Gururaj Gantihole Column: ರಸಗೊಬ್ಬರರಹಿತ ಕೃಷಿಯೇ ಸಾವಯವ ಬದುಕಿನ ಆಶಾಕಿರಣ !
ದಶಕಗಳ ಹಿಂದೆ ಇಂಥ ಬೆಳೆಗಳಿಗೆ ಅನುಗುಣವಾಗಿ, ಮತ್ತದೇ ವಿದೇಶಿ ಕಂಪನಿಗಳ ಮೂಲಕ ವಿವಿಧ ಬಗೆಯ ರಾಸಾಯನಿಕಗಳನ್ನು ಸಿಂಪಡಿಸಲು ಆಗ್ರಹಿಸಲಾಗುತ್ತಿತ್ತು. ಇಂಥ ಪ್ರಕ್ರಿಯೆ ಸದ್ದಿಲ್ಲದೆ ಕನಿಷ್ಠ 30 ವರ್ಷ ನಡೆದರೂ ಸಾಕು, ಸ್ಥಳೀಯವಾಗಿ ಬೆಳೆಯುತ್ತಿದ್ದ ಮೂಲಬೆಳೆ ಸಂಪ್ರದಾಯ ವನ್ನು ಪೂರ್ತಿ ಬದಲಾಯಿಸಿಬಿಡಬಹುದು.


ಗಂಟಾಘೋಷ
ಮೊದಲೆಲ್ಲ ಊಟ ಯಾವುದಾದರೇನು, ಎಲ್ಲಿ ಮಾಡಿದರೇನು ಎಂಬಂತೆ ರುಚಿಕಟ್ಟಾಗಿರುತ್ತಿತ್ತು. ಹಿರಿಯರನ್ನು ಕೇಳಿದರೆ, ಕಳೆದುಹೋಗುತ್ತಿರುವ ನೈಸರ್ಗಿಕ ವಿಧಾನವಾಗಿದ್ದ ಸೌದೆಒಲೆ ಕಡೆಗೆ ಬೊಟ್ಟು ಮಾಡುತ್ತಾರೆ. ಇತ್ತೀಚೆಗೆ ಅಡುಗೆ ಮಾಡುವ ವಿಧಾನಗಳು, ಧವಸ-ಧಾನ್ಯಗಳಿಂದ ಹಿಡಿದು ನಿತ್ಯ ಅಡುಗೆಗೆ ಬಳಕೆಯಾಗುವ ಪದಾರ್ಥಗಳೇ ಬದಲಾಗಿಬಿಟ್ಟಿವೆ ಎನ್ನುತ್ತಾರೆ.
ಹೌದು ಎನ್ನದೆ ಬೇರೆ ದಾರಿಯಿಲ್ಲ. ಕಾರಣ, ನಾವು ಬೆಳೆಯುತ್ತಿರುವ ಬೆಳೆಗಳು ಮತ್ತು ಅವುಗಳಿಗೆ ಬಳಸುತ್ತಿರುವ ರಸಗೊಬ್ಬರಗಳು! ಕೇವಲ 20-30 ವರ್ಷಗಳ ಹಿಂದೆ ಇದ್ದಂಥ ಮತ್ತು ಇಂದಿನ ಜೋಳದ ಕಾಳಿನ ಅಳತೆ, ಗುಣಮಟ್ಟ, ತೂಕದ ಬಗ್ಗೆ ಗಮನಹರಿಸಿ. ಇದು ಕೇವಲ ಜೋಳದ ಕಾಳಿನ ಕತೆಯಲ್ಲ.
ಬಹುತೇಕ ಭಾರತದ ಎಲ್ಲ ರಾಜ್ಯಗಳಲ್ಲಿದ್ದ ಹಳೆಯ ಗ್ರಾಮೀಣ ಪದ್ಧತಿ, ದೇಸೀ ತಳಿಗಳನ್ನು ಕಳೆದು ಕೊಂಡು ಸುಧಾರಿತ ತಳಿಗಳ ಹೆಸರಿನಲ್ಲಿ ಯಾವ ಯಾವ ಬೀಜ, ಸಸ್ಯ, ನಾಟಿಗಳನ್ನು ಬೆಳೆಯುತ್ತಿದ್ದೇ ವೆಂಬುದನ್ನೇ ಅರಿಯದ ಸ್ಥಿತಿಗೆ ಬಂದುನಿಂತಿದ್ದೇವೆ.
ಪ್ರತಿ ಧವಸ-ಧಾನ್ಯಕ್ಕೂ ಅದರದ್ದೇ ಆದ ಜೀವತಂತು (DNA Structure) ಇರುತ್ತದೆ. ಇದು ಆಯಾ ಭೌಗೋಳಿಕ ಪ್ರದೇಶಕ್ಕನುಗುಣವಾಗಿ, ನೂರಾರು ವರ್ಷಗಳಿಂದ ರೂಪುಗೊಂಡು, ಹದ ಹೊಂದಿದ ಮೇಲೆ, ಸ್ಥಳೀಯರಿಗೆ ನಿತ್ಯ ಆಹಾರವಾಗಿ ಹೊಂದಿಕೆಯಾಗಿರುತ್ತದೆ. ಇದೆಲ್ಲವನ್ನು ಮೀರಿ, ವಿದೇಶಿ ತಳಿಗಳನ್ನು, ಬೀಜಗಳನ್ನು ರೈತರಿಗೆ ಪ್ರಾಯೋಗಿಕವಾಗಿ ಹಂಚಿದ್ದಲ್ಲದೆ, ಅವನ್ನು ಬೆಳೆಯಲು ಉಚಿತ ಯೋಜನೆಗಳ ಮೂಲಕ ಪ್ರೋತ್ಸಾಹಿಸಿದಾಗ, ಸಹಜವಾಗೇ ರೈತರು ಬೆಳೆಯ ತೊಡಗುತ್ತಾರೆ.
ಇದನ್ನೂ ಓದಿ: Gururaj Gantihole Column: ಜುಗಾರಿ ಮತ್ತು ಸಿನಿಮಾ ಜಗತ್ತಿನ ರಾಜಧಾನಿಗಳ ಜೊತೆಗೊಂದು ಸುತ್ತು
ದಶಕಗಳ ಹಿಂದೆ ಇಂಥ ಬೆಳೆಗಳಿಗೆ ಅನುಗುಣವಾಗಿ, ಮತ್ತದೇ ವಿದೇಶಿ ಕಂಪನಿಗಳ ಮೂಲಕ ವಿವಿಧ ಬಗೆಯ ರಾಸಾಯನಿಕಗಳನ್ನು ಸಿಂಪಡಿಸಲು ಆಗ್ರಹಿಸಲಾಗುತ್ತಿತ್ತು. ಇಂಥ ಪ್ರಕ್ರಿಯೆ ಸದ್ದಿಲ್ಲದೆ ಕನಿಷ್ಠ 30 ವರ್ಷ ನಡೆದರೂ ಸಾಕು, ಸ್ಥಳೀಯವಾಗಿ ಬೆಳೆಯುತ್ತಿದ್ದ ಮೂಲಬೆಳೆ ಸಂಪ್ರದಾಯ ವನ್ನು ಪೂರ್ತಿ ಬದಲಾಯಿಸಿಬಿಡಬಹುದು.
ಅಂದು ಬೆಳೆ ಬೆಳೆಯಲು ರೈತರಿಗೆ ಗೊಬ್ಬರದ ಅವಶ್ಯಕತೆಯೇ ಇರಲಿಲ್ಲ. ಇಂದು ಗೊಬ್ಬರವಿಲ್ಲದೆ ಗದ್ದೆ-ತೋಟಗಳಿಗೆ ಕಾಲಿಡುವಂತಿಲ್ಲ. ಕಳೆದ 2-3 ದಿನಗಳಿಂದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಪರಿಸ್ಥಿತಿಯೆಂದರೆ, ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಬೇಡಿಕೆಗನುಗುಣವಾಗಿ ರಾಜ್ಯಮಟ್ಟದಿಂದ ಹಿಡಿದು ಜಿ, ತಾಲೂಕು ಮಟ್ಟದವರೆಗೆ ಸಮರ್ಪಕವಾಗಿ ರಸಗೊಬ್ಬರ ಸಿಗದೆ, ರೈತರು ಕಂಗಾಲಾಗಿ ಪ್ರತಿಭಟನೆಗೆ ಇಳಿದಿದ್ದಾರೆ.
ರೈತರು ರಸಗೊಬ್ಬರವಿಲ್ಲದೆ ಗದ್ದೆಗಳಿಗೆ ಕಾಲಿಡುವುದಿಲ್ಲವೇನೋ ಎಂಬ ವಾತಾವರಣ ನಿರ್ಮಾಣ ವಾಗಿದೆ. ದೇಶದಲ್ಲಿ ಒಟ್ಟು 150 ಮಿಲಿಯನ್ ರೈತರಿದ್ದು ಇದರಲ್ಲಿ ಭೂರಹಿತರೂ ಸೇರಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಟ್ಟು 31,679,145 ಎಕರೆ ಕೃಷಿಭೂಮಿಯಿದ್ದು, 16 ಲಕ್ಷ ಭೂರಹಿತ ಮತ್ತು 78 ಲಕ್ಷ ಭೂಮಿ ಹೊಂದಿದ ರೈತರಿದ್ದಾರೆಂದು ದಾಖಲೆಗಳು ಹೇಳುತ್ತವೆ.
ಸಾವಯವ, ಸಹಜಕೃಷಿ ಎಂಬಂತೆ ತಮಗೆ ತಿಳಿದ ಸ್ಥಳೀಯ ಪದ್ಧತಿಗಳಲ್ಲಿ ಕೃಷಿ ಮಾಡಿಕೊಂಡಿದ್ದ ರೈತರಿಗೆ 1906ರಲ್ಲಿ SSP (Single Super Phosphate) ಎಂಬ 65 ಯುನಿಟ್ ಸಾಮರ್ಥ್ಯದ ರಸಗೊಬ್ಬರ ಕಾರ್ಖಾನೆಯನ್ನು ತಮಿಳುನಾಡಿನ ರಾಣಿಪೇಟೆ ಎಂಬಲ್ಲಿ ಸ್ಥಾಪಿಸಿ, ಮೊದಲಬಾರಿಗೆ ರಸಗೊಬ್ಬರವನ್ನು ಪರಿಚಯಿಸಲಾಯಿತು. ಇಲ್ಲಿಂದ ಭಾರತೀಯ ಕೃಷಿ ಪದ್ಧತಿಯೊಳಗೆ ಪ್ರವೇಶಿಸಿದ ರಸಗೊಬ್ಬರ, ಮುಂದೆ 1933ರಲ್ಲಿ Ammonium Sulphate (AS) 10 ಯುನಿಟ್‌ಗಳಲ್ಲಿ, 1959ರಲ್ಲಿ ಯೂರಿಯಾ, ASN, AC ಮುಂತಾದವು 29 ಯುನಿಟ್ ಗಳಲ್ಲಿ ಆರಂಭಗೊಂಡವು.
ದೇಶದ ಮೊದಲ ರಸಗೊಬ್ಬರ ಕಾರ್ಖಾನೆ Fertilizer Corporation of India (FCI) 1951ರಲ್ಲಿ ಜಾರ್ಖಂಡ್ ರಾಜ್ಯದ ಸಿಂದ್ರಿಯಲ್ಲಿ ಆರಂಭಗೊಂಡಿತು. ದೇಶದಲ್ಲಿ ಹಸಿರುಕ್ರಾಂತಿ ಆರಂಭ ಗೊಂಡು, ಎಂ.ಎಸ್.ಸ್ವಾಮಿನಾಥನ್ ನೇತೃತ್ವದಲ್ಲಿ ಕೃಷಿಯಲ್ಲಿ ವಿನೂತನ ಪ್ರಯತ್ನಗಳಾದವು.
ಹೆಚ್ಚು ಇಳುವರಿಗಾಗಿ ರಸಗೊಬ್ಬರಗಳೂ ದೊರೆಯುತ್ತಿದ್ದುದರಿಂದ ಬೆಳೆಯಲ್ಲಿ ಬದಲಾವಣೆ ಕಾಣುವಂತಾಯಿತು. ಆಗ್ರೋ-ಕೆಮಿಕಲ್ ಇಂಡಸ್ಟ್ರಿಯನ್ನು ದೇಶದಲ್ಲಿ ಶಾಶ್ವತ ನೆಲೆಕಾಣಲು ಕೆಕಿ ಹಾರ್ಮುಸ್ಜೀ ಘಾರ್ಡಾ ಅವರ ಪ್ರಯತ್ನ ಕಾರಣವಾದ್ದರಿಂದ, ಇವರನ್ನು ಭಾರತದಲ್ಲಿ Father of Fertilizer ಎಂದೇ ಕರೆಯುತ್ತಾರೆ. ಪ್ರಸ್ತುತ, DAP, NPK ಸೇರಿದಂತೆ ವಿವಿಧ ರಸಗೊಬ್ಬರ ಉತ್ಪಾದನೆ ಯಲ್ಲಿ IFFCO (Indian Farmers Fertilizers Corporative Limited) ಸಂಸ್ಥೆಯು ದೇಶಾದ್ಯಂತ ಮುಂಚೂಣಿಯಲ್ಲಿದೆ.
RCF, NFL, FACT, BVFCL, HFCL, PDIL ಸೇರಿದಂತೆ ಹತ್ತಾರು ಖಾಸಗಿ ಕಂಪನಿಗಳು ರಸಗೊಬ್ಬರ ಉತ್ಪಾದನೆಯಲ್ಲಿ ತೊಡಗಿವೆ. ಇಡೀ ದೇಶದ ಪಂಜಾಬ್ ರಾಜ್ಯವು ಪ್ರತಿ ಹೆಕ್ಟೇರ್‌ಗೆ 250 ಕೆ.ಜಿ. (ದೇಶದ ಸರಾಸರಿ ಪ್ರತಿ ಹೆಕ್ಟೇರ್‌ಗೆ 140 ಕೆ.ಜಿ.) ರಸಗೊಬ್ಬರವನ್ನು ಬಳಸುತ್ತಿದೆ. ಪೊಟ್ಯಾಷ್ ಎಂಬ ರಸಗೊಬ್ಬರವನ್ನು ಭಾರತದಲ್ಲಿ ತಯಾರಿಸಲು ಅನುಮತಿ ಇರುವುದಿಲ್ಲವಾದ್ದರಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಇನ್ನು, ಯೂರಿಯಾವನ್ನು ರಸಗೊಬ್ಬರಗಳ ರಾಜನೆಂದು ರೈತರು, ಬಳಕೆದಾರರು ಪರಿಗಣಿಸಿzರೆ. ದೇಶದಲ್ಲಿ, 1950ರಿಂದಲೂ ರಸಗೊಬ್ಬರಗಳು ಯಥೇಚ್ಛವಾಗಿ ಬಳಕೆಯಲ್ಲಿದ್ದರೂ, 35 ವರ್ಷಗಳ ಬಳಿಕ ಇವುಗಳನ್ನು ನಿಯಂತ್ರಿಸುವ ಕಾನೂನು ನಿಯಮಗಳನ್ನು- The Fertilizer (Control) Order -1985ರಲ್ಲಿ ಜಾರಿಗೆ ತರಲಾಗುತ್ತದೆ. ರಸಗೊಬ್ಬರಗಳು ( Fertilizers) ಮತ್ತು ಕೀಟನಾಶಕಗಳಿಗೆ ( Pesticides) ಬಹಳ ವ್ಯತ್ಯಾಸವೇನಿಲ್ಲ.
ಎರಡರ ಬಳಕೆಯೂ ಮಣ್ಣಿನ ಫಲವತ್ತತೆಗೆ ಹಾನಿಕಾರಕ. ರಸಗೊಬ್ಬರಗಳು ಇಳುವರಿ ಬರಲು ಬಳಕೆಯಾಗುತ್ತಿದ್ದರೆ, ಕೀಟನಾಶಕಗಳು ಮಾತ್ರ ನೆಲದ ಜೀವಜಂತುಗಳನ್ನು, ಎರೆಹುಳುಗಳಂಥ ಕೃಷಿಗೆ ಸಹಕಾರಿಯಾಗುವ ಎಲ್ಲ ವಿಧದ ಜೀವಾಣು-ಕೀಟಾಣುಗಳನ್ನು ಕೊಲ್ಲುತ್ತವೆ.
ದೇಶದಲ್ಲಿ ಅತಿಹೆಚ್ಚು ಕೀಟನಾಶಕದ ಬಳಕೆಯಲ್ಲಿ ಮಹಾರಾಷ್ಟ್ರವು ಮುಂಚೂಣಿಯಲ್ಲಿದ್ದು 12 ಸಾವಿರ ಟನ್ ವಾರ್ಷಿಕ ಬಳಕೆದಾರರನ್ನು ಹೊಂದಿದೆ. ಉತ್ತರ ಪ್ರದೇಶ 7 ಸಾವಿರ, ಪಂಜಾಬ್ 6 ಸಾವಿರ, ತೆಲಂಗಾಣ 5 ಸಾವಿರ, ಹರಿಯಾಣ 4 ಸಾವಿರ ಮತ್ತು ಕರ್ನಾಟಕ 2 ಸಾವಿರ ಟನ್‌ಳಷ್ಟು ಬಳಕೆ ಮಾಡುತ್ತಿವೆ ಎನ್ನಲಾಗಿದೆ.
ಇತರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದ ರೈತರು ಕಡಿಮೆ ಕೀಟನಾಶಕವನ್ನು ಬಳಸು ತ್ತಿದ್ದಾರೆ. ಇದು ಸಾವಯವಕ್ಕೆ ಅತ್ಯಂತ ಪೂರಕ ಸಂದರ್ಭವೆನ್ನಬಹುದು. ಕೀಟನಾಶಕ, ಕಳೆನಾಶಕ ( Herbicide ), ಶಿಲೀಂಧ್ರನಾಶಕ ( Fungicide ), ಇಲಿ, ಹೆಗ್ಗಣನಾಶಕ ( Rodenticide ) ಮತ್ತು ನೆಲದೊಳಗಿನ ಹುಳುನಾಶಕ ( Nematicide) ಗಳನ್ನು ಕೊಲ್ಲುವಂಥ 5 ವಿಧಗಳಲ್ಲಿ ಪೆಸ್ಟಿಸೈಡ್‌ಗಳು ದೊರೆಯುತ್ತವೆ.
ಇವುಗಳ ಬದಲಾಗಿ, ಜೈವಿಕ ಕೃಷಿ ( Organic Farming ), ಜೈವಿಕ ನಾಶಕ ( Bio Pesticides) ಗಳನ್ನು ಹೆಚ್ಚು ಪ್ರಚಾರಿಸಿ, ಪ್ರೋತ್ಸಾಹಿಸಿ ಜಾರಿಗೆ ತರುವ ಹೊಣೆ ಕೃಷಿ ಇಲಾಖೆ ಮತ್ತು ಸರಕಾರದ್ದು. ಇದಕ್ಕಾಗಿ, ನಾವು ಇತರೆ ರಾಜ್ಯಗಳನ್ನು ಮಾದರಿಯಾಗಿ ಪರಿಗಣಿಸಬೇಕು. ಇಂಥ ವಿಪರೀತ ಬಳಕೆ ಯನ್ನು ತಡೆಗಟ್ಟಲು ನರೇಂದ್ರ ಮೋದಿ ಸರಕಾರವು 2010ರಲ್ಲಿ NBS (Nutrient Based Subsidy) ಯೋಜನೆಯನ್ನು ಜಾರಿಗೆ ತಂದಿತು.
ಮಣ್ಣಿನ ರಕ್ಷಣೆ ಇತ್ಯಾದಿ ಗಮನದಲ್ಲಿರಿಸಿಕೊಂಡು ಪೋಷಕಾಂಶದ ಅಗತ್ಯಕ್ಕೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಮತ್ತು ಕೇಂದ್ರ ಸರಕಾರದ ಸಬ್ಸಿಡಿಯಲ್ಲಿ ರೈತರಿಗೆ ತಲುಪಿಸುವ ಯೋಜನೆ ಇದಾಗಿದೆ. ರಾಜ್ಯಕ್ಕೆ ಸುಮಾರು 6.5 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರದ ತುರ್ತು ಅಗತ್ಯವಿದೆ ಎನ್ನಲಾಗಿದೆ.
ಈಗಾಗಲೇ ಮಾನ್ಸೂನ್ ರಾಜ್ಯವನ್ನು ಪ್ರವೇಶಿಸಿದ್ದು, ಈ ಬಾರಿ ಹೆಚ್ಚು ಆರ್ದ್ರವಾಗಿರಲಿದೆ ಎಂದೆಲ್ಲ ವರದಿಗಳಿವೆ. ಇದನ್ನರಿತು, ಕೇಂದ್ರ ಸರಕಾರವು 7 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ರಸಗೊಬ್ಬರವನ್ನು ರಾಜ್ಯದ ರೈತರಿಗೆ ಸರಬರಾಜು ಮಾಡಿಯಾಗಿದೆ ಎನ್ನಲಾಗಿದೆ. ಇಷ್ಟಾಗಿಯೂ ಕೆಲವೆಡೆ ಕೃತಕ ಅಭಾವ ಸೃಷ್ಟಿಸಿ, ಬೇಡಿಕೆ ಹೆಚ್ಚುವಂತೆ ಮಾಡಿ ಅಧಿಕ ಬೆಲೆಗೆ ಮಾರುತ್ತಿರುವುದನ್ನು ತಡೆಯುವ ಹೊಣೆ ರಾಜ್ಯ ಸರಕಾರದ್ದಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಕರ್ನಾಟಕ ಸರಕಾರವು ಖಾರೀಫ್ 2025ಕ್ಕೆ 6,30,೦೦೦ ಮೆಟ್ರಿಕ್ ಟನ್ ಯೂರಿಯಾ ಬೇಡಿಕೆಯಿಟ್ಟಿದ್ದರೂ, ಕೇಂದ್ರವು ಈಗಾಗಲೇ 8,73,000 ಮೆಟ್ರಿಕ್ ಟನ್‌ನಷ್ಟು ಪೂರೈಸಿದ್ದು, ಇದು ಬೇಡಿಕೆಯನ್ನು ಮೀರಿಸಿದೆ ಮತ್ತು ರಾಜ್ಯದೊಳಗೆ ಈಗಾಗಲೇ 7,08,೦೦೦ ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು 2025 ಜುಲೈ 25ರಂದು, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು, ಖಾರೀಫ್ ಹಂಗಾಮಿಗೆ ಒಟ್ಟು 11,17,೦೦೦ ಮೆಟ್ರಿಕ್ ಟನ್ ಯೂರಿಯಾ ರಾಜ್ಯಕ್ಕೆ ಅಗತ್ಯವಾಗಿದೆ ಎನ್ನುವ ಮೂಲಕ ಇನ್ನೂ ಹೆಚ್ಚು ರಾಸಾಯನಿಕದ ಬಳಕೆಯಲ್ಲಿ ನಾವು ತೊಡಗುತ್ತಿದ್ದೇವೆ ಎಂಬುದನ್ನು ಸೂಚ್ಯವಾಗಿ ಹೇಳಿದಂತಾಗಿದೆ.
ರಸಗೊಬ್ಬರ ಮತ್ತು ಕೀಟನಾಶಕಗಳ ವಿಚಾರದಲ್ಲಿ ಕರ್ನಾಟಕ ಸರಕಾರವು ಸಿಕ್ಕಿಂ ರಾಜ್ಯದ ಮಾದರಿಯನ್ನು ಯಾಕೆ ಅನುಸರಿಸುತ್ತಿಲ್ಲವೆಂಬುದೇ ಸೋಜಿಗದ ಸಂಗತಿ. ಸಿಕ್ಕಿಂ ಯಾವುದೇ ರಾಸಾಯನಿಕ ಬಳಸದಂತೆ ತನ್ನ ಬೆಳೆಗಾರರಿಗೆ ಸಂಪೂರ್ಣ ನಿಷೇಧ ಹೇರಿದ್ದು, ನೈಸರ್ಗಿಕ, ಸಾವಯವ ಕೃಷಿ ಮೇಲೆ ಅವಲಂಬಿತವಾಗಿದೆ. India's First 100% Organic State ಎಂದು ಗುರುತಿಸಲ್ಪಟ್ಟಿದೆ. ಜಗತ್ತಿನ ಉತ್ತಮ ಸ್ಟೇಟ್ ಪಾಲಿಸಿಗಳಲ್ಲಿ ಒಂದಾಗಿದೆ ಎಂದು FAO (Food and Agriculture Organisation ) ಸಂಸ್ಥೆಯು ಗೌರವಿಸಿದೆ.
ಸಾವಯವ ಗೊಬ್ಬರ ಬಳಕೆಯನ್ನು ಹೆಚ್ಚಿಸಿದಾಗ, ಮನೆ ಮತ್ತು ತೋಟದ ತ್ಯಾಜ್ಯಗಳಿಂದ ಮಾಡ ಲಾಗುವ ಹಗುರ ಗೊಬ್ಬರ (ಕಾಂಪೋ) ಮಣ್ಣಿಗೆ ಹಾರ್ಮೋನುಗಳಂತಾಗುತ್ತದೆ. ಜತೆಗೆ, ಮೇಣು ಗೊಬ್ಬರವು ( Vermi compost) ಹುಳಗಳ ಸಹಾಯದಿಂದ ತಯಾರಾಗುವ ಅತ್ಯುತ್ತಮ ಸಾವಯವ ಗೊಬ್ಬರಗಳಲ್ಲಿ ಒಂದಾಗಿದೆ.
ಗೋಮೂತ್ರ, ಗೋಮಯ, ಹುಲ್ಲು ಇತ್ಯಾದಿಯಿಂದ ತಯಾರಾದ ಗೊಬ್ಬರವೂ ಕೃಷಿಗೆ ಉತ್ತಮ ವಾಗಿದೆ. ಅಗತ್ಯವಿದ್ದಲ್ಲಿ ಕಡಿಮೆ ಹಾನಿಕಾರಕ ರಸಗೊಬ್ಬರ ಬಳಸಿ, ಮಣ್ಣುಪರೀಕ್ಷೆ ಆಧಾರಿತ ಸಾವಯವ ಗೊಬ್ಬರ, ಜೀವಾಣು, ಜೀವಾಮೃತ ಇತ್ಯಾದಿ ಬಳಸುತ್ತಿದ್ದರೆ, ಮಣ್ಣು ಶಕ್ತಿಯುತವಾಗುತ್ತ ಉತ್ತಮ ಇಳುವರಿಯತ್ತ ಸಾಗಬಲ್ಲದು. ರೈಜೋಬಿಯಂ, ಅಜೋಸ್ಪಿರಿಲ್ಲಮ, ಅಜೋಟೋಬಾಕ್ಟರ್, -ಸೋಬ್ಯಾಕ್ಟೀರಿಯಾ, ಮೈಕರೋರೆಜಾ ಇತ್ಯಾದಿ ಜೀವಾಣುಗಳು ನೈಸರ್ಗಿಕವಾಗಿ ಪೋಷಕಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುವಿಕೆಯಿಂದಾಗಿ ವಾತಾವರಣದಿಂದ ನೈಸರ್ಗಿಕವಾಗಿ ನೈಟ್ರೋಜನ್ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೂಡ ಉಂಟಾಗುತ್ತದೆ.
ಮಿಶ್ರಬೆಳೆ ಪದ್ಧತಿ, ಹಸಿರುಗೊಬ್ಬರ ( Green manure ) ಬಳಕೆ, ಪ್ರೆಸಿಷನ್ ಕೃಷಿ ತಂತ್ರಜ್ಞಾನ, ಎPಖ ಆಧಾರಿತ ಮಣ್ಣಿನ ಪರೀಕ್ಷೆ, ಡ್ರಿಪ್ ಫರ್ಟಿಗೇಷನ್, ಕೃಷಿ ಮೊಬೈಲ್ ತಂತ್ರಾಂಶಗಳ ಮೂಲಕ ಅಗತ್ಯವಿರುವಷ್ಟು ಮಾತ್ರ ಗೊಬ್ಬರವನ್ನು ಬಳಸಬಹುದು. ಬೆಳೆ ಕೊಯ್ಲು ಬಳಿಕ ಉಳಿದ ಹಿಂಡು ಅಥವಾ ಎಲೆಗಳನ್ನು ಮಣ್ಣಿನ ಮೇಲೆ ಹಾಸುವುದರಿಂದ ಇದು ತೇವಾಂಶ ಕಾಯ್ದುಕೊಳ್ಳಲು ಸಹಾಯಕವಾಗುತ್ತದೆ.
ಗೊಬ್ಬರ ಬೇಡಿಕೆಯನ್ನು ತಗ್ಗಿಸುವಂಥ ಮಲ್ಚಿಂಗ್ ಪದ್ಧತಿಯ (Mulching ) ತರಬೇತಿಯನ್ನು ಕೃಷಿಕರಿಗೆ ನೀಡಿ ಜಾಗೃತಿ ಮೂಡಿಸಬೇಕಿದೆ. ಸಾವಯವ ಕೃಷಿಯನ್ನು ಬೆಂಬಲಿಸುವಂಥ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಪಾರಂಪರ್ಯ ಕೃಷಿ ವಿಕಾಸ ಯೋಜನೆ ( PKVY ), ಭಾರತ್ ಸಾವಯವ ಮಿಷನ್, ಕೃಷಿಕ ರತ್ನ/ಮಿಲೆಟ್ ಮಿಷನ್ ಯೋಜನೆಗಳ ಸದುಪಯೋಗ ಪಡೆಯಬಹು ದಾಗಿದೆ.
ಆರಂಭಿಕ ಅವಧಿಯಲ್ಲಿ ಉತ್ಪಾದನೆಯ ಇಳಿಕೆಗೆ ರೈತರು ಭಯ ಪಡುತ್ತಾರೆಯಾದ್ದರಿಂದ ಸಾವಯವ ಕೃಷಿಗೆ ಇದು ಪ್ರಮುಖ ಅಡಚಣೆಯಾಗಿದೆ. ಈ ಹಂತದಲ್ಲಿ ರಾಜ್ಯ ಸರಕಾರ ಇವರ ಬೆಂಬಲಕ್ಕೆ ನಿಲ್ಲಬೇಕಿದೆ. ಅಮೆರಿಕವು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಪೂರ್ಣ ಹಿಡಿತ ಸಾಧಿಸಲು ಹೊಂಚುಹಾಕಿದ್ದನ್ನು ಮೋದಿ ಸರಕಾರ ನಿರಾಕರಿಸುವ ಮೂಲಕ ದೇಶಿ ಉತ್ಪನ್ನಕ್ಕೆ ಆದ್ಯತೆ ನೀಡಿದೆ. ಹಾಗಾಗಿಯೇ ಇಂದು ಶೇ.50ರಷ್ಟು ಸುಂಕವನ್ನು ಅಮೆರಿಕವು ಭಾರತದ ಮೇಲೆ ಹೇರಿದೆ. ಈ ಸಂಕಷ್ಟದ ಸಂದರ್ಭದಲ್ಲಿ ವಿದೇಶಿ ವಸ್ತುಗಳನ್ನು ಕಡಿಮೆ ಬಳಸುತ್ತ, ಆಂತರಿಕವಾಗಿ ಬಲಿಷ್ಠ ಗೊಳ್ಳೋಣ. ಕೃಷಿಯಲ್ಲೂ ಸ್ವದೇಶಿತನವನ್ನು ಹೆಚ್ಚು ಅಳವಡಿಸಿಕೊಳ್ಳೋಣ.
ರಸಗೊಬ್ಬರರಹಿತ ಸಾವಯವ ಕೃಷಿಯು ಭವಿಷ್ಯದ ಸಮೃದ್ಧ ಬದುಕಿಗೆ ದಾರಿ ತೋರಿಸುತ್ತದೆ. ಇದು ಮಣ್ಣಿನ ಆರೋಗ್ಯ, ನೀರಿನ ಶುದ್ಧತೆ, ಮಾನವ ಆರೋಗ್ಯ ಮತ್ತು ಪರಿಸರದ ಸಮತೋಲನದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಸರಕಾರ, ವಿಜ್ಞಾನಿಗಳು, ರೈತರು ಮತ್ತು ಗ್ರಾಹಕರು ಜತೆಯಾ ಗಿದ್ದರೆ ಸಾವಯವ ಕೃಷಿ ಭಾರತದಲ್ಲಿ ತನ್ನ ವೈಭವ ಮೆರೆಯಬಲ್ಲದು.