S N Bhat Column: ಯಕ್ಷಗಾನದ ಮುಂದಿದೆ ʼಯಕ್ಷಪ್ರಶ್ನೆʼ, ಆದರೆ ಉತ್ತರಿಸುವವರಾರು ?
ಸಾಹಿತ್ಯ, ಸಂಗೀತ, ಅಭಿನಯ ಮತ್ತು ನೃತ್ಯಗಳ ಅಪೂರ್ವ ಸಂಗಮವಾದ ಯಕ್ಷಗಾನ, ಕೇವಲ ಒಂದು ಕಲೆಯಲ್ಲ; ಅದು ಕರಾವಳಿಯ ಜೀವನದ ಅವಿಭಾಜ್ಯ ಅಂಗ. ಶತಮಾನಗಳ ಇತಿಹಾಸವಿರುವ ಈ ‘ಗಂಡುಕಲೆ’ ಇಂದು ಭೌಗೋಳಿಕ ಗಡಿಗಳನ್ನು ದಾಟಿ ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದೆ ಎನ್ನುವುದು ಹೆಮ್ಮೆಯ ಸಂಗತಿ.
-
ತಪ್ಪಿದ ತಾಳ
ಎಸ್.ಎನ್.ಭಟ್, ಸೈಪಂಗಲ್ಲು
ಅರ್ಥ ಕಳೆದುಕೊಂಡ ‘ಅರ್ಥಗಾರಿಕೆ’ಯು ಪಾಂಡಿತ್ಯದಿಂದ ‘ಹಾಸ್ಯ’ದ ಕಡೆಗೆ ಸಾಗುತ್ತಿದೆ. ಯಕ್ಷಗಾನದ ಅತ್ಯಂತ ವಿಶಿಷ್ಟ ಮತ್ತು ಪ್ರಬಲ ಅಂಗವೆಂದರೆ ‘ಅರ್ಥಗಾರಿಕೆ’. ಹಿಂದೆ ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಪೆರ್ಲ ಕೃಷ್ಣ ಭಟ್‌ರಂಥ ದಿಗ್ಗಜರು ತಮ್ಮ ವಾಕ್ಚಾತುರ್ಯ, ಪೌರಾಣಿಕ ಜ್ಞಾನ ಮತ್ತು ತರ್ಕ ಬದ್ಧ ಮಾತುಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಅವರ ಮಾತು ಗಳಲ್ಲಿ ವ್ಯಾಕರಣ ಶುದ್ಧಿ ಮತ್ತು ಜೀವನ ಮೌಲ್ಯಗಳಿದ್ದವು.
ಸಾಹಿತ್ಯ, ಸಂಗೀತ, ಅಭಿನಯ ಮತ್ತು ನೃತ್ಯಗಳ ಅಪೂರ್ವ ಸಂಗಮವಾದ ಯಕ್ಷಗಾನ, ಕೇವಲ ಒಂದು ಕಲೆಯಲ್ಲ; ಅದು ಕರಾವಳಿಯ ಜೀವನದ ಅವಿಭಾಜ್ಯ ಅಂಗ. ಶತಮಾನಗಳ ಇತಿಹಾಸ ವಿರುವ ಈ ‘ಗಂಡುಕಲೆ’ ಇಂದು ಭೌಗೋಳಿಕ ಗಡಿಗಳನ್ನು ದಾಟಿ ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದೆ ಎನ್ನುವುದು ಹೆಮ್ಮೆಯ ಸಂಗತಿ.
ಆದರೆ, ಈ ಜನಪ್ರಿಯತೆಯ ಪ್ರವಾಹದಲ್ಲಿ ಯಕ್ಷಗಾನವು ತನ್ನ ಮೂಲ ಸತ್ವ, ಶಿಸ್ತು ಮತ್ತು ಗಾಂಭೀ ರ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಇಂದು ನೈಜ ಕಲಾಭಿಮಾನಿಗಳನ್ನು ಮತ್ತು ವಿದ್ವಾಂಸರನ್ನು ಕಾಡುತ್ತಿದೆ. ಪ್ರಸ್ತುತ ಯಕ್ಷಗಾನ ರಂಗದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆ ಗಳನ್ನು ಗಮನಿಸಿದರೆ, ಇದು ಯಕ್ಷಗಾನವೋ ಅಥವಾ ‘ಯಕ್ಷಗೊಂದಲ’ವೋ ಎಂಬ ಸಂಶಯ ಮೂಡುವುದು ಸಹಜ.
1.ಕಲೆಗಿಂತ ‘ಕಲೆಕ್ಷನ್’ ಮುಖ್ಯವಾದಾಗ: ಒಂದು ಕಾಲದಲ್ಲಿ ಯಕ್ಷಗಾನವೆಂದರೆ ಅದು ದೇವರ ಸೇವೆ, ಹರಕೆ ಅಥವಾ ಧಾರ್ಮಿಕ ಆಚರಣೆಯ ಭಾಗವಾಗಿತ್ತು. ಅಲ್ಲಿ ಪ್ರೇಕ್ಷಕನಿಗಿಂತ ಕಲೆಗೆ ಮತ್ತು ಕಥೆಗೆ ಹೆಚ್ಚು ಪ್ರಾಮುಖ್ಯ ಇತ್ತು. ಆದರೆ ಇಂದು ಕಾಲ ಬದಲಾಗಿದೆ. ಬಯಲಾಟಗಳು ‘ಟೆಂಟ್ ಆಟ’ಗಳಾಗಿ, ಕಾಲಮಿತಿಯ ಪ್ರದರ್ಶನಗಳಾಗಿ ಬದಲಾದಂತೆ, ಯಕ್ಷಗಾನ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿದೆ. ಮೇಳಗಳ ಯಶಸ್ಸನ್ನು ಕಲೆಯ ಗುಣಮಟ್ಟದಿಂದ ಅಳೆಯುವ ಬದಲು, ಗಪೆಟ್ಟಿಗೆಯ ಗಳಿಕೆ ಮತ್ತು ಸೇರುವ ಜನಸಂದಣಿಯ ಮೇಲೆ ಅಳೆಯಲಾಗುತ್ತಿದೆ. ಪ್ರೇಕ್ಷಕರನ್ನು ರಂಜಿಸಲು ಕಣ್ಣು ಕುಕ್ಕುವ ಸಿನಿಮಾ ಮಾದರಿಯ ಲೈಟಿಂಗ್ʼಗಳು, ಕಿವಿಗಡಚಿಕ್ಕುವ ಶಬ್ದವರ್ಧಕಗಳ ಬಳಕೆ ಮಿತಿ ಮೀರಿದೆ.
ಇದನ್ನೂ ಓದಿ: Vinayak Bhat Column: ತಾಳಮದ್ದಳೆ ಇನ್ನಾದರೂ ತನ್ನತನಕ್ಕೆ ಮರಳಲಿ...
ರಂಗಸ್ಥಳದ ಪಾವಿತ್ರ್ಯ ಮರೆಯಾಗಿ, ಅದೊಂದು ತಾಂತ್ರಿಕ ಪ್ರದರ್ಶನದ ವೇದಿಕೆಯಂತಾಗುತ್ತಿದೆ. ವೇಷಭೂಷಣಗಳಲ್ಲೂ ಸಾಂಪ್ರದಾಯಿಕ ಬಣ್ಣಗಳ ಬದಲಿಗೆ, ಕೃತಕವಾಗಿ ಮಿನುಗುವ ‘ಚಮ್ಕಿ’ ಬಟ್ಟೆಗಳೇ ರಾರಾಜಿಸುತ್ತಿವೆ.
2. ಹಾದಿ ತಪ್ಪುತ್ತಿರುವ ಹಿಮ್ಮೇಳ: ರಾಗಕ್ಕಿಂತ ‘ಶಬ್ದ’ವೇ ಜೋರು! ಯಕ್ಷಗಾನದ ಜೀವಾಳವೇ ಅದರ ಹಿಮ್ಮೇಳ. ಭಾಗವತರು ರಂಗಸ್ಥಳದ ನಿರ್ದೇಶಕರಿದ್ದಂತೆ. ಅವರ ಹಾಡಿನ ಭಾವಕ್ಕೆ ತಕ್ಕಂತೆ ಮುಮ್ಮೇಳದ ಕುಣಿತ ಮತ್ತು ಮಾತು ಇರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಭಾಗವತಿಕೆಯಲ್ಲಿ ಶಾಸೀಯತೆ ಮರೆಯಾಗುತ್ತಿದೆ.
ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಲು, ಸಾಂಪ್ರದಾಯಿಕ ಯಕ್ಷಗಾನ ರಾಗಗಳನ್ನು ಬದಿಗಿಟ್ಟು, ಜನಪ್ರಿಯ ಸಿನಿಮಾ ಹಾಡುಗಳ ಧಾಟಿಯಲ್ಲಿ ಪದ್ಯಗಳನ್ನು ಹಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಯಕ್ಷಗಾನದ ಗಾಂಭೀರ್ಯಕ್ಕೆ ಮಾಡುವ ಅಪಚಾರ. ಚಂಡೆ ಮತ್ತು ಮದ್ದಳೆಗಳ ನಾದ ಹಿತವಾಗಿರಬೇಕು. ಆದರೆ ಈಗಿನ ‘ಶಬ್ದ ಮಾಲಿನ್ಯ’ದ ಸ್ಪರ್ಧೆಯಲ್ಲಿ, ಸಾಹಿತ್ಯದ ಅರ್ಥವೇ ಕೇಳದಷ್ಟು ಜೋರಾಗಿ ವಾದ್ಯವನ್ನು ಬಾರಿಸಲಾಗುತ್ತದೆ. ಇದರಿಂದ ಭಾವಪೂರ್ಣ ಸನ್ನಿವೇಶಗಳೂ ಗದ್ದಲದಲ್ಲಿ ಕಳೆದುಹೋಗುತ್ತಿವೆ.
3.ಅರ್ಥ ಕಳೆದುಕೊಂಡ ‘ಅರ್ಥಗಾರಿಕೆ’: ಪಾಂಡಿತ್ಯದಿಂದ ‘ಹಾಸ್ಯ’ದ ಕಡೆಗೆ ಸಾಗುತ್ತಿದೆ ಅರ್ಥ ಗಾರಿಕೆ. ಯಕ್ಷಗಾನದ ಅತ್ಯಂತ ವಿಶಿಷ್ಟ ಮತ್ತು ಪ್ರಬಲ ಅಂಗವೆಂದರೆ ‘ಅರ್ಥಗಾರಿಕೆ’. ಹಿಂದೆ ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ಶಂಕರನಾರಾಯಣ ಸಾಮಗ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಪೆರ್ಲ ಕೃಷ್ಣ ಭಟ್‌ರಂಥ ದಿಗ್ಗಜರು ತಮ್ಮ ವಾಕ್ಚಾತುರ್ಯ, ಪೌರಾಣಿಕ ಜ್ಞಾನ ಮತ್ತು ತರ್ಕಬದ್ಧ ಮಾತು ಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. ಅವರ ಮಾತುಗಳಲ್ಲಿ ವ್ಯಾಕರಣ ಶುದ್ಧಿ ಮತ್ತು ಜೀವನ ಮೌಲ್ಯಗಳಿದ್ದವು. ಆದರೆ ಇಂದು ಏನಾಗುತ್ತಿದೆ? ಅಧ್ಯಯನದ ಕೊರತೆ ಯಿಂದಾಗಿ, ಕೆಲವೊಂದು ಕಲಾವಿದರು ರಂಗಸ್ಥಳದಲ್ಲಿ ಸಂದರ್ಭಕ್ಕೆ ಸಂಬಂಧವಿಲ್ಲದ, ಅಸಂಬದ್ಧ ಮಾತು ಗಳನ್ನು ಆಡುತ್ತಿದ್ದಾರೆ. ಪೌರಾಣಿಕ ಪಾತ್ರಗಳ ಬಾಯಲ್ಲಿ ಆಧುನಿಕ ರಾಜಕೀಯ ವಿಮರ್ಶೆ, ಮೊಬೈಲ್ ಫೋನ್ ಜೋಕ್‌ಗಳು ಬರುವುದು ಎಂಥ ವಿಪರ್ಯಾಸ!
ಇನ್ನು, ರಂಗಸ್ಥಳದಲ್ಲಿ ಸಹಕಲಾವಿದರನ್ನು ಹೀಯಾಳಿಸುವುದು, ದೈಹಿಕ ನ್ಯೂನತೆಗಳನ್ನು ಗೇಲಿ ಮಾಡುವುದು ಮತ್ತು ವೈಯಕ್ತಿಕ ನಿಂದನೆ ಮಾಡುವುದನ್ನೇ ಕೆಲವರು ‘ಹಾಸ್ಯ’ ಎಂದು ಭಾವಿಸಿ ದಂತಿದೆ. ಕುಟುಂಬ ಸಮೇತ ಕುಳಿತು ನೋಡುವ ಯಕ್ಷಗಾನದಲ್ಲಿ, ಮುಜುಗರ ತರಿಸುವಂಥ ದ್ವಂದ್ವಾರ್ಥದ ಮಾತುಗಳನ್ನು ಆಡುವುದು ಕಲಾವಿದರ ಸಂಸ್ಕೃತಿಯೇ? ವೀರ ರಸ ಮತ್ತು ರೌದ್ರ ರಸದ ಸನ್ನಿವೇಶಗಳಲ್ಲೂ ಅನಗತ್ಯ ಹಾಸ್ಯವನ್ನು ತುರುಕಿ ಪಾತ್ರದ ಔಚಿತ್ಯವನ್ನು ಹಾಳು ಮಾಡ ಲಾಗುತ್ತಿದೆ.
4. ಪ್ರಸಂಗಗಳ ಹೆಸರಿಗೂ ಕತ್ತರಿ: ಹಿಂದೆ ‘ಕರ್ಣ ಪರ್ವ’, ‘ವಾಲಿ ಮೋಕ್ಷ’, ‘ಸುಧನ್ವ ಮೋಕ್ಷ’, ‘ಗದಾಯುದ್ಧ’ದಂಥ ಗಂಭೀರ ಶೀರ್ಷಿಕೆಗಳು ಜನಜನಿತವಾಗಿದ್ದವು. ಆ ಹೆಸರುಗಳ ಒಂದು ತೂಕ ವಿತ್ತು. ಆದರೆ ಇಂದು ಜನರನ್ನು ಸೆಳೆಯಲು ಪ್ರಸಂಗಗಳ ಶೀರ್ಷಿಕೆಗಳನ್ನೇ ವಿಚಿತ್ರವಾಗಿ ಬದಲಾಯಿಸಲಾಗುತ್ತಿದೆ. ಸಿನಿಮಾಗಳನ್ನೂ ಮೀರಿಸುವಂಥ, ಕುತೂಹಲ ಕೆರಳಿಸುವ, ಆದರೆ ಕಥೆಗೆ ಸಂಬಂಧವಿಲ್ಲದ ‘ಕ್ಲಿಕ್-ಬೈಟ್’ ಶೀರ್ಷಿಕೆಗಳನ್ನು ಇಡಲಾಗುತ್ತಿದೆ. ಇದರಿಂದಾಗಿ ಹೊಸ ತಲೆಮಾರಿಗೆ ಮೂಲಪ್ರಸಂಗ ಯಾವುದು, ಅದರ ಕಥೆ ಏನು ಎಂಬುದೇ ತಿಳಿಯದಂತಾಗಿದೆ.
೫. ‘ರೀಲ್ಸ್’ ಸಂಸ್ಕೃತಿಯ ಪ್ರಭಾವ: ಇದು ಇತ್ತೀಚಿನ ಮತ್ತು ಗಂಭೀರವಾದ ಸಮಸ್ಯೆ. ಸೋಷಿ ಯಲ್ ಮೀಡಿಯಾದಲ್ಲಿ ವೈರಲ್ ಆಗುವ ೩೦ ಸೆಕೆಂಡಿನ ‘ರೀಲ್ಸ’ ಅಥವಾ ತುಣುಕುಗಳಿಗಾಗಿ ಕಲಾ ವಿದರು ರಂಗಸ್ಥಳದ ಮೇಲೆ ಕಸರತ್ತು ನಡೆಸಿದಂತಿದೆ. ಎದುರಿರುವ ಪ್ರೇಕ್ಷಕರಿಗಿಂತ, ಮೊಬೈಲ್ ಕ್ಯಾಮೆರಾಗಳಿಗೆ ಪೋಸ್ ಕೊಡುವ ಪ್ರವೃತ್ತಿ ಹೆಚ್ಚಾಗಿದೆ. ಯಾರು ಹೆಚ್ಚು ಜೋರಾಗಿ ಕೂಗುತ್ತಾರೆ, ಯಾರು ಹೆಚ್ಚು ವಿಚಿತ್ರವಾಗಿ ಕುಣಿಯುತ್ತಾರೆ ಅವರೇ ಶ್ರೇಷ್ಠರು ಎಂಬ ತಪ್ಪು ಕಲ್ಪನೆ ಹುಟ್ಟಿ ಕೊಳ್ಳುತ್ತಿದೆ.
ಇದಕ್ಕೆ ಪರಿಹಾರವೇನು? ಹಾದಿ ಎಲ್ಲಿದೆ? ದೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಯಕ್ಷಗಾನದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಂಕ ಪ್ರಯತ್ನದ ಅಗತ್ಯವಿದೆ. ಹೊಸ ಕಲಾವಿದರಿಗೆ ಕೇವಲ ವೇಷ ಹಾಕುವುದನ್ನು ಕಲಿಸಿದರೆ ಸಾಲದು; ಅವರಿಗೆ ಪುರಾಣ, ಛಂದಸ್ಸು, ವ್ಯಾಕರಣ ಮತ್ತು ರಂಗದ ಮರ್ಯಾದೆಯ ಬಗ್ಗೆ ಹಿರಿಯರಿಂದ ಕಡ್ಡಾಯ ತರಬೇತಿ ಕೊಡಿಸಬೇಕು.
ಸಂಘಟಕರ ಮತ್ತು ಯಜಮಾನರ ಜವಾಬ್ದಾರಿಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೇಳದ ಯಜಮಾನರು ಮತ್ತು ಸಂಘಟಕರು ಕೇವಲ ಹಣದ ಕಡೆಗೆ ನೋಡದೆ, ಕಲೆಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಅಸಭ್ಯವಾಗಿ ವರ್ತಿಸುವ ಕಲಾವಿದರಿಗೆ ಕಡಿವಾಣ ಹಾಕುವ ಧೈರ್ಯವನ್ನು ತೋರಬೇಕು.
ಇನ್ನು ವಿಮರ್ಶಕರ ಪಾತ್ರದ ಕುರಿತು ಹೇಳುವುದಾದರೆ, ತಪ್ಪುಗಳನ್ನು ಕಂಡಾಗ ಹಿರಿಯರು ಮತ್ತು ವಿಮರ್ಶಕರು ನಿರ್ಭಿಡೆಯಿಂದ ಅದನ್ನು ತಿದ್ದುವ ಕೆಲಸವನ್ನು ಮಾಡಬೇಕು. ಯಕ್ಷಗಾನ ಅಕಾಡೆಮಿಯಂಥ ಸಂಸ್ಥೆಗಳು ಒಂದು ಮಾರ್ಗಸೂಚಿಯನ್ನು ರೂಪಿಸುವುದು ಒಳಿತು. ಎಲ್ಲಕ್ಕಿಂತ ಮುಖ್ಯವಾಗಿ, ಪ್ರೇಕ್ಷಕರು ಪ್ರಬುದ್ಧರಾಗಬೇಕು. ಅಗ್ಗದ ಹಾಸ್ಯ, ಸಿನಿಮಾ ಶೈಲಿ ಮತ್ತು ಅಸಂಬದ್ಧ ಮಾತುಗಳನ್ನು ತಿರಸ್ಕರಿಸಿ, ಸತ್ವಯುತ ಆಟಗಳಿಗೆ ಬೆಂಬಲ ನೀಡಿದಾಗ ಮಾತ್ರ ಬದಲಾವಣೆ ಸಾಧ್ಯ.
ಯಕ್ಷಗಾನವು ಕೇವಲ ಮನರಂಜನೆಯ ಸರಕಲ್ಲ; ಅದೊಂದು ಸಾಂಸ್ಕೃತಿಕ ಪರಂಪರೆ, ಒಂದು ಜೀವನ ಪದ್ಧತಿ. ಬದಲಾವಣೆ ಜಗದ ನಿಯಮ ಹೌದು, ಆದರೆ ಬದಲಾವಣೆಯ ಹೆಸರಿನಲ್ಲಿ ಮೂಲ ಸ್ವರೂಪವನ್ನೇ ಬಲಿ ಕೊಡುವುದು ವಿಕಾಸವಲ್ಲ, ವಿನಾಶ. ಇನ್ನಾದರೂ ಎಚ್ಚೆತ್ತುಕೊಳ್ಳ ದಿದ್ದರೆ, ಮುಂದೊಂದು ದಿನ ಯಕ್ಷಗಾನ ತನ್ನತನವನ್ನು ಕಳೆದುಕೊಂಡು, ಕೇವಲ ವೇಷ ಹಾಕಿದವರ ‘ಕಾಮಿಡಿ ಶೋ’ ಆಗಿ ಉಳಿಯುವ ಅಪಾಯವಿದೆ. ಆ ಪರಿಸ್ಥಿತಿ ಬರುವುದು ಬೇಡ.
(ಲೇಖಕರು ನಿವೃತ್ತ ಮುಖ್ಯೋಪಾಧ್ಯಾಯರು)