಕೊಂಡ ಅನೈತಿಕ ಕಾರ್ಯವನ್ನು ಇವರೆಲ್ಲ ಮುಂದುವರಿಸಿದರು ಎಂದು ಭಾವಿಸಬೇಕೇ? ಒಂದೊಮ್ಮೆ ಹಾಗಿದ್ದರೆ, ಸಂಸ್ಥೆಯ ಆವರಣದಲ್ಲಿ ತೂರಿಕೊಂಡಿರುವ ಕಳ್ಳಬೆಕ್ಕು ಒಂದಲ್ಲ, ಹಲವಾರು ಎಂದಾಯಿತಲ್ಲಾ ಗುರುಗಳೇ? ಅಲ್ಲಿಗೆ ಯಾವ್ಯಾವ ಕಳ್ಳಬೆಕ್ಕನ್ನು ತೊಲಗಿಸಿ ಸಂಸ್ಥೆಯ ಆವರಣವನ್ನು ಚೊಕ್ಕಗೊಳಿಸಬೇಕಾಗುತ್ತೆ? ಅಥವಾ ಮತ್ತೊಂದು ಕೋನದಲ್ಲಿ ವಿಶ್ಲೇಷಿಸಿದರೆ, ನೋಡನೋಡುತ್ತಿದ್ದಂತೆಯೇ ಅಡುಗೆಭಟ್ಟ ‘ನಳಪಾಕ’ನನ್ನು ಈಗ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದರೆ, ಅಮಾಯಕಿ ಶಾರದೆಯನ್ನು ತನಗೆ ಆಹಾರವಾಗಬಲ್ಲ ಹಸಿಮಾಂಸ ಎಂದು ಭಾವಿಸಿ ಮೇಲೆರಗಲು ಹವಣಿಸಿದ ರಣಹದ್ದು ಈ ‘ನಳಪಾಕ’ನೇ, ಆ ಕಾರಣಕ್ಕೇ ಅವನ ಕೆಲಸ ಹೋಯಿತು ಎಂದು ನಾವು ಲೆಕ್ಕಿಸಬೇಕೇ?" ಎಂದು ಪ್ರಶ್ನೆಗಳ ಸರಮಾಲೆಯನ್ನೇ ಅವಧೂತರ ಕೊರಳಿಗೆ ಹಾಕಿಬಿಟ್ಟರು!
ಶಿಷ್ಯರೊಬ್ಬರು ತಮ್ಮ‘ವಿಶ್ಲೇಷಣಾ’ ಮತ್ತು ‘ವಿಚಕ್ಷಣಾ’ ಸಾಮರ್ಥ್ಯಗಳಿಗೆ ಸಮರ್ಥವಾಗೇ ಸಾಣೆ ಹಿಡಿದುಕೊಂಡಿದ್ದಾರೆ ಎಂಬುದು ಅವಧೂತರಿಗೆ ಖಾತ್ರಿಯಾಯಿತು. ಆ ಸಂತಸ ಮತ್ತು ಸಮಾಧಾನ ದಲ್ಲೇ ಅವರ ಬೆನ್ನು ತಟ್ಟಿದ ಅವಧೂತರು, “ಭೇಷ್, ದಿನಗಳೆದಂತೆ ನಿಮ್ಮಲ್ಲಿ ಶ್ರದ್ಧೆ, ಏಕಾಗ್ರತೆ ಕೆನೆಗಟ್ಟುತ್ತಿವೆ. ಶಾರದೆಯ ಕಥಾಶ್ರವಣದಲ್ಲಿ ನೀವು ಇಷ್ಟು ಆಳಕ್ಕಿಳಿದಿರುವುದೇ ಇದಕ್ಕೆ ಸಾಕ್ಷಿ. ನಾನು ಮೊದಲೇ ಹೇಳಿದಂತೆ, ಗುರುಗಳು ನೀಡಿದ ಸೂಚನೆಯನ್ನು ಚಾಚೂತಪ್ಪದೆ ಅನುಸರಿಸುವ ವಿನಯವನ್ನು ರೂಢಿಸಿಕೊಳ್ಳಬೇಕಾದ್ದು ಶಿಷ್ಯರ ಧರ್ಮ; ಹಾಗಂತ ಅದು ಹೇಳಿದ್ದಕ್ಕೆಲ್ಲಾ ಗೋಣು ಹಾಕಿ, ಕತ್ತುಬಗ್ಗಿಸಿಕೊಂಡು ಹಿಂಬಾಲಿಸುವ ‘ಕುರಿಮಂದೆ’ಯ ಚಿತ್ತಸ್ಥಿತಿ ಆಗಬಾರದು. ವಿನಯಕ್ಕೂ, ಕುರಿಮಂದೆಯ ಚಿತ್ತಸ್ಥಿತಿಗೂ ನಡುವೆ ಒಂದು ತೆಳುವಾದ ಗೆರೆಯಿದೆ, ಅದನ್ನು ಅರಿತು ಗುರುತಿಸಿ ದವನೇ ಜಾಣ. ಇದೇ ರೀತಿಯಲ್ಲಿ, ಗುರುವಿನ ಆದೇಶವನ್ನು ಪಾಲಿಸದೆಯೇ ‘ಎದುರು ಜವಾಬು’ ನೀಡುವುದು ಶಿಷ್ಯನ ‘ಧಾರ್ಷ್ಟ್ಯ’ ಎನಿಸಿಕೊಳ್ಳುತ್ತದೆ; ಆದರೆ, ಜಿಜ್ಞಾಸೆ ತಲೆದೋರಿ ದಾಗೆಲ್ಲಾ ಹೀಗೆ ಪ್ರಶ್ನಿಸಿ ಅದನ್ನು ಬಗೆಹರಿಸಿಕೊಳ್ಳುವ ‘ಧೈರ್ಯ’ವೂ ಶಿಷ್ಯನಲ್ಲಿ ಮನೆಮಾಡಿರಬೇಕು. ಇಲ್ಲೂ ಅಷ್ಟೇ, ‘ಧಾರ್ಷ್ಟ್ಯ’ಕ್ಕೂ, ‘ಧೈರ್ಯ’ಕ್ಕೂ ನಡುವೆ ಒಂದು ತೆಳುವಾದ ಗೆರೆಯಿದೆ, ಅದನ್ನು ಗುರುತಿಸಿದವನೂ ಜಾಣ ಎನಿಸಿಕೊಳ್ಳುತ್ತಾನೆ. ಈ ‘ವಿನಯ’ ಮತ್ತು ‘ಧೈರ್ಯ’ ವನ್ನು ನೀವು ಐಹಿಕ ಪ್ರಪಂಚದಲ್ಲಿ ಮಾತ್ರವಲ್ಲದೆ, ಆಧ್ಯಾತ್ಮಿಕ ಸಾಧನಾ ಪ್ರಪಂಚದಲ್ಲೂ ಹದವರಿತು, ವಿವೇಚನೆಯೊಂದಿಗೆ ಬಳಸಬೇಕು. ಈ ಮಾತನ್ನ ಪಾಲಿಸ್ತೀರಾ ಸ್ವಾಮೀ..?" ಎನ್ನುತ್ತಾ ಆ ಶಿಷ್ಯರ ತಲೆಯ ಮೇಲೆ ಒಮ್ಮೆ ಕೈಯಾಡಿಸಿದರು. ಅಷ್ಟೇ! ಆ ಶಿಷ್ಯರ ಕಂಗಳಿಂದ ದಳದಳನೆ ನೀರು ಸುರಿಯಲು ಆರಂಭಿಸಿತು. ಅದು ಮಾಮೂಲಿ ಕಣ್ಣೀರಲ್ಲ, ಧನ್ಯತಾಭಾವದಿಂದ ಉಕ್ಕಿದ ಚೈತನ್ಯ-ಚಿಲುಮೆ...
ಈಗ, ಅವಧೂತರು ಮತ್ತು ಶಿಷ್ಯರ ನಡುವೆ ಕೆಲಕ್ಷಣ ಮೌನಸಾಮ್ರಾಜ್ಯದ್ದೇ ದರ್ಬಾರು. ಕಾರಣ, ಅವಧೂತರು ಒಬ್ಬ ಶಿಷ್ಯನನ್ನು ಉದ್ದೇಶಿಸಿ ಆ ಮಾತುಗಳನ್ನು ಹೇಳಿದ್ದರೂ ಅದೊಂದು ‘ಸರ್ವಾನ್ವಯಿ’ ಮಾರ್ಗದರ್ಶನವಾಗಿತ್ತು, ದಿವ್ಯಸಂದೇಶವಾಗಿತ್ತು. ಶಿಷ್ಯರೆಲ್ಲಾ ಕಣ್ಣು ಮುಚ್ಚಿ ಕೊಂಡು ಅದನ್ನು ಮನದಾಳಕ್ಕೆ ಇಳಿಸಿಕೊಳ್ಳುತ್ತಿದ್ದರು. ಅದೊಂದು ರೀತಿಯ ಅನುಪಮ ಅನುಸಂಧಾನ. ಮನದ ವಾತಾವರಣದಲ್ಲಿ ಸಂಕ್ಷೋಭೆ ತಗ್ಗಿ, ಮೌನ ಮತ್ತು ಪ್ರಶಾಂತತೆ ಆವರಿಸಿ ದಾಗಲೇ ತಾನೇ ಅಲ್ಲಿ ದಿವ್ಯಜ್ಯೋತಿ ಠಿಕಾಣಿ ಹೂಡುವುದಕ್ಕೆ ಸಾಧ್ಯವಾಗೋದು? ಅಂಥ ಅನುಭೂತಿಯಲ್ಲಿ ಶಿಷ್ಯರು ವಿಹರಿಸುತ್ತಿದ್ದರು...
ಕೆಲ ಕ್ಷಣದ ನಂತರ ಅವಧೂತರು ಗಂಟಲು ಸರಿಮಾಡಿಕೊಂಡರು. ಅದು, ಆ ಶಿಷ್ಯರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭ ಬಂತು ಎಂಬುದರ ಸೂಚಕವಾಗಿತ್ತು. ಹೀಗಾಗಿ ಕಣ್ಣು ತೆರೆದ ಶಿಷ್ಯರು ಕಥಾಶ್ರವಣಕ್ಕೆ ಸಜ್ಜಾದರು, ಅವಧೂತರು ಮಾತಿಗೆ ಶುರುವಿಟ್ಟುಕೊಂಡರು....
“ರಾಯರೇ, ನಿಮ್ಮ ಪ್ರಶ್ನೆ ಮತ್ತು ಗ್ರಹಿಕೆ ಸರಿಯಾಗೇ ಇದೆ. ಶಾರದೆಯನ್ನು ಅನೈತಿಕ ವ್ಯವಹಾರಕ್ಕೆ ಎಳೆಯಲು ಯತ್ನಿಸಿದ ಮಹಾನುಭಾವರು ‘ಏಕವ್ಯಕ್ತಿ’ಯೇ. ಆ ಕಳ್ಳಬೆಕ್ಕನ್ನು ಸಂಸ್ಥೆಯ ಆವರಣ ದಿಂದ ತೊಲಗಿಸಿದರೆ ಅಲ್ಲಿನ ನಕಾರಾತ್ಮಕ ಛಾಯೆಯೂ ತೊಲಗಿ ಶಾರದೆಗೂ ನ್ಯಾಯ ಸಿಗುತ್ತದೆ ಎಂಬುದೂ ದಿಟವೇ. ಹೀಗಿರುವಾಗ, ಇನ್ನೊಂದಿಷ್ಟು ಪಾತ್ರಗಳು ತಾವಾಗೇ ಧಾವಿಸಿ ಬಂದು ತಪ್ಪೊಪ್ಪಿಕೊಂಡಿದ್ದೇಕೆ? ಅನೈತಿಕ ಕಾರ್ಯದ ಮುಂದುವರಿಕೆಯಲ್ಲಿ ಅವರೂ ಸಹಭಾಗಿಗಳಾಗಿ, ಹೆಚ್ಚುವರಿ ಕಳ್ಳಬೆಕ್ಕುಗಳು ಎನಿಸಿಕೊಂಡುಬಿಟ್ಟರೇ? ಅವರೆಲ್ಲರನ್ನೂ ಅಲ್ಲಿಂದ ತೊಲಗಿಸಬೇಕೇ? ಎಂಬ ನಿಮ್ಮ ತರ್ಕ ಸರಿಯಾಗೇ ಇದೆ. ಆದರೆ, ಮತ್ತೊಂದು ಮುಖ್ಯ ಸಂಗತಿಯನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ದುಷ್ಕೃತ್ಯದಲ್ಲಿ ತೊಡಗಿಸಿಕೊಂಡವನು ಹೇಗೆ ‘ಅಪರಾಧಿ’ ಎನಿಸಿಕೊಳ್ಳುತ್ತಾನೋ, ಅಂಥ ಕೃತ್ಯಕ್ಕೆ ಒತ್ತಾಸೆಯಾಗಿ ನಿಂತವರು ಅಥವಾ ಅದನ್ನು ವಿರೋಧಿಸದವರು ಕೂಡ ಪರೋಕ್ಷವಾಗಿ ‘ಅಪರಾಧಿ’ಗಳೇ ಆಗಿಬಿಡುತ್ತಾರೆ. ಶಾರದೆಯನ್ನು ಅನೈತಿಕ ಕಾರ್ಯಕ್ಕೆಳೆಯಲು ಯತ್ನಿಸಿದ ಮಹಾನುಭಾವರು ಇಲ್ಲಿರೋದು ಒಬ್ಬರೇ; ಮಿಕ್ಕವರು ತಮ್ಮದೇ ನೆಲೆಯಲ್ಲಿ ಅದಕ್ಕೆ ಇಂಬುಕೊಟ್ಟಿದ್ದರಿಂದ ಅಥವಾ ಅವರ ಸ್ವಾರ್ಥವು ಅದಕ್ಕೆ ಹಾಸಿಗೆ ಹಾಸಿ ಕೊಟ್ಟಿದ್ದರಿಂದ ತಪ್ಪಿತಸ್ಥ ಭಾವನೆ ಅವರನ್ನು ಕಾಡತೊಡಗಿತು. ಹೀಗಾಗಿ ಒಬ್ಬರಾದ ಮೇಲೊಬ್ಬರು ಪೈಪೋಟಿಯಲ್ಲಿ ಬಂದು ತಪ್ಪೊಪ್ಪಿಕೊಳ್ಳಲು ಶುರುಮಾಡಿದರು... " ಎಂದು ಹೇಳಿ ಅರೆಕ್ಷಣ ನಿಲ್ಲಿಸಿದರು.
ಆಗ ಶಿಷ್ಯರೊಬ್ಬರು, “ಈ ಅನೈತಿಕ ಕಾರ್ಯದಲ್ಲಿ ಅಡುಗೆ ಭಟ್ಟ ‘ನಳಪಾಕ’ ನೇರಭಾಗಿ ಎಂದು ಸಂಸ್ಥೆಯವರಿಗೆ ಗೊತ್ತಾಗಿದ್ದಕ್ಕೇ ಅವನನ್ನು ಕೆಲಸದಿಂದ ಕಿತ್ತೊಗೆದಿದ್ದಾರೆ ಅಲ್ಲವೇ ಗುರುಗಳೇ? ಅದಕ್ಕೇ ತಾನೇ, ಅವನು ನಿಮಗೆ ಪೋನ್ ಮಾಡಿ ಗೋಳಾಡಿದ್ದು? ಅದನ್ನು ಆಲಿಸಿದ ನೀವು ‘ನಳಪಾಕ’ನಿಗೆ ‘ಮಾಡಿದ್ದುಣ್ಣೋ ಮಹಾರಾಯಾ ಎಂಬ ನಿನ್ನದೇ ಡೈಲಾಗನ್ನು ನಿನಗೇ ಹೇಳಬೇಕಾದ ಕಾಲ ಬಂದಿದೆಯಪ್ಪಾ’ ಎಂದು ತಿರುಗೇಟು ನೀಡಿ ಫೋನ್ ಕರೆಯನ್ನು ಕೊನೆಗೊಳಿಸಿದಿರಲ್ಲಾ...! ಅಲ್ಲಿಗೆ, ಸಂಸ್ಥೆಯ ಆವರಣದಲ್ಲಿ ತೂರಿಕೊಂಡಿದ್ದ ಕಳ್ಳಬೆಕ್ಕನ್ನು ತೊಲಗಿಸಿದಂತೆ ಆಯಿತಲ್ಲಾ? ಶಾರದೆಯ ಕಥನಕ್ಕೆ ಕೊನೆಗೂ ಕ್ಲೈಮ್ಯಾಕ್ಸ್ ನೀಡಿದಿರಲ್ಲಾ ಗುರುಗಳೇ..." ಎಂದು ಹುರುಪಿನಿಂದ ಕೇಳಿದರು.
ಈ ಮಾತಿಗೆ ಅವಧೂತರು ಇನ್ನೇನು ಪ್ರತಿಕ್ರಿಯಿಸಬೇಕು ಎನ್ನುವಷ್ಟರಲ್ಲಿ, ‘ಭರ್...’ ಎಂದು ಧೂಳೆಬ್ಬಿಸಿಕೊಂಡು ಬಂದ ಕಾರೊಂದು ಅವಧೂತರ ಮನೆಯ ಬೀದಿಬಾಗಿಲ ಬಳಿ ನಿಂತಿತು.
ಆ ಸದ್ದು ಕೇಳಿ ಅವಧೂತರು ಶಿಷ್ಯರೊಂದಿಗೆ ಹಿತ್ತಲಿನಿಂದ ಮನೆಯ ಹಜಾರದ ಕಿಟಕಿಯ ಬಳಿಗೆ ಬಂದು ಹೊರಗೆ ಕಣ್ಣು ಹಾಯಿಸಿದರು. ಒಂದು ದಿನದ ಹಿಂದೆ ಬಂದಿದ್ದ ಸರ್ಕಲ್ ಇನ್ಸ್ ಪೆಕ್ಟರ್ ಕಾರಿನ ಮುಂಬಾಗಿಲಿನಿಂದ ಇಳಿದರೆ, ನಂತರ ನೆಲದ ಮೇಲೆ ಪಾದವೂರಿದ್ದು ಪಟ್ಟಣದ ಪ್ರಭಾವಿ ರಾಜಕಾರಣಿ. ತರುವಾಯದಲ್ಲಿ, ತೆರೆಯುವುದೋ ಬೇಡವೋ ಎಂಬಷ್ಟು ನಿಧಾನವಾಗಿ ಕಾರಿನ ಹಿಂಬಾಗಿಲು ತೆರೆದುಕೊಂಡಿತು. ಅದನ್ನು ಸರಿಸಿಕೊಂಡು ಕೆಳಗಿಳಿದಾತ ಒಬ್ಬ ಕಟ್ಟುಮಸ್ತಾದ ಆಸಾಮಿ...
ಅವಧೂತರು ಆ ಆಸಾಮಿಯ ಕಡೆಗೆ ಬೆರಳು ಮಾಡಿ ತೋರಿಸಿ, “ನೀವು ಊಹಿಸಿದ ‘ನಳಪಾಕ’ ಅಲ್ಲ ಸ್ವಾಮೀ ಕಳ್ಳಬೆಕ್ಕು... ಎದುರಿಗೆ ನಿಂತಿದೆ ನೋಡಿ ‘ಕಥೆಯ ಸಸ್ಪೆನ್ಸು ಮತ್ತು ಕ್ಲೈಮ್ಯಾಕ್ಸು’ ಎಂದು ನಿಗೂಢವಾಗಿ ನುಡಿದರು!
ಕೆಲಕ್ಷಣದ ಹಿಂದಷ್ಟೇ ಅವಧೂತರನ್ನು ಪ್ರಶ್ನಿಸಿದ್ದ ಶಿಷ್ಯರು, ಆ ಆಸಾಮಿಯ ಚಹರೆಯನ್ನೊಮ್ಮೆ ದಿಟ್ಟಿಸಿ ನೋಡಿ, “ಅರೆ! ಇವರಾ....?!" ಎಂದು ಉದ್ಗರಿಸಿ ಬಾಯಿ ಮೇಲೆ ಬೆರಳಿಟ್ಟುಕೊಂಡರು...!(ಮುಂದುವರಿಯುವುದು)