ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಜಪಾನಿಯರು ಪರಿಪೂರ್ಣವಾದಿಗಳೂ ಹೌದು, ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷ ಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

ಅವರು ತಮ್ಮ ದೋಷವನ್ನು ಮೀರಿ ನಿಲ್ಲಲು ನಿತ್ಯ ಹೆಣಗುತ್ತಾರೆ !

ಇದೇ ಅಂತರಂಗ ಸುದ್ದಿ

vbhat@me.com

ಆಸ್ಟ್ರೇಲಿಯನ್ ಕ್ರೀಡಾ ತಂಡದಲ್ಲಿ ‘ತಲೆ ತಿನ್ನುವ ಸ್ವಭಾವ’ದವರಿಗೆ ಸ್ಥಾನ ಇಲ್ಲವಂತೆ. ಅವರ ಮುಖ್ಯ ಕೆಲಸ ಆಟವಾಡುವುದು. ಅದನ್ನು ಬಿಟ್ಟು ಅವರು ಅತಿಯಾಗಿ ಮಾತಾಡುವವರಾದರೆ ಇಡೀ ತಂಡದ ಮನೋಭಾವವನ್ನು ಹಾಳು ಮಾಡುತ್ತಾರೆ. ಹೀಗಾಗಿ ಅತಿಯಾಗಿ ಮಾತಾಡುವ ಕ್ರೀಡಾಪಟುವನ್ನು ಅವರು ಸಹಿಸಿಕೊಳ್ಳುವುದಿಲ್ಲ. ಅದರಂತೆ ಜಪಾನಿನಲ್ಲಿ ಮೂರ್ಖರನ್ನು ಸಹಿಸಿಕೊಳ್ಳುವುದಿಲ್ಲವಂತೆ. ಈ ದೇಶದಲ್ಲಿ ವೈಯಕ್ತಿಕತೆ ಗಿಂತ ಸಮುದಾಯ ಮತ್ತು ಸಮಾಜ ಹೆಚ್ಚು. ಅದಕ್ಕೆ ಮಿಗಿಲಾದ ಮಹತ್ವ. ಅಂದರೆ, ಪ್ರತಿಯೊಬ್ಬ ರೂ ದೇಶದ ಒಟ್ಟಾರೆ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ. ಮೂರ್ಖತನ ವನ್ನು ಜಪಾನಿಯರು ಸಹಿಸಿಕೊಳ್ಳುವು ದಿಲ್ಲ.

ನೀವು ಮೂರ್ಖರಾಗಿದ್ದರು ಸಹ, ಆ ಮೂರ್ಖತನದ ಗುಣಗಳನ್ನು ನಿಯಂತ್ರಿಸಬೇಕೆಂದು ಅಪೇಕ್ಷಿಸ ಲಾಗುತ್ತದೆ. ಎಲ್ಲರೂ ಬುದ್ಧಿವಂತರಾಗಿರಲು ಸಾಧ್ಯವಿಲ್ಲ. ಅಯಾಚಿತವಾಗಿ ಮೂರ್ಖನಡೆ ವ್ಯಕ್ತ ವಾಗಬಹುದು. ಆದರೆ ಶಾಶ್ವತ ಮೂರ್ಖತನವನ್ನು ಜಪಾನಿ ಸಮಾಜ ಒಪ್ಪಿಕೊಳ್ಳುವುದಿಲ್ಲ.

They are always trying to stand beyond their faults! ಎಂಬುದು ಅವರ ಧೋರಣೆ. ಯಾವತ್ತೂ ಅಪರಿಚಿತರೊಂದಿಗೆ ಒಳ್ಳೆಯವರಾಗಿ, ವಿನಮ್ರರಾಗಿ, ಸ್ನೇಹಪರವಾಗಿ ವರ್ತಿಸಬೇಕು, ಹಿರಿಯರಿಗೆ ಗೌರವ ನೀಡಬೇಕು, ನಾವು ಎಸೆಯುವ ಕಸವನ್ನು ನಾವೇ ಎತ್ತಬೇಕು, ನಮ್ಮ ನಡೆಯಿಂದ ಇತರರಿಗೆ ತೊಂದರೆಯಾಗಬಾರದು, ನಮ್ಮ ಮಾತು ಬೇರೆಯವರ ಮೌನಕ್ಕೆ ಭಂಗ ತರಬಾರದು... ಇಂಥ ಸಂಗತಿಗಳನ್ನು ಅಲ್ಲಿನ ಸಮಾಜ ಎಲ್ಲರಿಂದಲೂ ನಿರೀಕ್ಷಿಸುತ್ತದೆ.

ಇದನ್ನೂ ಓದಿ: Veena Bhat Column: ದ್ವಾರಕಾಧೀಶನ ರಾಜ್ಯದಲ್ಲಿ

ಜಪಾನಿಯರ ಬಗ್ಗೆ ನಾನು ಗಮನಿಸಿದ ಇನ್ನೊಂದು ಮುಖ್ಯ ಸಂಗತಿ ಅಂದರೆ ಅವರು ತಮ್ಮ ಜೀವನದ ಎಲ್ಲ ಅಂಶಗಳಲ್ಲೂ ಅತ್ಯಂತ ಸೂಕ್ಷ್ಮತೆಯನ್ನು ತೋರಿಸುತ್ತಾರೆ. ಅವರಿಗೆ ಪ್ರತಿ ಯೊಂದೂ ಅಚ್ಚುಕಟ್ಟಾಗಿ ಇರಬೇಕು, ಶಿಸ್ತಿನಿಂದ ಕೂಡಿರಬೇಕು, ಯಾವ ಕೆಲಸವನ್ನೇ ಆಗಲಿ ಬೇಕಾ ಬಿಟ್ಟಿ ಮಾಡಕೂಡದು.

ನಿಜಕ್ಕೂ ಅವರು ಪರಿಪೂರ್ಣತಾವಾದಿಗಳು (Perfectionists ) ಎಂಬುದರಲ್ಲಿ ಅನುಮಾನವೇ ಇಲ್ಲ. ಕಿರಾಣಿ ಅಂಗಡಿಯಲ್ಲಿ ಆಹಾರ ಪ್ಯಾಕೆಟ್‌ಗಳನ್ನು ಪ್ರದರ್ಶಿಸುವ ರೀತಿ ಯಿಂದ ಹಿಡಿದು, ಒಂದು ಕಾಗದವನ್ನು ಮಡಚುವ ವಿಧದವರೆಗೆ, ಹೂಗಳನ್ನು ಅಲಂಕರಿಸುವ ಶೈಲಿಯಿಂದ ಹಿಡಿದು, ವಸ್ತ್ರ ಧಾರಣೆಯ ವಿನ್ಯಾಸದವರೆಗೆ ಅವರು ಸಣ್ಣ ಸಣ್ಣ ಸಂಗತಿಗಳಿಗೂ ಪ್ರಾಮುಖ್ಯ ನೀಡುತ್ತಾರೆ.

ಬಾಲ್ ಪಾಯಿಂಟ್ ಪೆನ್ನಿನ ರೀಫಿಲ್ ಆರಂಭದಲ್ಲಿ ಹೇಗೆ ಸರಾಗವಾಗಿ ಬರೆಯುತ್ತಿತ್ತೋ, ಕೊನೆಯ ತನಕವೂ ಅದೇ ಸರಾಗತನವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಆ ರೀಫಿಲ್ ಅನ್ನು ಒಪ್ಪಿಕೊಳ್ಳುವುದಿಲ್ಲ. ಅವರು ಪ್ರತಿಯೊಂದರಲ್ಲೂ ಪರಿಪೂರ್ಣತೆಯನ್ನು ನಿರೀಕ್ಷಿಸುತ್ತಾರೆ. ಅದೇ ಕಾರಣಕ್ಕೆ ಜಪಾನ್ ವಿಶ್ವದ ಅತ್ಯಂತ ಶುದ್ಧ, ಸುರಕ್ಷಿತ ಹಾಗೂ ಸಮರ್ಥ ರಾಷ್ಟ್ರಗಳಲ್ಲಿ ಒಂದಾಗಿದೆ.

sweet R

ಜಪಾನಿನಲ್ಲಿ, ಕೇವಲ ಒಂದು ಪತ್ರ ಅಥವಾ ಇನ್ವಾಯ್ಸ್‌ ನೀಡುವ ಸಂದರ್ಭದಲ್ಲಿ ಕೂಡ, ಆ ಕಾಗದವನ್ನು ಶ್ರದ್ಧೆಯಿಂದ ಮಡಚಿ ( Fold ) ಕೊಡುತ್ತಾರೆ. ಕಾಗದವನ್ನು ಮಡಚುವುದರಲ್ಲೂ ಅವರ ಕಲಾತ್ಮಕತೆ ಮತ್ತು ಗೌರವವನ್ನು ಕಾಣಬಹುದು. ಹೇಳಿ ಕೇಳಿ ಅವರು ಕಾಗದ ಮಡಚುವು ದನ್ನೇ ಕಲೆ (ಓರಿಗಾಮಿ) ಯಾಗಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟವರು.

ಒಮ್ಮೆ ಒಬ್ಬ ಪ್ರವಾಸಿಗ ಟೋಕಿಯೋದಲ್ಲಿ ಮ್ಯೂಸಿಯಂ ಟಿಕೆಟ್ ಖರೀದಿಸಿದ. ಕೌಂಟರಿನಲ್ಲಿದ್ದವ ಆ ಟಿಕೆಟ್ ಅನ್ನು ನೀಟಾಗಿ ಹರಿದು, ಸರಿಯಾಗಿ ಮಡಚಿ, ಲಕೋಟೆಯಲ್ಲಿಟ್ಟು ಕೊಟ್ಟ. ಇದನ್ನು ಗಮನಿಸಿದ ಪ್ರವಾಸಿಗ ಅಚ್ಚರಿಯಿಂದ, ‘ಇಷ್ಟು ಸಣ್ಣ ಕೆಲಸಕ್ಕೆ ಅಷ್ಟೆಲ್ಲ ಬಡಿವಾರವೇಕೆ?’ ಎಂದು ಕೇಳಿದ. ಅದಕ್ಕೆ ಅವನಿಗೆ ಸಿಕ್ಕ ಉತ್ತರ- ‘ಇದು ನಮ್ಮ ಕೆಲಸವಲ್ಲ, ನಮ್ಮ ಕಲೆ’. ನೀವು ಜಪಾನಿನ ಕೆಲವು ಸೂಪರ್ ಮಾರ್ಕೆಟ್ ಅಥವಾ ಕಿರಾಣಿ ಅಂಗಡಿಗೆ ಹೋದರೆ, ಅಲ್ಲಿ ಇಟ್ಟಿರುವ ಆಹಾರದ ಪ್ಯಾಕೇಜಿಂಗ್ ಎಂಥವರನ್ನಾದರೂ ಆಕರ್ಷಿಸುತ್ತದೆ. ಅದನ್ನು ಸೇವಿಸುವುದಕ್ಕಿಂತ ಮುಂಚೆ, ನೋಡುವುದರ ನೀವು ಹೆಚ್ಚಿನ ಸಂತಸ ಮತ್ತು ಕಲಾತ್ಮಕತೆಯನ್ನು ಕಾಣುತ್ತೀರಿ. ಉದಾಹರಣೆಗೆ, ಸೇಬು ಹಣ್ಣುಗಳನ್ನು ಅಲಂಕಾರಿಕವಾಗಿಡಲು ಅವರು ಬಳಸುವ ‘ಸನ್ ಷೇಡ್’ ( Sunshade ) ತಂತ್ರ. ಸೇಬಿನ ಗಿಡದಲ್ಲಿ ಹಣ್ಣುಗಳನ್ನು ಬೆಳೆಯುತ್ತಿರುವಾಗ, ಸೇಬಿನ ಮೇಲೆ ಹೃದಯದ ಆಕಾರ ( heart shape), ನಕ್ಷತ್ರ ಆಕಾರದ ಚಿಹ್ನೆ ಅಥವಾ ಜಪಾನಿ ಅಕ್ಷರದ ಟೇಪನ್ನು ಅಂಟಿಸುತ್ತಾರೆ.

ಸೂರ್ಯನ ಬೆಳಕು ಆ ಟೇಪಿನ ಜಾಗವನ್ನು ಬಿಟ್ಟು ಉಳಿದ ಭಾಗಗಳ ಮೇಲೆ ಬೀಳುತ್ತದೆ. ಕೆಲದಿನ ಗಳ ಬಳಿಕ ಆ ಟೇಪನ್ನು ತೆಗೆದಾಗ ಟೇಪಿನಲ್ಲಿ ಯಾವ ಚಿಹ್ನೆಯಿತ್ತೋ ಅದು ಸೇಬಿನ ಮೇಲೆ ಎದ್ದು ಕಾಣುತ್ತದೆ. ತಾಜಾ ಸೇಬುಹಣ್ಣಿನ ಮೇಲೆ ಹೃದಯದ ಆಕಾರ, ಚುಟುಕು ಸಂದೇಶ ಅಥವಾ ಅನನ್ಯ ವಿನ್ಯಾಸ ಎದ್ದು ತೋರುತ್ತದೆ. ಗಿಡದಲ್ಲಿ ಹಣ್ಣನ್ನು ಕೀಳುವಾಗ ಆ ಆಕೃತಿ ಸಹಜವಾಗಿ ಮೂಡಿ ದೆಯೇನೋ ಎಂದು ಯಾರಿಗಾದರೂ ಅನಿಸದೇ ಇರದು.

ಇದರಿಂದ ಹಣ್ಣು ಕೇವಲ ಆಹಾರವಸ್ತುವಷ್ಟೇ ಅಲ್ಲ, ಬದಲಾಗಿ ಕಲಾತ್ಮಕ ಅಂಶವನ್ನೂ ಪಡೆದು ಕೊಳ್ಳುತ್ತದೆ. ಈ ಸೇಬನ್ನು ವಿಶೇಷ ಸಂದರ್ಭಗಳಲ್ಲಿ ಉಡುಗೊರೆಯಾಗಿ, ಪ್ರೀತಿಪಾತ್ರರಿಗೆ ನೀಡಲಾಗು ತ್ತದೆ. ಗಿಡದಲ್ಲಿ ಹಣ್ಣನ್ನು ಕೀಳುವಾಗಲೇ ಅದರ ಮೇಲೆ ನಮ್ಮ ಹೆಸರು ಬರೆದಿದ್ದರೆ ಅದೆಷ್ಟು ಸಂತಸ ವಾಗಬಹುದು?

ಈ ವಿಧಾನವನ್ನು ಜಪಾನಿ ತೋಟಗಾರರು ಸ್ವತಃ ಕೈಯಲ್ಲಿ, ತುಂಬಾ ತಾಳ್ಮೆಯಿಂದ ಮಾಡುತ್ತಾರೆ. ಒಂದು ಸೇಬಿನಹಣ್ಣಿನ ಮೇಲೆ ವಿಶೇಷ ವಿನ್ಯಾಸ ತರಲು ಸಮಯ, ಶ್ರದ್ಧೆ ಮತ್ತು ಕಲಾತ್ಮಕ ಗುಣ ಬೇಕಾಗುತ್ತವೆ. ಇದು ಅವರ ಉದ್ಯಮದ ಮೇಲಿನ ಪ್ರೀತಿಯನ್ನೂ, ಗ್ರಾಹಕರಿಗೆ ನೀಡುವ ಗೌರವ ವನ್ನೂ ಪ್ರತಿಬಿಂಬಿಸುತ್ತದೆ.

ಜಪಾನಿನಲ್ಲಿ ನೀವು ಅಂಗಡಿಯೊಳಗೆ ಕಾಲಿಟ್ಟರೆ, ಕಾರ್ಮಿಕರು ‘ಇರಾಶೈಮಸೆ!’ (ಸ್ವಾಗತ) ಎಂದು ಹೇಳುತ್ತಾರೆ. ಆದರೆ ಇದು ಕೇವಲ ಮಾತಲ್ಲ. ಮುಖದ ಅಭಿವ್ಯಕ್ತಿ, ತಲೆಬಾಗುವ ಶಿಷ್ಟಾಚಾರ, ಎಲ್ಲವೂ ಶ್ರದ್ಧೆಯ ಸಂಕೇತ. ಅವರ ಪಾಲಿಗೆ ಅಂಗಡಿಗೆ ಬರುವವರು ಗಿರಾಕಿಗಳಲ್ಲ, ಅತಿಥಿಗಳು. ಹೀಗಾಗಿ ಅವರು ಪ್ರತಿಯೊಬ್ಬ ಗಿರಾಕಿ ಹೋಗುವಾಗಲೂ, ನಡು ಬಗ್ಗಿಸಿ ನಮಸ್ಕರಿಸುತ್ತಾರೆ.

ಬಂದವ ಸಾವಿರದವನಾದರೂ, ಅಷ್ಟೇ ವಿನಮ್ರತೆಯಿಂದ ದೇಹ ಬಾಗಿಸಿ ನಮಸ್ಕರಿಸುತ್ತಾರೆ. ಜಪಾನಿಯರ ಈ ಪರಿಪೂರ್ಣತಾವಾದ ಅವರ ಪರಂಪರೆ, ಧರ್ಮ ಮತ್ತು ಶಿಕ್ಷಣ ವ್ಯವಸ್ಥೆಯಿಂದ ಮೂಡಿದ ಮೌಲ್ಯವಾಗಿದೆ.

‘ಶ್ರದ್ಧೆಯಿಂದ ಮಾಡಿದ ಕೆಲಸವೇ ದೇವಾರಾಧನೆ’ ಮತ್ತು ‘ಸೂಕ್ಷ್ಮತೆಯಲ್ಲಿಯೇ ಶ್ರೇಷ್ಠತೆ ಇದೆ’ ಎಂಬ ಬೌದ್ಧ ಧರ್ಮದ ತತ್ತ್ವಗಳನ್ನು ಅವರ ಕಾರ್ಯಗಳಲ್ಲಿ ಕಾಣಬಹುದು. ಇಂಗ್ಲಿಷಿನಲ್ಲಿ ಒಂದು ಮಾತಿದೆ- You don't have to be a perfectionist to be amazing. ಅಂದರೆ, ನೀವು ಅದ್ಭುತ ಎಂದು ಕರೆಯಿಸಿಕೊಳ್ಳಲು ಪರಿಪೂರ್ಣರಾಗಬೇಕಿಲ್ಲ. ಆದರೆ ಜಪಾನಿಯರು ಪರಿಪೂರ್ಣವಾದಿ ಗಳೂ ಹೌದು,

ಅದ್ಭುತ ಮಂದಿಯೂ ಹೌದು. ಪರಿಪೂರ್ಣರು ಎಂದ ಮಾತ್ರಕ್ಕೆ ಅವರಲ್ಲಿ ದೋಷವೇ ಇಲ್ಲ ಎಂದು ಭಾವಿಸಬೇಕಿಲ್ಲ. ಅವರಲ್ಲೂ ಬೇರೆಯವರಂತೆ ದೋಷಗಳಿವೆ. ಆದರೆ ಅವರು ಸಣ್ಣ ಸಣ್ಣ ವಿಷಯ ಹಾಗೂ ಸೂಕ್ಷ್ಮ ಸಂಗತಿಗಳ ಬಗ್ಗೆ ಇತರರಿಗಿಂತ ಹೆಚ್ಚು ಗಮನ ಕೊಡುತ್ತಾರೆ. ನಿರಂತರವಾಗಿ ತಮ್ಮನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತಾರೆ. ಹೆಜ್ಜೆ ಹೆಜ್ಜೆಗೂ ಪರಿಪೂರ್ಣರಾಗಲು ಹಂಬಲಿಸಿ, ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ತಮ್ಮ ದೋಷವನ್ನು ಮೀರಿ ನಿಲ್ಲಲು ಹೆಣಗುತ್ತಾರೆ.

ರಸ್ತೆಗಳು ಹೇಳುವ ಪಾಠಗಳು

ಜಪಾನಿನ ರಸ್ತೆಯಲ್ಲಿ ನಿಮ್ಮ ಪಾಡಿಗೆ ನೀವು ನಡೆದು ಹೋಗುತ್ತಿದ್ದರೆ, ಬಯಲು ವಿಶ್ವವಿದ್ಯಾಲಯ ದಲ್ಲಿ ಒಂದು ಅದ್ಭುತ ಪಾಠವನ್ನು ಕೇಳಿದ ಅನುಭವವಾಗುತ್ತದೆ. ಸುಮ್ಮನೆ ರಸ್ತೆ ಪಕ್ಕದಲ್ಲಿ ಒಂದು ಗಂಟೆ ನಿಂತುಕೊಂಡರೆ ಸಾಕು, ಜೀವನಕ್ಕಾಗುವಷ್ಟು ಪಾಠವನ್ನು ಮೊಗೆದುಕೊಳ್ಳಬಹುದು. ಈ ವಿಷಯದಲ್ಲಿ ನಮಗೆ ಸಾಧ್ಯವಾಗದ್ದನ್ನು ಅವರು ಮಾಡಿ ತೋರಿಸಿದ್ದಾರೆ.

ಜಪಾನಿನ ರಸ್ತೆ ಅಚ್ಚುಕಟ್ಟಾಗಿರಲು, ಶಿಸ್ತು-ಸ್ವಚ್ಛತೆ-ಸೌಂದರ್ಯದಿಂದ ಕಂಗೊಳಿಸಲು ಅಲ್ಲಿನ ಕಠಿಣ ಕಾನೂನು ಕಾರಣವಲ್ಲ. ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವ ಜನರು ಕಾರಣ. ಅವರಲ್ಲಿ ಕಾನೂನನ್ನು ಪಾಲಿಸಬೇಕು ಎಂಬುದಕ್ಕಿಂತ, ನಾನು ಯಾವ ತಪ್ಪನ್ನೂ ಮಾಡಬಾರದು ಎಂಬ ಅರಿವು, ಎಚ್ಚರ ಇರುವುದೇ ಅದಕ್ಕೆ ಕಾರಣ.

ಪ್ರತಿಯೊಬ್ಬ ನಾಗರಿಕನು ತನ್ನ ದೇಶದ ಸ್ವಚ್ಛತೆಗಾಗಿ ಹೊಣೆ ಹೊತ್ತುಕೊಳ್ಳುವ ಆಧುನಿಕ ಉದಾಹರಣೆ ಎಂದರೆ ಅದು ಜಪಾನ್. ಇಲ್ಲಿ ರಸ್ತೆಗಳು ಕೇವಲ ಸ್ವಚ್ಛವಾಗಿರುತ್ತವೆ ಅಷ್ಟೇ ಅಲ್ಲ, ಅವು ಶಿಸ್ತಿನಿಂದ ರೂಪುಗೊಂಡಿರುತ್ತವೆ. ಅಕ್ಕಪಕ್ಕದ ಕಟ್ಟಡಗಳು, ಫುಟ್‌ಪಾತ್‌ಗಳು ಮತ್ತು ರಸ್ತೆಗಳೆಲ್ಲ ನೀಟು. ಯಾರೂ ರಸ್ತೆಯ ಬದಿಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದಿಲ್ಲ.

ಎಲ್ಲೂ ಬಿಸಾಡಿದ ತಿನಿಸು ಪ್ಯಾಕೆಟ್‌ಗಳು ಕಾಣುವುದಿಲ್ಲ. ಇವೆಲ್ಲ ಕಾನೂನು ಭಯದಿಂದ ಆಗಿದ್ದಲ್ಲ. ಇದು ಅವರು ಬಾಲ್ಯದಿಂದಲೇ ರೂಢಿಸಿಕೊಂಡಿರುವ ಸಂಸ್ಕೃತಿಯ ಒಂದು ಭಾಗ. ಜಪಾನಿನ ಶಾಲೆಗಳಲ್ಲಿ ಮಕ್ಕಳಿಗೆ ಬೋಽಸುವ ಮೊದಲ ಪಾಠವೆಂದರೆ ಸಾರ್ವಜನಿಕ ಶಿಸ್ತು ಮತ್ತು ಸ್ವಚ್ಛತೆ. ಇಡೀ ದೇಶ ಸ್ವಚ್ಛವಾಗಿರಲು ಇದೊಂದೇ ಸಾಕು!

ಜಪಾನಿನಲ್ಲಿ ರಸ್ತೆ ನಿರ್ಮಾಣ ಅತ್ಯಂತ ಯೋಜಿತ ರೀತಿಯಲ್ಲಿ ನಡೆಯುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಗರಗಳ ರಸ್ತೆಗಳನ್ನು ರಚಿಸಲಾಗುತ್ತದೆ. ಅಲ್ಲಿನ ರಸ್ತೆಗಳಲ್ಲಿ ನೀರು ಹರಿಯುವುದಿಲ್ಲ ಅಥವಾ ಅವು ಎಂದೂ ಈಜುಗೊಳವಾಗುವುದಿಲ್ಲ. ಭೂಕಂಪದ ತೀವ್ರತೆ ಯನ್ನು ಪರಿಗಣಿಸಿಯೇ ರಸ್ತೆಗಳನ್ನು ನಿರ್ಮಿಸಿರುತ್ತಾರೆ. ತಾಂತ್ರಿಕ ವಿನ್ಯಾಸಗಳು ಅಲ್ಲಿನ ರಸ್ತೆಗಳ ವೈಶಿಷ್ಟ್ಯ. ಪಾದಚಾರಿ ರಸ್ತೆಗಳು ಬಹುಶಃ ಜಗತ್ತಿನ ಎಲ್ಲ ನಗರಗಳಲ್ಲಿಯೂ ಇರುತ್ತವೆ. ಅವುಗಳಿಗೆ ವಿಶಿಷ್ಟ ಬಣ್ಣ, ಅಳತೆ ಇತ್ಯಾದಿಗಳನ್ನು ನಿರ್ಧರಿಸಲಾಗಿರುತ್ತದೆ. ಅಂಧರಿಗೆ ಉಬ್ಬಿದ ಚಿಹ್ನೆಗಳನ್ನು ಹೊಂದಿರುವ ಹಾದಿಯನ್ನು ಎಡೆಗಳಲ್ಲೂ ಕಾಣಬಹುದು.

ಇದು ಸಾರ್ವಜನಿಕ ಸ್ಥಳಗಳ Inclusive Design (ಒಗ್ಗೂಡಿಸಿದ ವಿನ್ಯಾಸ) ತತ್ವವನ್ನು ತೋರಿಸುತ್ತದೆ. ಜಪಾನಿನ ನಾಗರಿಕರು ತಮ್ಮ ಮನೆ ಮುಂದೆ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಕಡೆಗೂ ವಿಶೇಷ ಗಮನ ಕೊಡುವುದು ಅವರು ಮಕ್ಕಳಾಗಿರುವಾಗಲೇ ರೂಪುಗೊಂಡ ಮನೋ ಭಾವ. ಇಲ್ಲಿನ ಬಹುಶಃ ಪ್ರತಿಯೊಬ್ಬರಲ್ಲೂ ‘ಇದು ನನ್ನ ದೇಶ, ನನ್ನ ಜವಾಬ್ದಾರಿ’ ಎಂಬ ಒಡನಾಟ ವಿದೆ.

ಅಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ಸ್ಥಳೀಯವಾಗಿ ಕಾನೂನು ಬದ್ಧವಾಗಿ ನಿಷೇಧಿಸಲಾಗಿದೆ. ಇಂಥ ನಿಯಮಗಳನ್ನು ಸಾರ್ವಜನಿಕರು ಸಂಪೂರ್ಣವಾಗಿ ಪಾಲಿಸು ತ್ತಾರೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಸಹ ಜನರು ಶಿಸ್ತಿನಿಂದ ನಿಲ್ಲುತ್ತಾರೆ, ಏಕೆಂದರೆ ಅವರಿಗೆ ಕಾನೂನು ಭಯವಲ್ಲ, ಆದರೆ ಒಬ್ಬ ನಾಗರಿಕರಾಗಿ ತಮ್ಮ ಜವಾಬ್ದಾರಿ ಗೊತ್ತಿದೆ. ಭಾರತದಂಥ ದಟ್ಟ ಜನಸಂಖ್ಯೆಯ ದೇಶಗಳಲ್ಲಿ ಕೂಡಾ ಜಪಾನಿನಂಥ ರಸ್ತೆಗಳನ್ನು ನಿರ್ಮಿಸಬಹುದು. ಆದರೆ ಇದು ಕೇವಲ ಸರಕಾರದ ಜವಾಬ್ದಾರಿ ಎಂದು ನಿರ್ಧರಿಸಿದರೆ ಆಗದು. ಪ್ರತಿಯೊಬ್ಬ ನಾಗರಿಕನೂ ತನ್ನ ಜವಾಬ್ದಾರಿಯನ್ನು ಅರಿತು, ಶಿಸ್ತು ಪಾಲಿಸಿ, ರಸ್ತೆಯ ಸ್ವಚ್ಛತೆಯಲ್ಲಿ ತಾನೂ ಪಾತ್ರವಹಿಸಿದಾಗ ಮಾತ್ರ ಅದು ಸಾಧ್ಯ. ‘ನಾನು ಹಾಕುವ ಕಸ ಎಲ್ಲರಿಗೂ ತೊಂದರೆ ನೀಡಬಹುದು’ ಎಂಬ ನೈತಿಕ ಬೋಧನೆ ಬೇಕು. ಸಾರ್ವಜನಿಕ ಸ್ವತ್ತುಗಳಿಗೂ ಗೌರವ ತೋರುವ ಮನೋಭಾವ ಬೆಳೆಯಬೇಕು.

ಟಿಫಿನ್ ಬಾಕ್ಸ್ ಅಂದ್ರೆ...

ಜಪಾನಿಯರು ಟಿಫಿನ್ ಬಾಕ್ಸ್ ಕಟ್ಟಿಕೊಡುವುದರಲ್ಲೂ ಕಲಾತ್ಮಕ ಗುಣವನ್ನು ಮೆರೆಯುವವರು. ಗಂಡನಿಗೋ, ಮಕ್ಕಳಿಗೋ, ಊಟದ ಡಬ್ಬವನ್ನು ಕಾಟಾಚಾರಕ್ಕೆ ಕಟ್ಟಿಕೊಡುವುದಿಲ್ಲ. ಆಹಾರ‌ ವನ್ನು ಅತ್ಯಂತ ಶಿಸ್ತಿನಿಂದ, ಸುಂದರವಾಗಿ ಪ್ಯಾಕ್ ಮಾಡುತ್ತಾರೆ. ಇದಕ್ಕೆ ಅವರು ‘ಬಂಟೋ ಬಾಕ್ಸ್’ ಎಂದು ಕರೆಯುತ್ತಾರೆ. ಬಂಟೋ ಬಾಕ್ಸ್ ಅಂದ್ರೆ ಪ್ಯಾಕ್ ಮಾಡಲಾದ ಊಟ ಎಂದರ್ಥ.

tiffin box R

ಜಪಾನಿನ ತಾಯಂದಿರು ತಮ್ಮ ಮಕ್ಕಳಿಗೆ, ಗಂಡನಿಗೆ ಬಂಟೋ ತಯಾರಿಸುವಾಗ ಅತ್ಯಂತ ನಿಖರವಾಗಿ, ಕಲಾತ್ಮಕವಾಗಿ ಹಾಗೂ ಪೋಷಕಾಂಶದಿಂದ ಕೂಡಿದ ಆಹಾರವನ್ನು ತಯಾರಿಸಿ, ಕಟ್ಟಿ ಕೊಡುತ್ತಾರೆ. ಅನೇಕರು ಅನ್ನದ ಮೇಲೆ ನಗುಮುಖ, ಚಿಟ್ಟೆ, ಹೃದಯ, ಹೂವು ಅಥವಾ ಚಲನಚಿತ್ರ ಪಾತ್ರಗಳನ್ನು ಚಿತ್ರಿಸುತ್ತಾರೆ. ಇದು ಸಾಮಾನ್ಯ ಊಟವನ್ನೂ ಕಲೆಯಾಗಿ ಪರಿವರ್ತಿಸುತ್ತದೆ. ಊಟದ ಡಬ್ಬವನ್ನು ತೆರೆಯುತ್ತಿದ್ದಂತೆ, ಊಟ ಮಾಡುವವರ ಹೆಸರನ್ನು ಸಹ ಬರೆದಿರಬಹುದು. ತಾಯಿಯ ಹೆಸರು ಬರೆದಿದ್ದರೆ, ಅದನ್ನು ಊಟ ಮಾಡುವ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುವುದು ಸಹಜ.

ಪ್ರತಿ ದಿನ ಊಟದ ಬಾಕ್ಸ್ ತೆರೆಯುವ ಮುನ್ನ ಮಕ್ಕಳು ಅಥವಾ ಗಂಡ, ಇಂದು ಹೆಂಡತಿ ಏನನ್ನು ಬರೆದಿರಬಹುದು, ಯಾವ ಚಿತ್ರ ಬಿಡಿಸಿರಬಹುದು ಎಂದು ನಿರೀಕ್ಷಿಸುವುದುಂಟು. ಒಂದು ಸಾಮಾನ್ಯ ಕ್ರಿಯೆಯಲ್ಲೂ ಒಳ್ಳೆಯ ಭಾವನೆ ಮೂಡಿಸಲು ಸಾಧ್ಯವಾಗುವುದಾದರೆ, ಅದನ್ನು ಪ್ರೀತಿಯಿಂದ ಮಾಡುವುದರಲ್ಲಿ ಅವರು ನಿಸ್ಸೀಮರು. ಇದಕ್ಕೆ ಹಣ ಖರ್ಚಾಗುವುದಿಲ್ಲ. ಆದರೆ ಅದನ್ನು ನೆರವೇರಿಸುವ ಒಳ್ಳೆಯ ಮನಸ್ಸಷ್ಟೇ ಮುಖ್ಯ.