Roopa Gururaj Column: ರಾಮೇಶ್ವರಂನ ಲಿಂಗಗಳ ಕಥೆ
ತಮಿಳುನಾಡಿನ “ರಾಮೇಶ್ವರಂ" ಶಿವನ ದ್ವಾದಶ ಜ್ಯೋತಿಲಿಂಗಗಳಲ್ಲಿ ಒಂದಾಗಿದೆ. ಹಿನ್ನೆಲೆ ಪ್ರಕಾರ ತ್ರೇತಾಯುಗದ ರಾಮಾಯಣದಲ್ಲಿ ರಾವಣ ಸೀತೆಯನ್ನು ಮೋಸದಿಂದ ಅಪಹರಿಸಿದನು. ಆಕೆಯನ್ನು ಬಂಧನದಿಂದ ಬಿಡಿಸಿ ತರಲು ರಾಮ-ರಾವಣರಿಗೆ ಯುದ್ಧವಾಯಿತು. ರಾವಣನನ್ನು ರಾಮ ಸಂಹರಿಸಿದ. ರಾವಣನಿಗೆ ರಾಕ್ಷಸ ಗುಣಗಳಿದ್ದರೂ ಅವನು ಬ್ರಾಹ್ಮಣ. ಮಹರ್ಷಿಗಳ ಮಗ. ಮೇಲಾಗಿ ಅತಿರೇಕದ ಶಿವ ಭಕ್ತನಾಗಿದ್ದ. ರಾವಣ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಆತ್ಮಲಿಂಗವನ್ನೇ ತಂದಂತಹ ಮಹಾನ್ ಶಿವ ಭಕ್ತ


ಒಂದೊಳ್ಳೆ ಮಾತು
ತಮಿಳುನಾಡಿನ “ರಾಮೇಶ್ವರಂ" ಶಿವನ ದ್ವಾದಶ ಜ್ಯೋತಿಲಿಂಗಗಳಲ್ಲಿ ಒಂದಾಗಿದೆ. ಹಿನ್ನೆಲೆ ಪ್ರಕಾರ ತ್ರೇತಾಯುಗದ ರಾಮಾಯಣದಲ್ಲಿ ರಾವಣ ಸೀತೆಯನ್ನು ಮೋಸದಿಂದ ಅಪಹರಿಸಿದನು. ಆಕೆ ಯನ್ನು ಬಂಧನದಿಂದ ಬಿಡಿಸಿ ತರಲು ರಾಮ-ರಾವಣರಿಗೆ ಯುದ್ಧವಾಯಿತು. ರಾವಣನನ್ನು ರಾಮ ಸಂಹರಿಸಿದ. ರಾವಣನಿಗೆ ರಾಕ್ಷಸ ಗುಣಗಳಿದ್ದರೂ ಅವನು ಬ್ರಾಹ್ಮಣ. ಮಹರ್ಷಿಗಳ ಮಗ. ಮೇಲಾಗಿ ಅತಿರೇಕದ ಶಿವ ಭಕ್ತನಾಗಿದ್ದ. ರಾವಣ ಶಿವನ ಕುರಿತು ಕಠಿಣ ತಪಸ್ಸು ಮಾಡಿ ಆತ್ಮಲಿಂಗವನ್ನೇ ತಂದಂತಹ ಮಹಾನ್ ಶಿವ ಭಕ್ತ. ಬ್ರಾಹ್ಮಣನಾದ ರಾವಣನನ್ನು ರಾಮ ಸಂಹರಿಸಿದ್ದರಿಂದ ಬ್ರಹ್ಮ ಹತ್ಯಾ ದೋಷ ಬರುತ್ತದೆ ಅಂತ ಪರಿಹಾರಕ್ಕಾಗಿ ಲಂಕೆಯಿಂದ ಬಂದ ಕೂಡಲೇ ಅಗಸ್ತ್ಯರ ಆದೇಶ ದಂತೆ ರಾಮೇಶ್ವರಂನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿ ದೋಷ ಪರಿಹಾರ ಮಾಡಿ ಕೊಳ್ಳಲು ಕೈಲಾಸದಿಂದ ಶಿವಲಿಂಗವನ್ನು ತರುವಂತೆ ಹನುಮಂತನಿಗೆ ಹೇಳಿದನು.
ಆಂಜನೇಯ ಶಿವಲಿಂಗವನ್ನು ತರಲು ಕೈಲಾಸಕ್ಕೆ ನೆಗೆದ. ಆದರೆ ಅಲ್ಲಿ ಶಿವಲಿಂಗ ಸಿಗಲಿಲ್ಲ. ಮುಹೂರ್ತದ ಸಮಯ ಮೀರುತ್ತಿದೆ ಸಮಯ ಆಗಿಬಿಡುತ್ತದೆ ಎಂದುಕೊಂಡು, ಸಮುದ್ರ ದಡ ದಲ್ಲಿದ್ದ ಮರಳಿನಿಂದಲೇ ಸೀತೆ ಒಂದು ಲಿಂಗವನ್ನು ಮಾಡಿ ರಾಮನಿಗೆ ಪೂಜಿಸುವಂತೆ ಹೇಳಿದಳು. ರಾಮ ಮರಳು ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ. ಇನ್ನೇನು ಪೂಜೆ ಆಯಿತು ಎನ್ನುವಾಗ ಕೈಲಾಸದಿಂದ ಹನುಮಂತನು ಲಿಂಗವನ್ನು ತಂದನು.
ಆದರೆ ರಾಮ ಶಿವಲಿಂಗಕ್ಕೆ ಪೂಜೆ ಮಾಡಿ ಮುಗಿಸಿದ್ದನ್ನು ನೋಡಿ ಹನುಮಂತನಿಗೆ ಬೇಸರ ವಾಯಿತು. ಆದರೂ ಪ್ರಭು ನಾನು ತಂದ ಲಿಂಗಕ್ಕೆ ಪೂಜೆ ಮಾಡಬೇಕು ಎಂದು ಸ್ವಲ್ಪ ಅಸಮಧಾನ ದಿಂದಲೇ ರಾಮನಿಗೆ ಹೇಳಿದಾಗ, ರಾಮ ಹೇಳಿದ ಆಯಿತು ನೀನು ತಂದ ಲಿಂಗಕ್ಕೆ ಪೂಜೆ ಮಾಡುವೆ. ಈಗ ನಾನು ಪೂಜೆ ಮಾಡಿದ ಲಿಂಗವನ್ನು ತೆಗೆದುಬಿಡು ಎಂದನು.
ಇದನ್ನೂ ಓದಿ: Roopa Gururaj Column: ಬಳೆ ತೊಡಿಸಿಕೊಂಡು ತವರಲ್ಲಿ ಲೆಕ್ಕ ಕೇಳು ಎಂದ ದುರ್ಗಾಮಾತೆ
ಹನುಮನು ಉತ್ಸಾಹದಿಂದ ಆ ಮರಳಿನ ಲಿಂಗಕ್ಕೆ ಕೈ ಹಾಕಿ ತೆಗೆಯಲು ಎಷ್ಟೇ ಪ್ರಯತ್ನಿಸಿದರೂ ಅದು ಬರಲಿಲ್ಲ. ಪ್ರಯತ್ನಿಸಿದಕ್ಕೆ ಅವನ ಕೈಗೆ ನಾಲ್ಕು ಮರಳಿನ ಕಣಗಳು ಅಂಟಿದವೇ ಹೊರತು ರಾಮ ಪ್ರತಿಷ್ಠಾಪನೆ ಮಾಡಿ ಪೂಜಿಸಿದ ಶಿವಲಿಂಗವನ್ನು ಹನುಮನಿಂದ ಅಲುಗಾಡಿಸಲೂ ಆಗಲಿಲ್ಲ. ಹನುಮನ ಕೋಪ ತಣ್ಣಗಾಯಿತು.
ಆದರೂ ಬಹಳ ವ್ಯಾಕುಲಗೊಂಡಿದ್ದ ಹನುಮಗೆ ರಾಮ ಹೇಳಿದ. ಬೇಸರಪಡಬೇಡ ಹನುಮ, ನೀನು ತಂದ ಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವೆ. ಇನ್ನು ಮುಂದೆ ಇಲ್ಲಿಗೆ ಬರುವ ಭಕ್ತರು, ನೀನು ತಂದ ಶಿವ ಲಿಂಗವನ್ನು ಮೊದಲು ದರ್ಶನ ಪೂಜೆ ಮಾಡಿ ನಂತರ ನಾವು ಮಾಡಿದ “ಮರಳು ಲಿಂಗ" ದರ್ಶನ ಪೂಜೆ ಮಾಡುತ್ತಾರೆ ಎಂದನು. ಹನುಮಗೆ ಸಂತೋಷವಾಯಿತು.
ಇಂಥದೊಂದು ಘಟನೆಗೆ ತಮಿಳುನಾಡಿನ ರಾಮೇಶ್ವರಂ ಕ್ಷೇತ್ರ ಸಾಕ್ಷಿಯಾಗಿದೆ. ರಾಮೇಶ್ವರಂ ಕ್ಷೇತ್ರಕ್ಕೆ ಬರುವ ಭಕ್ತರು ಮೊದಲು ಗರ್ಭಗುಡಿಯಲ್ಲಿರುವ ಹನುಮ ತಂದ ಶಿವಲಿಂಗಕ್ಕೆ ಪೂಜೆ ಮಾಡಿ ನಂತರ ರಾಮ ಸೀತೆ ಮರಳಿನ ಶಿವಲಿಂಗ ಮಾಡಿ ಪ್ರತಿಷ್ಠಾಪಿಸಿದ ಲಿಂಗಕ್ಕೆ ಪೂಜೆ ಸಲ್ಲಿಸು ತ್ತಾರೆ.
ಆಂಜನೇಯ ತಂದ ಲಿಂಗಕ್ಕೆ ವಿಶ್ವಲಿಂಗವೆಂದು, ರಾಮ ಸೀತೆ ತಯಾರಿಸಿ ಪ್ರತಿಷ್ಠಾಪಿಸಿದ ಲಿಂಗಕ್ಕೆ ರಾಮನಾಥ ಲಿಂಗವೆಂದು ಕರೆಯುತ್ತಾರೆ. ಹೀಗೆ ಮರಳಿನಲ್ಲಿ ಈಶ್ವರ ಲಿಂಗವನ್ನು ಮಾಡಿ ಪ್ರತಿಷ್ಠಾಪಿಸಿದ ಶ್ರೀ ರಾಮ, ಅಣು ರೇಣು ತೃಣ ಕಾಷ್ಠಗಳಲ್ಲೂ ಭಗವಂತನ ಇರುವಿಕೆ ಇದೆ ಎಂದು ಸಿದ್ಧಪಡಿಸಿದ್ದಾನೆ. ಭಗವಂತ ಮನಸ್ಸು ಮಾಡಿದರೆ ಪಂಚಮ ಮಹಾಭೂತಗಳ ಒಂದೊಂದು ಅಂಶದಲ್ಲೂ ಪ್ರಕಟಗೊಳ್ಳುವ ಸಾಮರ್ಥ್ಯ ಅವನಿಗೆ ಇದೆ. ಅದನ್ನು ನಂಬಿ ಆ ನಂಬಿಕೆಯೊಡನೆ ಪೂಜಿಸುವ ಮಾನಸಿಕ ತಯಾರಿ ನಮಗಿರಬೇಕು. ಪ್ರಕೃತಿಯ ಆರಾಧನೆಯೇ ಭಗವಂತನ ಆರಾಧನೆ. ಇದೆಲ್ಲಕ್ಕಿಂತ ಹೆಚ್ಚಾಗಿ ತನಗಾಗಿ ಶಿವಲಿಂಗವನ್ನು ಹುಡುಕಾಡಿ ತಂದ ಹನುಮಂತನ ಭಕ್ತಿಗೆ ಒಲಿದು ಅದಕ್ಕಾಗಿ ವಿಶೇಷ ಪೂಜೆ ಸಲ್ಲುವಂತೆ ಮಾಡಿದ ಶ್ರೀ ರಾಮನ ವಿಶಾಲ ಹೃದಯ.
ನಮ್ಮ ಭಾರತದ ಪ್ರತಿಯೊಂದು ತೀರ್ಥ ಸ್ಥಳಕ್ಕೂ ಕೂಡ ತನ್ನದೇ ಆದ ಐತಿಹ್ಯವಿದೆ. ಇಂತಹ ಕಥೆಗಳನ್ನ ನಮ್ಮ ಮಕ್ಕಳಿಗೆ ಹೇಳಿ ಆ ಸ್ಥಳ ಪುರಾಣದ ಬಗ್ಗೆ ತಿಳಿಸಿದಾಗ ಅವರು ನಮ್ಮ ಧರ್ಮವನ್ನು, ಅದರ ತಳಹದಿಯನ್ನು ಮತ್ತಷ್ಟು ಶ್ರದ್ಧೆಯಿಂದ ಆಚರಿಸಲು ಸಹಾಯವಾಗುತ್ತದೆ.