ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಸಮಾಜದಲ್ಲಿ ಬದಲಾಗುತ್ತಿದೆ ಉಳಿತಾಯದ ಪರಿಭಾಷೆ !

ಉಳಿತಾಯದ ಪರಿಭಾಷೆ ಬಗ್ಗೆ ಹೇಳುವುದಾದರೆ, ಯಾರು ಎಷ್ಟು ಉಳಿಸಬೇಕು? ತಿಂಗಳಿಗಾಗುವಷ್ಟಾ ಅಥವಾ ಮೂರು ತಲೆಮಾರುಗಳಿಗೆ ಆಗುವಷ್ಟಾ? ಎಂದೆಲ್ಲ ಪ್ರಶ್ನೆ ಬರುತ್ತದೆ. ಖಾಸಗಿ ಉಳಿತಾಯಗಳು ಸುರಕ್ಷಿತವಾ? ಸರಕಾರಿ ಉಳಿತಾಯ ಯೋಜನೆಗಳು ಕೈಹಿಡಿಯುತ್ತವಾ? ಎಂದೆಲ್ಲ ಅನುಮಾನ ಗಳಿರುತ್ತವೆ.

ಗಂಟಾಘೋಷ

ಭಾರತೀಯರು ಒಡವೆಗಳ ಮೂಲಕ ಚಿನ್ನ ಉಳಿಸುವುದರಲ್ಲಿ ಸಿದ್ಧಹಸ್ತರು. ಅವಕಾಶ, ಹೂಡಿಕೆಗಳ ವ್ಯಾಪ್ತಿ ಬದಲಾದಂತೆ ಷೇರು ಮಾರುಕಟ್ಟೆ, ಬಂಡವಾಳ ಹೂಡಿಕೆಗಳಂಥ ಹೆಚ್ಚುವರಿ ಇರುವ ಕ್ಷೇತ್ರ ಗಳಲ್ಲೂ ಇವರು ಪ್ರವೇಶಿಸುತ್ತಿರುವುದು ವೈಯಕ್ತಿಕ ಮತ್ತು ದೇಶದ ಆರ್ಥಿಕತೆಯ ವಿಚಾರದಲ್ಲಿ ಅಭಿವೃದ್ಧಿ ಸೂಚಕವಾಗಿದೆ.

ಹಳ್ಳಿಗಳಿಂದ ನಗರ-ಪಟ್ಟಣಗಳವರೆಗೆ, ಬಡವರಿಂದ ಸಿರಿವಂತರವರೆಗೆ ಸಮ್ಮಿಳಿತಗೊಂಡ ದೇಶ ನಮ್ಮದು. ಸಿರಿವಂತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಲು ಹೂಡಿಕೆಗಳ ಬಗ್ಗೆ ಯೋಚಿಸು ತ್ತಿದ್ದರೆ, ಸಾಮಾನ್ಯರು ನಿತ್ಯದ ಖರ್ಚು-ವೆಚ್ಚ ಕಳೆದು, ಉಳಿದ ಹಣವನ್ನು ಮುಂದಿನ ಕಷ್ಟಕಾಲಕ್ಕೆ ಸಹಾಯವಾಗಲಿ ಎಂದು ಉಳಿತಾಯದ ಬಗ್ಗೆ ಯೋಚಿಸುತ್ತಾರೆ.

ಉಳಿತಾಯದ ಪರಿಭಾಷೆ ಬಗ್ಗೆ ಹೇಳುವುದಾದರೆ, ಯಾರು ಎಷ್ಟು ಉಳಿಸಬೇಕು? ತಿಂಗಳಿಗಾಗುವಷ್ಟಾ ಅಥವಾ ಮೂರು ತಲೆಮಾರುಗಳಿಗೆ ಆಗುವಷ್ಟಾ? ಎಂದೆಲ್ಲ ಪ್ರಶ್ನೆ ಬರುತ್ತದೆ. ಖಾಸಗಿ ಉಳಿತಾಯ ಗಳು ಸುರಕ್ಷಿತವಾ? ಸರಕಾರಿ ಉಳಿತಾಯ ಯೋಜನೆಗಳು ಕೈಹಿಡಿಯುತ್ತವಾ? ಎಂದೆಲ್ಲ ಅನುಮಾನ ಗಳಿರುತ್ತವೆ.

ಮಹಿಳೆಯರು ಉಳಿತಾಯವನ್ನು ಒಂದು ಸಾಂಪ್ರದಾಯಿಕ ಪದ್ಧತಿ ಎಂಬಂತೆಯೇ ಪಾಲಿಸುತ್ತ ಬಂದಿದ್ದಾರೆ. ಇದರಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಚಿನ್ನವು ಕೇವಲ ಆಭರಣವಾಗಿರದೆ, ಮಹಿಳೆಯರ ವೈಯಕ್ತಿಕ ಗಳಿಕೆಯ ಜತೆಗೆ ಆರ್ಥಿಕ ಭದ್ರತೆಯ ಸಾಧನವೂ ಆಗಿದೆ.

ಇದನ್ನೂ ಓದಿ: Gururaj Gantihole Column: ರಸಗೊಬ್ಬರರಹಿತ ಕೃಷಿಯೇ ಸಾವಯವ ಬದುಕಿನ ಆಶಾಕಿರಣ !

ದೇಶದಲ್ಲಿ ಕುಟುಂಬಗಳು ಮಾಡಿರುವ ಒಟ್ಟು ಉಳಿತಾಯದಲ್ಲಿ ಶೇ.70ರಷ್ಟು ಚಿನ್ನವು ಮಹಿಳೆಯರ ಆಭರಣ ರೂಪದಲ್ಲಿದ್ದು, ಅಕ್ಕಿ ಗಂಟಿನಲ್ಲಿ, ಸಾಸಿವೆ ಡಬ್ಬಗಳಲ್ಲಿ ಇಟ್ಟಂಥ ಕಿವಿಯೋಲೆ, ಮೂಗು ಬೊಟ್ಟು, ಚೈನು, ಕೈಬಳೆಗಳೂ ಇದರಲ್ಲಿ ಸೇರಿವೆ. 2023ರ ವರದಿ ಪ್ರಕಾರ, ಭಾರತೀಯ ಮಹಿಳೆಯರು ಹೊಂದಿರುವ ಚಿನ್ನದ ಪ್ರಮಾಣ 25 ಸಾವಿರ ಟನ್ ಆಗಿದೆ. ಇದು ಕೆಲ ದೇಶಗಳ ಒಟ್ಟು ಚಿನ್ನದ ಸಂಗ್ರಹಕ್ಕಿಂತಲೂ ಹೆಚ್ಚು ಎಂದು ವರದಿಯಾಗಿದೆ.

ಇತಿಹಾಸಪೂರ್ವ ಕಾಲದಲ್ಲಿ ಮೊದಲು ಆಹಾರವನ್ನು ಸಂಗ್ರಹಿಸಿಡುವ ಪದ್ಧತಿ ಆರಂಭವಾಯಿ ತೆಂದು ತಿಳಿದುಬರುತ್ತದೆ. ದವಸ-ಧಾನ್ಯಗಳನ್ನು, ಗೆಡ್ಡೆ-ಗೆಣಸುಗಳನ್ನು ಕಷ್ಟಕಾಲದಲ್ಲಿ ಉಪಯೋಗವಾಗಲೆಂದು ಗಟ್ಟಿಕೆಸರಿನಲ್ಲಿ ಅದ್ದಿ ಒಣಗಿಸಿ, ವರ್ಷಗಟ್ಟಲೇ ಕೂಡಿಟ್ಟುಕೊಳ್ಳುತ್ತಿದ್ದರು.

ಮಾಂಸಗಳನ್ನು ಸುಟ್ಟು ಒಣಗಿಸಿ ಮಳೆಗಾಲಕ್ಕೆ ಕೂಡಿಟ್ಟುಕೊಳ್ಳುತ್ತಿದ್ದರು. ಉಳಿತಾಯದ ಮಹತ್ವವು ಆಹಾರದಿಂದ ಧಾನ್ಯಗಳಿಗೆ ಕಾಲಾಂತರದಲ್ಲಿ ಹಣಕ್ಕೆ ಪರಿವರ್ತನೆಯಾಗುತ್ತ ಬಂದಿತು. ಆಹಾರ ಮತ್ತು ಬೇಟೆಯಾಡುವ ಶಸ್ತ್ರಗಳು ಮಾನವನ ಉಳಿತಾಯ ಖಾತೆಗೆ ಸೇರಿದ ಮೊದಲ ವಸ್ತುಗಳಾಗಿದ್ದವು!

ನಾಗರಿಕತೆಗಳ ಪ್ರಾರಂಭಿಕ ಕಾಲದಲ್ಲಿ ಜನರು ಧಾನ್ಯಗಳ ಲೆಕ್ಕವನ್ನು ಫಲಕಗಳಲ್ಲಿ ದಾಖಲಿಸಿ ಕೊಳ್ಳುತ್ತಿದ್ದರು. ರೈತರು ಧಾನ್ಯವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಜನರು ಜಾನುವಾರು, ಧಾನ್ಯ, ಚಿನ್ನ-ಬೆಳ್ಳಿ ರೂಪದಲ್ಲಿ ಉಳಿತಾಯ ಮಾಡುತ್ತಿದ್ದರು. ಹಣಕ್ಕೂ ಮೊದಲು ವಸ್ತುವಿನಿಮಯ ಪದ್ಧತಿ ( Barter System) ಚಾಲ್ತಿಯಲ್ಲಿತ್ತು. ಹಣದ ಕಲ್ಪನೆ ಹುಟ್ಟಿಕೊಂಡ ಮೇಲೆ ದೇವಸ್ಥಾನಗಳನ್ನು ಹಣ, ವಸ್ತು ಸಂಗ್ರಹಿಸಲು ಬಳಸುತ್ತಿದ್ದರು.

ಮೌರ್ಯರ ಕಾಲದ ಭಾರತದಲ್ಲಿ ಕೌಟಿಲ್ಯರ ಅರ್ಥಶಾಸ್ತ್ರದಲ್ಲಿ ಉಳಿತಾಯ, ಖಜಾನೆ ಮತ್ತು ಸಂಪತ್ತು ಸಂಗ್ರಹದ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ನಾಣ್ಯಗಳ ವ್ಯಾಪ್ತಿಯು ಚೀನಾ, ಭಾರತದಿಂದ ಹಿಡಿದು ಗ್ರೀಸ್, ರೋಮ್‌ವರೆಗೂ ವ್ಯಾಪಿಸಿತ್ತು. ಮಧ್ಯಯುಗದ ಆಸುಪಾಸಿನಲ್ಲಿ ಇಟಲಿಯ ವೆನಿಸ್, ಫ್ಲಾರೆನ್ಸ್‌ನಲ್ಲಿ ಪ್ರಥಮ ಆಧುನಿಕ ಬ್ಯಾಂಕುಗಳು ಶುರುವಾದವು.

16ನೇ ಶತಮಾನದಲ್ಲಿ ಸಾರ್ವಜನಿಕ ಸಂಸ್ಥೆಗಳು, ಹಣವನ್ನು ಬ್ಯಾಂಕ್‌ನಲ್ಲಿ ಉಳಿಸುವ ಅಭ್ಯಾಸ ವನ್ನು ಜನರಿಗೆ ಮಾಡಿಸಲಾರಂಭಿಸಿದವು. 19ನೇ ಶತಮಾನದಲ್ಲಿ ಉಳಿತಾಯ ಬ್ಯಾಂಕುಗಳು ಮತ್ತು ಪೋಸ್ಟ್ ಆಫೀಸ್ ಸೇವೆಗಳು ಸಾಮಾನ್ಯ ಜನರಿಗೆ ಪರಿಚಯವಾದವು. ತನ್ಮೂಲಕ 20ನೇ ಶತಮಾನ ದಲ್ಲಿ ಸರಕಾರದ ಬಾಂಡ್‌ಗಳು, ಪಿಂಚಣಿ ಯೋಜನೆಗಳು, ವಿಮಾ ಯೋಜನೆಗಳವರೆಗೆ ಉಳಿತಾಯದ ವಿವಿಧ ಹಂತಗಳು ಬಂದು ನಿಂತಿವೆ ಎನ್ನಬಹುದು. ‌

ಇದಕ್ಕೆ ಪೂರಕವಾಗಿ, ಉಳಿತಾಯ ಮಾಡುವಲ್ಲಿ ಡಿಜಿಟಲ್ ವಾಲೆಟ್‌ಗಳು, ಮ್ಯೂಚುವಲ್ ಫಂಡ್ ಗಳು, ನಿವೃತ್ತಿ ನಿಧಿಗಳು ( Retirement Funds) ಹೊಸರೂಪದ ಉಳಿತಾಯ ವಿಧಾನಗಳನ್ನು ಒಳಗೊಳ್ಳುತ್ತ ಉಳಿತಾಯ ಕ್ಷೇತ್ರ ಬೆಳೆದುಬಂದಿದೆ.

ಸಾಮಾನ್ಯ ಜನರ ಆರ್ಥಿಕ ಭದ್ರತೆಗೆ ಉಳಿತಾಯ ( Savings ), ಹೂಡಿಕೆ ( Investment) ಮತ್ತು ಜೀವನ ಸುರಕ್ಷತೆಗಳು ( Life Security ) ಪ್ರಮುಖ ಪಾತ್ರವಹಿಸುತ್ತವೆ. ಕೇಂದ್ರ, ರಾಜ್ಯ ಸರಕಾರಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಜನತೆಗೆ ವಿಭಿನ್ನ ರೀತಿಯ ಯೋಜನೆಗಳನ್ನು ನೀಡುತ್ತಿವೆ. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ( Post Office Savings Account) ಮತ್ತು ಸೆಕ್ಷನ್ 80-ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯುಳ್ಳ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ( PPF) ಇರಬಹುದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆ ಖರ್ಚಿಗೆ ನೆರವಾಗುವ, ಹೆಚ್ಚಿನ ಬಡ್ಡಿದರ ಮತ್ತು ತೆರಿಗೆ ವಿನಾಯಿತಿ ಯುಳ್ಳ ‘ಸುಕನ್ಯಾ ಸಮೃದ್ಧಿ’ ಯೋಜನೆಯಾಗಿರಬಹುದು, ನಿವೃತ್ತ ಹಿರಿಯ ನಾಗರಿಕರಿಗೆ ಉಳಿತಾಯ ಭದ್ರತೆಯೊದಗಿಸುವ ‘ಸೀನಿಯರ್ ಸಿಟಿಜನ್ ಸೇವಿಂಗ್ಸ್‌ ಸ್ಕೀಮ್’ ( SCSS) ನಂಥ ಯೋಜನೆಗಳು ಇರಬಹುದು- ಇವೆಲ್ಲವೂ ಬಡ ಮತ್ತು ಮಧ್ಯಮ ವರ್ಗದವರಿಗೆ ಸಹಕಾರಿಯಾಗಿವೆ.

ಸಾಮಾನ್ಯವಾಗಿ Fixed Deposit ಎಂದು ಕರೆಯಲಾಗುವ ಠೇವಣಿಯನ್ನು Term Deposit ಎಂದೂ ಕರೆಯುತ್ತಾರೆ. ಉಳಿತಾಯ ಖಾತೆಗಿಂತ ಹೆಚ್ಚು ಬಡ್ಡಿದರ ಇದರಲ್ಲಿ ಸಿಗುತ್ತದೆ ಮತ್ತು ಬ್ಯಾಂಕುಗಳು DICGC (Deposit Insurance and Credit Guarantee Corporation) ಮೂಲಕ 5 ಲಕ್ಷ ರುಪಾಯಿ ವರೆಗೆ ವಿಮಾರಕ್ಷಣೆ ಒದಗಿಸುತ್ತವೆ.

ಕನಿಷ್ಠ 7 ದಿನಗಳಿಂದ 10 ವರ್ಷಗಳವರೆಗೆ ಅಂಚೆ, ಬ್ಯಾಂಕ್, NBFC ಗಳಲ್ಲಿ ವಿವಿಧ ಬಡ್ಡಿದರ ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಮಾಸಿಕ, ತ್ರೈಮಾಸಿಕ, ವಾರ್ಷಿಕವಾಗಿ ಇದರ ಬಡ್ಡಿ ಪಡೆಯ ಬಹುದಾಗಿದ್ದು, Regular FD, Tax saving FD, Senior Citizen FD, Flexi FD, Post Office Time Deposit (POTD) ಎಂದೆಲ್ಲ ಹೂಡಿಕೆ ಮಾಡಬಹುದು.

ಹೂಡಿಕೆ ಎಂಬುದು ಹಣವನ್ನು ಉತ್ಪಾದಕ ರೀತಿಯಲ್ಲಿ ಉಪಯೋಗಿಸಿ, ಭವಿಷ್ಯದಲ್ಲಿ ಲಾಭ ಪಡೆಯುವ ಮಾರ್ಗವಾಗಿದ್ದು, ಮ್ಯೂಚ್ಯೂವಲ್ ಫಂಡ್ಸ್ ( Mutual Funds), ಷೇರು ಮಾರುಕಟ್ಟೆ ( Stock Market), ಭೂಮಿ, ಮನೆ, ವಾಣಿಜ್ಯ ಕಟ್ಟಡಗಳಲ್ಲಿ ಹಾಗೂ ಸ್ಥಿರಾಸ್ತಿ ರೂಪದ ರಿಯಲ್ ಎಸ್ಟೇಟ್‌ನಲ್ಲಿ ( Real Estate Investment) ಹಾಗೂ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡ ಬಹುದು. ಇತ್ತೀಚೆಗೆ ಜಾರಿಗೆ ತರಲಾದ RBI ನ ‘ಸಾವರಿನ್ ಗೋಲ್ಡ್ ಬಾಂಡ್’ ( SGB) ರೂಪದಲ್ಲೂ ಹೂಡಿಕೆ ಮಾಡಲು ಅವಕಾಶವಿದೆ.

ಹಣಕಾಸು ಆಸ್ತಿ ಕುರಿತಂತೆ 2024ರ ಮಾರ್ಚ್ ಅಂತ್ಯದವರೆಗೆ ಲಭ್ಯವಿದ್ದ ಮಾಹಿತಿ ಪ್ರಕಾರ, ಭಾರತೀಯ ಕುಟುಂಬಗಳ ಒಟ್ಟಾರೆ ಚರ ಮತ್ತು ಸ್ಥಿರಾಸ್ತಿ ರು.32 ಲಕ್ಷ ಕೋಟಿಯಷ್ಟಿದ್ದರೆ, ಸುಮಾರು ರು.12 ಲಕ್ಷ ಕೋಟಿಯಷ್ಟು ಸಾಲವಿದೆ ಎನ್ನಲಾಗಿದೆ. ಈ ಆಸ್ತಿಯ ಭಾಗವಾಗಿ, ಹಣಕಾಸು ವರ್ಷ 2024ರಲ್ಲಿ ರು.35 ಲಕ್ಷ ಕೋಟಿಯಷ್ಟು ಹೂಡಿಕೆಗಳನ್ನು ( Financial Savings ) ಮಾಡಲಾಯಿತು.

ಇದು ಹಣಕಾಸು ವರ್ಷ 2023ರ ರು.29 ಲಕ್ಷ ಕೋಟಿಯನ್ನು ಮೀರಿದೆ. ಒಂದೇ ವರ್ಷದಲ್ಲಿ 6 ಲಕ್ಷ ಕೋಟಿಯಷ್ಟು ಕೌಟುಂಬಿಕ ಹೂಡಿಕೆ ಹೆಚ್ಚಾಗಿದೆ. ಹೂಡಿಕೆಯ ವಿಧಗಳನ್ನು ಗಮನಿಸಿದಾಗ, ಭಾರತೀಯ ಕುಟುಂಬಗಳು Household asset ನಲ್ಲಿ ಶೇ.8ರಷ್ಟು ಪಾಲು ಹೊಂದಿವೆ. ರಿಯಲ್ ಎಸ್ಟೇಟ್‌ನಲ್ಲಿ ಶೇ.55, ಚಿನ್ನದಲ್ಲಿ ಶೇ.20, ಬ್ಯಾಂಕ್ ಡಿಪಾಸಿಟ್‌ನಲ್ಲಿ ಶೇ.14, ಪ್ರಾವಿಡೆಂಟ್ ಫಂಡ್ ಮತ್ತು ಪೆನ್ಷನ್ ನಲ್ಲಿ ಶೇ.11ರಷ್ಟು ಹೂಡಿಕೆ ಮಾಡಿವೆ.

ಮ್ಯೂಚ್ಯುವಲ್ ಫಂಡ್‌ನಲ್ಲಿ SIP (Systematic Investment Plans) ಹೂಡಿಕೆಯು ತೀವ್ರವಾಗಿ ಬೆಳೆಯುತ್ತಿದೆ. 2019ರಿಂದ 2024ರವರೆಗೆ (Asset under management- AUM) SIP ಮೂಲಕ ಹೂಡಿಕೆಯು 12400 ಕೋಟಿ ರು. ತಲುಪಿದೆ ಎಂದು ವರದಿಯಾಗಿದೆ.

ವೈಯಕ್ತಿಕವಾಗಿ ಭಾರತೀಯರು ವಿದೇಶದಲ್ಲಿ ವೈಯಕ್ತಿಕ ಹೂಡಿಕೆ ( LRS- Liberalised Remittance Scheme ) ಮೂಲಕ ಮೇ 2025ರ ಅಂತ್ಯಕ್ಕೆ 2 ಸಾವಿರ ಕೋಟಿಯಷ್ಟು (23 ಬಿಲಿಯನ್ ಡಾಲರ್) ಹೂಡಿಕೆ ಮಾಡಿದ್ದರೆ, ಭಾರತೀಯ ಕಂಪನಿಗಳ ಒಟ್ಟು ವಿದೇಶ ಹೂಡಿಕೆ OFDI (Outward Foreign Direct Investment ) 3 ಲಕ್ಷ ಕೋಟಿ (38 ಬಿಲಿಯನ್ ಡಾಲರ್)ಗಳಷ್ಟಾಗಿದೆ ಎಂದು ವರದಿಯಾಗಿದೆ.

Praxis Global Alliance ಪ್ರಕಾರ, Household Wealth pool ಸಹಿತ NRI Assets ಹಣಕಾಸು ವರ್ಷ 2023ರಲ್ಲಿದ್ದ 620 ಲಕ್ಷ ಕೋಟಿಯಿಂದ ಹಣಕಾಸು ವರ್ಷ 2027ರ ವೇಳೆಗೆ 935 ಲಕ್ಷ ಕೋಟಿವರೆಗೆ ವೃದ್ಧಿಯಾಗುವ ಲಕ್ಷಣವಿದೆ.

ದೇಶದೊಳಗೆ ಮತ್ತು ಹೊರಗೆ ಭಾರತೀಯರು ಮಾಡುತ್ತಿರುವ ಹೂಡಿಕೆ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದ್ದು, ವೈಯಕ್ತಿಕವಾಗಿ ಉಳಿತಾಯ ಮಾಡುತ್ತಿರುವವರಿಗೆ PPF ಒಂದು ಬಹುದೊಡ್ಡ ಯೋಜನೆಯಾಗಿದೆ. Public Provident Fund ಯೋಜನೆಯನ್ನು 1968ರಲ್ಲಿ ಭಾರತ ಸರಕಾರವು ಪರಿಚಯಿಸಿತು. ಇದೆಲ್ಲ ಭವಿಷ್ಯದ ಭದ್ರತೆ ಕುರಿತ ಆಲೋಚನೆಗಳಾಗಿದ್ದರೆ, ಯಾವಾಗ ಬೇಕಾದರೂ ಅನಾರೋಗ್ಯ ಬರುವ ಕಾರಣದಿಂದ ಆರೋಗ್ಯ ವಿಮೆಯು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕ ವೆನಿಸಿದೆ. ವಾರ್ಷಿಕ ಪ್ರೀಮಿಯಂ ಕಟ್ಟುತ್ತ ಹೋಗುವ ಈ ಯೋಜನೆಗಳಲ್ಲಿ ಅಗತ್ಯ ಬಿದ್ದಾಗ, Cashless Reimbursement ರೂಪದಲ್ಲಿ ಇದರ ಲಾಭ ಪಡೆಯಬಹುದಾಗಿದೆ.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಅವರ ಸರಕಾರವು ‘ಅಮೃತಕಾಲ-2047’ ಎಂಬ ದೂರದೃಷ್ಟಿಯುಳ್ಳ ನೀಲನಕ್ಷೆ ಹಾಕಿಕೊಂಡು ಪ್ರತಿಯೊಬ್ಬರೂ ಬ್ಯಾಂಕ್, ವಿಮೆ, ಪೆನ್ಷನ್ ಮೂಲಕ ಶೇ.100ರಷ್ಟು ಆರ್ಥಿಕವಾಗಿ ಒಳಗೊಳ್ಳುವಂತೆ ಯೋಜಿಸಲಾಗಿದೆ.

ಜನರು ಚಿನ್ನ, ಭೂಮಿಯಂಥ ‘ಭೌತಿಕ ಆಸ್ತಿ’ಗೆ ಬದಲಾಗಿ ಬ್ಯಾಂಕ್, ಬಾಂಡ್, ಮ್ಯೂಚುವಲ್ ಫಂಡ್‌ನಂಥ ‘ಆರ್ಥಿಕ ಆಸ್ತಿ’ ಕಡೆಗೆ ಗಮನವಿಡಲು ಪ್ರೋತ್ಸಾಹಿಸಲಾಗುತ್ತಿದೆ. ಇವುಗಳಿಗೆ ಅನುಗುಣ ವಾಗಿ ಉತ್ಸಾಹಿ ತರುಣರಿಗೆ ಹೊಸದಾಗಿ ಉದ್ಯಮ ಸ್ಥಾಪಿಸಲು ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿ, ತೆರಿಗೆ ನೀತಿಗಳನ್ನು ಬದಲಾಯಿಸಿ, MSMEಗಳಿಗೆ ಪ್ರೋತ್ಸಾಹ ನೀಡಲಾಗಿದೆ.

2047ರ ಒಳಗೆ ಆರ್ಥಿಕವಾಗಿ ಪ್ರಬಲ, ಸಶಕ್ತ ಮತ್ತು ಸಂಪೂರ್ಣ ಸ್ವಾವಲಂಬಿ ಭಾರತವನ್ನು ವಿಶ್ವಮಟ್ಟದಲ್ಲಿ ಸ್ಥಾಪಿಸುವ ಮಹತ್ತರ ಗುರಿಯನ್ನು ಮೋದಿಯವರ ಸರಕಾರ ಹೊಂದಿದೆ. ಇಂಥ ಸಂದರ್ಭದಲ್ಲಿ ಯುವಜನರು ಸಮರ್ಪಕವಾಗಿ ಹೊಸತನಕ್ಕೆ ಕೈಹಾಕಲು ಧೈರ್ಯವಾಗಿ ಮುಂದೆ ಬರುತ್ತಿದ್ದಾರೆ. ಹೊಸ ಯುನಿಕಾರ್ನ್ ಉದ್ಯಮಿಗಳಾಗಿ ಅಂತ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದ್ದಾರೆ.

ಇಂದಿನ ಯುವಕರು ದುಡಿಯುವ ಸಂಬಳದ ಮೇಲೆ ಮಾತ್ರವೇ ಅವಲಂಬಿತರಾಗದೆ, ಮ್ಯೂಚುವಲ್ ಫಂಡ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿರುವುದು ಕೂಡ ಒಳ್ಳೆಯ ಬೆಳವಣಿಗೆ. ಇಂಥ ಯುವಜನಾಂಗಕ್ಕೆ ವಿಶೇಷವಾಗಿ ಉಳಿತಾಯದ ಬಗ್ಗೆ ಶಿಕ್ಷಣ ಕೊಡು ವುದು, ಕಾರ್ಯಾಗಾರ ಹಮ್ಮಿಕೊಳ್ಳುವುದು ಮುಖ್ಯವಾಗಿದೆ. ಖಾಸಗಿ ಹೂಡಿಕೆಗಳಲ್ಲಿ ಅಪಾಯ ಕ್ಕೊಳಗಾಗದಂತೆ ಬಿಗಿನಿಯಮಗಳನ್ನು ತರಬೇಕಿದೆ.

ಸರಕಾರಿ ವ್ಯವಸ್ಥೆಯಲ್ಲಿ ಆಕರ್ಷಣೆಯಿದ್ದು, ಆದಾಯವೂ ಹೆಚ್ಚಾಗುವಂಥ ನಿಯಮಗಳು, ಯೋಜನೆಗಳು ವ್ಯವಸ್ಥಿತವಾಗಿ ಜಾರಿಗೆ ಬಂದಲ್ಲಿ ಸುಸ್ಥಿರ ಅಭಿವೃದ್ಧಿ ಮತ್ತು ಸುರಕ್ಷಿತವಾದ ಆರ್ಥಿಕ ಭದ್ರತೆಯುಳ್ಳ ಯುವಪೀಳಿಗೆಯನ್ನು ಬೆಳೆಸಿದಂತಾಗುತ್ತದೆ. ಇಂಥ ನಿರ್ಧಾರಗಳು ಅವರ ವೈಯಕ್ತಿಕ ಭವಿಷ್ಯವನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ಆರ್ಥಿಕ ಬಲವನ್ನೂ ರೂಪಿಸುತ್ತವೆ. ನಾವೆಲ್ಲ ಆರ್ಥಿಕವಾಗಿ ಬಲಗೊಳ್ಳಲು ಶ್ರಮಿಸೋಣ. ಮುಂದಿನ ಪೀಳಿಗೆಗಾಗಿ ಸುರಕ್ಷಿತ ಮತ್ತು ಸಮೃದ್ಧ ನಾಳೆಗಳನ್ನು ನಿರ್ಮಿಸಲು ಸಂಕಲ್ಪಿಸೋಣ.

ಗುರುರಾಜ್ ಗಂಟಿಹೊಳೆ

View all posts by this author