Vinayaka V Bhat Column: ಸಂಸ್ಕೃತದ ಸೇವೆಯಲ್ಲಿ ಸುಧರ್ಮ ಕಂಡ ಸಾರ್ಥಕತೆ
ಸಂಸ್ಕೃತವನ್ನು ಬಹಳ ಇಷ್ಟಪಟ್ಟು ಕಲಿಯುತ್ತಿರುವ ನನ್ನ ಮಗನೂ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ಗಳಿಸಿದ್ದರಿಂದ, ಅವನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹೂವಿನ ಜತೆಗೆ ದಾರವೂ ದೇವರನ್ನು ಸೇರುವಂತೆ, ನಾನೂ ಮತ್ತು ನನ್ನ ಮಡದಿಯೂ ಈ ಅಪರೂಪದ ಕಾರ್ಯ ಕ್ರಮಕ್ಕೆ ಆತನ ಜತೆ ಹೋಗಿ ಸುಂದರ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿದ್ದೆವು.

-

ವಿದ್ಯಮಾನ
vinayakavbhat@autoaxle.com
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅನೇಕ ಅಪರೂಪದ ಸಂಗತಿಗಳಿವೆ. ಕಥೆ ಹೇಳುವುದಕ್ಕೆ ಮತ್ತು ಕಥೆ ಕೇಳುವುದಕ್ಕೆ ‘ಕಥಾಸುರುಚಿ’ ಎನ್ನುವ ಸಂಸ್ಥೆಯೊಂದಿದೆ, ವಿಷ್ಣುಸಹಸ್ರನಾಮದ ಕಲಿಕೆಗೆ ಮತ್ತು ಕ್ರಮಬದ್ಧವಾದ ಪಠಣೆಗಾಗಿ ‘ಶ್ರೀ ವಿಷ್ಣುಸಹಸ್ರನಾಮ ಸಂಘ’ವಿದೆ. ಅಷ್ಟೇ ಅಲ್ಲದೇ, ಸಂಸ್ಕೃತ ಹಾಗೂ ಶಾಸ್ತ್ರಗಳನ್ನು ಓದುವವರಿಗೆ ಪ್ರೋತ್ಸಾಹಿಸಲು, ವೇದಶಾಸ್ತ್ರ ಪೋಷಿಣಿ ಸಭಾ (ವೇಶಾಪೋಷಾ) ಎನ್ನುವ ಸಂಸ್ಥೆಯಿದೆ. ಅಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶ್ರೀಮನ್ಮಹಾರಾಜಾ ಸಂಸ್ಕೃತ ಕಾಲೇಜಿನಲ್ಲಿ ಓದಲು ಬರುವವರಿಗೆ, ಐದಾರು ದಶಕಗಳಿಂದ ಈ ಸಂಸ್ಥೆ ಉಚಿತವಾಗಿ ಊಟೋಪಚಾರದ ವ್ಯವಸ್ಥೆ ಮಾಡುತ್ತಾ ಬಂದಿದೆ.
ಇಷ್ಟೆ ವ್ಯವಸ್ಥೆಗಳಿದ್ದರೂ, ವರ್ಷದಿಂದ ವರ್ಷಕ್ಕೆ ಸಂಸ್ಕೃತ ಓದುವವರ ಸಂಖ್ಯೆ ಮಾತ್ರ ಕಡಿಮೆ ಯಾಗುತ್ತಲೇ ಸಾಗಿರುವುದು ವಿಷಾದದ ಸಂಗತಿಯಾಗಿದೆ, ಇರಲಿ. ಬಹಳಷ್ಟು ಜನರಿಗೆ ಗೊತ್ತಿರದ ಇನ್ನೂ ಒಂದು ಹೆಮ್ಮೆಯ ಸಂಗತಿಯ ಬಗ್ಗೆ ಹೇಳುವುದಾದರೆ, ಮೈಸೂರಿನ ಅಗ್ರಹಾರದ ಸಣ್ಣ ಜಾಗವೊಂದರಿಂದ ‘ಸುಧರ್ಮ’ ಎಂಬ ಹೆಸರಿನಿಂದ, ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆಯೊಂದು ಕಳೆದ 56 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ. ಕಳೆದ 12 ವರ್ಷಗಳಿಂದ ಮೈಸೂರಿನ ವಾಸವಿದ್ದರೂ, ಕೆಲದಿನಗಳ ಹಿಂದಿನವರೆಗೂ ನನಗೆ ಈ ವಿಷಯ ತಿಳಿದಿರಲಿಲ್ಲ.
ಕೆಲದಿನಗಳ ಹಿಂದೆ ಮೈಸೂರು ವಿಭಾಗೀಯ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರ ಸಂಘದವರು, ಈ ವರ್ಷ ಎಸ್‌ಎಸ್‌ಎಲ್ ಸಿಯಲ್ಲಿ ಸಂಸ್ಕೃತ ವಿಷಯದಲ್ಲಿ ನೂರಕ್ಕೆ ನೂರು ಅಂಕ ತೆಗೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲು, ‘ಸಂಸ್ಕೃತ ಪ್ರತಿಭಾ ಪುರಸ್ಕಾರ’ವೆಂಬ ಅಪರೂಪದ ಶ್ಲಾಘನೀಯ ಕಾರ್ಯ ಕ್ರಮವೊಂದನ್ನು ಆಯೋಜಿಸಿದ್ದರು. ಹಾಗೆ ಸೆಂಟ್ ಪರ್ಸೆಂಟ್ ಅಂಕ ತೆಗೆದ ವಿದ್ಯಾರ್ಥಿಗಳ ಜತೆಗೆ ಪಾಲಕರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: Vinayaka V Bhat Column: ಯುಗಪುರುಷನ ಸ್ವಾರ್ಥರಹಿತ ಸಾರ್ಥಕ 75 ವಸಂತಗಳು
ಸಂಸ್ಕೃತವನ್ನು ಬಹಳ ಇಷ್ಟಪಟ್ಟು ಕಲಿಯುತ್ತಿರುವ ನನ್ನ ಮಗನೂ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ಗಳಿಸಿದ್ದರಿಂದ, ಅವನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹೂವಿನ ಜತೆಗೆ ದಾರವೂ ದೇವರನ್ನು ಸೇರುವಂತೆ, ನಾನೂ ಮತ್ತು ನನ್ನ ಮಡದಿಯೂ ಈ ಅಪರೂಪದ ಕಾರ್ಯ ಕ್ರಮಕ್ಕೆ ಆತನ ಜತೆ ಹೋಗಿ ಸುಂದರ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿದ್ದೆವು.
ಬಹಳ ವ್ಯವಸ್ಥಿತವಾದ ಕಾರ್ಯಕ್ರಮ ಅದಾಗಿತ್ತು. ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಂದು ಸನ್ಮಾನಿಸಲಾಗಿತ್ತು. ಸನ್ಮಾನಿತರಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿಗಳೂ ಇರುವುದನ್ನು ತಿಳಿದು ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಕುತೂಹಲದಿಂದ ನಾನು ಮಾತನಾಡಿಸಿದಾಗ ಅವರು, “ಸರ್, ನನಗೆ ಮೊದಲಿನಿಂದಲೂ ಸಂಸ್ಕೃತವೆಂದರೆ ಬಹಳ ಇಷ್ಟ, ಹಾಗಾಗಿ ಕಾಲೇಜಿ ನಲ್ಲೂ ಪ್ರಥಮ ಭಾಷೆಯಾಗಿ ಸಂಸ್ಕೃತವನ್ನೇ ಆಯ್ದುಕೊಂಡಿದ್ದೇನೆ" ಎಂದಾಗ ಸಂತೋಷ ವಾಯಿತು. ಆ ಹುಡುಗರ ಬೆನ್ನು ತಟ್ಟಿ, ನಿಮ್ಮ ಸಂಸ್ಕೃತ ಪ್ರೀತಿಗೆ ನನ್ನದೊಂದು ‘ಸಲಾಮ’ ಎಂದು ಬಂದಿದ್ದೆ.
ಯಾಕೆ ಈ ಕಾರ್ಯಕ್ರಮದ ಬಗ್ಗೆ ಹೇಳಬೇಕಾಯಿತೆಂದರೆ, ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ, ಅತ್ಯಂತ ಸರಳವಾಗಿ ತೋರ್ಪಡುವ ವಿಶೇಷ ವ್ಯಕ್ತಿಯೊಬ್ಬರು ಆಗಮಿಸಿದ್ದರು. ಅವರ ಹೆಸರು ಕೆ.ಎಸ್. ಜಯಲಕ್ಷ್ಮಿ. ’ಸುಧರ್ಮ’ ಎಂಬ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆಯನ್ನು ಸಂಪಾದಕಿ ಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಅವರನ್ನು ಅಂದು ಪರಿಚಯಿಸಲಾಯಿತು.
ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆಯೊಂದು ನನ್ನ ಹತ್ತಿರದಿಂದಲೇ ಪ್ರಕಟವಾಗುತ್ತಿರುವುದನ್ನು ತಿಳಿದು ಸಂತೋಷವೂ ಆಯಿತು, ಇಷ್ಟು ದಿನ ಗೊತ್ತೇ ಆಗಲಿಲ್ಲವ ಎಂದು ಸ್ವಲ್ಪ ಬೇಸರವೂ ಆಯಿತು. ಸರಳ ಮಹಿಳೆಯೊಬ್ಬರು ಸಂಸ್ಕೃತದ ಈ ಕಷ್ಟದ ಕೈಂಕರ್ಯವನ್ನು ಹೇಗೆ ಮಾಡುತ್ತಿರ ಬಹುದು ಎನ್ನುವ ಕುತೂಹಲವೂ ಆಯಿತು.
ಈ ಕಾರ್ಯಕ್ರಮಕ್ಕಾಗಿಯೇ ಜಯಲಕ್ಷ್ಮಿಯವರು ‘ಸುಧರ್ಮ’ದ ಬಣ್ಣದ ವಿಶೇಷ ಸಂಚಿಕೆಯನ್ನು ಪ್ರಕಟಿಸಿ, ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಿಗೆಲ್ಲ ಪ್ರತಿಗಳನ್ನು ಉಚಿತವಾಗಿ ಹಂಚುವ ವ್ಯವಸ್ಥೆಯನ್ನೂ ಮಾಡಿದ್ದರು. ಎರಡು ಪುಟಗಳ ಪತ್ರಿಕೆ ಬಹಳ ಚಂದವಿದೆ. ಭಾನುವಾರ ಮಾತ್ರ ಬಣ್ಣದ ನಾಲ್ಕು ಪುಟದೊಂದಿಗೆ ಪ್ರಕಟವಾಗುತ್ತದೆ. ರಾಷ್ಟ್ರ ರಾಜ್ಯಗಳ ದಿನನಿತ್ಯದ ಸಚಿತ್ರ ಸುದ್ದಿಗಳು, ದಿನಕ್ಕೊಂದು ಹೊಸ ಸುಭಾಷಿತ, ಬಾಲಕಥೆಗಳು, ಪ್ರಶ್ನ ಮಂಚ, ಸೂಕ್ತಿ ಸುದಿನಮ್ ಎನ್ನುವ ಕಾಲಮ್ ಹಾಗೂ ಲೌಕಿಕ ನ್ಯಾಯಕೋಶದಿಂದ ಆಯ್ದ ನ್ಯಾಯಗಳು ಹೀಗೆ ಅನೇಕ ವಿಷಯಗಳಿಂದ ಪತ್ರಿಕೆ ತುಂಬಿರುತ್ತವೆ.
ಅಷ್ಟೇ ಅಲ್ಲದೇ, ಬಹಳ ಸರಳವಾದ ಅಂದರೆ ಸಂಸ್ಕೃತ ಸ್ವಲ್ಪ ಗೊತ್ತಿದ್ದವರಿಗೂ ಅರ್ಥವಾಗಬಲ್ಲ ಭಾಷೆಯನ್ನು ಪತ್ರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ರೇಡಿಯೋದಲ್ಲಿ ಮೊದಲೆಲ್ಲ ‘ಇಯಂ ಆಕಾಶವಾಣೀ ಸಂಸ್ಕೃತ ವಾರ್ತಾಃ ಶ್ರೂಯಂತಾಮ’ ಎಂದು ಪ್ರಾರಂಭವಾಗುವ ಸಂಸ್ಕೃತ ವಾರ್ತೆ ಗಳನ್ನು ಕೇಳುವಾಗ ಸಿಗುವುದಕ್ಕಿಂತ ಹೆಚ್ಚಿನ ಸಂತೋಷ, ‘ಸುಧರ್ಮ’ವನ್ನು ಓದುವಾಗ ದೊರೆಯು ತ್ತದೆ. ಇದಕ್ಕೆ ಕಾರಣ, ಭಾಷೆಯ ಸರಳವಾದ ಪ್ರಯೋಗವೇ ಆಗಿದೆ.
ಅಂದಹಾಗೆ, ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಯನ್ನು ಓದುತ್ತಿದ್ದ ದೆಹಲಿಯ ಪಂಡಿತ್ ಬಲದೇವಾನಂದ ಸಾಗರ್ ಅವರು, ಮೊದಲಬಾರಿ ವಾರ್ತೆ ಓದುವುದಕ್ಕಿಂತ ಮುಂಚೆ ಮೈಸೂರಿಗೆ ಆಗಮಿಸಿ, ಸುಧರ್ಮ ಪತ್ರಿಕೆಯ ಸಂಸ್ಥಾಪಕರಾದ ವರದರಾಜ ಅಯ್ಯಂಗಾರ್ ಅವರ ಆಶೀರ್ವಾದ ಪಡೆದು ಹೋಗಿದ್ದರಂತೆ.
ಆಕಾಶವಾಣಿಯಲ್ಲಿ ಸಂಸ್ಕೃತದಲ್ಲಿ ವಾರ್ತೆಗಳು ಪ್ರಸಾರವಾಗುವಲ್ಲಿಯೂ ವರದರಾಜ ಅಯ್ಯಂಗಾರ್ ಅವರ ಅವಿರತ ಶ್ರಮವೂ ಇತ್ತು. ದೇಶದ ಅನೇಕ ಸಂಸ್ಕೃತ ವಿದ್ವಾಂಸರುಗಳನ್ನು ಹಾಗೂ ಭಾಷೆಯ ಬಗ್ಗೆ ಗೌರವವಿರುವವರನ್ನು ಸಂಘಟಿಸಿ, ಅವರು ನಡೆಸಿದ ಸತತ ಪ್ರಯತ್ನದ ಫಲವಾಗಿ, ಆಕಾಶವಾಣಿಯಲ್ಲಿ ಮೊದಲು ವಾರಕ್ಕೆ ಒಂದುದಿನ, ನಂತರ ಪ್ರತಿದಿನ ಸಂಸ್ಕೃತ ವಾರ್ತೆಗಳು ಪ್ರಸಾರವಾಗುವ ಹಾಗಾಯ್ತು.
1970ರಲ್ಲಿ, ವಿಶ್ವದ ಏಕೈಕ ಸಂಸ್ಕೃತ ದಿನಪತ್ರಿಕೆ ಸುಧರ್ಮ, ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯ ವಿದ್ಯಾಗಣಪತಿಯ ಸನ್ನಿಧಿಯಲ್ಲಿ ಅಸ್ತಿತ್ವಕ್ಕೆ ಬಂತು. ಪಂಡಿತ್ ವರದರಾಜ ಅಯ್ಯಂಗಾರ್ ಅವರು ಸುಮಾರು 20 ವರ್ಷಗಳ ಕಾಲ ಪ್ರಕಾಶಕರು ಮತ್ತು ಸ್ಥಾಪಕ ಸಂಪಾದಕ ರಾಗಿದ್ದುಕೊಂಡು, ತಮ್ಮ ಕೊನೆಯ ಉಸಿರು ಇರುವವರೆಗೂ, ‘ಸುಧರ್ಮ’ ನಿಯತವಾಗಿ ಚಂದಾ ದಾರರ ಮನೆ ಬಾಗಿಲಿಗೆ ತಲುಪುವಂತೆ ಮತ್ತು ಸಂಸ್ಕೃತ ಪ್ರಿಯರ ನಿರೀಕ್ಷೆಗಳನ್ನು ಪೂರೈಸು ವಂತೆ ನೋಡಿಕೊಳ್ಳಲು ನಿಸ್ವಾರ್ಥವಾಗಿ ಶ್ರಮಿಸಿದರು.
ಇಲ್ಲಿಯವರೆಗೆ ದೇಶದ ನಾನಾಭಾಗದ ಖ್ಯಾತ ವಿದ್ವಾಂಸರುಗಳು ಪತ್ರಿಕೆಗೆ ಲೇಖನಗಳನ್ನು ಬರೆದು ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಪ್ರಜೆಗಳ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದ ತುರ್ತು ಪರಿಸ್ಥಿತಿಯ ಕಾಲದಲ್ಲೂ, ಸರಕಾರದ ಕಣ್ಗಾವಲಿದ್ದರೂ, ಒಂದು ದಿನವೂ ತಪ್ಪದೇ ಪತ್ರಿಕೆ ಪ್ರಕಟವಾಗುವಂತೆ ಅಯ್ಯಂಗಾರರು ನೋಡಿಕೊಂಡಿದ್ದರು. ‘ಸುಧರ್ಮ’ದ ಕುರಿತು ಅಷ್ಟು ಹಠ, ಬದ್ಧತೆ ಅವರಿಗಿತ್ತು.
ಪತ್ರಿಕೆಯ ಸ್ಥಾಪಕರಾಗಿದ್ದ ವರದರಾಜ ಅಯ್ಯಂಗಾರ್ ಅವರ ನಿಧನಾನಂತರ, ಅವರ ಮಗ ಕೆ.ವಿ. ಸಂಪತ್ ಕುಮಾರ್ ಮತ್ತು ಅವರ ಕಾಲಾನಂತರ ಸಂಪತ್ ಅವರ ಪತ್ನಿ ಜಯಲಕ್ಷ್ಮಿ ಅವರು ಸುಧರ್ಮ ಪತ್ರಿಕೆಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಬಿದ್ದು ಹೋಗಲಿದ್ದ ಕಾರ್ಯಾಲಯವನ್ನು ಸಾಲ-ಸೋಲ ಮಾಡಿ ನಿಲ್ಲಿಸಿದ್ದಾರೆ.
ವಿದ್ವಾನ್ ಎಚ್.ವಿ.ನಾಗರಾಜರಾವ್, ವಿದ್ವಾನ್ ಡಾ. ಟಿ.ವಿ.ಸತ್ಯನಾರಾಯಣ, ವಿದ್ವಾನ್ ಗಂಗಾಧರ ಭಟ್ ಮುಂತಾದವರು ಜಯಲಕ್ಷ್ಮಿಯವರಿಗೆ ಸಹಕಾರವೀಯುತ್ತಿದ್ದಾರೆ. ಸುಧರ್ಮ ಪತ್ರಿಕೆ, ಲೆಟರ್ ಪ್ರೆಸ್‌ನೊಂದಿಗೆ ಪ್ರಾರಂಭವಾಗಿತ್ತು. ಮುದ್ರಣ ತಂತ್ರಜ್ಞಾನ ಆಧುನೀಕರಣಗೊಂಡಂತೆ ಪ್ರಸ್ತುತ ಅದನ್ನು ಗಣಕೀಕೃತ ಆಫ್ ಸೆಟ್ ಮುದ್ರಣದಿಂದ ಮುದ್ರಿಸಲಾಗುತ್ತಿದೆ.
ಸುದ್ದಿಗಳ ತ್ವರಿತ ಪ್ರಸರಣವನ್ನು ಸಾಧಿಸಲು 2009ರಲ್ಲಿ ಸುಧರ್ಮ ‘ಇ-ಪತ್ರಿಕೆ’ಯನ್ನು ಪ್ರಾರಂಭಿಸ ಲಾಯಿತು. ಈ ಉಪಕ್ರಮವು ಸುಧರ್ಮವನ್ನು ಜಗದಗಲವಿರುವ ಸಂಸ್ಕೃತ ಪ್ರಿಯರನ್ನು ತಲುಪಲು ಸಹಾಯ ಮಾಡಿತು. ಈಗ 90ಕ್ಕೂ ಹೆಚ್ಚು ದೇಶಗಳಲ್ಲಿನ ಒಂದು ಲಕ್ಷಕ್ಕೂ ಹೆಚ್ಚು ಸಂಸ್ಕೃತ ಪ್ರಿಯರು ಇ-ಪೇಪರ್ ಅನ್ನು ಪ್ರತಿದಿನ ಓದುತ್ತಾರೆ. ಹಾಲಿ ಸುಮಾರು 30000 ಮುದ್ರಿತ ಪ್ರತಿಗಳ ಪ್ರಸರಣವಿದೆ.
ಕೇವಲ 8 ಜನರ ತಂಡವು ಪತ್ರಿಕೆಯ ಪ್ರಕಟಣೆಗಾಗಿ ಬದ್ಧತೆಯಿಂದ ಕೆಲಸಮಾಡುತ್ತಿದೆ. ಇವೆಲ್ಲ ಹೇಗೆ ನಡೆಯುತ್ತದೆ ಎನ್ನುವ ಕುತೂಹಲದಿಂದ ಒಂದು ದಿನ ಇದ್ದಕ್ಕಿದ್ದ ಹಾಗೆ ಅಗ್ರಹಾರದಲ್ಲಿರುವ ಪತ್ರಿಕೆಯ ಕಚೇರಿಗೆ ತೆರಳಿದೆ. ಮುಂದಿನ ತಿಂಗಳು ನಡೆಯುವ ‘ಸುಧರ್ಮ’ದ 56ನೇ ವಾರ್ಷಿಕೋ ತ್ಸವದ ತಯಾರಿಯಲ್ಲಿ ವ್ಯಸ್ತರಾಗಿದ್ದರೂ, ಜಯಲಕ್ಷ್ಮಿಯವರೇ ನನ್ನನ್ನು ಎದುರುಗೊಂಡು ಅತ್ಯಂತ ಪ್ರೀತಿಯಿಂದ ತಾಸುಗಟ್ಟಲೆ ಮಾತನಾಡಿದರು, ನನ್ನ ಕುತೂಹಲದ ಪ್ರಶ್ನೆಗಳಿಗೆಲ್ಲ ಸಂತೋಷದಿಂದ ಉತ್ತರಿಸಿದರು.
‘ಸುಧರ್ಮ’ ಸಾಗಿ ಬಂದ ಕಥೆಯನ್ನು, ದಾಟಿ ಬಂದ ಕಲ್ಲು-ಮುಳ್ಳಿನ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದರು. “ನೋಡಿ ಸರ್! ವಯಸ್ಸಾಗಿದೆ, ಏನೂ ಕೆಲಸ ಮಾಡಲಾರಳು ಎನ್ನುವ ಕಾರಣಕ್ಕೆ ಸ್ವಂತ ತಾಯಿಯನ್ನು ಮೂಲೆಯಲ್ಲಿ ಕುಳ್ಳಿರಿಸಲಾಗುತ್ತದೆಯೇ? ತಾಯಿಗೆ ವಯಸ್ಸಾದಾಗಲೇ ತಾನೆ ಮಕ್ಕಳ ಅಗತ್ಯವಿರುವುದು? ಸಂಸ್ಕೃತವೂ ಹಾಗೆಯೇ ಸರ್, ಈಗ ಬಳಕೆ ಕಡಿಮೆಯಾಗಿರಬಹುದು, ಜನಕ್ಕೆ ಸಂಸ್ಕೃತದ ಅಗತ್ಯ ಅಷ್ಟಾಗಿ ಕಾಣದೇ ಇರಬಹುದು.
ಆದರೆ, ಎಲ್ಲ ಭಾರತೀಯ ಭಾಷೆಗಳಿಗೆ ಸಂಸ್ಕೃತವೇ ತಾಯಿಯಾಗಿದೆಯಲ್ಲವೇ? ಆಕೆಯ ದುಗ್ಧರಸ ಪಾನಮಾಡಿಯೇ ಅನ್ಯಭಾಷೆಗಳು ಬೆಳೆದಿರುವುದಲ್ಲವೇ? ಹಾಗಾಗಿ ಸಂಸ್ಕೃತವನ್ನು ತಾತ್ಸಾರ ಮಾಡಬಾರದು, ಉಳಿಸುವ ಪ್ರಯತ್ನ ಮಾಡಬೇಕು"ಎನ್ನುತ್ತಲೇ ಮಾತಿಗಿಳಿದರು. ನಮ್ಮ ಶಾಲಾ ಪಠ್ಯಕ್ರಮದಿಂದಲೂ ಪ್ರಥಮ ಭಾಷೆಯ ಸ್ಥಾನದಿಂದ ಸಂಸ್ಕೃತವನ್ನು ಕೆಳಗಿಳಿಸುವ ಸರ್ವ ಪ್ರಯತ್ನಗಳೂ ಸರಕಾರದ ಮಟ್ಟದಲ್ಲಿ ಈಗೀಗ ನಡೆಯುತ್ತಿವೆ.
ಅದೂ ಆಗಿಬಿಟ್ಟರೆ, ಶಾಶ್ವತವಾಗಿ ಮುಂದಿನ ಜನಾಂಗ ಸಂಸ್ಕೃತವನ್ನು ಮರೆಯುವಂತಾಗುತ್ತದೆ, ನಮ್ಮ ಮುಂದಿನ ತಲೆಮಾರಿನವರು ಪ್ರಧಾನ ಜ್ಞಾನಸ್ರೋತದಿಂದ ವಂಚಿತರಾಗುವಂತಾಗುತ್ತದೆ ಎನ್ನುವ ಸಾತ್ವಿಕ ದುಃ ಖವನ್ನು ಹೇಳಿಕೊಂಡರು. ಕೋವಿಡ್ ಸಂದರ್ಭದಲ್ಲಿನ ಹಣಕಾಸಿನ ತೊಂದರೆಯಿಂದಾಗಿ, ಅರ್ಧಶತಮಾನಗಳನ್ನು ಜೀವಿಸಿದ ಸುಧರ್ಮ ಸಂಸ್ಕೃತ ದಿನಪತ್ರಿಕೆಯ ಬಾಗಿಲು ಮುಚ್ಚಲಿದೆ ಎಂದು ಸುಳ್ಳು ಸುದ್ದಿಯಾಗಿತ್ತು, ಆ ಸುದ್ದಿ ನನಗೆ ಅತ್ಯಂತ ಬೇಸರವನ್ನೂ ತಂದಿತ್ತು.
ಆದರೆ ದೇವರ ದಯೆಯಿಂದ ಪತ್ರಿಕೆ 56 ವರ್ಷಗಳನ್ನು ದಾಟಿ ಮುನ್ನಡೆಯುತ್ತಿದೆ, ನನ್ನ ಕೊನೆಯು ಸಿರಿರುವವರೆಗೂ ಸುಧರ್ಮವನ್ನು ಮುನ್ನಡೆಸುವ ಪ್ರಯತ್ನಮಾಡುತ್ತೇನೆ, ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಜಯಲಕ್ಷ್ಮಿಯವರು ದೃಢ ಮಾತುಗಳನ್ನಾಡುತ್ತಾರೆ.
ಐ.ಕೆ. ಗುಜ್ರಾಲ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ, ಕೇಂದ್ರ ಸರಕಾರದ ಜಾಹೀರಾತುಗಳನ್ನು ನೀಡಿ ಪತ್ರಿಕೆಗೆ ಸಹಾಯ ಮಾಡಿದ್ದರಂತೆ. ಅಗ್ರಹಾರದಲ್ಲಿರುವ ಸುಧರ್ಮ ಕೆಲಸ ನಿರ್ವಹಿಸುವ ಸಣ್ಣ ಕಾರ್ಯಾಲಯಕ್ಕೆ, ಹಿಂದಿನ ಉಪರಾಷ್ಟ್ರಪತಿಗಳಾದ ಬಿ.ಡಿ. ಜತ್ತಿಯವರೂ ಸೇರಿದಂತೆ, ಅನೇಕ ಗಣ್ಯರು ಭೇಟಿಯಿತ್ತು ಸಂತೋಷಪಟ್ಟಿದ್ದಾರೆ.
ಶೃಂಗೇರಿ ಶಾರದಾಪೀಠದ ಪೀಠಾಧಿಪತಿಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರಿಂದ ಹಿಡಿದು, ತ್ರಿಮತಸ್ಥರ ಬಹುತೇಕ ಎಲ್ಲ ಯತಿಗಳು ಕಾರ್ಯಾಲಯಕ್ಕೆ ಭೇಟಿಯಿತ್ತು ‘ಸುಧರ್ಮ’ ಸಂಸಾರವನ್ನು ಪ್ರೋತ್ಸಾಹಿಸಿದ್ದಾರೆ. ಈ ಕುಟುಂಬದ ಸಂಸ್ಕೃತ ಸೇವೆಯನ್ನು ಗುರುತಿಸಿ, 2020ರಲ್ಲಿ ನರೇಂದ್ರ ಮೋದಿಯವರ ಸರಕಾರ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಇಬ್ಬರಿಗೂ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಿಜಕ್ಕೂ ಸಂತೋಷದ ಸಂಗತಿ ಯಾಗಿದೆ.
ಹೀಗೆ, ದಂಪತಿಗೆ ಏಕಕಾಲದಲ್ಲಿ ಪದ್ಮಪ್ರಶಸ್ತಿಯನ್ನು ನೀಡಿರುವುದು ಅಪರೂಪದಲ್ಲಿ ಅಪರೂಪ ವಾಗಿದೆ. ಪದ್ಮಪ್ರಶಸ್ತಿಗಳನ್ನು ಘೋಷಣೆ ಮಾಡಿದಾಗ ಕೆ.ವಿ. ಸಂಪತ್ ಕುಮಾರ್ ಇದ್ದರಂತೆ, ಕೋವಿಡ್‌ನಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲ್ಪಟ್ಟು, ಹೊಸ ದಿನಾಂಕ ನಿಗದಿ ಯಾಗುವಾಗ ಅವರು ನಿಧನರಾಗಿದ್ದರು, ನಾನೊಬ್ಬಳೇ ಹೋಗಿ ಪ್ರಶಸ್ತಿ ಪಡೆಯುವಾಗ ಬಹಳ ದುಃಖವಾಗಿತ್ತು ಎಂದು ಜಯಲಕ್ಷ್ಮಿಯವರು ನನ್ನಲ್ಲಿ ಬೇಸರವನ್ನು ತೋಡಿಕೊಂಡರು.
ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಹೋದಾಗ, ಮೊದಲಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡಾಗ ಅಪ್ರಯತ್ನವಾಗಿ ಅವರಿಗೆ ಬಗ್ಗಿ ನಮಸ್ಕರಿಸಲು ಮುಂದಾದೆ. ತಕ್ಷಣ ಅದನ್ನು ತಡೆದ ಮೋದಿಯವರು, “ನೀವು ನನಗೆ ಅಂತ ಅಲ್ಲ, ಇನ್ನು ಮುಂದೆ ಯಾರ ಕಾಲಿಗೂ ಎರಗಿ ನಮಸ್ಕರಿಸಬಾರದು, ನೀವೇ ನಮಸ್ಕಾರಕ್ಕೆ ಅರ್ಹರಿದ್ದೀರಿ, ಅಂಥ ದೊಡ್ದ ಕಾರ್ಯ ಮಾಡುತ್ತಿದ್ದೀರಿ" ಎಂದು ನನಗೆ ಹಿತವಚನ ಹೇಳಿ, “ನಿಮ್ಮ ಯಜಮಾನರ ನಿಧನದಿಂದ ಅಧೀರ ರಾಗಬೇಡಿ, ಸುಧರ್ಮದ ಕೆಲಸವನ್ನು ಸರ್ವಥಾ ನಿಲ್ಲಿಸಬೇಡಿ, ನಿಮಗೆ ಯಾವುದೇ ಸಂಕಟ ಬಂದಲ್ಲಿ ನನ್ನ ಕಾರ್ಯಾಲಯವನ್ನು ಸಂಪರ್ಕಿಸಬಹುದು" ಎಂದು ಧೈರ್ಯ ತುಂಬಿದ್ದನ್ನು ಜಯಲಕ್ಷ್ಮಿ ಯವರು ಭಾವುಕರಾಗಿ ಸ್ಮರಿಸುತ್ತಾರೆ.
ಸುಧರ್ಮ ಮುದ್ರಣಾಲಯವು ಅನೇಕ ಸಂಸ್ಕೃತ ಸಾಹಿತ್ಯ ಕೃತಿಗಳನ್ನೂ ಮುದ್ರಿಸಿ ಪ್ರಕಟಿಸಿದೆ ಮತ್ತು ತನ್ನ ವಾರ್ಷಿಕೋತ್ಸವ ಹಾಗೂ ಇತರ ಸಂದರ್ಭಗಳಲ್ಲಿ ಅವುಗಳ ಪ್ರದರ್ಶನ ಮತ್ತು ಮಾರಾಟ ವನ್ನು ಏರ್ಪಡಿಸುತ್ತದೆ. ದೇಶಾದ್ಯಂತವಿರುವ ಅನೇಕ ಸಂಸ್ಕೃತ ಪುಸ್ತಕಗಳ ಪ್ರಕಾಶಕರೂ ಸುಧರ್ಮದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ತಮ್ಮ ಪ್ರಕಟಣೆಗಳನ್ನು ಪ್ರದರ್ಶಿಸುತ್ತಾರೆ.
ಸುಧರ್ಮ ಪತ್ರಿಕೆಯ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಹಿರಿಯ ಪತ್ರಕರ್ತ ಡಾ.ಕೂಡ್ಲಿ ಗುರುರಾಜರವರು ಒಂದು ಪುಸ್ತಕವನ್ನೂ ಬರೆದಿದ್ದಾರೆ. ಮುಂದಿನ ತಿಂಗಳು 5ನೇ ತಾರೀಖು ಭಾನುವಾರ, ಸುಧರ್ಮ ಸಂಸ್ಕೃತ ದಿನಪತ್ರಿಕೆ ತನ್ನ 56ನೇ ವಾರ್ಷಿಕೋತ್ಸವವನ್ನು ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದೆ.
ಡಾ.ವಿಜಯ ಸಂಕೇಶ್ವರ್ ಸೇರಿದಂತೆ ಅನೇಕ ಅತಿಥಿಗಳು ಭಾಗವಹಿಸಲಿದ್ದಾರೆ. ಅಂದು ಡಾ.ಉಮಾ ಮಹೇಶ್ವರ್ ಅವರಿಂದ ಅಪರೂಪದ ರಾಮಾಯಣ ದಶಾವಧಾನವೂ ನಡೆಯಲಿದೆ, ನೀವು ಖಂಡಿತ ಬರಬೇಕು ಎನ್ನುವ ಆತ್ಮೀಯ ಆಮಂತ್ರಣವಿತ್ತರು. ಮುಂದುವರಿದು, ನೀವೇನಾದರೂ ಬರೆಯುವು ದಾದರೆ ನನ್ನ ಕುರಿತು ಬರೆಯಬೇಡಿ, ಅಂಥಾ ಸಾಧನೆಯನ್ನೇನೂ ನಾನು ಮಾಡಿಲ್ಲ, ಸುಧರ್ಮ ಪತ್ರಿಕೆಯ ಕುರಿತು ಬರೆದರೆ ನನಗೆ ಹೆಚ್ಚು ಸಂತೋಷವಾಗುತ್ತದೆ" ಎನ್ನುತ್ತಾ ನನ್ನನ್ನು ಬೀಳ್ಕೊಟ್ಟರು.
ಇಂಥಾ ಸಮರ್ಪಿತ ಸಾಧಕರಿರುವಾಗ ಸಂಸ್ಕೃತಕ್ಕೆ ಅಳಿವಾಗುವುದಿಲ್ಲ ಎನ್ನುವ ಭರವಸೆಯ ಭಾವದಿಂದ ನಾನೂ ಅಲ್ಲಿಂದ ಹೊರಟೆ. ‘ಸುಧರ್ಮ’ವನ್ನು ಸಾಧ್ಯವಾದಷ್ಟು ಉಳಿಸೋಣ ಹಾಗೂ ಬೆಳೆಸಲು ಸಹಾಯ ಮಾಡೋಣ ಎನ್ನುವುದು ಓದುಗರಿಗೆ ನನ್ನ ಮನವಿಯಾಗಿದೆ.